ಪದ-ಶ್ರಾವ್ಯ

ಈಗ ಆಡಿಯೋ ಟಚ್!

Archive for April 2011


Kannada Bhuvaneshwari in America!

Saturday, April 30th, 2011
DefaultTag | Comments

ದಿನಾಂಕ  1 ಮೇ 2011ರ ಸಂಚಿಕೆ...

ಅಮೆರಿಕದ ನೆಲದಲ್ಲಿ ಕನ್ನಡ ಭುವನೇಶ್ವರಿ!

* ಶ್ರೀವತ್ಸ ಜೋಶಿ

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

“ಕರ್ನಾಟಕದ ಬ್ಯಾಂಗ್ಲೋರ್‌ನಲ್ಲಂತೂ ಕನ್ನಡದ ಡೆವಲಪ್‌ಮೆಂಟ್ ಬಿಡಿ, ಸರ್ವೈವಲ್ಲೂ ನೋ ಛಾನ್ಸ್. ಅದರ ಆಸೆ ಬಿಟ್ಟಾಗಿದೆ. ದೂರದ ಅಮೆರಿಕದಲ್ಲಿ ಅದೇನೋ ಆವಾಗಾವಾಗ ಕನ್ನಡ ಕಲರವ ಕೇಳಿಬರುತ್ತದಂತೆ. ಏನೂಂತ ನಾನೂ ಒಮ್ಮೆ ನೋಡ್ಕೊಂಡು ಬರ್ಬೇಕು” - ಹೀಗೊಂದು ಆಲೋಚನೆ ಬಂದದ್ದು, ಯಾರಿಗಂತೀರಿ? ಇನ್ನಾರಿಗೂ ಅಲ್ಲ, ಖುದ್ದಾಗಿ ಕನ್ನಡಮಾತೆ ಭುವನೇಶ್ವರಿಗೆ! ಅವಳದು ಇನ್ನೂ ಒಂದು ತರ್ಕಬದ್ಧ ಯೋಚನೆ- “ಕನ್ನಡನೆಲದ ಬೆಂಗಳೂರು ಅಂತೇನಿತ್ತೋ ಅದು ಸಿಲಿಕಾನ್‌ವ್ಯಾಲಿ ಆಯ್ತು; ಕನ್ನಡ ಅಲ್ಲಿಂದ ಕಾಲ್ಕಿತ್ತಿತು. ಆದ್ರೆ ಹೋಗಿಹೋಗಿ ಎಲ್ಲಿಗಂತ ಹೋಗಿರ್ಬಹುದು? ನಿಜವಾದ ಸಿಲಿಕಾನ್ ವ್ಯಾಲಿಗೇ ಹೋಗಿ ಅಲ್ಲೇ ನೆಲೆನಿಂತಿತೋ ಹೇಗೆ ಕೊನೆಗೂ? ಏನಾದರಾಗಲಿ ಕನ್ನಡಕ ಹಾಕಿಯಾದರೂ ಸರಿ ಕನ್ನಡವನ್ನು ಹುಡುಕಿ ತರುತ್ತೇನೆ” - ಭುವನೇಶ್ವರಿಯದು ‘ಬೇ’ ವಿಕ್ರಮನಂಥ ಛಲ. ಆಕೆ ಬಂದಿಳಿದದ್ದೂ ‘ಬೇ’ ಏರಿಯಾಕ್ಕೆ. ಅಮೆರಿಕದ ಕ್ಯಾಲಿಫೋರ್ನಿಯಾ ಸಂಸ್ಥಾನದ ಸಿಲಿಕಾನ್ ವ್ಯಾಲಿ ಪ್ರದೇಶಕ್ಕೆ. ಅದೃಷ್ಟವೋ ಎಂಬಂತೆ ಅಲ್ಲಿ ಅವಳಿಗೆ ಕೇಳಿಸಿದ್ದು ಕನ್ನಡದ ಡಿಂಡಿಮವಷ್ಟೇ ಅಲ್ಲ, ಡೋಲು-ಡಮರು-ಢಕ್ಕೆ!

ಕ್ಷಮಿಸಿ. ಸ್ವಲ್ಪ ನಿಜಾಂಶ, ಒಂಚೂರು ನಾಟಕೀಯತೆ, ಇನ್ನೊಂದು ಕೊಂಚ ಉತ್ಪ್ರೇಕ್ಷೆ ಎಲ್ಲವನ್ನೂ ಹಾಸ್ಯರಸದಲ್ಲಿ ಗೊಟಾಯಿಸಿ ಒಂದು ಸ್ಪೆಷಲ್ ಇಂಟ್ರೊ ಕೊಡೋಣ ಅಂತ ಹಾಗೆ ಬರೆದೆ. ಈ ವಾರಾಂತ್ಯ (ಎ.೩೦ ಮತ್ತು ಮೇ.೧) ಇಲ್ಲಿ ಅಮೆರಿಕದ ಕನ್ನಡಸಾಹಿತ್ಯರಂಗ ಸಂಸ್ಥೆ ಹಮ್ಮಿಕೊಂಡಿರುವ ವಸಂತ ಸಾಹಿತ್ಯೋತ್ಸವ ಕಾರ್ಯಕ್ರಮ. ಅಕ್ಷರಮೋಹಿತರಿಗೆ ಎರಡು ದಿನ ಭರ್ಜರಿಯಾಗಿ ಕನ್ನಡ ಸಾಹಿತ್ಯಸುಗ್ಗಿ. ಇದು ನಡೆಯುತ್ತಿರುವುದು ಉತ್ತರ ಕ್ಯಾಲಿಫೋರ್ನಿಯಾ ಕನ್ನಡಕೂಟದ ಆಶ್ರಯದಲ್ಲಿ, ಸ್ಯಾನ್‌ಫ್ರಾನ್ಸಿಸ್ಕೊ ನಗರದ ಒಂದು ಭವ್ಯ ಸಭಾಂಗಣದಲ್ಲಿ. ಮುಖ್ಯ ಅತಿಥಿಯಾಗಿ ಕರ್ನಾಟಕದಿಂದ ಬಂದಿದ್ದಾರೆ ಸಾಹಿತಿ ಸುಮತೀಂದ್ರ ನಾಡಿಗ. ಹಾಗೆಯೇ ವಿಶೇಷ ಅತಿಥಿ ಖ್ಯಾತ ನಗೆಬರಹಗಾರ್ತಿ ಭುವನೇಶ್ವರಿ ಹೆಗಡೆ. ಅಲ್ಲಿಗೆ, ಇವತ್ತಿನ ತಲೆಬರಹದಲ್ಲಿ ಮತ್ತು ಪೀಠಿಕೆಯಲ್ಲಿ ಕಂಗೊಳಿಸಿದ ಭುವನೇಶ್ವರಿ ಯಾರು ಅಂತ ನಿಮಗೆ ಗೊತ್ತಾದಹಾಗಾಯ್ತು. ಅಲ್ವೇಮತ್ತೆ, ಹಾಸ್ಯಸಾಹಿತಿ ಅಮೆರಿಕೆಗೆ ಬಂದಿರುವ ಸಮಾಚಾರವನ್ನು ಹಾಸ್ಯದ ಲೇಪವಿಲ್ಲದೆ ತಿಳಿಸುವುದಾದರೂ ಹೇಗೆ?

ಸಾಹಿತ್ಯೋತ್ಸವದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಲು ಕನ್ನಡಸಾಹಿತ್ಯರಂಗದಿಂದ ಆಹ್ವಾನ ಹೋದಾಗ ಭುವನೇಶ್ವರಿ ಹೆಗಡೆ ನನಗೊಂದು ಮಿಂಚಂಚೆ ಕಳಿಸಿದ್ದರು. ‘ಅಮೆರಿಕದ ನೆಲದಲ್ಲಿ ಕನ್ನಡ ಭುವನೇಶ್ವರಿ!’ ಸಬ್ಜೆಕ್ಟ್ ಲೈನ್. ಅದರ ಕೆಳಗೆ, “ಜೋಶಿಯವರೇ, ನನಗೆ ನಿಜಕ್ಕೂ ಹೆದರಿಕೆ ಆಗ್ತಿದೆ. ಇದುವರೆಗೂ ವಿಮಾನ ಹತ್ತಿ ಹೊರದೇಶಕ್ಕೆ ಹಾರಿದವಳಲ್ಲ. ನನ್ನತ್ರ ಪಾಸ್‌ಪೋರ್ಟ್ ಸಹ ಇಲ್ಲ. ವೀಸಾ ಸಿಗ್ಬೇಕಿದ್ರೆ ಇಂಟರ್‌ವ್ಯೂ ಬೇರೆ ಇದೆಯಂತೆ. ಅಮೆರಿಕಾ ಅಂದ್ರೆ ಹಾಗೆಹೀಗೆ ಅಂತೆಲ್ಲ ಕೇಳಿದ್ದೇನೆ. ಹೇಗೋ‌ಏನೋ. ನೀವುಗಳೆಲ್ಲ ಅಲ್ಲಿದ್ದೀರಂತ ಒಪ್ಪಿದ್ದೇನೆ.” ಅವರಿಗೆ ಧೈರ್ಯ ತುಂಬುತ್ತ ನಾನು ಬರೆದಿದ್ದೆ- “ಭುವನಕ್ಕೇ ಈಶ್ವರಿಯಾದ ನಿಮಗ್ಯಾಕೆ ಭಯ? ಏನೂ ಆಗೋದಿಲ್ಲ, ನಗುನಗುತ್ತಲೇ ಬನ್ನಿ, ನಮಗೂ ಒಂದಿಷ್ಟು ನಗು ಕಟ್ಟಿಕೊಂಡು ತನ್ನಿ!” ಮೊನ್ನೆ ಮಂಗಳೂರಿನಿಂದ ಹೊರಡಲು ಒಂದುವಾರ ಇರುವಾಗ ಮತ್ತೆ ಫೋನ್ ಮಾಡಿದ್ದರು, “ಆ ದೇಶದಲ್ಲಿ ಹಣದ ವಿಚಾರ ಎಲ್ಲ ಹೇಗೆ? ಕ್ರೆಡಿಟ್‌ಕಾರ್ಡ್ ಇದ್ದರೆ ಒಳ್ಳೆಯದಂತಾರೆ. ನನ್ನತ್ರ ಕ್ರೆಡಿಟ್‌ಕಾರ್ಡೂ ಇಲ್ಲ. ಇವರೆಂಥ ಅರ್ಥಶಾಸ್ತ್ರ ಪ್ರಾಧ್ಯಾಪಕಿ ಅನ್ಬೇಡಿ! ನನ್ನದು ನಗದು ವ್ಯವಹಾರ. ನಗದು ಮತ್ತು ನಗೋದು/ನಗಿಸೋದು ಎರಡೇ ಗೊತ್ತು.”

ಅಷ್ಟು ಪಾಪದ ಪುಣ್ಯಾತ್‌ಗಿತ್ತಿ ಭುವನೇಶ್ವರಿ ಹೆಗಡೆ ಇಲ್ಲೀಗ ವಸಂತ ಸಾಹಿತ್ಯೋತ್ಸವದ ಪ್ರಮುಖ ಆಕರ್ಷಣೆ. ದೀಪಾವಳಿ ವಿಶೇಷಾಂಕಗಳಲ್ಲಿ, ನಿಯತಕಾಲಿಕಗಳಲ್ಲಿ ಅವರ ಸದಭಿರುಚಿಯ ಹಾಸ್ಯಬರಹಗಳನ್ನು ಆನಂದಿಸಿಯಷ್ಟೇ ಗೊತ್ತಿದ್ದವರಿಗೆ, ಅಥವಾ ನನ್ನಹಾಗೆ ಇಮೇಲ್ ಮತ್ತು ಫೋನ್‌ನಲ್ಲಷ್ಟೇ ಪರಿಚಯವಿದ್ದವರಿಗೆ ಈಗ ಮುಖತಾ ಭೇಟಿಯಾಗುವ ಅವಕಾಶ. ಅಸಲಿಗೆ ಸಾಹಿತ್ಯರಂಗ ಎರಡುವರ್ಷಗಳಿಗೊಮ್ಮೆ ನಡೆಸಿಕೊಂಡು ಬಂದಿರುವ  ಸಾಹಿತ್ಯೋತ್ಸವಗಳ ವೈಶಿಷ್ಟ್ಯವೇ ಅದು. ಇವುಗಳ ಅರ್ಥಪೂರ್ಣತೆ, ಸರಳತೆ ಮತ್ತು ಅಚ್ಚುಕಟ್ಟುತನ ನನಗೆ ತುಂಬ ಇಷ್ಟವಾಗುತ್ತದೆ. ಇಲ್ಲಿ ಭೀಷಣವಾದ ಭಾಷಣಗಳ ಉಪಟಳವಿಲ್ಲ. ಹಾರ-ತುರಾಯಿ ಸನ್ಮಾನಗಳ ಆಡಂಬರವಿಲ್ಲ. ಮೆರವಣಿಗೆ ಬಾಜಾಭಜಂತ್ರಿಗಳಿಲ್ಲ. ಸಮ್ಮೇಳನದ ಅಧ್ಯಕ್ಷರು ಅಥವಾ ಉದ್ಘಾಟಕರು ಯಾರು, ಅವರನ್ನೇ ಏಕೆ ಆಯ್ದುಕೊಂಡದ್ದು ಮುಂತಾಗಿ ಕೆಲಸಕ್ಕೆ ಬಾರದ ಚರ್ಚೆಗಳಿಲ್ಲ. ಏಕೆಂದರೆ ಆ ರೀತಿಯ ಪದವಿಗಳೇ ಇಲ್ಲ. ಊಟ-ತಿಂಡಿಗೆ ನೂಕುನುಗ್ಗಲು ಅವ್ಯವಸ್ಥೆಗಳ ಪಡಿಪಾಟಲಿಲ್ಲ. ಮತ್ತೆಂಥ ಸಮ್ಮೇಳನರೀ ಅದು? ಎನ್ನಬಹುದು ನೀವು. ಬಹುಶಃ ಸಮ್ಮೇಳನಗಳೆಂದರೆ ಗೊಂದಲಮಯ ಎನ್ನುವುದು ನಮಗೆ ರೂಢಿಯಾಗಿಬಿಟ್ಟಿದೆ. ಹಾಗೆನೋಡಿದರೆ ಇಲ್ಲಿ ಅಮೆರಿಕದಲ್ಲಿ ಕಾಲಾನುಕಾಲಕ್ಕೆ ನಡೆಯುವ ಬೇರೆ ‘ಕನ್ನಡ ಜಾತ್ರೆ’ಗಳೂ ಗೊಂದಲಗಳಿಂದ ಮುಕ್ತವೇನಲ್ಲ.

vasanta-sahityotsava-2011.jpg

ಕನ್ನಡಸಾಹಿತ್ಯರಂಗದ ಈಹಿಂದಿನ ನಾಲ್ಕು ಸಮಾವೇಶಗಳಲ್ಲೂ ನಾನು ಭಾಗವಹಿಸಿದ್ದೇನೆ. ಅದರ ಸವಿನೆನಪುಗಳನ್ನು ಮೆಲುಕುಹಾಕಿದಾಗ ನನಗೆ ಹೆಮ್ಮೆಯೇ ಆಗುತ್ತದೆ. ಒಂದು ಸಂಕ್ಷಿಪ್ತ ಸಿಂಹಾವಲೋಕನ ಮಾಡುವುದಾದರೆ- ಮೊತ್ತಮೊದಲ ಸಾಹಿತ್ಯೋತ್ಸವ ಫಿಲಡೆಲ್ಫಿಯಾದಲ್ಲಿ ೨೦೦೪ರಲ್ಲಿ ನಡೆಯಿತು; ಅದು ಕುವೆಂಪು ಜನ್ಮಶತಾಬ್ದಿಯ ವರ್ಷ. ಕುವೆಂಪು ಪಟ್ಟಶಿಷ್ಯ ಡಾ.ಪ್ರಭುಶಂಕರ ಮುಖ್ಯ ಅತಿಥಿಯಾಗಿ ಬಂದಿದ್ದರು. ಅಮೆರಿಕನ್ನಡಿಗ ಬರಹಗಾರರು ಕುವೆಂಪು ಮತ್ತವರ ಕೃತಿಗಳ ಕುರಿತು ಬರೆದ ಲೇಖನಗಳ ಸಂಕಲನಗ್ರಂಥ ‘ಕುವೆಂಪು ಸಾಹಿತ್ಯ ಸಮೀಕ್ಷೆ’ ಬಿಡುಗಡೆಯಾಗಿತ್ತು. ಎರಡನೇ ಸಮ್ಮೇಳನ ಲಾಸ್‌ಏಂಜಲೀಸ್‌ನಲ್ಲಿ. ಬರಗೂರು ರಾಮಚಂದ್ರಪ್ಪ ಮುಖ್ಯ ಅತಿಥಿ. ‘ಆಚೀಚೆಯ ಕಥೆಗಳು’ ಎಂಬ ಸಣ್ಣಕತೆಗಳ ಸಂಕಲನ ಆವಾಗಿನ ಕೃತಿ. ಮೂರನೇ ಸಮಾವೇಶ ಷಿಕಾಗೊದಲ್ಲಿ. ಹಾಸ್ಯಸಾಹಿತ್ಯ ಆ ಸರ್ತಿಯ ಥೀಮ್. ಪ್ರೊ.ಅ.ರಾ.ಮಿತ್ರ ಮುಖ್ಯ ಅತಿಥಿ. ಖ್ಯಾತ ವಿಮರ್ಶಕ ಎಚ್.ಎಸ್.ರಾಘವೇಂದ್ರ ರಾವ್ ಕೂಡ ಬಂದಿದ್ದರು. ‘ನಗೆಗನ್ನಡಂ ಗೆಲ್ಗೆ’ ಎಂಬ ಮೌಲ್ಯಯುತ ಉದ್ಗ್ರಂಥ ಆವಾಗಿನ ಪ್ರಕಟಣೆ. ನಾಲ್ಕನೆಯ ಸಮಾವೇಶ ನಡೆದದ್ದು ವಾಷಿಂಗ್ಟನ್‌ನಲ್ಲಿ. ಡಾ.ವೀಣಾ ಶಾಂತೇಶ್ವರ ಮತ್ತು ವೈದೇಹಿ ಮುಖ್ಯ ಅತಿಥಿಗಳು. ‘ಕನ್ನಡ ಕಾದಂಬರಿ ಲೋಕದಲ್ಲಿ ಹೀಗೆ ಹಲವು’ ವಿಮರ್ಶಾಲೇಖನಗಳ ಸಂಗ್ರಹದ ಕೃತಿ ಬಿಡುಗಡೆ. ಇದೀಗ ಐದನೆಯ ಸಮ್ಮೇಳನ ಸಂದರ್ಭದಲ್ಲೂ ಒಂದು ಒಳ್ಳೆಯ ಗ್ರಂಥ ಬಿಡುಗಡೆಯಾಗುತ್ತಿದೆ- ‘ಮಥಿಸಿದಷ್ಟೂ ಮಾತು’ ಇದು ಅಮೆರಿಕನ್ನಡಿಗ ಲೇಖಕಲೇಖಕಿಯರ ಲಲಿತಪ್ರಬಂಧಗಳ ಸಂಕಲನ.

ಆಗಲೇ ಹೇಳಿದಂತೆ ಕನ್ನಡಸಾಹಿತ್ಯರಂಗದ ಕಾರ್ಯಕ್ರಮಗಳಲ್ಲಿ ಎದ್ದುಕಾಣುವ ಅಂಶಗಳೆಂದರೆ ಅರ್ಥಪೂರ್ಣತೆ, ಶಿಸ್ತು, ಸಮಯಪಾಲನೆ ಮತ್ತು ಅದರಿಂದಾಗಿ ಸಹಜವಾಗಿ ಮೂಡಿಕೊಳ್ಳುವ ಒಂದುರೀತಿಯ ಅಚ್ಚುಕಟ್ಟುತನ. ಎಷ್ಟೆಂದರೂ ಎಚ್.ವೈ.ರಾಜಗೋಪಾಲ್ ಅವರ ಕಲ್ಪನೆಯ ಕೂಸಿದು. ಅವರ ವ್ಯಕ್ತಿತ್ವದ್ದೇ ಮಾದರಿ ಇದರದೂ. ಇಲ್ಲಿನ ‘ಇಲ್ಲ’ಗಳ ಪಟ್ಟಿ ಮಾಡಿದಂತೆಯೇ, ಏನೇನು ಇರುತ್ತದೆ ಎಂಬುದನ್ನೂ ತಿಳಿಸಿದರೆ ನಿಮಗೊಂದು ಕಲ್ಪನೆ ಬರುತ್ತದೆ. ಅತಿಥಿಗಳ ಭಾಷಣ ಮತ್ತು ಅವರೊಂದಿಗಿನ ಸಂವಾದ ಅಷ್ಟೇ‌ಅಲ್ಲದೆ ಇತರ ಸಾಹಿತ್ಯಿಕ ಕಾರ್ಯಕ್ರಮಗಳೂ ಇರುತ್ತವೆ. ಹಿರಿಯ ಸಾಹಿತಿಗಳ ಸ್ಮರಣೆ, ವಿಶೇಷ ಗ್ರಂಥದ ಬಿಡುಗಡೆ, ಕವಿಗೋಷ್ಠಿ, ಇಲ್ಲಿನ ಬರಹಗಾರರ ಕೃತಿಗಳ ಪರಿಚಯ, ಅಮೆರಿಕದಲ್ಲಿನ ಸಾಹಿತ್ಯ ವಿಚಾರಗೋಷ್ಠಿಗಳ ಬಗ್ಗೆ ವಿವರಣೆ, ಕನ್ನಡ ಕಲಿಯಲು ಕಾಲೇಜುಮಟ್ಟದಲ್ಲಿ ಇಲ್ಲಿರುವ ಅವಕಾಶಗಳು, ಇಲ್ಲಿ ಕನ್ನಡ ಕಲಿಯುತ್ತಿರುವ ಮಕ್ಕಳ ಕಾರ್ಯಕ್ರಮಗಳು, ಇಲ್ಲಿನ ಬರಹಗಾರರ ಪುಸ್ತಕಗಳನ್ನು ಕೊಳ್ಳಲು ಅನುಕೂಲವಾಗುವಂತೆ ಪುಸ್ತಕಪ್ರದರ್ಶನ ಮತ್ತು ಮಾರಾಟ. ಇವಲ್ಲದೇ ಉತ್ತಮವಾದೊಂದು ನಾಟಕ ಪ್ರದರ್ಶನ (ಈಬಾರಿ ಪುತಿನ ಅವರ ‘ಹರಿಣಾಭಿಸರಣ’ ನಾಟಕ; ಕ್ಯಾಲಿಫೋರ್ನಿಯಾ ಕನ್ನಡಿಗರಿಂದ ‘ಕಂಸವಧೆ’ ಯಕ್ಷಗಾನ). ಗೀತ-ಸಂಗೀತ-ನೃತ್ಯಗಳ ಹಿತಮಿತ ಮಿಶ್ರಣ. ಜತೆಗೆ ರುಚಿರುಚಿಯಾದ ರಸಭೋಜನ. ಒಟ್ಟಿನಲ್ಲಿ ಸುಗಂಧಭರಿತ ತಂಗಾಳಿ ಹಿತವಾಗಿ ಬೀಸುವ ಉದ್ಯಾನದಲ್ಲಿ ಒಂದೆರಡು ಗಂಟೆ ಕಳೆವಾಗಿನಂಥದೇ ಅನುಭವ. ಒಂದಾದ ಮೇಲೊಂದರಂತೆ, ಯಾವುದೂ ಅತಿಯೆನಿಸದಂತೆ, ಆಸ್ವಾದನೆಗೆ ಅವಕಾಶಗಳು. ಆಕಳಿಕೆಯ ಮಾತಿಲ್ಲ.

ಭೇಷ್ ಎನ್ನದೆ ಭುವನೇಶ್ವರಿಗೆ ಬೇರೆ ಆಯ್ಕೆಯೇ ಇಲ್ಲ!

* * *

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

"Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!

One Zero One Zero One Zero…

Saturday, April 23rd, 2011
DefaultTag | Comments

ದಿನಾಂಕ  24 ಏಪ್ರಿಲ್ 2011ರ ಸಂಚಿಕೆ...

ಒಂದು ಸೊನ್ನೆ ಒಂದು ಸೊನ್ನೆ ಒಂದು ಸೊನ್ನೆ...

* ಶ್ರೀವತ್ಸ ಜೋಶಿ

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

10101010.gif

ಮೆರಿಕದಲ್ಲಿ ನಾನು ಗಮನಿಸಿದಂತೆ ಪ್ರಾಥಮಿಕ ಶಿಕ್ಷಣದಲ್ಲಿ ಅಕ್ಷರ ಕಲಿಕೆಗಿಂತಲೂ ಮೊದಲು pattern recognition ಕಲಿಸುತ್ತಾರೆ. ಒಂದು ಚಿತ್ರಸರಣಿ ಇರಬಹುದು, ವಿವಿಧ ಆಕೃತಿಗಳ ಜೋಡಣೆಯಿರಬಹುದು, ಬೇರೆಬೇರೆ ಬಣ್ಣದ ಪಟ್ಟೆಗಳಿರಬಹುದು, ಅದರಲ್ಲಿ ಏನಾದರೂ ಪ್ಯಾಟರ್ನ್ ಅಂದರೆ ನಿರ್ದಿಷ್ಟ ಮಾದರಿ ಕಾಣಿಸುತ್ತಿದೆಯೇ - ಉದಾಹರಣೆಗೆ ಪ್ರತೀ ಮೂರು ಕೆಂಪುಪಟ್ಟೆಗಳ ನಂತರ ಒಂದು ಹಳದಿಬಣ್ಣದ ಪಟ್ಟೆ ಇದೆಯೇ - ಎಂದೆಲ್ಲ ಗುರುತಿಸುವುದನ್ನು ಮಗು ಕಲಿತುಕೊಳ್ಳಬೇಕು. ಬುದ್ಧಿ ಬೆಳೆಯುವುದಕ್ಕೆ ಇದು ತುಂಬಾ ಒಳ್ಳೆಯದಂತೆ. ಮುಂದೆ ಅಂಕೆ-ಅಕ್ಷರಗಳನ್ನು ಕಲಿಯುವಾಗಲೂ pattern recognition ಅಭ್ಯಾಸಗಳನ್ನು ಮಾಡಿಸುತ್ತಾರೆ. ಅದರಿಂದ ಬರೀ ಕಲಿಕೆಯಷ್ಟೇ ಅಲ್ಲ, ಮನರಂಜನೆ ಮತ್ತು ಮೆದುಳಿಗೆ ವ್ಯಾಯಾಮ ಸಿಗುತ್ತದೆ ಎಂಬ ಕಾರಣಕ್ಕೆ. ಕಣ್ಮುಂದೆಯೇ ಇದ್ದರೂ ಸುಲಭದಲ್ಲಿ ಕಾಣಿಸಿಕೊಳ್ಳದ ಪ್ಯಾಟರ್ನ್‌ಅನ್ನು ಕೊನೆಗೂ ಕಂಡುಕೊಂಡಾಗ ಮಗು ಖುಶಿಪಡುತ್ತದೆ. ಅದೇರೀತಿಯ ಮಾದರಿಗಳನ್ನು ಇನ್ನಷ್ಟು ಹುಡುಕುವ, ಸ್ವತಃ ರಚಿಸುವ ಹುಮ್ಮಸ್ಸು ಪಡೆಯುತ್ತದೆ.

ಇದಿಷ್ಟನ್ನು ಹಿನ್ನೆಲೆಯಲ್ಲಿಟ್ಟು ಈಗ ಆದಿಶಂಕರಾಚಾರ್ಯ ವಿರಚಿತ ‘ಮಹಾಗಣೇಶ ಪಂಚರತ್ನಂ’ ಎಂಬ ಜನಪ್ರಿಯ ಸ್ತೋತ್ರವನ್ನು ನೆನಪಿಸಿಕೊಳ್ಳೋಣ. ಅದಕ್ಕೂ ಮುನ್ನ, ಬೆಂಗಳೂರಿನಿಂದ ಓದುಗಮಿತ್ರ ಡಿ.ಪಿ.ಸುಹಾಸ್ ಅವರದೊಂದು ಪತ್ರ ಓದೋಣ. ಎಲ್ಲಿಂದೆಲ್ಲಿಗೆ ವಿಷಯಾಂತರ ಎನ್ನಬೇಡಿ, ಇದರಲ್ಲೂ ಒಂದು ಪ್ಯಾಟರ್ನ್ ಇದೆ. ಸುಹಾಸ್ ಬರೆದಿದ್ದಾರೆ- “ಶೃಂಗೇರಿ ಶ್ರೀಗಳ ಕುರಿತು ಲೇಖನ ಓದಿದೆ. ಅವರು ರಚಿಸಿದ ಶ್ರೀ ಶಂಕರ ಭಗವತ್ಪಾದಾಚಾರ್ಯ ಸ್ತುತಿಯನ್ನು ಸ್ಕ್ಯಾನ್ ಮಾಡಿ ಕಳಿಸುತ್ತಿದ್ದೇನೆ. ಇದು ‘ಪ್ರಮಾಣಿಕಾ’ ವೃತ್ತ ಛಂದಸ್ಸಿನಲ್ಲಿರುವ ರಚನೆ. ಶಂಕರಾಚಾರ್ಯರೇ ಬರೆದ ಗಣೇಶಪಂಚರತ್ನಂ, ಯಮುನಾಷ್ಟಕಂ, ನರ್ಮದಾಷ್ಟಕಂ ಮುಂತಾದ ಸ್ತೋತ್ರಗಳೂ ಇದೇ ಛಂದಸ್ಸಿನವು. ಪ್ರಮಾಣಿಕಾ ಎಂದರೆ ಲಘು ಗುರು ಲಘು ಗುರು ಲಘು ಗುರು- ಹೀಗೆ ಆವರ್ತನವಾಗುತ್ತ ಹೋಗುತ್ತದೆ. ಅತಿಸರಳ ಆದರೆ ಅತ್ಯದ್ಭುತ ಎನಿಸುವ ರಚನೆ!"

ಗಣೇಶಪಂಚರತ್ನಂ ನಾನು ಬಾಲ್ಯದಲ್ಲೇ ಕಲಿತ, ಈಗಲೂ ಕಂಠಪಾಠವಿರುವ ಸ್ತೋತ್ರ. ಆದರೆ ಅದರಲ್ಲಿ ಪ್ರಮಾಣಿಕಾ ಎಂಬ ಪ್ಯಾಟರ್ನ್ ಇದೆಯಂತ ನನಗೆ ಗಣೇಶನಾಣೆಗೂ ಗೊತ್ತಿರಲಿಲ್ಲ. ಸುಹಾಸ್ ತಿಳಿಸಿದನಂತರ ನೋಡುತ್ತೇನಾದರೆ, ಹೌದಲ್ವಾ ‘ಮುದಾಕರಾತ್ತಮೋದಕಂ ಸದಾವಿಮುಕ್ತಿಸಾಧಕಂ ಕಲಾಧರಾವತಂಸಕಂ ವಿಲಾಸಿಲೋಕರಕ್ಷಕಂ...’ ವ್ಹಾರೆವಾಹ್! ಸ್ತೋತ್ರದುದ್ದಕ್ಕೂ ಲಘು-ಗುರು-ಲಘು-ಗುರು ಆವರ್ತನ ಎಷ್ಟು ಚಂದವಾಗಿ ಕಾಣಿಸುತ್ತಿದೆ! ಮಾರ್ಚ್‌ಪಾಸ್ಟ್ ಮಾಡುತ್ತಿರುವ ಸಿಪಾಯಿಗಳಂತೆ. ತಧಿಂ ತಧೀಂ ತಧೀಂ ತಧೀಂ ಮಟ್ಟುಗಳಿಗೆ ಹೆಜ್ಜೆಹಾಕುವ ನರ್ತಕಿಯಂತೆ. ಬ್ರೆಸ್ಟ್‌ಸ್ಟ್ರೋಕ್ ಈಜುಗಾರನಂತೆ. ತಲೆಯನ್ನು ತುಸುವಷ್ಟೇ ಎಡಕ್ಕೂ ಬಲಕ್ಕೂ ವಾಲಿಸುತ್ತ ಗಂಭೀರವಾಗಿ ನಡೆಯುವ ಆನೆಯಂತೆ! ಹೀಗೆ ಪ್ಯಾಟರ್ನ್ ಇದೆಯಂತ ಗೊತ್ತಾದದ್ದೇ ತಡ, ಆ ಸ್ತೋತ್ರದ ಮತ್ತು ಶಂಕರಾಚಾರ್ಯರ ಬಗೆಗಿನ ನನ್ನ ಅಭಿಮಾನಕ್ಕೆ ಹೊಸ ಮೆರುಗು ಬಂತು. ಇಷ್ಟು ಸುಲಭದ ‘ಪ್ರಮಾಣಿಕಾ’ವನ್ನು ಒಂದು ಕೈ ನೋಡೇಬಿಡುವಾ ಎಂಬ ಹುರುಪು ಬಂತು. ಶಂಕರರ ಅನುಗ್ರಹವಿದ್ದೇ ಇರುತ್ತದೆಂದು ಪ್ರಮಾಣಿಕಾ ವೃತ್ತದಲ್ಲಿ ಎರಡು ತರ್ಲೆಪದ್ಯಗಳ ರಚನೆಯೂ ಆಯ್ತು. ಅವೀಗ ನಿಮ್ಮ ಮುಂದೆ.

ಆದರೆ ಮೊದಲೊಮ್ಮೆ ಗುರು-ಲಘು ವಿಚಾರ ಸ್ವಲ್ಪ ಬ್ರಶ್‌ಅಪ್ ಮಾಡುವುದು ಒಳ್ಳೆಯದು. ದೀರ್ಘಾಕ್ಷರಗಳೆಲ್ಲವೂ ಗುರು. ಅನುಸ್ವಾರ ಮತ್ತು ವಿಸರ್ಗ ಗುರು. ಒತ್ತಕ್ಷರದ ಮೊದಲು ಬರುವ ಅಕ್ಷರ ಗುರು. ಬೇರೆಲ್ಲವೂ ಲಘು- ಇದಿಷ್ಟನ್ನೇ ನೆನಪಿಟ್ಟುಕೊಂಡರಾಯ್ತು. ಉದಾಹರಣೆಗೆ ‘ಸದಾವಿಮುಕ್ತಿಸಾಧಕಂ’ ಎಂಬ ಸಾಲನ್ನು ತೆಗೆದುಕೊಳ್ಳಿ. ಇದರಲ್ಲಿ ದೀರ್ಘಾಕ್ಷರಗಳಾದ ‘ದಾ’ ಮತ್ತು ‘ಸಾ’ ಗುರು. ‘ಕ್ತಿ’ ಒತ್ತಕ್ಷರವಾದ್ದರಿಂದ ಅದರ ಮೊದಲು ಬರುವ ‘ಮು’ ಗುರು. ‘ಕಂ’ ಅನುಸ್ವಾರ ಆದ್ದರಿಂದ ಗುರು. ಮಿಕ್ಕೆಲ್ಲವೂ ಲಘು. ಲಘು-ಗುರುಗಳನ್ನು ಕ್ರಮವಾಗಿ 0 ಮತ್ತು 1 ಎಂದು ಕಂಪ್ಯೂಟರ್ ಅಂಕಿಗಳಂತೆ ಬರೆದರೆ ‘ಸದಾವಿಮುಕ್ತಿಸಾಧಕಂ’ ಸಾಲು 01010101 ಎಂದಾಗುತ್ತದೆ. ಇಡೀ ಸ್ತೋತ್ರವೇ ಸೊನ್ನೆ ಒಂದು ಸೊನ್ನೆ ಒಂದು... ಪ್ಯಾಟರ್ನ್‌ನಲ್ಲಿ ಮುಂದುವರಿಯುತ್ತದೆ.

ಈಗ ನನ್ನ ಪ್ರಮಾಣಿಕಾ ತರ್ಲೆಪದ್ಯಗಳತ್ತ ಕಣ್ಣುಹಾಯಿಸಿ. ನಿಮಗೆ ‘ಮುದಾಕರಾತ್ತಮೋದಕಂ’ ಧಾಟಿ ಗೊತ್ತಿದ್ದರೆ ಅದರಲ್ಲೇ ಇವನ್ನು ಹಾಡಲೂಬಹುದು. ಮೊದಲನೆಯದು ಕರೆಂಟ್‌ಅಫೇರ್- ಪ್ರಚಲಿತ ಭಾರತದ ಸ್ಥಿತಿಗತಿ. ಎರಡನೆಯದು ಉಂಡಾಡಿಗುಂಡನಿಗೆ ಒಂದು ಪ್ರಶ್ನೆ ಮತ್ತು ಅದಕ್ಕವನ ಉತ್ತರ. ನೆನಪಿಡಿ- ಪ್ರತಿಸಾಲಿನ ಕೊನೆಯಕ್ಷರ ಲಘುವಿದ್ದರೂ ಗುರುವೆಂದೇ ಪರಿಗಣನೆ. ಅದು ಛಂದಸ್ಸಿನ ನಿಯಮ. ಹಾಗಾಗಿ ಅದನ್ನು ದೀರ್ಘಸ್ವರದಲ್ಲೇ ನಮೂದಿಸಲಾಗಿದೆ.

* 1 *

ಪುಢಾರಿ ನೀನು ದುಡ್ಡು ತಿಂದು ದೇಶವನ್ನು ಕೊಲ್ಲುವೇ

ವಿನಾಶಕಾರಿ ಬುದ್ಧಿಯಿಂದ ಓಟು ಕಿತ್ತು ಗೆಲ್ಲುವೇ

ಹಜಾರೆ ನೀನು ಸಂಪು ಹೂಡಿ ನಮ್ಮ ಹೀರೊ ಆಗುವೇ

ಮಹಾತ್ಮಗಾಂಧಿ ಹೇಳಿದಂಥ ಸತ್ಯಮಾರ್ಗ ತೋರುವೇ

* 2 *

ಪ್ರಭಾತ ವೇಳೆಯಲ್ಲಿ ನೀನು ಯಾವ ತಿಂಡಿ ತಿನ್ನುವೇ

ಮಸಾಲೆದೋಸೆ ಪೂರಿ ಭಾಜಿ ಇಡ್ಲಿಚಟ್ನಿ ಮೆಲ್ಲುವೇ

ಹಜಾರದಲ್ಲಿ ಆಚೆ ಈಚೆ ನೂರು ಹೆಜ್ಜೆ ಹಾಕುವೇ

ಅದಾದಮೇಲೆ ಕೊಂಚ ಹೊತ್ತು ನಿದ್ದೆಯನ್ನು ಮಾಡುವೇ

ಅದಷ್ಟು ಪ್ರಮಾಣಿಕಾ ವಿಚಾರ. ಪ್ರಮಾಣಿಕಾ ವೃತ್ತಕ್ಕೆ ತದ್ವಿರುದ್ಧವಾದದ್ದೆಂದರೆ ‘ಸಮಾನಿಕಾ’ ಎಂಬ ವೃತ್ತ. ಇದರಲ್ಲಿ ಗುರು-ಲಘು-ಗುರು-ಲಘು ಆವರ್ತನವಾಗುತ್ತ ಹೋಗುತ್ತದೆ. ಕಂಪ್ಯೂಟರ್ ಭಾಷೆಯಲ್ಲಿ ಬರೆದರೆ 10101010 ರೀತಿಯಲ್ಲಿ ಒಂದು ಸೊನ್ನೆ ಒಂದು ಸೊನ್ನೆ ಪ್ಯಾಟರ್ನ್. ಇದಕ್ಕೂ ಶಂಕರಾಚಾರ್ಯರದೇ ಒಂದು ರಚನೆ ಒಳ್ಳೆಯ ಉದಾಹರಣೆ. ಕಾಲಭೈರವಾಷ್ಟಕಂ ಅಂತೊಂದು ಸ್ತೋತ್ರವಿದೆ. ‘ದೇವರಾಜ ಸೇವ್ಯಮಾನ ಪಾವನಾಂಘ್ರಿ ಪಂಕಜಂ| ವ್ಯಾಲಯಜ್ಞ ಸೂತ್ರಮಿಂದುಶೇಖರಂ ಕೃಪಾಕರಂ’ ಎಂದು ಶುರುವಾಗುತ್ತದೆ. ಇದನ್ನು ಗಮನವಿಟ್ಟು ನೋಡಿ- ಗುರು ಲಘು ಗುರು ಲಘು... ಮತ್ತದೇ ಮಾರ್ಚ್‌ಪಾಸ್ಟ್. ಧೀಂತ ಧೀಂತ ಧೀಂತ ಧೀಂತ ನರ್ತನ. ಇನ್ನೊಂದು ಉದಾಹರಣೆ- ‘ಭಾಗ್ಯವಂತ’ ಚಿತ್ರಕ್ಕಾಗಿ ಪುನೀತ್ ರಾಜಕುಮಾರ್ ಅಭಿನಯಿಸಿ ಹಾಡಿದ್ದ ಗೀತೆಯ ಪಲ್ಲವಿ- ‘ಬಾನ ದಾರಿಯಲ್ಲಿ ಸೂರ್ಯ ಜಾರಿಹೋದ ಚಂದ್ರ ಮೇಲೆ ಬಂದ... ಮಿನುಗು ತಾರೆ ಅಂದ ನೋಡು ಎಂಥ ಚಂದ ರಾತ್ರಿ ಆಯ್ತು ಮಲಗು ನನ್ನ ಪುಟ್ಟ ಕಂದ’ ಇದರಲ್ಲಿ ಮಿನುಗು ಮತ್ತು ಮಲಗು ಎಂಬೆರಡು ಪದಗಳು ಮಾತ್ರ ಮೂರಕ್ಷರಗಳೂ ಲಘು ಆದ್ದರಿಂದ ಸರಿಹೊಂದುವುದಿಲ್ಲ. ಉಳಿದಂತೆ ಇಡೀ ಪಲ್ಲವಿ ಒಂದು ಸೊನ್ನೆ ಒಂದು ಸೊನ್ನೆ ಒಂದು ಸೊನ್ನೆ... ಪ್ಯಾಟರ್ನ್. ಅದೇ ಪುನೀತ್ ‘ಚಲಿಸುವ ಮೋಡಗಳು’ ಚಿತ್ರದಲ್ಲಿ ಹಾಡಿರುವ ‘ಕಾಣದಂತೆ ಮಾಯವಾದನೂ’ ಸಾಲು ಕೂಡ ಹಾಗೆಯೇ!

ನೋಡಿದ್ರಾ? ಸಮಾನಿಕಾ-ಪ್ರಮಾಣಿಕಾ ಎಂದರೆ ಕಷ್ಟವೇನಿಲ್ಲ. ಬಹುಶಃ ಈಗ ನಿಮಗೂ ಇದರ ನಶೆ ಏರತೊಡಗಿರಬಹುದು. ಅಂದಹಾಗೆ ಪದ್ಯವೇ ಆಗಬೇಕಂತಿಲ್ಲ, ಕಥೆ ಬರೆಯುತ್ತ ಹೋಗುವಾಗಲೂ ಒಂದು ಸೊನ್ನೆ ಒಂದು ಸೊನ್ನೆ ಎನ್ನುತ್ತ ಅಕ್ಷರಮಾಲೆ ಕಟ್ಟಬಹುದು- ರಾಮಚಂದ್ರ ಕಾಡಿನಲ್ಲಿ ಜಿಂಕೆಯನ್ನು ಕೊಂದ. ಲಂಕೆರಾಜ ಭಿಕ್ಷೆಗೆಂದು ಸೀಮೆ ದಾಟಿ ಬಂದ. ಸೀತೆಯನ್ನು ಕದ್ದುಕೊಂಡು ದೂರ ಹಾರಿ ಹೋದ. ಯುದ್ಧದಲ್ಲಿ ರಾಮ ಗೆದ್ದು ಸೀತೆಗೆಷ್ಟು ಚಂದ!

ಹಾಗಾಗಿ, ಅಮೆರಿಕದವರಿಗಷ್ಟೇ ಅಲ್ಲ pattern recognition ಗೊತ್ತಿರುವುದು. ಭಾರತೀಯರಿಗೆ ಆದಿಶಂಕರರ ಕಾಲದಿಂದಲೇ ಗೊತ್ತಿದೆ. ಬೇರೆಲ್ಲ ಬಿಡಿ, ‘ಎಂಥ ಅಂದ ಎಂಥ ಚಂದ ಶಾರದಮ್ಮ’ ಎಂಬ ಸಾಲಿಗಷ್ಟೇ ಗುರು-ಲಘು ಹಾಕಿನೋಡಿ. ಅಲ್ಲಿಯೂ ನಿಮಗೆ ಕಾಣುವುದು ಒಂದು ಸೊನ್ನೆ ಒಂದು ಸೊನ್ನೆ ಒಂದು ಸೊನ್ನೆ... ಕೊನೆಗೆ ಆ ‘ಒಂದು ಸೊನ್ನೆ ಒಂದು ಸೊನ್ನೆ ಒಂದು ಸೊನ್ನೆ’ ಎಂಬುದಕ್ಕೇ ಗುರು-ಲಘು ಹಾಕಿ ನೋಡಿ. ಅಲ್ಲಿಯೂ ಅದೇ!

* * *

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು. ಅಲ್ಲಿ ಪ್ರಕಟವಾದ ಲೇಖನದಲ್ಲಿ ‘ಸಮಾನಿಕಾ’ ಮತ್ತು ’ಪ್ರಮಾಣಿಕಾ’ಹೆಸರುಗಳು ಅದಲುಬದಲಾಗಿದ್ದವು. ಆ ತಪ್ಪನ್ನು ಹಿರಿಯ ಓದುಗರೊಬ್ಬರು ನನ್ನ ಗಮನಕ್ಕೆ ತಂದ ನಂತರ ಇಲ್ಲಿ ಅದನ್ನು ಸರಿಪಡಿಸಿಕೊಂಡಿದ್ದೇನೆ.]

"Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!

Poetry is like a Jackfruit

Saturday, April 16th, 2011
DefaultTag | Comments

ದಿನಾಂಕ  17 ಏಪ್ರಿಲ್ 2011ರ ಸಂಚಿಕೆ...

ಹಲಸಿನ ಹಣ್ಣಿನಂತೆಯೇ ಕಾವ್ಯದ ರುಚಿಯೂ!

* ಶ್ರೀವತ್ಸ ಜೋಶಿ

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

“ಆ ಕೀರ್ತನಲೋನಿ ಪ್ರತಿ ಅಕ್ಷರಂ ವೆನುಕ ಆರ್ದ್ರತ ನಿಂಡಿ‌ಉಂದಿ ದಾಸು..." ಶಂಕರಾಭರಣಂ ಸಿನೆಮಾದಲ್ಲಿ ಶಂಕರಶಾಸ್ತ್ರಿಗಳು ಹೇಳುತ್ತಾರೆ. ಬ್ರೋಚೇವಾರೆವರುರಾ ಕೀರ್ತನೆಯನ್ನು ಅದರ ಅರ್ಥವಾಗಲೀ ಭಾವವಾಗಲೀ ಗೊತ್ತಿಲ್ಲದೆ ಹಿಗ್ಗಾಮುಗ್ಗಾ ತಿರುಚಿ ವಿಚಿತ್ರವಾಗಿ ಹಾಡುತ್ತಿರುತ್ತಾನೆ ಅರೆಬೆಂದ ಸಂಗೀತಪಂಡಿತ ದಾಸು. ಮೇಲಾಗಿ ತನ್ನ ಶಿಷ್ಯಂದಿರಿಗೂ ಅದೇರೀತಿ ಹೇಳಿಕೊಡುತ್ತಾನೆ. ಅವನನ್ನು ಗದರಿಸುತ್ತ ಶಾಸ್ತ್ರಿಗಳು ಹೇಳುವ ಮಾತು. “ಆ ಕೀರ್ತನೆಯ ಒಂದೊಂದು ಅಕ್ಷರವೂ ಆರ್ದ್ರಭಾವದಲ್ಲಿ ಅದ್ದಿ ತೆಗೆದಿರುವಂಥದು. ಭಗವಂತನ ಆಸರೆಯ ಬಾಯಾರಿಕೆಯಿಂದ ಬಳಲಿ ಬೆಂಡಾದ ಭಕ್ತನ ಎದೆಯಾಳದಲ್ಲಿ ತನ್ನಿಂತಾನೇ ಗಂಗಾಜಲವಾಗಿ ಹೊರಹೊಮ್ಮಿದ ಗೀತೆಯದು, ರಾಗವದು. ಅಮೃತದಂಥ ಆ ಸಂಗೀತವನ್ನು ಅಪಭ್ರಂಶ ಮಾಡಬೇಡ!" ಅವಮಾನಕ್ಕೊಳಗಾದ ದಾಸು ಇದನ್ನು ಕಿವಿಗೆ ಹಾಕಿಕೊಳ್ಳುವುದಿಲ್ಲ. ಆದರೆ ಸಿನೆಮಾ ನೋಡುವ ನಮಗೆ ಶಾಸ್ತ್ರಿಗಳ ಮೇಲೆ ಗೌರವ ಮೂಡುತ್ತದೆ. ಅದಕ್ಕಿಂತ ಹೆಚ್ಚಾಗಿ ಆ ಕೀರ್ತನೆಯ ಬಗ್ಗೆ, ಅದನ್ನು ರಚಿಸಿದ ಕವಿಯ ಬಗ್ಗೆ ಆಸಕ್ತಿ ಹುಟ್ಟುತ್ತದೆ.

ಬ್ರೋಚೇವಾ... ಕೀರ್ತನೆ ಮೈಸೂರು ವಾಸುದೇವಾಚಾರ್ಯರ ರಚನೆ. ಅವರು ಒಡೆಯರ ಕಾಲದ ಆಸ್ಥಾನವಿದ್ವಾಂಸರು. ಸಂಸ್ಕೃತ ಮತ್ತು ತೆಲುಗಿನಲ್ಲಿ ಕೃತಿಗಳನ್ನು ರಚಿಸಿದವರು. ಬ್ರೋಚೇವಾರು ಎವರುರಾ ಎಂದರೆ ತೆಲುಗಿನಲ್ಲಿ ‘ಕಾಪಾಡುವವರು ಯಾರಯ್ಯಾ? ಎಂದರ್ಥ. ಶ್ರೀರಾಮನ ಪರಮಭಕ್ತರಾಗಿದ್ದ ವಾಸುದೇವಾಚಾರ್ಯರು ನಿಜವಾಗಿಯೂ ಕಷ್ಟಕಾಲದಲ್ಲಿದ್ದಾಗ ದೇವರಲ್ಲಿ ಮೊರೆಯಿಡುತ್ತ ಇದನ್ನು ಬರೆದರೇ ಗೊತ್ತಿಲ್ಲ. ಆದರೂ ಕವಿ ಎಂದಮೇಲೆ ಹಾಸಿಹೊದೆಯುವಷ್ಟು ಕಷ್ಟಗಳಿದ್ದವರು ಎಂದರೂ ಆಶ್ಚರ್ಯವೇನಿಲ್ಲ. ತ್ಯಾಗರಾಜರು ಪಂಚರತ್ನ ಕೃತಿಗಳನ್ನು ರಚಿಸಿದ್ದು ತಮ್ಮ ಬಾಳಿನ ಅತ್ಯಂತ ಕಷ್ಟದ ದಿನಗಳಲ್ಲಿ ಎಂದು ಎಲ್ಲಿಯೋ ಓದಿದ ನೆನಪು. ಹಾಗೆ ನೋಡಿದರೆ ಹೆಚ್ಚಿನೆಲ್ಲ ಕವಿಗಳ ಬದುಕೇ ಅಂಥದು. ಕನಕ-ಪುರಂದರರು, ಸರ್ವಜ್ಞ-ಅಲ್ಲಮರು, ಕೊನೆಗೆ ಬೇಂದ್ರೆಯವರಾದರೂ ಅಷ್ಟೇ, ನರಸಿಂಹ ಸ್ವಾಮಿಗಳಾದರೂ ಅಷ್ಟೇ. ಅಜರಾಮರವಾದ ಅವರ ಕೃತಿಗಳೆಲ್ಲ ಸುಖದ ಸುಪ್ಪತ್ತಿಗೆಯಿಂದ ಬಂದವಲ್ಲ. ಕಷ್ಟಗಳ ಕುಲುಮೆಯಲ್ಲಿ ನಳನಳಿಸಿದ ರತ್ನಗಳು. ಆದ್ದರಿಂದಲೇ ‘ಹಿಂಡಿದರೂ ಸಿಹಿ ಕೊಡುವ ಕಬ್ಬು, ತೇಯ್ದರೂ ಪರಿಮಳ ಬೀರುವ ಗಂಧ, ಉರಿದರೂ ಬೆಳಕು ಚೆಲ್ಲುವ ದೀಪ...’ ಎಂಬ ಬಣ್ಣನೆ ಇವರಿಗೆಲ್ಲ ಏಕಪ್ರಕಾರವಾಗಿ ಸರಿಹೊಂದುತ್ತದೆ.

ಕವಿಗಳ ಬದುಕಿನ ಕಥೆ-ವ್ಯಥೆಗಳನ್ನು ಅರಿತುಕೊಂಡಾಗ ನಮಗೆ ಅವರ ಕಾವ್ಯ ಇನ್ನಷ್ಟು ಹಿಡಿಸುತ್ತದೆ. ಅಬ್ಬಾ ಎಂಥ ಕಷ್ಟಕಾರ್ಪಣ್ಯದಲ್ಲೂ ಇಷ್ಟೊಂದು ಮಧುರವಾದ, ಅರ್ಥವತ್ತಾದ, ಹೃದಯಂಗಮವಾದ ಕೃತಿಗಳನ್ನು ರಚಿಸಿದರಲ್ಲಾ ಎಂದು ಮನಮಿಡಿಯುತ್ತದೆ. ಬೇಂದ್ರೆಯವರ ‘ನೀ ಹೀಂಗ ನೋಡಬ್ಯಾಡ...' ಕವಿತೆಯನ್ನೇ ತೆಗೆದುಕೊಳ್ಳಿ. ಅದನ್ನು ಹಾಗೇಸುಮ್ಮನೆ ಕೇಳಿಸಿಕೊಳ್ಳುವುದೇ ಬೇರೆ, ಎಂಥ ಸನ್ನಿವೇಶದಲ್ಲಿ ಬೇಂದ್ರೆ ಅದನ್ನು ಬರೆದರು ಎಂದು ತಿಳಿದುಕೊಂಡಮೇಲೆ ಕೇಳುವಾಗಿನ ಪರಿಣಾಮವೇ ಬೇರೆ! ಕೆಲವರ್ಷಗಳ ಹಿಂದೆ ಡಾ.ಎನ್.ಎಸ್ ಲಕ್ಷ್ಮೀನಾರಾಯಣ ಭಟ್ಟರು ಅಮೆರಿಕ ಪ್ರವಾಸದಲ್ಲಿದ್ದಾಗ ಇಲ್ಲಿ ಹಲವೆಡೆಗಳಲ್ಲಿ ಬೇಂದ್ರೆಯವರ ಬಗ್ಗೆ ಉಪನ್ಯಾಸಗಳನ್ನು ಕೊಟ್ಟಿದ್ದರು. ವಾಷಿಂಗ್ಟನ್‌ನಲ್ಲಿ ನಡೆದ ಕಾರ್ಯಕ್ರಮಕ್ಕೆ ನಾನೂ ಹೋಗಿದ್ದೆ. ಅವತ್ತು ‘ನೀ ಹೀಂಗ ನೋಡಬ್ಯಾಡ’ ಕವಿತೆಯ ಕುರಿತು ಹೇಳುವಾಗಂತೂ ಭಟ್ಟರ ಕಂಠ ಗದ್ಗದಿತವಾಗಿತ್ತು. ಸಭಿಕರೆಲ್ಲರ ಕಣ್ಣಾಲಿಗಳು ಒದ್ದೆಯಾಗಿದ್ದವು. ಇತ್ತೀಚೆಗೆ ಕೆಲ ವಾರಗಳ ಹಿಂದೆ ಈ-ಟಿವಿ ಕನ್ನಡ ವಾಹಿನಿಯಲ್ಲಿ ಮೂಡಿಬಂದ ಬೇಂದ್ರೆ ಸ್ಪೆಷಲ್ (ಹಾಗೆಯೇ ನರಸಿಂಹಸ್ವಾಮಿ ಸ್ಪೆಷಲ್) ‘ಎಂದೂ ಮರೆಯದ ಹಾಡು’ ಕಾರ್ಯಕ್ರಮ ಕೂಡ ನೇರಾನೇರ ಹೃದಯವನ್ನೇ ತಟ್ಟಿತು ಅಂತನಿಸಿದ್ದು ಅದೇ ಕಾರಣಕ್ಕೆ. ಜನಪ್ರಿಯ ಗಾಯಕ-ಗಾಯಕಿಯರಿಂದ ಕವಿಯ ಕೃತಿಗಳ ಸೊಗಸಾದ ಗಾಯನ. ಜತೆಯಲ್ಲಿ ರವಿಯ (ರವಿ ಬೆಳಗೆರೆಯವರ) ಮನೋಜ್ಞ ನಿರೂಪಣೆಯ ರಸಾಯನ. ಒಟ್ಟು ಪರಿಣಾಮ- ಅದ್ಭುತವಾದೊಂದು ಅನುಭವ!

ಕಳೆದ ರವಿವಾರ ಅಂಥದೇ ಒಂದು ವಿಶಿಷ್ಟ ಅನುಭವ ದಕ್ಕಿತು. ಅದೂ ಹಾಗೆಯೇ, ಕವಿಯ ಕಾವ್ಯದ ಮೇಲೆ ರವಿಯ ಬೆಳಕು! ಇಲ್ಲಿ ವಾಷಿಂಗ್ಟನ್‌ನಲ್ಲಿ ಸಾಹಿತ್ಯಾಸಕ್ತ ಕನ್ನಡಿಗರೊಂದಿಷ್ಟು ಮಂದಿ ಸೇರಿ ಕಟ್ಟಿಕೊಂಡಿರುವ ‘ಭೂಮಿಕಾ’ ಚರ್ಚಾಚಾವಡಿಯಲ್ಲಿ ಅವತ್ತು ‘ಗಂಗಾಲಹರಿ’ ಮತ್ತು ‘ಗಂಗಾವತರಣ’ ಕೃತಿಗಳ ತುಲನಾತ್ಮಕ ಪರಿಚಯ ಮತ್ತು ಅನೌಪಚಾರಿಕ ಚರ್ಚೆ, ವಿಚಾರವಿನಿಮಯ. ನಡೆಸಿಕೊಟ್ಟವರು ಡಾ.ರವಿ ಹರಪ್ಪನಹಳ್ಳಿ. ಅವರು ವೃತ್ತಿಯಲ್ಲಿ ಜೀವವಿಜ್ಞಾನಿ, ಪ್ರವೃತ್ತಿಯಲ್ಲಿ ಓರ್ವ ಕಲಾವಿದ, ಸಾಹಿತ್ಯಾಸಕ್ತ. ಗಂಗಾವತರಣ ಎಂದರೆ ಅದೇ- ಬೇಂದ್ರೆಯವರ ಅತಿಪ್ರಸಿದ್ಧವಾದ ‘ಇಳಿದು ಬಾ ತಾಯಿ ಇಳಿದು ಬಾ’ ಕವಿತೆ. ಸ್ವತಃ ಬೇಂದ್ರೆಭಕ್ತರೂ ಆಗಿರುವ ರವಿ ಅದನ್ನು ಆಯ್ದುಕೊಂಡದ್ದು ಸಹಜವೇ. ಆದರೆ ಗಂಗಾಲಹರಿ ಕೃತಿಯ ವಿಚಾರ ನನಗೆ ಹೊಸದು. ಈಮೊದಲು ಕೇಳಿಯೇ ಇರಲಿಲ್ಲ. ಇದು ಬೇಂದ್ರೆಯವರದಲ್ಲ, ಬೇಂದ್ರೆಯವರ ಮೇಲೆ ಗಾಢ ಪರಿಣಾಮ ಬೀರಿದ್ದ ಜಗನ್ನಾಥ ಪಂಡಿತ ಎಂಬ ಮಹಾನ್ ಕವಿಯ ರಚನೆ. ೫೨ ಶ್ಲೋಕಗಳ ಒಂದು ಸಂಸ್ಕೃತ ಸ್ತೋತ್ರ. ಬೇಂದ್ರೆಯವರ ಗಂಗಾವತರಣಕ್ಕೆ ಸ್ಫೂರ್ತಿಯೂ ಹೌದು.

ವೈಶಿಷ್ಟ್ಯವಿರುವುದು ಗಂಗಾಲಹರಿ ಸ್ತೋತ್ರದಲ್ಲಲ್ಲ. ದೇವಾಧಿದೇವತೆಗಳ ಲಕ್ಷೋಪಲಕ್ಷ ಸ್ತೋತ್ರಗಳಿದ್ದಂತೆಯೇ ಅದೂ ಒಂದು. ಗಂಗಾನದಿಯ ವರ್ಣನೆ, ಸ್ತುತಿ ಅಷ್ಟೇ. ಆದರೆ ಜಗನ್ನಾಥ ಪಂಡಿತನ ಬದುಕಿನ ಕಥೆ ಬಹಳ ಸ್ವಾರಸ್ಯವಾದ್ದು. ಗಂಗಾಲಹರಿಯನ್ನು ಆತ ಹಾಡಿದ ಸನ್ನಿವೇಶ ಅತ್ಯಂತ ಹೃದಯಸ್ಪರ್ಶಿಯಾದ್ದು. ಅವತ್ತು ನಮ್ಮ ಚರ್ಚೆಗೆ ರಂಗೇರಿದ್ದೇ ಆ‌ಎಲ್ಲ ವಿವರಗಳಿಂದ. ಹದಿನೇಳನೇ ಶತಮಾನದಲ್ಲಿ ಬಾಳಿದ್ದ ಜಗನ್ನಾಥ ಪಂಡಿತ ಮೂಲತಃ ಆಂಧ್ರದವನು. ಅತಿಶಯ ಮೇಧಾವಿ, ಆದರೆ ಕಡುಬಡವ. ರಾಜಾಶ್ರಯ ಕೋರಿ ಉತ್ತರಭಾರತಕ್ಕೆ ವಲಸೆ ಹೋಗುತ್ತಾನೆ. ಮೊಘಲ್ ಚಕ್ರವರ್ತಿ ಷಹಜಹಾನನ ಆಸ್ಥಾನವನ್ನು ತಲುಪುತ್ತಾನೆ. ತನ್ನ ಪಾಂಡಿತ್ಯದಿಂದ ಅವನ ಮನಗೆಲ್ಲುತ್ತಾನೆ. ಚಕ್ರವರ್ತಿಯೊಡನೆ ಚದುರಂಗದಾಟ ಆಡುವಷ್ಟು ಸಖ್ಯ-ಸಲುಗೆ ಬೆಳೆಸುತ್ತಾನೆ. ಆಟದಲ್ಲಿ ಷಹಜಹಾನನನ್ನು ಸೋಲಿಸುತ್ತಾನೆ. ಪಣವಾಗಿ ಅಲ್ಲಿ ಸೇವಕಿಯಾಗಿದ್ದ ಸುರಸುಂದರಿ ದಾಸೀಪುತ್ರಿ ಲವಂಗಿಯನ್ನೇ ಕೊಡುವಂತೆ ಕೇಳುತ್ತಾನೆ. ಹಠಹಿಡಿದು ಅವಳನ್ನೇ ಮದುವೆಯಾಗುತ್ತಾನೆ, ಹಾಯಾಗಿರುತ್ತಾನೆ. ಮುಂದೆ ಔರಂಗಜೇಬ ತಂದೆ ಷಹಜಹಾನನನ್ನು ಬಂಧಿಸಿದಾಗ ಜಗನ್ನಾಥ ಪಂಡಿತ ಮತ್ತು ಲವಂಗಿ ಕೂಡ ರಾಜ್ಯದಿಂದ ಹೊರಬೀಳುತ್ತಾರೆ. ಕಾಶೀಕ್ಷೇತ್ರಕ್ಕೆ  ಹೋದಾಗ ಅಲ್ಲಿನ ಪಂಡಿತ ಸಮುದಾಯವು ಅವನನ್ನು ಜಾತಿಭ್ರಷ್ಟನೆಂಬ ಕಾರಣಕ್ಕೆ ದೂರವಿಡುತ್ತದೆ. ಬಾಲ್ಯದಿಂದಲೇ ಪ್ರತಿಭಾನ್ವಿತನಾದರೂ ಉದ್ಧಟತನದವನು ಎಂದೂ ಅವನ ಬಗ್ಗೆ ತಿರಸ್ಕಾರವಿರುತ್ತದೆ. ಅಂಥ ಹತಾಶ ಪರಿಸ್ಥಿತಿಯಲ್ಲಿಯೂ ಜಗನ್ನಾಥ ಪಂಡಿತ ಕೆಲವು ಅದ್ಭುತ ಕೃತಿಗಳನ್ನು ರಚಿಸುತ್ತಾನೆ. ಅವುಗಳಲ್ಲೊಂದು ಗಂಗಾಲಹರಿ. ಆದರೆ ಕೊನೆಗೂ ಬದುಕಿನಲ್ಲಿ ಸಾಕಷ್ಟು ರೋಸಿಹೋಗಿ ಪ್ರಾಯಶ್ಚಿತ್ತದ ರೂಪದಲ್ಲಿ ಮಡದಿಯೊಂದಿಗೆ ಜಲಸಮಾಧಿ ಮಾಡಿಕೊಳ್ಳಲು ನಿಶ್ಚಯಿಸುತ್ತಾನೆ. ಕಾಶಿಯಲ್ಲಿ ಗಂಗೆಯ ದಡದಲ್ಲಿ ಕುಳಿತು ಹಂಸಗೀತೆಯೆಂಬಂತೆ ಗಂಗಾಲಹರಿಯನ್ನು ಹಾಡುತ್ತಾನೆ. ಒಂದೊಂದು ಶ್ಲೋಕಕ್ಕೂ ಒಂದೊಂದು ಮೆಟ್ಟಿಲಿನಷ್ಟು ಏರುವ ಗಂಗೆ, ಐವತ್ತೆರಡನೇ ಶ್ಲೋಕವಾಗುವಾಗ ಅವರಿಬ್ಬರನ್ನೂ ಕೊಚ್ಚಿಕೊಂಡು ಹೋಗುತ್ತಾಳೆ!

ಗಂಗಾಲಹರಿ ಸ್ತೋತ್ರಕ್ಕೆ ಇಷ್ಟೊಂದು ರೋಮಾಂಚಕ ಹಿನ್ನೆಲೆ ಇದೆಯೆಂದು ಗೊತ್ತಾದ ಮೇಲೆ ಅದರ ಬಗ್ಗೆ ಅಂತರ್ಜಾಲದಲ್ಲೂ ವಿವರಗಳಿದ್ದೇ ಇರುತ್ತವೆ ಎಂದು ಶೋಧಕ್ಕೆ ತೊಡಗಿದೆ. ಸಿಕ್ಕೇಬಿಡ್ತು ಇನ್ನೊಬ್ಬ ಬೇಂದ್ರೆಭಕ್ತ ಹುಬ್ಬಳ್ಳಿನಿವಾಸಿ ಹಿರಿಯ ಮಿತ್ರ ಸುಧೀಂದ್ರ ದೇಶಪಾಂಡೆಯವರ ‘ಸಲ್ಲಾಪ' ಬ್ಲಾಗ್. ಅದರಲ್ಲಿ ಗಂಗಾಲಹರಿ, ಜಗನ್ನಾಥ ಪಂಡಿತ, ಬೇಂದ್ರೆಯವರ ಮೇಲಾದ ಪರಿಣಾಮ- ಇವೆಲ್ಲದರ ದೊಡ್ಡದೊಂದು ಪ್ರಬಂಧವೇ ಇದೆ. ಓದಿದೆ, ಬಹಳ ರುಚಿಸಿತು. ಅಂತೆಯೇ ಅನಿಸಿತು, ಕಾವ್ಯವೆಂದರೆ ಹೀಗೆಯೇ. ಹಲಸಿನಹಣ್ಣು ಇದ್ದಂತೆ. ಹಿತವಾದ ಪರಿಮಳ. ಆದರೆ ಬಿಡಿಸಿ ಒಳಗಿನ ಸಿಹಿಸಿಹಿ ತೊಳೆಗಳನ್ನು ತಿನ್ನಲಿಕ್ಕೆ ಕಷ್ಟವಿದೆ. ಒಂದೋ ನಾವೇ ಶ್ರಮಪಡಬೇಕು, ಇಲ್ಲ ಯಾರಾದರೂ ಅನುಭವಿಗಳು ಆ ಕೆಲಸ ಮಾಡಿಕೊಡಬೇಕು. ಆಗ, ಆಹಾ! ಏನು ಸವಿ ಏನು ಸೊಗಸು!

jackfruitpoetry.jpg

* * *

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

"Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!

Shashtyabda of Sringeri Jagadguru

Saturday, April 9th, 2011
DefaultTag | Comments

ದಿನಾಂಕ  10 ಏಪ್ರಿಲ್ 2011ರ ಸಂಚಿಕೆ...

ಭಾರತೀಯ ಸಂಸ್ಕೃತಿಯ ತೀರ್ಥ ಸ್ವರೂಪ

* ಶ್ರೀವತ್ಸ ಜೋಶಿ

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

ಸೀತಾರಾಮ ಆಂಜನೇಯಲು ಎಂದು ಆ ಬಾಲಕನ ಹೆಸರು. ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ನರಸರಾವ್‌ಪೇಟ ಅವನ ಊರು. ತಂದೆ ವೆಂಕಟೇಶ್ವರ ಅವಧಾನಿ, ತಾಯಿ ಅನಂತಲಕ್ಷ್ಮಮ್ಮ. ಧರ್ಮಭೀರುಗಳಾಗಿ ಬಾಳ್ವೆ ನಡೆಸುತ್ತಿದ್ದ ದಂಪತಿಗೆ ದೈವಾನುಗ್ರಹದಿಂದ ಹುಟ್ಟಿದ ಸುಪುತ್ರ. ಪುಟ್ಟ ಮಗುವಾಗಿದ್ದಾಗಿನಿಂದಲೇ ಅಪಾರ ದೈವಭಕ್ತಿ. ಶಾಲೆಯಲ್ಲಿ ಕಲಿಕೆಯಲ್ಲೂ ಅಗ್ರಶ್ರೇಣಿ. ಗಣಿತವೆಂದರೆ ನೀರು ಕುಡಿದಷ್ಟು ಸುಲಭ. ಒಂಬತ್ತು ವರ್ಷಕ್ಕೆಲ್ಲ ಸಂಸ್ಕೃತ ಭಾಷಾಪ್ರವೀಣ. ತಂದೆಯಿಂದಲೇ ವೇದೋಪನಿಷತ್ತುಗಳ ಶಿಕ್ಷಣ. ಸಂಸ್ಕೃತವಿದ್ವಾಂಸರೆಲ್ಲ ನಿಬ್ಬೆರಗಾಗುವಷ್ಟು ಕವಿತ್ವ ಮತ್ತು ಪಾಂಡಿತ್ಯ. ವಿಜಯವಾಡ ಆಕಾಶವಾಣಿ ಕೇಂದ್ರದಿಂದ ಸಂಸ್ಕೃತ ಕಾರ್ಯಕ್ರಮ ನಡೆಸಿಕೊಡುವಂತೆ ಈ ಬಾಲಕನಿಗೆ ಆಹ್ವಾನ. ಹೈಸ್ಕೂಲ್‌ನಲ್ಲಿದ್ದಾಗ ಒಮ್ಮೆ ವಿಜಯವಾಡದಲ್ಲಿ ಸಂಸ್ಕೃತ ಭಾಷಣಸ್ಪರ್ಧೆ ಏರ್ಪಟ್ಟಿತ್ತು. ಆಗಿನ ಶೃಂಗೇರಿ ಮಠಾಧಿಪತಿಗಳಾಗಿದ್ದ ಶ್ರೀ ಅಭಿನವ ವಿದ್ಯಾತೀರ್ಥರ ಸಮ್ಮುಖದಲ್ಲಿ ಆ ಸ್ಪರ್ಧೆ. ಸೀತಾರಾಮ ಆಂಜನೇಯಲು ನಿರರ್ಗಳವಾಗಿ ಮಾತನಾಡಿ ಪ್ರಥಮ ಬಹುಮಾನ ಗಿಟ್ಟಿಸಿದ. ಅಷ್ಟೇ‌ಅಲ್ಲ, ಸ್ವಾಮೀಜಿಯವರ ದಿವ್ಯಸನ್ನಿಧಿಯಲ್ಲಿ, ಅವರ ತೇಜೋಮಯ ಕಂಗಳಲ್ಲಿ ಏನೋ ಒಂದು ಹೊಸ ಬೆಳಕನ್ನು ಕಂಡುಕೊಂಡ. ಅವರೇ ತನ್ನ ಪರಮಗುರು ಎಂದು ಅವತ್ತೇ ನಿರ್ಧರಿಸಿದ. ಹೈಸ್ಕೂಲ್ ಶಿಕ್ಷಣ ಮುಗಿದದ್ದೇ ತಡ ಗುರುವಿನ ಸೆಳೆತ ಪ್ರಬಲವಾಯಿತು. ಮನೆಯಲ್ಲಿ ಹಿರಿಯರ ವಿರೋಧವನ್ನೂ ಲೆಕ್ಕಿಸದೆ ಒಂದುದಿನ ಹೊರಟೇಬಿಟ್ಟ, ನೇರವಾಗಿ ಉಜ್ಜೈನಿಗೆ. ಅಭಿನವ ವಿದ್ಯಾತೀರ್ಥ ಸ್ವಾಮೀಜಿ ಅಲ್ಲಿ ಆಗ ಚಾತುರ್ಮಾಸ್ಯ ವ್ರತಾಚರಣೆಯಲ್ಲಿದ್ದರು. ಅವರ ಪಾದಗಳಿಗೆರಗಿ ಶಿಷ್ಯತ್ವವನ್ನು ಬೇಡಿಕೊಂಡ. ಶೃಂಗೇರಿ ಶಾರದೆಯ ಇಚ್ಛೆಯೂ ಅದೇ ಇತ್ತೇನೋ, ಸೀತಾರಾಮ ಆಂಜನೇಯಲು ಅಭಿನವ ವಿದ್ಯಾತೀರ್ಥರ ನೆಚ್ಚಿನ ವಿದ್ಯಾರ್ಥಿಯಾದ. ಪಟ್ಟಶಿಷ್ಯನೂ ಆಗಿ ರೂಪುಗೊಂಡ.

bharati_tirtha_swamiji_B.jpg

ಇದಿಷ್ಟು, ಶೃಂಗೇರಿ ಶಾರದಾಪೀಠದ ಈಗಿನ ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿಗಳ ಪೂರ್ವಾಶ್ರಮವಿವರ. 1966ರಿಂದ ಎಂಟು ವರ್ಷಕಾಲ ಗುರುಗಳಲ್ಲಿ ವೇದ-ವೇದಾಂತಗಳನ್ನೂ, ನ್ಯಾಯ, ಮೀಮಾಂಸಾ, ವ್ಯಾಕರಣ ಮುಂತಾದ ಶಾಸ್ತ್ರಗಳನ್ನೂ ಕಲಿತು 1974ರಲ್ಲಿ ಸನ್ಯಾಸಸ್ವೀಕಾರ. ಸುಮಾರು 15 ವರ್ಷಗಳವರೆಗೂ ಕಿರಿಯ ಸ್ವಾಮಿಯಾಗಿ ಗುರುಗಳೊಂದಿಗೆ ಶೃಂಗೇರಿಪೀಠದ ಉಸ್ತುವಾರಿ, ದೇಶಪರ್ಯಟನ, ಧರ್ಮಪ್ರಚಾರಕಾರ್ಯ. 1989ರಲ್ಲಿ ಅಭಿನವ ವಿದ್ಯಾತೀರ್ಥರು ಬ್ರಹ್ಮೀಭೂತರಾದ ಮೇಲೆ ಶಾರದಾಪೀಠದ 36ನೇ ಜಗದ್ಗುರುವಾಗಿ ಪಟ್ಟಾಭಿಷೇಕ. ಆದಿಶಂಕರಾಚಾರ್ಯರಿಂದ ಮೊದಲ್ಗೊಂಡು ಅವಿಚ್ಛಿನ್ನವಾಗಿ ನಡೆದುಕೊಂಡು ಬಂದಿರುವ ಶೃಂಗೇರಿ ಶಾರದಾಪೀಠದ ಗುರುಪರಂಪರೆ ಸಮಗ್ರ ಭಾರತದಲ್ಲೇ ಅದ್ವಿತೀಯವಾದುದು. ಶಂಕರಾಚಾರ್ಯರು ಸಾಕ್ಷಾತ್ ಶಿವನ ಅವತಾರವೆಂದೂ, ತದನಂತರದ ಜಗದ್ಗುರುಗಳೆಲ್ಲರೂ ಶಂಕರಾಂಶಸಂಭೂತರೆಂದೂ ಪ್ರತೀತಿ. ವಿಜಯನಗರ ಸಾಮ್ರಾಜ್ಯ ಸ್ಥಾಪನೆಯ ಪ್ರೇರಕರೆನ್ನಲಾದ ವಿದ್ಯಾರಣ್ಯರು ಈ ಪರಂಪರೆಯಲ್ಲಿ 12ನೆಯವರು. ಆದ್ದರಿಂದಲೇ ಇವತ್ತಿಗೂ ಶೃಂಗೇರಿಪೀಠದ ಜಗದ್ಗುರುಗಳಿಗೆ ಕರ್ನಾಟಕ ಸಿಂಹಾಸನ ಪ್ರತಿಷ್ಠಾಪನಾಚಾರ್ಯ, ಶ್ರೀಮದ್ರಾಜಾಧಿರಾಜಗುರು ಎಂಬ ಬಿರುದು.

ಶ್ರೀ ಭಾರತೀತೀರ್ಥ ಸ್ವಾಮೀಜಿಯವರ ಅನನ್ಯ ಹಿರಿಮೆಯೆಂದರೆ ಅವರ ಅಪ್ರತಿಮ ಪಾಂಡಿತ್ಯ. ಕೆಲವರ್ಷಗಳ ಹಿಂದೆ ಅಮೆರಿಕದ EnlightenNext ಎಂಬ ಒಂದು ನಿಯತಕಾಲಿಕದಲ್ಲಿ ಸ್ವಾಮೀಜಿಯವರ ಸಂದರ್ಶನ ಪ್ರಕಟವಾಗಿತ್ತು. ಧಾರ್ಮಿಕ ವಿಧಿವಿಧಾನಗಳಲ್ಲಿ ಲಿಂಗಭೇದದ ಬಗ್ಗೆ ಹಿಂದೂಧರ್ಮ ಏನನ್ನುತ್ತೆಯೆಂದು ಕಂಡುಕೊಳ್ಳಲು ವಿಶೇಷ ಪ್ರತಿನಿಧಿಯನ್ನು ಭಾರತಕ್ಕೆ (ಶೃಂಗೇರಿಗೆ) ಕಳಿಸಿ ನಡೆಸಿದ್ದ ಸಂದರ್ಶನವದು. ಅದರ ಪೀಠಿಕೆಯಲ್ಲಿ ಪತ್ರಿಕೆ ಹೀಗೆ ಉಲ್ಲೇಖಿಸಿತ್ತು- “ಭಾರತದಲ್ಲಿ ಅಸಂಖ್ಯಾತ ಸ್ವಾಮಿಗಳು, ಸಾಧು-ಸಂತರು ಇದ್ದಾರೆ. ಒಬ್ಬೊಬ್ಬರೂ ಶ್ರೇಷ್ಠರೇ. ಆದರೆ ಹಿಂದೂಧರ್ಮದ ಬಗ್ಗೆ, ಸನಾತನ ಸಂಸ್ಕೃತಿಯ ಬಗ್ಗೆ, ತಲಸ್ಪರ್ಶಿಯಾಗಿ ಮತ್ತು ಅಧಿಕೃತವಾಗಿ ಮಾತನಾಡಬಲ್ಲವರೆಂದರೆ ಭಾರತೀತೀರ್ಥರೊಬ್ಬರೇ. ಜಗತ್ತಿನ ಕ್ಯಾಥೊಲಿಕ್ ಕ್ರಿಶ್ಚಿಯನ್ ಸಮುದಾಯಕ್ಕೆ ಧರ್ಮಗುರು ಪೋಪ್ ಇದ್ದಂತೆ ಪ್ರಸಕ್ತ ಹಿಂದೂಧರ್ಮಕ್ಕೆ ಜಾಗತಿಕ ನೆಲೆಯಲ್ಲಿ ಗುರು ಅಂತಿದ್ದರೆ ಅವರು ಶೃಂಗೇರಿ ಜಗದ್ಗುರು ಭಾರತೀತೀರ್ಥರೇ.” ಇದು ಉತ್ಪ್ರೇಕ್ಷೆಯಲ್ಲ. ಸನಾತನ ಧರ್ಮಕ್ಕೆ ಸಂಬಂಧಿಸಿದ ಎಲ್ಲ ಶ್ರುತಿ-ಸ್ಮೃತಿಗಳನ್ನು ಅರೆದುಕುಡಿದವರು ಸ್ವಾಮೀಜಿ. ಜನಸಾಮಾನ್ಯರಿಗೆ ಎಂತಹ ಧಾರ್ಮಿಕ ಸಂದೇಹ ಸಂದಿಗ್ಧತೆಗಳಿದ್ದರೂ ಅವರ ಬಳಿಗೆ ಹೋದರೆ ಬಗೆಹರಿಯುತ್ತವೆ. ಅವರು ರಾಜಕಾರಣದಲ್ಲಿ ಮುಳುಗಿದ ಸ್ವಾಮೀಜಿಯಲ್ಲ. ವೇದಪಾಠಶಾಲೆಗಳಲ್ಲಿ ಸ್ವತಃ ಬೋಧನೆ ಮಾಡುತ್ತಾರೆ. ಪ್ರತಿಯೊಬ್ಬ ವಿದ್ಯಾರ್ಥಿಯ ಜ್ಞಾನಾರ್ಜನೆಯ ಮಟ್ಟವನ್ನು ಒರೆಗಲ್ಲಿಗೆ ಹಚ್ಚಿ ಪರೀಕ್ಷಿಸುತ್ತಾರೆ. ಪ್ರತಿವರ್ಷ ಗಣೇಶಚೌತಿಯಿಂದ ಹತ್ತು ದಿನಗಳಕಾಲ ಶೃಂಗೇರಿಯಲ್ಲಿ ಮಹಾಗಣಪತಿ ವಾಕ್ಯಾರ್ಥಸಭೆ ಎಂಬ ವಿದ್ವತ್‌ಸದಸ್ಸು ನಡೆಯುತ್ತದೆ. ನೇಪಾಳ, ಕಾಶ್ಮೀರ, ಕಾಶಿ ಮುಂತಾದೆಡೆಗಳಿಂದ ವಿದ್ವಾಂಸರು ಬರುತ್ತಾರೆ. ನ್ಯಾಯ, ವೇದಾಂತ, ಮೀಮಾಂಸಾ, ವ್ಯಾಕರಣ ಶಾಸ್ತ್ರಗಳ ಚರ್ಚೆಯಾಗುತ್ತದೆ. ಆ ಸಮಾವೇಶದಲ್ಲಿ ಪಾಲ್ಗೊಳ್ಳುವುದೇ ಒಂದು ಅಗ್ಗಳಿಕೆ. ಅಧ್ಯಕ್ಷತೆ ವಹಿಸುವ ಸ್ವಾಮೀಜಿಗೆ ಎಲ್ಲವೂ ಕರತಲಾಮಲಕ. ಶಾಸ್ತ್ರಗ್ರಂಥಗಳ ವಾಕ್ಯಗಳನ್ನು ಅನಾಯಾಸವಾಗಿ ಉದಾಹರಿಸುತ್ತ ಅವರು ವಾಗ್ವಾದ ಇತ್ಯರ್ಥ ಮಾಡುವ ಪರಿ ಅದ್ಭುತ. ಸಂಸ್ಕೃತವೆಂದರೆ ಮೃತಭಾಷೆ, ಕೆಲವರಿಗಷ್ಟೇ ಸೀಮಿತ ಎಂದೆಲ್ಲ ಸಂಸ್ಕೃತದ ಬಗೆಗಿರುವ ತಪ್ಪುಕಲ್ಪನೆಗಳನ್ನು ಅಳಿಸುವ ಪ್ರಯತ್ನ. ಸಂಸ್ಕೃತ ಕಷ್ಟವೆನ್ನುತ್ತೀರೇಕೆ? ಎಲ್ಲ ವಿಷಯಗಳೂ ಹಾಗೆಯೇ, ಕಲಿಯುವವನಿಗೆ ಎಲ್ಲವೂ ಸುಲಭ, ಕಲಿಯದವನಿಗೆ ಎಲ್ಲವೂ ಕಷ್ಟ ಎನ್ನುತ್ತಾರವರು. ಕನ್ನಡ, ತೆಲುಗು, ತಮಿಳು, ಹಿಂದಿ ಭಾಷೆಗಳಲ್ಲೂ ಅವರದು ಪ್ರಗಲ್ಭ ಪಾಂಡಿತ್ಯ.

ಮನುಷ್ಯನ ಜೀವನವೃತ್ತಿಗೆ, ಸನ್ಮಾರ್ಗದಲ್ಲಿ ಮುನ್ನಡೆಗೆ, ಕೊನೆಗೆ ಮೋಕ್ಷಪ್ರಾಪ್ತಿಗೂ ಮೂಲಭೂತವಾದದ್ದು ವಿದ್ಯೆ ಅಥವಾ ಜ್ಞಾನ. ಧರ್ಮದ ದಾರಿಯನ್ನು ನೋಡಲು ಅದು ಕಣ್ಣುಗಳಿದ್ದಂತೆ. ವೇದ-ಶಾಸ್ತ್ರಗಳ ರಕ್ಷಣೆಯಾಗಬೇಕಾದರೆ ವೈದಿಕರ ಪೋಷಣೆಯಾಗಬೇಕು. ಈ ದಿಸೆಯಲ್ಲೊಂದು ಕಿರುಪ್ರಯತ್ನವೆಂಬಂತೆ ಪ್ರತಿ ತಿಂಗಳೂ ಸಾವಿರ ಮಂದಿ ವೃದ್ಧ ವೇದಪಂಡಿತರಿಗೆ ಸಂಭಾವನೆ ಕೊಡಿಸುವ ವ್ಯವಸ್ಥೆ ಮಾಡಿದ್ದಾರೆ ಶ್ರೀಗಳು. ಕೇವಲ ಪಾರಂಪರಿಕ ಶಿಕ್ಷಣಕ್ರಮಕ್ಕಷ್ಟೇ ಅಲ್ಲ, ಆಧುನಿಕ ವಿದ್ಯಾಭ್ಯಾಸಕ್ಕೂ ಶೃಂಗೇರಿ ಮಠದ ಪ್ರೋತ್ಸಾಹವಿದೆ. ಕೊಪ್ಪ, ನರಸಿಂಹರಾಜಪುರ ಮತ್ತು ಶೃಂಗೇರಿ ತಾಲೂಕುಗಳ ಸುಮಾರು ಹತ್ತುಸಾವಿರ ಶಾಲಾವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಶೃಂಗೇರಿ ಮಠದ ಅಡುಗೆಮನೆಯಲ್ಲಿ ತಯಾರಾಗಿ ಸರಬರಾಜಾಗುತ್ತದೆ. ಇನ್ನಿತರ ಸಮಾಜಮುಖಿ ಚಟುವಟಿಕೆಗಳೂ ಮಠದ ವತಿಯಿಂದ ಯಥಾಶಕ್ತಿ ನಡೆಯುತ್ತಿವೆ. ಶೃಂಗೇರಿಯಲ್ಲಿರುವ ಧನ್ವಂತರಿ ಆಸ್ಪತ್ರೆ ಒಂದು ನಿದರ್ಶನವಷ್ಟೇ.  ಧರ್ಮಪ್ರಚಾರಕಾರ್ಯವಂತೂ ಅವಿರತವಾಗಿ ನಡೆದೇ‌ಇದೆ. ಶಂಕರಾಚಾರ್ಯರು ಹಿಂದೂಧರ್ಮದ ಪುನರುತ್ಥಾನಕ್ಕಾಗಿ ಕಾಲ್ನಡಿಗೆಯಲ್ಲೇ ದೇಶಸುತ್ತಿದವರು. ಅದೇ ಪರಂಪರೆಯನ್ನು ಮುಂದುವರಿಸಿರುವ ಜಗದ್ಗುರುಗಳು ಕಾಲ್ನಡಿಗೆಯಲ್ಲಲ್ಲದಿದ್ದರೂ ದೇಶ-ವಿದೇಶಗಳ ಪರ್ಯಟನೆಮಾಡಿ ಶಿಬಿರಗಳನ್ನು ನಡೆಸಿ ಧರ್ಮಜಾಗ್ರತಿ ಮೂಡಿಸುತ್ತಿದ್ದಾರೆ. ಶೃಂಗೇರಿ ಮಠದ ಶಾಖೆಗಳು ಅಮೆರಿಕದ ಸ್ಟ್ರೌಡ್ಸ್‌ಬರ್ಗ್‌ನಲ್ಲಿ ಮತ್ತು ಕೆನಡಾ ದೇಶದ ಟೊರಾಂಟೋ ನಗರದಲ್ಲಿಯೂ ಇದ್ದು ಪಾಶ್ಚಾತ್ಯ ಜಗತ್ತಿನ ಅಧ್ಯಾತ್ಮಪಿಪಾಸುಗಳ ಕ್ಷುಧೆ ತಣಿಸುವ ಕೆಲಸವನ್ನು ಸರಳಸುಂದರ ರೀತಿಯಲ್ಲಿ ಮಾಡುತ್ತಿವೆ.

ಚಾಂದ್ರಮಾನ ತಿಥಿಪ್ರಕಾರ ನಿನ್ನೆ (ಚೈತ್ರ ಶುಕ್ಲ ಪಂಚಮಿ), ಸೌರಮಾನ ಕ್ಯಾಲೆಂಡರ್ ಪ್ರಕಾರ ನಾಳೆ (ಏಪ್ರಿಲ್ 11) ಶ್ರೀ ಭಾರತೀತೀರ್ಥ ಸ್ವಾಮೀಜಿಯವರಿಗೆ ಷಷ್ಟ್ಯಬ್ದಪೂರ್ತಿ. ತನ್ನಿಮಿತ್ತ ಕಳೆದೊಂದು ವಾರದಿಂದ ಶೃಂಗೇರಿಯಲ್ಲಿ ಅಭೂತಪೂರ್ವ ಸಂಭ್ರಮ. ಲಕ್ಷಮೋದಕ ಮಹಾಗಣಪತಿ ಹೋಮ, ಅತಿರುದ್ರ ಮಹಾಯಾಗ, ಸಂಹಿತಾಹವನ, ಅಯುತ ಚಂಡಿಕಾಯಾಗ ಮುಂತಾದ ವಿಧಿವಿಧಾನಗಳು. ಅಯುತ ಎಂದರೆ ಹತ್ತುಸಾವಿರ. ಅಷ್ಟು ಸಂಖ್ಯೆಯಲ್ಲಿ ಸಪ್ತಶತೀಪಾರಾಯಣ. ನೂರು ಕುಂಡಗಳಲ್ಲಿ ಸಾವಿರ ಸರ್ತಿ ಹೋಮ. ಶೃಂಗೇರಿಯಲ್ಲಿ ಇದು ಪ್ರಪ್ರಥಮ. ಇವೆಲ್ಲವೂ ಲೋಕಕಲ್ಯಾಣಾರ್ಥ, ಎಲ್ಲ ವರ್ಗದ ಜನರ ಮನಸ್ಸಿನ ಕಲ್ಮಶಗಳೂ ದೂರವಾಗಿ, ಮಳೆ-ಬೆಳೆ ಸಕಾಲದಲ್ಲಿ ಆಗಿ ಸುಖಶಾಂತಿ ಸಮೃದ್ಧಿ ನೆಲೆಸಬೇಕೆಂಬ ಸಂಕಲ್ಪದೊಂದಿಗೆ ನಡೆಯುತ್ತಿರುವ ಧಾರ್ಮಿಕ ಕೆಲಸಗಳು. ಜತೆಯಲ್ಲೇ ಸಾಂಸ್ಕೃತಿಕ ಕಾರ್ಯಕ್ರಮಗಳ ರಸದೌತಣ. ರಾಜಮಹಾರಾಜರ ಕಾಲದಲ್ಲಿ ಯಜ್ಞಯಾಗಾದಿಗಳು, ಗೀತನೃತ್ಯ ಸಾಹಿತ್ಯಗೋಷ್ಠಿಗಳು ವೈಭವೋಪೇತವಾಗಿ ನಡೆಯುತ್ತಿದ್ದವಂತೆ. ಇದರಿಂದ ಋತ್ವಿಜರಿಗೂ, ಕಲಾವಿದರಿಗೂ ಉತ್ತೇಜನ ಕೊಟ್ಟಂತೆಯೂ ಆಯ್ತು, ಪರಂಪರೆಯನ್ನು ಊರ್ಜಿತಸ್ಥಿತಿಯಲ್ಲಿಟ್ಟಂತೆಯೂ ಆಯ್ತು. ಶೃಂಗೇರಿಯಲ್ಲಿ ಇದೀಗ ಜರುಗುತ್ತಿರುವುದೂ ಅದೇ. ನಿಜ, ಪೂರ್ವಾಶ್ರಮವನ್ನೂ ಲೆಕ್ಕಕ್ಕೆ ತಗೊಂಡು ಸ್ವಾಮೀಜಿಯವರಿಗೆ ಈಗ ಷಷ್ಟ್ಯಬ್ದಪೂರ್ತಿ. ಆದರೆ ಇಂತಹ ಮೇರುಸದೃಶ ವ್ಯಕ್ತಿತ್ವವೊಂದು ನಮ್ಮ ನಡುವೆ ನಮ್ಮ ನಾಡಿನಲ್ಲಿಯೇ ಇದೆಯೆನ್ನುವುದು, ಅವರ ಸಮಕಾಲೀನರಾಗಿ ನಾವಿದ್ದೇವೆನ್ನುವುದು ಸಮಸ್ತ ಕನ್ನಡಿಗರಿಗೂ ಹೆಮ್ಮೆ ಮತ್ತು ಸ್ಫೂರ್ತಿ!

* * *

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

"Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!

Podbean App

Play this podcast on Podbean App