ಪದ-ಶ್ರಾವ್ಯ

ಈಗ ಆಡಿಯೋ ಟಚ್!

Archive for January 2012


Six Thinking Hats

Saturday, January 28th, 2012
DefaultTag | Comments

ದಿನಾಂಕ  29 ಜನವರಿ 2012ರ ಸಂಚಿಕೆ...

ಒಂದೇ ಬಣ್ಣದ ಟೋಪಿಯಾ?

* ಶ್ರೀವತ್ಸ ಜೋಶಿ

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

* * *

ಅಲ್ಲ, ಒಂದಲ್ಲ ಎರಡಲ್ಲ ಆರು ಬೇರೆಬೇರೆ ಬಣ್ಣಗಳ ಆರು ಬೇರೆಬೇರೆ ಟೋಪಿಗಳು. ನೀಲಿ ಬಣ್ಣದ್ದೊಂದು, ಕೆಂಪಗಿನದೊಂದು; ಒಂದು ಹಳದಿ ಮತ್ತೊಂದು ಹಸಿರು; ಆಮೇಲೆ ಕಪ್ಪು ಮತ್ತು ಬಿಳಿ. ಹೀಗೆ ಆರು ಟೋಪಿ ಆರು ಬಣ್ಣ. ಇದೇನಿದು ಬಣ್ಣಬಣ್ಣದ ಮಾತನಾಡಿ ಯಾರಿಗೋ ಟೋಪಿ ಹಾಕಲಿಕ್ಕೆ ಹೊರಟಿರುವಂತಿದೆ ಎನ್ನಬೇಡಿ ಮತ್ತೆ! ಆರು ಟೋಪಿಗಳನ್ನು ಇಟ್ಕೊಳ್ಳೋಕೆ ನಾವೇನು ಷಣ್ಮುಖನ ಹಾಗೆ ಆರು ತಲೆಯುಳ್ಳವರೇ ಅಂತ ತರ್ಕಕ್ಕೂ ಇಳಿಯಬೇಡಿ. ಇವತ್ತಿನ ಅಂಕಣದಲ್ಲಿ ‘ಆರು ಟೋಪಿಗಳ ಆಲೋಚನಾ ವಿಧಾನ’ ಎಂಬ ವ್ಯಕ್ತಿತ್ವ ವಿಕಸನ ವಿಚಾರವೊಂದನ್ನು ನಿಮಗಿರುವ ಒಂದೇ ತಲೆಯೊಳಕ್ಕೆ (ಅದಂತೂ ಖಂಡಿತವಾಗಿಯೂ ಭದ್ರವಾಗಿ ಇದೆ, ಬೇಕಿದ್ದರೆ ಒಮ್ಮೆ ಮುಟ್ಟಿನೋಡಿ ಖಾತರಿಪಡಿಸಿಕೊಳ್ಳಿ) ತೂರಿಸಬೇಕೆಂಬ ಯೋಜನೆ ಇಟ್ಟುಕೊಂಡಿದ್ದೇನೆ. ವಿಷಯ ಚೆನ್ನಾಗಿದೆ, ಸ್ವಾರಸ್ಯಕರವಾಗಿದೆ, ಅನುಸರಣೀಯವಾಗಿಯೂ ಇದೆ. ಟೋಪಿ ಹಾಕಿಸಿಕೊಂಡ ಹಾಗಂತೂ ಆಗಲಿಕ್ಕಿಲ್ಲ. ಓದಿ ಮುಗಿಸಿದಾಗ ನೀವೇ ನೋಡುವಿರಂತೆ.

ಇತರ ಜೀವಿಗಳಿಗಿಂತ ಮನುಷ್ಯ ಹೇಗೆ ಭಿನ್ನ ಎಂದು ಪಟ್ಟಿ ಮಾಡುತ್ತ ಹೋದರೆ ಬಹುಶಃ ‘ಆಲೋಚನಾ ಸಾಮರ್ಥ್ಯ’ ಪ್ರಮುಖವಾದ ಮೂರ್ನಾಲ್ಕು ಅಂಶಗಳೊಳಗೇ ನಮೂದಾಗುತ್ತದೆ. ನಿಜ, ಪ್ರಾಣಿಗಳಿಗೂ ಸ್ವಲ್ಪಮಟ್ಟಿಗೆ ಆಲೋಚನಾ ಸಾಮರ್ಥ್ಯ ಇದೆ, ಅಷ್ಟು ಪ್ರಮಾಣದಲ್ಲಿ ಅವುಗಳಿಗದು ಅವಶ್ಯವೂ ಹೌದು- ಆಹಾರ ಎಲ್ಲಿ ಸಿಕ್ಕೀತು, ಶತ್ರುವಿನಿಂದ ರಕ್ಷಿಸಿಕೊಳ್ಳುವುದೆಂತು ಮೊದಲಾದ ಮೂಲಭೂತ ವಿಚಾರಗಳಲ್ಲಿ ಮಾತ್ರ. ಆದರೆ ಮನುಷ್ಯ ಹಾಗಲ್ಲ. ಅವನ ಆಲೋಚನೆಗಳು ಅಗಾಧ, ಅನಂತ ಮತ್ತು ಅಸದೃಶ. ಒಮ್ಮೊಮ್ಮೆ ಎಣಿಸಿಕೊಂಡರೆ ನಮಗೇ ರೋಮಾಂಚನವಾಗುತ್ತದೆ. ಎಂತಹ ಸೂಪರ್‌ಕಂಪ್ಯೂಟರ್‌ಗಿಂತಲೂ ಅದ್ಭುತವಾದ ಮೆದುಳಿದೆ ನಮ್ಮ ತಲೆಬುರುಡೆಯೊಳಗೆ! ಮನುಷ್ಯನಿಗೆ ವರದಾನವಾಗಿ ಬಂದಿರುವ ಈ ಆಲೋಚನಾ ಸಾಮರ್ಥ್ಯದ ಒಳಗುಟ್ಟೇನು, ಅದು ಹೇಗೆ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ, ಅಥವಾ ಒಬ್ಬನೇ ವ್ಯಕ್ತಿಯಲ್ಲಿಯೂ ಸಂದರ್ಭ, ಸನ್ನಿವೇಶ, ವಯಸ್ಸು, ಪೂರ್ವಾನುಭವಗಳಿಗೆ ಹೊಂದಿಕೊಂಡು ಹೇಗೆ ಬದಲಾಗುತ್ತದೆ? ಈ ಎಲ್ಲ ವಿಚಾರಗಳ ಬಗ್ಗೆ ಮನಃಶಾಸ್ತ್ರಜ್ಞರು, ವೈದ್ಯರು, ವಿಜ್ಞಾನಿಗಳು ಸಂಶೋಧನೆಗಳನ್ನು ನಡೆಸುತ್ತಲೇ ಇದ್ದಾರೆ.

ಸಂಶೋಧನೆಗಳು ಒಂದೆಡೆಯಿರಲಿ. ಇದ್ದ ಆಲೋಚನಾ ಸಾಮರ್ಥ್ಯವನ್ನೇ ಹೆಚ್ಚಿಸಿಕೊಳ್ಳುವುದು ಹೇಗೆ? ಎರ್ರಾಬಿರ್ರಿಯಾಗಿರುವುದನ್ನು, ಗೊಂದಲಗಳ ಗೂಡಾಗಿರುವುದನ್ನು, ಒಂದು ನಿರ್ದಿಷ್ಟ ಮಿತಿಯಲ್ಲಿ ಮಾತ್ರ ಕಾರ್ಯವೆಸಗುವಂಥದ್ದನ್ನು ಊರ್ಜಿತಗೊಳಿಸುವುದು ಹೇಗೆ? ಈ ನಿಟ್ಟಿನಲ್ಲೂ ಅನೇಕ ತಜ್ಞರು ಯೋಚಿಸಿದ್ದಾರೆ. ಸಿದ್ಧಾಂತಗಳನ್ನು ಮಂಡಿಸಿದ್ದಾರೆ. ಅವರಲ್ಲೊಬ್ಬ ಖ್ಯಾತಿವಂತ ಡಾ. ಎಡ್ವರ್ಡ್ ಡೆ ಬೊನೊ ಎಂಬ ಮಹಾನುಭಾವ. ಈತ ಯುರೋಪ್‌ನ ಒಂದು ಪುಟ್ಟ ದೇಶ ‘ಮಾಲ್ಟಾ’ ಎಂಬಲ್ಲಿಯವ. ವೈದ್ಯ, ಲೇಖಕ, ಸಂಶೋಧಕ ಮತ್ತು ಸಲಹೆಗಾರ. Dr. Edward de Bono’s Six Hat Thinking ಎಂಬ ಸಿದ್ಧಾಂತದಿಂದ, ಅದರ ಕುರಿತ ಪುಸ್ತಕಗಳು ಮತ್ತು ಕಾರ್ಯಾಗಾರಗಳಿಂದ ಜಗತ್ಪ್ರಸಿದ್ಧನಾದವ.

‘ಆರು ಟೋಪಿಗಳ ಆಲೋಚನಾ ವಿಧಾನ’ದ ಮೂಲ ತಿರುಳು ಒಂದು ಸಮಸ್ಯೆ ಅಥವಾ ಸವಾಲನ್ನು ಕೇವಲ ಒಂದೇ ದೃಷ್ಟಿಕೋನದಿಂದ ನೋಡಿ ಬಗೆಹರಿಸುವುದಕ್ಕೆ ಪ್ರಯತ್ನಿಸುವ ಬದಲಿಗೆ ವಿಭಿನ್ನ ದೃಷ್ಟಿಕೋನಗಳಿಂದ ಅರಿತುಕೊಳ್ಳುವುದು. ಹಾಗೆ ಮಾಡುವುದರಿಂದ ಸಮಸ್ಯೆಯನ್ನು ಸಮಗ್ರವಾಗಿ ಅರ್ಥ ಮಾಡಿಕೊಳ್ಳುವುದು. ‘360 degrees view’ ಅಂತಾರಲ್ಲ ಹಾಗೆ. ಸಮಸ್ಯೆ ಅಥವಾ ಸವಾಲನ್ನು ಸಂಪೂರ್ಣವಾಗಿ ಅರಿತುಕೊಂಡರೆ ಅದರ ಪರಿಹಾರಕಾರ್ಯ ಅರ್ಧದಷ್ಟು ಆದಂತೆಯೇ. ಅಷ್ಟೇ‌ಅಲ್ಲ ಪೂರ್ಣ ಪರಿಹಾರಕ್ಕೆ ಶಕ್ತಿ-ಸಂಪನ್ಮೂಲಗಳೂ ಕಡಿಮೆ ಸಾಕಾಗುತ್ತವೆ. ಒಪ್ಪತಕ್ಕ ಮಾತು, ಆದರೆ ವಿಭಿನ್ನ ದೃಷ್ಟಿಕೋನಗಳು ಎಂದರೇನು? ಅವು ಯಾವುವು? ಅದನ್ನೇ ಎಡ್ವರ್ಡ್ ಡೆಬೊನೊ ಆರು ಬಣ್ಣಗಳ ಆರು ಟೋಪಿಗಳಿಂದ ಸಾಂಕೇತಿಕವಾಗಿ ವಿಂಗಡಿಸಿದ್ದು. ಹೇಗೂ ಚಿಂತನೆ ಮತ್ತು ತಲೆಯ ವಿಚಾರ, ಟೋಪಿಯೇ ಅತ್ಯಂತ ಸಮಂಜಸ ಸಂಕೇತ ಎಂದು ಆತ ಅಂದುಕೊಂಡಿರಬೇಕು. ಟೋಪಿಯಾದರೆ ಒಂದನ್ನು ತೆಗೆದು ಇನ್ನೊಂದು ಹಾಕಿಕೊಳ್ಳುವುದು ಸುಲಭ, ಮತ್ತು ಹಾಗೆ ಟೋಪಿ ಬದಲಾಯಿಸುವುದೆಂದರೆ ದೃಷ್ಟಿಕೋನ ಬದಲಾಯಿಸಿದಂತೆ ಎಂದು ಭಾವಿಸುವುದೂ ಸುಲಭ.

six-thinking-hats.gif

ಸಮಸ್ಯೆ ಅಥವಾ ಸವಾಲಿನ ಕುರಿತು ಎಷ್ಟು ಸಾಧ್ಯವಿದೆಯೋ ಅಷ್ಟು ಮಾಹಿತಿಯನ್ನು, ಅಂಕಿ-ಅಂಶಗಳನ್ನು ಸಂಗ್ರಹಿಸುವುದು ಬಿಳಿ ಟೋಪಿಯ ಕೆಲಸ. ಸಮಸ್ಯೆಯ ಪರಿಹಾರದ ಬಗ್ಗೆ ಅದು ತಲೆ ಕೆಡಿಸಿಕೊಳ್ಳುವುದಿಲ್ಲ. ಯಾವ ಮಾಹಿತಿ ಲಭ್ಯವಿದೆ, ಯಾವುದನ್ನು ಕಲೆಹಾಕಿಕೊಳ್ಳಬೇಕು ಅಂತಷ್ಟೇ ಅದರ ಆಲೋಚನೆ. ಸಮಸ್ಯೆ ಅಥವಾ ಸವಾಲಿನತ್ತ ಭಾವನಾತ್ಮಕ ದೃಷ್ಟಿಕೋನ ಕೆಂಪು ಟೋಪಿಯದು. ಅದಕ್ಕೆ ಒಣ ಅಂಕಿ‌ಅಂಶಗಳಲ್ಲಿ ನಂಬಿಕೆಯಿಲ್ಲ. ‘ನನ್ನ ಗಟ್ ಫೀಲಿಂಗ್ ಪ್ರಕಾರ....’ ಎಂದು ಹೇಳುತ್ತೇವಲ್ಲ, ಮನಸ್ಸು-ಹೃದಯಗಳ ವ್ಯವಹಾರ ಅದರ ಕಡೆಗೆ ಕೆಂಪು ಟೋಪಿಯದು ಹೆಚ್ಚಿನ ಕ್ಷ್ಯ. ಹೃದಯ- ಕೆಂಪುಬಣ್ಣ ನೆನಪಿಟ್ಟುಕೊಳ್ಳಲಿಕ್ಕೆ ಸುಲಭ. ಕಪ್ಪು ಟೋಪಿಯ ಸಂಗತಿಯೇ ಬೇರೆ. ಅದು ಸೈತಾನನ ವಕೀಲ (devil's advocate) ಇದ್ದಂತೆ. ಪ್ರಶ್ನಿಸುತ್ತ ಹೋಗುವ ಬುದ್ಧಿ. ಯಾರಾದರೊಬ್ಬರು ಪರಿಹಾರವನ್ನು ಸೂಚಿಸಿದರೂ ಸುಲಭದಲ್ಲಿ ಒಪ್ಪಿಕೊಳ್ಳದೆ, ಆ ಪರಿಹಾರದ ಕೆಡುಕುಗಳೇನು, ಅದನ್ನು ಅನುಸರಿಸಿದ್ದೇ ಆದರೆ ದುಷ್ಪರಿಣಾಮಗಳೇನು, ಅದ್ಯಾಕೆ ಹಾಗೆ, ಇದ್ಯಾಕೆ ಹೀಗೆ ಎನ್ನುತ್ತ ಪ್ರಶ್ನೆ ಮೇಲೆ ಪ್ರಶ್ನೆ. ನಿರಾಶಾವಾದಿ ಎಂದರೂ ತಪ್ಪಲ್ಲ.

ಕಪ್ಪು ಟೋಪಿ ಎಷ್ಟು ನಿರಾಶಾವಾದಿಯೋ ಅದಕ್ಕೆ ತದ್ವಿರುದ್ಧವಾಗಿ ಅಷ್ಟೇ ಪ್ರಮಾಣದಲ್ಲಿ ಆಶಾವಾದಿ ಹಳದಿ ಟೋಪಿ. ಸೂರ್ಯಕಾಂತಿ ಹೂವು ಹೇಗೆ ಸೂರ್ಯಾಭಿಮುಖಿಯಾಗಿಯೇ ಇರುತ್ತದೋ ಹಳದಿ ಟೋಪಿಯ ಚಿಂತನೆಯೂ ಸದಾ ಒಳ್ಳೆಯ ಅಂಶಗಳ ಮೇಲೆಯೇ. ಸಮಸ್ಯೆಯ ಪರಿಹಾರದಲ್ಲಿ ಪ್ರಯೋಜನಗಳೆಷ್ಟು, ಸುಧಾರಣೆಗೆ ಇನ್ನೂ ಹೆಚ್ಚಿನ ಅವಕಾಶಗಳೆಷ್ಟು, ಮುಂತಾಗಿ ಎಲ್ಲವೂ ಒಳ್ಳೆಯದೇ ದೃಷ್ಟಿಗೆ ಬೀಳುತ್ತದೆ ಹಳದಿ ಟೋಪಿಗೆ. ಇನ್ನು, ಹಸಿರು ಟೋಪಿಯದು ಸೃಜನಶೀಲ ಚಿಂತನೆ. ಹೊಸ ವಿಧಾನಗಳು, ಹೊಸ ಸಾಧ್ಯತೆಗಳು, ಹೊಸತನದ ಹರಿಕಾರ. ನಿಂತ ನೀರಿನಂತೆ ಸಮಸ್ಯೆಯ ಕೊಚ್ಚೆಯಲ್ಲೇ ಬಿದ್ದಿರುವುದು ಇದಕ್ಕೆ ಇಷ್ಟವಾಗದು. ಈ ಐದೂ ಟೋಪಿಗಳಿಗೆ ನಿಯಂತ್ರಕ ಅಥವಾ ನಿರ್ದೇಶಕನ ಪಾತ್ರ ವಹಿಸುವ ಜವಾಬ್ದಾರಿ ನೀಲಿ ಟೋಪಿಯದು. ನೀಲಾಕಾಶವನ್ನು ಅಥವಾ ನೀಲಿಬಣ್ಣದಲ್ಲಿ ಕಾಣುವ ಅಗಾಧ ಜಲರಾಶಿಯನ್ನು ಹೋಲಿಸಿ ಈ ಟೋಪಿಯ ಸಾರ್ವಭೌಮತ್ವವನ್ನು ನೆನಪಿಟ್ಟುಕೊಳ್ಳಬಹುದು. ಟೋಪಿಗಳ ಸಭೆ ನಡೆದದ್ದೇ ಆದರೆ ಅಧ್ಯಕ್ಷತೆ ನಿರ್ವಿವಾದವಾಗಿ ನೀಲಿ ಟೋಪಿಯದು.

ಐಬಿ‌ಎಂ, ಬ್ರಿಟಿಷ್ ಏರ್‌ವೇಸ್, ಮೊಟರೊಲಾ, ಪೆಪ್ಸಿ, ಮೈಕ್ರೋಸಾಫ್ಟ್ ಮುಂತಾದ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಉದ್ಯೋಗಿಗಳ ಕಾರ್ಯಕ್ಷಮತೆ ಹೆಚ್ಚಿಸಲಿಕ್ಕೆ, ಹಾಗೆಯೇ ವ್ಯಕ್ತಿತ್ವ ವಿಕಸನ ಶಿಬಿರಗಳಲ್ಲಿ ಮನರಂಜನೆಯ ಆಟವಾಗಿಯೂ ‘ಆರು ಟೋಪಿಗಳ ಆಲೋಚನಾ ವಿಧಾನ’ವನ್ನು ಬಳಸುತ್ತಾರೆ. ಮಾನವ ಸಂಪನ್ಮೂಲದ ಪರಿಣಾಮಕಾರಿ ಬಳಕೆಗೆ ಇದೂ ಒಂದು ರೀತಿಯೆಂದು ಮನದಟ್ಟು ಮಾಡುತ್ತಾರೆ. ಅಮೆರಿಕದ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಂದ ‘ಆರು ಟೋಪಿ ಆಲೋಚನಾ ವಿಧಾನ’ದಲ್ಲಿ ಪ್ರಾಜೆಕ್ಟುಗಳನ್ನೂ ಮಾಡಿಸುತ್ತಾರೆ. ಆದರೆ ಅದಷ್ಟಕ್ಕೇ ಅಲ್ಲ ಎಡ್ವರ್ಡ್ ಡೆಬೊನೊ ಈ ವಿಧಾನವನ್ನು ಪ್ರತಿಪಾದಿಸಿದ್ದು. ನಮ್ಮನಮ್ಮ ವೈಯಕ್ತಿಕ ಸಮಸ್ಯೆ-ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವಾಗಲೂ ನಾವು ಆರು ಟೋಪಿ ವಿಧಾನವನ್ನು ಅನುಸರಿಸಬಹುದಾಗಿದೆ. ಟೋಪಿ ಹಾಕಿಕೊಳ್ಳಬೇಕಂತಲೂ ಇಲ್ಲ. ಆಯಾಯ ಬಣ್ಣದ ಟೋಪಿಯಂತೆ ಚಿಂತನೆ ಮಾಡಿದರಾಯಿತು, ಸಮಸ್ಯೆ ಸರಳವಾಗುತ್ತ ಹೋಗುತ್ತದೆ. ಅಷ್ಟೇಕೆ, ಸಮಸ್ಯೆ ಅಥವಾ ಸವಾಲು ಅಂತನಿಸಿಕೊಳ್ಳದ ಮಾಮೂಲಿ ಚಟುವಟಿಕೆಗಳಾದ ಪ್ರವಾಸ, ಪಿಕಿನಿಕ್‌ಗಳ ಆಯೋಜನೆಯಲ್ಲಿ ಸಹ ಆರು ಟೋಪಿ ಆಲೋಚನಾ ವಿಧಾನ ಉಪಯೋಗಕ್ಕೆ ಬರುತ್ತದೆ. ಪಿಕ್‌ನಿಕ್ ನಡೆಸುವ ಪಾರ್ಕ್ ಎಲ್ಲಿದೆ, ಎಷ್ಟು ದೊಡ್ಡದಿದೆ... ಬಿಳಿ ಟೋಪಿ. ಪಿಕ್‌ನಿಕ್‌ಗೆ ಯಾರನ್ನೆಲ್ಲ ಆಮಂತ್ರಿಸಿದರೆ ಚೆನ್ನಾಗಿರುತ್ತೆ... ಕೆಂಪು ಟೋಪಿ; ಪಿಕ್‌ನಿಕ್ ದಿನ ಮಳೆ ಬಂದರೇನು ಗತಿ?... ಕಪ್ಪು ಟೋಪಿ; ಪಿಕ್‌ನಿಕ್‌ನಲ್ಲಿ ಬೆಳಗಿಂದ ಸಂಜೆವರೆಗೂ ಸಂಭ್ರಮವೋ ಸಂಭ್ರಮ... ಹಳದಿ ಟೋಪಿ. ಎಲ್ಲರಿಗೂ ಖುಷಿಯಾಗುವಂತೆ ಹೊಸತೇನು ಮಾಡಬಹುದು?... ಹಸಿರು ಟೋಪಿ. ಪಿಕ್‌ನಿಕ್‌ನ ಓವರ್‌ಆಲ್ ಜವಾಬ್ದಾರಿ... ನೀಲಿ ಟೋಪಿ.

ಕಳೆದ ವಾರದ ರಸಪ್ರಶ್ನೆಯ ಉತ್ತರ: ಅಯೊಡೆಕ್ಸ್. ಅಯ್ಯೋ ಗೊತ್ತಾಗ್ಲಿಲ್ವಲ್ಲ ಎಂದು ಈಗ ಕೈಕೈ ಹಿಸುಕಿಕೊಳ್ಳಬೇಡಿ. ಉಳುಕಿದರೆ ಅದೇ ಬೇಕಾದೀತು. ಅಂದಹಾಗೆ ಈವಾರದ ಲೇಖನಕ್ಕೆ ‘ಒಂದೇ ಬಣ್ಣದ ಟೋಪಿಯಾ?’ ಎಂಬ ಶೀರ್ಷಿಕೆ ಕೊಟ್ಟದ್ದು ಏಕಿರಬಹುದು? ಹಸಿರು ಟೋಪಿ ಧರಿಸಿ ಕ್ರಿಯೇಟಿವ್ ಆಗಿ ಆಲೋಚಿಸಿ!

* * *

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

"Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!

Onomatopoeia

Saturday, January 21st, 2012
DefaultTag | Comments

ದಿನಾಂಕ  22 ಜನವರಿ 2012ರ ಸಂಚಿಕೆ...

ಒನಮೆಟೊಪಿಯಾ : ಶಬ್ದಸಾಹಿತ್ಯ

* ಶ್ರೀವತ್ಸ ಜೋಶಿ

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

* * *

ತುಪ್ಪದ ಬಿಂದಿಗೆ ತಿಪ್ಪೆಯ ಮೇಲೆ ಧೊಪ್ಪನೆ ಬಿತ್ತಲ್ಲಾ... ಎಂದರು ಪುರಂದರದಾಸರು. ಧೊಪ್ಪನೆ ಎಂದರೇನು? ಬಿಂದಿಗೆ ಬಿದ್ದದ್ದು. ದಾಸರು ಅದನ್ನು (ಬಿಂದಿಗೆ ಬಿದ್ದ ಶಬ್ದವನ್ನು) ಅಕ್ಷರಗಳಲ್ಲಿ ಹಿಡಿದಿಟ್ಟದ್ದು. ತುಪ್ಪ ತುಂಬಿದ ಬಿಂದಿಗೆಯಾದ್ದರಿಂದ ಮತ್ತು ತಿಪ್ಪೆಯ ಮೇಲೆ ಬಿದ್ದದ್ದಾದ್ದರಿಂದ ‘ಧೊಪ್’ ಎಂದೇ ಕೇಳಿಸಿದ್ದಿರಬೇಕು. ಒಂದುವೇಳೆ ಖಾಲಿ ಬಿಂದಿಗೆ ಸಿಮೆಂಟ್ ನೆಲದ ಮೇಲೆ ಅಥವಾ ಕಲ್ಲುಬಂಡೆಗಳ ಮೇಲೆ ಬಿದ್ದಿದ್ದರೆ? ಆಗ ಧೊಪ್ ಎಂಬ ಶಬ್ದ ಬರುವುದಿಲ್ಲ. ಮತ್ತ್ಯಾವ ಶಬ್ದ? ಅದನ್ನು ಒಂದು ಸಂಸ್ಕೃತ ಶ್ಲೋಕ ಚಂದವಾಗಿ ವಿವರಿಸಿದೆ- ‘ರಾಜಾಭಿಷೇಕೇ ಮದವಿಹ್ವಲಾಯಾ ಹಸ್ತಾಚ್ಯುತೋ ಹೇಮಘಟಸ್ತರುಣ್ಯಾಃ| ಸೋಪಾನಮಾಸಾದ್ಯ ಕರೋತಿ ಶಬ್ದಂ ಠಠಂಠಠಂಠಂ ಠಠಠಂಠಠಂಠಃ||’ ರಾಜನಿಗೆ ಸ್ನಾನ ಮಾಡಿಸುವುದರಲ್ಲಿ ಮಗ್ನಳಾದ ಸೇವಕಿಯ ಕೈಯಿಂದ ಜಾರಿದ ಚಿನ್ನದ ಬಿಂದಿಗೆಯು ಮೆಟ್ಟಲುಗಳ ಮೇಲೆ ಠಠಂಠಠಂಠಂ ಠಠಠಂಠಠಂಠಃ ಎಂದು ಶಬ್ದ ಮಾಡುತ್ತ ಉರುಳಿತಂತೆ!

ವೆಲ್‌ಕಮ್ ಟು ಒನಮೆಟೊಪಿಯಾ(onomatopoeia). ಬನ್ನಿ, ‘ಶಬ್ದಸಾಹಿತ್ಯ’ದ ಅದ್ಭುತಲೋಕದಲ್ಲಿ ಒಂದು ಸುತ್ತು ತಿರುಗಿಬರೋಣ.

ಬಹುಶಃ ಒನಮೆಟೊಪಿಯಾ ಎಂಬ ಪದವನ್ನು ನೀವು ಕೇಳಿರಲಿಕ್ಕಿಲ್ಲ ಅಷ್ಟೇ, ಆದರೆ ಹಾಗಂದ್ರೇನು ಅಂತ ನಿಮಗಾಗಲೇ ಗೊತ್ತಿರುತ್ತದೆ. ಈ ವಾಕ್ಯಗಳನ್ನು ಹೀಗೇಸುಮ್ಮನೆ ಒಮ್ಮೆ ಓದಿ. “ಸಂಜೆಹೊತ್ತು ಜಿಟಿಪಿಟಿ ಮಳೆ ಸುರೀತಿತ್ತು. ಕರ್ರುಂಕುರ್ರುಂ ತಿಂಡಿ ಏನಾದ್ರೂ ಇದ್ದಿದ್ರೆ ಚೆನ್ನಾಗಿರೋದು ಅನ್ನಿಸ್ತು. ಊರಲ್ಲಾಗಿದ್ರೆ ನಿಗಿನಿಗಿ ಉರಿವ ಕೆಂಡದಲ್ಲಿ ಹಪ್ಪಳವೋ ಹಲಸಿನಬೀಜಗಳೋ ಸುಟ್ಟು ತಿಂತಿದ್ವಿ. ಈ ಹಾಳು ನಗರದಲ್ಲಿ ಕುರ್ಕುರೆ ಪ್ಯಾಕೆಟೇ ಗತಿ. ಟಿ.ವಿ ಆನ್ ಮಾಡಿದ್ರೆ ಯಾವ್ದೋ ಡಿಶುಂಡಿಶುಂ ದೃಶ್ಯಗಳ ಸಿನೆಮಾ ಬರ್ತಿತ್ತು. ವಿಲನ್ ನಾಯಕಿಯ ಕತ್ತು ಹಿಸುಕುವುದನ್ನು ನೋಡಿ ಕರುಳು ಚುರ್ರುಕ್ಕೆಂದಿತು. ಹೊರಗೆ ಧೋ ಅಂತ ಮಳೆ ಮತ್ತೂ ಹೆಚ್ಚಾಯ್ತು. ಅಷ್ಟೊತ್ತಿಗೆ ಕಟಕಟ ಬಾಗಿಲು ಬಡಿದ ಶಬ್ದ. ಚಿಲಕ ಹಾಕಿದ್ದಿರಲಿಲ್ಲವಾದ್ದರಿಂದ ಧಡಾರನೆ ಬಾಗಿಲು ತೆರೆದು ಆ ವ್ಯಕ್ತಿ ಒಳಬಂದ. ನನ್ನೆದೆಯಲ್ಲಿ ಡವಡವ. ಆ ದಢೂತಿ ಆಕೃತಿ ನೋಡಿ ಕಿಟಾರನೆ ಕಿರುಚಿದೆ. ಎಲ್ಲೋ‌ಇದ್ದ ಕರಿಬೆಕ್ಕು ಮಿಯಾಂವ್ ಎನ್ನುತ್ತ ಆಗಲೇ ಬಂದು ನನ್ನನ್ನು ಹೆದರಿಸಬೇಕೇ!”

ಇದರಲ್ಲಿ ಪ್ರತಿಯೊಂದು ವಾಕ್ಯದಲ್ಲೂ ಒಂದೊಂದು ಅನ್ನುವಮಟ್ಟಿಗೆ ಒನಮೆಟೊಪಿಕ್ ಪದಗಳಿವೆ. ಜಿಟಿಪಿಟಿ, ಕರ್ರುಂಕುರುಂ, ಡಿಶುಂಡಿಶುಂ, ಚುರ್ರುಕ್ಕೆಂದಿತು, ಧೋ, ಧಡಾರನೆ, ಕಿಟಾರನೆ, ಮಿಯಾಂವ್... ಇವೆಲ್ಲ ಒಂದೊಂದು ಶಬ್ದಾನುಭವದ ಅಕ್ಷರರೂಪ ಅಲ್ಲವೇ? ಅದೇ ಒನಮೆಟೊಪಿಯಾ! ಯಾವ ಸಪ್ಪಳವನ್ನು ಹೆಚ್ಚೂಕಡಿಮೆ ಅದೇ ರೀತಿಯ ಉಚ್ಚರಣೆಯ ಪದದಲ್ಲಿ ಹಿಡಿದಿಡುತ್ತೇವೋ ಅದು ಒನಮೆಟೊಪಿಕ್ ಪದ ಎನಿಸುತ್ತದೆ. ಗಡಿಯಾರದ ‘ಟಿಕ್‌ಟಿಕ್’, ನೀರಿನ ‘ಜುಳುಜುಳು’, ಗೆಜ್ಜೆಯ ‘ಘಲ್‌ಘಲ್’ ಮುಂತಾದವೆಲ್ಲ ಒನಮೆಟೊಪಿಕ್ ಪದಗಳು. ಹೆಚ್ಚಾಗಿ ಶಿಶುಗೀತೆಗಳಲ್ಲಿ ಅನುಕರಣ ಶಬ್ದಗಳಾಗಿ ಇಂಥವು ಕಾಣಿಸಿಕೊಳ್ಳುತ್ತವೆ.

‘ಲೊಳ್‌ಲೊಳ್ ಭೌ ಎಂದು ಕೂಗಿಯಾಡುವೆ...’ ಎನ್ನುತ್ತದೆ ರಾಜರತ್ಮಂ ಪದ್ಯದ ನಾಯಿಮರಿ. ‘ಟಿಕ್‌ಟಿಕ್ ಗೆಳೆಯಾ ಟಿಕ್ ಟಿಕ್ ಟಿಕ್’ ಆಗುತ್ತಾನೆ ದಿನಕರ ದೇಸಾಯಿಯವರ ಗಂಟೆಯ ನೆಂಟ. ‘ಆಗಲೇ ಕೂಗಿತು ಕೊ-ಕ್ಕೊ-ಕ್ಕೋಳಿ ಕಣ್ಣುಜ್ಜುತ ನಾ ನೋಡಿದೆ ಪಿಳಿಪಿಳಿ...’ ಎನ್ನುತ್ತಾನೆ ಮುಂಡಾಜೆ ರಾಮಚಂದ್ರಭಟ್ಟರ ಕವಿತೆಯಲ್ಲಿ ರೈಲುಪ್ರವಾಸದ ಕನಸು ಕಂಡ ಹುಡುಗ. ‘ಕೂವೂ ಜಗ್‌ಜಗ್ ಪೂವ್ವೀ ಟುವ್ವಿಟ್ಟವೂ...’ ಎಂದು ಹಾಡುತ್ತವೆ ಬಿ‌ಎಂಶ್ರೀ ಬಣ್ಣಿಸುವ ವಸಂತ ಋತುವಿನ ಹಕ್ಕಿಗಳು. ಆಶ್ಚರ್ಯವೆಂದರೆ ಆ ಕವಿತೆಯ ಇಂಗ್ಲಿಷ್ ಮೂಲ ಥಾಮಸ್ ನ್ಯಾಷ್ ಬರೆದದ್ದರಲ್ಲೂ Cuckoo jug-jug pu-we to-witta-woo ಎಂದೇ ಇದೆ ಹಕ್ಕಿಗಳ ಕಲರವ! ಬಿ‌ಎಂಶ್ರೀಯವರಾಗಲೀ ನ್ಯಾಷ್ ಆಗಲೀ ಮುಂದೊಂದು ದಿನ ‘ಟ್ವಿಟ್ಟರ್’ ಅಂತೊಂದು ಕ್ರೇಜ್ ಬರುತ್ತೆ, ಹಕ್ಕಿಗಳಷ್ಟೇ ಅಲ್ಲ ಜನರೂ ‘ಟ್ವೀಟ್’ ಮಾಡುತ್ತಾರೆ ಎಂದು ಕನಸಲ್ಲೂ ಯೋಚಿಸಿರಲಿಕ್ಕಿಲ್ಲ.

beeflower.jpg

ಜಗತ್ತಿನ ಎಲ್ಲ ಭಾಷೆಗಳಲ್ಲೂ ಒನಮೆಟೊಪಿಯಾ ಇದೆ. ಇರಲೇಬೇಕು, ಏಕೆಂದರೆ ಒಂದು ಥಿಯರಿಯ ಪ್ರಕಾರ ಮನುಷ್ಯಜಾತಿ ಮಾತು ಕಲಿತದ್ದೇ ಒನಮೆಟೊಪಿಕ್ ಪದಗಳ ಮೂಲಕ. ತನ್ನ ಸುತ್ತಮುತ್ತಲಿನ ಜೀವಿಗಳು, ವಸ್ತುಗಳು, ಚಲನವಲನಗಳು ಮಾಡುವ ಧ್ವನಿಯನ್ನು ಅನುಕರಿಸಿ ಮನುಷ್ಯ ಮಾತು ಕಲಿತನಂತೆ. ಆ ಥಿಯರಿಯ ಪ್ರತಿಪಾದಕರು ಇತಿಹಾಸ ಕೆದಕುತ್ತ ಹೋಗಿ ಭೂಮಿಯು ಸೃಷ್ಟಿಯಾದ ‘ಬಿಗ್ ಬ್ಯಾಂಗ್’ ಕ್ಷ್ಷಣವನ್ನೂ ತಲುಪಿ ಇಂಗ್ಲಿಷ್‌ನ ‘ಬ್ಯಾಂಗ್’ ಸಹ ಒಂದು ಒನಮೆಟೊಪಿಕ್ ಪದವೆಂದು ವ್ಯಾಖ್ಯಾನಿಸುತ್ತಾರೆ. ಅದನ್ನೇ ನಾವು ಪ್ರಣವ ನಾದ ‘ಓಂ’ಕಾರದ ವಿಷಯದಲ್ಲೂ ಹೇಳಬಹುದೇನೋ. ಇರಲಿ, ಅಷ್ಟು ಗಂಭೀರವಾದ ತಾರ್ತಿಕ ವಿಶ್ಲೇಷಣೆ ನಮಗೀಗ ಬೇಡ. ಆದರೂ ಮಾತಿನ ಕಲಿಕೆಯಲ್ಲಿ ಒನಮೆಟೊಪಿಕ್ ಪದಗಳ ಕೊಡುಗೆ ಇರುವುದಂತೂ ಹೌದು. ಚಂದದ ಉದಾಹರಣೆಯೆಂದರೆ ಪುಟ್ಟ ಮಕ್ಕಳ ಭಾಷೆಯಲ್ಲಿ ಊಟ ಅಥವಾ ಅನ್ನವನ್ನು ‘ಮಾಮ್ಮಾಂ’ ಎನ್ನುವುದು (‘ಬಿಸಿ‌ಅನ್ನ ಗೊಜ್ಜು ಮಾಡಿ ನಿನ್ಗೆ ಮಾಮ್ಮಾಂ ಮಾಡ್ತೀವಿ...’ ಚಿನ್ನಾರಿಮುತ್ತ ಹಾಡನ್ನು ನೆನಪಿಸಿಕೊಳ್ಳಿ. ಹಾಗೆಯೇ, ‘ಮಮ್ಮು ಉಣ್ಣುತ್ತೇನೆ ಸುಮ್ಮನಿರುತ್ತೇನೆ ಗುಮ್ಮನ ಕರೆಯದಿರೆ...’ ದಾಸರಪದ). ಮಾಮ್ಮಾಂ ಅಥವಾ ಮಮ್ಮು ಎಂಬ ಪದ ಭಾಷಾತೀತ. ಮಗು ಅದನ್ನು ಮಾತೃಭಾಷೆಯ ಪದವಾಗಿ ಕಲಿಯುವುದಿಲ್ಲ. ಆಹಾರ ಸೇವನೆಗೆ, ಆನಂದದಿಂದ ಉಣ್ಣುವ ಮೂಲಭೂತ ಪ್ರಕ್ರಿಯೆಗೆ ಅತ್ಯಂತ ಸಮಂಜಸ ಧ್ವನಿರೂಪ ಅದು. ಮಾತಿನಲ್ಲಿ, ಬರಹದಲ್ಲಿ ಅದನ್ನು ಧ್ವನಿರೂಪವಾಗಿ ಬಳಸಿದರೆ ಹೆಚ್ಚು ಪರಿಣಾಮಕಾರಿಯಾಗುತ್ತದೆ. ‘ನಾನು ಹೋಳಿಗೆ ತಿಂದೆ’, ‘ನಾನು ಹೋಳಿಗೆಯನ್ನು ಗಬಗಬ ಮುಕ್ಕಿದೆ’ ಮತ್ತು ‘ನಾನು ಹೋಳಿಗೆಯನ್ನು ಆಮ್‌ನಾಮ್‌ನ್ಯಾಮ್ ಎಂದು ಚಪ್ಪರಿದೆ’ - ಈ ಮೂರು ವಾಕ್ಯಗಳಲ್ಲಿ ಯಾವುದು ಹೋಳಿಗೆಯ ಸವಿಯನ್ನು ಹೆಚ್ಚು ಸಮರ್ಥವಾಗಿ ಸೆರೆಹಿಡಿದಿದೆ, ಬಾಯಿಯಲ್ಲಿ ನೀರೂರಿಸಿದೆ ಎಂದು ಹೋಲಿಸಿನೋಡಿ. ಒನಮೆಟೊಪಿಯಾ ಹೆಚ್ಚುಗಾರಿಕೆ ಆಗ ಅರ್ಥವಾಗುತ್ತದೆ. ಪುಟ್ಟ ಮಗುವನ್ನು ಮುದ್ದಿಸುವಾಗ, ಎಷ್ಟು ಸಿಹಿಯಾಗಿದ್ದೀ ತಿಂದುಬಿಡುತ್ತೇನೆ ಎನ್ನುತ್ತ ಮಗುವಿನ ಕೈಬೆರಳುಗಳನ್ನೋ ಹೊಟ್ಟೆಯನ್ನೋ ತಿಂದಂತೆ ನಟಿಸುವಾಗ ಆಮ್‌ನಾಮ್‌ನ್ಯಾಮ್ ಎಂದೇ ತಾನೆ ನಮ್ಮ ಪ್ರೀತಿ ಹೊರಹೊಮ್ಮುವುದು? ಸೆಸಮೆ ಸ್ಟ್ರೀಟ್ ಮಕ್ಕಳ ಟಿ.ವಿ ಕಾರ್ಯಕ್ರಮದಲ್ಲಿ ‘ಕುಕಿ ಮಾನ್ಸ್ಟರ್’ ತನ್ನ ನೆಚ್ಚಿನ ಬಿಸ್ಕತ್ತುಗಳನ್ನು ಚಪ್ಪರಿಸುವುದೂ ಆಮ್‌ನಾಮ್‌ನ್ಯಾಮ್ ಧ್ವನಿ ಹೊರಡಿಸಿಯೇ.

ಭಾಷೆಗೆ ನಿಜವಾದ ಧ್ವನಿ ಬರುವುದು ಒನಮೆಟೊಪಿಯಾದಿಂದ. ‘ಘಲ್ಲುಘಲ್ಲೆನುತ ಗೆಜ್ಜೆ ಘಲ್ಲುತಾಧಿಮಿತಾ’ ಹಾಡಿನಲ್ಲಾಗಲೀ, ‘ಗಿಲಿಗಿಲಿ ಗಿಲಕ್ಕು ಕಾಲಗೆಜ್ಜೆ ಝಣಕ್ಕು...’ ಹಾಡಿನಲ್ಲೇ ಆಗಲಿ ಗೆಜ್ಜೆ ಶಬ್ದ ತನ್ನಿಂತಾನೇ ನಮ್ಮ ಕಿವಿಗಳಲ್ಲಿ ರಿಂಗಣಿಸುವುದು ಒನಮೆಟೊಪಿಕ್ ಪದಗಳಿಂದ. ಹೌದಲ್ಲ ‘ರಿಂಗಣಿಸು’ ಸಹ ಒಂದು ಒನಮೆಟೊಪಿಕ್ ಪದ! ಯಾವ ಮೋಹನ ಮುರಳಿ ಕರೆಯಿತೋ ಕವನದ ‘ಕರಣ ಗಣದಿ ರಿಂಗಣ...’ ಸಾಲನ್ನು ನೆನಪಿಸಿಕೊಳ್ಳಿ, ಟೆಲಿಫೋನ್ ರಿಂಗ್ ಮೊಳಗಿದ ಅನುಭವ! ಮತ್ತೆ, ಮಳೆಹನಿಗಳ ಶಬ್ದ ಒನಮೆಟೊಪಿಕ್ ಪದಗಳಲ್ಲಿ ಮೂಡಿಬರುವುದು ಇನ್ನೂ ಚಂದ: ‘ಟಿಪ್ ಟಿಪ್ ಬರ್‌ಸಾ ಪಾನಿ...’ ಅಥವಾ ‘ಬೃಷ್ಟಿ ಪೊಡೇ ಟಾಪುರ್ ಟುಪುರ್...’ ಸಾಲುಗಳು ತೊಟ್ಟಿಕ್ಕುವ ಮಳೆಹನಿಗಳಾದರೆ, ಪಂಜೆ ಮಂಗೇಶರಾಯರ ಕಥೆಯ ‘ತಟಪಟ ಹನಿಯಪ್ಪ’ನದು ಕುಂಭದ್ರೋಣ ಮಳೆಯ ಅಟ್ಟಹಾಸ. ಆ ಕಥೆ ನನಗೆ ಈಗಲೂ ನೆನಪಿರುವುದು ಅದರ ವಿಚಿತ್ರ ಹೆಸರಿನಿಂದಾಗಿಯೇ. ತಟಪಟ ಎಂಬ ಒನಮೆಟೊಪಿಕ್ ಪದದಿಂದಾಗಿಯೇ ಎಂದರೂ ತಪ್ಪಲ್ಲ.

ತಟಪಟ ಹನಿಯಪ್ಪನ ಕಥೆಯಂಥದೇ ಶಿಶುಗೀತೆಯೊಂದನ್ನು ಬರೆದಿದ್ದಾರೆ ಅಮೆರಿಕನ್ನಡತಿ ಸ್ನೇಹಿತೆ ಸವಿತಾ ರವಿಶಂಕರ್. ಈ ಕವಿತೆಯಂತೂ ಸಂಪೂರ್ಣ ‘ಶಬ್ದ’ಸಾಹಿತ್ಯ.  ಕೆಲವು ಸಾಲುಗಳನ್ನು ನೋಡಿ- “ಭರಭರ ಬೀಸಲು ಗಾಳಿ ಪುರ್‌ಪುರ್ ಹಾರಿತು ಹಕ್ಕಿ/ ಗುಡುಗುಡು ಗುಡುಗಿತು ಗುಡುಗು ಝಲ್‌ಝಲ್ ಹೊಳೆಯಿತು ಮಿಂಚು/ ತಪತಪ ಸದ್ದಿನ ಮಳೆಗೆ ತಕತಕ ಕುಣಿಯಿತು ನವಿಲು/ ಟಪಟಪ ಉದುರಲು ಆಲಿಕಲ್ಲು ವಟವಟಗುಟ್ಟಿತು ಕಪ್ಪೆ” ಹೀಗೆ ಪದ್ಯದ ತುಂಬೆಲ್ಲ ಒನಮೆಟೊಪಿಯಾ ಒನಪು. ನನಗನಿಸುತ್ತದೆ, ಕನ್ನಡ ಭಾಷೆಯ ಸೊಗಡನ್ನು ಮಕ್ಕಳಿಗೆ, ಅನ್ಯಭಾಷಿಗರಿಗೆ ತಿಳಿಹೇಳಬೇಕಾದರೆ ‘ನಮ್ಮದು ಎಂಟು ಜ್ಞಾನಪೀಠ ವಿಜೇತ ಭಾಷೆ’ ಅಂತೆಲ್ಲ ದೊಡ್ಡದೊಡ್ಡ ಮಾತುಗಳಿಗಿಂತ ಇಂಥ ಸರಳಸುಂದರ ರಸಘಟ್ಟಿಗಳು ಸಾವಿರಪಾಲು ಮೇಲು.

ಕೊನೆಯಲ್ಲೊಂದು ಒನಮೆಟೊಪಿಕ್ ರಸಪ್ರಶ್ನೆ. ‘ದೂರದರ್ಶನ ಚಂದನ ವಾಹಿನಿಯ ಜನಪ್ರಿಯ ಕಾರ್ಯಕ್ರಮ. 1500ಕ್ಕೂ ಹೆಚ್ಚು ಕಂತುಗಳು ಪ್ರಸಾರವಾಗಿವೆ. ಹೆಸರಿನ ಮೊದಲ ಪದದಲ್ಲೇ ಒನಮೆಟೊಪಿಯಾ ಇದೆ.’ ಇದಕ್ಕೆ ಉತ್ತರವನ್ನು ಹೇಗೆ ಹೇಳಬೇಕು ಎಂದು ನಿಮ್ಮಲ್ಲಿ ಕೇಳಿದರೆ ನಾನೇ ಉತ್ತರವನ್ನೂ ಕೊಟ್ಟಂತಾಗುತ್ತದೆ. ನೀವು ಸರಿಯುತ್ತರ ಬರೆದು ತಿಳಿಸಿದರೂ ಮತ್ತೆ ನನ್ನನ್ನೇ ಕೇಳಿದಂತಾಗುತ್ತದೆ. ಹಾಗಾಗಿ ಪ್ರಶ್ನೆ ಅದಲ್ಲ. ‘ಊಹ್ ಆಹ್ ಔಚ್!’ ಎಂದು ನೋವನ್ನು ಧ್ವನಿಯಾಗಿಸಿದ ಒನಮೆಟೊಪಿಕ್ ಜಾಹೀರಾತು ಯಾವ ಉತ್ಪನ್ನದ್ದು?

* * *

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

"Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!

Akshathe and Aasheervaada

Saturday, January 14th, 2012
DefaultTag | Comments

ದಿನಾಂಕ  15 ಜನವರಿ 2012ರ ಸಂಚಿಕೆ...

ಆರತಕ್ಷತೆಯ ಅರ್ಥಪೂರ್ಣತೆ

* ಶ್ರೀವತ್ಸ ಜೋಶಿ

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

* * *

ತ್ತೀಚೆಗೆ ಮದುವೆ ಕರೆಯೋಲೆಗಳಲ್ಲಿ ‘ಆರತಕ್ಷತೆ’ ಎಂಬ ಪದ ಕಾಣಿಸಿಕೊಳ್ಳುವುದು ಕಡಿಮೆ. ಆರತಕ್ಷತೆಯ ಸ್ಥಾನವನ್ನು ರಿಸೆಪ್ಷನ್ ಆಕ್ರಮಿಸಿಕೊಂಡಿರುವುದು ಬಹುಶಃ ಇದಕ್ಕೆ ಕಾರಣ. ಲಗ್ನಪತ್ರಿಕೆ ಇಂಗ್ಲಿಷ್‌ನಲ್ಲಿದ್ದರೆ ಬಿಡಿ, ಕನ್ನಡದಲ್ಲಿದ್ದರೂ ‘ಮುಹೂರ್ತಮ್’, ‘ರಿಸೆಪ್ಷನ್’ಗಳೇ ರಾರಾಜಿಸುತ್ತವೆ. ಆರತಕ್ಷತೆಯಂಥ ಆತ್ಮೀಯ ಪದ ಅಲ್ಲಿ ನಮಗೆ ಕಾಣಸಿಗುವುದಿಲ್ಲ. ಆರತಕ್ಷತೆಯ ಕ್ರಮವೇ ಇರುವುದಿಲ್ಲವೆಂದ ಮೇಲೆ ಕರೆಯೋಲೆಯಲ್ಲಾದರೂ ಏಕಿರಬೇಕು? ವಧು-ವರರನ್ನು ಹಸೆಮಣೆಯ ಮೇಲೆ ಕೂರಿಸಿ ಸುಮಂಗಲಿಯರು ಆರತಿ ಬೆಳಗಿ ಸೋಬಾನೆ ಪದ ಹಾಡಿ ಅಕ್ಷತೆ ಕಾಳು ಹಾಕಿ ಶುಭಾಶೀರ್ವಚನ ಮಾಡುವ ಪದ್ಧತಿ ಈಗ ಹಳೇಕಾಲದ್ದೆನಿಸುತ್ತದೆ. ಅದಕ್ಕಿಂತ, ಸೂಟು-ಬೂಟು ತೊಟ್ಟ ವರ ಮತ್ತು ಸಿನೆಮಾ ತಾರೆಯನ್ನು ನಾಚಿಸುವಷ್ಟು ಮೇಕಪ್‌ಗೊಂಡ ವಧು ಸಿಂಹಾಸನದಂತಿರುವ ಎರಡು ಕುರ್ಚಿಗಳ ಮುಂದೆ ನಿಂತು, ಇಷ್ಟಮಿತ್ರ ಬಂಧುಬಾಂಧವರೆಲ್ಲ ಸರತಿಯ ಸಾಲಿನಲ್ಲಿ ವೇದಿಕೆಯ ಮೇಲೆ ಬಂದು ಅವರ ಕೈಕುಲುಕಿ ಒಂದಿಷ್ಟು ಕೃತಕವೇ ಎನಿಸುವಂಥ ನಗು ಬೀರಿ ಫೋಟೊ ಕ್ಲಿಕ್ಕಿಸಿಕೊಳ್ಳುವ ಯಾಂತ್ರಿಕ ಕ್ರಮವೇ ನಮಗೆಲ್ಲ ಅಭ್ಯಾಸವಾಗಿಹೋಗಿದೆ. ಏತನ್ಮಧ್ಯೆ ಆರತಕ್ಷತೆಯಲ್ಲಿ ಗಾಢವಾಗಿರುತ್ತಿದ್ದ ಆತ್ಮೀಯತೆಯು ರಿಸೆಪ್ಷನ್ ಎಂಬ ಆಡಂಬರದ ಕಣ್ಣುಕುಕ್ಕುವ ‘ಶೋ’ಬಾಜಿಯಲ್ಲಿ ಕಳೆದುಹೋಗಿದೆ.

ಕಾಕ್ಕೆ ತಕ್ಕ ಕೋಲ ಎಂದು ನಾವಿದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಆದರೂ ಆರತಕ್ಷತೆಯಂಥ ಸಂಪ್ರದಾಯಗಳು ಯಾಕೆ ಇರುತ್ತಿದ್ದವು, ಅವುಗಳ ಅರ್ಥ-ಆಶಯಗಳು ಏನಿದ್ದವು ಎಂದು ತಿಳಿದುಕೊಂಡರೆ ಹೆಮ್ಮೆಯೆನಿಸುತ್ತದೆ.

ಅಕ್ಷತ ಎಂದರೆ ಸಂಸ್ಕೃತ ಭಾಷೆಯಲ್ಲಿ ‘ತುಂಡಾಗದ’ (unbroken) ಎಂದರ್ಥ. ಕನ್ನಡದಲ್ಲಿ ಸ್ವಲ್ಪ ಅಪಭ್ರಂಶಗೊಂಡು ಅದು ‘ಅಕ್ಷತೆ’ ಆಗಿದೆ. ಅಕ್ಷತೆಯ ಒಂದೊಂದು ಅಕ್ಕಿ ಕಾಳು ಸಹ ಇಡಿಯದಾಗಿರಬೇಕು. ನುಚ್ಚಾಗಿರುವ ಅಕ್ಕಿಗೆ ಎಷ್ಟೇ ಅರಿಶಿನ ಕುಂಕುಮ ಹಚ್ಚಿದರೂ ಅದು ಅಕ್ಷತೆಯಾಗುವುದಿಲ್ಲ. ಅಕ್ಷತೆಯ ಇನ್ನೊಂದು ವೈಶಿಷ್ಟ್ಯವೆಂದರೆ ಅದು ಪೂಜೆ ಪುನಸ್ಕಾರಗಳಲ್ಲಿ ದೇವರಿಗೆ ಅರ್ಪಿಸುವ ಪೂಜಾದ್ರವ್ಯವಾಗಿಯೂ ಬಳಕೆಯಾಗುತ್ತದೆ, ಹಾಗೆಯೇ ದೇವತಾನುಗ್ರಹಕ್ಕೆ ಅಥವಾ ಗುರುಹಿರಿಯರ ಆಶೀರ್ವಚನಕ್ಕೆ ವಸ್ತುರೂಪವಾಗಿಯೂ ಕಾರ್ಯವೆಸಗುತ್ತದೆ. ಅಂದರೆ ಅರ್ಪಣೆ ಮತ್ತು ಅನುಗ್ರಹಗಳ ದ್ವಿಮುಖ ಸಂವಹನವನ್ನು ಅಕ್ಷತೆ ನಿಭಾಯಿಸುತ್ತದೆ. ಅರ್ಪಣೆಯಾಗಿಯೂ ಅನುಗ್ರಹವಾಗಿಯೂ ಏಕಪಾತ್ರಾಭಿನಯ ಮಾಡುತ್ತದೆ. ಇನ್ನೂ ಆಧ್ಯಾತ್ಮಿಕವಾಗಿ ಹೇಳಬೇಕಿದ್ದರೆ ಅಕ್ಷತೆ ಫಲಾಪೇಕ್ಷೆಯ ಬೀಜವೂ ಹೌದು; ಬೀಜ ಮೊಳೆತು ಪಕ್ವವಾಗಿ ಸಿಗುವ ಫಲವೂ ಹೌದು!

ವಿವಾಹ ಮಹೋತ್ಸವದಲ್ಲಿ ವಧು-ವರರನ್ನು ಆಶೀರ್ವದಿಸಿ ಅನುಗ್ರಹಿಸಲಿಕ್ಕೆ ಅಕ್ಷತೆಯನ್ನು ಉಪಯೋಗಿಸುತ್ತಾರಷ್ಟೆ? ಆರತಿ ಬೆಳಗಿ ಅಕ್ಷತೆ ಹಾಕುವುದರಿಂದ ಆರತಕ್ಷತೆ ಎಂಬ ಹೆಸರು ಬಂದದ್ದಿರಬಹುದು. ಕೆಲವು ಮದುವೆ ಸಮಾರಂಭಗಳಲ್ಲಿ ಆರತಕ್ಷತೆಯೆಂಬ ಪ್ರತ್ಯೇಕ ಕಾರ್ಯಕ್ರಮ ಇರದಿದ್ದರೂ ಮುಹೂರ್ತದ ವೇಳೆ ವಧು-ವರರು ಪರಸ್ಪರ ಮಾಲೆ ಹಾಕಿಕೊಂಡ ಮೇಲೆ ಗಟ್ಟಿಮೇಳ ಮೊಳಗುತ್ತಲೇ ಅತಿಥಿಗಳೆಲ್ಲ ಅಕ್ಷತೆಯ ಮೂಲಕ ಆಶೀರ್ವಾದದ ಮಳೆಗರೆಯುತ್ತಾರೆ. ಅಕ್ಷತೆಯ ರೂಪದಲ್ಲಷ್ಟೇ ಅಲ್ಲದೆ ಮದುವೆಯ ಇನ್ನಿತರ ವಿಧಿವಿಧಾನಗಳಲ್ಲೂ ಅಕ್ಕಿಯ ಪಾತ್ರ ದೊಡ್ಡದಿದೆ. ಅಂತಃಪಟ ಸರಿಯುವ ಮುನ್ನ ವಧು-ವರರು ಎದುರುಬದುರಾಗಿ ನಿಲ್ಲುವುದು ಅಕ್ಕಿರಾಶಿಯ ಮೇಲೆ. ಸಪ್ತಪದಿ ತುಳಿಯುವುದೂ ಅಕ್ಕಿಯಿಂದ ಮಾಡಿದ ಏಳು ರಾಶಿಗಳ ಮೇಲೆ ಹೆಜ್ಜೆಯಿಟ್ಟು (ಕೆಲವು ಕಡೆ ಬೇರೆ ರೀತಿಯೂ ಇರಬಹುದು). ಗಂಡನ ಮನೆಯನ್ನು ಪ್ರವೇಶಿಸುವ ವಧು ಮನೆಯ ಹೊಸ್ತಿಲಲ್ಲಿಟ್ಟ ಅಕ್ಕಿಪಾತ್ರೆಯನ್ನು ಕಾಲಿಂದ ಚೆಲ್ಲಿ ಒಳಬರುವುದು- ಅಕ್ಷರಶಃ ಧಾನ್ಯಲಕ್ಷ್ಮಿ ಮನೆಯೊಳಗೆ ಅಡಿಯಿಟ್ಟಳು ಎಂಬ ಸಂಕೇತವಾಗಿಯೇ.

WeddingAkshatheSmall.jpg

ಹೀಗೆ ಅಕ್ಷತೆ ಅಥವಾ ಅಕ್ಕಿಕಾಳಿನ ವೈಶಿಷ್ಟ್ಯ ಮತ್ತು ನಮ್ಮ ಭಾರತೀಯ ವಿವಾಹಪದ್ಧತಿಯಲ್ಲಿ ಅದಕ್ಕಿರುವ ಮಹತ್ವ ನಮಗೆಲ್ಲ ಗೊತ್ತಿರುವಂಥದ್ದೇ. ಅಚ್ಚರಿಯ ಅಂಶವೇನೆಂದರೆ, ವಧು-ವರರ ಮೇಲೆ ಅಕ್ಕಿಕಾಳು ಚೆಲ್ಲಿ ಆಶೀರ್ವದಿಸುವ ಕ್ರಮ ಪಾಶ್ಚಾತ್ಯ ಸಂಸ್ಕೃತಿಯಲ್ಲೂ ಇದೆ; ಮಾತ್ರವಲ್ಲ, ಅದರ ಹಿಂದೆ ಕುತೂಹಲಕರವಾದ ಚರಿತ್ರೆಯೂ ಇದೆ!

ಪ್ರಾಚೀನ ರೋಮನ್ ಕಾಲದಿಂದಲೂ ಯಾವುದಾದರೂ ಧಾನ್ಯವನ್ನು ಚೆಲ್ಲಿ ವಧು-ವರರನ್ನು ಆಶೀರ್ವದಿಸುವ ಪದ್ಧತಿ ಇತ್ತಂತೆ. ಮೊದಲೆಲ್ಲ ಬಹುತೇಕವಾಗಿ ಗೋಧಿಯ ಬಳಕೆಯಾಗುತ್ತಿತ್ತು. ಗೋಧಿ, ಅಕ್ಕಿ ಅಥವಾ ಇತರ ಯಾವುದೇ ಧಾನ್ಯವನ್ನು ಬಳಸಿದರೂ ಅದರ ಹಿಂದಿನ ಉದ್ದೇಶ ಫಲವತ್ತತೆ (fertility) ಮತ್ತು ಏಳಿಗೆ (prosperity)ಯನ್ನು ಸಂಕೇತಿಸುವುದೇ ಆಗಿತ್ತು. ಸಮೃದ್ಧಿ, ಸೌಭಾಗ್ಯಗಳ ಶ್ರೀಮಂತಿಕೆಯ ಪ್ರತೀಕವಾಗಿ ಧಾನ್ಯಕ್ಕಿಂತ ಸಮರ್ಥವಾದದ್ದು ಇನ್ನೇನು ತಾನೆ ಇದೆ? ಹಾಗಾಗಿಯೇ “ಸಂಪದ್ಭರಿತರಾಗಿ; ಸಂತಾನಪ್ರಾಪ್ತಿವಂತರಾಗಿ; ಸುಖಿಗಳಾಗಿ ಬಾಳಿರಿ...” ಎಂಬ ಶುಭಾಶಯ ರೂಪದಲ್ಲಿ ಗೋಧಿಕಾಳು ಅಕ್ಕಿಕಾಳು ಅಥವಾ ಇನ್ನಿತರ ಧಾನ್ಯವನ್ನು ಉದುರಿಸುವ ಸಂಪ್ರದಾಯ ಬಂತು.

ರೋಮನ್ನರ ಪ್ರಾಶಸ್ತ್ಯ ಅಕ್ಕಿಗಿಂತಲೂ ಗೋಧಿಯೇ ಆಗಿತ್ತು. ಸಂತಾನೋತ್ಪತ್ತಿಗೂ ಗೋಧಿಗೂ ಸಂಬಂಧವಿದೆಯೆಂದು ರೋಮನ್ನರು ನಂಬಿದ್ದರು. ಮದುವೆಯಾಗುವ ಕನ್ಯೆಯು ವಿವಾಹ ಸಮಾರಂಭದುದ್ದಕ್ಕೂ ಗೋಧಿ ತುಂಬಿದ ಒಂದು ಪಾತ್ರೆಯನ್ನು ಕೈಯಲ್ಲಿ ಹಿಡಿದುಕೊಳ್ಳುತ್ತಿದ್ದಳು. ಗೋಧಿಕಾಳುಗಳ ಮಾಲೆಯನ್ನು ತಲೆಯಲ್ಲಿ ಧರಿಸುತ್ತಿದ್ದಳು. ಮದುವೆಗೆ ಆಗಮಿಸಿದ ಅತಿಥಿಗಳೂ ವಧುವಿನ ಮೇಲೆ ಗೋಧಿಕಾಳನ್ನು ಚೆಲ್ಲಿ ಆಶೀರ್ವಾದ ಮಾಡುತ್ತಿದ್ದರು. ಗುರುಹಿರಿಯರ ಆಶೀರ್ವಾದದ ಗೋಧಿಕಾಳುಗಳು ವಧುವಿನ ತಲೆಯ ಮೇಲೆ ಬಿದ್ದು ಅಲ್ಲಿಂದ ನೆಲಕ್ಕುದುರಿದರೆ ಇನ್ನೂ ಮದುವೆಯಾಗಿರದ ಹೆಣ್ಮಕ್ಕಳು ಅವುಗಳನ್ನು ಹೆಕ್ಕಿಕೊಳ್ಳಲು ದುಂಬಾಲು ಬೀಳುತ್ತಿದ್ದರು. ತಮಗೂ ಆ ರೀತಿಯ ಆಶೀರ್ವಾದ ಯೋಗ ಶೀಘ್ರದಲ್ಲೇ ಪ್ರಾಪ್ತಿಯಾಗಲೆಂದು ಅವರ ನಂಬಿಕೆ.

ಬ್ರಿಟಿಷ್ ರಾಣಿ ಒಂದನೇ ಎಲಿಜಬೆತ್‌ಳ ಆಡಳಿತಕಾಲಕ್ಕೆ, ವಧುವಿನ ಮೇಲೆ ಗೋಧಿಕಾಳು ಚೆಲ್ಲುವ ರಿವಾಜಿನಲ್ಲಿ ಒಂದು ಮಾರ್ಪಾಡು ಬಂತು. ಗೋಧಿಕಾಳನ್ನು ಚೆಲ್ಲುವ ಬದಲಿಗೆ ಅದರ ಕೇಕ್ ಮಾಡಿ ಕೇಕಿನ ಸಣ್ಣಸಣ್ಣ ತುಂಡುಗಳನ್ನು ವಧುವಿನ ಮೇಲೆ ಮಳೆಗರೆಯುವ ಕ್ರಮ ಶುರುವಾಯ್ತು. ಆದರೆ ರುಚಿಕರವಾದ ಕೇಕ್‌ಅನ್ನು ತುಂಡರಿಸಿ ಚೆಲ್ಲುವ ಬದಲು ಕಾಲಕ್ರಮೇಣ ಅದು ಮದುವೆ ಔತಣದಲ್ಲಿ ಒಂದು ಭಕ್ಷ್ಯವಾಯಿತು. ತಿಂದು ತೇಗುವ ಮೋಜಿಗೇನೊ ಕೇಕ್ ಸಿಕ್ಕಿತು, ಆದರೆ ನಿಜವಾಗಿಯೂ ವಧು-ವರರನ್ನು ಹರಸಲೆಂದೇ ಬರುವ ಹಿರಿಯ ಹಿತೈಷಿಗಳಿಗೆ ಆಶೀರ್ವಾದಕ್ಕೊಂದು ರೂಪ ಕೊಡಲಿಕ್ಕೆ ಏನಾದರೂ ವಸ್ತು ಬೇಕಲ್ಲ? ಆಗ ಶುರುವಾದದ್ದು ಅಕ್ಕಿಕಾಳಿನ ಬಳಕೆ. ಗೋಧಿಗಿಂತ ಸುಲಭವಾಗಿ ಮತ್ತು ಅಗ್ಗದಲ್ಲಿ ಸಿಗುತ್ತಿದ್ದ ಅಕ್ಕಿ ಸಹಜವಾಗಿಯೇ ಅಂಥ ಉಪಯೋಗಕ್ಕೆ ಯೋಗ್ಯವಾದ ಧಾನ್ಯ ಎನಿಸಿಕೊಂಡಿತು. ಅವತ್ತಿನಿಂದ ರೋಮನ್ ಕ್ಯಾಥೋಲಿಕ್ ಮದುವೆಗಳಲ್ಲಿ ವಧು-ವರರ ಮೇಲೆ ಅಕ್ಕಿಕಾಳು ಚೆಲ್ಲುವ ಪರಿಪಾಠ ಮುಂದುವರೆಯಿತು. ರೋಮನ್ ಯುಗಕ್ಕಿಂತಲೂ ಹಿಂದೆ, ಆದಿವಾಸಿಗಳ ಜೀವನಶೈಲಿಯಲ್ಲೂ ಅಕ್ಕಿಗೂ ಗಂಡು-ಹೆಣ್ಣಿನ ಸಹಬಾಳ್ವೆಗೂ ಸಂಬಂಧವಿತ್ತೆಂದು ತಿಳಿದುಬರುತ್ತದೆ. ಗಂಡು-ಹೆಣ್ಣು ಒಟ್ಟಾಗಿ ಅಕ್ಕಿ (ಅನ್ನ) ತಿಂದರೆ ಅವರ ಜೋಡಿಯಾದಂತೆ ಎಂಬ ನಂಬಿಕೆಯಿತ್ತು. ತಿನ್ನುವುದಕ್ಕಾಗಿಯೇ ಅಕ್ಕಿಯನ್ನು ಅವರಿಬ್ಬರ ಮೇಲೆ ಸುರಿಸುವ ಕ್ರಮವೂ ಇತ್ತು. ಇನ್ನು ಕೆಲವು ಪಂಗಡಗಳಲ್ಲಿ, ಬುಡಕಟ್ಟು ಜನಾಂಗಗಳಲ್ಲಿ ವಧು-ವರರ ಮೇಲೆ ಕೆಟ್ಟದೃಷ್ಟಿ ಬೀರುವ ಕ್ಷುದ್ರ ಶಕ್ತಿಗಳಿಗೆ ಬಲಿಯ ರೂಪದಲ್ಲಿ ಅಕ್ಕಿಕಾಳನ್ನು ಸಿಂಪಡಿಸುವ ಕ್ರಮವೂ ಇದ್ದಿರಬಹುದು. ಅಂತೂ ಮದುವೆಗೂ ಅಕ್ಕಿಕಾಳಿಗೂ ಅವಿನಾಭಾವ ಸಂಬಂಧ ಒಂದಲ್ಲ ಒಂದು ನಮೂನೆಯಲ್ಲಿ ವಿಶ್ವದೆಲ್ಲೆಡೆಗಳಲ್ಲೂ ಇದೆ.

ಪಾಶ್ಚಾತ್ಯ ದೇಶಗಳಲ್ಲಿ ಮದುವೆಯ ‘ಧಾರ್ಮಿಕ ಭಾಗ’ ಈಗಲೂ ಚರ್ಚ್‌ಗಳಲ್ಲೇ ನಡೆಯುತ್ತದೆ. ಧರ್ಮಗುರುಗಳ ಸಮಕ್ಷಮದಲ್ಲಿ ಗಂಡು-ಹೆಣ್ಣು ಪ್ರಮಾಣಪೂರ್ವಕವಾಗಿ ಸತಿಪತಿಗಳಾಗುತ್ತಾರೆ. ಗುರುಹಿರಿಯರು ಆಶೀರ್ವಾದ ರೂಪದಲ್ಲಿ ಅಕ್ಕಿಕಾಳನ್ನು ಚೆಲ್ಲುತ್ತಾರೆ. ಎಲ್ಲ ಕ್ರಮಗಳೂ ಚಾಚೂತಪ್ಪದೆ ನಡೆಯುತ್ತವೆ. ಆಮೇಲೆ ಆ ಮದುವೆಯ ಪವಿತ್ರಬಂಧ ಎಷ್ಟು ದಿನ/ತಿಂಗಳು/ವರ್ಷ ಉಳಿಯುತ್ತದೆ ಎನ್ನುವುದು ಬೇರೆ ಮಾತು. ಚರ್ಚ್ ಪ್ರಾಂಗಣದಲ್ಲಿ ಈ ರೀತಿ ಅಕ್ಕಿಕಾಳು ಚೆಲ್ಲುವುದು ಸಲ್ಲದು, ಹಕ್ಕಿಗಳು ಅದನ್ನು ತಿಂದರೆ ಅವುಗಳಿಗೆ ಅಪಾಯಕಾರಿ ಎಂಬ ಕೂಗು ಸಹ ಈಚೀಚೆಗೆ ಕೇಳಿಬಂದದ್ದಿದೆ. ಗೊಡ್ಡು ಸಂಪ್ರದಾಯಗಳ ಬಗ್ಗೆ ಅಗೌರವವಿರುವವರಿಂದಲೋ, ಪಕ್ಷಿಪ್ರೇಮಿಗಳಿಂದಲೋ ಅಥವಾ ಚರ್ಚ್ ನೈರ್ಮಲ್ಯ ಉಸ್ತುವಾರಿಯವರಿಂದಲೋ ಅಂತೂ ಪಾಶ್ಚಾತ್ಯ ಜಗತ್ತಿನಲ್ಲೂ ಮದುವೆಯಲ್ಲಿನ ಆಶೀರ್ವಚನದ ಅಕ್ಕಿಕಾಳಿಗೆ ಸಂಚಕಾರ ಬಂದಿದೆ!

ಪಾಶ್ಚಾತ್ಯರ ಸಂಗತಿ ಹಾಗಿರಲಿ. ಆಧುನಿಕತೆಯ ಸೋಗಿನಲ್ಲಿ ಆರತಕ್ಷತೆಯಂಥ ಆತ್ಮೀಯ ಆಚರಣೆಗಳಿಗೆ ನಾವುಗಳೂ ಅನಾದರ ತೋರುತ್ತೇವಲ್ಲ? ಇದಕ್ಕೇನನ್ನೋಣ?

* * *

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

"Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!

Talkativeness and Gender Difference

Saturday, January 7th, 2012
DefaultTag | Comments

ದಿನಾಂಕ  8 ಜನವರಿ 2012ರ ಸಂಚಿಕೆ...

ವಾಚಾಳಿತನ ಮತ್ತು ಲಿಂಗಭೇದ

* ಶ್ರೀವತ್ಸ ಜೋಶಿ

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

* * *

ವಾಗರ್ಥಾವಿವ ಸಂಪ್ರಕ್ತೌ ವಾಗರ್ಥ ಪ್ರತಿಪತ್ತಯೇ | ಜಗತಃ ಪಿತರೌ ವಂದೇ ಪಾರ್ವತೀ ಪರಮೇಶ್ವರೌ ||

ಕವಿರತ್ನ ಕಾಳಿದಾಸ ಬರೆದ ರಘುವಂಶ ಮಹಾಕಾವ್ಯದ ಮೊಟ್ಟಮೊದಲ ಶ್ಲೋಕ. ಇದರಲ್ಲಿ ಕಾಳಿದಾಸ ಇನ್‌ಡೈರೆಕ್ಟ್ ಆಗಿ ಏನನ್ನೋ ಸೂಚಿಸಿದ್ದಾನೆಯೇ? ‘ವಾಕ್’ ಎಂದರೆ ಮಾತನ್ನು ಪಾರ್ವತಿಗೂ, ಅರ್ಥವನ್ನು ಪರಮೇಶ್ವರನಿಗೂ ಹೋಲಿಸಿರುವುದನ್ನು ನೋಡಿದರೆ- ಮಾತು ಏನಿದ್ದರೂ ಪಾರ್ವತಿಯದೇ, ಅದನ್ನು ಅರ್ಥ ಮಾಡಿಕೊಂಡು ಬದುಕಬೇಕಾದವನು ಬಡಪಾಯಿ ಈಶ್ವರ ಎನ್ನುವುದು ಕವಿಯ ಇಂಗಿತವೇ? ಹೆಂಗಸರು ಗಂಡಸರಿಗಿಂತ ಹೆಚ್ಚು ವಾಚಾಳಿಗಳು ಎಂಬ ಲೋಕರೂಢಿಯ ಮಾತಿಗೆ ಕಾಳಿದಾಸ ಕೂಡ ಅನುಮೋದನೆಯ ಮೊಹರು ಒತ್ತಿದ್ದಾನೆಯೇ? ಶತಮಾನಗಳಷ್ಟು ಹಿಂದಿನ ಕಾಲದಿಂದಲೂ ಇದೇ ಪರಿಸ್ಥಿತಿ ಮುಂದುವರಿದಿದೆ ಎಂದು ನಾವು ತಿಳಿದುಕೊಳ್ಳಬೇಕೇ?

ಹಾಗೇನಿಲ್ಲ. ಒಂದನೆಯದಾಗಿ, ಕಾಳಿದಾಸನ ಶ್ಲೋಕಕ್ಕೆ ಈರೀತಿಯ ವ್ಯಾಖ್ಯಾನವನ್ನು ಯಾವ ವಿದ್ವಾಂಸರಾಗಲೀ ವಿಮರ್ಶಕರಾಗಲೀ ಕೊಟ್ಟಂತಿಲ್ಲ. ನಾನೇ ಈ ಲೇಖನದ ಪೀಠಿಕೆಗಾಗಿಯಷ್ಟೇ ಹೀಗೊಂದು ತರ್ಕವನ್ನು ರೂಪಿಸಿದ್ದು. ಎರಡನೆಯದಾಗಿ, ಹೆಂಗಸರು ಗಂಡಸರಿಗಿಂತ ಹೆಚ್ಚು ವಾಚಾಳಿಗಳು ಎನ್ನುವುದೂ ಬರಿ ಲೋಕರೂಢಿಯ ಮಾತೇ ಹೊರತು ಅದಕ್ಕೆ ವೈಜ್ಞಾನಿಕ ತಳಹದಿಯೇನಿಲ್ಲ. ಆದರೂ ಈಬಗ್ಗೆ ಚರ್ಚೆಯಾದಾಗಲೆಲ್ಲ ಒಬ್ಬೊಬ್ಬರೂ ಒಂದೊಂದು ರೀತಿಯ ವಾದ ಮಂಡಿಸಿ ವಾಚಾಳಿತನದಲ್ಲಿ ಲಿಂಗಭೇದ ಇರುವುದನ್ನು ಪ್ರತಿಪಾದಿಸುತ್ತಾರೆ. ಮಾತಿನ ಚಟ ಹೆಂಗಸರಿಗೆ ಹೆಚ್ಚು ಎಂದು ಬಿಂಬಿಸುವ ಜೋಕ್‌ಗಳು ವ್ಯಂಗ್ಯಚಿತ್ರಗಳು ವಕ್ರತುಂಡೋಕ್ತಿಗಳು ಹೆಚ್ಚು ಪ್ರಸಿದ್ಧವಾಗಿರುವುದೂ ಇದಕ್ಕೊಂದು ಕಾರಣ.

talkativegender.jpg

ಒಬ್ಬ ಹೆಂಗಸು ಸರಾಸರಿಯಾಗಿ ಒಂದು ದಿನಕ್ಕೆ 20,000 ಪದಗಳಷ್ಟು ಮಾತಾಡುತ್ತಾಳೆ. ಒಬ್ಬ ಗಂಡಸು ದಿನಕ್ಕೆ 7,000 ಪದಗಳಷ್ಟು ಮಾತಾಡುತ್ತಾನೆ - ಇಂಥದೊಂದು ಅಂಕಿ‌ಅಂಶವನ್ನು ಯಾರೋ ಮೆಟ್ರಿಕ್‌ಪಾಸ್ ಮನಃಶಾಸ್ತ್ರಜ್ಞನೊಬ್ಬ ಯಾವುದೋ ಮ್ಯಾಗಜಿನ್‌ನಲ್ಲೋ, ಟಿ.ವಿ ಸಂದರ್ಶನದಲ್ಲೋ ತೇಲಿಬಿಟ್ಟಿದ್ದಾನೆ. ಅದನ್ನೇ ಆಧರಿಸಿ ಈಗ ಇದ್ದಬಿದ್ದ ಪಂಡಿತರೆಲ್ಲ ವಾಚಾಳಿತನದಲ್ಲಿ ಗಂಡಸರಿಗಿಂತ ಹೆಂಗಸರೇ ಹೆಚ್ಚು ಎಂಬ ತಂತಮ್ಮ ವಾದವನ್ನು ಪುಷ್ಟೀಕರಿಸುತ್ತಿದ್ದಾರೆ. ಕೆಲವರು ಈ ಸಂಖ್ಯೆಗಳನ್ನು ಮತ್ತಷ್ಟು ಹೆಚ್ಚಿಸುತ್ತಾರೆ: ಹೆಂಗಸು ದಿನಕ್ಕೆ ಸರಾಸರಿ 30,000 ಪದಗಳನ್ನು ಮಾತಾಡಿದರೆ ಗಂಡಸು ಸರಾಸರಿ 12,000 ಪದಗಳಷ್ಟು ಮಾತಾಡುತ್ತಾನೆ ಎನ್ನುತ್ತಾರೆ. ಲೌನ್ ಬ್ರಿಜೆಂಡೈನ್ ಎಂಬ ಅಮೆರಿಕನ್ ಮನಃಶಾಸ್ತ್ರಜ್ಞೆ 2006ರಲ್ಲಿ ಪ್ರಕಟಿಸಿದ ‘ದಿ ಫಿಮೇಲ್ ಬ್ರೈನ್’ ಪುಸ್ತಕದಲ್ಲಿ ಹೀಗೆ ಉತ್ಪ್ರೇಕ್ಷಿತ ಅಂಕಿ‌ಅಂಶಗಳನ್ನು ಬಳಸಿದ್ದಳು. ಆಮೇಲೆ ವಿಜ್ಞಾನಕ್ಷೇತ್ರದ ವಿಶ್ವಸನೀಯ ಪತ್ರಿಕೆ ‘ನೇಚರ್’ನಲ್ಲಿ ಆ ಪುಸ್ತಕದ ವಿಮರ್ಶೆಯಾದಾಗ ಬ್ರಿಜೆಂಡೈನ್‌ಳ ಅಂಕಿ‌ಅಂಶಗಳನ್ನೆಲ್ಲ ಸಾರಾಸಗಟಾಗಿ ತಿರಸ್ಕರಿಸಲಾಯಿತು. ತಾನು ಅವರಿವರಿಂದ ಕೇಳಿದ್ದನ್ನೇ ನಂಬಿ ಆ ಅಂಕಿ‌ಅಂಶಗಳನ್ನು ಬರೆದಿದ್ದೆ, ಪುಸ್ತಕದ ಮುಂದಿನ ಆವೃತ್ತಿಗಳಲ್ಲಿ ಅದನ್ನು ಸರಿಪಡಿಸುತ್ತೇನೆ ಎಂದು ಆಕೆ ಒಪ್ಪಿಕೊಂಡಳು.

ಹೆಂಗಸರಿಗೆ ವಾಚಾಳಿತನ ಹೆಚ್ಚು ಎಂದು ವಾದ ಮಾಡುವವರು ಮಂಡಿಸುವ ಕೆಲವು ಥಿಯರಿಗಳು ಸ್ವಾರಸ್ಯಕರವಾಗಿರುತ್ತವೆ. ಅಂಥ ಒಂದು ಥಿಯರಿ ಹೀಗಿದೆ- ಆದಿಮಾನವ  ಗುಹೆಗಳಲ್ಲಿ ವಾಸಿಸುತ್ತಿದ್ದಾಗ ಗಂಡಸರು ಬೇಟೆಯಾಡಿ ಮಾಂಸ ಸಂಗ್ರಹಿಸಲು ಹೊರಗೆ ಹೋಗುತ್ತಿದ್ದರು. ಹೆಂಗಸರೆಲ್ಲ ಗುಹೆಗಳಲ್ಲೇ ಇರುತ್ತಿದ್ದರು ಅಥವಾ ಹತ್ತಿರದಲ್ಲೇ ಹಣ್ಣುಹಂಪಲುಗಳ ಸಂಗ್ರಹಕ್ಕೆ ಹೊರಡುತ್ತಿದ್ದರು. ಬೇಟೆಯ ವೇಳೆ ಪ್ರಾಣಿಗಾಗಿ ಗಂಟೆಗಟ್ಟಲೆ ಸದ್ದಿಲ್ಲದಂತೆ ನಿಂತು ಕಾಯಬೇಕಲ್ಲ? ಅದೇ ರೂಢಿ ಆಗಿ ಗಂಡಸರ ಮಾತು ಕಡಿಮೆ ಆಯ್ತು. ಹೆಂಗಸರಿಗೆ ಆರೀತಿಯ ಮೌನ ಅನಿವಾರ್ಯವಾಗಲಿಲ್ಲ. ಹಣ್ಣುಹಂಪಲುಗಳನ್ನು ಹೆಕ್ಕುವಾಗ ಅವರೆಲ್ಲ ಹರಟೆ ಹೊಡೆದರು. ಮಕ್ಕಳು ಮರಿಗಳ ಲಾಲನೆ ಪಾಲನೆ ವಿಚಾರ ಮಾತಾಡಿದರು. ‘ಅವಳ ಗಂಡ ಹಾಗೆ ಇವಳ ಗಂಡ ಹೀಗೆ ನಿನ್ನ ಗಂಡ ಹೇಗೆ?’ ಮುಂತಾಗಿ ಬಾವಿಕಟ್ಟೆ ಪುರಾಣಗಳನ್ನು ಪರಸ್ಪರ ವಿನಿಮಯಿಸಿಕೊಂಡರು. ಕಾಲಕ್ರಮೇಣ ಹೆಂಗಸರೆಲ್ಲ ಮಾತಿನಮಲ್ಲಿಯರಾದರು.

ಇರಲೂಬಹುದು ಅನಿಸುತ್ತದೆ ಇದನ್ನೋದುವಾಗ. ಆದರೆ ವಿಜ್ಞಾನಿಗಳು, ಮಾನವಶಾಸ್ತ್ರಜ್ಞರು ಈ ಥಿಯರಿಗೆ ಅಷ್ಟೇನೂ ಸೊಪ್ಪು ಹಾಕುವುದಿಲ್ಲ. ಬೇಟೆಯಾಡುವ ಮತ್ತು ಹಣ್ಣುಹಂಪಲು ಸಂಗ್ರಹಿಸುವ ಕೆಲಸವನ್ನು ಕ್ರಮವಾಗಿ ಗಂಡಸರು ಮತ್ತು ಹೆಂಗಸರೇ ಮಾಡುತ್ತಿದ್ದದ್ದು ಅಂತೇನಿಲ್ಲ. ಎಲ್ಲವನ್ನೂ ಎಲ್ಲರೂ ಮಾಡುತ್ತಿದ್ದರು. ಅಥವಾ ಪ್ರತ್ಯೇಕವಾಗಿ ಮಾಡುತ್ತಿದ್ದರೂ ಅದು ಸ್ವಲ್ಪ ಅವಧಿಗಷ್ಟೇ. ಆಹಾರ ಸೇವನೆ, ವಿರಾಮದ ವೇಳೆಯನ್ನೆಲ್ಲ ಎಲ್ಲರೂ ಒಟ್ಟಾಗಿಯೇ ಕಳೆಯುತ್ತಿದ್ದರು. ಹಾಗಾಗಿ ಹೆಂಗಸರಿಗಷ್ಟೇ ಮಾತಿನ ಕಲೆ ಕರಗತಗೊಂಡಿತು ಅನ್ನೋದು ತಪ್ಪು. ಆ ಮಿಥ್ಯೆಯನ್ನು ಹೋಗಲಾಡಿಸುವ ಉದ್ದೇಶದಿಂದ ಸುಮಾರಷ್ಟು ಸಂಶೋಧನಾ ಪ್ರಬಂಧಗಳು, ಲೇಖನಗಳು, ಸಾಕ್ಷ್ಯಚಿತ್ರಗಳು ಬಂದವು. ಅಮೆರಿಕದ ವಿಸ್ಕಾನ್ಸಿನ್ ವಿಶ್ವವಿದ್ಯಾಲಯದಲ್ಲಿ ಸೈಕಾಲಜಿಸ್ಟ್ ಆಗಿರುವ ಡಾ. ಜೆನೆಟ್ ಹೈಡ್ ಎಂಬಾಕೆ ‘ದಿ ಜೆಂಡರ್ ಸಿಮಿಲಾರಿಟೀಸ್ ಹೈಪೊಥಿಸಿಸ್’ ಎಂಬ ಪ್ರೌಢಪ್ರಬಂಧ ಮಂಡಿಸಿ ತಾನು ಕೈಗೊಂಡ 47 ಬೇರೆಬೇರೆ ಸಮೀಕ್ಷೆಗಳಿಂದ ಸಂಗ್ರಹಿಸಿದ ಫಲಿತಾಂಶಗಳನ್ನು ಕ್ರೋಡೀಕರಿಸಿದಳು. ಅವಳ ಅಂಕಿ‌ಅಂಶಗಳಿಂದ ತಿಳಿದು ಬಂದದ್ದೆಂದರೆ: ವಾಚಾಳಿತನದಲ್ಲಿ ಹೆಂಗಸರಿಗೂ ಗಂಡಸರಿಗೂ ಇರುವ ಅಂತರ 0.11 ಪ್ರತಿಶತ ಅಷ್ಟೇ. ಅದು ತೀರಾ ನಗಣ್ಯ ವ್ಯತ್ಯಾಸ. ಆದ್ದರಿಂದ ವ್ಯಕ್ತಿಯ ಲಿಂಗಕ್ಕೂ ವಾಚಾಳಿತನಕ್ಕೂ ಸಂಬಂಧವಿಲ್ಲ.

2007ರಲ್ಲಿ ಇನ್ನೂ ಒಂದು ಸಂಶೋಧನೆಯ ಫಲಿತಾಂಶ ಹೊರಬಂತು. 17ರಿಂದ 30 ವಯಸ್ಸಿನ ವಿದ್ಯಾರ್ಥಿಗಳ ಆರು ಪ್ರತ್ಯೇಕ ಗುಂಪುಗಳನ್ನು- ಟೆಕ್ಸಾಸ್‌ನಲ್ಲಿ ಐದು ಮತ್ತು ಮೆಕ್ಸಿಕೋದಲ್ಲಿ ಒಂದು- ಸಮೀಕ್ಷಾರ್ಥಿಗಳಾಗಿ ಗುರುತಿಸಲಾಯ್ತು. ಒಟ್ಟು 396 ವಿದ್ಯಾರ್ಥಿಗಳು. 210 ಹುಡುಗಿಯರು, 186 ಹುಡುಗರು. ರೇಡಿಯೊ ಕಾಲರ್ ಅಳವಡಿಸಿದಂತೆ ಅವರ ದೇಹಕ್ಕಂಟಿಸಿದ ಟೇಪ್‌ರೆಕಾರ್ಡರ್‌ಗಳಿಂದ ಅವರ ದೈನಂದಿನ ಚಟುವಟಿಕೆಗಳ ಸಮಯದ ಮಾತುಕತೆಯನ್ನು ಧ್ವನಿಮುದ್ರಿಸಿಕೊಳ್ಳಲಾಯ್ತು. ಇದನ್ನು ಒಂದು ವಾರದ ಅವಧಿಯಲ್ಲಿ ಮಾಡಲಾಯ್ತು. ಫಲಿತಾಂಶಗಳನ್ನು ತಾಳೆ ನೋಡಿದಾಗ ಹುಡುಗಿಯರು ದಿನಕ್ಕೆ ಸರಾಸರಿ 16,215 ಪದಗಳನ್ನಾಡಿದ್ದರೆ ಹುಡುಗರ ಸಂಖ್ಯೆ 15,669 ಪದಗಳು. ಅತಿಹೆಚ್ಚು ಮಾತಾಡಿದ್ದ ಮತ್ತು ಅತಿಕಡಿಮೆ ಮಾತಾಡಿದ್ದ ಹುಡುಗರ ಪದಗಳ ಸಂಖ್ಯೆಗೆ ಹೋಲಿಸಿದರೆ ಆ 500 ಚಿಲ್ರೆ ಪದಗಳ ವ್ಯತ್ಯಾಸ ನಗಣ್ಯ. ಅಷ್ಟೇ ಅಲ್ಲ ಅತ್ಯಂತ ವಾಚಾಳಿ ವಿದ್ಯಾರ್ಥಿ ಒಬ್ಬ ಹುಡುಗನೇ ಆಗಿದ್ದ, 47,000 ಪದಗಳ ಟ್ಯಾಲಿಯೊಂದಿಗೆ!

ಇಷ್ಟಾದರೂ ಲೋಕರೂಢಿಯ ಮಾತು ಹಾಗೆಯೇ ಉಳಿದಿದೆ. ಹೆಂಗಸರೇ ಹೆಚ್ಚು ವಾಚಾಳಿಗಳು ಎನ್ನುವುದೇ ದೃಢವಾಗಿಬಿಟ್ಟಿದೆ. ಅದಕ್ಕೆ ಕಾರಣಗಳೂ ಇಲ್ಲದಿಲ್ಲ. ಹೆಂಗಸರೇ ಹೇಳುವ ಒಂದು ಪ್ರಬಲ ಕಾರಣವೆಂದರೆ “ಏನು ಮಾಡೋಣ? ನಾವು ಒಮ್ಮೆ ಹೇಳಿದರೆ ಈ ಗಂಡಸರಿಗೆ ಅರ್ಥವಾಗೋದೇ ಇಲ್ಲ!” ಅದನ್ನೇ ಗಂಡಸರು ಈರೀತಿ ಹೇಳುತ್ತಾರೆ- ಹೆಂಗಸರ ಮಾತುಗಳಲ್ಲಿ ಅರ್ಥವಿಲ್ಲದ್ದು, ಒಂದಕ್ಕೊಂದು ಸಂಬಂಧವಿಲ್ಲದ್ದೇ ಹೆಚ್ಚು. ಮನಸ್ಸಲ್ಲಿ ಏನೋ ಇರುತ್ತದೆ, ಮಾತಾಡುವುದು ಬೇರೆ ಇನ್ನೇನೋ! ಇನ್ನೊಂದು ಪಂಗಡದ ವಾದ- ನಾವು ಗಂಡಸರು ಮಾತಾಡುವ ಮೊದಲು ತಲೆ ಉಪಯೋಗಿಸುತ್ತೇವೆ ಹಾಗಾಗಿ ಕಡಿಮೆ ಮಾತು ಸಾಕಾಗುತ್ತದೆ. ಹೆಂಗಸರು ತಲೆ ಉಪಯೋಗಿಸುವುದಿರಲಿ ಅಂಥದೊಂದು ಅಂಗ ಇದೆ ಎನ್ನುವುದನ್ನೇ ಮರೆಯುತ್ತಾರೆ!

ಹೆಂಗಸರು ಮತ್ತು ಗಂಡಸರು ಒಟ್ಟಿಗೆ ಇರುವಾಗ (ಸೋಶಿಯಲ್ ಗ್ಯಾದರಿಂಗ್‌ಗಳಲ್ಲಿ, ಹಾಗೆಯೇ ಆಫೀಸ್ ಮೀಟಿಂಗ್‌ಗಳಲ್ಲಿ) ಗಂಡಸರೇ ಹೆಚ್ಚು ಮಾತಾಡುತ್ತಾರೆ ಎನ್ನುವ ವಾದವೂ ಇದೆ. ಮಾತಿನ ಪ್ರಮಾಣ ಅಲ್ಲದಿದ್ದರೂ ಮಾತಿನ ಸರಕಿನಲ್ಲಿ ವ್ಯತ್ಯಾಸ ಖಂಡಿತ ಇರುತ್ತದೆ. ಮದುವೆ-ಮುಂಜಿ ಮತ್ತಿತರ ಸಮಾರಂಭಗಳಲ್ಲಿ ಸೇರಿದಾಗ ಗಂಡಸರು ಲೋಕಾಭಿರಾಮ ಮಾತಾಡುತ್ತಾರೆ- ಹಣದುಬ್ಬರ, ರಿಯಲ್‌ಎಸ್ಟೇಟ್ ಬೆಲೆ, ಶೇರುಪೇಟೆ, ನಿರುದ್ಯೋಗ, ಭ್ರಷ್ಟಾಚಾರ ಮುಂತಾಗಿ ಅಮೂರ್ತ ವಿಚಾರಗಳ ಬಗ್ಗೆಯೇ ಗಂಡಸರ ಮಾತು. ಅಣ್ಣಾ ಹಜಾರೆ, ತೆಂಡುಲ್ಕರ್‌ರಂಥ ವ್ಯಕ್ತಿಗಳ ಪ್ರಸ್ತಾಪವೂ ಅಲ್ಲಿ ಬರಬಹುದಾದರೂ ಅದು ನಿರಶನ ಸತ್ಯಾಗ್ರಹ, ಸೆಂಚುರಿಗಾಗಿ ಪರದಾಟದಂಥ ಅಮೂರ್ತ ವಿಷಯಕ್ಕೆ ಸಂಬಂಧಿಸಿದಂತೆಯೇ. ಆದರೆ ಹೆಂಗಸರು ಹಾಗಲ್ಲ. ಅವರ ಮಾತು ಯಾವಾಗಲೂ ಜನರ ಬಗ್ಗೆಯೇ (ತಾನು, ತನ್ನವರು, ತನಗಾಗದವರು ವಗೈರಾ). ಅಲ್ಲಿ ಭಾವನೆಗಳಿಗೆ ಹೆಚ್ಚು ಒತ್ತು. ಮತ್ತೆ, ಟಿ.ವಿ ಧಾರಾವಾಹಿಗಳಲ್ಲಿ ತೋರಿಸುವಂತೆ ಮನೆಹಾಳು ಮಾಡುವ, ಸಂಸಾರ ಮುರಿದು ಬೀಳಿಸುವ ಮಾತುಗಳೂ ಇರುತ್ತವೆನ್ನಿ. ಒಟ್ಟಿನಲ್ಲಿ ಮಾತಿನ ‘ಕ್ವಾಲಿಟಿ’ಯು ಸ್ವಲ್ಪಮಟ್ಟಿಗಾದರೂ ಮಾತಿನ ‘ಕ್ವಾಂಟಿಟಿ’ಯನ್ನು ನಿರ್ಧರಿಸುತ್ತದೆಂಬ ಅಂಶವನ್ನೂ ಅಲ್ಲಗಳೆಯುವಂತಿಲ್ಲ. ಇನ್ನೂ ಒಂದೆಂದರೆ ಪ್ರತಿಯೊಬ್ಬರೂ ತಂತಮ್ಮ ವೈಯಕ್ತಿಕ ಅನುಭವದಿಂದ ಹೇಳುತ್ತಾರೆ. ವೈಯಕ್ತಿಕ ಅನುಭವಗಳು ಒಟ್ಟು ಸಮುದಾಯದ, ಒಟ್ಟು ಜನಸಂಖ್ಯೆಯ ಸರಾಸರಿ ಮಟ್ಟದಲ್ಲಿ ಇರುತ್ತವೆಂದು ನಿರೀಕ್ಷಿಸಲೂಬಾರದು, ಅಪೇಕ್ಷಿಸಲೂಬಾರದು.

ಅದೆಲ್ಲ ಏನೇ ಇರಲಿ, ಯಾರ ಮಾತು ಹೆಚ್ಚು ಅಂತಾಗಲೀ ಯಾರದು ಹೆಚ್ಚು ಮಾತು ಅಂತಾಗಲೀ ಜಗಳವೇಕೆ? ಮಾತು ಬಲ್ಲವನಿ(ಳಿ)ಗೆ ಜಗಳವಿಲ್ಲ. ಸಂಕ್ರಾಂತಿ ಬೇರೆ ಬರುತ್ತಿದೆ, ಎಳ್ಳುಬೆಲ್ಲ ತಿಂದು ಒಳ್ಳೆಯ ಮಾತುಗಳನ್ನೇ ಆಡುವುದನ್ನು ಅಭ್ಯಾಸಮಾಡಿಕೊಳ್ಳೋಣ.

* * *

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

"Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!

Podbean App

Play this podcast on Podbean App