Episodes

Saturday Nov 05, 2011
Alliteration Everywhere
Saturday Nov 05, 2011
Saturday Nov 05, 2011
ದಿನಾಂಕ 06 ನವೆಂಬರ್ 2011ರ ಸಂಚಿಕೆ...
ಎಲ್ಲಿಂದ ಎಲ್ಲಿಗೆ ಎಲ್ಲಿಟರೇಷನ್!
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] * * * ಕಳೆದವಾರ ವೇಸ್ಟ್ ಲೇಖನದ ಕೊನೆಯ ವಾಕ್ಯ ಬೇರೆಬೇರೆ ಓದುಗರನ್ನು ಬೇರೆಬೇರೆ ಕಾರಣಗಳಿಂದ ಆಕರ್ಷಿಸಿದೆ. ಅದೊಂಥರ ಪಂಚ್ಲೈನ್ ರೀತಿಯಲ್ಲಿ ಖುಷಿಕೊಡ್ತು ಎಂದು ಬಹಳಷ್ಟು ಜನರು ಪ್ರತಿಕ್ರಿಯಿಸಿದ್ದಾರೆ. ಬೂಕಿನಕೆರೆ ಅಲ್ಲ ಬೂಕನಕೆರೆ ಅಂತಿರಬೇಕಿತ್ತು ಎಂದು ತಿದ್ದುಪಡಿ ತಿಳಿಸಿದವರಿದ್ದಾರೆ. ಯಡ್ಯೂರಪ್ಪನವರನ್ನು ಏಕವಚನದಲ್ಲಿ ಗುರುತಿಸಿದ್ದು ಒಳ್ಳೆಯದೆನಿಸಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದವರೂ ಇದ್ದಾರೆ. ಸೊರಬದಿಂದ ರಂಗನಾಥ ಬಾಪಟ್ ಬರೆದಿದ್ದಾರೆ- “ತೀರಾ ಬೂಕನಕೆರೆಯವನ ಅಂತ ಬರೆಯುವುದು ವಿಕದಂಥ ಪತ್ರಿಕೆಗೆ, ಪರಾಗಸ್ಪರ್ಶದಂಥ ಅಂಕಣಕ್ಕೆ ಚೆನ್ನಾಗಿ ಕಾಣೋಲ್ಲ. ಹಾಗೆ ಬರೆಯಲು ಬೇರೆ ಪತ್ರಿಕೆಗಳಿದ್ದಾವೆ. ನಿಮಗೆ ಗೊತ್ತಿರಬಹುದು, ಕಾರ್ಯದರ್ಶಿ ಬರೆದುಕೊಟ್ಟ ಮೆಮೊರಾಂಡಮ್ನಲ್ಲಿ ‘ಇಂದಿರಾ, ಜವಾಬ್ ದೋ’ ಅಂತಿದ್ದದ್ದನ್ನು ವಾಜಪೇಯಿಯವರು ಓದುವಾಗ ‘ಇಂದಿರಾಜೀ ಜವಾಬ್ ದೀಜಿಯೇ’ ಎಂದು ತಿದ್ದಿಕೊಂಡು ಓದಿದ್ದರಂತೆ.” ಹಾಗೆ ನೀವೂ ತಿದ್ದಿಕೊಂಡು ಓದಿ ಎಂದು ನಾನಿಲ್ಲಿ ಹೇಳುತ್ತಿಲ್ಲ. ಏಕವಚನದಲ್ಲಿ ಬರೆದದ್ದೇ ಸರಿ ಎಂದು ಉಡಾಫೆ ತೋರಿಸುತ್ತಲೂ ಇಲ್ಲ. ನಾನು ಆ ವಾಕ್ಯವನ್ನು ಬರೆದದ್ದು ಯಡ್ಯೂರಪ್ಪನವರಿಗೆ ಅಗೌರವ ಸೂಚಿಸಬೇಕೆಂಬ ಅಜೆಂಡಾ ಇಟ್ಟುಕೊಂಡು ಅಲ್ಲ. ಅಲ್ಲೊಂದು ಪದವಿನೋದ ಇತ್ತು. ಬಾಕ್ಸ್ಟರ್, ಬಿಜಿನೆಸ್, ಬೂಕನಕೆರೆ ಮತ್ತು ಬೆರಳಸಂಕೇತ ಈ ನಾಲ್ಕೂ ಪದಗಳು ಬಕಾರದಿಂದಲೇ (ಬಾ ಬಿ ಬೂ ಬೇ) ಆರಂಭವಾಗಿದ್ದವು. ಹೀಗೆ ವಾಕ್ಯದ ಎಲ್ಲ ಪದಗಳೂ ಒಂದೇ ಅಕ್ಷರ/ಉಚ್ಚಾರದಿಂದ ಆರಂಭವಾದರೆ ಅದನ್ನು ‘ಅನುಪ್ರಾಸ’ ಎನ್ನುತ್ತಾರೆ. ಇಂಗ್ಲಿಷ್ನಲ್ಲಿ alliteration ಎಂದು ಹೆಸರು. ತತ್ಕ್ಷಣಕ್ಕೆ ನೆನಪಾಗುವುದೆಂದರೆ ಅತಿಪ್ರಸಿದ್ಧ ಇಂಗ್ಲಿಷ್ ಎಲ್ಲಿಟರೇಷನ್ ವಾಕ್ಯ Peter piper picked a peck of pickled peppers. ಇನ್ನೊಂದು, ಎಲ್ಲಿಟರೇಷನ್ ಆಗಿದ್ದರೂ ಹೃಸ್ವ ರೂಪದಲ್ಲೇ ಪ್ರಖ್ಯಾತವಾಗಿ ಜಗದಗಲ ಹರಡಿರುವ world wide web (www). ಅದರ ಕೃಪೆಯಿಂದಲೇ ನನಗೆ ಗೊತ್ತಾದದ್ದು, ಏನೆಂದರೆ ಆ ‘ಪೀಪಿಯೂದುವ ಪೀಟರನ ಪಚ್ಚಡಿ ಪೀಕಲಾಟದ ಪದವಿನೋದ’ ಹುಟ್ಟಿದ್ದು ಜಾನ್ ಹಾರ್ರಿಸ್ (1756-1846) ಎಂಬಾತ ಬರೆದ Peter Piper's Practical Principles of Plain and Perfect Pronunciation ಪುಸ್ತಕದಲ್ಲಿ! ಅನುಪ್ರಾಸ ನನಗೆ ತುಂಬಾ ಇಷ್ಟ. ಅಂಕಣದ ತಲೆಬರಹ ಅಲಂಕರಣಕ್ಕೆ ನಾನು ಆಗಾಗ ಅನುಪ್ರಾಸ ಬಳಸುತ್ತೇನೆ. ‘ತವರೂರಿಂದ ತಿಂಡಿ ತರುವಾಗ ತರಾವರಿ ತೊಂದರೆ’, ‘ಬಿಳಿಮನೆಯೂರಿನಲ್ಲಿ ಬಾಡಿಗೆ ಬೈಸಿಕಲ್’, ‘ಮಧ್ಯರಾತ್ರಿ ಮೈಸೂರುಪಾಕ್ ಮೆಲ್ಲುವಾಸೆ’, ‘ಚೆಲುವಗನ್ನಡದಲ್ಲಿ ಚಿತ್ರಕಾವ್ಯದ ಚಮತ್ಕಾರ’, ಮತ್ತು ಇತ್ತೀಚೆಗಿನ ‘ಮತ್ತೂಮತ್ತೂ ಮನಸ್ಸಲ್ಲುಳಿವ ಮತ್ತೂರಜ್ಜ’ ಮುಂತಾದ ಶೀರ್ಷಿಕೆಗಳು ನಿಮಗೆ ನೆನಪಿರಬಹುದು. ಈರೀತಿ ಎಲ್ಲಿಟರೇಷನ್ ರಚಿಸುವುದೊಂದೇ ಅಲ್ಲ, ಸಾಹಿತ್ಯದಲ್ಲಿ, ಆಡುಮಾತಿನಲ್ಲಿ ಅಲ್ಲಲ್ಲಿ ಕಾಣಸಿಗುವ ಎಲ್ಲಿಟರೇಷನ್ಅನ್ನು ಗುರುತಿಸಿ ಆನಂದಿಸುವುದು ಸಹ ನನಗೆ ಇಷ್ಟವೇ. ಇವತ್ತು ಆ ‘ಚಟ’ವನ್ನು ನಿಮಗೂ ತಗುಲಿಸಬೇಕೆಂದು ಒಂದು ಚಿಕ್ಕ ಬಯಕೆ. ಅದಕ್ಕೋಸ್ಕರ ಅಂಕಣವಿಡೀ ಅನುಪ್ರಾಸದ ಅಳವಡಿಕೆ.
ಎಲ್ಲಿಟರೇಷನ್ ಎಲ್ಲಿದೆ ಎಂಬ ಹುಡುಕಾಟವನ್ನು ನೀವು ಕನ್ನಡ ಸಿನೆಮಾ ಹೆಸರುಗಳ ಮೇಲೊಮ್ಮೆ ಕಣ್ಣಾಡಿಸಿ ಆರಂಭಿಸಬೇಕು. ಚೂರಿ ಚಿಕ್ಕಣ್ಣ, ಬೀದಿ ಬಸವಣ್ಣ, ಸರ್ವರ್ ಸೋಮಣ್ಣ, ಬೇಡಿ ಬಂದವಳು, ಪಾಯಿಂಟ್ ಪರಿಮಳ, ಬೆಳದಿಂಗಳ ಬಾಲೆ, ಜನುಮದ ಜೋಡಿ, ಗಜಪತಿ ಗರ್ವಭಂಗ, ಪಡುವಾರಳ್ಳಿ ಪಾಂಡವರು, ತಿಪ್ಪಾರಳ್ಳಿ ತರ್ಲೆಗಳು, ದೇವರ ದುಡ್ಡು, ಸಂಪತ್ತಿಗೆ ಸವಾಲ್, ಮಲಯ ಮಾರುತ, ಮುಂಗಾರು ಮಳೆ, ಮನೆಯೇ ಮಂತ್ರಾಲಯ... ಒಂದೇ ಎರಡೇ! ಹೌದು ಬರೀ ಎರಡೇ ಪದಗಳಾದರೂ ಅವು ಅನುಪ್ರಾಸಬದ್ಧ. ಮುಂದೆ ಮೂರು ಪದಗಳ ಹೆಸರುಗಳನ್ನೂ ಗಮನಿಸಬಹುದು. ಕರುಣೆಯೇ ಕುಟುಂಬದ ಕಣ್ಣು, ಪ್ರೀತಿ ಪ್ರೇಮ ಪ್ರಣಯ, ಮನ ಮೆಚ್ಚಿದ ಮಡದಿ, ಮಸ್ತ್ ಮಜಾ ಮಾಡಿ, ಸುಬ್ಬಿ ಸುಬ್ಬಕ್ಕ ಸುವ್ವಲಾಲಿ.
ಸಿನೆಮಾ ಹೆಸರುಗಳ ನಂತರ ಚಿತ್ರಗೀತೆಗಳ ಸಾಲುಗಳನ್ನೂ ಸೂಕ್ಷ್ಮವಾಗಿ ಗಮನಿಸಬೇಕು. ಅವುಗಳಲ್ಲಿನ ಅನುಪ್ರಾಸ ಆಲಿಸಿದರೆ ಮುಖದಲ್ಲಿ ಮಂದಹಾಸ. ಬಂಕಾಪುರದ ಬೆಂಕಿಚೆಂಡು ಬಹದ್ದೂರ್ಗಂಡು, ತುಂಬುತ ತುಳುಕುತ ತೀಡುತ ತನ್ನೊಳು ತಾನೇ, ತರವಲ್ಲ ತಗಿನಿನ್ನ ತಂಬೂರಿ, ಕಂಡೊಡನೆ ಕರಪಿಡಿದು ಕಲ್ಪಿಸದಾಸುಖ ಕೊಡುವ, ನಾನಿರುವುದೇ ನಿಮಗಾಗಿ ನಾಡಿರುವುದು ನಮಗಾಗಿ, ಪಂಚರಂಗಿ ಪೊಂವ್ ಪೊಂವ್! ಒಂದೇ ಹಾಡಿನ ಎಲ್ಲಿಟರೇಷನ್ ಸಾಲದಿದ್ದರೆ ಎರಡು ಹಾಡುಗಳನ್ನು ಕಸಿ ಕಟ್ಟಿ ನೋಡಿ. ಆಗ ಡಬಲ್ ಧಮಾಕಾ- ಕನ್ನಡದ ಕುಲದೇವಿ ಕಾಪಾಡು ಬಾತಾಯೆ ಭಾರತಿಯೆ ಭಾವ ಭಾಗೀರಥಿಯೆ!
ಇನ್ನು, ಕನ್ನಡ ಸಾಹಿತ್ಯದತ್ತ ಹೊರಳಿದರೆ ಅಲ್ಲಿಯೂ ನಮಗೆ ಅನುಪ್ರಾಸದ ಸುಗ್ರಾಸ ಸಿಗುತ್ತದೆ. ರಾಜರತ್ನಂ ತುತ್ತೂರಿ ‘ಕಾಸಿಗೆ ಕೊಂಡನು ಕಸ್ತೂರಿ’, ಸಿದ್ದಯ್ಯ ಪುರಾಣಿಕರ ಅಜ್ಜನ ಕೋಲು ‘ಕಾಥೇವಾಡದಿ ಕಾಣದ ಕುದುರೆ’. ಕಯ್ಯಾರ ಕಿಞಣ್ಣನವರ ‘ಕಾಮನಬಿಲ್ಲು ಕಮಾನು ಕಟ್ಟಿದೆ’. ಬೇಂದ್ರೆಯವರ ‘ಕರಿಮರಿನಾಯಿ ಕುಂಯಿಗುಡುತ್ತಿತ್ತು’, ‘ಕುರುಡು ಕಾಂಚಾಣ ಕುಣಿಯುತಲಿತ್ತು’. ಕರಡಿ ಕುಣಿತದಲ್ಲಂತೂ ‘ಕಬ್ಬಿಣ ಕೈಕಡಗ ಕುಣಿಗೋಲು ಕೂದಲು ಕಂಬಳಿ (ಹೊದ್ದಾಂವ ಬಂದಾನ...)’ ಸರದಿಯಲ್ಲಿ ಐದು ಪದಗಳು ಕಕಾರದವು. ಎಷ್ಟೆಂದರೂ ಬದುಕಲ್ಲಿ ಬೆಂದರೆ ಬೇಂದ್ರೆ, ಹಾಗಾಗಿ ಅವರ ಕುಲುಮೆಯಲ್ಲಿ ಎಂತೆಂಥ ಪದಗಳೂ ಥಳಥಳನೆ ಹೊಳೆಯುತ್ತವೆ. ಕವಿಶೈಲದ ಕವಿಋಷಿ ಕುವೆಂಪು ಕೂಡ ಕಮ್ಮಿಯೇನಲ್ಲ, ‘ಕುರಿನೆಗೆದಾಟ ಕುರುಬರ ಕೊಳಲಿನೂದಾಟ’ದಿಂದ ವಸಂತನನ್ನು ಸ್ವಾಗತಿಸಿದವರು. ‘ಮೂಡಣದಾದಿಗಂತದಿ ಮೂಡುವೆಣ್ಣಿನ ಮೈಸಿರಿ’ಯನ್ನು ಮೆರೆಸಿದವರು.
ಆದರೆ ಕನ್ನಡದ ಸಂದರ್ಭದಲ್ಲಿ ಅನುಪ್ರಾಸದ ಅನಭಿಷಿಕ್ತ ಅರಸ ಎನ್ನಬೇಕಾದ್ದು ಟಿಪಿಕಲ್ ಟಿ.ಪಿ.ಕೈಲಾಸಂ ಅವರನ್ನು. ಪ್ರಹಸನ ಪ್ರಪಿತಾಮಹ ಕನ್ನಡಕ್ಕೊಬ್ಬರೇ ಕೈಲಾಸಂ ಎನಿಸಿದ ಗ್ರೇಟ್ ಮನುಷ್ಯನನ್ನು. ಅವರ ನಾಟಕಗಳ ಹೆಸರಿನಿಂದ ಹಿಡಿದು ಪಾತ್ರಗಳು, ಡೈಲಾಗುಗಳು ಎಲ್ಲ ಎಲ್ಲಿಟರೇಷನ್ಮಯ. ಬಂಡ್ವಾಳ್ವಿಲ್ಲದ್ ಬಡಾಯಿ, ಸೀಕರ್ಣೆ ಸಾವಿತ್ರಿ, ಹರಿಶ್ಚಂದ್ರನ ಹಿಂಸಾ, ಮೊಮ್ಮಗಳ ಮುಯ್ಯಿ, ವೈದ್ಯನ ವ್ಯಾಧಿ. ಟೆರ್ರಿಬಲ್ ಟಂಗು... ಮೆಟಾಲಿಕ್ ಮೌತು... ನನ್ ನಾಲ್ಗೆಗ್ ನರವೇಇಲ್ಲ... ಕಾಪಿ ಕುಡ್ಯೋದು ಕಾದಾಡೋದು... ಕಿರಾತಕಿ! ಕುಟುಂಬ ಕುಟುಂಬಗಳ್ನೇ ಕುಲ ಕುಲಗಳ್ನೇ ಕೊಂಪೆ ಕೊಂಪೆಗಳ್ನೇ ಕಿಚ್ಚಿಗಾಕ್ದ್ಲು! ಹದ್ದಿನ್ ಹೊಟ್ಟೇಲ್ ಹುಟ್ಸಿದ್ರಿ... ನೋಡಿವ್ರಾ ನಮ್ ನಂಜೀನವ ನಮ್ಗಜ ನಿಂಬೇ ನಂಜೀನವ?
ಹೀಗೆ ಹುಡುಕಿದರೆ ಎಲ್ಲೆಲ್ಲೂ ಇದೆ ಎಲ್ಲಿಟರೇಷನ್. ಚಹಾದಜೋಡಿ ಚೂಡಾದ್ಹಂಗ ರುಚಿರುಚಿಯಾಗಿದೆ, ಚೂಡಾ ಮಾತ್ರ ಸಾಕಾಗದಿದ್ದರೆ ಚಕ್ಕುಲಿ ಚಿರೋಟಿ ಚುರುಮುರಿ ಚೌಚೌ ಚಂಪಾಕಲಿಯಂತೆಯೂ ಚಪ್ಪರಿಸಬಹುದಾಗಿದೆ. ಏಕೆಂದರೆ ಎಲ್ಲಿಟರೇಷನ್ ‘ಕಪ್ಪು ಕಾಗೆ ಕೆಂಪು ಕುಂಕುಮ’ದಂಥ ನಾಲಿಗೆಹೊರಳು (ಟಂಗ್ಟ್ವಿಸ್ಟರ್)ಗಳಲ್ಲೂ ಇದೆ, ‘ಎರಡೆತ್ತೆಮ್ಮೆಯಮರಿ ಎರಡೆರಡಾಡಿನಮರಿ ಎರಡು’ ಮಾದರಿಯ ಜನಪದ ಒಡಪುಗಳಲ್ಲೂ ಇದೆ. ‘ರಾಜಾಜಿನಗರದ ರಾಜ್ಕುಮಾರ್ ರಸ್ತೆಯಲ್ಲಿ ರೋಡ್ ರೋಲರ್ ರಂಪಾಟ’ದಲ್ಲೂ ಇದೆ, ‘ಹೊಸನಗರದ ಹತ್ತಿರ ಹಾಲ್ಕೊಳವೆಂಬ ಹೋಬಳಿಯ ಹಟ್ಟಿ ಹನುಮಪ್ಪ ಹೆಂಡತಿ ಹೂವಮ್ಮನ ಹಾಳು ಹರಟೆಗೆ ಹೂಂಗುಟ್ಟು’ವುದರಲ್ಲೂ ಇದೆ. ‘ಪರೋಪಕಾರಾಯ ಪುಣ್ಯಾಯ ಪಾಪಾಯ ಪರಪೀಡನಂ’ನಂಥ ಉಪದೇಶಾಮೃತದಲ್ಲೂ ಇದೆ, ಕೊನೆಗೆ ಭಗವಂತನ ನಾಮಸ್ಮರಣೆಯ ವಿಷ್ಣುಸಹಸ್ರನಾಮ ಸ್ತೋತ್ರದಲ್ಲೂ ಇದೆ- ‘ಸುವ್ರತ ಸುಮುಖ ಸೂಕ್ಷ್ಮಃ ಸುಘೋಷ ಸುಖದ ಸುಹೃತ್..., ವೃಷಾಹೀ ವೃಷಭೋ ವಿಷ್ಣುಃ ವೃಷಪರ್ವ ವೃಷೋದರಃ ವರ್ಧನೋ ವರ್ಧಮಾನಶ್ಚ ವಿವಿಕ್ತಶ್ರುತಿಸಾಗರಃ||’
ನನಗೀಗ ಕೊಂಚ ಭಯವೂ ಆಗುತ್ತಿದೆ. ಎಲ್ಲಿಟರೇಷನ್ ಹೆಸರಿನಲ್ಲಿ ಇವತ್ತಿನ ಲೇಖನದಲ್ಲಿ ಸಿಕ್ಕಾಪಟ್ಟೆ ಕನ್ನಡೇತರ ಪದಗಳೂ ಸೇರಿಕೊಂಡಿವೆ. ನವೆಂಬರ್ ತಿಂಗಳು ಬೇರೆ. “ಕರುನಾಡಲಿ ಕಾಲಿಟ್ಟು ಕಪಟಾಟ್ಟಹಾಸದಿ ಕನ್ನಡವ ಕೊಲ್ಲುವ ಕುನ್ನಿಗಳು. ಕಸ್ತೂರಿ ಕನ್ನಡದ ಕಂಪನರಿಯದ ಕಣ್ಣಿರುವ ಕುರುಡರು. ಕನ್ನಡಾಂಬೆ ಕೇಳಲಾರೆನೀ ಕರ್ಕಷ ಕಹಳೆ ಕಾಪಾಡು ಕಾಪಾಡು!” ಎಂದು ಯಾರಾದರೂ ಕನ್ನಡಾಭಿಮಾನಿಗಳು ಕೂಗೆಬ್ಬಿಸಿದರೆ ಕಷ್ಟ. ಆದರೂ, ಇವತ್ತಿನ ಶೀರ್ಷಿಕೆ ಆ ರೀತಿ ಇರುವುದಕ್ಕೆ ನ್ಯಾಯ ಸಲ್ಲಿಸಬೇಕೆಂದು ಒಂದು ಚಂದದ ಎಲ್ಲಿಟರೇಷನ್ ಇಂಗ್ಲಿಷ್ನದನ್ನೇ ಉಲ್ಲೇಖಿಸಿ ಮುಗಿಸುತ್ತೇನೆ. ಇದು ಇಂಗ್ಲಿಷ್ ಅಕ್ಷರ ಎಲ್ಇಂದ ಎಲ್ಇಗೆ ಎಲ್ಲಿಟರೇಷನ್: Low lying land lets leaking liquid linger longer.
ಈಗಿನ್ನು ನಿಮ್ಮ ತಲೆಯಲ್ಲಿ ಎಲ್ಲಿಟರೇಷನ್ ಗುಂಗಿಹುಳ ಎಷ್ಟು ದಿನ ಗುಂಯ್ಗುಟ್ಟುತ್ತಿರುತ್ತದೋ ನೋಡಬೇಕು!
* * *
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.]
"Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!
Saturday Oct 29, 2011
Waste Management
Saturday Oct 29, 2011
Saturday Oct 29, 2011
ದಿನಾಂಕ 30 ಅಕ್ಟೋಬರ್ 2011ರ ಸಂಚಿಕೆ...
ಗಣಿ, ಸಗಣಿ ಎಲ್ಲ ‘ವೇಸ್ಟ್ ಕೇಸ್’ಗಳೇ
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] * * * ರಸವಾರ್ತೆಯಂತೆ ಬಣ್ಣಿಸಲಿಕ್ಕೆ ಹೇಳಿಮಾಡಿಸಿದಂಥ ಸಂಗತಿ. ಮೊನ್ನೆ ಇಲ್ಲಿ ವಾಷಿಂಗ್ಟನ್ನ ಉಪನಗರವೊಂದರಲ್ಲಿ ನಡೆದದ್ದು. ಇಲ್ಲಿನ ಮಾಧ್ಯಮಗಳು ಇದನ್ನು ಸಾಕಷ್ಟು ರಸವತ್ತಾಗಿಯೇ ಕವರ್ ಮಾಡಿದ್ದವು. ನಿಮಗೆ ಕನ್ನಡದಲ್ಲಿ ವಿವರಿಸುವಾಗ ಮತ್ತಷ್ಟು ತಮಾಷೆಯಾಗಿಸಿ ಹೇಳಬೇಕೆನ್ನಿಸಿತು. ಅದಕ್ಕಾಗಿ ಜಿ.ಪಿ.ರಾಜರತ್ನಂ ಬರೆದ ನಾಯಿಮರಿ ಪದ್ಯಕ್ಕೆ ಒಂದು ವಿಚಿತ್ರ ಸಾಲಿನ ಸೇರ್ಪಡೆ ಮಾಡಿದ್ದೇನೆ- “ನಾಯಿಮರಿ ಇಶ್ಶಿ ಹಾಕಿದ್ರೇನು ಮಾಡುವೆ? ಕಾಲು ಕೆರೆದು ಜಗಳವಾಡಿ ಕೋರ್ಟಿಗ್ಹೋಗುವೆ!” ಆದದ್ದಿಷ್ಟೇ: ಕಿಂಬರ್ಲಿ ಎಂಬ ಮಹಿಳೆ ತನ್ನ ಸ್ನೇಹಿತೆ ಪ್ರವಾಸದಲ್ಲಿದ್ದಾಗಲೆಲ್ಲ ಆಕೆಯ ನಾಯಿಮರಿಯನ್ನು ತಾತ್ಕಾಲಿಕವಾಗಿ ತನ್ನ ಮನೇಲಿಟ್ಟುಕೊಳ್ಳುತ್ತಾಳೆ. ಮುದ್ದಾದ ಬಿಳಿಬಣ್ಣದ ಮರಿ. ‘ಬಾಕ್ಸ್ಟರ್’ ಎಂದು ಹೆಸರು. ಕಿಂಬರ್ಲಿ ಅದನ್ನು ದಿನಾಲೂ ವಾಕಿಂಗ್ಗೆ ಕರಕೊಂಡು ಹೋಗುತ್ತಾಳೆ. ಈ ದೇಶದಲ್ಲಿ ಹೇಗಪ್ಪಾ ಅಂದ್ರೆ ನಾಯಿಯನ್ನು ವಾಕಿಂಗ್ಗೆ ಕರಕೊಂಡು ಹೋಗುವವರು ಎರಡು ನಿಯಮಗಳನ್ನು ಕಡ್ಡಾಯ ಪಾಲಿಸಬೇಕು. ಒಂದು, ನಾಯಿಗೆ ಸರಪಳಿ ಕಟ್ಟಿದ್ದಿರಬೇಕು; ಎರಡು, ಮಾಲೀಕನ ಬಳಿ ಖಾಲಿ ಪ್ಲಾಸ್ಟಿಕ್ಚೀಲಗಳಿರಬೇಕು. ನಾಯಿ ‘ಬಿಜಿನೆಸ್’ ಮಾಡಿದ್ರೆ (ನಿಮಗಿದನ್ನು ಓದುವಾಗ ವಾಕರಿಕೆ ಬರಬಾರದೆಂದು, ವಾಷಿಂಗ್ಟನ್ ಪೋಸ್ಟ್ ಪತ್ರಿಕೆ ಬಳಸಿದ ಪದವನ್ನೇ ನಾನೂ ಬಳಸಿದ್ದೇನೆ) ಮಾಲೀಕನೇ ಅದನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಕಸದತೊಟ್ಟಿಯಲ್ಲಿ ಬಿಸಾಡಬೇಕು. ಇಲ್ಲಿ ಬೆಕ್ಕು-ನಾಯಿಗಳನ್ನು ಮಕ್ಕಳಿಗಿಂತಲೂ ಮುದ್ದಾಗಿ ಸಾಕುವವರು ಈ ನಿಯಮಗಳನ್ನು ಯಾವೊಂದು ಬೇಸರವಿಲ್ಲದೆ ಪಾಲಿಸುತ್ತಾರೆ ಕೂಡ.
ಕಿಂಬರ್ಲಿಯ ಪಕ್ಕದಮನೆಯಾಕೆ ಕಾರ್ನೆಲ್, ಸ್ವಲ್ಪ ಘಟವಾಣಿ ಹೆಂಗಸು. ಬೇಕಂತಲೇ ಕಿಂಬರ್ಲಿಗೆ ಆಗಾಗ ಕಿರುಕುಳ ಕೊಟ್ಟು ಸತಾಯಿಸುವವಳು. ಕಳೆದ ಏಪ್ರಿಲ್ನಲ್ಲಿ ಚುಮುಚುಮು ಚಳಿಯ ಒಂದು ಮುಂಜಾನೆ ಕಿಂಬರ್ಲಿ ಬಾಕ್ಸ್ಟರ್ನನ್ನು ವಾಕ್ ಕರಕೊಂಡು ಹೋಗುತ್ತಿದ್ದಾಗ ಅದು ತನ್ನ ಜಾಗೆಯಲ್ಲಿ ‘ಬಿಜಿನೆಸ್’ ಮಾಡ್ತು, ಮತ್ತು ಕಿಂಬರ್ಲಿ ಅದನ್ನು ತೆಗೆಯದೇ ಹಾಗೇ ಬಿಟ್ಟಳು ಎಂದು ಕಾರ್ನೆಲ್ ಕ್ಯಾತೆ ತೆಗೆದಳು. ನಾಯಿಯ ‘ಬಿಜಿನೆಸ್’ ರಾಶಿಯ ಫೋಟೊ ತೆಗೆದಿಟ್ಟಳು. ಕಿಂಬರ್ಲಿ ಆ ದೂರನ್ನು ಅಲ್ಲಗಳೆದಳು. ಕೆರಳಿದ ಕಾರ್ನೆಲ್ ತತ್ಕ್ಷಣವೇ ಪೊಲೀಸ್ ಕಂಪ್ಲೇಂಟ್ ಕೊಟ್ಟಳು. ಡಿಸ್ಟ್ರಿಕ್ಟ್ ಕೋರ್ಟ್ನಲ್ಲಿ ಕೇಸು ದಾಖಲಾಯಿತು. ಜೂನ್ನಲ್ಲೊಂದು ದಿನ ಕೇಸು ವಿಚಾರಣೆಗೂ ಬಂತು. ಕಿಂಬರ್ಲಿಗೆ ಅವತ್ತು ಕಾರಣಾಂತರದಿಂದ ಕೋರ್ಟಿಗೆ ಹಾಜರಾಗುವುದಕ್ಕಾಗಲಿಲ್ಲ. ಅದಕ್ಕಾಗಿ ಕೋರ್ಟು ಅವಳಿಗೆ 250 ಡಾಲರ್ ದಂಡ ವಿಧಿಸಿತು. ಅವಮಾನಗೊಂಡ ಆಕೆ ಸರ್ಕ್ಯೂಟ್ ಕೋರ್ಟ್ನ ಮೊರೆಹೊಕ್ಕಳು. ಮೊನ್ನೆ ಅಕ್ಟೋಬರ್ 25ರಂದು ಸರ್ಕ್ಯೂಟ್ ಕೋರ್ಟ್ನಲ್ಲಿ ನಾಲ್ಕೈದು ಗಂಟೆಗಳ ವಾಗ್ವಾದ ವಿಚಾರಣೆ ನಡೆಯಿತು. ನಾಯಿಯ ಅಸಲಿ ಮಾಲೀಕಳೂ ಕಿಂಬರ್ಲಿ ಪರವಾಗಿ ಸಾಕ್ಷಿ ಹೇಳಿದಳು. “ಬಾಕ್ಸ್ಟರ್ನ ‘ಬಿಜಿನೆಸ್’ನ ಸಾಮಾನ್ಯ ಗಾತ್ರ ರಚನೆ ಹೇಗಿರುತ್ತದೆಂದು ನಾನು ಬಲ್ಲೆ. ಇವತ್ತೂ ಸ್ವಲ್ಪ ಸ್ಯಾಂಪಲ್ ತಂದಿದ್ದೇನೆ, ನನ್ನ ಕಾರ್ನಲ್ಲಿದೆ. ಕಾರ್ನೆಲ್ ತೆಗೆದ ಫೋಟೊದಲ್ಲಿರುವುದು ಬಾಕ್ಸ್ಟರ್ನ ‘ಬಿಜಿನೆಸ್’ ಅಲ್ಲ. ಅಷ್ಟೂ ವಿಶ್ವಾಸವಿಲ್ಲದಿದ್ದರೆ ಕಾರ್ನೆಲ್ ಆ ‘ಬಿಜಿನೆಸ್’ಅನ್ನು ಡಿಎನ್ಎ ಪರೀಕ್ಷೆಗೆ ಗುರಿಪಡಿಸಬೇಕಿತ್ತು. ಆಗಲೂ ಅದು ನಮ್ಮ ಬಾಕ್ಸ್ಟರ್ನದಲ್ಲವೆಂದು ಸಾಬೀತಾಗುತ್ತಿತ್ತು” ಎಂದು ಗುಡುಗಿದಳು. ನ್ಯಾಯಾಧೀಶರಿಗೆ ಮನವರಿಕೆಯಾಗಿ ಕಿಂಬರ್ಲಿಯನ್ನು ನಿರಪರಾಧಿ ಎಂದು ಘೋಷಿಸಿದರು. ಕೆಟ್ಟಬುದ್ಧಿಯ ಕಾರ್ನೆಲ್ ಇನ್ನುಮುಂದೆಯಾದರೂ ತನ್ನ ತಂಟೆಗೆ ಬರಲಾರಳಂತ ಕಿಂಬರ್ಲಿಯ ಆಶಯ.
ಹೀಗೂ ಉಂಟೇ ಎಂದು ನೀವೊಮ್ಮೆ ಹುಬ್ಬೇರಿಸಬಹುದು. ಅಥವಾ, ಅಮೆರಿಕ ಅಲ್ವೇ ಅಲ್ಲಿ ಇಂಥವೆಲ್ಲ ಮಾಮೂಲಿ ಎಂದೂ ಅಂದುಕೊಳ್ಳಬಹುದು. ಅಮೆರಿಕ ಏನು, ಮೊನ್ನೆ ಭಾರತದಲ್ಲಿಯೇ ಪುಣೆಯಲ್ಲಿ ಇಂಥದ್ದೇ ಒಂದು ಕೇಸ್ ಆಗಿತ್ತಂತೆ. ಉದಯವಾಣಿಯಲ್ಲಿ ಆ ಸುದ್ದಿ ಬಂದಿತ್ತು. ಗಣೇಶೋತ್ಸವದ ಮೆರವಣಿಗೆಯಲ್ಲಿ ಟ್ಯಾಬ್ಲೋಗೆ ಬಳಸಿದ್ದ ಗಾಡಿಯ ಎತ್ತು ‘ಸಂದೀಪ್’, ಪಟಾಕಿ ಮತ್ತು ಬ್ಯಾಂಡ್ವಾದ್ಯಗಳ ಗರ್ಜನೆಗೆ ಹೆದರಿ ಸಗಣಿ ಹಾಕಿತ್ತಂತೆ. ಭಕ್ತಾದಿಗಳೆಲ್ಲ ಅದರ ಮೇಲೆ ಕಾಲಿಟ್ಟು ಎಡವಟ್ಟು ಮಾಡ್ಕೊಂಡಿದ್ದರಂತೆ. ಎತ್ತಿನ ಮಾಲೀಕ ಬಾಲುಶೇಕ್ಗೆ ಪೊಲೀಸರು ಶೋಕಾಸ್ ನೋಟೀಸ್ ಕೊಟ್ಟಿದ್ದರಂತೆ. ಆಮೇಲೇನಾಯ್ತು ಅಂತ ವಿವರಗಳಿರಲಿಲ್ಲ. ಸೋ, ಅಮೆರಿಕದಲ್ಲಿ ನಾಯಿಮರಿ ‘ಬಿಜಿನೆಸ್’ನ ಕೇಸ್ ಆಗುವುದು ದೊಡ್ಡ ವಿಷಯವೇ ಅಲ್ಲ. ನಾನಾದರೂ ಅದನ್ನು ದೊಡ್ಡ ವಿಷಯವೆಂದು ಇವತ್ತಿನ ಅಂಕಣಕ್ಕೆ ಆಯ್ದುಕೊಂಡದ್ದೂ ಅಲ್ಲ. ಮತ್ತೇಕೆ? ಮೊನ್ನೆ ಕೇಸ್ ವಿಚಾರಣೆಯ ದಿನ ಮತ್ತು ಅದರ ಮಾರನೇ ದಿನ ವಾಷಿಂಗ್ಟನ್ ಪೋಸ್ಟ್ ಪತ್ರಿಕೆ ಮುಖಪುಟದಲ್ಲಿಯೇ ಈ ವ್ಯಾಜ್ಯದ ಸುದ್ದಿಯನ್ನು ಪ್ರಕಟಿಸಿತ್ತು, ಅದಕ್ಕೆ ‘ವೇಸ್ಟ್ ಕೇಸ್’ ಎಂದು ಪಕ್ಕಾ ಶ್ಲೇಷೆಯ ಶೀರ್ಷಿಕೆಯನ್ನೂ ಕೊಟ್ಟಿತ್ತು. ಆ ‘ವೇಸ್ಟ್ ಕೇಸ್’ ಎಂಬ ಪದಪ್ರಯೋಗವೇ ನನಗೆ ಅತ್ಯಂತ ಸ್ವಾರಸ್ಯಕರವಾಗಿ, ಪರಮಸತ್ಯದಂತೆ ಪ್ರಕಾಶಮಾನವಾಗಿ ಗೋಚರಿಸಿದ್ದು. ಹಾಗಾಗಿಯೇ ಇವತ್ತು ಅದನ್ನು ಪರಾಗಸ್ಪರ್ಶಕ್ಕೆ ವಿಷಯವಾಗಿಸಿದ್ದು!
ವಾಷಿಂಗ್ಟನ್ನಲ್ಲಿ ಸಗಣಿ ಕೇಸ್ ಹೇಗೆ ‘ವೇಸ್ಟ್ ಕೇಸ್’ ಆಗುತ್ತದೆಯೋ ನಮ್ಮ ಕರ್ನಾಟಕದಲ್ಲಿ ಗಣಿ ಕೇಸ್ ಸಹ ಇದೀಗ ‘ವೇಸ್ಟ್ ಕೇಸ್’ ಆಗಿಹೋಗಿದೆ, ಲೋಕಾಯುಕ್ತ ವರದಿಯನ್ನು ವೇಸ್ಟ್ ಎನ್ನುವುದರ ಮೂಲಕ. ಇನ್ನೊಂದು ಅರ್ಥದಲ್ಲೂ ಅದು ಮಹಾ ‘ವೇಸ್ಟ್’ ಕೇಸೇ. ಕರ್ನಾಟಕ ಭೂಗರ್ಭದ ಅಪಾರ ಸಂಪತ್ತನ್ನು ದೋಚುತ್ತಿರುವ, ರಾಜ್ಯದ ಬೊಕ್ಕಸಕ್ಕೆ ಕೋಟಿಗಟ್ಟಲೆ ರೂಪಾಯಿಗಳನ್ನು ವೇಸ್ಟ್ ಮಾಡುತ್ತಿರುವ ಅಕ್ರಮ ಗಣಿಗಾರಿಕೆಯ ಕೇಸು ವೇಸ್ಟ್ ಕೇಸ್ ಅಲ್ಲದೆ ಮತ್ತಿನ್ನೇನು? ಅಸಲಿಗೆ ನಾವೀಗ ನೋಡುತ್ತಿರುವ ಒಂದೊಂದು ಕೇಸ್ ಕೂಡ ಟೋಟಲ್ ವೇಸ್ಟ್. ಅಂತ್ಯಕಾಣದ ಅವುಗಳ ವಿಲೇವಾರಿಗಾಗಿ ಎಷ್ಟೊಂದು ಸಂಪನ್ಮೂಲಗಳು ವೇಸ್ಟ್. ದಿನಾಬೆಳಿಗ್ಗೆ ಅವೇ ವೇಸ್ಟ್ ಕೇಸ್ಗಳ ಕೊಳಕು ಸುದ್ದಿಯನ್ನು ಜನರಿಗೆ ಮುಟ್ಟಿಸಲಿಕ್ಕಾಗಿ ಎಷ್ಟೊಂದು ನ್ಯೂಸ್ಪ್ರಿಂಟ್ ವೇಸ್ಟ್. ಇಪ್ಪತ್ತನಾಲ್ಕು ಗಂಟೆಗಳೂ ಅದೇ ಕೆಟ್ಟ ಮುಖಗಳನ್ನು ತೋರಿಸುತ್ತ ಬೊಬ್ಬಿರಿಯುವ ವಾರ್ತಾವಾಹಿನಿಗಳಿಂದಾಗಿ ಎಷ್ಟೊಂದು ಶಕ್ತಿ ವೇಸ್ಟ್.
ತುಸು ಯೋಚಿಸಿದರೆ ನಮಗೆ ಅರಿವಾಗುತ್ತದೆ, ನಮ್ಮ ಸುತ್ತಮುತ್ತಲೆಲ್ಲ ವೇಸ್ಟ್ಗೆ ಲೆಕ್ಕವೇ ಇಲ್ಲ. ರಾಜಕೀಯ, ಕೋರ್ಟುಖಟ್ಲೆ ಅಂತಷ್ಟೇ ಅಲ್ಲ, ಬೇರೆ ವಿಚಾರಗಳೂ ವೇಸ್ಟ್ ಕ್ಯಾಟಗರಿಯವೇ. ಒಂದೆರಡು ಉದಾಹರಣೆಗಳನ್ನು ಕೊಡುತ್ತೇನೆ- ಮೊನ್ನೆ ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ ಬಂತು. ಬಹಳ ಸಂತೋಷ. ಒಡನೆಯೇ ‘ಕಂಬಾರರು ಅನರ್ಹರು, ಬೈರಪ್ಪನವರಿಗೆ ಬರಬೇಕಿತ್ತು’ ಅಂತೊಂದು ವಾದ. ‘ಬೈರಪ್ಪನವರಿಗೆ ಬೇಕಿದ್ದರೆ ಮರಣೋತ್ತರವಾಗಿ ಬರಲಿ’ ಎಂದು ಮತ್ತೊಂದು ಗುಲ್ಲು. ಅದರ ಬಗ್ಗೆ ಕಾಸು ಉಪಯೋಗವಿಲ್ಲದ ಚರ್ಚೆಗಳು. ಪುಟಗಟ್ಟಲೆ ಲೇಖನಗಳು. ಕೊನೆಗೂ ಏನು ಪುರುಷಾರ್ಥ ಸಾಧನೆಯಾಯ್ತು? ಟೋಟಲ್ ವೇಸ್ಟ್. ಅಣ್ಣಾಹಜಾರೆಯವರ ಹೋರಾಟ. ಖಂಡಿತ ಅರ್ಥಪೂರ್ಣವೇ. ಆದರೆ ಅವರೊಂದಿಗೆ ಸಾಕಷ್ಟು ಸಂಖ್ಯೆಯ ಢೋಂಗಿಗಳೂ ಸೇರ್ಕೊಂಡ್ರಲ್ಲ, ಅವರಿಂದಾಗಿ ಆ ಇಡೀ ಚಳುವಳಿಯ ಮೌಲ್ಯವೇ ಮಾಯವಾಗಿ ಅದೂ ಟೋಟಲ್ ವೇಸ್ಟ್. ಅಡ್ವಾಣೀಜಿಯ ಜನಚೇತನ ರಥಯಾತ್ರೆ. ಭ್ರಷ್ಟಾಚಾರದ ವಿರುದ್ಧ ಬೆಂಗಳೂರಿನಲ್ಲಿಯೂ ರಥದ ಚಕ್ರಗಳು ಹೊರಳುವವಂತೆ. ಅದಕ್ಕಿಂತ ದೊಡ್ಡ ವೇಸ್ಟ್ ಪ್ರಹಸನ ಬೇರೆ ಬೇಕೆ? ಟಿವಿಯಲ್ಲಿ ಎಲ್ಲ ವಾಹಿನಿಗಳಲ್ಲೂ ದಿನಾ ಬೆಳಿಗ್ಗೆ ವಕ್ಕರಿಸುವ ಅಡ್ಡಕಸುಬಿ ಜ್ಯೋತಿಷಿಗಳಿದ್ದಾರಲ್ಲಾ ಅವರಂತೂ ಒಬ್ಬೊಬ್ಬರೂ ಪರಮ ವೇಸ್ಟ್. ಜನರನ್ನು ಮೌಢ್ಯಕ್ಕೆ ತಳ್ಳುವ, ವಾಸ್ತು ಇನ್ನೊಂದು ಮತ್ತೊಂದೆಂಬ ಅಪದ್ಧ ಉಪದೇಶಗಳಿಂದ ಜನರನ್ನು ‘ವೇಸ್ಟ್ ಬಾಡಿ’ಗಳನ್ನಾಗಿಸುವ ಕಪಟ ಜ್ಯೋತಿಷಿಗಳನ್ನು ಕಂಡರೆ ಸಿಟ್ಟುಬರುತ್ತೆ. ಹೋಗಲಿ, ಅವರೆಂದಂತೆ ಮುತ್ತುರತ್ನ ಸ್ವರ್ಣಾಭರಣಗಳನ್ನು ಕೊಳ್ಳೋಣವೆಂದು ಜ್ಯುವೆಲ್ಲರಿ ಅಂಗಡಿಗೆ ಹೋದರೆ ಅಲ್ಲಿಯೂ ‘ವೇಸ್ಟೇಜ್ ಚಾರ್ಚ್’ ಟೋಪಿ!
ನಿಜ, ವೇಸ್ಟ್ ಅನ್ನೋದಕ್ಕೂ ನ್ಯೂಟನ್ನನ ನಿಯಮ ಅನ್ವಯವಾಗುತ್ತದೆ. ಒಬ್ಬರಿಗೆ ವೇಸ್ಟ್ ಆದದ್ದು/ಅನಿಸಿದ್ದು ಇನ್ನೊಬ್ಬರಿಗೆ ಗೈನ್ ಆಗುತ್ತದೆ. ತದ್ವಿರುದ್ಧ ಕೂಡ ನಿಜವೇ. ಹಾಗೆನ್ನುವಾಗ ನನಗೊಂದು ವಿಷಯ ನೆನಪಾಗುತ್ತಿದೆ. ಕನ್ನಡ ಚಿತ್ರಗೀತೆಗಳನ್ನು ಆಧರಿಸಿ ಬರೆದಿದ್ದ, ಸಾಕಷ್ಟು ಮಂದಿ ಓದುಗರು ಆನಂದಿಸಿದ್ದ ಅಂಕಣಬರಹವೊಂದಕ್ಕೆ ಓದುಗಮಿತ್ರರೊಬ್ಬರು "Total waste article. Sorry for being blunt and rude" ಎಂದು ಪ್ರಾಮಾಣಿಕ ಅನಿಸಿಕೆ ವ್ಯಕ್ತಪಡಿಸಿದ್ದರು. ಅವರು ನನ್ನ ಹಿತೈಷಿಯೇ. ಬೇರೆ ಲೇಖನಗಳ ಬಗ್ಗೆ ಸಕಾರಾತ್ಮಕ ಪ್ರತಿಕ್ರಿಯಿಸಿ ಉತ್ತೇಜಿಸುವವರೇ. ಆ ಲೇಖನವೇಕೋ ಅವರಿಗೆ ಟೋಟಲ್ ವೇಸ್ಟ್ ಅನಿಸಿತು ಅಷ್ಟೇ. ಅವರಾದರೂ ಮುಲಾಜಿಲ್ಲದೆ ತಿಳಿಯಪಡಿಸಿ ಒಳ್ಳೇಕೆಲ್ಸ ಮಾಡಿದರು. ಬೇರೆಯವರಿಗೂ ಆ ಲೇಖನವಾಗಲೀ ಇತರ ಯಾವುದೇ ಲೇಖನವಾಗಲೀ ಕೊನೆಗೆ ಈ ಅಂಕಣವೇ ಆಗಲೀ ಟೋಟಲ್ ವೇಸ್ಟ್ ಅಂತ ಅನಿಸಬಾರದೆಂದೇನೂ ಇಲ್ಲವಲ್ಲ!?
ಒಟ್ಟಿನಲ್ಲಿ ದಾಸರೆಂದಂತೆ ಲೊಳಲೊಟ್ಟೆ ಎಲ್ಲ ಲೊಳಲೊಟ್ಟೆ. ವೇಸ್ಟ್ ಅಂತಂದುಕೊಂಡರೆ ಎಲ್ಲವೂ ವೇಸ್ಟೇ. ಬಾಕ್ಸ್ಟರನ ‘ಬಿಜಿನೆಸ್ಸೂ’, ಬೂಕಿನಕೆರೆಯವನ ‘ಬೆರಳ ಸಂಕೇತ’ವೂ.
* * *
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.]
"Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!
Saturday Oct 22, 2011
Naarada Also Uses Deodorant
Saturday Oct 22, 2011
Saturday Oct 22, 2011
ದಿನಾಂಕ 23 ಅಕ್ಟೋಬರ್ 2011ರ ಸಂಚಿಕೆ...
ನಾರದ ಮುನಿ ಪರಿಮಳಕ್ಕೆ ಅತ್ತರು!
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] * * * ಅವರು ತ್ರಿಲೋಕಸಂಚಾರಿ. ತಂಬೂರಿ ಹಿಡಕೊಂಡು ಹೊರಟರೆಂದರೆ ತಿರುಗಾಟದಲ್ಲೇ ಬಿಜಿಯಾಗುತ್ತಾರೆ. ಒಮ್ಮೆ ಅನಂತನಾಗ್ ರೂಪದಲ್ಲಿ ಭೂಲೋಕಕ್ಕೂ ಬಂದಿದ್ರಲ್ಲ? “ಇದು ಎಂಥಾ ಲೋಕವಯ್ಯಾ...” ಎಂದು ಹಾಡಿಕೊಳ್ಳುತ್ತ ಬೆಂಗಳೂರಿನ ರಸ್ತೆಗಳಲ್ಲಿ ಸೈಕಲ್ ಮೇಲೆ ಓಡಾಡಿದ್ರಲ್ಲ? (ಈಗಾದ್ರೆ ಮೆಟ್ರೊ ರೈಲ್ನಲ್ಲೂ ಕಾಣಿಸಿಕೊಳ್ತಿದ್ರೋ ಏನೊ). ಇಂತಿರ್ಪ ನಾರದ ಮಹರ್ಷಿಗಳ ಒಂದು ಖಾಸಗಿ ವಿಚಾರ ಮಾತ್ರ ನಿಮಗೆ ಗೊತ್ತಿಲ್ಲ ಎಂದುಕೊಳ್ಳುತ್ತೇನೆ. ಯಾವ ಪುರಾಣದಲ್ಲೂ ಉಲ್ಲೇಖಗೊಂಡಿರದ ವಿಚಾರವಿದು. ಏನಪ್ಪಾ ಅಂತಂದ್ರೆ ನಾರದ ಮಹರ್ಷಿಗಳದು ಒಂದು ರೀತಿಯ ವಿಶಿಷ್ಟ ಭೌತಿಕಲಕ್ಷಣ. ಅವರ ಮೈಕೈ ಬೆವರುವುದಿಲ್ಲ. ಮೈಗೆ ಕೊಳೆ ಅಂಟುವುದಿಲ್ಲ. ಹಾಗಾಗಿ ದಿನಾ ಸ್ನಾನ ಮಾಡಬೇಕಂತಲೂ ಇಲ್ಲ (ಟೂರ್ನಲ್ಲಿ ಇರುವಾಗ ಟೈಮೂ ಸಿಗಲಿಕ್ಕಿಲ್ಲ, ಕೆಲವೊಮ್ಮೆ ಅನುಕೂಲವೂ ಆಗಲಿಕ್ಕಿಲ್ಲ ಎನ್ನಿ). ಯಾವಾಗ ನೋಡಿದರೂ ತಾಜಾ ಮೈ ಕಾಂತಿ. ಕೊಳೆತು ನಾರುವ ಚಾನ್ಸೇ ಇಲ್ಲ. ಅದಕ್ಕೇ ಅವರಿಗೆ ‘ನಾರದ’ ಮಹರ್ಷಿ ಎಂದು ಹೆಸರು!
ಕರಾವಳಿಯ ಪ್ರಸಿದ್ಧ ಕಲೆ ಯಕ್ಷಗಾನದ ಸಂಭಾಷಣೆಯಲ್ಲಿ ಹಾಸ್ಯರಸೋತ್ಪನ್ನವಾಗುವುದು ಹೆಚ್ಚಾಗಿ ಶ್ಲೇಷೆಯಿಂದಲೇ. ದೂತ, ಕಾವಲುಗಾರ, ಸೇವಕ ಮುಂತಾದ ಚಿಲ್ಲರೆ ಪಾತ್ರಗಳು ರಸವತ್ತಾದ, ಸಮಯಸ್ಫೂರ್ತಿಯ ಶ್ಲೇಷೆಯಿಂದ ಪ್ರೇಕ್ಷಕರನ್ನು ನಗಿಸುತ್ತವೆ. ಕೃಷ್ಣಸಂಧಾನ ಪ್ರಸಂಗದಲ್ಲಿ ಕೃಷ್ಣನ ಪಾತ್ರವನ್ನು ಯಕ್ಷಗಾನದ ಶ್ರೇಷ್ಠ ಕಲಾವಿದರಲ್ಲೊಬ್ಬರಾದ ವಾಸುದೇವ ಸಾಮಗರು ನಿರ್ವಹಿಸಿದರೆನ್ನಿ, ಆಗ ದೂತನ ಪಾತ್ರಧಾರಿ ಒಮ್ಮೆಯಾದರೂ “ವಾಸುದೇವಾ ನಿನಗೆ ಗೊತ್ತಿಲ್ಲದ್ದು ಏನಿದೆ ಈ ಪ್ರಪಂಚದಲ್ಲಿ? ಎಲ್ಲದಕ್ಕೂ ನೀನೇ ಕಾರಣ” ಎಂದು ಶ್ಲೇಷೆ ಮಾಡದೆ ಇರುವುದಿಲ್ಲ. ಸಾಮಗರಂಥ ಹಿರಿಯರನ್ನು ಹೆಸರು ಹಿಡಿದು ಏಕವಚನದಲ್ಲಿ ಕರೆಯುವ ಅವಕಾಶದಿಂದ ತಪ್ಪಿಸಿಕೊಳ್ಳುವುದಿಲ್ಲ. ಕೃಷ್ಣನ ಪಾತ್ರ ವಾಸುದೇವ ಸಾಮಗರದ್ದೆಂದು ಗೊತ್ತೇ ಇರುವುದರಿಂದ ಪ್ರೇಕ್ಷಕರಿಗೂ ರೋಮಾಂಚನ. ಕೆಲವೊಮ್ಮೆ ವಿದೂಷಕನ ಪ್ರತ್ಯುತ್ಪನ್ನಮತಿಗೆ ಅನುವಾಗಲೆಂದೇ ರಾಜ/ರಕ್ಕಸ ಪಾತ್ರಗಳು ಸಂಭಾಷಣೆಯಲ್ಲಿ ಕಿಡಿಹಚ್ಚುವುದೂ ಇದೆ. ಆಗ ವಿದೂಷಕನಿದ್ದವನು ಪ್ರಸಂಗ ಪೌರಾಣಿಕವಾದರೂ ಪ್ರಸ್ತುತ ವಿದ್ಯಮಾನದ, ಈಗಿನ ಕಾಲಘಟ್ಟದ ನುಡಿಮತ್ತುಗಳನ್ನು ಶ್ಲೇಷೆಯಾಗಿ ಉದುರಿಸುವುದೂ ಉಂಟು. ಉದಾಹರಣೆಗೆ, “ಆಹಾ! ಅಲ್ಲಿ ನೋಡು. ಸುಂದರ ಸರೋವರದಲ್ಲಿ ನೀರಿನ ತರಂಗಗಳನ್ನು ಕಂಡೆಯಾ?” ಎಂದು ಕೇಳುತ್ತಾನೆ ಅರ್ಜುನ. “ತರಂಗ!? ನಮ್ಮ ಮನೆಯಲ್ಲಿ ಪ್ರತಿ ವಾರ ತರಿಸ್ತೇವೆ. ಈ ವಾರದ್ದು ಇನ್ನೂ ಓದಿ ಆಗಿಲ್ಲ ಅಷ್ಟೇ” ಎನ್ನುತ್ತಾನೆ ದೂತ! “ಅದಲ್ವೋ ನಾನು ಹೇಳಿದ್ದು. ಸುಭದ್ರೆಯ ಚೆಲುವಿನಿಂದ ನನ್ನ ಹೃದಯದಲ್ಲೆದ್ದಿರುವ ಪ್ರೇಮತರಂಗಗಳನ್ನು ಗಮನಿಸಿದೆಯಾ ಎಂದು ನಿನ್ನನ್ನು ಕೇಳಿದ್ದು!” ಅರ್ಜುನ ಉವಾಚ. ಪ್ರೇಕ್ಷಕರ ಚಪ್ಪಾಳೆ.
ಬುದ್ಧಿ ಹರಿತಗೊಳಿಸುವುದಕ್ಕೆ ಶ್ಲೇಷೆ ಖಂಡಿತವಾಗಿಯೂ ಸಹಾಯಕವಾಗುತ್ತದೆ. ನಮ್ಮ ಜನಪದ ಕಾವ್ಯಗಳಲ್ಲಿನ ಒಗಟುಗಳು, ದಾಸಸಾಹಿತ್ಯದಲ್ಲಿನ ‘ಮುಂಡಿಗೆ’ಗಳು ಮುಂತಾದವೆಲ್ಲ ಶ್ಲೇಷೆಯಲ್ಲದೆ ಬೇರೇನಲ್ಲ. ಶಿಶುನಾಳ ಶರೀಫರ ರಚನೆಗಳೂ ಪಾರಮಾರ್ಥಿಕ ತತ್ತ್ವಗಳನ್ನು ಶ್ಲೇಷೆಯಾಗಿ ಒಗಟಿನ ರೂಪದಲ್ಲಿ ತಿಳಿಯಹೇಳುತ್ತವೆ. ಹಾಡಲು ಬಂದ ಪಾತರದವಳ ಮದ್ದಳೆ ನುಂಗಿತ್ತಾ ತಂಗಿ ಕೋಡಗನ ಕೋಳಿ ನುಂಗಿತ್ತಾ. ಅದೇರೀತಿ, ಆತ್ಮವು ಶರೀರವನ್ನು ತೊರೆದು ಹೋಗುವ ಪ್ರಕ್ರಿಯೆಯನ್ನು ಪುರಂದರದಾಸರು ಮಾರ್ಮಿಕವಾಗಿ ಬಣ್ಣಿಸುತ್ತಾರೆ- “ಒಂಬತ್ತು ಬಾಗಿಲ ಮನೆಯಲ್ಲಿ ತುಂಬಿತುಂಬಿ ಮಂದಿಯಿರಲು ಕಂಬ ಮುರಿದು ಡಿಂಬ ಬಿದ್ದು ಅಂಬರಕ್ಕೆ ಹಾರಿತಲ್ಲೋ... ರಾಮಾ... ಗಿಳಿಯು ಪಂಜರದೊಳಿಲ್ಲ...” ಕನಕದಾಸರು ಒಂದು ಕೀರ್ತನೆಯಲ್ಲಿ ತರಕಾರಿ ಮಾರುತ್ತಿದ್ದಾರೇನೊ ಅನ್ನಿಸುವಂತೆ “ಪರಮಪುರುಷ ನೀನೆಲ್ಲಿಕಾಯಿ/ ಸರಸಿಯೊಳಗೆ ಕರಿಕೂಗಲುಕಾಯಿ/ ಹಿರಿದು ಮಾಡಿದ ಪಾಪ ನುಗ್ಗೇಕಾಯಿ/ ಹರಿ ನಿನ್ನ ಧ್ಯಾನ ಬಾಳೇಕಾಯಿ/ ಸರುವ ಜೀವರ್ಗುಣಿಸಿಯುಂ ಬದನೆಕಾಯಿ/ ಅರಿಷಡ್ವರ್ಗಗಳೊದಗಿಲಿಕಾಯಿ” ಎನ್ನುತ್ತಾರೆ. ಇಲ್ಲಿ ‘ಕಾಯಿ’ ಎಂದರೆ ಭಗವಂತನಲ್ಲಿ ಮೊರೆ,“ನೀನೇ ಕಾಪಾಡಬೇಕಪ್ಪಾ” ಎಂದು.
ಅದೆಲ್ಲ ಇರಲಿ. ಈ ಸಿಂಪಲ್ ಶ್ಲೇಷೆಯೊಗಟು ಗೊತ್ತಾ ನಿಮಗೆ? ‘ಕಾವಲಿಯಿಂದ ಏಳು ದೋಸೆ; ತಟ್ಟೆಯಲ್ಲಿ ಆರು ದೋಸೆ; ಬಾಯಿಗೆ ಹತ್ತು ದೋಸೆ. ಒಟ್ಟು ಎಷ್ಟು ದೋಸೆ?’ ಉತ್ತರ: ಒಂದೇ ದೋಸೆ. ಅದನ್ನು ನಾನೇ ತಿಂದುಬಿಟ್ಟೆ, ನಿಮಗೆ ಒಂಚೂರೂ ಉಳಿಸಿಲ್ಲ! ದೋಸೆಯಷ್ಟೇ ಅಲ್ಲ, ಎರಡು ಕಂತುಗಳಲ್ಲಿ ಹರಿದುಬಂದ ಶ್ಲೇಷ ರಸಾಯನವೂ ನಿಶ್ಶೇಷವಾಯಿತು. ಬೇರೆ ಭಾಷೆಯ ಪದಗಳನ್ನೂ ಸೇರಿಸಿ, ಕಸಿ ಕಟ್ಟಿ ಇನ್ನೂ ಗಮ್ಮತ್ತಿನ ಶ್ಲೇಷೆಗಳನ್ನು ರಚಿಸಬಹುದು, ಹುಡುಕಬಹುದು. ಆದರೆ ನನ್ನ ಉದ್ದೇಶವಿದ್ದದ್ದು ಕಸ್ತೂರಿಕನ್ನಡದಲ್ಲಿ ಶ್ಲೇಷೆ ಎಷ್ಟು ಚೆನ್ನಾಗಿದೆ ಎಂದು ಪರಿಚಯಿಸುವುದು. ಅದಕ್ಕೋಸ್ಕರ ಅಚ್ಚಕನ್ನಡ ಶ್ಲೇಷೆಗಳನ್ನಷ್ಟೇ ಅಳವಡಿಸಿಕೊಂಡೆ. ಅಂದಹಾಗೆ ಕನ್ನಡಪ್ರೇಮ ಎರಡು ವಿಧ : ಎಂದಿಗೂ ಮಾಸದ ಕನ್ನಡಪ್ರೇಮ; ನವೆಂಬರ್ ಮಾಸದ ಕನ್ನಡಪ್ರೇಮ. ನಿಮ್ಮದು ಯಾವುದು?
* * *
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.]
"Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!
Saturday Oct 15, 2011
Double Entendres Decent Ones
Saturday Oct 15, 2011
Saturday Oct 15, 2011
ದಿನಾಂಕ 16 ಅಕ್ಟೋಬರ್ 2011ರ ಸಂಚಿಕೆ...
ದ್ವಂದ್ವಾರ್ಥವೆಂದರೆ ಅಶ್ಲೀಲವೇ ಅಂತೇನಿಲ್ಲ
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] * * * ಅದೊಂದು ಮಿಥ್ಯೆ. ಡಬಲ್ ಮೀನಿಂಗ್ ಎಂದರೆ ಪೋಲಿ, ಅಶ್ಲೀಲ, ಸಭ್ಯತೆಯ ಚೌಕಟ್ಟು ಮೀರಿದ ಅಂತಲೇ ಆಗಿಹೋಗಿದೆ. ಆ ಮಿಥ್ಯೆಯನ್ನು ಹೋಗಲಾಡಿಸಬೇಕಾದರೆ ಅಶ್ಲೀಲವೆನಿಸದ ಸುಂದರ ಸ್ವಾರಸ್ಯಕರ ದ್ವಂದ್ವಾರ್ಥ ಪ್ರಯೋಗಗಳನ್ನು ನಾವು ಹೆಚ್ಚುಹೆಚ್ಚು ಗುರುತಿಸಬೇಕು. ಅಂಥ ರಚನೆಗಳನ್ನು ನಮ್ಮ ಮಾತಿನಲ್ಲಿ, ಬರಹದಲ್ಲಿ ಹೆಚ್ಚುಹೆಚ್ಚು ಅಳವಡಿಸಿಕೊಳ್ಳಬೇಕು. ಏಕೆಂದರೆ ದ್ವಂದ್ವಾರ್ಥವೂ ಸಾಹಿತ್ಯದ ಒಂದು ಪ್ರಮುಖ ಅಲಂಕಾರ. ಅದನ್ನು ಶ್ಲೇಷಾಲಂಕಾರ ಅಥವಾ ಶ್ಲೇಷೆ ಎನ್ನುತ್ತಾರೆ. ಭಾಷೆಯಲ್ಲಿ ಅಲಂಕಾರ ಇರುವುದೇ ಓದುಗನ/ಕೇಳುಗನ ಆಹ್ಲಾದ ಹೆಚ್ಚಿಸುವುದಕ್ಕೆ. ಶ್ಲೇಷೆಯು ಮನಸ್ಸಿಗೆ ಆಹ್ಲಾದಕರವಷ್ಟೇ ಅಲ್ಲ ಪುಟ್ಟದೊಂದು ಅಚ್ಚರಿಯನ್ನೂ ತಂದುಕೊಡುತ್ತದೆ. ತರ್ಕಬದ್ಧ ಯೋಚನೆಗೆ ಹಚ್ಚುತ್ತದೆ. ಮೆದುಳನ್ನು ಚುರುಕಾಗಿಸುತ್ತದೆ. ಹೇಗೆ? ಇಲ್ಲಿದೆ ನೋಡಿ- ಇವತ್ತು ಅಂಕಣದ ಮೈತುಂಬ ಶ್ಲೇಷಾಲಂಕಾರ! ಸ್ವಲ್ಪ ತರ್ಲೆ ರೀತಿಯ, ಆದರೂ ಭಲೇ ತಮಾಷೆ ಎನಿಸುವ ಒಂದೆರಡು ಉದಾಹರಣೆಗಳಿಂದ ಆರಂಭಿಸೋಣ. ದ್ವಂದ್ವಾರ್ಥವೆಂದರೆ ಹೀಗೂ ಉಂಟೇ ಎಂದು ನಿಮಗೆ ಅನಿಸಬೇಕೆಂದೇ ಇದನ್ನು ಆಯ್ದುಕೊಂಡಿದ್ದೇನೆ. ಕೆಎಸ್ಸಾರ್ಟಿಸಿ ಬಸ್ಸುಗಳನ್ನು ನೀವು ನೋಡೇಇರ್ತೀರಲ್ವಾ? ಅವುಗಳ ಮೇಲೆ (ಮೇಲೆ ಅಂದ್ರೆ ಹಿಂಭಾಗದಲ್ಲಿ, ಎರಡೂ ಸೈಡುಗಳಲ್ಲಿ) ‘ಕರ್ನಾಟಕ ಸಾರಿಗೆ’ ಅಂತ ಬರೆದಿರುವುದನ್ನೂ ನೋಡಿರ್ತೀರಿ. ‘ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ’ ಎಂದು ಉದ್ದಕ್ಕೆ ಬರೆಯುವ ಬದಲು ‘ಕರ್ನಾಟಕ ಸಾರಿಗೆ’ ಎಂದು ಚಿಕ್ಕದಾಗಿ ಚೊಕ್ಕವಾಗಿ ಬರೆದಿರ್ತಾರೆ. ಹೌದು, ಅದ್ರಲ್ಲೇನು ವಿಶೇಷ? ನಿಮ್ಮವು ಸಾಮಾನ್ಯ ಕಣ್ಣುಗಳಾದರೆ ವಿಶೇಷ ಏನಿಲ್ಲ. ಆದರೆ ಸ್ವಾರಸ್ಯ ಹುಡುಕುವ ಕಣ್ಣುಗಳಾದರೆ ಅಲ್ಲಿ ನಿಮಗೊಂದು ವಿಶೇಷ ಕಾಣಿಸುತ್ತದೆ. ಏನದು? ‘ಕರ್ನಾಟಕ ಸಾರಿಗೆ’ ಎಂದಿರುವುದರ ಪಕ್ಕದಲ್ಲೇ ‘ತಮಿಳುನಾಡು ಸಾಂಬಾರಿಗೆ’ ಅಂತಿದೆಯೆಂದು ಊಹಿಸಿ. ಒಂದು ಕಿರುನಗು ಮಿನುಗುತ್ತದೆ ನಿಮ್ಮ ಮುಖದಲ್ಲಿ. ಅರ್ಥ ಆಗ್ಲಿಲ್ವಾ? ಹೋಗಲಿ, ‘ಸುರಕ್ಷತೆಯತ್ತ ಗಮನ: ಸಾರಿಗೆ ಸಚಿವರ ಭರವಸೆ’ ಎಂದು ಪತ್ರಿಕೆಯಲ್ಲಿ ಹೆಡ್ಡಿಂಗ್ ಓದ್ತೀರಿ. ಆಯ್ತು, ಸಾರಿಗೇನೋ ಭರವಸೆ ಸಿಕ್ತು; ಪಲ್ಯ, ತೊವ್ವೆ, ಹುಳಿ, ತಂಬುಳಿಗಳ ಗತಿಯೇನು? ನಿಮ್ಮಲ್ಲೇ ಪ್ರಶ್ನಿಸಿಕೊಳ್ಳಿ. ಇನ್ನೂ ಅರ್ಥಆಗಿಲ್ವಾ? ‘ಸಾರಿಗೆ ಬಸ್ಸು ಬಿದ್ದು ನಾಲ್ವರು ಜಖಂ’ ಎಂಬ ದಪ್ಪಕ್ಷರ ತಲೆಬರಹ. ಅರ್ರೆ! ಸಾರಿಗೆ ಬಸ್ಸು ಬಿದ್ದರೆ ಟೊಮೆಟೊ ಚಟ್ನಿ ಆದೀತೇ ಹೊರತು ಜನರಿಗೇಕೆ ಜಖಂ ಆಗಬೇಕು? ನೋಡಿದ್ರಾ, ‘ಸಾರಿಗೆ’ ಪದ ಹುಟ್ಟಿಸಿದ ದ್ವಂದ್ವಾರ್ಥದ ತಮಾಷೆ!
ಸಾರಿಗೆಯಂತೆಯೇ ‘ಕಾಡಿಗೆ’ ಕೂಡ. ಅಂಗಡಿಯಿಂದ ಐ-ಬ್ರೋ ಪೆನ್ಸಿಲ್ಸ್ ತರಲಿಕ್ಕೆ ಹೊರಟಿದ್ದಾರೆ ಅಂದಗಾತಿ ಅಂಬುಜಮ್ಮ. ಶುದ್ಧಕನ್ನಡದಲ್ಲಿ ‘ಕಾಡಿಗೆ ತರಲಿಕ್ಕೆ ಹೊರಟಿದ್ದೀನಿ’ ಎಂದುತ್ತರಿಸುತ್ತಾರೆ ಎದುರುಸಿಕ್ಕಿದ ಮೀನಾಕ್ಷಮ್ಮನ ಪ್ರಶ್ನೆಗೆ. ಆಕೆಯಾದರೋ ಅರ್ಥವಾದ್ರೂ ಬೇಕಂತ್ಲೇ ಕೆಣಕುತ್ತಾರೆ, ‘ಏನ್ ತರ್ಲಿಕ್ಕೆ ಕಾಡಿಗೆ ಹೊರ್ಟಿದ್ದೀರಿ? ಕಾಡಿಗೆ ಹೋಗುವ ನಾರೀಮಣಿಯರು ವ್ಯಾನಿಟಿಬ್ಯಾಗ್ ಹಿಡ್ಕೊಂಡು ಹೋಗೋದಲ್ಲ, ಸೀತೆಯಂತೆ ನಾರುಡೆ ಉಡ್ಬೇಕಲ್ವಾ?’
ಹೀಗೆ ಒಂದು ಪದ ಬೇರೆಬೇರೆ ಅರ್ಥಗಳನ್ನು ಪಡೆದಾಗ ಅಲ್ಲಿ ಸ್ವಾರಸ್ಯ ಬಂದೇಬರುತ್ತೆ. ಉದಾಹರಣೆಗೆ, ‘ಮಾರಿ’ ಎಂದೊಡನೆ ಮೊದಲಿಗೆ ಕಣ್ಮುಂದೆ ಬರುವುದು ಭಯಾನಕ ಆಕೃತಿ; ಆದರೆ ಮಾರಿ ಎಂದರೆ ಮಾರಾಟಮಾಡಿ ಎಂದೂ ಅರ್ಥವಿದೆ. ‘ನಾರಿ ಮುನಿದರೆ ಮಾರಿ’ ಗಾದೆಮಾತಿನಲ್ಲಿ ಮಾರಿ ಪದ ಮೂಲ ಅರ್ಥದಲ್ಲಾದರೆ ನಿಜಕ್ಕೂ ಪರಿಸ್ಥಿತಿ ಗಂಭೀರ. ಮತ್ತೊಂದು ಅರ್ಥದಲ್ಲಾದರೆ ಬದುಕು ನಿರುಮ್ಮಳ (ಗಿರಾಕಿ ಸಿಗೋದು ಕಷ್ಟವೇ ಇದೆಯೆನ್ನಿ). ಇಲ್ಲಿ ಗಮನಿಸಬೇಕಾದ್ದೆಂದರೆ ಚಕಿತಗೊಳಿಸುವ, ಅನಿರೀಕ್ಷಿತ ಎನಿಸುವ ಶ್ಲೇಷೆ. ನಮ್ಮ ಯೋಚನಾಲಹರಿ ಸಾಮಾನ್ಯ ಧಾಟಿಯಲ್ಲಿ ಸಾಗುತ್ತಿರುವಾಗ ಹಠಾತ್ತಾಗಿ ಎದುರಾಗುವ ಸೋಜಿಗ. ಡುಂಡಿರಾಜರ ‘ಹನಿ’ಗಳಲ್ಲಿ ಇಂಥ ಶ್ಲೇಷೆಗಳು ನಮಗೆ ಪುಷ್ಕಳವಾಗಿ ಸಿಗುತ್ತವೆ. ಕ್ಲಾಸಿಕ್ ಉದಾಹರಣೆಯೆಂದರೆ-
ಕ್ಯಾಷ್ ಕೌಂಟರಿನ ಹುಡುಗಿಯರ ಮುಖದಲ್ಲಿ
ನಗು ಹುಡುಕಿದರೂ
ಸಿಗದು;
ಅದಕ್ಕೇ ಇರಬೇಕು
ಹಾಕಿದ್ದಾರೆ ಬೋರ್ಡು
‘ನಗದು’.
ಅಂಥದ್ದೇ ಇನ್ನೊಂದು-
ಬ್ಯಾಂಕ್ ಜೀವನದ ಏಕತಾನದಿಂದ ರೋಸಿ ಹೋಗಿ
ಎಲ್ಲ ಮರೆತು ಹಾಯಾಗಿ ಸುತ್ತಾಡಿ ಬರಲೆಂದು
ರೈಲು ಹತ್ತಿದರೆ ಅಲ್ಲೂ ಅದೇ ಸೊಲ್ಲು
ಚೆಕ್ ಬುಕ್ ಚೆಕ್ ಬುಕ್ ಚೆಕ್ ಬುಕ್!
ಶಬ್ದಗಾರುಡಿಗ ಬೇಂದ್ರೆಯವರೂ ಶ್ಲೇಷಾಲಂಕಾರಪ್ರಿಯರೇ. ಕವಿತೆ ಬರೆಯುವಾಗ ಭೃಂಗ, ಭ್ರಮರ, ಪಾತರಗಿತ್ತಿ, ದುಂಬಿ ಮುಂತಾಗಿ ಬೇರೆಬೇರೆ ಪದಗಳನ್ನು ಬಳಸಿದರೂ ‘ತುಂಬಿ’ ಎಂಬ ಪದಕ್ಕೇ ಹೆಚ್ಚು ಪ್ರಾಶಸ್ತ್ಯ ಕೊಡುತ್ತಾರೆ ಬೇಂದ್ರೆ. ಕಾರಣ ಅದು ಒಂದಕ್ಕಿಂತ ಹೆಚ್ಚು ಅರ್ಥ ಕೊಡುವ ಪದ. ತುಂ ತುಂ ತುಂ ತುಂ ತುಂಬಿ ಬಂದಿತ್ತಾ... ಎಂದು ಹಾಡುತ್ತ ದುಂಬಿಯಷ್ಟೇ ಬಂದದ್ದಲ್ಲ, ಹೊಳೆಯಲ್ಲಿ ನೀರು ತುಂಬಿ ಬಂತು; ಬಸವಣ್ಣನವರ ಜಲಸಮಾಧಿ ಕ್ಷಣಕ್ಕೆ ಕಾಲ ತುಂಬಿ ಬಂತು ಎಂಬ ಅರ್ಥವನ್ನೂ ಹೆಣೆದು ಅದ್ಭುತಕಾವ್ಯವಾಗಿಸುತ್ತಾರೆ. ಅದೇ ‘ತುಂಬಿ’ ಬೇಂದ್ರೆಯವರ ಗಂಗಾವತರಣ (‘ಇಳಿದು ಬಾ ತಾಯೇ ಇಳಿದು ಬಾ...’) ಕವಿತೆಯಲ್ಲೂ ಬರುತ್ತದೆ. ಹರಕೆ ಸಂದಂತೆ ಮಮತೆ ಮಿಂದಂತೆ ತುಂಬಿ ಬಂದಂತೆ... ಅಷ್ಟಾಗಿ ಈ ‘ತುಂಬಿ’ ಬೇಂದ್ರೆಯವರ ಬಳಿಗೆ ಬಂದದ್ದು ಬಸವಣ್ಣನವರ ಪ್ರಭಾವದಿಂದ ಎನ್ನುತ್ತಾರೆ ಕೆಲವು ವಿಮರ್ಶಕರು. ಏಕೆಂದರೆ ಬಸವಣ್ಣ ಸಹ ‘ತುಂಬಿ’ಪ್ರಿಯ.
ವಚನದಲ್ಲಿ ನಾಮಾಮೃತ ತುಂಬಿ
ನಯನದಲ್ಲಿ ನಿಮ್ಮ ಮೂರುತಿ ತುಂಬಿ
ಮನದಲ್ಲಿ ನಿಮ್ಮ ನೆನಹು ತುಂಬಿ
ಕಿವಿಯಲ್ಲಿ ನಿಮ್ಮ ಕೀರುತಿ ತುಂಬಿ
ಕೂಡಲಸಂಗಮದೇವಾ ನಿಮ್ಮ ಚರಣಕಮಲದೊಳಗಾನು ತುಂಬಿ
ಇನ್ನೊಬ್ಬ ವಚನಕಾರ ಅಂಬಿಗರ ಚೌಡಯ್ಯ ‘ಹುಟ್ಟು’ ಎಂಬ ಪದವನ್ನು ತನ್ನ ವಚನದಲ್ಲಿ ಬಳಸಿಕೊಂಡ ರೀತಿ ಬಲುಸೊಗಸು. ‘ಅಂದಾದಿ ಬಿಂದುವಿನಲ್ಲಿ ಹೊಂದಿದ ಹುಟ್ಟು, ಆ ಹುಟ್ಟನೆ ಹಿಡಿದು ಅಂದಚಂದದಲಿ ತೊಳಲಾಡುತ್ತಿದ್ದಿತು ಜಗವೆಲ್ಲಾ...’ ಇಲ್ಲಿ ‘ಹುಟ್ಟು’ ಎಂದರೆ ಜನನ ಎಂಬರ್ಥವೂ ಬಂತು; ಅಂಬಿಗನ ಕುಲಕಸುಬಿನ ಕುರುಹಾದ ‘ಹುಟ್ಟು’ (ದೋಣಿ ನಡೆಸಲು ಬಳಸುವ ಸಾಧನ) ಎಂಬ ಅರ್ಥವೂ ಬಂತು.
ಇನ್ನು, ನಮ್ಮೆಲ್ಲರ ನೆಚ್ಚಿನ ಪುರಂದರದಾಸರೂ ಶ್ಲೇಷೆಯಲ್ಲಿ ಕಮ್ಮಿಯೇನಲ್ಲ. ‘ರಾಗಿ ತಂದೀರಾ ಭಿಕ್ಷಕೆ ರಾಗಿ ತಂದೀರಾ...’ ಕೀರ್ತನೆಯಲ್ಲಿ ರಾಗಿ ಎಂದರೆ ಧಾನ್ಯ ಎಂಬ ಅರ್ಥದಿಂದಲೇ ತೊಡಗಿದರೂ, ಮುಂದೆ ‘ಯೋಗ್ಯರಾಗಿ ಭೋಗ್ಯರಾಗಿ ಭಾಗ್ಯವಂತರಾಗಿ ನೀವು...’ ಎನ್ನುವಾಗ ರಾಗಿ ಪದವನ್ನು ಅನಿರೀಕ್ಷಿತ ರೀತಿಯಲ್ಲಿ ಶ್ಲೇಷೆಯಾಗಿಸುತ್ತಾರೆ. ಪುರಂದರದಾಸರ ಮತ್ತೊಂದು ಜನಪ್ರಿಯ ಕೃತಿಯಾದ ‘ಡೊಂಕು ಬಾಲದ ನಾಯಕರೇ ನೀವೇನೂಟವ ಮಾಡಿದಿರಿ...’ ಕೀರ್ತನೆಯಲ್ಲೂ ಶ್ಲೇಷೆ ಇದೆಯೆನ್ನುತ್ತಾರೆ ವಿದ್ವಾಂಸರು. ಮೇಲ್ನೋಟಕ್ಕೆ ಅದು ನಾಯಿಯ ಚಿತ್ರಣ ಬರುವಂತೆ ರಚಿಸಿದ್ದಾದರೂ ಅದರಲ್ಲಿನ ‘ಡೊಂಕುಬಾಲದ ನಾಯಕ’ ಎಂದರೆ ಬೇರಾರೂ ಅಲ್ಲ, ಪುರಂದರರೇ ದಾಸರಾಗುವ ಮೊದಲು ಜಿಪುಣಾಗ್ರೇಸರ ‘ಶ್ರೀನಿವಾಸ ನಾಯಕ’ ಆಗಿದ್ದರಲ್ವಾ ಆ ವ್ಯಕ್ತಿ! ವಿಷಯಸುಖಗಳ ಬೆನ್ನಟ್ಟಿ ಸಾಗುತ್ತಿದ್ದ ತನ್ನ ಜೀವನ ಹೇಗಿತ್ತು ಎಂದು ಮರುಕಪಡುತ್ತ, ಇನ್ನುಮುಂದೆ ಹಾಗಾಗದಂತೆ ಎಚ್ಚರವಹಿಸುತ್ತ ತನಗೆತಾನೇ ಬೋಧನೆ ಮಾಡಿಕೊಳ್ಳುವ ರೀತಿಯಲ್ಲಿ ಪುರಂದರರು ಈ ಕೀರ್ತನೆ ರಚಿಸಿದ್ದಾರೆ ಎಂದು ವಿದ್ವಾಂಸರ ಅಭಿಪ್ರಾಯ. ಇದ್ದರೂ ಇರಬಹುದು, ಅಂತೂ ಶ್ಲೇಷೆ ಇರುವುದು ಸ್ಪಷ್ಟ.
ಸರಿ, ವಚನಸಾಹಿತ್ಯ ದಾಸಸಾಹಿತ್ಯ ಮುಂತಾದ ಗಂಭೀರ ಪ್ರಕಾರಗಳ ನಂತರ ಈಗ ಮತ್ತೊಂದಿಷ್ಟು ತರ್ಲೆ ಶ್ಲೇಷೆಗಳತ್ತ ಕಣ್ಣುಹಾಯಿಸೋಣ. ಸಿಂಹಾದ್ರಿಯ ಸಿಂಹ ಚಿತ್ರದಲ್ಲಿ ಅದೊಂದು ಚಂದದ ಹಾಡು- ‘ಕಲ್ಲಾದರೆ ನಾನು ಬೇಲೂರಿನ ಗುಡಿಯಲಿ ಇರುವೆ... ಹೂವಾದರೆ ನಾನು ಮೂಕಾಂಬೆಯ ಪಾದದಿ ಇರುವೆ...’ ಇದರಲ್ಲಿ ‘ಇರುವೆ’ ಪದಕ್ಕೆ ಇರುವೆ (ant) ಎಂಬ ಅರ್ಥವನ್ನು ಊಹಿಸಿಕೊಳ್ಳಿ. ಸಕ್ಕತ್ ತಮಾಷೆ! ಬೇಲೂರಿನ ಗುಡಿಯಲ್ಲಿ ಯಾರೋ ಪ್ರವಾಸಿಗರು ಪ್ರಸಾದದ ಪಂಚಕಜ್ಜಾಯ ಚೆಲ್ಲಿದ್ದಾರೆ. ಹಾಗಾಗಿ ಇರುವೆಗಳು ಬಂದಿವೆ. ಕೊಲ್ಲೂರಿನಲ್ಲೂ ಅದೇ ಕಥೆ. ಬಹುಶಃ ಪಂಚಾಮೃತ ಅಭಿಷೇಕದ ನಂತರ ಅರ್ಚಕರು ಸ್ವಚ್ಛ ಮಾಡಲು ಮರೆತಿದ್ದಾರೆ. ಮೂಕಾಂಬಿಕೆಯ ಪಾದಗಳಿಗೆ ಕಚ್ಚಿ ಕಚಗುಳಿ ಇಡುತ್ತಿವೆ ಇರುವೆಗಳು!
ಇನ್ನೊಂದು ಸನ್ನಿವೇಶ ಹೀಗೆ- ತರಗತಿಯಲ್ಲಿ ದಡ್ಡಾತಿದಡ್ಡ ಎನಿಸಿದ್ದ ಗುಂಡನನ್ನು ಕನ್ನಡಪಂಡಿತರು ಕೇಳ್ತಾರೆ: “ಗುಂಡಣ್ಣಾ ಎದ್ದೇಳೋ. ಲೋಪಸಂಧಿಗೆ ಒಂದು ಉದಾಹರಣೆ ಕೊಡು.” ಗುಂಡ ಯಥಾಪ್ರಕಾರ ತಲೆಕೆರೆದುಕೊಳ್ಳುತ್ತ ಕ್ಷೀಣದನಿಯಲ್ಲಿ ‘ಗೊತ್ತಿಲ್ಲ’ ಅಂತಾನೆ. ಗುರುಗಳು “ಭೇಷ್! ಇದೇ ಮೊದಲಸಲ ಸರಿ ಉತ್ತರ ಕೊಟ್ಟಿದ್ದೀಯಲ್ಲೋ! ಏನಾಗಿದೆ ನಿನಗೆ? ಇವತ್ತು ಸೂರ್ಯ ಪಶ್ಚಿಮದಲ್ಲಿ ಹುಟ್ಟಿದನೇನು?" ಎಂದಾಗ ಗುಂಡ ತಬ್ಬಿಬ್ಬು.
ಶ್ಲೇಷಸ್ಪರ್ಶ ಸಶೇಷ. ಮತ್ತಷ್ಟು ಮುಂದಿನವಾರ.
* * *
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.]
"Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!Version: 20241125

