Episodes

Saturday Sep 24, 2011
Self Reference Swaarasya
Saturday Sep 24, 2011
Saturday Sep 24, 2011
ದಿನಾಂಕ 25 ಸೆಪ್ಟೆಂಬರ್ 2011ರ ಸಂಚಿಕೆ...
ಇದರಲ್ಲಿ ಒಟ್ಟು ಹದಿನಾರು ಅಕ್ಷರಗಳಿವೆ
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] * * * ಬಹುಶಃ ನನ್ನ ಮೇಲೆ ನಿಮಗೆ ನಂಬಿಕೆಯಿಲ್ಲ. ಪರವಾಗಿಲ್ಲ. ಆದರೆ ನಿಮ್ಮ ಕಣ್ಣುಗಳ ಮೇಲಾದರೂ ನಂಬಿಕೆ ಬೇಡವೇ? ಬರೋಬ್ಬರಿ ಹದಿನಾರೇ ಅಕ್ಷರಗಳಿರುವ ಶೀರ್ಷಿಕೆಯನ್ನು ಓದಿದ ಮೇಲೂ ಮತ್ತೆ ಒಂದೊಂದಾಗಿ ಅಕ್ಷರಗಳನ್ನು ಎಣಿಸಿ ಕನ್ಫರ್ಮ್ ಮಾಡ್ಕೊಂಡ್ರಿ. ಅಲ್ವಾ? ಹೋಗಲಿಬಿಡಿ, ಅಂಕಣದ ಶೀರ್ಷಿಕೆಯಲ್ಲಿ ಎಷ್ಟು ಅಕ್ಷರಗಳಿವೆ ಎನ್ನುವುದರಿಂದ ನಿಮಗೇನೂ ಆಗಬೇಕಾದ್ದಿಲ್ಲ. ಆದರೆ ನನಗೆ ಅದು ಮುಖ್ಯವಾಗುತ್ತದೆ. ನನಗಿಂತಲೂ ಹೆಚ್ಚಾಗಿ ಪತ್ರಿಕೆಯ ಪುಟ ವಿನ್ಯಾಸ ಮಾಡುವವರಿಗೆ ಮತ್ತೂ ಮುಖ್ಯವಾಗುತ್ತದೆ. ಕಳೆದವಾರ ಹಾಗೇ ಆಯ್ತು. ಹೇನುಪುರಾಣದ ಲೇಖನಕ್ಕೆ ನಾನು ‘ಹೇನು ಹೆಕ್ಕೋ ಹೆಂಗಸಿಗೆ ಡಿಮಾಂಡಪ್ಪೋ ಡಿಮಾಂಡು’ ಎಂದು ಶೀರ್ಷಿಕೆ ಕೊಟ್ಟಿದ್ದೆ. ಕಾಶಿನಾಥ್ ಅಭಿನಯದ ಒಂದು ಜನಪ್ರಿಯ ಚಿತ್ರಗೀತೆ ಇದೆಯಲ್ಲ ಅದರ ಧಾಟಿಯಲ್ಲಿ ಎಂಬಂತೆ ಆ ಶೀರ್ಷಿಕೆ. ಆದರೆ ಅಂಕಣದ ಸ್ಥಳಾವಕಾಶಕ್ಕೆ ಅದು ಸ್ವಲ್ಪ ಉದ್ದ ಆಯ್ತು. ಒಟ್ಟು ಅಕ್ಷರಗಳು ಹದಿನೈದೇ ಆದರೂ ಅವುಗಳಲ್ಲಿ ಸುಮಾರೆಲ್ಲ ಕೊಂಬು ದೀರ್ಘ ಸೊನ್ನೆ ಇತ್ಯಾದಿ ಇದ್ದಂಥವಾದ್ದರಿಂದ ಜಾಗದ ಸಮಸ್ಯೆಯಾಯ್ತು. ಅಕ್ಷರಗಳನ್ನು ಸಪೂರವಾಗಿಸಿ ಒಂಚೂರು ಅಡ್ಜಸ್ಟ್ ಮಾಡಬಹುದಿತ್ತೇನೋ. ಆದರೆ ಅದು ಚಂದ ಕಾಣುವುದಿಲ್ಲವೆಂದು ವಿನ್ಯಾಸಕಾರರು ‘ಡಿಮಾಂಡಪ್ಪೋ’ ಪದವನ್ನಷ್ಟೇ ತೆಗೆದುಹಾಕಿ ಒಪ್ಪವಾದ ಅರ್ಥಪೂರ್ಣ ಶೀರ್ಷಿಕೆ ಮಾಡಿದರು. ಅದರಿಂದ ನನಗೇನೂ ಬೇಸರವಾಗಲಿಲ್ಲ. ನಿಮಗಂತೂ ಗೊತ್ತೇ ಆಗಲಿಲ್ಲ. ಈವಾರ ಅವೆಲ್ಲ ಕಷ್ಟವೇ ಬೇಡವೆಂದು ಶೀರ್ಷಿಕೆಯ ಸೈಜ್ ಎಷ್ಟಿದೆಯಂತ ಸುಲಭದಲ್ಲೇ ತಿಳಿಯುವಂತೆ ಈ ಪ್ಲಾನು! ಹಾಂ, ಕೊಂಚ ತಾಳಿ. ‘ಇದರಲ್ಲಿ ಒಟ್ಟು ಹದಿನಾರು ಅಕ್ಷರಗಳಿವೆ’ ಎಂಬ ವಾಕ್ಯವನ್ನು ಮತ್ತೊಮ್ಮೆ ಗಮನವಿಟ್ಟು ನೋಡಿ. ಏನಾದರೂ ವಿಶೇಷ ಕಾಣಿಸಿತೇ? ಈ ವಾಕ್ಯ ತನ್ನ ಬಗ್ಗೆ ತಾನೇ ಹೇಳಿಕೊಳ್ಳುತ್ತಿದೆ ಅಂತ ಅನಿಸಿತೇ? ಹೌದೆಂದಾದರೆ ಇವತ್ತಿನ ವ್ಯಾಖ್ಯಾನಕ್ಕೆ ಆಯ್ದುಕೊಂಡ self reference ಎಂಬ ವಿಷಯಗ್ರಹಣಕ್ಕೆ ನೀವು ಸಿದ್ಧರಾಗಿದ್ದೀರಿ ಎಂದರ್ಥ. ಇಲ್ಲವಾದರೂ ಚಿಂತಿಲ್ಲ. ಇದು ಗಣಿತದ ಕಬ್ಬಿಣದಕಡಲೆ ಏನಲ್ಲ, ವ್ಯಾಕರಣಶಾಸ್ತ್ರದ ತಲೆನೋವಂತೂ ಮೊದಲೇ ಅಲ್ಲ. ಯಥಾಪ್ರಕಾರ ಮನರಂಜನೆಯ ಜತೆಜತೆಗೇ ಮೆದುಳಿಗೆ ಮೇವು ಅಷ್ಟೇ. ಹೀಗೇ ಸುಮ್ಮನೆ ಓದಿಕೊಂಡು ಹೋಗಿ. ತನ್ನನ್ನು ತಾನೇ ಬಣ್ಣಿಸಿಕೊಳ್ಳುವ ರಚನೆಗಳು ಇಂಗ್ಲಿಷ್ನಲ್ಲಿ ಬೇಕಾದಷ್ಟಿವೆ. ಅವುಗಳಿಗೆ autograms ಎಂಬ ಹೆಸರೂ ಇದೆ. ಸರಳವಾದ ಉದಾಹರಣೆಯೆಂದರೆ `This sentence has five words' ಎಂಬ ವಾಕ್ಯ. ಅದಕ್ಕಿಂತ ಹೆಚ್ಚು ಮಜಾ ಎನಿಸುವ ಉದಾಹರಣೆ ಬೇಕಾದರೆ- "In this sentence the word 'and' occurs twice, the word 'eight' occurs twice, the word 'four' occurs twice, the word 'fourteen' occurs four times, the word 'in' occurs twice, the word 'occurs' occurs fourteen times, the word 'sentence' occurs twice, the word 'seven' occurs twice, the word 'the' occurs fourteen times, the word 'this' occurs twice, the word 'times' occurs seven times, the word 'twice' occurs eight times, and the word 'word' occurs fourteen times!" ಬೇಕಿದ್ದರೆ ಎಲ್ಲವನ್ನೂ ಲೆಕ್ಕ ಮಾಡಿನೋಡಿ. ಸರಿ, ವಾಕ್ಯಗಳೇನೋ ಅರ್ಥಬದ್ಧವಾಗಿಯೇ ಇವೆ. ಆದರೆ ಇದರಿಂದ ಉಪಯೋಗವೇನಾದರೂ ಇದೆಯೇ? ಇದೆ! ಇಂಗ್ಲಿಷ್ಗಿಂತ ಸಂಸ್ಕೃತ ಅಥವಾ ಕನ್ನಡದಲ್ಲಿನ ಅಂಥ ಒಂದೆರಡು ರಚನೆಗಳನ್ನು ಉದಾಹರಿಸಿದರೆ ಮನದಟ್ಟಾಗುತ್ತದೆ. ತತ್ಕ್ಷಣಕ್ಕೆ ನೆನಪಿಗೆ ಬರುವುದೆಂದರೆ ಸಂಸ್ಕೃತದಲ್ಲಿ ಅನುಷ್ಟುಪ್ ಛಂದಸ್ಸಿನ ನಿಯಮವನ್ನು ತಿಳಿಸುವ ಶ್ಲೋಕ. “ಪಂಚಮಂ ಲಘು ಸರ್ವತ್ರ| ಸಪ್ತಮಂ ದ್ವಿಚತುರ್ಥಯೋಃ| ಗುರು ಷಷ್ಠಂ ಚ ಪಾದಾನಾಂ| ಚತುರ್ಣಾಂಸ್ಯಾದನುಷ್ಟುಭಿಃ||” ಸ್ವಾರಸ್ಯವೇನೆಂದರೆ ಈ ಶ್ಲೋಕವೂ ಅನುಷ್ಟುಪ್ ಛಂದಸ್ಸಿನಲ್ಲೇ ಇರುವುದು! ಶ್ಲೋಕ ಏನು ಹೇಳುತ್ತಿದೆಯೆಂದರೆ ಅನುಷ್ಟುಪ್ ಛಂದಸ್ಸಿನ ಪದ್ಯದಲ್ಲಿ ತಲಾ ಎಂಟು ಅಕ್ಷರಗಳ ಒಟ್ಟು ನಾಲ್ಕು ಪಾದಗಳು ಇರುತ್ತವೆ. ಪ್ರತಿಯೊಂದು ಪಾದದ ಐದನೇ ಅಕ್ಷರ ಲಘು. ಎರಡನೇ ಮತ್ತು ನಾಲ್ಕನೇ ಪಾದಗಳ ಏಳನೇ ಅಕ್ಷರಗಳೂ ಲಘು. ನಾಲ್ಕೂ ಪಾದಗಳ ಆರನೇ ಅಕ್ಷರ ಗುರು. ಮೇಲಿನ ‘ನಿಯಮಶ್ಲೋಕ’ದಲ್ಲಿಯೂ ಈ ನಿಯಮ ಚಾಚೂತಪ್ಪದೆ ಪಾಲನೆಯಾಗಿದೆ. ಸಂಸ್ಕೃತದ ಬಹುತೇಕ ನಿಯಮಗಳೆಲ್ಲ ಈರೀತಿ ಆಟೋಗ್ರಾಮ್ ಮಾದರಿಯವೇ ಆಗಿದ್ದು ನೆನಪಿಟ್ಟುಕೊಳ್ಳುವುದಕ್ಕೆ ಸುಲಭವಾಗಿರುವುದು ಮೆಚ್ಚಬೇಕಾದ ಅಂಶ. ಒಂದು ವಸ್ತು ಅಥವಾ ವಿಷಯವನ್ನು ಕಲಿಯಬೇಕಿದ್ದರೆ ಅದನ್ನೇ ಸಂವಹನಸಾಧನ (ಕಲಿಕೆಯ ಮಾಧ್ಯಮ) ಆಗಿಸಿದರೆ ಅತ್ಯಂತ ಪರಿಣಾಮಕಾರಿಯಾಗುತ್ತದೆ ಎಂದು ನಮ್ಮ ಹಿರಿಯರು ಆಗಲೇ ಕಂಡುಕೊಂಡಿದ್ದರಲ್ಲ ನಿಜಕ್ಕೂ ತಲೆದೂಗಬೇಕು ಅವರ ಜಾಣತನಕ್ಕೆ. ‘ಛಂದೋಮಿತ್ರ’ ಪುಸ್ತಕದಲ್ಲಿ ಪ್ರೊ.ಅ.ರಾ.ಮಿತ್ರ ಅವರು ಕನ್ನಡದ ಛಂದಸ್ಸಿನ ವಿವರಣೆಗೂ ಇದೇ ತಂತ್ರವನ್ನು ಬಳಸಿದ್ದಾರೆ. ಭಾಮಿನಿ ಷಟ್ಪದಿಯ ನಿಯಮವನ್ನು ಅವರು ಒಂದು ಭಾಮಿನಿ ಷಟ್ಪದಿಯ ಛಂದದ ಮೂಲಕವೇ ಚಂದವಾಗಿ ವಿವರಿಸುತ್ತಾರೆ: “ಇವಳು ಭಾಮಿನಿ ಷಟ್ಪದಿಯ ಮಧು/ ರವದ ಗಾಯಕಿ ಮೂರು ನಾಲ್ಕರ/ ಕ್ರಮದ ಭಂಗಿಯ ಸಪ್ತಪದಿಯಲಿ ಕೈಯ ಹಿಡಿದವಳು/ ನವರಸಾವಿಷ್ಕಾರ ಸಂಪದೆ/ ಭವ ನಿಮಜ್ಜನ ಚತುರ ಭಾಷಿಣಿ/ ಕವಿಯ ಸೇವಿಸಿ ಕೊನೆಗೆ ಗುರುವೇ ಆಗಿ ನಿಲ್ಲುವಳು.” ಇಪ್ಪತ್ತು ಅಕ್ಷರಗಳ ಉತ್ಪಲಮಾಲಾ ವೃತ್ತವನ್ನು “ಆದಿಯೊಳೊಂದು ಬಂತೆ ಗುರು ಉತ್ಪಲಮಾಲೆಯ ಲಕ್ಷ್ಯ ಕಾಣಿರೇ” ಎಂದು ನಿಯಮಬದ್ಧವಾಗಿ ವಿವರಿಸುತ್ತಲೇ “ಮೇಲಧಿಕಾರಿಗಿಂತಲು ಫಿಮೇಲಧಿಕಾರಿಯೇ ತಾಟಗಿತ್ತಿಯೋ” ಎಂಬ ಭಲೇ ಮೋಜಿನ ಉದಾಹರಣೆಯನ್ನೂ ಕೊಡುತ್ತಾರೆ. ಇರಲಿ, ವ್ಯಾಕರಣದ ತಲೆನೋವಿಲ್ಲ ಎಂದು ಮೊದಲೇ ಹೇಳಿದ್ದೇನಾದ್ದರಿಂದ ಅದನ್ನು ಅಲ್ಲಿಗೇ ನಿಲ್ಲಿಸೋಣ. ಸೆಲ್ಫ್ ರೆಫರೆನ್ಸ್ ಅಥವಾ ‘ಸ್ವಪ್ರಸ್ತಾಪ’ದ ಸ್ವಾರಸ್ಯವು ಭಾಷೆಯ ಸೊಗಡಿನಲ್ಲಷ್ಟೇ ಇರುವುದೆಂದೇನಿಲ್ಲ. ಗಣಿತ, ಅಧ್ಯಾತ್ಮ, ಚಿತ್ರಕಲೆ, ಸಾಹಿತ್ಯ, ಸಂಗೀತ ಮುಂತಾಗಿ ವಿವಿಧ ಕ್ಷೇತ್ರಗಳಲ್ಲಿ ಅದು ಇಣುಕುವುದಿದೆ. ಎಷ್ಟೋಸಲ ಇದರಿಂದಲೇ ಸ್ವಾರಸ್ಯಕರ ವಿರೋಧಾಭಾಸಗಳು ಹುಟ್ಟುವುದೂ ಇದೆ. ಸೆಲ್ಫ್ ರೆಫರೆನ್ಸ್ ಮತ್ತು ವಿರೋಧಾಭಾಸಗಳ ಕುರಿತಾಗಿ ಇದೇ ಅಂಕಣದಲ್ಲಿ ಈಹಿಂದೆಯೂ (13 ಜುಲೈ 2008 ಮತ್ತು 6 ಸೆಪ್ಟೆಂಬರ್ 2009) ಬರೆದಿದ್ದೇನೆ. ಬರ್ಟ್ರಾಂಡ್ ರಸೆಲ್ ಮಂಡಿಸಿದ ‘ಕ್ಷೌರಿಕನ ವಿರೋಧಾಭಾಸ’ದಿಂದ ಹಿಡಿದು ಕಂಪ್ಯೂಟರ್ ಪ್ರೋಗ್ರಾಮಿಂಗ್ನಲ್ಲಿ ಬರುವ recursive algorithmsವರೆಗೂ ವಿಶ್ಲೇಷಿಸಿದ್ದೇನೆ. ಮತ್ತಷ್ಟು ಸಂಗ್ರಹದಿಂದ ಆಯ್ದ ಒಂದೆರಡು ಸ್ವಾರಸ್ಯಕರ ಅಂಶಗಳನ್ನು ಈಗ ವಿವರಿಸುತ್ತೇನೆ. ಒಮ್ಮೆ ನಾಲ್ವರು ಬೌದ್ಧಭಿಕ್ಷುಗಳು ಮೌನವ್ರತ ಆಚರಿಸುವ ನಿರ್ಧಾರ ಮಾಡುತ್ತಾರೆ. ಕನಿಷ್ಠ ಒಂದೆರಡು ವಾರಗಳಾದರೂ ಯಾವೊಂದು ಮಾತೂ ಇಲ್ಲದೆ ಧ್ಯಾನದಲ್ಲೇ ಕಳೆಯಬೇಕೆಂದು ಅವರ ಸಂಕಲ್ಪ. ಮೊದಲದಿನ ಸಂಜೆ ಹೊತ್ತು. ಕತ್ತಲೆಯಲ್ಲಿ ಬೆಳಕಿಗೆಂದು ಮೋಂಬತ್ತಿ ಹಚ್ಚಿಟ್ಟು ಸುತ್ತ ಕುಳಿತುಕೊಂಡಿದ್ದಾರೆ. ಗಾಳಿಗೋ ಅಥವಾ ಪತಂಗ ಬಂದೋ ಅಂತೂ ಮೋಂಬತ್ತಿಯ ಜ್ವಾಲೆ ಅಲುಗಾಡಿ ಕೊನೆಗೆ ಆರಿಹೋಗಿದೆ. ಮೊದಲ ಭಿಕ್ಷು ಮೌನವ್ರತವನ್ನು ಮರೆತು “ಅಯ್ಯೋ ಮೋಂಬತ್ತಿ ನಂದಿಹೋಯ್ತಲ್ಲ!” ಎನ್ನುತ್ತಾನೆ. ಆಗ ಎರಡನೇ ಭಿಕ್ಷು “ಅರ್ರೇ ನಾವು ಮಾತನಾಡಲಿಕ್ಕಿಲ್ಲ ಎಂದಲ್ವಾ ನಿರ್ಧರಿಸಿದ್ದು?” ಎಂದು ಉದ್ಗರಿಸುತ್ತಾನೆ. ಮೂರನೇಯವನು ಅವರಿಬ್ಬರನ್ನು ಗಮನಿಸಿ “ನೀವಿಬ್ಬರೇಕೆ ಮೌನವನ್ನು ಮುರಿದಿರಿ?” ಎನ್ನುತ್ತಾನೆ. ನಾಲ್ಕನೆಯವನಾದರೂ ಸುಮ್ಮನಿರಬೇಡವೇ? ಅವನು ಗಹಗಹಿಸಿ ನಕ್ಕು “ನೋಡಿದ್ರಾ? ನಾನೊಬ್ಬನೇ ಮಾತನಾಡದೇ ಇರುವವನು!” ಎಂದುಬಿಟ್ಟ. ಇಲ್ಲೇನಾಯ್ತು? ಭಿಕ್ಷುಗಳ ಮಾತನಾಡುವಿಕೆಯಲ್ಲೇ ಅವರ ಮೌನದ ಪ್ರಸ್ತಾಪವೂ ಆಯ್ತು, ಆದರೆ ಮಾತನಾಡಿದ್ದರಿಂದಾಗಿ ಅವರ ಮೌನಭಂಗವಾದಂತೆಯೂ ಆಯ್ತು. ಯೋಚಿಸಿದರೆ ಸರಳವಾದರೂ ಸಂಕೀರ್ಣ ಸನ್ನಿವೇಶ. ‘ಹನ್ನೆರಡು ಜನ ಬುದ್ಧಿವಂತರ’ ಕತೆಯನ್ನು ನೆನಪಿಸುವಂಥದು.

Saturday Sep 17, 2011
Biggest Nitpicker Literally
Saturday Sep 17, 2011
Saturday Sep 17, 2011
ದಿನಾಂಕ 18 ಸೆಪ್ಟೆಂಬರ್ 2011ರ ಸಂಚಿಕೆ...
ಹೇನು ಹೆಕ್ಕೋ ಹೆಂಗಸಿಗೆ ಡಿಮಾಂಡಪ್ಪೊ ಡಿಮಾಂಡು
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] * * * ಕನ್ನಡದ ಪತ್ರಿಕೆಗಳೇನಾದರೂ ಆಕೆಯ ಕುರಿತು ನುಡಿಚಿತ್ರ ಬರೆಯುತ್ತಿದ್ದರೆ ತಲೆಬರಹ ಹಾಗೆ ಇರುತ್ತಿತ್ತು. ಆದರೆ ಆ ನ್ಯೂಸ್ಸ್ಟೋರಿ ಪ್ರಕಟವಾದದ್ದು ಇಲ್ಲಿನ ‘ವಾಷಿಂಗ್ಟನ್ ಪೋಸ್ಟ್’ ಆಂಗ್ಲ ಪತ್ರಿಕೆಯಲ್ಲಿ. ಅದೇನು ಪದಚಮತ್ಕಾರದಲ್ಲಿ ಕಮ್ಮಿ ಅಂದುಕೊಂಡ್ರಾ? ಲೇಖನದ ಓಪನಿಂಗ್ ಪ್ಯಾರಗ್ರಾಫ್ ಹೇಗಿದೆ ನೋಡಿ- The world is full of lousy jobs, but Karen Franco just might have one of the lousiest. As a professional nitpicker, the 45-year-old Washington woman spends a good part of her week searching for live lice and their tiny eggs, called nits, in hair. Majority of her customers are school-going girls… ಇಂಗ್ಲಿಷ್ನಲ್ಲಿ lice ಎಂದರೆ ಹೇನು. ಅದು ಬಹುವಚನ ಅಥವಾ ಸಮೂಹವಾಚಕ ಪದ. ಒಂದೇ ಹೇನಾದರೆ louse ಎನ್ನಬೇಕು (mice ಮತ್ತು mouse ಇದ್ದಹಾಗೆ). ಅದನ್ನೇ ಶ್ಲೇಷೆಯಿಂದ ಬಳಸಿಕೊಂಡಿದೆ ವಾಷಿಂಗ್ಟನ್ ಪೋಸ್ಟ್ ಪತ್ರಿಕೆ. ಇರಲಿ, ವಿಷಯ ಪದಚಮತ್ಕಾರದ್ದಲ್ಲ; ಕೆರೆನ್ ಫ್ರಾಂಕೊ ಎಂಬ ಹೆಸರಿನ ಒಬ್ಬ ಸ್ವಉದ್ಯೋಗಿ ಮಹಿಳೆಯದು. ವಾಷಿಂಗ್ಟನ್ ನಿವಾಸಿಯಾಗಿರುವ ಈಕೆಯ ಸ್ಪೆಷಾಲಿಟಿ ಏನೆಂದರೆ ಹೇನು ಹೆಕ್ಕುವುದು. ಅದು ಅವಳ ಫುಲ್ಟೈಮ್ ದಂಧೆ. ಅಷ್ಟೇಅಲ್ಲ, ಈಗ ಅವಳ ಗಂಡನೂ ಸೇರಿಕೊಂಡು lice and advice ಎಂಬ ಕನ್ಸಲ್ಟೆನ್ಸಿ ಕಂಪನಿ ಆರಂಭಿಸಿದ್ದಾರೆ. ಅಮೆರಿಕದ ಆರ್ಥಿಕತೆ ಅಲ್ಲೋಲಕಲ್ಲೋಲವಾಗಿ ಅದೆಷ್ಟೋ ಜನ ಉದ್ಯೋಗ ಕಳಕೊಂಡು ಒದ್ದಾಡುತ್ತಿದ್ದರೆ ಇವರಿಬ್ಬರ ‘ಹೇನುಗಾರಿಕೆ’ ಉದ್ಯಮ ಹುಲುಸಾಗಿ ಬೆಳೆದಿದೆ! ಪತ್ರಿಕೆಯ ಪಾತ್ರವೂ ಇದೆ ಈ ಸ್ವಾರಸ್ಯಕರ ಬೆಳವಣಿಗೆಯಲ್ಲಿ. ನಾಲ್ಕು ವರ್ಷಗಳ ಹಿಂದೆ 2007ರಲ್ಲಿ ಕೆರೆನ್ಳ ಬಗ್ಗೆ ನ್ಯೂಸ್ಐಟಮ್ ಪ್ರಕಟವಾದಾಗ ಆಕೆಯಿನ್ನೂ ಒಬ್ಬ ಆರ್ಟ್ ಟೀಚರ್ ಆಗಿದ್ದಳು. ಬಿಡುವಿನ ಅವಧಿಯಲ್ಲಿ ಪಾರ್ಟ್ಟೈಮ್ ಕೆಲಸ ಅಂತ ಅವರಿವರ ಮನೆಗಳಿಗೆ ಹೆಣ್ಮಕ್ಕಳ ತಲೆಯಲ್ಲಿನ ಹೇನು ಹೆಕ್ಕಲಿಕ್ಕೆ ಹೋಗುತ್ತಿದ್ದಳು. ಅದನ್ನೂ ಅವಳೇನು ದುಡ್ಡಿಗಾಗಿ ಶುರುಮಾಡಿದ್ದಲ್ಲವಂತೆ. ತನ್ನ ಮಗಳ ಶಾಲೆಯಲ್ಲಿ ಹುಡುಗಿಯರಿಗೆ ಹೇನಿನ ಕಾಟ ವಿಪರೀತವಾದಾಗ ಶಾಲೆಯಿಂದ ಅನುಮತಿ ಪಡೆದು ಅವರೆಲ್ಲರ ತಲೆಯ ಹೇನು ನಾಶದ ದೀಕ್ಷೆ ತೊಟ್ಟಳು. ಅದರಲ್ಲಿ ಯಶಸ್ವಿಯಾಗಿ ನೆರೆಕೆರೆಯಲ್ಲೆಲ್ಲ ಪ್ರಸಿದ್ಧಳಾದಳು. ಹೇನು ನಿವಾರಣೆಗೆಂದು ಕೆರೆನ್ಗೆ ತಲೆಯೊಪ್ಪಿಸುವವರ ಸಂಖ್ಯೆ ಹೆಚ್ಚಾದಾಗ ‘ತಲಾ’ 18 ಡಾಲರ್ (ಜುಯಿಶ್ ಸಂಪ್ರದಾಯದ ಕೆರೆನ್ಗೆ ಆ ಸಂಖ್ಯೆ ಪವಿತ್ರ) ಶುಲ್ಕ ವಸೂಲಿ ಮಾಡತೊಡಗಿದಳು. ಜಮೆಯಾದ ಹಣವನ್ನು ದತ್ತಿನಿಧಿಗೆ ದಾನಮಾಡಿದಳು. ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯ ಭಾನುವಾರದ ಪುರವಣಿಯಲ್ಲಿ ಒಂದು ಇಂಟರೆಸ್ಟಿಂಗ್ ಸ್ಥಿರಶೀರ್ಷಿಕೆ ಇರುತ್ತದೆ, Whatever Happened To... ಅಂತ ಅದರ ಹೆಸರು. ಪತ್ರಿಕೆಯಲ್ಲಿ ಈಹಿಂದೆ ಯಾವಾಗಲೋ ಪ್ರಕಟವಾಗಿದ್ದ, ತುಸು ವಿಲಕ್ಷಣ ರೀತಿಯಲ್ಲಿ ಸುದ್ದಿಯಾಗಿದ್ದ ವ್ಯಕ್ತಿ ಈಗೇನು ಮಾಡುತ್ತಿದ್ದಾರೆ ಎಂದು ಬೆಳಕು ಚೆಲ್ಲುವ ಪುಟ್ಟ ಅಪ್ಡೇಟ್ ಮಾದರಿಯ ಬರಹ. ವಾರಕ್ಕೊಬ್ಬ ವ್ಯಕ್ತಿಯ ಕುರಿತು ಬರುತ್ತದೆ, ತುಂಬಾ ಚೆನ್ನಾಗಿರುತ್ತದೆ. ಮೊನ್ನೆ ಕೆರೆನ್ಳ ಸಮಾಚಾರ ಪ್ರಕಟವಾಗಿತ್ತು. 2007ರಲ್ಲಿ ಪತ್ರಿಕೆಯಲ್ಲಿ ಕೆರೆನ್ ಹೇನುಗಾರಿಕೆಯ ಬಗ್ಗೆ ಲೇಖನ ಪ್ರಕಟವಾದದ್ದೇ ತಡ ಅವಳಿಗೆ ದೂರವಾಣಿ ಕರೆಗಳು ಮತ್ತು ಇಮೇಲ್ಗಳು ಪ್ರವಾಹದೋಪಾದಿ ಬರತೊಡಗಿದವಂತೆ. “ನಮ್ಮ ಮಗಳಿಗೆ ಸಿಕ್ಕಾಪಟ್ಟೆ ಹೇನಿದೆ, ನಿಮ್ಮತ್ರ ಕರ್ಕೊಂಡು ಬರಬಹುದೇ?”, “ನಮ್ಮ ಮಗಳ ತಲೆಯಲ್ಲಿ ಹೇನಿದೆಯಂತ ಸ್ಕೂಲಿಂದ ಮನೆಗೆ ಕಳಿಸ್ತಾರೆ. ಈ ಸಮಸ್ಯೆ ನಿವಾರಣೆಗೆ ದಯವಿಟ್ಟು ನೆರವಾಗ್ತೀರಾ?”... ಹೀಗೆ ಭರಪೂರ ಬೇಡಿಕೆಗಳು. ಲೇಖನ ಪ್ರಕಟವಾಗಿ ಒಂದೆರಡು ತಿಂಗಳಿಗೆಲ್ಲ ಕೆರೆನ್ ತನ್ನ ಆರ್ಟ್ ಟೀಚಿಂಗ್ ವೃತ್ತಿಯನ್ನು ಬಿಟ್ಟು ಪೂರ್ಣಾವಧಿ ಹೇನುಗಾರಿಕೆ ಆರಂಭಿಸಿದಳು. ಪುಟ್ಟದೊಂದು ಆಫೀಸ್-ಕಮ್-ಕ್ಲಿನಿಕ್ ತೆರೆದಳು. ಅಪಾಯಿಂಟ್ಮೆಂಟ್ಗಳನ್ನು ನಿರ್ವಹಿಸಲಿಕ್ಕೆ ಮತ್ತು ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಗಂಡ ಮುಂದಾದ. ಮೂವತ್ತು ವರ್ಷಗಳಿಂದ ಮಾಡಿಕೊಂಡು ಬಂದಿದ್ದ ಸೇಲ್ಸ್ಮನ್ ವೃತ್ತಿಗೆ ತಿಲಾಂಜಲಿಯಿತ್ತು ಕೆರೆನ್ಳ ವಹಿವಾಟಿನಲ್ಲಿ ಆತ ಪಾಲುದಾರನಾದ.



Saturday Sep 10, 2011
Fastfood Industry and Human Psychology
Saturday Sep 10, 2011
Saturday Sep 10, 2011
ದಿನಾಂಕ 11 ಸೆಪ್ಟೆಂಬರ್ 2011ರ ಸಂಚಿಕೆ...
ಕ್ಷಿಪ್ರಾಹಾರದ ಚಟವೂ ಮನೋವಿಜ್ಞಾನವೂ
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] * * * ಮೆಕ್ಡೊನಾಲ್ಡ್ಸ್ ಒಂದೇ ಅಂತಲ್ಲ, ಸಬ್ವೇ, ಪಿಜ್ಜಾ ಹಟ್, ಬರ್ಗರ್ ಕಿಂಗ್, ಕೆಎಫ್ಸಿ ಮುಂತಾದ ‘ಕ್ಷಿಪ್ರಾಹಾರ’ (ಫಾಸ್ಟ್ಫುಡ್) ಉದ್ಯಮಗಳೆಲ್ಲ ದುಡ್ಡು ಮಾಡೋದು ನಮ್ಮ ಹೊಟ್ಟೆಯ ಅಗತ್ಯಗಳನ್ನು ಅರ್ಥಮಾಡಿಕೊಂಡು ಅಲ್ಲವೇ ಅಲ್ಲ! ಮತ್ತೆ? ನಮ್ಮ ಮಿದುಳು ಹೇಗೆ ಕಾರ್ಯಾಚರಣೆ ಮಾಡುತ್ತೆ ಅಂತ ಈ ಬಹುರಾಷ್ಟ್ರೀಯ ಖಾನಾವಳಿಗಳಿಗೆ ಚೆನ್ನಾಗಿ ಗೊತ್ತಿದೆ. ಇವು ಗ್ರಾಹಕರ ಮೈಂಡ್ ರೀಡಿಂಗ್ ಮಾಡಬಲ್ಲವು. ಮೇಧಾಶಾಸ್ತ್ರ ಅಥವಾ Neuroscinece ಕ್ಷೇತ್ರದಲ್ಲಿ ಆಗಿರುವ ಸುಮಾರಷ್ಟು ಸಂಶೋಧನೆಗಳು- ಮುಖ್ಯವಾಗಿ ಆಹಾರ ಸೇವನೆ ಮತ್ತು ತತ್ಸಂಬಂಧಿ ನಿರ್ಧಾರಗಳ ವೇಳೆ ನಮ್ಮ ನರಮಂಡಲದಲ್ಲಿ ಆಗುವ ಪ್ರಕ್ರಿಯೆಗಳು- ಈ ಫಾಸ್ಟ್ಫುಡ್ ಕಂಪನಿಗಳ ಟ್ರೇಡ್ ಸೀಕ್ರೆಟ್ಗಳೇ ಆಗಿವೆ. ಹೀಗೆನ್ನುತ್ತಾನೆ ಜೊಶುವಾ ಗೊವಿನ್, ‘ಸೈಕಾಲಜಿ ಟುಡೇ’ ಜರ್ನಲ್ನಲ್ಲಿ ಇತ್ತೀಚೆಗೆ ಪ್ರಕಟವಾದ ಒಂದು ಲೇಖನದಲ್ಲಿ. 7 Things McDonald’s Knows About Your Brain ಅಂತಲೇ ಇದೆ ಆ ಲೇಖನದ ಶೀರ್ಷಿಕೆ. ಜೊಶುವಾ ಗೊವಿನ್ ಹ್ಯೂಸ್ಟನ್ನಲ್ಲಿ ಯೂನಿವರ್ಸಿಟಿ ಆಫ್ ಟೆಕ್ಸಾಸ್ನಲ್ಲಿ ಸೈಕಾಲಜಿ ಸಂಶೋಧಕ. ಅಮೆರಿಕದವನಾದ್ದರಿಂದ ಮೆಕ್ಡೊನಾಲ್ಡ್ಸ್ಅನ್ನು ನಿದರ್ಶನವಾಗಿ ಬಳಸಿಕೊಂಡಿದ್ದಾನೆ ಅಷ್ಟೇ. ಒಂದುವೇಳೆ ನಮ್ಮ ಬೆಂಗಳೂರಿನ ದರ್ಶಿನಿಗಳ ಭರಾಟೆಯನ್ನು ಈತ ನೋಡುತ್ತಿದ್ದರೆ ತನ್ನ ಲೇಖನದಲ್ಲಿ ಅವುಗಳನ್ನೇ ಉದಾಹರಿಸುತ್ತಿದ್ದನೋ ಏನೋ. ಏಕೆಂದರೆ ಜೊಶುವಾ ಹೇಳುವ ಅಂಶಗಳೆಲ್ಲ ಹೆಚ್ಚೂಕಡಿಮೆ ದರ್ಶಿನಿಗಳ ವಿಚಾರದಲ್ಲೂ ತಾಳೆಯಾಗುತ್ತವೆ. ಇರಲಿ, ಮೆಕ್ಡೊನಾಲ್ಡ್ಸ್ ಈಗ ಭಾರತದಲ್ಲೂ ನಗರಪ್ರದೇಶಗಳಲ್ಲಿ ಸಾಕಷ್ಟು ಪರಿಚಿತವೇ ಆಗಿದೆ. ಹಾಗಾಗಿ ಈ ಸಪ್ತಸೂತ್ರಗಳ ವಿಚಾರವನ್ನು ನಾವು ಮೆಕ್ಡೊನಾಲ್ಡ್ಸ್ ಉದಾಹರಣೆಯಿಂದಲೇ ತಿಳಿದುಕೊಳ್ಳಲಿಕ್ಕೆ ಅಡ್ಡಿಯಿಲ್ಲ. ಸಕ್ಕರೆಯ ಸಮ್ಮೋಹನ ಶಕ್ತಿಯೇ ಮೊಟ್ಟಮೊದಲ ಸೂತ್ರ. ರುಚಿಗಳ ಪೈಕಿ ಸಿಹಿ ಎಂದರೆ ಎಲ್ಲರಿಗೂ ಇಷ್ಟ ಎಂಬುದು ಗೊತ್ತೇಇರುವ ವಿಚಾರ. ಬರೀ ಇಷ್ಟ ಮಾತ್ರ ಆಗಿದ್ದರೆ ಪರವಾಗಿಲ್ಲ, ಸಕ್ಕರೆಗೆ addictive ಗುಣವೂ ಇದೆ. ಇದನ್ನು ವಿಜ್ಞಾನಿಗಳು ಇಲಿಗಳ ಮೇಲೆ ಪ್ರಯೋಗ ನಡೆಸಿ ಕಂಡುಕೊಂಡಿದ್ದಾರೆ. ಸಕ್ಕರೆಯಂಶವನ್ನು ಹೆಚ್ಚು ಸೇವಿಸಿದ ಮಕ್ಕಳು ‘ಹೈಪರ್’ ಆಗುವುದೂ ಇದೇ ಕಾರಣಕ್ಕೆ. ಮೆಕ್ಡೊನಾಲ್ಡ್ಸ್ನ ಮೆನುದಲ್ಲಿ ಬಹುತೇಕ ಎಲ್ಲ ಐಟಮ್ಗಳಲ್ಲೂ- ಕೆಚ್ಅಪ್, ಕೂಲ್ಡ್ರಿಂಕ್ಸ್, ಬನ್ ಮಾತ್ರವಲ್ಲ; ಫ್ರೆಂಚ್ಫ್ರೈಸ್ ಎಂದು ಕರೆಯಲ್ಪಡುವ ಆಲೂಗಡ್ಡೆ ಚಿಪ್ಸ್ನಲ್ಲೂ ಸಕ್ಕರೆ ಇರುತ್ತದೆ. ಇತ್ತೀಚೆಗೆ ಸೇರ್ಪಡೆಗೊಂಡ ಫ್ರೂಟ್ ‘ಸ್ಮೂತಿ’ಯೂ ಸಕ್ಕರೆಮಯವೇ. ಒಟ್ಟಿನಲ್ಲಿ ಸಕ್ಕರೆಯಿಂದ ಒಂಥರದ ಕಿಕ್ ಪಡೆದುಕೊಳ್ಳುವ ಮಿದುಳಿನ ಸ್ವಭಾವವನ್ನು ಮೆಕ್ಡೊನಾಲ್ಡ್ಸ್ ಚೆನ್ನಾಗಿ ಎನ್ಕ್ಯಾಷ್ ಮಾಡಿಕೊಂಡಿದೆ. ಎರಡನೆಯದಾಗಿ ಉರವಣೆ ತಡೆ (impulse control) ವಿಷಯದಲ್ಲಿ ಮಿದುಳಿನ ಸಾಮರ್ಥ್ಯ ಮತ್ತು ದೌರ್ಬಲ್ಯ. ಜಿಹ್ವಾಚಾಪಲ್ಯ ಎಲ್ಲರಿಗೂ ಇರುತ್ತದೆ. ಕೆಲವರು ಮಾತ್ರ ಅದನ್ನು ಸುಮಾರಾಗಿ ನಿಗ್ರಹಿಸಬಲ್ಲರು. ಆದರೂ ಆಹಾರ ಹತ್ತಿರದಲ್ಲೇ ಇದೆಯೆಂದಾಗ ನಿಯಂತ್ರಣ ತಪ್ಪುವುದೇ ಹೆಚ್ಚು. ಅಮೆರಿಕದ ಯಾವುದೇ ಪಟ್ಟಣದಲ್ಲಾಗಲೀ ಐದು ನಿಮಿಷಕ್ಕೂ ಕಡಿಮೆ ಡ್ರೈವಿಂಗ್ ದೂರದಲ್ಲಿ ಒಂದು ಮೆಕ್ಡೊನಾಲ್ಡ್ಸ್ ಕಂಡುಬರುತ್ತದೆ. ಅಂದಮೇಲೆ ಉರವಣೆ ತಡೆಯುವುದು ಸ್ವಲ್ಪ ಕಷ್ಟವೇ. ‘ನಿಮ್ಮ ಅನುಕೂಲಕ್ಕಾಗಿ ಈಗ ನಿಮ್ಮ ಸಮೀಪದಲ್ಲೇ...’ ಎಂಬ ಜಾಹೀರಾತು ಬೇರೆ. ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರಿನ ಜನತೆಯ ಆಹಾರಸೇವನೆಯ ಮೇಲೆ ದರ್ಶಿನಿಗಳ ಪ್ರಭಾವವೂ ಇದೇ ರೀತಿಯಲ್ಲಾಗಿದೆ ಅಂತನಿಸುವುದಿಲ್ಲವೇ? ಐದು ನಿಮಿಷದ ಕಾಲ್ನಡಿಗೆ ದೂರದಲ್ಲಿ ಕನಿಷ್ಠ ಮೂರ್ನಾಲ್ಕು ದರ್ಶಿನಿಗಳು! ಯಾವುದಕ್ಕೇ ಆಗಲಿ ದುಡ್ಡು ಕೊಡಬೇಕೆಂದಾಗ ಮಿದುಳು (ಮನಸ್ಸು) ಅದನ್ನು ಒಂಥರದ ನೋವು ಎಂದೇ ಪರಿಗಣಿಸುತ್ತದೆ. ಕಾಲಿನ ಬೆರಳಿಗೆ ಗಾಯವಾದಾಗ ಮಿದುಳು ಎಷ್ಟು ವ್ಯಗ್ರವಾಗುತ್ತೋ ನೂರಿನ್ನೂರು ರೂಪಾಯಿ ಕಳಕೊಂಡಾಗಲೂ ಹಾಗೇ ಆಗುತ್ತದಂತೆ. ಇದನ್ನು ಬ್ರೈನ್ ಇಮೇಜಿಂಗ್ ಮೂಲಕ ಕಂಡುಹಿಡಿದಿದ್ದಾರೆ. ಹೀಗಿರುವಾಗ ಕೊಟ್ಟ ದುಡ್ಡಿಗೆ ಸರಿಯಾಗಿ ವಸ್ತು ಅಥವಾ ಸೇವೆ ಸಿಕ್ಕಿತೇ ಎಂದು ನಮ್ಮ ಮಿದುಳು ಯಾವಾಗಲೂ ಲೆಕ್ಕಾಚಾರ ಮಾಡುತ್ತದೆ. ಮೂರನೇ ತಂತ್ರವಾಗಿ ಮೆಕ್ಡೊನಾಲ್ಡ್ಸ್ ಏನು ಮಾಡುತ್ತದೆಂದರೆ ಯಾವುದೋ ಒಂದೆರಡು ಐಟಮ್ಗಳಿಗೆ ಕಡಿಮೆ ದರ ಇಟ್ಟು ಗಿರಾಕಿಗಳನ್ನು ಆಕರ್ಷಿಸುತ್ತದೆ; ಹೋದಮೇಲೆ ಯಾರೂ ಬರೀ ಬನ್ ಮಾತ್ರ ತಿನ್ನೋಲ್ಲ ಅಂತ ಗೊತ್ತು. ಫ್ರೈಸ್ ಮತ್ತು ಕೋಲ್ಡ್ಡ್ರಿಂಕ್ಗೆ ಡಬ್ಬಲ್ ಚಾರ್ಜ್ ಮಾಡಿದರೂ ಗಿರಾಕಿಯ ಮಿದುಳು ತನಗೆ ಚೀಪ್ ಆಗಿಯೇ ಆಹಾರ ಸಿಕ್ಕಿತು ಎಂದು ತೃಪ್ತಿಯಿಂದ ತೇಗಿರುತ್ತದೆ!

Saturday Sep 03, 2011
Beautiful Beliefs
Saturday Sep 03, 2011
Saturday Sep 03, 2011
ದಿನಾಂಕ 04 ಸೆಪ್ಟೆಂಬರ್ 2011ರ ಸಂಚಿಕೆ...
‘ಕೆರೆಯ ನೀರನು ಕೆರೆಗೆ ಚೆಲ್ಲಿ...’ ಎಂಬಂತೆ
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] * * * ಸತತ ಮೂರು ವಾರಗಳಿಂದ ನಂಬಿಕೆಗಳದ್ದೇ ಪಾರಾಯಣ (ಓದುಗರೊಬ್ಬರು ಇಟ್ಟ ಹೆಸರು ‘ನಂಬಿಕಾಯಣ’). ನೀವು ಗಮನಿಸಿದ್ದೀರೊ ಇಲ್ಲವೋ ಮೂರು ವಾರವೂ ತಲೆಬರಹದಲ್ಲಿ ದಾಸವಾಣಿಯ ಮೂಲಕ ಭಗವನ್ನಾಮಸ್ಮರಣ. ‘ಚಿಂತ್ಯಾಕೆ ಮಾಡುತ್ತಿದ್ದಿ ಚಿನ್ಮಯನಿದ್ದಾನೆ...’, ‘ನಂಬಿ ಕೆಟ್ಟವರಿಲ್ಲವೋ ರಂಗಯ್ಯನ...’ ಮತ್ತು ಇವತ್ತಿನ ‘ಕೆರೆಯ ನೀರನು ಕೆರೆಗೆ ಚೆಲ್ಲಿ...’ - ಇವೆಲ್ಲವೂ ಪುರಂದರದಾಸರ ಜನಪ್ರಿಯ ರಚನೆಗಳು. ಈರೀತಿ ಯಾವುದಾದರೂ ಹಾಡಿನ ಸಾಲನ್ನು (ಚಿತ್ರಗೀತೆ ಭಾವಗೀತೆ ಭಕ್ತಿಗೀತೆ ಯಾವುದೂ ಆಗುತ್ತೆ) ಲೇಖನಕ್ಕೆ ಶೀರ್ಷಿಕೆಯಾಗಿಸುವುದು ನನಗೆ ತುಂಬಾ ಇಷ್ಟ. ಓದುಗರ ಗಮನ ಸೆಳೆಯಲು ಅದೊಂದು ತಂತ್ರವೂ ಹೌದೆನ್ನಿ. ಅಲ್ಲದೇ ಅಂಕಣಕ್ಕೊಂದು ಅನೌಪಚಾರಿಕ ಆಪ್ತತೆ ಅದರಿಂದ ಬರುತ್ತದೆಂದು ನನ್ನ ನಂಬಿಕೆ. ಹಾಗಾಗಿ ಆಗೊಮ್ಮೆ ಈಗೊಮ್ಮೆ ಈ ಪ್ರಯೋಗ ಮಾಡುತ್ತೇನೆ. ಪ್ರಸ್ತುತ ‘ಕೆರೆಯ ನೀರನು ಕೆರೆಗೆ ಚೆಲ್ಲಿ’ ಶೀರ್ಷಿಕೆಗೆ ಎರಡು ಕಾರಣಗಳಿವೆ: ಓದುಗರ ನಂಬಿಕೆಗಳ ಪತ್ರಗಳು ಇನ್ನೂ ಪ್ರವಾಹದೋಪಾದಿಯಲ್ಲಿ ಬರುತ್ತಿದ್ದು ಅವುಗಳಲ್ಲಿನ ಸ್ವಾರಸ್ಯಕರ ಅಂಶಗಳನ್ನು ನಾನೊಬ್ಬನೇ ಸವಿಯುವುದು ಸರಿಯಲ್ಲ, ಅದಕ್ಕೋಸ್ಕರ ಕೆರೆಯ ನೀರನು ಕೆರೆಗೆ ಚೆಲ್ಲಿ ಎಂಬಂತೆ ಈ ವಾರವೂ ಓದುಗರ ಓಲೆಗಳದೇ ಟಚ್. ಎರಡನೆಯ ಕಾರಣ ಸ್ವಲ್ಪ ತಮಾಷೆಯದು; ಅದೇನೆಂದು ಲೇಖನವನ್ನು ಓದಿಮುಗಿಸಿದಾಗ ನೀವೇ ಕಂಡುಕೊಳ್ಳುವಿರಂತೆ. ಕಳೆದುಹೋದ ವಸ್ತು ಸಿಗಬೇಕಿದ್ದರೆ ಕಾರ್ತವೀರ್ಯಾರ್ಜುನನನ್ನು ಸ್ಮರಿಸಬೇಕೆಂಬ ನಂಬಿಕೆಯನ್ನು ಕಳೆದವಾರ ತಿಳಿದುಕೊಂಡೆವಷ್ಟೆ? ನಾನೆಲ್ಲೋ ಅದು ತಮಾಷೆಗೆಂದೇ ಸೃಷ್ಟಿಯಾದದ್ದಿರಬಹುದು ಎಂದುಕೊಂಡಿದ್ದೆ. ಮತ್ತೆ ನೋಡಿದರೆ ಅದಕ್ಕೊಂದು ಮಂತ್ರವೂ ಇದೆಯಂತೆ! ಹಾಸ್ಯಲೇಖಕ ಬೇಲೂರು ರಾಮಮೂರ್ತಿ ಪತ್ರದಲ್ಲಿ ಬರೆದಿದ್ದಾರೆ- “ನಾನು ಚಿಕ್ಕವನಿದ್ದಾಗ ಏನೇ ವಸ್ತುಗಳನ್ನು ಕಳೆದುಕೊಂಡರೂ ನಮ್ಮ ತಂದೆ ನನಗೆ ಕೈಕಾಲು ಮುಖ ತೊಳೆದುಕೊಂಡು ಬರುವಂತೆ ಹೇಳಿ ದೇವರಿಗೆ ಊದುಬತ್ತಿ ಹಚ್ಚಿಸಿ ನಮಸ್ಕಾರ ಮಾಡಿಸಿ ಆಮೇಲೆ, ಕಾರ್ತವೀರ್ಯಾರ್ಜುನೋನಾಮ ರಾಜಾಬಾಹುಸಹಸ್ರವಾನ್ | ತಸ್ಯಸ್ಮರಣ ಮಾತ್ರೇಣ ಹೃತಂ ನಷ್ಟಂ ಚ ಲಭ್ಯತೇ|| ಎಂಬ ಮಂತ್ರ ಹೇಳಿಕೊಡುತ್ತಿದ್ದರು. ನಾನದನ್ನು ಹೇಳಿದ್ದೂಹೇಳಿದ್ದೇ. ಕೆಲವೊಮ್ಮೆ ವಸ್ತು ಸಿಕ್ಕಿದ್ದೂ ಇದೆಯೆನ್ನಿ.” ರಾಮಮೂರ್ತಿಯವರ ಪತ್ರವನ್ನು ನಾನು ಚಿಟಿಕೆ ಉಪ್ಪಿನೊಂದಿಗೇ ಗ್ರಹಿಸಿದ್ದೆ. ಆ ಮಂತ್ರ ಅವರ ಕಿಸೆಯಿಂದಲೇ ಇದ್ದಿರಬಹುದು ಎಂದುಕೊಂಡಿದ್ದೆ. ಆದರೆ ಉಡುಪಿಯಿಂದ ನಂದಕಿಶೋರ ಅವರೂ ಅದೇ ಶ್ಲೋಕವನ್ನು ಉಲ್ಲೇಖಿಸಿ ಬರೆದಿದ್ದಾರೆ. ಕಾರ್ತವೀರ್ಯನಿಗೆ ಸಾವಿರ ಕೈಗಳಿದ್ದವು. ಕಳೆದುಹೋದ ವಸ್ತುವನ್ನು ಹುಡುಕುವುದು ಆತನಿಗೆ ಸುಲಭ ಎಂಬ ಕಾರಣಕ್ಕೆ ಅವನನ್ನು ನೆನಪಿಸಿಕೊಳ್ಳುವುದು ಎಂದು ತಾರ್ಕಿಕವಾಗಿ ವಿಶ್ಲೇಷಿಸಿದ್ದಾರೆ. ಒಟ್ಟಿನಲ್ಲಿ ಮರೆಗುಳಿಗಳಿಗೆ ಒಳ್ಳೆಯ ಗುಳಿಗೆ. ಜೈ ಕಾರ್ತವೀರ್ಯಾರ್ಜುನ! ಹಬ್ಬಕ್ಕೆಂದೋ ಮದುವೆ-ಮುಂಜಿ ಸಮಾರಂಭಕ್ಕೆಂದೋ ಮನೆಯಲ್ಲಿ ಹೋಳಿಗೆ ಮಾಡುವಾಗ ಒಂದು ಗಮ್ಮತ್ತಿನ ನಂಬಿಕೆ ಅನ್ವಯವಾಗುವುದಿದೆ. ಅದನ್ನು ಬೆಂಗಳೂರಿನ ಜ್ಯೋತಿ ಉಮೇಶ್ ಬರೆದುಕಳಿಸಿದ್ದಾರೆ- “ಹೋಳಿಗೆ ಮಾಡುವಾಗ ಸಾಮಗ್ರಿಗಳನ್ನ ಎಷ್ಟೇ ಪ್ರಮಾಣಪ್ರಕಾರ ತೆಗೆದ್ಕೊಂಡ್ರೂ ಕೊನೇಲಿ ಒಂದೋ ಹೂರಣ ಇಲ್ಲವೇ ಕಣಕ ಒಂಚೂರಾದ್ರೂ ಮಿಕ್ಕಿ ಉಳೀತದೆ. ಕುಟುಂಬದಲ್ಲಿ ಯಾರಾದ್ರೂ ಬಸುರಿ ಇದ್ದರೆ ಆಕೆಗೆ ಹುಟ್ಟಲಿರುವ ಮಗುವಿನ ಲಿಂಗನಿರ್ಧಾರ ಅದ್ರಿಂದ ಮಾಡ್ಲಿಕ್ಕಾಗ್ತದೆ! ಹೂರಣ ಉಳಿದ್ರೆ ಗಂಡು, ಕಣಕ ಉಳಿದ್ರೆ ಹೆಣ್ಣು. ಅದು ನಿಜವೇ ಆಗುತ್ತದೆ. ನನ್ನ ದೊಡ್ಡಮಗ ವಿಕ್ರಮ್ ಹುಟ್ಟುವ ಒಂದು ತಿಂಗಳು ಮುನ್ನ ನನ್ನ ತಮ್ಮನ ಮದುವೆಯಿದ್ದದ್ದು. ಅಡುಗೆಭಟ್ಟರು ಹೋಳಿಗೆ ಮಾಡಿ ಮುಗಿಸಿದ್ದೇ ತಡ ನನ್ನ ದೊಡ್ಡಪ್ಪ ಜೋರಾಗಿ ಕೂಗಿದ್ರು ‘ಜ್ಯೋತಿಗೆ ಗಂಡುಮಗು!’ ಅಂತ. ಅಲ್ಲೇ ಪಕ್ಕದ ರೂಮ್ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ನಾನು ಇದೇನಿದು ಡೆಲಿವರಿ ಆಗಿಹೋಯ್ತಾ!? ಎಂದು ಗಡಬಡಿಸಿ ಎದ್ದಿದ್ದೆ. ಒಂದು ತಿಂಗಳ ನಂತರ ಅದು ನಿಜವೇ ಆಯ್ತು! ಹಾಗಾಗಿ ಈ ನಂಬಿಕೆಯಲ್ಲಿ ನನಗೆ ಖಂಡಿತ ನಂಬಿಕೆಯಿದೆ.” ಬಾಲ್ಯದ ಮುಗ್ಧತೆಯನ್ನು ಪ್ರತಿಬಿಂಬಿಸುವ ಕೆಲ ನಂಬಿಕೆಗಳ ಸ್ಯಾಂಪಲ್ ನೋಡೋಣ. ಬೆಂಗಳೂರಿನಿಂದ ವೇದಾ ಸುದರ್ಶನ್ ಬರೆಯುತ್ತಾರೆ- “ಮಳೆಗಾಲದಲ್ಲಿ ಕಪ್ಪೆಗೆ ಅಂತ ಮರಳಲ್ಲಿ ಗೂಡು ಕಟ್ತಿದ್ವಿ. ಯಾರನ್ನಾದ್ರು ಕಾಡ್ಸಿ ಪೀಡ್ಸಿ ಚಿಲ್ರೆ ಕಾಸು ತಕ್ಕೊಂಡು ಆ ಗೂಡಿನಲ್ಲಿ ಇಡ್ತಿದ್ವಿ. ಮಾರನೆ ದಿನಕ್ಕೆ ಅದು ಡಬಲ್ ಆಗುತ್ತೆ ಅಂತ ತಾಳ್ಮೆಯಿಂದ ಕಾಯ್ತಿದ್ವಿ ಅದನ್ನ ನಮ್ಮಣ್ಣ ತತ್ಕ್ಷಣವೇ ಲಪ್ಟಾಯಿಸ್ತಿದ್ದದ್ದೂ ನಮ್ಮ ಗಮನಕ್ಕೆ ಬರ್ತಿರ್ಲಿಲ್ಲ. ನೆಕ್ಸ್ಟ್ ಡೇ ಏನಿರ್ತಿತ್ತು ಅಲ್ಲಿ ಮಣ್ಣು! ಬರೀ ಖಾಲಿ ಗೂಡು, ಕೆಲವು ಸರ್ತಿ ಅದೂ ಇಲ್ಲ!” ಇನ್ನೊಂದು, ಹೈದರಾಬಾದ್ನಿಂದ ಸಂಧ್ಯಾ ವಸಂತ್ ತಿಳಿಸಿರುವ ನಂಬಿಕೆ- “ವಾರ್ಷಿಕ ಪರೀಕ್ಷೆಯ ರಿಸಲ್ಟ್ಸ್ ಹತ್ರ ಬರ್ತಿದ್ದಹಾಗೆ ಕಪ್ಪುಇರುವೆ ಗೂಡಿನ ಪಕ್ಕ ಕೈ ಇಡೋದು. ಇರುವೆಗಳು ಮೊಣಕೈತನಕ ಬಂದ್ರೆ ಫರ್ಸ್ಟ್ಕ್ಲಾಸ್ ಪಾಸ್. ಅದಕ್ಕಿಂತಲೂ ಮೇಲೆ ಬಂದ್ರೆ ಡಿಸ್ಟಿಂಕ್ಷನ್. ಇರುವೆ ಎಲ್ಲಿವರೆಗೆ ಹತ್ತುತ್ತೆ ಅನ್ನೋದ್ರ ಮೇಲೆ ಅವ್ರವ್ರ ಮಾರ್ಕ್ಸ್ ಗ್ರೇಡ್ ನಿರ್ಧಾರ ಆಗ್ತಿತ್ತು. ಕೆಲವುಸರ್ತಿ ಏನು ಮಾಡಿದ್ರೂ ಇರುವೆ ಮೇಲೆ ಹತ್ತುತ್ತಾನೇ ಇರಲಿಲ್ಲ ಜಾರಿ ಬೀಳ್ತಿತ್ತು. ಬಳ್ಳಾರಿಯಲ್ಲಿರುತ್ತ ನಾನು, ವಸುಧೇಂದ್ರ ಮತ್ತು ಅವನ ಅಕ್ಕ ಇದನ್ನು ಬಹಳ ಮಾಡ್ತಿದ್ದೆವು.” ಕೆಂಬೂತ ಪಕ್ಷಿ ನೋಡಲಿಕ್ಕೆ ಸಿಕ್ಕರೆ ಅವತ್ತು ಏನೋ ಸಿಹಿ ತಿನ್ನುವ ಯೋಗವಿದೆ ಎಂಬ ನಂಬಿಕೆಯನ್ನು ನೆನಪಿಸಿಕೊಂಡವರು ಕಾರವಾರದ ಶಾರದಾ ಭಟ್- “ಸಿಹಿ ಸಿಗಬಹುದು ಸಿಗದೇ ಇರಬಹುದು. ಆದರೆ ಕೆಂಬೂತ ಕಂಡಾಕ್ಷಣ ಸಿಹಿ ತಿಂದಂತೆಯೇ ಮನಸ್ಸು ಮುದಗೊಳ್ಳುವುದಂತೂ ನಿಜ. ತುಂಬ ಸುಂದರ ಪಕ್ಷಿ. ಮನುಷ್ಯರ ಕಣ್ಣಿಗೆ ಕಾಣಿಸಿಕೊಳ್ಳುವುದೂ ಅಪರೂಪ. ಚಿಕ್ಕವಳಿದ್ದಾಗ ಕೆಂಬೂತವನ್ನು ನೋಡಿದ್ದೇನೆ ಎಂಬ ನೆಪ ಹೇಳಿ ಅಮ್ಮನಿಂದ ಬೆಲ್ಲ ಇಸ್ಕೊಂಡು ತಿಂದದ್ದೂ ಉಂಟು.” ಬಟ್ಟೆ ತೊಡುವಾಗ ಅಪ್ಪಿತಪ್ಪಿ ಉಲ್ಟಾ ತೊಟ್ಟುಕೊಂಡರೆ ಹೊಸಬಟ್ಟೆ ಸಿಗುತ್ತೆ ಎಂಬುದೊಂದು ನಂಬಿಕೆ. ಬೆಂಗಳೂರಿನ ಮಾಲತಿ ಶೆಣೈ ಅದನ್ನು ನೆನಪಿಸಿದ್ದೇ ಅಲ್ಲದೆ ಹೊಸ ಬಟ್ಟೆಗೆ ಸಂಬಂಧಿಸಿದಂತೆ ತಾವೇ ಒಂದು ನಂಬಿಕೆಯನ್ನು ತಯಾರಿಸಿದ್ದಾರೆ. “ಬಟ್ಟೆ ಮೇಲೆ ಕಾಗೆ ಹಿಕ್ಕೆ ಬಿದ್ರೆ ಹೊಸ ಬಟ್ಟೆ ಸಿಗುತ್ತೆ. ನಮ್ಮೆಜಮಾನ್ರ ಕೇಸ್ನಲ್ಲಿ ಇದು ಖಂಡಿತ ನಿಜವಾಗಿದೆ. ಒಮ್ಮೆ ಅವ್ರಿಗೆ ಕುಣಿಗಲ್ಗೆ ಹೋಗಲಿಕ್ಕಿತ್ತು. ಅಲ್ಲಿನ ನಮ್ಮ ಆಫೀಸಿಗೆ ಗಣ್ಯರು ಬರುವವರಿದ್ದರು. ಅವತ್ತು ನಮ್ಮವ್ರು ಕಪ್ಪು ಶರ್ಟ್ ಹಾಕ್ಕೊಂಡಿದ್ರು. ಅದರಮೇಲೆ ಕಾಗೆ ಇಶ್ಶಿ ಮಾಡ್ತು. ಆಫೀಸ್ ಜವಾನ ಅದನ್ನು ಒರೆಸುತ್ತೇನೆಂದವ ಇನ್ನಷ್ಟು ಗಲೀಜು ಮಾಡಿದ. ಆಮೇಲೆ ಬೇರೆ ಉಪಾಯವಿಲ್ಲದೆ ಕುಣಿಗಲ್ನ ಕ್ಲಾತ್ಶಾಪ್ನಲ್ಲಿ ಹೊಸ ಶರ್ಟ್ ಖರೀದಿ ಆಯ್ತು!” ಕನ್ಯಾಮಣಿಗಳು ಕಾಯಿತುರಿಯುವಾಗ ತಿಂದರೆ ಮದುವೆದಿನ ಮಳೆ ಬರುತ್ತೆ ಎಂದು ಹೆದರಿಸುವ ನಂಬಿಕೆ ಕಳೆದವಾರ ಪ್ರಸ್ತಾಪವಾಗಿತ್ತಲ್ಲ? ಅದನ್ನೋದಿ ಕ್ಯಾಲಿಫೋರ್ನಿಯಾದಿಂದ ಸರಸ್ವತಿ ವಟ್ಟಮ್ ಬರೆದಿದ್ದಾರೆ- “ಚಿಕ್ಕವಳಿದ್ದಾಗ ತುಂಬಾ ಅಕ್ಕಿ ತಿನ್ನುತ್ತಿದ್ದೆ. ಆಗ ನಮ್ಮಮ್ಮ ಗದರಿಸಿ ‘ಅಕ್ಕಿ ತಿಂದ್ರೆ, ನಿನ್ನ ಮದುವೆಯಲ್ಲಿ ಮಳೆ ಬರುತ್ತೆ’ ಅಂತಿದ್ರು. ಅದು ನಿಜವೂ ಆಯಿತು. ನನ್ನ ಮದುವೆಯಲ್ಲಿ ಬಹುಶಃ ಆಕಾಶ ತೂತಾಗಿತ್ತು ಅಂತ ಕಾಣಿಸುತ್ತೆ. ಕಲ್ಲು ಮಳೆ. ಆರತಕ್ಷತೆಯ ಗಲಾಟೆಯಲ್ಲೂ ಅಮ್ಮನ ನಂಬಿಕೆ ಸುಳ್ಳಾಗಲಿಲ್ಲ!” ಅದಕ್ಕಿಂತಲೂ ಮಜಾ ಎಂದರೆ ಪಡುಬಿದ್ರಿಯಿಂದ ಆಯುರ್ವೇದವೈದ್ಯ ಡಾ.ಗುರುಪ್ರಸಾದ್ ಬರೆದಿರುವ ಪತ್ರ. “ನಾವು ಈಜುವಾಗ ಕೆರೆಯಲ್ಲಿ ಮೂತ್ರ ಮಾಡಿದ್ರೆ ಮದುವೆ ದಿವಸ ಮಳೆಯಾಗುತ್ತ್ತೆ ಅಂತ ಹೇಳ್ತಿದ್ದರು. ನೋಡ್ಬೇಕು ಬರುವ ನವೆಂಬರ್ 3ಕ್ಕೆ ನನ್ನ ಮದುವೆ. ಆದಿನ ಮಳೆ ಬರುತ್ತೋ ಏನೋ ಗೊತ್ತಿಲ್ಲ!” ಇಲ್ಲ ಡಾಕ್ಟ್ರೇ ಮಳೆ ಬರಲಿಕ್ಕಿಲ್ಲ. ಆದರೆ ಶುಭಾಶೀರ್ವಾದಗಳ ಸುರಿಮಳೆ ಆಗ್ತದೆ ನೋಡ್ತಿರಿ! ಇಲ್ಲಿಗೆ ಮೂರು ಕಂತುಗಳಲ್ಲಿ ಮೂಡಿಬಂದ ನಂಬಿಕಾಯಣವು ಸಮಾಪ್ತವಾದುದು. ಸಮಸ್ತ ನಂಬಿಕಸ್ತರಿಗೂ ಮಸ್ತುಮಸ್ತಾಗಿ ತಥಾಸ್ತು ಆಗಲಿ. * * * [ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] "Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!Version: 20241125