Episodes

Saturday Aug 27, 2011
Believe it or not
Saturday Aug 27, 2011
Saturday Aug 27, 2011
ದಿನಾಂಕ 28 ಆಗಸ್ಟ್ 2011ರ ಸಂಚಿಕೆ...
ನಂಬಿ ಕೆಟ್ಟವರಿಲ್ಲವೋ ಈ ನಂಬಿಕೆಗಳನ್ನ...
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] * * * ನನಗೆ ನಂಬಿಕೆಯಿತ್ತು, ಕಳೆದವಾರದ ‘ಚಿಂತೆಗೊಂಬೆಗಳು ಚಿಂತೆಯನ್ನು ನೀಗಿಸುವ ನಂಬಿಕೆ’ ನಿಮಗೂ ಇಷ್ಟವಾಗುತ್ತದೆಂದು. ಅದಕ್ಕಿಂತ ಹೆಚ್ಚಾಗಿ, ನಿಮ್ಮ ಇಷ್ಟದ ನಂಬಿಕೆಗಳನ್ನು ಬರೆದು ತಿಳಿಸಿರೆಂದಾಗ ಒಂದಕ್ಕಿಂತ ಒಂದು ಚಂದದ ನಂಬಿಕೆಗಳು ಜಮೆಯಾಗುತ್ತವೆಂದು. ಹಾಗೇ ಆಯ್ತು. ಕೆಲವರಂತೂ (ಅವರನ್ನು ಅತ್ಯಂತ ನಂಬಿಕಸ್ಥರು ಎನ್ನೋಣವೇ?) ನಂಬಿಕೆಗಳ ಉದ್ದುದ್ದ ಪಟ್ಟಿಯನ್ನೇ ತಯಾರಿಸಿದ್ದಾರೆ. ಅವುಗಳಲ್ಲಿ ಅನನ್ಯ ಮತ್ತು ಅತಿವಿಶಿಷ್ಟ ಎನಿಸುವಂಥವನ್ನು ಇವತ್ತಿನ ಅಂಕಣಕ್ಕೆ ಆಯ್ದುಕೊಂಡಿದ್ದೇನೆ. ಅದರರ್ಥ ‘ಬೆಕ್ಕು ಅಡ್ಡ ಬಂದರೆ ಬಲು ಕೆಡುಕು’ ರೀತಿಯ ಜನಜನಿತ ನಂಬಿಕೆಗಳನ್ನು, ಬಹಳಷ್ಟು ಮಂದಿ ಬರೆದುಕಳಿಸಿದ್ದರೂ ಬಿಟ್ಟುಬಿಟ್ಟಿದ್ದೇನೆ. ಕೆಟ್ಟದಾಗುತ್ತದೆ ಎಂದು ಎಚ್ಚರಿಸುವ ನಂಬಿಕೆಗಳೂ ಬಾಳಿನಲ್ಲಿರಬೇಕು ನಿಜ, ಆದರೆ ಒಳ್ಳೆಯದಾಗುತ್ತದೆ ಎಂಬ ಪಾಸಿಟಿವ್ ಥಿಂಕಿಂಗ್ನ ನಂಬಿಕೆಗಳು- ಗ್ವಾಟೆಮಾಲ ಜನರ ಗೊಂಬೆನಂಬಿಕೆಯಂಥವು- ಮನಸ್ಸಿಗೆ ಹೆಚ್ಚು ಖುಷಿಕೊಡುತ್ತವೆ. ಇಲ್ಲಿ ನಿಮಗೆ ಅಂಥವೇ ಹೆಚ್ಚು ಕಂಡುಬರುತ್ತವೆ. ಅಷ್ಟಕ್ಕೂ ಇದು ನಂಬಿಕೆಗಳಲ್ಲಿ ನಂಬಿಕೆ ಹುಟ್ಟಿಸುವ ಹುನ್ನಾರವೇನಲ್ಲ. ನಂಬಿಕೆಗಳ ಸೊಗಸನ್ನು, ಸೊಗಡನ್ನು ಪರಿಚಯಿಸುವ ಹೂಹಾರ. ಅಷ್ಟೇ. ಮಗುವಿನ ಲಾಲನೆಪಾಲನೆಗೂ ನಂಬಿಕೆಗಳಿಗೂ ಗಾಢ ಸಂಬಂಧ. ಮುಗ್ಧಸೌಂದರ್ಯದ ಮಗುವಿಗೆ ದೃಷ್ಟಿ ಬೀಳದಿರಲೆಂದು ಹಣೆಗೆ/ಗಲ್ಲಕ್ಕೆ ಕಪ್ಪು ಬೊಟ್ಟು ಇಡುವುದರಿಂದ ಅದು ಆರಂಭವಾಗುತ್ತದೆ. ಅಷ್ಟೇಅಲ್ಲ, ಬಳ್ಳಾರಿಯಿಂದ ಶಕುಂತಲಾ ನಾಯಕ್ ಬರೆದಿರುವಂತೆ “ಮಗು ಹುಟ್ಟಿದ ಏಳನೇದಿನ ಬ್ರಹ್ಮ ಅದರ ಹಣೆಬರಹ ಬರಿತಾನೆ ಅಂತ ಮಗುವಿನ ಹಾಸಿಗೆ ಪಕ್ಕ ಒಂದು ಪುಸ್ತಕ-ಪೆನ್ನು ಅಥವಾ ಸ್ಲೇಟ್-ಬಳಪ ಇಡುತ್ತೇವೆ. ಬ್ರಹ್ಮನ ಹತ್ತಿರ ಮಗುವಿಗೆ ಆಯುರಾರೋಗ್ಯ ವಿದ್ಯೆ-ಬುದ್ಧಿ ಕೊಡುವ ಹಣೆಬರಹ ಬರೆಯುವಂತೆ ಬೇಡಿಕೊಳ್ಳುತ್ತೇವೆ.” ಇನ್ನು, ವರ್ಷದೊಳಗಿನ ಪ್ರಾಯದ ಮಕ್ಕಳು ಕಿರಿಕಿರಿಯಿಂದ ರಂಪ ಮಾಡುವುದನ್ನು ನಿಲ್ಲಿಸಲು ‘ಅರಿಶಿನ ನೀರು ತೆಗೆಯುವ’ ಕ್ರಮವನ್ನು ವಿವರಿಸಿದ್ದಾರೆ ಬೆಂಗಳೂರಿನ ರೂಪಾ ದೀಪಕ್. “ನಮ್ಮ ಮಕ್ಕಳಿಬ್ಬರೂ ಮಗುವಾಗಿದ್ದಾಗ ಅರಶಿನ ನೀರು ತೆಗೆದು ಪ್ರಯೋಜನವಾಗಿರುವುದರಿಂದ ಈ ನಂಬಿಕೆಯ ಮೇಲೆ ನಂಬಿಕೆ ಇಟ್ಟಿದ್ದೇನೆ” ಎನ್ನುತ್ತಾರವರು. ತಾನು ಚಿಕ್ಕವನಿದ್ದಾಗ ಪ್ರತಿ ಸಂಜೆ ತನ್ನಮ್ಮ ದೃಷ್ಟಿ ನೀವಾಳಿಸುತ್ತಿದ್ದುದನ್ನು ನೆನಪಿಸಿಕೊಂಡಿದ್ದಾರೆ ಮೇರಿಲ್ಯಾಂಡ್ನ ಕೃಷ್ಣರಾಜ ಭಟ್. ಮಕ್ಕಳಿಗೆ ಒಳ್ಳೆಯ ನಡತೆಯನ್ನು ಕಲಿಸಿಕೊಡುವುದಕ್ಕೂ ನಂಬಿಕೆಗಳನ್ನು ಬಳಸುವುದಿದೆ. ‘ಓದುತ್ತಿರುವ ಪುಸ್ತಕವನ್ನು ತೆರೆದಿಟ್ಟು ಹಾಗೇ ನಿದ್ದೆಮಾಡಿದ್ರೆ ಓದಿದ್ದೆಲ್ಲಾ ಮರೆತುಹೋಗುತ್ತೆ’ ಎನ್ನುವುದರಲ್ಲಿ ನಂಬಿಕೆಯ ಭಾಗ ಮುಖ್ಯವಲ್ಲ. ಪುಸ್ತಕವನ್ನು ಓದಿದಮೇಲೆ ಅಚ್ಚುಕಟ್ಟಾಗಿ ಮುಚ್ಚಿಡಬೇಕು ಎಂಬ ಪಾಠ ಮುಖ್ಯ. ಬೆಂಗಳೂರಿನ ವೀಣಾ ಅನಂತ ಭಟ್ ಬರೆದುಕಳಿಸಿದ ಒಂದು ತಮಾಷೆ ನಂಬಿಕೆಯಲ್ಲೂ ಅಂಥದೇ ಸಂದೇಶವಿದೆ. “ಹುಡುಗಿ ತೆಂಗಿನಕಾಯಿ ತುರಿಯುವಾಗ ತಿಂದರೆ ಅವಳ ಮದುವೆಯಂದು ಮಳೆ ಬರುತ್ತದೆ”- ಇಲ್ಲಿ ಮದುವೆದಿನದ ಮಳೆ ಮುಖ್ಯವಲ್ಲ. ಅಡುಗೆಮಾಡುತ್ತಿರುವಾಗ ಹಾಗೆಲ್ಲ ತಿನ್ನುವ ಅಭ್ಯಾಸ ಒಳ್ಳೆಯದಲ್ಲ ಎಂಬ ಕಿವಿಮಾತು ಮುಖ್ಯ. ಹಾಗೆಯೇ ಮಂಗಳೂರಿನ ನಮಿತಾ ಶಿವಪ್ರಸಾದ್ ತಿಳಿಸಿರುವಂತೆ ‘ಮನೆಯಲ್ಲಿ ಮಕ್ಕಳು ತುಂಬಾ ಗಲಾಟೆ ಮಾಡುತ್ತಲೇ ಇದ್ದರೆ ಇಡ್ಲಿ/ದೋಸೆಗೆ ರುಬ್ಬಿಟ್ಟ ಹಿಟ್ಟು ಉಬ್ಬುವುದೇ ಇಲ್ಲ’ ಎಂಬ ನಂಬಿಕೆಯೂ ಇದೆ. ರುಚಿರುಚಿಯಾದ ಇಡ್ಲಿ ದೋಸೆ ಬೇಕು ಅಂತಾದ್ರೆ ಗಲಾಟೆ ಮಾಡಬೇಡಿ ಎಂದು ಮಕ್ಕಳನ್ನು ದಬಾಯಿಸುವುದಕ್ಕೆ ಅದೊಂದು ದಾರಿ! ಆಶ್ಚರ್ಯವೆಂದರೆ ಇಂಥ ನಂಬಿಕೆಗಳೆಲ್ಲ ತಲೆತಲಾಂತರಗಳಿಂದ ಬಂದವುಗಳು. ಬೆಂಗಳೂರಿನ ವೇದಾ ಹೆಬ್ಬಾರ್ ಬರೆಯುತ್ತಾರೆ- “ನಾನು ಚಿಕ್ಕವಳಿದ್ದಾಗ ಯಾವಾಗಾದ್ರೂ ಬಿಕ್ಕಳಿಕೆ ಬಂದರೆ ‘ಏನನ್ನೋ ಕದ್ದುತಿಂದಿದ್ದಿ. ಅದಕ್ಕೇ ಬಿಕ್ಕುತ್ತಿದ್ದಿ’ ಎನ್ನುತ್ತಿದ್ದರು ಹಿರಿಯರು. ಕೆಲವೊಮ್ಮೆ ಅಡುಗೆಮನೆಯಲ್ಲಿ ಬೆಲ್ಲ ಅಥವಾ ಕೊಬ್ಬರಿಚೂರನ್ನು ಕದ್ದುತಿಂದದ್ದೂ ಇರಬಹುದೆನ್ನಿ. ಆದರೆ ಬಿಕ್ಕುತ್ತಿರುವಾಗ ಅಂಥ ಆರೋಪ ಕೇಳಿ ಒಮ್ಮೆಲೇ ಸಿಟ್ಟುಬರುತ್ತಿತ್ತು, ಬಿಕ್ಕಳಿಕೆ ನಿಂತುಹೋಗುತ್ತಿತ್ತು! ಮತ್ತೆನೋಡುತ್ತೇನಾದರೆ ಅವರು ಬೇಕಂತಲೇ ಹಾಗೆಮಾಡುತ್ತಿದ್ದರು, ಬಿಕ್ಕಳಿಕೆಯಿಂದ ನನ್ನ ಗಮನವನ್ನು ಬೇರೆಡೆ ಸೆಳೆಯುವುದಕ್ಕಾಗಿ. ಈಗ ನನ್ನ ಮಕ್ಕಳಿಗೆ ಬಿಕ್ಕಳಿಕೆ ಬಂದಾಗ ನಾನೂ ಅದೇ ಉಪಾಯ ಮಾಡುತ್ತೇನೆ. ಕ್ಷಣಾರ್ಧದಲ್ಲಿ ಬಿಕ್ಕಳಿಕೆ ಬಂದ್!” ಮಡಿಕೇರಿಯಿಂದ ಗೀತಾ ಭಾವೆ ಅವರು ಬರೆದುಕಳಿಸಿದ ನಂಬಿಕೆಗಳ ಪಟ್ಟಿಯಲ್ಲಿ ಇದೊಂದನ್ನು ಗಮನಿಸಿ. “ಒಲೆ ಕೂಗಿದ್ರೆ ಅವತ್ತು ಮನೆಗೆ ಯಾರೋ ನೆಂಟರು ಬರ್ತಾರೆ ಅಂತ ಲೆಕ್ಕ!” ಈ ನಂಬಿಕೆಯನ್ನು ಅರ್ಥಮಾಡಿಕೊಳ್ಳಬೇಕಾದರೆ ನಾವು ಒಂದು ತಲೆಮಾರಿನಷ್ಟು ಹಿಂದಕ್ಕೆ ಹೋಗಬೇಕಾಗುತ್ತದೆ. ಒಲೆ ಕೂಗೋದು ಅಂದ್ರೇನು? ಇನ್ನೇನಿಲ್ಲ, ಉರಿಯುತ್ತಿರುವ ಸೌದೆ ಬುರ್ರ್ಬುರ್ರ್ ಎಂದು ಶಬ್ದ ಮಾಡುವುದು. ಯಾವಾಗಲೂ ಈ ಶಬ್ದ ಆಗುವುದಿಲ್ಲ. ಯಾವತ್ತಾದ್ರೂ ಅಪರೂಪಕ್ಕೆ ಬರುತ್ತದೆ. ಆಗಿನ ಕಾಲದಲ್ಲಿ ‘ನೆಂಟರು ಬರುವುದು’ ಎನ್ನುವುದೂ ಅಪರೂಪದ ಅನಿರೀಕ್ಷಿತ ಅನಂದದಾಯಕ ಪ್ರಕ್ರಿಯೆ. ಈಗ ನೆಂಟರು ಬರುವುದಿದ್ದರೂ ಇಮೇಲ್/ಫೋನ್ನಲ್ಲಿ ಎಪಾಯಿಂಟ್ಮೆಂಟ್ ತೆಗೆದುಕೊಂಡೇ ಬರಬೇಕು. ಟಿವಿಯಲ್ಲಿ ನೆಚ್ಚಿನ ಧಾರಾವಾಹಿ ಪ್ರಸಾರದ ವೇಳೆಯಲ್ಲಿ ಬಂದರಂತೂ ನೆಂಟರ ಪಾಡು ನೆಂಟರಿಗೇ ಪ್ರೀತಿ. ಅಲ್ಲದೇ ಈಗ ಅಡುಗೆಅನಿಲದ ಒಲೆಗಳು ಹಳ್ಳಿಗಳಲ್ಲೂ ಇರುವುದರಿಂದ ಸೌದೆ ಒಲೆ ಉರಿಸುವ, ಅದು ಬುರ್ರ್ಬುರ್ರ್ ಎನ್ನುವ ಪ್ರಮೇಯವೂ ಇಲ್ಲವಲ್ಲ! ಇನ್ನೊಂದು ಸೋಜಿಗದ ನಂಬಿಕೆಯ ಕುರಿತು ಬೆಳಕು ಚೆಲ್ಲಿದ್ದಾರೆ ಬೆಂಗಳೂರಿನ ಪ್ರತಿಮಾ ಶಾನಭಾಗ. “ಉಳುಕು ಪರಿಹಾರಕ್ಕೊಂದು ನಂಬಿಕೆಯ ಚಿಕಿತ್ಸೆ. ತಾಯಿಯ ಬಸಿರಿನಿಂದ ಕಾಲು ಮುಂದಾಗಿ ಜನಿಸಿದ ವ್ಯಕ್ತಿಯ ಕಾಲನ್ನು ಉಳುಕು ಉಂಟಾದ ಜಾಗಕ್ಕೆ ಮೂರುಸರ್ತಿ ಮೇಲಿನಿಂದ ಕೆಳಕ್ಕೆ ನೀವುವುದರ ಮೂಲಕ ಉಳುಕು ನಿವಾರಣೆಯಾಗುತ್ತದೆ. ಸಾಗರ ಪಟ್ಟಣದಲ್ಲಿರುವ ನನ್ನ ತಂದೆಯವರು ತುಂಬಾ ವರ್ಷಗಳಿಂದ ಇದನ್ನೊಂದು ಪ್ರವೃತ್ತಿ ಮತ್ತು ಸಮಾಜಸೇವೆಯಾಗಿ ಮಾಡುತ್ತಿದ್ದಾರೆ. ಓಡಾಡಲು, ಮೈಕೈ ಅಲ್ಲಾಡಿಸಲೂ ಆಗದೆ ನೋವಿನಿಂದ ನರಳುವವರು ಬರೀ ಒಂದು ಸಲ ನಮ್ಮಪ್ಪನ ಕಾಲುಗಳಿಂದ ನೀವಿಸಿಕೊಂಡರೆ ೬೦ ಪ್ರತಿಶತ ಗುಣಮುಖರಾಗುತ್ತಾರೆ. ಎರಡು-ಮೂರು ಬಾರಿ ಈ ಚಿಕಿತ್ಸೆ ಮಾಡಿದರೆ ಉಳುಕು/ಊತ ಸಂಪೂರ್ಣ ಮಾಯ! ನನ್ನ ಅಪ್ಪ ಅವರ ಫ್ರೆಂಡ್ಸ್ಸರ್ಕಲ್ನಲ್ಲಿ ‘ಡಾ.ಒದೇಗೌಡ್ರು’ ಅಂತನೇ ಫೇಮಸ್ಸು!” ನಂಬಿಕೆಯ ನೆಪದಲ್ಲಿ ದಿನಾಬೆಳಿಗ್ಗೆ ಅಮ್ಮನನ್ನು ನೆನಪಿಸಿಕೊಳ್ಳುತ್ತಾರೆ ಕ್ಯಾಲಿಫೋರ್ನಿಯಾದಲ್ಲಿರುವ ಶ್ವೇತಾ ಸತೀಶ್. ಅವರೆನ್ನುತ್ತಾರೆ- “ಚಿಕ್ಕಂದಿನಲ್ಲಿ ನಮ್ಮಮ್ಮ ದಿನಾಬೆಳಿಗ್ಗೆ ಎಬ್ಬಿಸುವಾಗ ಬಲಗಡೆಯಿಂದ ಎದ್ದೇಳಿ ಅನ್ನೋರು. ಬಲಗಡೆಯಿಂದ ಎದ್ದರೆ ದಿನವೆಲ್ಲ ಚೆನ್ನಾಗಿರುತ್ತೆ ಅಂತ ನಂಬಿಕೆ. ನಾವೇನಾದ್ರೂ ಅಕಸ್ಮಾತ್ ಎಡಗಡೆಯಿಂದ ಎದ್ದರೆ ಅಮ್ಮ ಮತ್ತೊಮ್ಮೆ ಮಲಗಿಸಿ ಏಳುವಂತೆ ಮಾಡುತ್ತಿದ್ದದ್ದೂ ಇದೆ. ಅಷ್ಟೂ ಅಭ್ಯಾಸವಾಗಿ ಹೋಗಿರುವುದರಿಂದ ಈಗ ದಿನಾಲೂ ಏಳುವಾಗ ಅಮ್ಮ ಇಲ್ಲಿಲ್ಲದಿದ್ದರೂ ನನಗೆ ಅವಳ ಧ್ವನಿ ಕೇಳಿದಂತಾಗುತ್ತದೆ!” ಬಲಗಡೆಯಿಂದ ಎದ್ದರೆ ಅವತ್ತಿನ ದಿನ ಒಳ್ಳೆದಾಗುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಅನಿರುದ್ಧ ಕುಲಕರ್ಣಿ ಬೆಂಗಳೂರಿನಿಂದ ಬರೆಯುತ್ತಾರೆ, “ನಾನು ದಿನಾಬೆಳಗ್ಗೆ ೮ ಗಂಟೆಗೆ ಆರ್.ಟಿ.ನಗರದ ಮನೆಯಿಂದ ಹನುಮಂತ ನಗರದಲ್ಲಿರುವ ಕಾಲೇಜಿಗೆ ಹೋಗುವಾಗ ಎಫ್.ಎಂ ರೈನ್ಬೋ ಆಕಾಶವಾಣಿಯಲ್ಲಿ ಅಮೃತವರ್ಷಿಣಿ ಕಾರ್ಯಕ್ರಮ ಕೇಳುತ್ತ ಹೋಗುವುದು ರೂಢಿ. ಎಂಟಕ್ಕೆ ಸರಿಯಾಗಿ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಪ್ರಸಾರವಾಗುತ್ತದೆ. ಯಾವತ್ತು ಒಳ್ಳೆಯ ಕಲಾವಿದರ (ಉದಾ: ಭೀಮಸೇನ್ಜೋಶಿ, ಕುಮಾರಗಂಧರ್ವ, ರಶೀದ್ಖಾನ್ ಇತ್ಯಾದಿ) ಕಾರ್ಯಕ್ರಮವಿರುತ್ತೋ, ಆ ಇಡೀದಿನ ಲವಲವಿಕೆಯಿಂದಿರುತ್ತೆ. ಇದು ನನ್ನ ನಂಬಿಕೆ.” ಗೋಕಾಕದ ಅನೀಲ ಕುಸುಗಲ್ ಅವರಿಗೆ ಮಹತ್ವದ ಕೆಲಸಕ್ಕೆ ಹೋಗುವಾಗ ಚೀಲದಲ್ಲೊಂದು ಗಜ್ಜರಿ(ಕ್ಯಾರೆಟ್) ಇದ್ದರೆ ಹೋದಕಾರ್ಯ ಯಶಸ್ವಿಯಾಗುತ್ತದೆ ಎಂಬ ನಂಬಿಕೆ. ಕೊನೆಯಲ್ಲಿ, ಸ್ವಲ್ಪ ತಮಾಷೆಯ ನಂಬಿಕೆಯೊಂದನ್ನು ಉಲ್ಲೇಖಿಸಿ ಇದನ್ನು ಮುಗಿಸುತ್ತೇನೆ. ಟೆಕ್ಸಾಸ್ನಿಂದ ರಾಘವೇಂದ್ರ ಭಟ್ಟ ಅವರು ಬರೆದಿದ್ದಾರೆ- “ಮನೆಯಲ್ಲಿ ಯಾವುದೇ ವಸ್ತು ಕಳೆದುಹೋದರೆ, ಎಲ್ಲಿಟ್ಟಿದ್ದೇವೆಂದು ನೆನಪಾಗದೆ ಹುಡುಕಾಡುವ ಸನ್ನಿವೇಶ ಬಂದರೆ ಮೂರುಸಲ ‘ಕಾರ್ತವೀರ್ಯಾರ್ಜುನ’ ಎಂದರಾಯ್ತು ವಸ್ತು ಇದ್ದಲ್ಲಿಗೇ ನಾವು ಹೋಗುವಂತಾಗುತ್ತದೆ, ಕಳೆದುಹೋದ ವಸ್ತು ಸಿಕ್ಕಿಬಿಡುತ್ತದೆ!” * * * [ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] "Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!
Saturday Aug 20, 2011
Worry dolls take away your worries
Saturday Aug 20, 2011
Saturday Aug 20, 2011
ದಿನಾಂಕ 21 ಆಗಸ್ಟ್ 2011ರ ಸಂಚಿಕೆ...
ಚಿಂತ್ಯಾಕೆ ಮಾಡುತ್ತಿದ್ದಿ ‘ಚಿಂತೆಗೊಂಬೆ’ಗಳಿದ್ದಾವೆ...
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] * * * ನಿಮಗೆ ನಂಬಿಕೆಗಳಲ್ಲಿ ನಂಬಿಕೆ ಇದೆಯೇ? ನಕ್ಷತ್ರ ಬೀಳ್ತಾ ಇರೋದನ್ನು ನೋಡುವಾಗ ಮನಸ್ಸಿನಲ್ಲೇ ಏನನ್ನಾದ್ರೂ ಹಾರೈಸಿದ್ರೆ ಅದು ನೆರವೇರುತ್ತೆ..., ಮಗುವಿನ ಹಾಲುಹಲ್ಲು ಕಳಚಿ ಬಿದ್ದಾಗ ಅದನ್ನು ತುಳಸಿದಳದಲ್ಲಿ ಮಡಚಿಟ್ಟು ಬಿಸಾಡಿದರೆ ಮಗು ಬೆಳೆದು ಪ್ರಸಿದ್ಧ ವ್ಯಕ್ತಿಯಾಗುತ್ತಾನೆ..., ನದಿ-ಕೆರೆ ಜಲಾಶಯಗಳನ್ನು ಮೊದಲಬಾರಿ ಕಂಡಾಗ ಆ ನೀರಿನೊಳಗೆ ನಾಣ್ಯ ಬಿಸಾಡಿದರೆ ಬಯಸಿದ ಕಾರ್ಯ ಕೈಗೂಡುತ್ತದೆ..., ಎಲೆಅಡಕೆ ಜಗಿಯುವಾಗ ನಾಲಿಗೆ ಕಡುಕೆಂಪಾದರೆ ಬಾಳಸಂಗಾತಿ ತುಂಬಾ ಪ್ರೀತಿಸುತ್ತಾನೆ/ಳೆ ಎಂದರ್ಥ... - ಈ ಥರದ ನಂಬಿಕೆಗಳಲ್ಲಿ ನಿಮಗೆ ನಂಬಿಕೆ ಇದೆಯೇ ಅಂತ ನಾನು ಕೇಳಿದ್ದು. ನನ್ನನ್ನು ಕೇಳಿದರೆ, ‘ನಂಬಿಕೆ ಇದೆ ಅಥವಾ ಇಲ್ಲ’ ಎನ್ನುವುದಕ್ಕಿಂತಲೂ ಇಂಥ ನಂಬಿಕೆಗಳ ಬಗ್ಗೆ ನನಗೆ ಗೌರವ ಇದೆ, ಆಸಕ್ತಿ ಇದೆ, ಅವುಗಳ ಹಿನ್ನೆಲೆ ತಿಳಿದುಕೊಳ್ಳುವುದು ತುಂಬ ಖುಷಿಯೆನಿಸುತ್ತದೆ ಎನ್ನುತ್ತೇನೆ. ಅದಕ್ಕೆ ಮುಖ್ಯ ಕಾರಣವೆಂದರೆ, ಕೆಲವೊಂದು ಚಂದದ ನಂಬಿಕೆಗಳಿವೆ ಅವುಗಳ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡದೇ ಇರಲಿಕ್ಕೆ ಸಾಧ್ಯವೇಇಲ್ಲ. ಉದಾಹರಣೆಗೆ, ತೊಟ್ಟಿಲಲ್ಲಿ ಮಲಗಿರುವ ಪುಟ್ಟ ಮಗು ನಿದ್ದೆಯಲ್ಲೇ ನಕ್ಕರೆ (ಎಷ್ಟೋ ಸಲ ನಗುವುದೂ ಇದೆ!) ‘ದೇವರು ಬಂದು ಮಗುವನ್ನು ಮಾತನಾಡಿಸಿ ನಗಿಸುತ್ತಿದ್ದಾನೆ’ ಎಂಬ ನಂಬಿಕೆ ನಮ್ಮಲ್ಲಿದೆ. ಪರಮನಾಸ್ತಿಕರಿಗೂ ಈ ನಂಬಿಕೆಯ ಮೇಲೆ ಪ್ರೀತಿ ಬರುವ ಹಾಗಿದೆ ಇದು. ನಮ್ಮ ಕರಾವಳಿಯಲ್ಲಿ ಕುಟುಂಬದೈವಗಳು (ಭೂತಗಳು) ರಾತ್ರಿಹೊತ್ತು ಮಗುವಿನ ತೊಟ್ಟಿಲು ತೂಗುತ್ತವೆ ಎಂದೂ ನಂಬುತ್ತಾರೆ. ಅವೆಲ್ಲ ಹಳ್ಳಿಗುಗ್ಗುಗಳ ಕಥೆ ಅಂತ ಮೂಗುಮುರೀಬೇಡಿ! ಮೂರ್ನಾಲ್ಕು ವರ್ಷಗಳ ಹಿಂದೆ ಇದೇ ಅಂಕಣದಲ್ಲಿ ಅಮೆರಿಕದಲ್ಲಿ ತುಂಬ ಚಾಲ್ತಿಯಲ್ಲಿರುವ ಒಂದು ನಂಬಿಕೆ ‘ಗ್ರೌಂಡ್ಹಾಗ್ ಪ್ರಾಣಿ ಹೇಳುವ ಚಳಿಭವಿಷ್ಯ’ ಕುರಿತು ಬರೆದಿದ್ದೆ. ನಮ್ಮ ಜೀವನಕ್ಕೊಂದಿಷ್ಟು ಸ್ವಾರಸ್ಯವನ್ನು ತಂದುಕೊಡುವ, ಸ್ವಲ್ಪ ಮಟ್ಟಿಗೆ ಅದನ್ನು ರಹಸ್ಯವನ್ನಾಗಿಸುವ ಈ ನಂಬಿಕೆಗಳು ಬಹಳ ಚಂದವೇ. ಎಲ್ಲಿಯವರೆಗೆ ಅವು ನಿರುಪದ್ರವಿಯಾಗಿ ವೈಯಕ್ತಿಕ ಮಟ್ಟದಲ್ಲಿ ಮಾತ್ರ ಇರುತ್ತವೋ ಅಲ್ಲಿವರೆಗೆ ಒಳ್ಳೆಯದೇ. ಯಾವಾಗ ಅಡ್ಡಕಸುಬಿ ಟಿವಿ-ಜ್ಯೋತಿಷಿಗಳು ಮಾಡುವಂತೆ ಮುಗ್ಧ ಜನರನ್ನು ಮೌಢ್ಯಕ್ಕೆ ದೂಡುತ್ತವೋ ಆಗ ನಂಬಿಕೆಗಳ ಮೇಲಿನ ಗೌರವ ಆಸಕ್ತಿಗಳು ಹೊರಟುಹೋಗುತ್ತವೆ. ಇರಲಿ, ಇವತ್ತು ಒಂದು ಚಂದದ ನಂಬಿಕೆಯಿಂದ ಪರಾಗ ಸ್ಪರ್ಶಿಸೋಣವೇ? ನಿಮಗಿದು ಇಷ್ಟ ಆಗೇಆಗುತ್ತದೆ ಎಂಬ ನಂಬಿಕೆ ನನ್ನದು! ‘ಗ್ವಾಟೆಮಾಲ’ ಹೆಸರು ಕೇಳಿರಬಹುದು ನೀವು. ಇದು, ಲ್ಯಾಟಿನ್ ಅಮೆರಿಕ ಪ್ರಾಂತ್ಯದ ಒಂದು ಪುಟ್ಟ ದೇಶ. ಮರಗಳ ನಾಡು ಎಂದು ಅರ್ಥವಂತೆ ಗ್ವಾಟೆಮಾಲ ಎಂಬ ಪದಕ್ಕೆ, ಅಲ್ಲಿನ ಮಾಯಟೊಲ್ಟೆಕ್ ಭಾಷೆಯಲ್ಲಿ. ಪ್ರಾಚೀನ ‘ಮಾಯನ್’ ಸಂಸ್ಕೃತಿಯ ಕಾಲದಿಂದಲೂ ನೇಯ್ಗೆ ಆ ದೇಶದ ಜನರ ಮುಖ್ಯ ಕಸುಬು. ಬಟ್ಟೆ ನೇಯುವುದು ಮತ್ತು ಹೊಲಿಯುವುದು ಎಂದಮೇಲೆ ಅಲ್ಲಿ ಚಿಂದಿ ಬಟ್ಟೆ ಜಮೆಯಾಗುವುದು ಇದ್ದೇಇದೆಯಲ್ಲ? ಚಿಂದಿಯನ್ನೆಲ್ಲ ಜೋಡಿಸಿ ದುಪ್ಪಟ್ಟಿ, ಚೀಲ ಇತ್ಯಾದಿಗಳನ್ನು ತಯಾರಿಸುವುದು ಸರ್ವೇಸಾಮಾನ್ಯ. ಆದರೆ ಗ್ವಾಟೆಮಾಲ ದೇಶದಲ್ಲಿ ಒಂದು ವಿಶಿಷ್ಟ ಸಂಪ್ರದಾಯವಿದೆ. ಅಲ್ಲಿ ಚಿಕ್ಕಚಿಕ್ಕ ಕಡ್ಡಿಚೂರುಗಳಿಗೆ ಚಿಂದಿಬಟ್ಟೆ ತೊಡಿಸಿ ಬಣ್ಣಬಣ್ಣದ ಗೊಂಬೆಗಳನ್ನು ಮಾಡುತ್ತಾರೆ. ನಮ್ಮ ಕೈಬೆರಳುಗಳಷ್ಟೇ ಪುಟ್ಟ ಗಾತ್ರದ ಗೊಂಬೆಗಳು. ತಲಾ ಆರು ಗೊಂಬೆಗಳನ್ನು ಪುಟ್ಟ ಸಂಚಿಯಲ್ಲಿ ಅಥವಾ ಮರದ ಪೆಟ್ಟಿಗೆಯಲ್ಲಿಟ್ಟು ಮಾರುತ್ತಾರೆ. ಆ ಗೊಂಬೆಗಳಿಗೆ ವಿಶೇಷವಾದ ಮಾಂತ್ರಿಕ ಶಕ್ತಿ ಇರುತ್ತದೆ ಎಂದು ಅಲ್ಲಿನ ಜನರು ನಂಬುತ್ತಾರೆ. ಅವುಗಳನ್ನು magical dolls ಅಥವಾ worry dolls ಎಂದೂ ಕರೆಯುತ್ತಾರೆ.


Saturday Aug 13, 2011
Ganesha Idol Sculpting Workshop in Washington
Saturday Aug 13, 2011
Saturday Aug 13, 2011
ದಿನಾಂಕ 14 ಆಗಸ್ಟ್ 2011ರ ಸಂಚಿಕೆ...
ಅಮೆರಿಕದಲ್ಲಿ ಚೌತಿಯ ಗಣಪ ಆಗಲೇ ರೆಡಿ!
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] * * * ಅಭಿಲಾಷ್, ಅಮೂಲ್ಯ, ಆರುಷಿ, ತನ್ಯಾ, ಮಿಲನ್, ರೋಹಿತ್, ಲಾಸ್ಯಾ, ವರ್ಷಾ, ವಿನಮ್ರ, ವಿಪ್ರ, ವಿಷ್ಣು, ವೇದಾ, ಸಿದ್ಧಾರ್ಥ... ಇವರೆಲ್ಲರೂ ನಮ್ಮ ವಾಷಿಂಗ್ಟನ್ನಲ್ಲಿರುವ ಅಮೆರಿಕನ್ನಡಿಗ ಪುಟಾಣಿಗಳು. ಇನ್ನೂ ಎರಡಂಕಿಯ ವಯಸ್ಸು ತಲುಪದ ಚಿಲ್ಟಾರಿಗಳು. ಇಲ್ಲಿನ ಕಾವೇರಿ ಕನ್ನಡ ಸಂಘದ ಸದಸ್ಯರ ಮಕ್ಕಳು. ಇಂದಿನ ಮಕ್ಕಳೇ ಮುಂದಿನ ಜನಾಂಗ ಎಂಬ ಚಾಚಾ ನೆಹರು ಮಾತಿನಂತೆ ಇವರನ್ನೆಲ್ಲ ‘ನಾಳಿನ ಭವ್ಯ ಜಗತ್ತನ್ನು ಕಟ್ಟಲಿರುವ ಶಿಲ್ಪಿಗಳು’ ಎಂದೂ ಬಣ್ಣಿಸಬಹುದಿತ್ತು. ಬೇಡ ಬಿಡಿ. ಅಂಥ ದೊಡ್ಡ ಜವಾಬ್ದಾರಿಯನ್ನು ಇವಿಷ್ಟೇ ಮಕ್ಕಳ ಮೇಲೆ ಹೊರಿಸುವುದು ಸರಿಯಲ್ಲ. ಹಾಗೆನೋಡಿದರೆ, ತನ್ನ ಭವಿಷ್ಯವನ್ನು ತಾನೇ ನಿರ್ಮಾಣ ಮಾಡಿಕೊಳ್ಳುವ ಪ್ರತಿಯೊಂದು ಮಗುವೂ ಓರ್ವ ಶಿಲ್ಪಿಯೇ. ಆದರೆ ಮೇಲೆ ಹೆಸರಿಸಿದ ಈ ಚಿಣ್ಣರಿದ್ದಾರಲ್ಲ, ಇವರು ನಿಜವಾಗಿಯೂ ಶಿಲ್ಪಿಗಳು. ಕಳೆದ ಶನಿವಾರ ಕನ್ನಡ ಸಂಘದ ವಾರ್ಷಿಕ ವನಭೋಜನ (ಪಿಕ್ನಿಕ್) ಅಂಗವಾಗಿ ಹಮ್ಮಿಕೊಂಡಿದ್ದ ‘ಮಣ್ಣಿನಿಂದ ಗಣಪನನ್ನು ಮಾಡಲು ಕಲಿಯಿರಿ’ ಕಾರ್ಯಾಗಾರದಲ್ಲಿ, ಕೇವಲ ಎರಡು-ಎರಡೂವರೆ ತಾಸುಗಳ ಅವಧಿಯಲ್ಲಿ, ಅಂದವಾಗಿ ಅಚ್ಚುಕಟ್ಟಾಗಿ ಗಣೇಶ ವಿಗ್ರಹಗಳನ್ನು ರಚಿಸಿದ ಶಿಲ್ಪಿಗಳು! ಇವರಿಗೆಲ್ಲ ‘ಗುರು ಶಿಲ್ಪಿ’ ಯಾರು? ಇಂಥದೊಂದು ಕಾರ್ಯಾಗಾರ ನಡೆಸುವ ಐಡಿಯಾ ಬಂದದ್ದು ಯಾರಿಗೆ? ಈ ಪ್ರಶ್ನೆಗೆ ಉತ್ತರವಾಗಿ ಓರ್ವ ಹವ್ಯಾಸಿ ಕಲಾಕಾರ, ವೃತ್ತಿಯಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದರೂ ಪ್ರವೃತ್ತಿಯಾಗಿ ವಿವಿಧ ಕಲಾಪ್ರಕಾರಗಳಲ್ಲಿ ಕೈಯಾಡಿಸುವ ಕ್ರಿಯಾಶೀಲ ವ್ಯಕ್ತಿ, ನಮ್ಮ ಕಾವೇರಿ ಕನ್ನಡ ಸಂಘದಲ್ಲಿ ‘ಆಸ್ಥಾನ ಕಲಾವಿದ’ ಎಂದು ಎಲ್ಲರಿಂದ ಪ್ರೀತಿಯ ಉಪಾಧಿ ಪಡಕೊಂಡಿರುವ ಹರಿದಾಸ್ ಲಹರಿ (laharidas@gmail.com) ಎಂಬ ಉತ್ಸಾಹಿ ತರುಣನನ್ನು ಪರಿಚಯಿಸಬೇಕಾಗುತ್ತದೆ. ಉಡುಪಿ ಮೂಲದ ಹರಿದಾಸ್ ಚಿಕ್ಕಮಗಳೂರಿನಲ್ಲಿ ಎಂಜಿನಿಯರಿಂಗ್ ಕಲಿತವರು. ಕಳೆದೊಂದು ದಶಕದಿಂದ ವಾಷಿಂಗ್ಟನ್ನಿವಾಸಿ. ಇಲ್ಲಿ ಅವರ ಪ್ರತಿಭೆ ಮೊದಲಿಗೆ ಪ್ರಕಾಶಿಸಿದ್ದು 2006ರಲ್ಲಿ ‘ಅಕ್ಕ’ ವಿಶ್ವಕನ್ನಡ ಸಮ್ಮೇಳನ ನಡೆದಾಗ. ಸಮ್ಮೇಳನದ ಲಾಂಛನ ರಚನೆಯಿಂದ ಹಿಡಿದು ಆಕರ್ಷಕವಾದ ವೇದಿಕೆಯ ಅಲಂಕಾರದವರೆಗೂ ಇವರದೇ ಕಲಾಸ್ಪರ್ಶ. ಮರುವರ್ಷ ಕಾವೇರಿ ಕಾರ್ಯಕಾರಿ ಸಮಿತಿಯನ್ನೂ ಸೇರಿಕೊಂಡರು. ಸಂಘದ ಅಂತರ್ಜಾಲ ತಾಣಕ್ಕೆ, ವಾರ್ತಾಪತ್ರಗಳಿಗೆ ಹೊಸ ಅಂದ ಕೊಟ್ಟರು. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಡೆಕೊರೇಷನ್ ಕಮಿಟಿ ಎಂದರೆ ಹರಿದಾಸ್ ಎನ್ನುವಷ್ಟು ಜನಜನಿತರಾದರು. ಜತೆಯಲ್ಲೇ ಫೊಟೊಗ್ರಾಫಿ ಹುಚ್ಚು; ಇದೀಗ ಆರ್ಕೆಸ್ಟ್ರಾ ತಂಡ ಕಟ್ಟಿ ಹಾಡುವುದನ್ನೂ ಹಚ್ಚಿಕೊಂಡಿದ್ದಾರೆ. ಇಷ್ಟೆಲ್ಲ ಆದರೂ ಈ ಲೇಖನದಲ್ಲಿ ತನ್ನ ಬಗ್ಗೆ ಏನೂ ಬರೆಯಬಾರದೆಂದು ತಾಕೀತು ಮಾಡಿರುವ ಪುಣ್ಯಾತ್ಮ. ಇಂತಿರುವ ಹರಿದಾಸ್, 2007ರಲ್ಲಿ ಗಣೇಶೋತ್ಸವದ ಸಂದರ್ಭದಲ್ಲಿ ಸುಂದರವಾದೊಂದು ಗಣೇಶ ವಿಗ್ರಹವನ್ನು ಅಮೆರಿಕದ ಮಣ್ಣಿನಿಂದಲೇ ನಿರ್ಮಿಸಿ ಎಲ್ಲರನ್ನೂ ಚಕಿತಗೊಳಿಸಿದ್ದರು. ಆಮೇಲೆ ಪ್ರತಿವರ್ಷವೂ ಕಾವೇರಿ ಸಂಘದ ಗಣೇಶೋತ್ಸವಕ್ಕೆ ಹರಿದಾಸ್ ನಿರ್ಮಿತ ಮೂರ್ತಿ ಎಂಬ ಸಂಪ್ರದಾಯವೇ ಆಗಿಹೋಯ್ತು. ಶಂಖ ತಾಳ ಜಾಗಟೆಯೊಂದಿಗೆ ಮೆರವಣಿಗೆಯಲ್ಲಿ ಗಣೇಶನನ್ನು ತೆಗೆದುಕೊಂಡು ಬರುವುದೇನು, ವೇದೋಕ್ತ ಮಂತ್ರಸಹಿತ ಪೂಜೆಯೇನು, ಬಳಿಕ ವೈಭವದ ಮೆರವಣಿಗೆಯಲ್ಲಿ ಕೊಂಡೊಯ್ದು ನೀರಿನ ದೊಡ್ಡ ಹಂಡೆಯಲ್ಲಿ ಅದರ ವಿಧ್ಯುಕ್ತ ವಿಸರ್ಜನೆಯೇನು... ಗಣೇಶಹಬ್ಬಕ್ಕೆ ವಿಶಿಷ್ಟವಾದ, ನೈಜತೆಯ ಕಳೆ ಬಂತು. ತವರುಮನೆಯಲ್ಲಿ ಚೌತಿಗೆ ಅಪ್ಪಯ್ಯನೇ ಮಣ್ಣಿನ ಗಣಪತಿ ಮಾಡುವುದನ್ನು ನೆನೆಸಿಕೊಂಡು ಪುಳಕಗೊಂಡ ಹೆಂಗಳೆಯರಂತೂ ಮೂರ್ತಿ ರಚನೆಯ ವಿದ್ಯೆಯನ್ನು ನಮಗೂ ಕಲಿಸಿಕೊಡುತ್ತೀರಾ ಎಂದು ಹರಿದಾಸ್ಗೆ ದುಂಬಾಲುಬಿದ್ದರು.


Friday Aug 05, 2011
The Hairy Ball Theorem
Friday Aug 05, 2011
Friday Aug 05, 2011
ದಿನಾಂಕ 07 ಆಗಸ್ಟ್ 2011ರ ಸಂಚಿಕೆ...
ಬಾಚಿದ ಕೂದಲು ಮತ್ತು ಬೀಸುವ ತಂಗಾಳಿ
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] * * * ಮಹಾತ್ಮ ಗಾಂಧಿಯವರ ಉಲ್ಲೇಖದಿಂದ ಇದನ್ನು ಆರಂಭಿಸಿದರೆ ನೀವು ಥಟ್ಟನೆ ಕೇಳಬಹುದು- “ಬಾಪೂಜಿ ಬೊಕ್ಕತಲೆಯವರು. ಅವರೆಲ್ಲಿ ಕೂದಲು ಬಾಚುತ್ತಾರೆ?” ಎಂದು. ನಿಮಗೆ ಆ ತರ್ಲೆ ಪ್ರಶ್ನೆಯೂ ನೆನಪಾಗಬಹುದು- ‘ಸೈಕಲ್ ಮೇಲೆ ಬಾಪೂಜಿ ಪೂರ್ವದಿಂದ ಪಶ್ಚಿಮದತ್ತ ವೇಗವಾಗಿ ಹೋಗುತ್ತಿದ್ದರೆ ಅವರ ಕೂದಲು ಯಾವ ದಿಕ್ಕಿಗೆ ಹಾರುತ್ತಿರುತ್ತದೆ?’ ಹೋಗಲಿಬಿಡಿ, ರಾಷ್ಟ್ರಪಿತನ ಬಗ್ಗೆ ತಮಾಷೆ ಸಲ್ಲ. ಬದಲಿಗೆ ಅವರ ಆತ್ಮಚರಿತ್ರೆಯಿಂದ ಒಂದು ಸಣ್ಣ ಪ್ಯಾರಗ್ರಾಫ್ ಓದೋಣ. ಇವತ್ತಿನ ಅಂಕಣಕ್ಕೆ ಸಂಬಂಧಿಸಿದ್ದೇನೋ ಅದರಲ್ಲಿ ನಮಗೆ ಸಿಗುತ್ತದೆ. “ಡಾ.ಮೆಹ್ತಾ ನನ್ನನ್ನು ನೋಡಲಿಕ್ಕೆಂದು ಲಂಡನ್ನ ವಿಕ್ಟೋರಿಯಾ ಹೊಟೇಲ್ಗೆ ಬಂದಿದ್ದರು. ಹೀಗೇ ಮಾತನಾಡುತ್ತಿರುವಾಗ ನಾನು ಅವರ ಟೋಪಿಯನ್ನು ತೆಗೆದುಕೊಂಡು ಅದೆಷ್ಟು ಮೃದುವಾಗಿದೆ ಎಂದು ಸವರಿ ನೋಡಿದೆ. ವಿರುದ್ಧ ದಿಕ್ಕಿನಲ್ಲಿ ಸವರಿದ್ದರಿಂದ ಅದರ ಉಣ್ಣೆಯೆಲ್ಲ ಎದ್ದು ನಿಂತು ಒಂದು ರೀತಿಯಲ್ಲಿ ವಿಕಾರವಾಗಿ ವಿರೂಪವಾಗಿ ಹೋಯ್ತು. ಡಾ.ಮೆಹ್ತಾ ನನ್ನನ್ನು ತಡೆಯುವಷ್ಟರಲ್ಲಿ ತಪ್ಪು ನಡೆದುಹೋಗಿತ್ತು. ಅದು ನನಗೆ ಒಂದು ರೀತಿಯ ಎಚ್ಚರಿಕೆಯೂ ಆಯಿತು...” - ಹದಿನೆಂಟರ ವಯಸ್ಸಿನಲ್ಲಿ ಬ್ಯಾರಿಸ್ಟರ್ ಓದಲಿಕ್ಕೆ ಲಂಡನ್ಗೆ ಹೋಗಿದ್ದ ದಿನಗಳ ಬಗ್ಗೆ ಬಾಪೂ ಬರೆದಿರುವುದರಲ್ಲಿ ಈ ಭಾಗ ಬರುತ್ತದೆ. ಅವರ ವ್ಯಕ್ತಿತ್ವದ ಕುರಿತು ಹೇಳಲಿಕ್ಕೆ ಇದನ್ನಿಲ್ಲಿ ಉಲ್ಲೇಖಿಸಿದ್ದಲ್ಲ. ಟೋಪಿಯನ್ನು ವಿರುದ್ಧ ದಿಕ್ಕಿನಲ್ಲಿ ಸವರಿದಾಗ ಉಣ್ಣೆ ಎಳೆಗಳು ನಿಮಿರಿ ಟೋಪಿ ವಿಕಾರವಾಗುವ ಚಿತ್ರವನ್ನು ಕಲ್ಪಿಸಿಕೊಳ್ಳಿ, ಅಷ್ಟು ಸಾಕು. ಟೋಪಿ ನಿರ್ಜೀವ ವಸ್ತು, ಹಾಗಾಗಿ ಪರವಾಗಿಲ್ಲ. ಒಂದುವೇಳೆ ನಿಮಗೆ ಬೆಕ್ಕನ್ನು ಪ್ರೀತಿಯಿಂದ ನೇವರಿಸುವ ಅಭ್ಯಾಸವಿದ್ದರೆ!? ಅಪ್ಪಿತಪ್ಪಿಯೂ ನೀವು ಬೆಕ್ಕಿನ ಬೆನ್ನನ್ನು ವಿರುದ್ಧ ದಿಕ್ಕಿನಲ್ಲಿ (ಬಾಲದಿಂದ ತಲೆಯ ಕಡೆಗೆ) ಸವರಿದ್ದೇ ಆದರೆ ಬೆಕ್ಕಿಗೆ ಅದು ಸ್ವಲ್ಪವೂ ಇಷ್ಟವಾಗುವುದಿಲ್ಲ. ಸಿಟ್ಟಿನಿಂದ ಅದು ನಿಮ್ಮನ್ನು ಪರಚಲೂಬಹುದು. ತಲೆಯಿಂದ ಬಾಲದ ಕಡೆ ನೇವರಿಸಿನೋಡಿ. ಆರಾಮಾಗಿ ಮುದ್ದು ಮಾಡಿಸಿಕೊಳ್ಳುತ್ತದೆ ಬೆಕ್ಕು. ಅಲ್ಲಿಗೆ ನಾವು ಇವತ್ತಿನ ಮುಖ್ಯ ವಿಷಯಕ್ಕೆ ಬಂದೆವು. ಇದು ಗಣಿತಶಾಸ್ತ್ರದ ಒಂದು ಪ್ರಮೇಯ. ‘ಕೂದಲಿರುವ ಚೆಂಡಿನ ಪ್ರಮೇಯ’ ಎಂದು ಇದರ ಹೆಸರು. ಇಂಗ್ಲಿಷ್ನಲ್ಲಾದರೆ The Hairy Ball theorem. ಇದೇನನ್ನುತ್ತೆಂದರೆ “ಟೆನ್ನಿಸ್ ಬಾಲ್ ಅಥವಾ ಬ್ಯಾಡ್ಮಿಂಟನ್ ಚೆಂಡಿನಂಥ ಕೂದಲಿರುವ ಚೆಂಡನ್ನು ಚಿಕ್ಕದೊಂದು ಬಾಚಣಿಗೆಯಿಂದ ಬಾಚಿದರೆ, ಚೆಂಡಿನ ಮೇಲ್ಮೈಯ ಅಷ್ಟೂ ಕೂದಲನ್ನು ಮಟ್ಟಸವಾಗಿ ಬಾಚುವುದು ಸಾಧ್ಯವಾಗದು. ಎಲ್ಲೋ ಒಂದುಕಡೆ ಒಂದಿಷ್ಟು ಕೂದಲು ನೇರ ನಿಲ್ಲಬೇಕಾಗುತ್ತದೆ. ಇಲ್ಲವೇ ಅಲ್ಲಿ ಪುಟ್ಟದೊಂದು ಬೈತಲೆ ಅಥವಾ ‘ಸುಳಿ’ಯಂಥ ರಚನೆ ಉಂಟಾಗುತ್ತದೆ. ಆ ಭಾಗದಲ್ಲಿ ಕೂದಲಿಲ್ಲದೆ ಚೆಂಡಿನ ಬರಿಮೈ ಕಾಣಿಸಿಕೊಳ್ಳಬೇಕಾಗುತ್ತದೆ.”

Version: 20241125