Episodes
Saturday Jul 28, 2012
Maththakokila Melody
Saturday Jul 28, 2012
Saturday Jul 28, 2012
ದಿನಾಂಕ 29 ಜುಲೈ 2012
ಹುದುಗಿ ಹಾಡುವ ಮತ್ತಕೋಕಿಲ...
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ವಾಣಿ ಪತ್ರಿಕೆಯ ‘ವಿಜಯ ವಿಹಾರ’ ಸಾಪ್ತಾಹಿಕ ಪುರವಣಿಯಲ್ಲಿಯೂ ಭಾಗ-1 ಮತ್ತು ಭಾಗ-2 ಓದಬಹುದು.] * * * ರಸಋಷಿ ಕುವೆಂಪು ಬರೆದ ‘ದೋಣಿ ಗೀತೆ’ ಯಾರಿಗೆ ತಾನೆ ಗೊತ್ತಿಲ್ಲ? ಕನ್ನಡದ ಅತ್ಯುತ್ತಮ ಭಾವಗೀತೆಗಳಲ್ಲಿ ಒಂದಾಗಿ, ಸಿನೆಮಾದಲ್ಲಿ ಅಳವಡಿಸಲಾದ ಭಾವಗೀತೆಗಳ ಪೈಕಿ ಸರ್ವಶ್ರೇಷ್ಠ ದರ್ಜೆಯದಾಗಿ, ಜನಮಾನಸದಲ್ಲಿ ಹಚ್ಚಹಸುರಾಗಿ ನಿಂತಿರುವ ಅದ್ಭುತ ಗೀತೆ. ದೋಣಿಯ ಚಲನೆಯ ಲಯವೇ ಈ ಪದ್ಯದ ಲಯ ಕೂಡ. ಸುಂದರ ಮುಂಜಾವು, ಸೂರ್ಯೋದಯದ ಸೊಬಗು, ವಿಶಾಲವಾದ ಕೆರೆಯಲ್ಲಿ ದೋಣಿ ಯಾತ್ರೆ. ಗಾನರೂಪದಲ್ಲಿ ಪ್ರಕೃತಿಸೌಂದರ್ಯದ ವರ್ಣನೆಯ ಜತೆಯಲ್ಲೇ ಬದುಕು ಅನಂತವೆಂಬ ಸಂದೇಶ. ಆಹಾ! ಕಾವ್ಯದ ರಸಘಟ್ಟಿಯನ್ನೇ ನಮಗಿತ್ತಿದ್ದಾರೆ ಕುವೆಂಪು. ಈ ಗೀತೆಯ ಎರಡನೇ ಚರಣವನ್ನು ನೀವೊಮ್ಮೆ ವಿಶೇಷವಾಗಿ ಗಮನಿಸಬೇಕು. ಅದರಲ್ಲೂ ನಾಲ್ಕನೆಯ ಸಾಲು. ತತ್ರಾಪಿ ಮೂರನೇ ಪದ. ‘ಮತ್ತಕೋಕಿಲ’! ಕೆರೆಯ ಅಂಚಿನ ಮೇಲೆ ಮಿಂಚಿನ ಹನಿಗಳಂದದಿ ಹಿಮಮಣಿ ಮಿಂಚುತೀರ್ಪುವು ಮೂಡುತೈತರೆ ಬಾಲಕೋಮಲ ದಿನಮಣಿ ಹಸುರು ಜೋಳದ ಹೊಲದ ಗಾಳಿಯು ತೀಡಿ ತಣ್ಣಗೆ ಬರುತಿದೆ ಹುದುಗಿ ಹಾಡುವ ಮತ್ತಕೋಕಿಲ ಮಧುರವಾಣಿಯ ತರುತಿದೆ ಏನಿದು ಮತ್ತಕೋಕಿಲ? ಮಿಸ್ ಲೀಲಾವತಿ ಚಿತ್ರದ ‘ದೋಣಿ ಸಾಗಲಿ ಮುಂದೆ ಹೋಗಲಿ...’ಯನ್ನು ನೀವೇನಾದರೂ ಇಂಗ್ಲಿಷ್ ಸಬ್ಟೈಟಲ್ಗಳೊಂದಿಗೆ ನೋಡಿದರೆ ಅಲ್ಲಿ ಮತ್ತಕೋಕಿಲ ಮಧುರವಾಣಿಯನ್ನು the excited cuckoo's melody ಎಂದೇ ಅನುವಾದಿಸಿದ್ದಾರೆ. ಹುದುಗಿ ಹಾಡುವ ಎಂದರೆ ಮರೆಯಲ್ಲಿ ಅಡಗಿಕೊಂಡು ಹಾಡುವ ಎಂದರ್ಥ. ಸಂತಸದಿಂದ ಉನ್ಮತ್ತಗೊಂಡ ಕೋಗಿಲೆ ಇಂಪಾಗಿ ಹಾಡುತ್ತದಂತೆ. ಈ ಹಾಡಿನಲ್ಲಿ ಪ್ರಕೃತಿವರ್ಣನೆ ಇದೆ ನಿಜ, ಆದರೆ ಅದು ವಸಂತ ಋತುವಿನ ದೃಶ್ಯ ಅಂತೇನೂ ಕವಿ ಬಣ್ಣಿಸಿಲ್ಲ. ಉನ್ಮತ್ತ ಕೋಗಿಲೆ ಮಧುರವಾಗಿ ಉಲಿಯುತ್ತಿದೆ ಎನ್ನುವ ಅಂಶವೊಂದನ್ನು ಬಿಟ್ಟರೆ ದೋಣಿ ಹಾಡು ನಮಗೆ ಶರದೃತುವಿನಲ್ಲೂ ಹೇಮಂತ ಋತುವಿನಲ್ಲೂ ಅದೇ ಪ್ರಮಾಣದ ರೋಮಾಂಚನ ನೀಡಬಲ್ಲದು. ಅಂದಮೇಲೆ ಯಾವುದೋ ನಿರ್ದಿಷ್ಟ ಕಾರಣಕ್ಕಾಗಿ ‘ಮತ್ತಕೋಕಿಲ’ ಪದಪ್ರಯೋಗ ಮಾಡಿದ್ದಾರೆ ಕುವೆಂಪು. ಇರಲಿ, ಸದ್ಯಕ್ಕೆ ಆ ಪದವನ್ನಷ್ಟೇ ನೆನಪಿನಲ್ಲಿಟ್ಟುಕೊಳ್ಳೋಣ. ಈಗ ನಿಮಗೊಂದು ಪ್ರಶ್ನೆ. ದೋಣಿ ಗೀತೆಯಂತೆಯೇ ಜನಮನದಲ್ಲಿ ಅಚ್ಚಳಿಯದೆ ನಿಂತಿರುವ ಇನ್ನೂ ಕೆಲವು ಹಾಡುಗಳನ್ನು ಉಲ್ಲೇಖಿಸಿದರೆ ಅವುಗಳೆಲ್ಲದರಲ್ಲೂ ಇರುವ ಒಂದು ಸಾಮಾನ್ಯ ಅಂಶ ಏನೆಂಬುದನ್ನು ಗುರುತಿಸುವುದು ನಿಮಗೆ ಸಾಧ್ಯವಾಗಬಹುದೇ? ಮೊದಲನೆಯದು ‘ಸ್ಕೂಲ್ ಮಾಸ್ಟರ್’ ಚಿತ್ರದಲ್ಲಿ ಅಳವಡಿಸಿಕೊಂಡ, ಸೋಸಲೆ ಅಯ್ಯಾಶಾಸ್ತ್ರಿಗಳು ಬರೆದ, ಶಾಲೆಗಳಲ್ಲಿ ಪ್ರಾರ್ಥನಾಗೀತೆಯಾಗಿ ಜನಪ್ರಿಯವಾದ ಹಾಡು- ‘ಸ್ವಾಮಿದೇವನೆ ಲೋಕಪಾಲನೆ ತೇನಮೋಸ್ತುನಮೋಸ್ತುತೇ’. ಎರಡನೆಯದು, ಗೋಪಾಲಕೃಷ್ಣ ಅಡಿಗರ ಪ್ರಖ್ಯಾತ ಕವಿತೆ, ‘ಅಮೆರಿಕಾ ಅಮೆರಿಕಾ’ ಚಿತ್ರದಲ್ಲಿ ಅಳವಡಿಸಿಕೊಂಡ ‘ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು’. ಇನ್ನೊಂದು, ಅಷ್ಟೇನೂ ಜನಪ್ರಿಯವಾಗದ ಆದರೆ ತುಂಬ ಚಂದದ ಪದ್ಯ ವಿ.ಸೀತಾರಾಮಯ್ಯನವರ ರಚನೆ ‘ಯಾವ ಜನ್ಮದ ಕೆಳೆಯೊ ಕಾಣೆನು ಕಂಡ ಕೂಡಲೆ ಒಲಿಸಿತು’. ಪಿ.ಸುಶೀಲಾ ಧ್ವನಿಯಲ್ಲಿ ಇದನ್ನು ‘ಮಹಾತ್ಯಾಗ’ ಚಿತ್ರದಲ್ಲಿ ಸೇರಿಸಿಕೊಳ್ಳಲಾಗಿತ್ತು. ಇವಿಷ್ಟೇ ಆಗಿದ್ದರೆ, ಭಾವಗೀತೆಯೆಂದು ರಚಿತವಾಗಿ ಕನ್ನಡ ಚಿತ್ರಗೀತೆಗಳಾದ ಪದ್ಯಗಳು- ಎಂಬುದೇ ಸಾಮಾನ್ಯ ಅಂಶ ಎನ್ನಬಹುದಿತ್ತು. ಅದು ಸಮಂಜಸವೂ ಆಗುತ್ತಿತ್ತು. ಆದರೆ ಇನ್ನೂ ಒಂದಿಷ್ಟು ಪದ್ಯಗಳನ್ನು ಇದೇ ಗುಂಪಿಗೆ ಸೇರಿಸಿದರೆ? ಕುವೆಂಪು ಅವರದೇ ಮತ್ತೊಂದು ರಚನೆ ‘ಭಾರತಾಂಬೆಯೆ ಜನಿಸಿ ನಿನ್ನೊಳು ಧನ್ಯನಾದೆನು ದೇವಿಯೇ’- ಏಳನೇ ತರಗತಿಯಲ್ಲಿ ಕನ್ನಡಭಾರತಿ ಪಠ್ಯಪುಸ್ತಕದಲ್ಲಿತ್ತು. ಇನ್ನೊಂದು, ಕರಾವಳಿಯ ಶಾಲೆಗಳಲ್ಲಿ ಪ್ರಾರ್ಥನೆಪದ್ಯವಾಗಿ ಜನಪ್ರಿಯವಾದ, ಮುಂಡಾಜೆ ರಾಮಚಂದ್ರ ಭಟ್ಟರು ಬರೆದ ‘ಶಾರದಾಂಬೆಯೆ ವಿಧಿಯ ರಾಣಿಯೆ ನಿನಗೆ ನಾ ವಂದಿಸುವೆನು/ ದಾರಿ ಕಾಣದೆ ಬಳಲುತಿರುವೆನು ತೋರಿಸೈ ಸತ್ಪಥವನು’.ಇತ್ತೀಚೆಗೆ ನಿಧನ ಹೊಂದಿದ ಶಂ.ಗು.ಬಿರಾದಾರರನ್ನು ನೆನಪು ಮಾಡಿಕೊಂಡು ‘ನಾವು ಎಳೆಯರು ನಾವು ಗೆಳೆಯರು ಹೃದಯ ಹೂವಿನ ಹಂದರ/ ನಾಳೆ ನಾವೇ ನಾಡ ಹಿರಿಯರು ನಮ್ಮ ಕನಸದು ಸುಂದರ’ ಸಹ ಇರಲಿ. ಬರಿ ಕನ್ನಡ ಪದ್ಯಗಳಷ್ಟೇ ಏಕೆ, ಇಲ್ಲೊಂದು ತುಳಸೀದಾಸ ಭಜನೆ- ‘ರಾಮಚಂದ್ರ ಕೃಪಾಳು ಭಜಮನ ಹರಣ ಭವಭಯದಾರುಣಂ/ ಕಂಜಲೋಚನ ಕಂಜಮುಖಕರ ಕಂಜ ಪದಕಂಜಾರುಣಂ’. ಹಾಗೆಯೇ ಒಂದು ಹಿಂದಿ ಚಿತ್ರಗೀತೆ- ‘ಆಪ್ಕೀ ನಜರೋನೇ ಸಮ್ಝಾ ಪ್ಯಾರ್ಕೇ ಕಾಬಿಲ್ ಮುಝೇ’ (ರಾಜಾ ಮೆಹದೀ ಆಲೀಖಾನ್ ರಚನೆ ‘ಅನ್ಪಢ್’ ಚಿತ್ರದ್ದು). ಅದಾದಮೇಲೆ ವಾದಿರಾಜರ ಕೃಷ್ಣಾಷ್ಟಕದ ಸಾಲುಗಳು- ‘ಪಾಲಯಾಚ್ಯುತ ಪಾಲಯಾಜಿತ ಪಾಲಯಾ ಕಮಲಾಲಯ/ ಲೀಲಯಾಧೃತ ಭೂಧರಾಂಬುರುಹೋದರ ಸ್ವಜನೋದರ’. ಒಂದು ಜನಪದಗೀತೆಯನ್ನೂ ಸೇರಿಸಿ ಗೀತಗುಚ್ಛವನ್ನು ಹಿಗ್ಗಿಸೋಣ. ಇದು ತುಳುನಾಡಿನಲ್ಲಿ ಬದುಕಿದ್ದನೆನ್ನಲಾದ ಅಗೋಳಿ ಮಂಜಣ್ಣ ಎಂಬ ಐತಿಹಾಸಿಕ ಪುರುಷನ ಕತೆ ಹೇಳುವ ತುಳು ಪಾಡ್ದನ: ಕಡಲ ಕರೆಟೊಪು ನಮ್ಮ ಈ ತುಳುನಾಡ ಗದ್ದೆನ್ ತೂವೊಡು ಗುತ್ತು ಬರ್ಕೆಡ್ ಇತ್ತಿ ಬಂಟೆರ್ ಬಾರಗೆರೆ ಕತೆ ಕೇಣೊಡು ಇಷ್ಟೆಲ್ಲ ವಿಭಿನ್ನವೆನಿಸುವ ಹಾಡುಗಳಲ್ಲಿ ನಿಜಕ್ಕೂ ಏನಿರಬಹುದು ಸಾಮಾನ್ಯ ಅಂಶ? ಒಂದೇ ರಾಗ ಆಧಾರಿತ ಹಾಡುಗಳಿರಬಹುದೇ? ಇಲ್ಲವಲ್ಲ! ‘ದೋಣಿ ಸಾಗಲಿ...’ಯನ್ನು ಪಹಾಡಿ ರಾಗದಲ್ಲಿ ಹಾಡುತ್ತಾರೆ. ‘ಯಾವ ಮೋಹನ ಮುರಳಿ...’ ರತ್ನಮಾಲಾ ಪ್ರಕಾಶ್ ಹಾಡಿರುವುದು ದೇಶ್ ರಾಗದಲ್ಲಿ. ಅಮೆರಿಕಾ ಅಮೆರಿಕಾ ಚಿತ್ರದಲ್ಲಿರುವ ಆವೃತ್ತಿ ಬೇರೆ ಯಾವುದೋ ರಾಗದಲ್ಲಿ ಹಾಡಿದ್ದು. ಇನ್ನು ‘ಆಪ್ಕೀ ನಜರೋಂನೆ ಸಮ್ಝಾ...’ ಅಠಾಣ ರಾಗ. ಹಾಗಾಗಿ ರಾಗವಂತೂ ಸಾಮಾನ್ಯ ಅಂಶವಾಗಿಲ್ಲ. ಮತ್ತೇನು? ಮತ್ತಕೋಕಿಲ! ಹೌದು. ಮೇಲೆ ಉಲ್ಲೇಖಿಸಿದ ಎಲ್ಲ ಕೃತಿಗಳೂ ‘ಮತ್ತಕೋಕಿಲ’ ಎಂಬ ಛಂದಸ್ಸಿಗೆ ಬದ್ಧವಾಗಿರುವಂಥವು. ಮಂದಾಕ್ರಾಂತಾ, ಮತ್ತೇಭವಿಕ್ರೀಡಿತ, ಚಂಪಕಮಾಲಾ, ಉತ್ಪಲಮಾಲಾ ಅಂತೆಲ್ಲ ಛಂದೋವೃತ್ತಗಳ ಹೆಸರನ್ನು ನೀವು ಕೇಳಿರಬಹುದು. ಅವುಗಳಂತೆಯೇ ಇದೂ ಒಂದು, ಮತ್ತಕೋಕಿಲ. ‘ತಾನ ತಾನನ ತಾನ ತಾನನ ತಾನ ತಾನನ ತಾನ ತಾ’ ಎಂದು ಗುಣುಗುಣಿಸಿದರೆ ಹೇಗಿರುತ್ತದೋ ಹಾಗೆ ಇದರ ಲಯ. ‘ಮತ್ತಕೋಕಿಲ ಮತ್ತಕೋಕಿಲ ಮತ್ತಕೋಕಿಲ ಕೋಕಿಲಾ’ ಎಂದೂ ನೆನಪಿಟ್ಟುಕೊಳ್ಳಬಹುದು. ಪ್ರತಿಯೊಂದು ಪಾದದಲ್ಲೂ 3, 4, 3, 4, 3, 4, 3 ಮತ್ತೊಂದು ಗುರು- ಥೇಟ್ ಅಲೆಗಳ ಮೇಲೆ ದೋಣಿ ಸಾಗಿದಂತೆ. ಅದಕ್ಕಿಂತಲೂ ಶೃಂಗಾರಮಯವಾಗಿ ಹೇಳುವುದಾದರೆ ‘ಮನ್ಮನೊ ಮನ್ಮನೊಪ್ಯೇಷಃ ಮತ್ತಕೊಕಿಲ ನಿಸ್ವನಃ’- ಶಯ್ಯಾಗೃಹದಲ್ಲಿ ಪ್ರಿಯತಮೆ ಮತ್ತು ಪ್ರಿಯಕರನ ಪಿಸುಮಾತುಗಳು (ಮನ್ಮನೊ ಎಂದರೆ ಮುಣುಮುಣು ಎಂದು ಮೆಲುದನಿಯ ಮಾತು) ಪರಸ್ಪರ ಪ್ರೀತಿವಿಶ್ವಾಸಪೂರ್ವಕವಾದುವು ವಿನಿಮಯವಾಗುವಾಗ ಆ ಸಂವಾದ ಮತ್ತಕೋಕಿಲ ವೃತ್ತದಂತಿರುತ್ತದಂತೆ! ಮತ್ತಕೋಕಿಲ ಎನ್ನುವುದು ತೆಲುಗು ಹೆಸರು. ಕನ್ನಡ ಛಂದಸ್ಸಿನಲ್ಲಿ ಇದು ‘ಮಲ್ಲಿಕಾಮಾಲೆ’. ನಾಗವರ್ಮನ ಛಂದೋಂಬುಧಿ ಗ್ರಂಥದಲ್ಲಿ* ಇದರ ವ್ಯಾಖ್ಯೆ ಬರುತ್ತದೆ- ಜ್ವಾಲಿ ವಾಯು ದಿನೇಶಯುಗ್ಮ ಶಶಾಂಕ ಪಾವಕರೆಂಬಿವರ್ ಲೀಲೆಯಿಂ ಬರೆ ವಿಶ್ರಮಂ ವಸುಸಂಖ್ಯೆಯೊಳ್ ನಿಲೆ ಭಾಮಿನೀ ನೀಲಲೋಲ ಸಹಸ್ರಕುಂತಳೆ ಸಂದುದಿಂತಿದು ಮಲ್ಲಿಕಾ- ಮಾಲೆ ಯೆಂಬುದು ನಿಶ್ಚಯಂ ಕವಿರಾಜಹಂಸವಿನಿರ್ಮಿತಂ ಆದರೆ ಕನ್ನಡದ ಕವಿಗಳೂ ಇದನ್ನು ಮತ್ತಕೋಕಿಲ ಎಂದೇ ಗುರುತಿಸಲು ಇಷ್ಟಪಡುತ್ತಾರೆ. ಅದಕ್ಕೆ ಕಾರಣವೂ ಇದೆ. ಮಲ್ಲಿಕಾಮಾಲೆ ಎಂಬ ಪದವನ್ನು ಇದೇ ಛಂದಸ್ಸಿನಲ್ಲಿರುವ ಪದ್ಯದಲ್ಲಿ ಒಂದೇ ಪಾದದಲ್ಲಿ ಬರೆಯಲಿಕ್ಕಾಗುವುದಿಲ್ಲ. ಮಾತ್ರೆಗಳ ಲೆಕ್ಕ ತಪ್ಪುತ್ತದೆ. ಮೇಲಿನ ಪದ್ಯದಲ್ಲಿರುವಂತೆ ಪಾದಗಳ ಮಧ್ಯೆ ವಿಂಗಡಿಸಿ ಬರೆಯಬೇಕಾಗುತ್ತದೆ. ಆದರೆ ಮತ್ತಕೋಕಿಲ ಪದ ಹಾಗಲ್ಲ. ಮಾತ್ರೆಗಳ ಲೆಕ್ಕಾಚಾರಕ್ಕೆ ಚೆನ್ನಾಗಿ ಹೊಂದಿಕೊಳ್ಳುತ್ತದೆ. ನಂದೀಛಂದಸ್ಸು ಗ್ರಂಥದ* ಈ ಕೆಳಗಿನ ಪದ್ಯವನ್ನು ಗಮನಿಸಿ: ಪಾವಕಾನಿಲ ಪದ್ಮಬಾಂಧವ ಭಾನುಚಂದ್ರ ಕೃಶಾನುಗಳ್ ಮಾವರಾಪ್ತ ವಿರಾಮಮುಂ ಬರೆ ಮತ್ತಕೋಕಿಲ ಮೆಂಬುದೇಂ ಭಾವಜಾರಿಯ ಭಕ್ತಸಂಕುಲ ಭುಕ್ತಿ ಮುಕ್ತಿ ವಿಧಾಯಿನೀ ಸಾವಧಾನದೆ ಕೇಳು ಸರ್ವರ ಸಮ್ಮತಂ ತಿರಿಲೋಕದೊಳ್ ಮತ್ತಕೋಕಿಲ ಎಂಬ ಪದವನ್ನು ಮೊತ್ತಮೊದಲಿಗೆ ಬಳಸಿದವನು ನನ್ನೆಚೋಡನೆಂಬ ತೆಲುಗು ಕವಿ ಎನ್ನುತ್ತಾರೆ ವಿದ್ವಾಂಸರು. ಈತನ ‘ಕುಮಾರಸಂಭವಮು’ ಕಾವ್ಯದಲ್ಲಿನ* ಒಂದು ಪದ್ಯ ಹೀಗಿದೆ. ಮುಂಜಾನೆ ಉದ್ಯಾನದಲ್ಲಿ ಕುಳಿರ್ಗಾಳಿ ಬೀಸುತ್ತಿದ್ದಾಗ ಕೋಗಿಲೆಗಳು ಗಾಳಿಗೆ ಹೇಳುತ್ತವಂತೆ: ‘ಎಲೈ ಪವನನೇ, ನೀನೇನೋ ಮೆಲ್ಲಗೆ ಬೀಸುತ್ತಿದ್ದಿ. ಮನ್ಮಥನು ನಿನ್ನ ಮೇಲೆ ದಂಡೆತ್ತಿ ಬರುವ ಮೊದಲು ನೀನಾಗಿಯೇ ಅವನ ಮೇಲೆರಗು. ಇಲ್ಲದಿದ್ದರೆ ಈ ವಸಂತ ನಿನ್ನನ್ನು ಮುಗಿಸಿಬಿಡಬಹುದು, ಎಚ್ಚರ!’ ಮೆತ್ತಮೆತ್ತನ ಕ್ರಾಲು ದೀವು ಸಮೀರಣುಂಡ ಮನೋಭವುಂ ಡೆತ್ತಕುಂಡಗ ವೇಗಕೂಡಗ ನೆತ್ತುಮೆತ್ತಕ ತಕ್ಕಿನನ್ ಜತ್ತು ಸುಮ್ಮು ವಸಂತುಚೇನನಿ ಚಾಟುನಟ್ಲು ಚೆಲಂಗೆನಾ ಮತ್ತಕೋಕಿಲ ಲಾರಮಿಂಗಡು ಮಾಸರಂಬಗು ನಾಮನಿನ್ ಮತ್ತಕೋಕಿಲದ ಸೊಬಗೇನೆಂದರೆ ಇದಕ್ಕೆ ಉದಾಹರಣೆಯಾಗಿ ಹಳಗನ್ನಡದ ಜಟಿಲ ಕಾವ್ಯಭಾಗಗಳೇ ಆಗಬೇಕಂತಿಲ್ಲ. ‘ತಾನ ತಾನನ ತಾನ ತಾನನ ತಾನ ತಾನನ ತಾನ ತಾ’ ಲಯದಲ್ಲಿ ಏನನ್ನೇ ಗುಣುಗುಣಿಸಿದರೂ ಅದು ಮತ್ತಕೋಕಿಲವಾಗುತ್ತದೆ! ಶತಾವಧಾನಿ ಡಾ.ಆರ್.ಗಣೇಶ್ ನಿರ್ವಹಿಸುವ ‘ಪದ್ಯಪಾನ’ ಅಂತರಜಾಲ ವೇದಿಕೆಯಲ್ಲಿ ಸದಸ್ಯ ಕೆ.ಎಸ್.ಮಂಜುನಾಥ ಒಮ್ಮೆ ಬರೆದಿದ್ದರು: “ನನ್ನ ಮಗ ಆರು ವರ್ಷದ ಪೋರ ಒಂದುದಿನ ‘ಊಟ ಮಾಡುವ ಟೈಮು ಬಂದಿತು ಬೇಗ ಬನ್ನಿರಿ ಎಲ್ಲರೂ’ ಎಂದು ರಾಗವಾಗಿ, ಲಯಬದ್ಧವಾಗಿ ಕೂಗುತ್ತಾ ಊಟಕ್ಕೆ ಓಡಿದ್ದ! ಒಂದಿನಿತೂ ಎಡರುತೊಡರಿಲ್ಲ, ಬೇಡದ ಎಳೆತವಿಲ್ಲ, ಮಾತ್ರಾಲೋಪವಿಲ್ಲ. ಇನ್ನೂ ಕನ್ನಡವನ್ನೇ ಅಕ್ಷರ ಕೂಡಿಸಿಕೊಂಡು ಪ್ರಯಾಸದಿಂದ ಓದುವವ, ಮತ್ತಕೋಕಿಲ ವೃತ್ತದ ಒಂದಿಡೀ ಸಾಲನ್ನು ನಿರಾಯಾಸವಾಗಿ, ಸಮಯಸ್ಫೂರ್ತಿಯಿಂದ ಒದರಿದ್ದ! ಮತ್ತೆ ಮಲಗುವ ಸಮಯದಲ್ಲಿ ಮಾಮೂಲಿನಂತೆ ಕತೆ ಕೇಳಿದ ನಂತರ ಹೊರಳಿ ಮಲಗುತ್ತಾ ಮತ್ತೊಂದು ಸಾಲು- ಊಟವಾಯಿತು ನಿದ್ದೆ ಬಂದಿತು ಹೊದ್ದು ತಾಚಿಯ ಮಾಡುವೆ!” ಅಷ್ಟಾಗಿ ಕುವೆಂಪು ಆದರೂ ದೋಣಿ ಗೀತೆಯನ್ನು ಕಾಗದ ಪೆನ್ನು ಎತ್ತಿಕೊಂಡು ಈಗ ಕವಿತೆ ಬರೆಯುತ್ತೇನೆ ಎಂದು ಪಟ್ಟುಹಿಡಿದು ಕುಳಿತು ಪದಗಳಿಗಾಗಿ ತಡಕಾಡುತ್ತ ಬರೆದದ್ದಲ್ಲ. ಮೈಸೂರಿನಲ್ಲಿ ಒಂಟಿಕೊಪ್ಪಲಿನಿಂದ ಮಹಾರಾಜಾ ಕಾಲೇಜಿನ ಕಡೆಗೆ ಬರುವಾಗ ಕುಕ್ಕನಹಳ್ಳಿ ಕೆರೆಯನ್ನು ದೋಣಿ ಮೂಲಕ ದಾಟುತ್ತಿದ್ದ ಕಾಲವದು. ಅಂಥದೊಂದು ದೋಣಿಯಾತ್ರೆಯ ವೇಳೆ ಪಯಣಿಗನಾಗಿದ್ದ ಕುವೆಂಪು, ಹುಟ್ಟು ಹಾಕುತ್ತಿದ್ದವರ ಉತ್ಸಾಹವರ್ಧನೆಗಾಗಿ ದೋಣಿಯಲ್ಲಿ ಕುಳಿತಿದ್ದಾಗಲೇ ರಚಿಸಿ ಸ್ವತಃ ಹಾಡಿದ ಆಶುಕವಿತೆ ಅದು. ಎಂಥ ಚಂದ ಮತ್ತಕೋಕಿಲ ವೃತ್ತದ ಛಂದ! ಅಷ್ಟೇಅಲ್ಲ, ವೃತ್ತದ ಹೆಸರೂ ಪದ್ಯದಲ್ಲೇ ಬರುವಂತೆ ಮುದ್ರಾಲಂಕಾರ ಬಂಧ! ಕವಿಕೋಗಿಲೆ ಎನ್ನುವುದು ಅದಕ್ಕೇ ಅಲ್ಲವೇ? ಹುದುಗಿ ಹಾಡುವ ಮತ್ತಕೋಕಿಲ! * * * [* ಈ ಬರಹದಲ್ಲಿ ಉಲ್ಲೇಖಿಸಲಾದ ಹಳಗನ್ನಡ ಮತ್ತು ತೆಲುಗು ಪದ್ಯಗಳನ್ನು ವಾಷಿಂಗ್ಟನ್ನಲ್ಲಿರುವ ಹಿರಿಯ ಕನ್ನಡಿಗ ಜೆ.ಕೆ.ಮೋಹನ್ ರಾವ್ ಅವರ ಸಂಗ್ರಹದಿಂದ ಬಳಸಿಕೊಂಡಿದ್ದೇನೆ. ಅವರಿಗೆ ನನ್ನ ಕೃತಜ್ಞತೆಗಳು.]Monday May 28, 2012
Breaking News
Monday May 28, 2012
Monday May 28, 2012
ದಿನಾಂಕ 27 ಮೇ 2012ರ ಸಂಚಿಕೆ...
ಕೆಮ್ಮೋತ್ತರ ಬ್ರೇಕಿಂಗ್ ನ್ಯೂಸ್!
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] * * * ಕಳೆದವಾರ ಕನ್ನಡ ಚಿತ್ರಗೀತೆಗಳಿಗೆ ಸಂಬಂಧಪಟ್ಟ ರಸಪ್ರಶ್ನೆ ಕೇಳಿದ್ದರಿಂದಲೋ, ‘ಚಿತ್ರಗೀತೆಗಳಲ್ಲಿ ಕೆಮ್ಮು’ ಎಂಬ ವಿಲಕ್ಷಣ ವಿಷಯವನ್ನು ಅಂಕಣಕ್ಕೆ ಆರಿಸಿಕೊಂಡಿದ್ದರಿಂದಲೋ, ಅಥವಾ, ಕಣ್ಣಿಗೆ ರಾಚುವಂಥ ತಪ್ಪೊಂದು ಅದರಲ್ಲಿ ನುಸುಳಿದ್ದರಿಂದಲೋ ಅಂತೂ ಸಿಕ್ಕಾಪಟ್ಟೆ ಪ್ರತಿಕ್ರಿಯೆಗಳು ಬಂದಿವೆ. ನನ್ನ ಮಿಂಚಂಚೆಪೆಟ್ಟಿಗೆ ತುಂಬಿತುಳುಕಿದೆ. ಲೇಖನವನ್ನು ಸಿದ್ಧಪಡಿಸುವಾಗ ನನಗೆ ಸ್ವಲ್ಪ ಅಳುಕಿತ್ತು, ಡಬ್ಬಾತೀತ ಯೋಚನೆ ಅಂತೆಲ್ಲ ಹೇಳಿ ಎಲ್ಲಿ ಡಬ್ಬ ಅನಿಸಿಕೊಳ್ಳುವುದೋ ಎಂದು. ಆದರೆ ಓದುಗರ ಸ್ಪಂದನ ಅದನ್ನು ಸುಳ್ಳಾಗಿಸಿದೆ. ರಸಪ್ರಶ್ನೆಗೆ ಉತ್ತರವಷ್ಟೇ ಅಲ್ಲ, ಸಿನೆಮಾದಲ್ಲಿ ಕೆಮ್ಮು ಅಂತೊಂದು ಸಂಶೋಧನಾಪ್ರಬಂಧ ಮಂಡಿಸಿ ಪಿಎಚ್ಡಿ ಗಳಿಸಬಹುದಾದಷ್ಟು ಪೂರಕ ಕೆಮ್ಮು ಪತ್ರಗಳಲ್ಲಿ ಪ್ರತಿಧ್ವನಿಸಿದೆ. ‘ಬಂಧನ’ ಚಿತ್ರದ ‘ಪ್ರೇಮದ ಕಾದಂಬರಿ ಬರೆದನು ಕಣ್ಣೀರಲಿ...’ ಹಾಡು, ರಸಪ್ರಶ್ನೆಯ ಸರಿಯುತ್ತರ. ತುಂಬ ಜನಪ್ರಿಯ ಚಿತ್ರಗೀತೆ. ವಿಷ್ಣುವರ್ಧನ್ ಕೆಮ್ಮುತ್ತ ಅಭಿನಯಿಸಿದ, ಎಸ್ಪಿಬಿ ಕೆಮ್ಮುತ್ತ ಹಾಡಿದ ಅದ್ಭುತಗೀತೆ. ಉತ್ತರಕ್ಕಾಗಿ ತಲೆಕೆರೆದುಕೊಳ್ಳುವ ಅಗತ್ಯವಿಲ್ಲದೆ ಹೆಚ್ಚಿನವರಿಗೆ ನೆನಪಿಗೆ ಬಂದಿದೆ. ಕೆಲವರು ಮಾತ್ರ ಬಂಧನ ಸಿನೆಮಾ ಹೆಸರು ನೆನಪಾದರೂ ‘ನೂರೊಂದು ನೆನಪು ಎದೆಯಾಳದಿಂದ...’ ಕೆಮ್ಮಿನಹಾಡು ಎಂದುಕೊಂಡು ಅದೇ ಉತ್ತರವೆಂದಿದ್ದಾರೆ. ಸರಿಯುತ್ತರ ಬರೆದು ತಿಳಿಸಿದವರಿಗೆಲ್ಲ ಅಭಿನಂದನೆಗಳು. ‘ಕೆಮ್ಮು ಇರುವ ಚಿತ್ರಗೀತೆಗಳಲ್ಲಿಯೇ ಈ ಹಾಡಿಗೆ ಅಗ್ರಸ್ಥಾನ ಸಲ್ಲಬೇಕು. ಇದರಲ್ಲಿ ಎಸ್ಪಿಬಿಯವರು ಕೆಮ್ಮನ್ನು ಎಷ್ಟು ಲಯಬದ್ಧವಾಗಿ ಉಪಯೋಗಿಸಿದ್ದಾರೆಂದರೆ ಹಾಡಿನ ಲಯಕ್ಕೆ ಸ್ವಲ್ಪವೂ ತೊಂದರೆ ಇಲ್ಲದಂತೆ, ನಿಜವಾಗಿ ಹಾಡಿನ ಮಧ್ಯದಲ್ಲಿ ಕೆಮ್ಮು ಬಂದಿರುವಂತೆ ಕೇಳಿಸುತ್ತದೆ. ಬಾಲು ಅವರೇ ಹೇಳುವಂತೆ ಇದನ್ನು ಹಾಡುವಾಗ ಅವರ ದೇಹದ ರಕ್ತವೆಲ್ಲ ಅವರ ಮಿದುಳಿಗೆ ಹರಿದಿತ್ತಂತೆ!’ ಎಂದು ಹಾಡಿನ ಕುರಿತು ವ್ಯಾಖ್ಯಾನಿಸಿದ ಓದುಗಮಿತ್ರ ಚಿತ್ತಾಪುರದ ವಿನಯಕುಮಾರ್ ಅವರಿಗೆ ವಿಶೇಷ ಧನ್ಯವಾದಗಳು. ಕೆಮ್ಮಿನ ಹಾಡು ಬೇರಾವುದಾದರೂ ನಿಮಗೆ ಗೊತ್ತಿದ್ದರೆ ತಿಳಿಸಿ ಎಂದಿದ್ದೆನಷ್ಟೆ? ಬಹುಮಂದಿ ಸೂಚಿಸಿರುವುದು ‘ಶ್ರುತಿ ಸೇರಿದಾಗ’ ಚಿತ್ರದ ‘ಬೊಂಬೆಯಾಟವಯ್ಯಾ ನೀ ಸೂತ್ರಧಾರಿ ನಾ ಪಾತ್ರಧಾರಿ...’ ಗೀತೆಯನ್ನು. ‘ಅಣ್ಣಾವ್ರ ಹಾಡು ಲೇಖನದಲ್ಲೇ ಇರುತ್ತೆ ಅಂದ್ಕೊಂಡಿದ್ದೆ. ಅದರಲ್ಲಿ ಫ್ರಂಟ್-ಎಂಡ್ ಹಾಸ್ಯನಟ ಉಮೇಶ್. ಬ್ಯಾಕ್-ಎಂಡ್ ಅಣ್ಣಾವ್ರು. ಹಾಡಿನ ನಡುವೆ ಅಣ್ಣಾವ್ರಿಗೆ ಕೆಮ್ಮು ಬರುತ್ತೆ. ಅಲ್ಲಿದ್ದವರು ಫ್ರಂಟ್-ಎಂಡ್ ಉಮೇಶ್ಗೆ ಕೆಮ್ಮುನಿವಾರಣೆಗೆ ನೆರವಾಗ್ತಾರೆ. ನಾಯಕಿ ಮಾಧವಿಗೆ ಗೊತ್ತಾಗಿ ಆಕೆಯೂ ಅಣ್ಣಾವ್ರ ಜೊತೆ ಹಾಡತೊಡಗುತ್ತಾರೆ (ಬ್ಯಾಕ್-ಎಂಡ್ನಲ್ಲಿ). ಪ್ರೇಕ್ಷಕರು ಉಮೇಶ್ ಅವರೇ ಹೆಣ್ಣುಧ್ವನಿಯಲ್ಲಿ ಹಾಡ್ತಿದ್ದಾರೆ ಅಂದ್ಕೊಳ್ತಾರೆ! ತುಂಬ ಹಾಸ್ಯಮಯ.’ ಎಂದು ಹಾಡಿನ ದೃಶ್ಯಾವಳಿಯನ್ನೂ ವಿವರಿಸಿದ್ದಾರೆ ಮಂಗಳೂರಿನ ಗಿರೀಶ್ ಐತಾಳ. ‘ಗಡಿಬಿಡಿ ಗಂಡ’ ಚಿತ್ರದಲ್ಲಿ ರವಿಚಂದ್ರನ್ ಜತೆ ಗಾಯನಸ್ಪರ್ಧೆಗಿಳಿವ ತಾಯ್ ನಾಗೇಶ್ ‘ನೀನು ನೀನೇ ಇಲ್ಲಿ ನಾನು ನಾನೇ’ ಹಾಡುವ ಮೊದಲು ಗಂಟಲು ಟೆಸ್ಟ್ ಮಾಡಿಕೊಳ್ಳುವ ಕೆಮ್ಮನ್ನು ಜ್ಞಾಪಿಸಿದ್ದಾರೆ ಮೈಸೂರಿನ ಮೋಹನ್ರಾಜ್. ‘ಗಾನಯೋಗಿ ಪಂಚಾಕ್ಷರಿ ಗವಾಯಿ’ ಚಿತ್ರದ ‘ಉಮಂಡ್ಘುಮಂಡ್ ಘನಗರಜೇ ಬದರಾ...’ ಹಾಡಿನ ಕೆಮ್ಮನ್ನೂ ಒಂದಿಬ್ಬರು ನೆನೆಸಿಕೊಂಡಿದ್ದಾರೆ. ಹಾಸ್ಯೋತ್ಸವದಲ್ಲಿ ಮಂಗಳಗೀತೆ ‘ಭಾಗ್ಯದ ಲಕ್ಷ್ಮೀ ಬಾರಮ್ಮ...’ ಹಾಡುವಾಗ ಕಿರ್ಲೋಸ್ಕರ್ ಶಾಸ್ತ್ರಿಗಳಿಗೆ ಕೆಮ್ಮು ಬಂದು ಆಮೇಲೆ ಹಾಡನ್ನು ರಫೀಕ್ ಮುಂದುವರಿಸುವ ಸೂಪರ್ಹಾಸ್ಯದ ಸನ್ನಿವೇಶವೂ ಕೆಲವರಿಗೆ ನೆನಪಾಗಿದೆ. ಅಂತೆಯೇ ಡುಂಡಿರಾಜರ ಕೆಮ್ಮುಕವನ ‘ಪೆಹಲೇ ಕವಿತಾ ಪಢ್ನೇ ದೋ ಹಮ್ಕೊ, ಆಮೇಲೆ ಬೇಕಿದ್ರೆ ನೀ ಕೆಮ್ಕೊ’ ಕೂಡ. ರಸಪ್ರಶ್ನೆಯ ಉತ್ತರದ ಹೊರತಾಗಿ ಅತಿಹೆಚ್ಚು ಪತ್ರಗಳಲ್ಲಿ ಉಲ್ಲೇಖಗೊಂಡದ್ದು ಲೇಖನದಲ್ಲಿ ಕಂಡುಬಂದಿದ್ದ ಒಂದು ತಪ್ಪು. ‘ಹಾಲುಜೇನು’ ಚಿತ್ರದಲ್ಲಿ ಡಾ.ರಾಜ್ ಅವರೊಡನೆ ನಾಯಕಿಯಾಗಿ ನಟಿಸಿದವರು ಸರಿತಾ ಎಂಬರ್ಥದಲ್ಲಿ ನಾನು ತಪ್ಪಾಗಿ ಬರೆದಿದ್ದೆ. ಸರಿತಾ ಅಲ್ಲ, ಮಾಧವಿ ಅಂತಾಗಬೇಕಿತ್ತು. ಲೇಖನ ಬರೆಯುವುದಕ್ಕೆ ಸ್ವಲ್ಪ ಮೊದಲಷ್ಟೇ ಯೂಟ್ಯೂಬ್ನಲ್ಲಿ ‘ಹಾಯಾಗಿ ಕುಳಿತಿರು ನೀನು ರಾಣಿಯ ಹಾಗೆ...’ ಹಾಡಿನ ವಿಡಿಯೋ ನೋಡಿ ಅದರಲ್ಲಿ ಕೆಮ್ಮು ಇರುವುದನ್ನು ಖಾತರಿಪಡಿಸಿಕೊಂಡಿದ್ದೆ. ರಾಜ್-ಮಾಧವಿ ಜೋಡಿಯನ್ನೂ ಗಮನಿಸಿದ್ದೆ. ಆದರೆ ಯಾವುದೋ ಗುಂಗಿನಲ್ಲಿ ಟೈಪಿಸುವಾಗ ಮಾಧವಿ ಬದಲು ಸರಿತಾ ಪ್ರತ್ಯಕ್ಷವಾದರು. ಸ್ವಾರಸ್ಯವೆಂದರೆ ಆ ಚಿತ್ರದಲ್ಲಿ ಮಾಧವಿಗೆ ಕಂಠದಾನ ಮಾಡಿದ್ದು ಸರಿತಾ! ಕೆಲವರು ಸೂಕ್ಷ್ಮಮತಿಗಳು ಇನ್ನೂ ಒಂದು ತಪ್ಪನ್ನು ಕಂಡುಹಿಡಿದಿದ್ದಾರೆ. ಬೆಂಗಳೂರಿನಿಂದ ಸುಮಾ ಅಮೃತೇಶ್ ಬರೆಯುತ್ತಾರೆ: ‘ನಿಮ್ಮ ರಸಪ್ರಶ್ನೆಯಲ್ಲಿ, ಹಾಡು ಮುಗಿದಾಗ ವಿಷ್ಣು ಕೊನೆಯುಸಿರೆಳೆಯುತ್ತಾರೆ ಎಂದಿದ್ದೀರಿ. ವಿಷ್ಣು ಸರ್ ಆ ಹಾಡಿನ ಕೊನೆಗೇ ಸಾಯುವುದಿಲ್ಲ. ಚಿತ್ರದ ಕೊನೆಯಲ್ಲಿ ಸುಹಾಸಿನಿಯ ಮಗುಗೆ ಜೀವ ಕೊಡು ಅಂತ ಬೆಳಕಲ್ಲಿ ದೇವ್ರನ್ನ ಕೇಳಿ ಜೀವಬಿಡ್ತಾರೆ. ಈಗಲೂ ಅದನ್ನು ನೆನೆಸಿಕೊಂಡರೆ ಕಣ್ಣೀರುಬರುತ್ತೆ.’ ಏನೇಇರಲಿ, ತಪ್ಪು ತಪ್ಪೇ. ನ್ಯೂನಾನಿಚಾತಿರಿಕ್ತಾಣಿ ಕ್ಷಮಸ್ವ ಪರಮೇಶ್ವರ ಎಂದು ಪೂಜೆಯ ಕೊನೆಯಲ್ಲಿ ಹೇಳುವಂತೆ ಅಂಕಣದಲ್ಲಿನ ನ್ಯೂನಗಳನ್ನೂ ಅತಿರಿಕ್ತಗಳನ್ನೂ (ಉದಾ: ವ್ಯಾಕರಣಬದ್ಧ ಗುಣಸಂಧಿಯ ಪದವಾಗದೆಯೂ ‘ಕೆಮ್ಮೋತ್ತರ’ ಎಂದು ಇವತ್ತಿನ ತಲೆಬರಹದಲ್ಲಿ ಬಳಸಿರುವಂಥದನ್ನು) ಓದುಗರು ದೊಡ್ಡಮನಸ್ಸಿನಿಂದ ಕ್ಷಮಿಸುವರೆಂಬ ನಂಬಿಕೆ. ಇನ್ನು, ಬ್ರೇಕಿಂಗ್ ನ್ಯೂಸ್ ಏನಿರಬಹುದಪ್ಪಾ ಅಂತ ಬಹುಶಃ ಉಸಿರು ಬಿಗಿಹಿಡಿದುಕೊಂಡಿದ್ರಿ. ಏನಿಲ್ಲ, ಇದು ಬ್ರೇಕಿಂಗ್ ನ್ಯೂಸ್ ಅಲ್ಲ, ‘ಬ್ರೇಕ್’ ನ್ಯೂಸ್. ಸರಿಸುಮಾರಾಗಿ ಹತ್ತು ವರ್ಷಗಳಿಂದ ವಾರವಾರವೂ ಅಂಕಣ ಬರೆಯುತ್ತ ಬಂದಿದ್ದೇನೆ. 2002ರಿಂದ 2007ರವರೆಗೆ ದಟ್ಸ್ಕನ್ನಡ ಡಾಟ್ಕಾಮ್ ಅಂತರಜಾಲ ಪತ್ರಿಕೆಯಲ್ಲಿ ಮಂಗಳವಾರದ ಅಂಕಣ ‘ವಿಚಿತ್ರಾನ್ನ’; ಅದಾದಮೇಲೆ ಕಳೆದೈದು ವರ್ಷಗಳಿಂದ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಭಾನುವಾರಗಳಂದು ಪರಾಗಸ್ಪರ್ಶ. ಒಟ್ಟುಸೇರಿ ಐನೂರಕ್ಕೂ ಹೆಚ್ಚು ಬರಹಗಳು. ಹೆಚ್ಚೂಕಡಿಮೆ ಅಷ್ಟೇ ಬಗೆಬಗೆಯ ವಿಷಯಗಳು. ಬಿಂದುಪೂರ್ವಕ ಡಕಾರದಿಂದ ಹಿಡಿದು ಹಿಲ್ಬರ್ಟ್ ಹೊಟೇಲ್ನ ಅನಂತದವರೆಗೆ ಅವುಗಳ ಹರವು. ಸಾಹಿತ್ಯಿಕವಾಗಿ ಅವೆಲ್ಲ ಶ್ರೇಷ್ಠವಾಗಿದ್ದವು ಎನ್ನಲಾರೆ, ಆದರೆ ಮಾಹಿತಿ-ಮನರಂಜನೆಗಳ ಆರೋಗ್ಯಕರ ಮಿಶ್ರಣದೊಂದಿಗೆ ಜೀವನಪ್ರೀತಿ ತುಂಬಿಸುವ ಯತ್ನವಂತೂ ಅವೆಲ್ಲದರಲ್ಲಿ ಖಂಡಿತ ಇತ್ತು. ಪತ್ರಿಕೆಯ ಸಂಚಿಕೆ ಪ್ರಕಟವಾಗದೆ (ಹಬ್ಬದ ಬಿಡುವಿನಿಂದಾಗಿ) ಆ ವಾರ ಅಂಕಣ ಇರುತ್ತಿರಲಿಲ್ಲವೇ ಹೊರತು ಬೇರೆ ಒಂದು ವಾರವೂ ತಪ್ಪಿಸಿದ್ದಿಲ್ಲ. ಹತ್ತು ವರ್ಷಗಳ ಸತತ ಬರವಣಿಗೆಯ ನಂತರ ಈಗೊಂದು ‘ಬ್ರೇಕ್’ (ವಿರಾಮ) ತೆಗೆದುಕೊಳ್ಳುವ ಕಾಲ. ಇವತ್ತಿನದು ಪರಾಗಸ್ಪರ್ಶ ಅಂಕಣದ ಕೊನೆಯ ಕಂತು. ಹಾಂ! ನನಗೆ ಹೊಸ ಚೈತನ್ಯ ತುಂಬಿಸಿಕೊಳ್ಳಲಿಕ್ಕಷ್ಟೇ ಅಲ್ಲ ಈ ಬ್ರೇಕ್. ಪತ್ರಿಕೆಯೂ ಹೊಸತನಕ್ಕೆ ತೆರೆದುಕೊಂಡು ವೈವಿಧ್ಯಮಯ ಸರಕನ್ನು ಓದುಗರಿಗೆ ಉಣಿಸುವುದು ಬೇಡವೇ? ಸಂಪಾದಕರ ಹೊಸಹೊಸ ಯೋಜನೆಗಳಿಗೆ ಅನುವು ಮಾಡಿಕೊಡುವುದು ಬೇಡವೇ? ಓದುಗರಾದ ನೀವಾದರೂ ಅದೇ ಅಂಕಣ, ಅದೇ ಲೇಖಕ ಎಷ್ಟು ದಿನ ಅಂತ ಸಹಿಸಿಕೊಳ್ತೀರಿ? ಬದಲಾವಣೆ ಆಗಾಗ ಆಗುತ್ತಿರಬೇಕು. ಈ ಎಲ್ಲ ಅಂಶಗಳನ್ನು ಮನಗಂಡು, ಪ್ರಧಾನ ಸಂಪಾದಕರೊಡನೆ ಸಮಾಲೋಚನೆ ನಡೆಸಿಯೇ ನಾನು ಈ ನಿರ್ಧಾರಕ್ಕೆ ಬಂದದ್ದು. ವಾರವಾರ ಕ್ಲಪ್ತವಾಗಿ ಬರೆಯುವ ನಿಯತ್ತನ್ನು ಬೇಡುವ ಅಂಕಣಗಾರಿಕೆಗೆ ವಿರಾಮ ಘೋಷಿಸಿದ್ದೇ ಹೊರತು ಬರವಣಿಗೆಯನ್ನೇ ಬಿಟ್ಟುಬಿಡುತ್ತೇನೆಂಬ ವೈರಾಗ್ಯವಲ್ಲ. ಇಷ್ಟು ದಿನವೂ ಅವಕಾಶ ಕೊಟ್ಟು ಪ್ರೋತ್ಸಾಹಿಸಿದ ವಿಜಯ ಕರ್ನಾಟಕ ಪತ್ರಿಕೆಯೊಂದಿಗೆ, ಪತ್ರಿಕೆಯ ಓದುಗರೊಂದಿಗೆ ಸ್ನೇಹಸಂಬಂಧ ಕಡಿದು ಹಾಕುತ್ತಿರುವುದಲ್ಲ. ಆ ದೃಷ್ಟಿಯಿಂದಲೂ ಇದು ‘ಬ್ರೇಕಿಂಗ್’ ಅಲ್ಲವೇಅಲ್ಲ, ಜಸ್ಟ್ ಒಂದು ‘ಬ್ರೇಕ್’ ಅಷ್ಟೇ. ಶ್ರೀವತ್ಸ ಜೋಶಿ ಬರೆಯುವ ವೈನೋದಿಕ/ವೈಚಾರಿಕ ಬರಹಗಳನ್ನು ಆಗೊಮ್ಮೆ ಈಗೊಮ್ಮೆ ಇದೇ ಪತ್ರಿಕೆಯ ಪುಟಗಳಲ್ಲಿ, ಪುರವಣಿಗಳಲ್ಲಿ ನೀವು ಖಂಡಿತ ನಿರೀಕ್ಷಿಸಬಹುದು. ಇಲ್ಲೊಂದು ಕಾಕತಾಳೀಯ. ರಸಪ್ರಶ್ನೆ ಉತ್ತರದ ರೂಪದಲ್ಲಿ ‘ಪ್ರೇಮದ ಕಾದಂಬರಿ ಬರೆದನು ಕಣ್ಣೀರಲಿ... ಕಥೆಯು ಮುಗಿದೇ ಹೋದರೂ ಮುಗಿಯದಿರಲಿ ಬಂಧನ...’ ಹಾಡು ಅಂಕಣದ ಕೊನೆಯ ಕಂತಿನಲ್ಲಿ. ಆದರೆ ಅದು ವಿಷಾದದ ಹಾಡು. ಪರಾಗಸ್ಪರ್ಶಕ್ಕೂ ವಿಷಾದಕ್ಕೂ ಗಾವುದ ದೂರ. ಇಲ್ಲೇನಿದ್ದರೂ fun (ವಿನೋದ) ಮತ್ತು pun (ಪದವಿನೋದ)ಗಳ ದರ್ಬಾರು. ಅವತ್ತು ಅಂಕಣವನ್ನು ಆರಂಭಿಸುವಾಗ ಸಂಪಾದಕರು ಹೇಳಿದ್ದಾದರೂ ಅದನ್ನೇ- ಫನ್ ಮತ್ತು ಪನ್ ಇರುವ ಅಂಕಣ ಬರೀರಿ ಅಂತ. ನಾನು ಸಂತೋಷದಿಂದ ವಾರವಾರವೂ ಬರೆದದ್ದಾದರೂ ಅದನ್ನೇ- ಒಂದಿಲ್ಲೊಂದು ಫನ್ ಅಥವಾ ಪನ್. ನಿಜ, ಇನ್ನೂ ಅರ್ಥಪೂರ್ಣವಾಗಿ, ಉತ್ತಮವಾಗಿ, ಉಪಯುಕ್ತವಾಗಿ ಬರೆಯಬಹುದಿತ್ತು. ಆದರೂ ಮೆಚ್ಚಿಕೊಂಡಿದ್ದೀರಿ, ಬೆನ್ನುತಟ್ಟಿದ್ದೀರಿ. ಇದೀಗ ಅಂಕಣ ಮುಗಿದರೂ ಈ ಮಧುರಬಾಂಧವ್ಯ ಚಿರಕಾಲ ಮುಂದುವರಿಯಲಿ ಎಂಬ ಆಶಯ. ಅಂಥದೊಂದು ಒಳ್ಳೆಯ ಹಾರೈಕೆಯೊಂದಿಗೆ ವಿಷಾದಗೀತೆಯನ್ನು ಹೀಗೆ ವಿನೋದಗೀತೆಯಾಗಿಸೋಣ: ‘ಫನ್ಇನ ಕಾಲಂ ಬರಿ... ಬರೆದೆನು ಪನ್ನೀರಲಿ... ಕಾಲಂ ಮುಗಿದೇ ಹೋದರೂ... ಮುಗಿಯದಿರಲಿ ಬಂಧನ.’ ಇದರಲ್ಲಿ ಕೆಮ್ಮಿಲ್ಲ, ಕೆಮ್ಮಂಗಿಲ್ಲ! ಶುಭಂ. ನಮಸ್ಕಾರ. * * * [ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] "Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!Saturday May 19, 2012
Cough in Filmsongs
Saturday May 19, 2012
Saturday May 19, 2012
ದಿನಾಂಕ 20 ಮೇ 2012ರ ಸಂಚಿಕೆ...
ಚಿತ್ರಗೀತೆಗಳಲ್ಲಿ ವಿಚಿತ್ರ ಕೆಮ್ಮು
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] * * * ಅಂಕಣಬರಹಕ್ಕೆ ನಿಮಗೆ ವಿಷಯ ಹೇಗೆ ಹೊಳೆಯುತ್ತದೆ? ಪೂರಕ ಮಾಹಿತಿಯನ್ನು ಎಲ್ಲಿಂದ ಸಂಗ್ರಹಿಸುತ್ತೀರಿ? ಮೊದಲಿಂದ ಕೊನೆವರೆಗೂ ಓದಿಸಿಕೊಳ್ಳುವಂತೆ ವಿಷಯಗಳನ್ನು ಹೇಗೆ ಪೋಣಿಸುತ್ತೀರಿ? ಇದಕ್ಕೆಲ್ಲ ಸಮಯ ಹೇಗೆ ಹೊಂದಿಸಿಕೊಳ್ಳುತ್ತೀರಿ? ನಮಗೂ ಸ್ವಲ್ಪ ಹೇಳಿಕೊಡ್ತೀರಾ? - ಪರಾಗಸ್ಪರ್ಶ ಓದುಗಮಿತ್ರರಲ್ಲಿ ಹಲವರು ಈ ಪ್ರಶ್ನೆಗಳನ್ನು ನನಗೆ ಈಗಾಗಲೇ ಕೇಳಿದ್ದಿದೆ. ಅವರಿಗೆಲ್ಲ ನಾನು ಪ್ರಾಮಾಣಿಕವಾಗಿ ಉತ್ತರಿಸಿದ್ದೂ ಇದೆ. ಪರಿಚಯವಾಗಿ ಮುಖತಾ ಭೇಟಿಯಾದಾಗ, ಅಥವಾ ಮಿಂಚಂಚೆಯಲ್ಲಿ ಈ ಪ್ರಶ್ನೋತ್ತರ ನಡೆಯುತ್ತಲೇ ಇರುತ್ತದೆ. ಇನ್ನೂ ಭೇಟಿಯಾಗದ ಮತ್ತು ಇದುವರೆಗೂ ಪತ್ರ ಬರೆಯದ ಅನೇಕರ ಮನಸ್ಸಿನಲ್ಲಿಯೂ ಬಹುಶಃ ಇದೇ/ಇಂಥದೇ ಪ್ರಶ್ನೆಗಳಿವೆ ಎಂದು ನನ್ನೆಣಿಕೆ. ಇವತ್ತು ನನಗೊಂದು ಐಡಿಯಾ ಬಂದಿದೆ, ಏನ್ಗೊತ್ತಾ? ಈ ಪ್ರಶ್ನೆಗಳಿಗೆ ಉತ್ತರರೂಪದಲ್ಲಿ ಇಂದಿನ ಅಂಕಣವನ್ನು ಪ್ರಸ್ತುತಪಡಿಸುವುದು! ಆದರೆ ಇದು ಶುಷ್ಕ ವಿವರಣೆಯ ಥಿಯರಿ ಅಲ್ಲ, ಪ್ರಾಕ್ಟಿಕಲ್ ಎಕ್ಸಾಂಪಲ್. ‘ಫ್ರೀಕ್ವೆಂಟ್ಲಿ ಆಸ್ಕ್ಡ್ ಕ್ವೆಶ್ಚನ್’ಗಳಿಗೆ ಉತ್ತರಗಳ ಜತೆಯಲ್ಲೇ ಈ ವಾರದ ಅಂಕಣವೂ ತಯಾರು. ಪ್ರಶ್ನೆಗಳಿಗೆ ಅಂಕಣವೇ ಉತ್ತರವೂ, ಉದಾಹರಣೆಯೂ. ಟೂ-ಇನ್-ವನ್. ಓದಿ ನೋಡಿ. ಇಷ್ಟವಾದರೆ ವಾಟೆನ್ ಐಡಿಯಾ ಸರ್ಜೀ! ‘ಡಬ್ಬದಿಂದ ಆಚೆಗೂ ಯೋಚಿಸು’ ಎಂಬ ಪದಪುಂಜವನ್ನು ಹಿಂದೊಮ್ಮೆ ಬಳಸಿದ್ದೆ, ನೀವು ಗಮನಿಸಿರಬಹುದು. ಅದು think outside the box ಎನ್ನುವುದಕ್ಕೆ ನನ್ನ ಕನ್ನಡ ತರ್ಜುಮೆ. ನಮ್ಮ ಆಲೋಚನೆಗಳು ಸೀಮಿತ ಚೌಕಟ್ಟಿನೊಳಕ್ಕೇ ಸುತ್ತುತ್ತಿರಬಾರದು, ಅದರಾಚೆಗೂ ವಿಸ್ತರಿಸಿಕೊಳ್ಳಬೇಕು, ಹೊಸ ಸಾಧ್ಯಾಸಾಧ್ಯತೆಗಳನ್ನು ಕಂಡುಕೊಳ್ಳಬೇಕು ಎಂಬ ಒಳ್ಳೆಯ ಅರ್ಥ-ಆಶಯ ಈ ನುಡಿಗಟ್ಟಿಗಿದೆ. ನಿಜಕ್ಕಾದರೆ ಇದನ್ನು ಬಳಸುವುದು ದೈನಂದಿನ ಬದುಕಿನಲ್ಲಿ ಸವಾಲುಗಳನ್ನು ಎದುರಿಸಬೇಕಾದ ಸಂದರ್ಭದಲ್ಲಿ. ಸಮಸ್ಯೆ ಪರಿಹಾರಕ್ಕೆ ಸುಲಭೋಪಾಯಗಳ ಹುಡುಕಾಟದಲ್ಲಿ. ಆದರೆ ನಾನು ಅಂಕಣಕ್ಕೆ ವಿಷಯ ಆರಿಸುವಾಗಲೂ ಡಬ್ಬದಿಂದ ಆಚೆಗೆ ಯೋಚಿಸುವುದುಂಟು. ವಿಷಯ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವಂಥದ್ದೇ ಇದ್ದರೂ ಅದರಲ್ಲಿ ವೈಶಿಷ್ಟ್ಯದ ಏನೋ ಒಂದು ಹೊಳಹನ್ನು ಹುಡುಕುವುದುಂಟು. ಅದು ಅಂಕಣದ ತಲೆಬರಹದಲ್ಲೇ ವ್ಯಕ್ತವಾದರೆ ಮತ್ತೂ ಒಳ್ಳೆಯದು. ಇವತ್ತಿನ ತಲೆಬರಹವನ್ನೇ ತೆಗೆದುಕೊಳ್ಳಿ. ಚಿತ್ರಗೀತೆಗಳೆಂದರೆ ಎಲ್ಲರಿಗೂ ಗೊತ್ತಿರುವ, ಎಲ್ಲರಿಗೂ ಇಷ್ಟವಾಗುವ ವಿಷಯ. ಆದರೆ ಚಿತ್ರಗೀತೆಗಳಲ್ಲಿ ಕೆಮ್ಮು? ಅದೂ ವಿಚಿತ್ರ ಕೆಮ್ಮು? ಇದೆಂಥದಪ್ಪಾ ಹೊಸ ವಿಚಾರ ಎಂದು ಓದುಗರಿಗೆ ಅಚ್ಚರಿ. ಇಡೀ ಲೇಖನವನ್ನು ಓದುವಂತೆ ತಲೆಬರಹದಿಂದಲೇ ಪ್ರೇರಣೆ. ವಿಷಯ ನಿಗದಿಪಡಿಸಿದ ಮೇಲೆ ಮತ್ತು ತಲೆಬರಹವನ್ನೂ ನಿರ್ಧರಿಸಿದ ಮೇಲೆ (ಕೆಲವೊಮ್ಮೆ ಲೇಖನ ಬರೆದಾದಮೇಲೆ ತಲೆಬರಹ ಕೊಡುವುದೂ ಇದೆ), ಲೇಖನದ ಆರಂಭ ಹೇಗಿರಬೇಕೆಂದು ಯೋಚಿಸುತ್ತೇನೆ. ಅಲ್ಲೂ ಅಷ್ಟೇ, ಸಾಂಪ್ರದಾಯಿಕ ಶೈಲಿಯಲ್ಲಿ ಸವಕಲು ಪದಗಳನ್ನು ಬಳಸಿ ಬರೆದರೆ ಚೆನ್ನಾಗಿರುವುದಿಲ್ಲ. ಒಳ್ಳೆಯ ಇಂಟ್ರೊ (ಪೀಠಿಕೆ) ಪರಿಣಾಮಕಾರಿಯಾಗಿ ಇರುವಂತೆ ಹೇಗೆ ಬರೆಯಬಹುದೆಂದು ಒಂದೆರಡು ನಮೂನೆಗಳನ್ನು ತೂಗಿನೋಡುತ್ತೇನೆ. ‘ಚಿತ್ರಗೀತೆಗಳಲ್ಲಿ ಕೆಮ್ಮು’ ಎಂಬ ವಿಷಯವಿದ್ದ ಮಾತ್ರಕ್ಕೇ ಯಾವುದಾದರೂ ಚಿತ್ರಗೀತೆಯ ಸಾಲಿನಿಂದಲೋ, ಉಹ್ಹು ಉಹ್ಹು... ಎಂದು ಕೆಮ್ಮುತ್ತಲೋ ಆರಂಭಿಸಬೇಕೆಂದೇನಿಲ್ಲ. ಚಿತ್ರಗೀತೆಗಳನ್ನು (ಕನ್ನಡ ಅಥವಾ ಯಾವುದೇ ಭಾಷೆಯದಿರಲಿ) ಬರಿ ಹಾಡು ಎಂದುಕೊಳ್ಳದೆ ವಿಶೇಷ ಗಮನವಿಟ್ಟು ಕೇಳಿದರೆ ಅವುಗಳದ್ದೇ ವೈವಿಧ್ಯಮಯ ಲೋಕವೊಂದು ತೆರೆದುಕೊಳ್ಳುತ್ತದೆ. ಉದಾಹರಣೆಗೆ ನಡುವೆ ಸಂಭಾಷಣೆ ಸಾಲುಗಳು ಬರುವ ಚಿತ್ರಗೀತೆಗಳಿವೆ; ಗುರು ಹೇಳಿಕೊಟ್ಟದ್ದನ್ನು ಶಿಷ್ಯ/ಶಿಷ್ಯೆ ಪುನರುಚ್ಚರಿಸುವ ರೀತಿಯ ಚಿತ್ರಗೀತೆಗಳಿವೆ; ತಪ್ಪುತಪ್ಪಾಗಿ ಹೇಳಿದರೆ ಪ್ರೀತಿಯಿಂದ ತಿದ್ದುವ (‘ರಾಂಗೇನ ಹಾಲ್ಲಿಯಾಗೆ’ ಎಂದು ವಾಣಿಜಯರಾಂ ಹಾಡಿದಾಗ ‘ಹಾಲ್ಲಿಯಲ್ಲಮ್ಮ ಹಳ್ಳಿ ಹಳ್ಳಿ...’ ಎಂದು ಕಸ್ತೂರಿಶಂಕರ್ ತಿದ್ದಿಹೇಳುವ ‘ಬಿಳಿಹೆಂಡ್ತಿ’ ಚಿತ್ರದ ಗೀತೆ, ‘ಸಾವನ್ಕಾ ಮಹಿನಾ ಪವನ್ ಕರೇ ಶೋರ್...’ ಎಂದು ಲತಾ ಹಾಡಿದಾಗ ‘ಅರೇಬಾಬಾ ಶೋರ್ ನಹೀಂ ಸೋರ್ ಸೋರ್...’ ಎಂದು ಮುಕೇಶ್ ಅದನ್ನು ತಿದ್ದುವ ಹಾಡು), ಅಥವಾ ಸಿಟ್ಟಿನಿಂದ ಗದರಿಸುವ (‘ಶಂಕರಾಭರಣಂ’ ಚಿತ್ರದಲ್ಲಿ ‘ಗಪದಪದಪ ಗಪದಪದಪ’ ಎಂಬ ಸ್ವರಪಾಠವನ್ನು ವಿದ್ಯಾರ್ಥಿಯು ‘ಗಗಪದಪದ ಗಗಪದಪದ’ ಎಂದಾಗ ಶಂಕರಶಾಸ್ತ್ರಿಗಳು ‘ಊಂ’ ಎಂದು ಸಿಟ್ಟಾಗುವ) ಗೀತೆಗಳಿವೆ. ಹೀಗೆ ಪೀಠಿಕೆಯಲ್ಲಿ ಕೆಮ್ಮಿನ ಬಗ್ಗೆ ಏನೂ ಹೇಳದೆ, ಒಟ್ಟಾರೆಯಾಗಿ ಚಿತ್ರಗೀತೆಗಳಲ್ಲಿ ಯಾವ ರೀತಿ ವಿಶೇಷಗಳನ್ನು ಗುರುತಿಸಬಹುದೆಂದು ಸೋದಾಹರಣವಾಗಿ ವಿವರಿಸುತ್ತೇನೆ. ಅಲ್ಲಿಗೆ ಲೇಖನದ ವಿಷಯಗ್ರಹಿಕೆಗೆ ಓದುಗರ ಮನಸ್ಸನ್ನು ಅಣಿಗೊಳಿಸಿದಂತೆ. ಇನ್ನು, ಚಿತ್ರಗೀತೆಗಳಲ್ಲಿ ಕೆಮ್ಮು ಎಂದು ಶೀರ್ಷಿಕೆ ಕೊಟ್ಟ ಮೇಲೆ ಕೆಮ್ಮಿರುವ ಕೆಲವಾದರೂ ಚಿತ್ರಗೀತೆಗಳನ್ನು ಉಲ್ಲೇಖಿಸಬೇಕಲ್ಲ? ಅವೇನು ಸುಲಭವಾಗಿ ಸಿಗುತ್ತವೆಯೇ? ಹುಡುಕಬೇಕು, ನೆನಪಿಸಿಕೊಳ್ಳಬೇಕು. ಒಂದು ಸಂಗತಿಯನ್ನು ನೀವೂ ಗಮನಿಸಿರುತ್ತೀರಿ ಎಂದುಕೊಳ್ಳುತ್ತೇನೆ- ಚಿತ್ರಗೀತೆ ಬಿಡಿ, ಸಾಮಾನ್ಯವಾಗಿ ಸಿನೆಮಾಗಳಲ್ಲಿ ನಟನಟಿಯರಿಗೆ ಕೆಮ್ಮು ಸೀನು ಬಿಕ್ಕಳಿಕೆಗಳೆಲ್ಲ ಬರೋದೇ ಇಲ್ಲ! ಯಾವುದಾದರೂ ಪಾತ್ರ ಕೆಮ್ಮುತ್ತದೆಯೆಂದರೆ ಅದು ಮಾರಣಾಂತಿಕ ಸನ್ನಿವೇಶವೆಂದೇ ಅರ್ಥ. ಚಿತ್ರಗೀತೆಯಲ್ಲಿ ಕೆಮ್ಮು ಕೇಳಿಬರುವುದಂತೂ ದೂರದ ಮಾತು. ನಿರಾಶೆಗೊಂಡು ಲೇಖನಕ್ಕೆ ಆ ವಿಷಯವೇ ಬೇಡವೆಂದು ಬಿಟ್ಟುಬಿಡುವುದೇ? ಖಂಡಿತ ಇಲ್ಲ! ಕೆಮ್ಮಿನ ಚಿತ್ರಗೀತೆಗಳಿಲ್ಲ ಎಂದವರಾರು? ಶಂಕರಾಭರಣಂ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯದ ‘ದೊರಕುನಾ ಇಟುವಂಟಿ ಸೇವಾ...’ ಕೇಳಿದ್ದೀರಾ? ಅದರಲ್ಲಿ ಶಂಕರಶಾಸ್ತ್ರಿಗಳಿಗೆ ವಿಪರೀತ ಕೆಮ್ಮು ಬರಲಾರಂಭಿಸುತ್ತದೆ. ಮೊದಲ ಚರಣದಲ್ಲಿ ‘ನಾದಾತ್ಮ ಕುಡವೈ ನಾಲೋನ ಚೆಲಗಿ...’ ಸಾಲು ಮುಗಿದಾಕ್ಷಣ ಸಂಗೀತನಿರ್ದೇಶಕ ಕೆ.ವಿ.ಮಹಾದೇವನ್ ಒಂದು ಸಿಗ್ನಲ್ ನೋಟ್ ‘ಟೆಡೇಂ...’ ಎಂದು ಕೇಳುವಂತೆ ಮಾಡುತ್ತಾರೆ. ಅದು ಹಿನ್ನೆಲೆ ಕೆಮ್ಮು ಕಲಾವಿದನಿಗೆ ಸೂಚನೆ. ಅಲ್ಲಿಂದ ಏಕ್ದಂ ಕೆಮ್ಮು. ಹಾಡನ್ನು ಶಂಕರಶಾಸ್ತ್ರಿಗಳ ಶಿಷ್ಯ ಮುಂದುವರಿಸುತ್ತಾನೆ. ಹಾಡು ಮುಗಿದಾಗ ಶಾಸ್ತ್ರಿಗಳ (ಸೋಮಯಾಜುಲು) ಬದುಕಿನ ಹಾಡೂ ಮುಗಿಯುತ್ತದೆ. ಜತೆಯಲ್ಲೇ ಶಾರದೆ(ಮಂಜುಭಾರ್ಗವಿ)ಯದೂ. ‘ದೊರಕುನಾ ಇಟುವಂಟಿ ಸೇವಾ...’ ತೆಲುಗಿನಲ್ಲಿ ಎಸ್ಪಿಬಿ ಹಾಡಿದ್ದು ಮತ್ತು ಜತೆಗಿನ ಕೆಮ್ಮು ಅದೆಷ್ಟು ಪರ್ಫೆಕ್ಟಾಗಿ ಬಂದಿತ್ತೆಂದರೆ, ಶಂಕರಾಭರಣಂ ಚಿತ್ರ ಮಲಯಾಳಮ್ಗೆ ಡಬ್ ಆದಾಗ ಹಾಡಿನ ತೆಲುಗು ಆವೃತ್ತಿಯನ್ನೇ ಉಳಿಸಿಕೊಂಡಿದ್ದರಂತೆ. ಶಂಕರಾಭರಣಂ ಹಾಡು ಕೆಮ್ಮಿನ ಚಿತ್ರಗೀತೆಗೆ ಉದಾಹರಣೆಯೇನೋ ಆಯ್ತು, ಆದರೆ ಕನ್ನಡ ಲೇಖನದಲ್ಲಿ ಕನ್ನಡ ಚಿತ್ರಗೀತೆಗಳದೇ ಉದಾಹರಣೆಗಳಿದ್ದರೆ ಒಳ್ಳೆಯದಲ್ಲವೇ? ಖಂಡಿತ. ‘ಸೀತಾ’ ಚಿತ್ರದ ಶುಭಾಶಯ ಹಾಡು! ‘ಮದುವೆಯ ಈ ಬಂಧ ಅನುರಾಗದ ಅನುಬಂಧ...’ ಅದರ ರೇಡಿಯೊ ಆವೃತ್ತಿಯಲ್ಲಿ ಕೇಳಿಬರೋದು ಎರಡೇ ಚರಣಗಳು. ಸಿನೆಮಾ ಆವೃತ್ತಿಯಲ್ಲಿ ಮೂರನೇ ಚರಣವೂ ಇದೆ. ಮೂರನೇ ಚರಣಕ್ಕೆ ಮೊದಲು ಕೆಮ್ಮಿನಿಂದಾಗಿ ಹಾಡು ಒಮ್ಮೆ ನಿಂತು ಮತ್ತೆ ಶುರುವಾಗುತ್ತದೆ. ‘ಹಾಲು ಜೇನು’ ಚಿತ್ರದಲ್ಲಿ ಅಣ್ಣಾವ್ರು ಹಾಡಿರುವ ‘ಹಾಯಾಗಿ ಕುಳಿತಿರು ನೀನು ರಾಣಿಯ ಹಾಗೆ...’ ಇದೆಯಲ್ಲ, ಅದರಲ್ಲಿ ಸರಿತಾ ‘ಏನ್ರೀಇದು ಗಂಡ್ಸಾಗ್ಹುಟ್ಟಿ ನೀವು ಅಡುಗೆ ಮಾಡೋದಾ?’ ಎಂದು ಕೇಳ್ತಾರೆ. ಡಾ.ರಾಜ್ ‘ಉಹ್ಹು ಉಹ್ಹು’ ಎಂದು ಹುಸಿಯಾಗಿ ಕೆಮ್ಮಿದಂತೆ ನಟಿಸಿ ‘ಭೀಮಸೇನ ನಳಮಹಾರಾಜರು ಗಂಡಸರಲ್ಲವೇ...’ ಎಂದು ಹಾಡು ಮುಂದುವರಿಸುತ್ತಾರೆ. ಕ್ಯಾನ್ಸರ್ನಿಂದ ಬಳಲುವ ಸರಿತಾ ಹಾಡಿನ ಕೊನೆಗೆ ನಿಜವಾಗಿಯೂ ಕೆಮ್ಮುತ್ತಾರೆ, ರಾಜ್ ಆಕೆಯನ್ನು ಹೂವಿನಂತೆ ಆರೈಕೆ ಮಾಡುತ್ತಾರೆ. ಮತ್ತೊಂದು ಹಾಡು ‘ಪರಮೇಶಿ ಪ್ರೇಮಪ್ರಸಂಗ’ ಚಿತ್ರದ್ದು- ‘ಉಪ್ಪಿಲ್ಲ ಮೆಣಸಿಲ್ಲ ತರಕಾರಿ ಏನಿಲ್ಲ...’ ಭಲೇ ತಮಾಷೆಯದು. ಅದರಲ್ಲಿ ವಿಚಿತ್ರವೆಂದರೆ ಒಗ್ಗರಣೆಯ ಹೊಗೆಗೆ ಮುಖವೊಡ್ಡಿದರೂ ರಮೇಶ್ಭಟ್ ಸ್ವಲ್ಪವೂ ಕೆಮ್ಮುವುದಿಲ್ಲ! ಕೆಮ್ಮು ಇರುವ ಇನ್ನೂ ಒಂದು ಸೂಪರ್ಹಿಟ್ ಕನ್ನಡ ಚಿತ್ರಗೀತೆ ನನಗೆ ನೆನಪಾಗುತ್ತದೆ. ಅದನ್ನು ನಾನು ಲೇಖನದಲ್ಲಿ ಬಳಸದೆ ಓದುಗರಿಗೆ ರಸಪ್ರಶ್ನೆಯಾಗಿ ಕೊಡುತ್ತೇನೆ. ಲೇಖನವು ಓದುಗರ ಮನಸ್ಸಿನಲ್ಲಿ ಹೆಚ್ಚು ಹೊತ್ತು ಗುಂಯ್ಗುಡುವಂತೆ ಮಾಡುವ ಉದ್ದೇಶ. ಆದರೆ ಲೇಖನಕ್ಕೊಂದು ತಾರ್ಕಿಕ ಅಂತ್ಯವೂ ಬೇಕಲ್ವಾ, ಅದಕ್ಕೋಸ್ಕರ ಒಂದು ತಮಾಷೆ ಪ್ಯಾರಗ್ರಾಫ್ ಹೆಣೆಯುತ್ತೇನೆ- “ಕೊನೆ ಕೆಮ್ಮು: ಸಾಮಾನ್ಯವಾಗಿ ಆಕಳಿಕೆ ಬಗ್ಗೆ ಓದುವಾಗ, ಆಕಳಿಸುತ್ತಿರುವವರನ್ನು ನೋಡಿದಾಗ, ನಮಗೂ ಆಕಳಿಕೆ ಬರುತ್ತದೆ. ಕೆಮ್ಮಿನ ವಿಚಾರ ಹಾಗಲ್ಲ. ಇದೀಗ ಇಷ್ಟೆಲ್ಲ ಕೆಮ್ಮೋಪಾಖ್ಯಾನವನ್ನು ಓದಿದರೂ ನಿಮಗೆ ಒಂಚೂರೂ ಕೆಮ್ಮು ಬಂದಿಲ್ಲವೆಂದೇ ನನ್ನ ಭಾವನೆ. ಹಾಗೂ ಒಂದುವೇಳೆ ಬಂದರೆ ‘ಕೆಮ್ಮಾರೊ ಕೆಮ್ಮ್... ಮಿಟ್ಜಾಯೇ ಕೆಮ್ಮ್...’ ಎಂದು ಹಾಡಿಕೊಂಡರಾಯ್ತು. ಅಷ್ಟೇ.” ಪರಾಗಸ್ಪರ್ಶ ಅಂಕಣಬರಹ ರೂಪುಗೊಳ್ಳುವುದು ಹೇಗೆಂದು ನಿಮಗೀಗ ಅಂದಾಜಾಯ್ತಲ್ಲ? ಹಾಂ, ರಸಪ್ರಶ್ನೆ ಉಳಿದೇಬಿಟ್ಟಿತು! ವಿಷ್ಣುವರ್ಧನ್ ಅಭಿನಯದ ಅತ್ಯಂತ ಹೃದಯಸ್ಪರ್ಶಿ ಚಿತ್ರ, ಕೆಮ್ಮುತ್ತ ಕೆಮ್ಮುತ್ತ ರಕ್ತ ಕಾರಿಕೊಂಡು ಹಾಡು ಮುಗಿದಾಗ ವಿಷ್ಣು ಕೊನೆಯುಸಿರೆಳೆಯುತ್ತಾರೆ. ಯಾವ ಚಿತ್ರ? ಯಾವ ಹಾಡು? ಉತ್ತರ ಗೊತ್ತಾದರೆ ಬರೆದು ತಿಳಿಸಿ. ಹಾಗೆಯೇ, ಕೆಮ್ಮಿನ ಹಾಡು ಬೇರಾವುದಾದರೂ ನಿಮಗೆ ಗೊತ್ತಿದ್ದರೆ ಅದನ್ನೂ ಬರೆಯಿರಿ! * * * [ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] "Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!Saturday May 12, 2012
Mothers Day 2012
Saturday May 12, 2012
Saturday May 12, 2012
ದಿನಾಂಕ 13 ಮೇ 2012ರ ಸಂಚಿಕೆ...
ಇವಳು ಸು‘ಸಂಸ್ಕೃತ’ ಅಮ್ಮ
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] * * * ಮದರ್ಸ್ ಡೇ ಆಚರಣೆ ನಮಗೆ ಪಾಶ್ಚಾತ್ಯ ಸಂಸ್ಕೃತಿಯಿಂದ ಬಂದದ್ದು. ಆದರೇನಂತೆ, ಒಳ್ಳೆಯ ವಿಚಾರಗಳು ಎಲ್ಲೆಡೆಯಿಂದಲೂ ಹರಿದು ಬರಬೇಕು. ‘ಆನೋ ಭದ್ರಾ ಕೃತವೋ ಯಂತು ವಿಶ್ವತಃ’ ಎನ್ನುವವರು ನಾವು. ಗಾಂಧೀಜಿಯವರೂ ಅದನ್ನೇ ಹೇಳಿದ್ದರು- ಬೇರೆ ದೇಶಗಳ ಸಂಸ್ಕೃತಿಯ ತಂಗಾಳಿ ಹಿತವಾಗಿ ಸುಳಿದಾಡಲು ಅನುಕೂಲವಾಗುವಂತೆ ನಮ್ಮನೆಯ ಕಿಟಕಿಗಳು ತೆರೆದಿರಲಿ. ಆದರೆ ಯಾವಕಾಲಕ್ಕೂ ಅದು ಚಂಡಮಾರುತವಾಗಿ ನಮ್ಮ ಮನೆಯನ್ನೇ ಸರ್ವನಾಶ ಮಾಡದಿರಲಿ. ಮುಖ್ಯವಾಗಿ ನಮ್ಮತನದ ಅರಿವು ನಮ್ಮೆಲ್ಲರಲ್ಲೂ ಸದಾಕಾಲ ಜಾಗ್ರತವಾಗಿ ಇರಲಿ. ಇವತ್ತು ಅಮ್ಮಂದಿರ ದಿನದ ಸಂದರ್ಭದಲ್ಲೂ ನಮ್ಮ ನಿಲುವು ಅದೇ ಆಗಿರಬೇಕಲ್ಲವೇ? ವರ್ಷಕ್ಕೊಂದು ದಿನ ಮಾತ್ರ ಅಮ್ಮನ ನೆನಪಾಗುವುದೇ ಎಂದು ಮೂಗುಮುರಿಯುವುದು ಬೇಡ. ಇವತ್ತಿನ ದಿನ ಅಮ್ಮಂದಿರನ್ನು ವಿಶೇಷವಾಗಿಯೇ ಗೌರವಿಸೋಣ; ಅದೇವೇಳೆ ನಮ್ಮ ಭಾರತೀಯ ಸಂಸ್ಕೃತಿಯು ಹೇಗೆ ಅಮ್ಮನಿಗೆ ಅನುದಿನವೂ ಅತ್ಯುಚ್ಚ ಸ್ಥಾನವನ್ನು ನೀಡಿದೆ ಎನ್ನುವುದನ್ನು ಮನನ ಮಾಡಿಕೊಳ್ಳೋಣ. ‘ಮಾತೃ ದೇವೋಭವ’ - ತೈತ್ತಿರೀಯ ಉಪನಿಷತ್ನಲ್ಲಿ ಬರುವ ಈ ವಾಕ್ಯವೊಂದೇ ಸಾಕು ತಾಯಿಯು ದೇವರಿಗೆ ಸಮಾನವೆಂಬ ಸಾರ್ವಕಾಲಿಕ ಸತ್ಯವನ್ನು ಭಾರತೀಯ ಸಂಸ್ಕೃತಿಯು ಜಗತ್ತಿಗೆಲ್ಲ ಸಾರಿರುವುದನ್ನು ತಿಳಿಯಲು. ತಂದೆಯ ಸ್ಥಾನ, ಗುರುವಿನ ಸ್ಥಾನ ಆನಂತರದ್ದು. ಪಿತೃ ದೇವೋಭವ, ಆಚಾರ್ಯ ದೇವೋಭವ, ಅತಿಥಿ ದೇವೋಭವ ಇವೆಲ್ಲ ಆಮೇಲೆ ಬರುವಂಥವು. ‘ನಾನ್ನೋದಕಸಮಂ ದಾನಂ ನ ತಿಥಿರ್ದ್ವಾದಶೀಸಮಾ| ನ ಗಾಯತ್ರ್ಯಾಸಮೋ ಮಂತ್ರೋ ನ ಮಾತುಃ ಪರದೈವತಮ್||’ ಎನ್ನುತ್ತದೆ ಇನ್ನೊಂದು ಸೂಕ್ತಿ. ಅನ್ನದಾನಕ್ಕೆ ಸಮಾನವಾದ ದಾನವಿಲ್ಲ, ಅದರಿಂದ ಸಿಗುವ ತೃಪ್ತಿ ಬೇರಾವ ದಾನದಿಂದಲೂ ಸಿಗದು. ದ್ವಾದಶಿಗೆ ಸಮಾನವಾದ ತಿಥಿಯಿಲ್ಲ, ವಿಷ್ಣುವಿನ ಪೂಜೆಗೆ ಅದು ಶ್ರೇಷ್ಠವಾದುದು. ಗಾಯತ್ರಿಗೆ ಸಮನಾದ ಮಂತ್ರವಿಲ್ಲ, ಅದು ಸುಲಭವೂ ಪಾಪನಾಶಕವೂ ಆಗಿರುವುದು. ತಾಯಿಗಿಂತ ದೊಡ್ಡ ದೇವರಿಲ್ಲ. ಇದ್ದಾನೆಯೇ ಎಂದು ಹುಡುಕುವುದೂ ಬೇಕಿಲ್ಲ. ‘ಸ್ವಾಧೀನಂ ಸಮತಿಕ್ರಮ್ಯ ಮಾತರಂ ಪಿತರಂ ಗುರುಂ| ಅಸ್ವಾಧೀನಂ ಕಥಂ ದೈವಂ ಪ್ರಕಾರೈರಭಿರಾಧ್ಯತೇ||’ ರಾಮಾಯಣದಲ್ಲಿ ಅಯೋಧ್ಯಾಕಾಂಡದ ಈ ಶ್ಲೋಕದಲ್ಲೂ ಅದನ್ನೇ ಹೇಳಿದೆ: ಕಣ್ಣೆದುರಿಗಿರುವ ತಾಯಿ-ತಂದೆಯರನ್ನೇ ದೇವರೆಂದುಕೊಳ್ಳದೆ ಕಾಣದ ಬೇರಾವುದೋ ದೇವರನ್ನೇಕೆ ಹುಡುಕುತ್ತಿರುವೆ? ವಾಲ್ಮಿಕೀರಾಮಾಯಣದಲ್ಲಿ ಒಂದು ಸನ್ನಿವೇಶ ಬರುತ್ತದೆ. ರಾವಣನನ್ನು ಕೊಂದ ಮೇಲೆ ರಾಮ, ಸೀತೆ, ಲಕ್ಷ್ಮಣ ಮತ್ತು ವಾನರಸೇನೆಯೆಲ್ಲ ಲಂಕೆಯಿಂದ ಹಿಂದಿರುಗುವ ಘಳಿಗೆ. ವಿಶ್ವಕರ್ಮನಿಂದ ನಿರ್ಮಿತ ಅತ್ಯಾಕರ್ಷಕ ಲಂಕಾನಗರಿಯನ್ನು ಬಿಟ್ಟುಹೋಗುವುದೇ ಎಂದು ಲಕ್ಷ್ಮಣನ ಮನಸ್ಸು ಒಮ್ಮೆ ವಿಚಲಿತವಾಗುತ್ತದೆ. ಅಣ್ಣನಲ್ಲಿ ಹೇಳುತ್ತಾನೆ, ಇಲ್ಲೇ ಇದ್ದುಬಿಡೋಣ ಅಯೋಧ್ಯೆಗೇಕೆ ಹಿಂದಿರುಗಬೇಕು? ಅಲ್ಲಿ ಭರತ ನಮ್ಮನ್ನು ಸೇರಿಸಿಕೊಳ್ಳುತ್ತಾನೋ ಇಲ್ಲವೋ. ಆಗ ರಾಮ ಲಕ್ಷ್ಮಣನಿಗೆ ಹೇಳುವ ಮಾತು ಅತ್ಯಂತ ಮಾರ್ಮಿಕವೂ ಮನೋಜ್ಞವೂ ಆದುದು. ಆತನೆನ್ನುತ್ತಾನೆ, ‘ಅಪಿ ಸ್ವರ್ಣಮಯೀ ಲಂಕಾ ನ ಮೇ ಲಕ್ಷ್ಮಣ ರೋಚತೇ| ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀ|| ಲಕ್ಷ್ಮಣಾ, ಈ ಲಂಕಾನಗರಿಯು ಬಂಗಾರದಿಂದ ನಿರ್ಮಿಸಿದ್ದೇ ಆಗಿರಬಹುದು, ಸಕಲಸೌಕರ್ಯಗಳಿರುವ ಸಮೃದ್ಧ ನಾಡೇ ಆಗಿರಬಹುದು. ಆದರೆ ನನಗೆ ಇದು ಆಕರ್ಷಕವೆನಿಸುವುದಿಲ್ಲ. ಏಕೆಂದರೆ ಹೆತ್ತತಾಯಿ ಮತ್ತು ಜನ್ಮಭೂಮಿ ಇವು ಸ್ವರ್ಗಕ್ಕಿಂತಲೂ ಶ್ರೇಷ್ಠವಾದವು. ನಾನು ತಾಯಿಯಿದ್ದಲ್ಲಿಗೆ, ತಾಯ್ನಾಡಿಗೆ ಹಿಂದಿರುಗಲೇಬೇಕು.’ ರಾಮಾಯಣದ್ದೇ ಇನ್ನೊಂದು ಹೃದಯಸ್ಪರ್ಶಿ ಸನ್ನಿವೇಶ. ಇದು ಭಾಸ ಕವಿಯ ‘ಪ್ರತಿಮಾ’ ನಾಟಕದಲ್ಲಿ ಬರುತ್ತದೆ. ಪಟ್ಟಾಭಿಷೇಕದ ಬದಲು ರಾಮನಿಗೆ ವನವಾಸವೆಂದು ಘೋಷಿಸಿ ಏನೇನೆಲ್ಲ ಉಪದ್ವ್ಯಾಪಗಳನ್ನು ಮಾಡಿದ ಕೈಕೇಯಿಯ ಕುಕೃತ್ಯಗಳ ದೆಸೆಯಿಂದಾಗಿ ದಶರಥನ ಮರಣವಾಗಿದೆ. ರಾಮ-ಸೀತೆ-ಲಕ್ಷ್ಮಣರು ಆಗಲೇ ಕಾಡು ಸೇರಿಯಾಗಿದೆ. ಮಾವನ ಮನೆಗೆ ಹೋಗಿದ್ದ ಭರತ ಶತ್ರುಘ್ನರನ್ನು ಅಯೋಧ್ಯೆಗೆ ಕರೆಸಲಾಗಿದೆ. ಪಟ್ಟಣದ ಹೊರಗಿನ ಉದ್ಯಾನವನದವರೆಗೆ ಅವರು ತಲುಪಿದ್ದಾರೆ. ಅದು ರಘುವಂಶದ ದಿವಂಗತ ಅರಸರೆಲ್ಲರ ಪ್ರತಿಮೆಗಳನ್ನು ನಿಲ್ಲಿಸಿರುವ ಸ್ಥಳ. ಮೊದಲು ದಿಲೀಪ, ರಘು ಮತ್ತು ಅಜ ಈ ಮೂವರ ಪ್ರತಿಮೆಗಳಷ್ಟೇ ಅಲ್ಲಿದ್ದವು. ಈಗ ನಾಲ್ಕನೆಯದಾಗಿ ದಶರಥನ ಪ್ರತಿಮೆಯನ್ನೂ ನೋಡಿ ಭರತ ದಿಗ್ಭ್ರಾಂತನಾಗಿದ್ದಾನೆ, ಮೂರ್ಛೆತಪ್ಪಿ ಬಿದ್ದಿದ್ದಾನೆ. ಹೃದಯವಿದ್ರಾವಕ ದೃಶ್ಯ. ತಂದೆ ತೀರಿಹೋದ ಸಮಾಚಾರ ಭರತನಿಗಿನ್ನೂ ತಿಳಿದಿರಲಿಲ್ಲ, ಅಲ್ಲಿ ತಂದೆಯದೇ ಪ್ರತಿಮೆಯನ್ನು ನೋಡಿದಾಗಲೇ ಅವನಿಗೆ ಗೊತ್ತಾದದ್ದು. ಅಷ್ಟುಹೊತ್ತಿಗೆ ಅಲ್ಲಿಗೆ ಕೌಸಲ್ಯಾ, ಕೈಕೇಯಿ, ಸುಮಿತ್ರೆಯರೂ ಬರುತ್ತಾರೆ. ಅವರು ಪ್ರೀತಿಯಿಂದ ಭರತನ ಮೈದಡವುತ್ತಾರೆ. ಪ್ರತಿಮಾಗೃಹದ ಕಾವಲುಗಾರ ದೇವಕುಲಿಕ ಎಂಬಾತ ನುಡಿಯುತ್ತಾನೆ, ‘ಹಸ್ತಸ್ಪರ್ಶೋಹಿ ಮಾತ್ರೇಣಾಂ ಅಜಲಸ್ಯ ಜಲಾಂಜಲಿಃ - ಭರತನಿಗೆ ಅಮ್ಮಂದಿರ ಕರಸ್ಪರ್ಶವೇ ಬಾಯಾರಿದವನಿಗೆ ಬೊಗಸೆನೀರು ಸಿಕ್ಕಂತಾಯ್ತು.’ ಮಾತೃಹೃದಯದ ಮಮತೆಯ ಸಿಂಚನ ಎಂತಹದೆಂದು ಆ ಯಃಕಶ್ಚಿತ್ ಕಾವಲುಗಾರ ಕೂಡ ಎಷ್ಟು ಮಧುರಭಾವದಿಂದ ಬಣ್ಣಿಸಿದ್ದಾನೆ! ‘ಪುನರಪಿ ಜನನಂ ಪುನರಪಿ ಮರಣಂ ಪುನರಪಿ ಜನನೀಜಠರೇ ಶಯನಂ’ ಎಂದ ಆದಿಶಂಕರಾಚಾರ್ಯರು ತಾಯಿಯನ್ನು ಬಣ್ಣಿಸಿರುವ ಪರಿಯಂತೂ ಅದ್ಭುತ. ದೇವ್ಯಪರಾಧಕ್ಷಮಾಪಣಾ ಸ್ತೋತ್ರದಲ್ಲಿ ಅವರೆನ್ನುತ್ತಾರೆ: ಜಗನ್ಮಾತರ್ಮಾತಸ್ತವ ಚರಣಸೇವಾ ನ ರಚಿತಾ| ನ ವಾ ದತ್ತಂ ದೇವಿ ದ್ರವಿಣಮಪಿ ಭೂಯಸ್ತವ ಮಯಾ| ತಥಾಪಿ ತ್ವಂ ಸ್ನೇಹಂ ಮಯಿ ನಿರುಪಮಂ ಯತ್ಪ್ರಕುರುಷೇ| ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ|| ಎಲೈ ಜಗನ್ಮಾತೆಯಾದ ನನ್ನ ತಾಯಿಯೇ, ನಿನ್ನ ಪಾದಸೇವೆಯನ್ನು ನಾನು ಮಾಡಲಿಲ್ಲ. ನಿನಗಾಗಿ ಸಾಕಷ್ಟು ಧನವನ್ನೂ ವ್ಯಯಿಸಲಿಲ್ಲ. ಆದರೂ ನೀನು ನನ್ನ ವಿಷಯದಲ್ಲಿ ಅನುಪಮವಾದ ಸ್ನೇಹವಾತ್ಸಲ್ಯಗಳನ್ನು ತೋರಿಸುತ್ತಿರುವೆ. ಲೋಕದಲ್ಲಿ ಯಾವನೋ ಕೆಟ್ಟ ಮಗ ಹುಟ್ಟಿಯಾನು, ಆದರೆ ಕೆಟ್ಟ ತಾಯಿ ಅಂತ ಯಾರೂ ಅನಿಸಿಕೊಳ್ಳುವುದಿಲ್ಲ.’ ಅದೇ ಸ್ತೋತ್ರದಲ್ಲಿ ಇನ್ನೊಂದು ಶ್ಲೋಕವೂ ತಾಯಿಯ ಹೆಚ್ಚುಗಾರಿಕೆಯನ್ನು ಬಣ್ಣಿಸುತ್ತದೆ. ಜಗದಂಬ ವಿಚಿತ್ರಮತ್ರ ಕಿಂ ಪರಿಪೂರ್ಣಾ ಕರುಣಾಸ್ತಿ ಚೇನ್ಮಯಿ| ಅಪರಾಧ ಪರಂಪರಾವೃತಂ ನ ಹಿ ಮಾತಾ ಸಮುಪೇಕ್ಷತೇ ಸುತಮ್|| ನೀನು ನನ್ನ ಮೇಲೆ ಸಂಪೂರ್ಣ ಕರುಣೆ ತೋರಿಸುತ್ತಾ ಇರುವುದರಲ್ಲಿ ಆಶ್ಚರ್ಯವೇನಿದೆ? ಏಕೆಂದರೆ ಸಾವಿರ ತಪ್ಪು ಮಾಡಿದ್ದರೂ ಕೂಡ ತಾಯಿಯಾದವಳು ಯಾವತ್ತಿಗೂ ಮಗನನ್ನು ಕಡೆಗಣಿಸುವುದಿಲ್ಲ.’ ಇಲ್ಲಿ ತಾಯಿಯೆಂದರೆ ಹೆತ್ತತಾಯಿಯಲ್ಲ ಜಗನ್ಮಾತೆ, ‘ಯಾದೇವೀ ಸರ್ವಭೂತೇಷು ಮಾತೃರೂಪೇಣ ಸಂಸ್ಥಿತಾ’ ಎಂದು ದೇವೀಸಪ್ತಶತಿಯಲ್ಲಿ ಇರುವಂತೆ ಹೇಳಿರುವುದು ಅಂತ ನೀವೆನ್ನಬಹುದು. ಹೌದು, ಶಂಕರಾಚಾರ್ಯರು ಯತಿಗಳು; ಸನ್ಯಾಸ ಸ್ವೀಕರಿಸುವಾಗ ಪ್ರಾಪಂಚಿಕ ಸಂಬಂಧಗಳನ್ನೆಲ್ಲ ಕಡಿದುಕೊಂಡವರು. ಆದರೆ ತಾಯಿಗೂ ಮಗನಿಗೂ ಇರುವ ಕರುಳಿನ ಸಂಬಂಧ ಮಾತ್ರ ಎಂದಿಗೂ ಕಡಿದುಹೋಗುವುದಿಲ್ಲ. ಸನ್ಯಾಸಿಯಾದವನೂ ತನ್ನ ತಾಯಿಗೆ ಗೌರವ ಸೂಚಿಸಲೇಬೇಕು. ಶಂಕರಾಚಾರ್ಯರು ತನ್ನ ಪೂರ್ವಾಶ್ರಮದ ತಾಯಿ ದೈವಾಧೀನರಾದಾಗ ಅಂತ್ಯಕ್ರಿಯೆ ಮಾಡಿದ ನಿದರ್ಶನವನ್ನೇ ಇವತ್ತಿಗೂ ಯತಿಗಳು ಪಾಲಿಸುತ್ತಾರೆ. ಸಂಸ್ಕೃತ ಸುಭಾಷಿತಗಳಲ್ಲಿಯೂ ಮಾತೆಯ ಮಹತ್ವ ಅನೇಕ ರೀತಿಯಲ್ಲಿ ಬಣ್ಣಿಸಲ್ಪಟ್ಟಿದೆ. ‘ಮಾತ್ರಾಸಮಂ ನಾಸ್ತಿ ಶರೀರಪೋಷಣಂ| ಚಿಂತಾಸಮಂ ನಾಸ್ತಿ ಶರೀರಶೋಷಣಂ| ಭಾರ್ಯಾಸಮಂ ನಾಸ್ತಿ ಶರೀರತೋಷಣಂ| ವಿದ್ಯಾಸಮಂ ನಾಸ್ತಿ ಶರೀರಭೂಷಣಂ||’ ಎನ್ನುತ್ತದೆ ಒಂದು ಸೂಕ್ತಿಮುಕ್ತಕ. ನಮ್ಮ ಶರೀರದ ಆರೈಕೆಯನ್ನು ಅಮ್ಮ ಮಾಡಿದಷ್ಟು ಮಜಬೂತಾಗಿ ಬೇರಾರೂ ಮಾಡಲಾರರು. ವಿದ್ಯೆಯ ಮಹತ್ವವನ್ನು ಬಣ್ಣಿಸುವ ಒಂದು ಸುಭಾಷಿತದಲ್ಲೂ ‘ಮಾತೇವ ರಕ್ಷತಿ...’ ಎಂದು ಬರುತ್ತದೆ. ತಾಯಿಯು ಮಗುವನ್ನು ಹೊತ್ತು ಹೆತ್ತು ಸಲಹುವಂತೆ ವಿದ್ಯೆಯೂ ಮನುಷ್ಯನನ್ನು ಪಾಲನೆ ಪೋಷಣೆ ಮಾಡಿ ರಕ್ಷಿಸುತ್ತದೆ ಎಂಬ ವಿವರಣೆ. ‘ಮಾತಾ ಯಸ್ಯ ಗೃಹೇ ನಾಸ್ತಿ ಭಾರ್ಯಾ ವಾ ಪ್ರಿಯವಾದಿನೀ| ಅರಣ್ಯಂ ತೇನ ಗಂತವ್ಯಂ ಯಥಾರಣ್ಯಂ ತಥಾಗೃಹಂ||’ ತಾಯಿಯಿಲ್ಲದ ಮನೆ ಮನೆಯೇ ಅಲ್ಲ, ಕಾಡಿದ್ದಂತೆ. ‘ಮಾತಾ ಮಿತ್ರಂ ಪಿತಾಚೇತಿ ಸ್ವಭಾವತ್ರಿತಯಂ ಹಿತಂ| ಕಾರ್ಯಕಾರಣತಶ್ಚಾನ್ಯೇ ಭವಂತಿ ಹಿತಬುದ್ಧಯಃ||’ ತಾಯಿ-ತಂದೆಯರು ಮತ್ತು ಪ್ರಾಣಸ್ನೇಹಿತರು ಮಾತ್ರ ಅತ್ಯಂತ ಸಹಜತೆಯಿಂದ ನಮ್ಮ ಹಿತಚಿಂತನೆ ಮಾಡುತ್ತಾರೆ. ಬೇರೆಯವರೆಲ್ಲ ತಂತಮ್ಮ ಒಳಿತಿನ ದೃಷ್ಟಿಯಿಂದಷ್ಟೇ ನಮ್ಮ ಕುಶಲ ವಿಚಾರಿಸುತ್ತಾರೆ ಎನ್ನುತ್ತದೆ ಒಂದು ಸುಭಾಷಿತ. ಇನ್ನೂ ಒಂದು ಶ್ಲೋಕದ ಪ್ರಕಾರ ‘ರಾಜಪತ್ನೀ ಗುರೋಃ ಪತ್ನೀ ಮಿತ್ರಪತ್ನೀ ತಥೈವ ಚ| ಪತ್ನೀಮಾತಾ ಸ್ವಸ್ಯ ಮಾತಾ ಪಂಚೈತಾಮಾತರಸ್ಮೃತಃ||’ - ರಾಜಭಾರ್ಯೆ, ಗುರುಭಾರ್ಯೆ, ಮಿತ್ರಭಾರ್ಯೆ, ಹೆಂಡತಿಯ ತಾಯಿ ಮತ್ತು ತನ್ನ ಸ್ವಂತ ತಾಯಿ - ಈ ಐದು ಮಂದಿಯೂ ತಾಯಂದಿರೇ, ಹೆತ್ತತಾಯಿಗೆ ಸಲ್ಲುವ ಗೌರವಕ್ಕೆ ಅರ್ಹರಾದವರೇ. ನಾನು ಹೇಳುವುದಾದರೆ ಬರಿ ಅವರಷ್ಟೇ ಅಲ್ಲ, ಈ ಅಂಕಣ ಓದುವ (ಮತ್ತು ಓದುವವರ) ಅಮ್ಮಂದಿರೆಲ್ಲರೂ ಗೌರವಾರ್ಹರು. ಇವತ್ತು ಅಮ್ಮಂದಿರ ದಿನದ ಶುಭಾಶಯಗಳನ್ನು ಪ್ರೀತಿಯಿಂದ ಸ್ವೀಕರಿಸಬೇಕಾದವರು. * * * [ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] "Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!Version: 20241125