Episodes
Saturday May 05, 2012
Soma Cube
Saturday May 05, 2012
Saturday May 05, 2012
ದಿನಾಂಕ 6 ಮೇ 2012ರ ಸಂಚಿಕೆ...
ಸೋಮರಸವಲ್ಲ ಸೋಮ ಘನ!
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] * * * ರೂಬಿಕ್ಸ್ ಕ್ಯೂಬ್ ಎಂಬ ಸಮಸ್ಯಾಪೂರಣ ಆಟಿಗೆಯ ಹೆಸರನ್ನು ನೀವು ಕೇಳಿರಬಹುದು. ನಿಮ್ಮಲ್ಲಿ ಕೆಲವರು ಅದನ್ನು ಆಡಿರಲೂಬಹುದು. ಘನಾಕೃತಿಯ ಆರು ಮೇಲ್ಮೈಗಳಿಗೆ ಆರು ಬಣ್ಣಗಳ ಜೋಡಣೆಯಲ್ಲಿ ನೀವು ಪರಿಣತರೂ ಇರಬಹುದು. ರೂಬಿಕ್ಸ್ ಕ್ಯೂಬ್ನಷ್ಟು ಜನಪ್ರಿಯವಾಗಿರದ, ಆದರೆ ಅಷ್ಟೇ ಸ್ವಾರಸ್ಯಕರವಾದ, ಅದರಂತೆಯೇ ಸಮಸ್ಯಾಪೂರಣದ ಸವಾಲೊಡ್ಡುವ ಇನ್ನೊಂದು ಆಟಿಗೆ ಇದೆ. ಸೋಮ ಘನ ಎಂದು ಅದರ ಹೆಸರು. ಇವತ್ತಿನ ಅಂಕಣದಲ್ಲಿ ಈ ಸ್ವಾರಸ್ಯಕರ ಆಟಿಗೆಯ ಪರಿಚಯ ಮಾಡಿಕೊಳ್ಳೋಣ. ಮುಖ್ಯವಾಗಿ ಅದಕ್ಕೆ ‘ಸೋಮ’ ಎಂಬ ಹೆಸರೇಕೆ ಬಂತೆಂದು ತಿಳಿದುಕೊಳ್ಳೋಣ. ಸೋಮ ಘನ ರೂಪುಗೊಂಡಿರುವುದು ಒಟ್ಟು ಏಳು ತುಂಡುಗಳಿಂದ. ಚಿತ್ರದಲ್ಲಿ ತೋರಿಸಿದಂತೆ ಏಳು ತುಂಡುಗಳೂ ತಮ್ಮೊಳಗೇ ಪುಟ್ಟಪುಟ್ಟ ಘನಾಕೃತಿಗಳ ಜೋಡಣೆಗಳು. ಒಂದರಲ್ಲಿ ಮೂರು ಘನಾಕೃತಿಗಳಿದ್ದರೆ ಮಿಕ್ಕ ಆರರಲ್ಲಿ ತಲಾ ನಾಲ್ಕು ಘನಾಕೃತಿಗಳ ಜೋಡಣೆಯಿದೆ. ಈ ಏಳು ತುಂಡುಗಳನ್ನು ಒಂದಕ್ಕೊಂದು ಜೋಡಿಸಿ ಪೂರ್ಣ ಘನಾಕೃತಿ ಆಗುವಂತೆ ಮಾಡಬೇಕು. ಅಷ್ಟೇ ಸಮಸ್ಯೆ. ಅದೇನು ಮಹಾ ಅಂತನಿಸುವಷ್ಟು ಸುಲಭವಾಗಿ ತೋರುತ್ತದೆ. ಆದರೆ ತುಂಡುಗಳನ್ನು ಜೋಡಿಸುತ್ತ ಹೋದಂತೆ ಸಮಸ್ಯೆ ನಾವೆಣಿಸಿದ್ದಕ್ಕಿಂತ ಜಟಿಲವಿದೆ ಅನಿಸುತ್ತದೆ. ಸೋಜಿಗವೆಂದರೆ ಏಳು ತುಂಡುಗಳನ್ನು ಪೂರ್ಣ ಘನಾಕೃತಿಯಾಗಿ ಜೋಡಿಸುವ ವಿಧಾನ, ಅಂದರೆ ಸೋಮ ಘನ ಸಮಸ್ಯೆಯ ಪರಿಹಾರ, ಬರಿ ಒಂದೇ ರೀತಿಯದಲ್ಲ. ಬೇರೆಬೇರೆ ರೀತಿಯಲ್ಲಿ ಅದೇ ಏಳು ತುಂಡುಗಳನ್ನು ಜೋಡಿಸಿ ಪೂರ್ಣ ಘನಾಕೃತಿಯಾಗಿಸುವುದು ಸಾಧ್ಯವಿದೆ. ಅಷ್ಟಿದ್ದರೂ ಒಂದು ರೀತಿಯೂ ನಮಗೆ ಬರುವುದಿಲ್ಲವಲ್ಲ ಎಂದು ಹತಾಶೆ, ಸಮಸ್ಯೆಯನ್ನು ಬಗೆಹರಿಸಿಯೇ ತೀರುತ್ತೇನೆಂಬ ಛಲ- ಸೋಮ ಘನ ಎಡಿಕ್ಟಿವ್ ಆಗುವುದು ಅದೇ ಕಾರಣಕ್ಕೆ. ಸೋಮ ಘನದ ಮೂಲ ಕಲ್ಪನೆ ಮೂಡಿದ್ದು ಡೆನ್ಮಾರ್ಕ್ ದೇಶದ ಪೀಟ್ ಹೆಯ್ನ್ ಎಂಬ ಸಂಶೋಧಕನಿಗೆ. ಆತ ಕವಿ, ತತ್ತ್ವಜ್ಞಾನಿ, ವಿಜ್ಞಾನಿ, ಎಂಜಿನಿಯರ್ ಹೀಗೆ ಬಹುಮುಖ ಪ್ರತಿಭೆಯವನು. ಯೂರೋಪ್ನ ವಿವಿಧೆಡೆಗಳಲ್ಲಿ ನಡೆಯುತ್ತಿದ್ದ ಭೌತಶಾಸ್ತ್ರ ವಿಚಾರಸಂಕಿರಣಗಳಲ್ಲಿ ಪೀಟ್ ಭಾಗವಹಿಸುತ್ತಿದ್ದ. ಒಮ್ಮೆ ಖ್ಯಾತ ಭೌತಶಾಸ್ತ್ರಜ್ಞ, ನೊಬೆಲ್ ಪ್ರಶಸ್ತಿ ವಿಜೇತ ವರ್ನರ್ ಹೈಸನ್ಬರ್ಗ್ನ ಉಪನ್ಯಾಸ ನಡೆದಿತ್ತು. ಘನ ವಿಚಾರಧಾರೆಗಳು ಒಂದಾದ ಮೇಲೊಂದು ಸಾಗಿದ್ದವು. ಭಾಷಣ ಕೇಳುತ್ತ ಸುಮ್ಮನೆ ಕುಳಿತುಕೊಳ್ಳಲೊಲ್ಲದ ಪೀಟ್ ಮನಸ್ಸಿನಲ್ಲಿ ಘನಾಕೃತಿಗಳದೇ ಗುಂಗಿಹುಳ. ಆಗ ಹೊಳೆದದ್ದೇ ಸೋಮ ಘನ. ಭಾಷಣ ಕೇಳುತ್ತಿರುವಾಗಲೇ ಕಾಗದದಲ್ಲಿ ಪೆನ್ಸಿಲ್ನಿಂದ ರೇಖಾಕೃತಿ ರಚಿಸಿ ಅದನ್ನು ಕತ್ತರಿಸಿ ಪುಟ್ಟ ಘನಾಕೃತಿಗಳನ್ನು ಮಾಡಿಕೊಂಡ ಪೀಟ್ ಭಾಷಣ ಮುಗಿಯುವ ವೇಳೆಗೆ ಅಂತಹ ಏಳು ತುಂಡುಗಳ ಜೋಡಣೆಯಿಂದ ಪೂರ್ಣ ಘನಾಕೃತಿಯನ್ನು ರೂಪಿಸುವುದು ಸಾಧ್ಯ ಎಂಬ ತೀರ್ಮಾನಕ್ಕೆ ಬಂದಿದ್ದ! ಪೀಟ್ನ ಚಟುವಟಿಕೆಯನ್ನು ಉಪನ್ಯಾಸಕಾರ ಹೈಸನ್ಬರ್ಗ್ ಗಮನಿಸದೇ ಇದ್ದದ್ದು ಅವನ ಪುಣ್ಯ. 1933ರಲ್ಲಿ ಪೀಟ್ ಹೆಯ್ನ್ ತನ್ನ ಸೋಮ ಘನ ಸಂಶೋಧನೆಯ ಪೇಟಂಟ್ಗೆ ಅರ್ಜಿ ಸಲ್ಲಿಸಿದ. ಅವನ ಹೊಸ ಆಟಿಗೆ ಡೆನ್ಮಾರ್ಕ್ನಲ್ಲಿ ಹೊಸ ಕ್ರೇಜ್ ಹುಟ್ಟಿಸಿತು. ಆದರೂ ಬೇರೆಡೆಗಳಲ್ಲಿ ಅದು ಅಷ್ಟೇನೂ ಕಾಣಿಸಿಕೊಳ್ಳಲಿಲ್ಲ. 1958ರಲ್ಲಿ ಅಮೆರಿಕದ ಪ್ರಖ್ಯಾತ ಗಣಿತಜ್ಞ ಮಾರ್ಟಿನ್ ಗಾರ್ಡನರ್ ಸೋಮ ಘನದ ಕುರಿತು ಸೈಂಟಿಫಿಕ್ ಅಮೆರಿಕನ್ ಮ್ಯಾಗಜಿನ್ನಲ್ಲಿ ಸಚಿತ್ರ ಲೇಖನ ಬರೆದ. ಅಮೆರಿಕದ ಆಟಿಗೆಗಳ ತಯಾರಕ ಕಂಪನಿ ಪಾರ್ಕರ್ ಬ್ರದರ್ಸ್ 1969ರಲ್ಲಿ ಸೋಮ ಘನದ ಆಕರ್ಷಕ ಆವೃತ್ತಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತು. ಆಮೇಲೆ ಸೋಮ ಘನ ಒಂದು ಆಟಿಗೆಯಾಗಿ ಪಾಶ್ಚಾತ್ಯ ದೇಶಗಳಲ್ಲಿ ಸಾಕಷ್ಟು ಪ್ರಸಿದ್ಧವಾಯ್ತು. ಸೋಮ ಘನದ ಮೂಲ ಘಟಕಗಳು ಏಳು ಪ್ರತ್ಯೇಕ ತುಂಡುಗಳು ಎಂದಿದ್ದೆನಷ್ಟೆ? ಸೂಕ್ಷ್ಮವಾಗಿ ಗಮನಿಸಿದರೆ ಇದರಲ್ಲಿ ಪ್ರತಿಯೊಂದು ತುಂಡಿನಲ್ಲೂ ತಲಾ ಮೂರು ಘನಗಳಿಂದಾದ ಇಂಗ್ಲಿಷ್ ಎಲ್ ಅಕ್ಷರಾಕಾರದ ಜೋಡಣೆಯಿದೆ. ಏಳರ ಪೈಕಿ ಒಂದು ತುಂಡು ಮಾತ್ರ ಮೂರೇ ಘನಗಳ ಎಲ್ ಜೋಡಣೆ. ಉಳಿದ ಆರರಲ್ಲಿ ಎಲ್ ಆಕೃತಿಗೆ ತಾಗಿಕೊಂಡು ಇನ್ನೊದು ಘನವೂ ಇರುತ್ತದೆ. ಎಲ್ಲ ಸೇರಿ ೨೭ ಪುಟ್ಟ ಘನಾಕೃತಿಗಳು. ಅವುಗಳನ್ನು 3x3x3 ರೀತಿಯಲ್ಲಿ ಜೋಡಿಸಿದರೇನೇ ಪೂರ್ಣ ಘನಾಕೃತಿ ಆಗುವುದು. ಪೀಟ್ ಹೆಯ್ನ್ಗೆ ಮೊದಲು ಹೊಳೆದದ್ದು ಈ ಏಳು ತುಂಡುಗಳ ಕಲ್ಪನೆಯೇ ಹೊರತು ಅವುಗಳನ್ನು ಜೋಡಿಸಿ ಪೂರ್ಣ ಘನಾಕೃತಿ ಮಾಡಬಹುದೆಂಬ ಸಂಗತಿಯಲ್ಲ. ಆದರೆ ಮತ್ತೆಮತ್ತೆ ಆ ಏಳು ತುಂಡುಗಳನ್ನು ಜೋಡಿಸುವ ಪ್ರಯತ್ನದಲ್ಲಿ ಒಮ್ಮೆ ಅಕಸ್ಮಾತ್ತಾಗಿ ಪೂರ್ಣ ಘನಾಕೃತಿ ಮೈದಳೆಯಿತು! ಒಂದೇ ರೀತಿಯಲ್ಲಲ್ಲ 240 ಬೇರೆಬೇರೆ ರೀತಿಗಳಲ್ಲಿ ಪೂರ್ಣ ಘನಾಕೃತಿಯನ್ನು ರೂಪಿಸಬಹುದೆಂಬ ಅರಿವಾದಾಗಂತೂ ಪೀಟ್ನ ಸಂತಸಕ್ಕೆ ಪಾರವೇ ಇಲ್ಲ. ಪೀಟ್ನ ಸಮಕಾಲೀನ ಗಣಿತಜ್ಞರಿಗೂ ಸೋಮ ಘನದಲ್ಲಿ ಆಸಕ್ತಿ ಹುಟ್ಟಿತು. ಜಾನ್ ಹಾರ್ಟನ್ ಕಾನ್ವೆ ಎಂಬೊಬ್ಬ ಗಣಿತಜ್ಞ ಸೋಮ ಘನದ 240 ವಿನ್ಯಾಸರೀತಿಗಳ ಪರಸ್ಪರ ಸಂಬಂಧಗಳನ್ನು ಗಣಿತರೀತ್ಯಾ ವಿಶ್ಲೇಷಿಸಿದ. ಅದನ್ನು ‘ಸೋಮ್ಯಾಪ್’ ಎಂದು ಕರೆದ. ಆ ಸರಣಿಯಲ್ಲಿನ ಒಂದು ವಿನ್ಯಾಸವನ್ನು ಅರ್ಥ ಮಾಡಿಕೊಂಡರೆ ಸಾಕು ಅದರ ನಂತರದ್ದೂ ಸುಲಭವಾಗುತ್ತದೆ. ಏಕೆಂದರೆ ವಿನ್ಯಾಸಗಳಲ್ಲಿನ ಅಂತರವು ಹೆಚ್ಚೆಂದರೆ ಮೂರು ತುಂಡುಗಳ ಅದಲುಬದಲಿನಿಂದ ಆಗಿದ್ದಿರುತ್ತದೆ. ಎಲ್ಲ ೨೪೦ ವಿನ್ಯಾಸಗಳನ್ನು ಕಂಡುಕೊಳ್ಳುವುದು ಒಂದು ಸವಾಲಾದರೆ ಸೋಮ ಘನದ ಏಳು ತುಂಡುಗಳಿಂದ ಪೂರ್ಣ ಘನಾಕೃತಿಯಲ್ಲದ ಬೇರೆ ಹಲವಾರು ವಿನ್ಯಾಸಗಳನ್ನು ರಚಿಸುವುದೂ ಮೋಜಿನ ಸಂಗತಿ. ಒಟ್ಟಿನಲ್ಲಿ ಅಗೆವ ಬುದ್ಧಿಗೆ ಅನಂತ ಅವಕಾಶ. ಸೈಂಟಿಫಿಕ್ ಅಮೆರಿಕನ್ ನಿಯತಕಾಲಿಕವು ಸೋಮ ಘನದ ಬಗ್ಗೆ ಲೇಖನಗಳನ್ನು ಪ್ರಕಟಿಸಿದ ಮೇಲೆ ಅದರ ಜನಪ್ರಿಯತೆ ಮತ್ತಷ್ಟು ಹೆಚ್ಚಿತು. ಶಾಲೆಗಳಲ್ಲಿ ಶಿಕ್ಷಕರು ಮಕ್ಕಳಿಗೆ ಬೋಧನೋಪಕರಣವಾಗಿ ಸೋಮ ಘನಗಳನ್ನು ರಚಿಸಿದರು. ಮನೋವೈದ್ಯರು ರೋಗಿಗಳ ವಿವೇಚನಾಶಕ್ತಿಯನ್ನು ಅಳೆಯಲು ಸೋಮ ಘನಗಳನ್ನು ಬಳಸತೊಡಗಿದರು. ಒಂಟಿತನದ ಆಲಸ್ಯ ಪರಿಹಾರಕ್ಕೆಂದು ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಸೋಮ ಘನಗಳನ್ನು ಕೊಡುವ ಪರಿಪಾಟ ಆರಂಭವಾಯಿತು. ಸೋಮ ಘನಗಳು ಕ್ರಿಸ್ಮಸ್ ಉಡುಗೊರೆಗಳಾದವು. ಸ್ನೇಹಸೌಹಾರ್ದತೆಗಳ ಸಂಕೇತವಾದವು. ಸರಿ, ಆಟಿಗೆಯ ಹೆಸರಿನಲ್ಲಿ ‘ಸೋಮ’ ಎಲ್ಲಿಂದ ಬಂತು? ಅದು ನಮ್ಮ ಭಾರತೀಯ ಸನಾತನ ಸಂಸ್ಕೃತಿಯದ್ದೇ! ಸೋಮ ಎಂಬ ಸಂಸ್ಕೃತ ಪದವನ್ನೇ ಪೀಟ್ ಹೆಯ್ನ್ ತನ್ನ ಸಂಶೋಧನೆಯ ಹೆಸರಿಗೆ ಬಳಸಿದ್ದು. ಆಗಲೇ ಹೇಳಿದಂತೆ ಆತ ತತ್ತ್ವಜ್ಞಾನಿಯೂ ಆಗಿದ್ದರಿಂದ ಅವನಿಗೆ ಭಾರತೀಯ ಸಂಸ್ಕೃತಿಯ, ಸಂಸ್ಕೃತ ಭಾಷೆಯ ಪರಿಚಯ ಚೆನ್ನಾಗಿ ಇತ್ತು. ಜೀವವೈವಿಧ್ಯ ಮತ್ತು ಸೃಷ್ಟಿಯ ಪ್ರಚ್ಛನ್ನ ಶಕ್ತಿಯನ್ನು ‘ಸೋಮ’ ಎಂದು ಗುರುತಿಸಬಹುದು, ತನ್ನ ಆಟಿಗೆಯ ಅಗಾಧತೆಯನ್ನು ಆ ಪದ ಸಮರ್ಥವಾಗಿ ಪ್ರತಿನಿಧಿಸಬಲ್ಲದು ಎಂದು ಪೀಟ್ನ ಅಂಬೋಣ. ಅಂತೆಯೇ ‘ಸೋಮ’ ಎನ್ನುವುದು ವೇದಗಳ ಕಾಲದಿಂದಲೂ ಭಾರತೀಯ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿರುವ ಒಂದು ಪೇಯ ಪದಾರ್ಥ. ‘ವೈನತೇಯ ಸೋಮಂ ಪಿಬ ಸೋಮಂ ಪಿಬತು ವೃತ್ರಹಾ’ ಎಂದು ಬರುತ್ತದೆ ವೇದಮಂತ್ರಗಳಲ್ಲಿ. ಸೋಮ ಬರಿ ಪೇಯವಲ್ಲ, ನಶೆಯೇರಿಸುವಂಥದ್ದು. ತಾನು ಕಂಡುಹಿಡಿದ ಆಟಿಗೆಯೂ ಅದೇರೀತಿ ಅಮಲೇರಿಸುವಂಥದ್ದು ಎನ್ನುವುದು ‘ಸೋಮ’ ಹೆಸರಿಗೆ ಪೀಟ್ ಹೆಯ್ನ್ ಸಮರ್ಥನೆ. ಕಾಕತಾಳೀಯವಾಗಿ, 1930ರ ಆಸುಪಾಸಿನಲ್ಲೇ, ಆಲ್ಡಸ್ ಹಕ್ಸ್ಲೇ ಎಂಬಾತ ಬರೆದ ‘ಬ್ರೇವ್ ನ್ಯೂ ವರ್ಲ್ಡ್’ ಎಂಬ ವೈಜ್ಞಾನಿಕ ಕಾದಂಬರಿಯಲ್ಲೂ ‘ಸೋಮ’ ಪದ ಪ್ರಸ್ತಾಪವಾಗಿತ್ತಂತೆ. ಅಲ್ಲಿ ಅದನ್ನೊಂದು ಅಡ್ಡ ಪರಿಣಾಮಗಳಿಲ್ಲದ ಮಾದಕ ಪೇಯ ಎಂಬರ್ಥದಲ್ಲಿ ವಿವರಿಸಲಾಗಿತ್ತು. ಅತಿಯಾದ ಸಂಭ್ರಮದಲ್ಲೂ, ಒಂಟಿತನದ ಬೇಸರದಲ್ಲೂ ಬಳಸಬಹುದಾದ ಪೇಯ ಎಂದು ಬಣ್ಣಿಸಲಾಗಿತ್ತು. ಪೀಟ್ ಹೆಯ್ನ್ನ ಹೊಸ ಆಟಿಗೆಯೂ ಅದೇ ಗುಣಸ್ವಭಾವದ್ದೆಂದು ಕಂಡುಕೊಂಡ ಜನರು ‘ಸೋಮ’ ಎಂಬ ಹೆಸರನ್ನು ಸುಲಭವಾಗಿ ಅರ್ಥೈಸಿಕೊಂಡರು. ಇದಿಷ್ಟನ್ನು ಓದಿದ ಮೇಲೆ ಸೋಮ ಘನವನ್ನು ಒಂದು ಕೈ ನೋಡಬೇಕು ಎಂದು ನಿಮಗೆ ಅನಿಸಿದರೆ ಅಚ್ಚರಿಯಿಲ್ಲ. ಭಾರತದಲ್ಲಿ ಆಟಿಗೆ ಅಂಗಡಿಗಳಲ್ಲಿ ಸೋಮ ಘನ ಸಿಗುತ್ತದೋ ಇಲ್ಲವೋ ಗೊತ್ತಿಲ್ಲ. ಆದರೆ ಸೋಮ ಘನದ ಏಳು ತುಂಡುಗಳನ್ನು ರಟ್ಟಿನಿಂದ, ಕಟ್ಟಿಗೆಯಿಂದ ಸ್ವಂತ ತಯಾರಿಸಿಕೊಳ್ಳಬಹುದು. ಅಂತರಜಾಲದಲ್ಲಿ Soma cube ಎಂದು ಹುಡುಕಿದರೆ ಸಂಪನ್ಮೂಲಗಳು ಧಾರಾಳ ಸಿಗುತ್ತವೆ. ಒಮ್ಮೆ ಸೋಮ ಘನದ ಮೇಲೆ ಕೈಯಾಡಿಸಿದಿರೋ ಆಮೇಲೆ ನಿಮಗೆ ಅದನ್ನು ಬಿಡುವ ಮನಸ್ಸಾಗಲಿಕ್ಕಿಲ್ಲ. ನಿಜವಾಗಿ ಸೋಮರಸವನ್ನು ಸೇವಿಸಿ ಗೊತ್ತಿಲ್ಲದಿದ್ದರೂ ಅದರ ಕಿಕ್ ಹೀಗೆಯೇ ಇದ್ದಿರಬಹುದೆಂದು ತೋರಿಸುವಷ್ಟು ಕಿಕ್ ಸೋಮ ಘನಕ್ಕಿದೆ. ಒಮ್ಮೆ ಪ್ರಯತ್ನಿಸಿ ನೋಡಿ! * * * [ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] "Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!Saturday Apr 28, 2012
Parie - Pride of BDT
Saturday Apr 28, 2012
Saturday Apr 28, 2012
ದಿನಾಂಕ 29 ಎಪ್ರಿಲ್ 2012ರ ಸಂಚಿಕೆ...
ಇದು ನಮ್ಮ ಬಿಡಿಟಿಯ ಪರಿ!
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] * * * ಬ್ರಹ್ಮಪ್ಪ ದೇವೇಂದ್ರಪ್ಪ ತವನಪ್ಪನವರ ಎಂಜಿನಿಯರಿಂಗ್ ಕಾಲೇಜು ಅಂತಂದ್ರೆ ಕೆಲವರಿಗಷ್ಟೇ ಗೊತ್ತಾದೀತು. ಆದರೆ ‘ಬಿಡಿಟಿ’ ಎಂಜಿನಿಯರಿಂಗ್ ಕಾಲೇಜು ಎಂದು ನೀವು ಪಿಸುಗುಟ್ಟಿದರೂ ಸಾಕು, ಕಿವಿ ನೆಟ್ಟಗಾಗಿಸಿ ಓಗೊಡುವ ಎಂಜಿನಿಯರುಗಳು ನಿಮಗೆ ಭೂಮಂಡಲದ ದಶದಿಕ್ಕುಗಳಲ್ಲೂ ಸಿಗುತ್ತಾರೆ! ದಾವಣಗೆರೆಯ ಆ ಮೂವರು ಮಹಾನ್ ದಾನಿಗಳ ಹೆಸರಿನ ಮೊದಲಕ್ಷರಗಳದು ಅದೇನು ಮಹಿಮೆಯೋ, ಇವತ್ತು ‘ಬಿಡಿಟಿ’ ಒಂದು ಗ್ಲೋಬಲ್ ಬ್ರಾಂಡ್ ಆಗಿಹೋಗಿದೆ. ಅಷ್ಟೇಅಲ್ಲ, ಮಿಕ್ಕೆಲ್ಲ ಎಂಜಿನಿಯರಿಂಗ್ ಕಾಲೇಜುಗಳಿಗಿಂತ ಭಿನ್ನವಾಗಿ ತನ್ನದೇ ಆದ ಒಂದು ವೈಶಿಷ್ಟ್ಯವನ್ನೂ ಉಳಿಸಿಕೊಂಡುಬಂದಿದೆ. ಪೂರ್ಣವಾಗಿ ಸರಕಾರಿ ಕೋಟಾದಲ್ಲಷ್ಟೇ ಪ್ರವೇಶವಾದ್ದರಿಂದ ನಮ್ಮ ಕಾಲೇಜಿನಲ್ಲಿ ಎಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಿದವರೆಲ್ಲ ಬಡ, ಮಧ್ಯಮವರ್ಗದ ಹಿನ್ನೆಲೆಯಿಂದ ಬಂದವರು. ಪರಿಶ್ರಮದ ಬೆವರು ಸುರಿಸಿ ಎಂಜಿನಿಯರಿಂಗ್ ಕಾಲೇಜಿನ ಮೆಟ್ಟಿಲೇರಿದವರು. ಕೋಟಿಗಟ್ಟಲೆ ಹಣ ಸುರಿದು ಪ್ರವೇಶ ಗಿಟ್ಟಿಸಿದವರಲ್ಲ. ಈಗ ಈ ಪದವೀಧರರೆಲ್ಲ ತಂತ್ರಜ್ಞಾನದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಂತೂ ಹೌದೇಹೌದು, ಅದಕ್ಕಿಂತ ಮುಖ್ಯವಾಗಿ ‘ಮಾಗಿದ ಬದುಕಿನ’ ಕಲೆಯನ್ನು ವಿದ್ಯಾಭ್ಯಾಸದ ಸಮಯದಿಂದಲೇ ಅರಗಿಸಿಕೊಂಡವರು. ಶಿಕ್ಷಣೇತರ ವಿಷಯಗಳಲ್ಲೂ ಬಿಡಿಟಿ ವಿದ್ಯಾರ್ಥಿಗಳದು ಅನನ್ಯ ಛಾಪು. ಅದು ಪ್ರತಿಭಾ ಪ್ರದರ್ಶನದ ಅಂತರಕಾಲೇಜು ಸ್ಪರ್ಧೆಯಿರಬಹುದು, ಆಟೋಟ ಪಂದ್ಯಗಳ ಕ್ರೀಡಾಕೂಟವೇ ಇರಬಹುದು, ಬಿಡಿಟಿ ಹುಡುಗರು ಭಾಗವಹಿಸಿದರೆಂದರೆ ಅಲ್ಲೊಂದು ರೋಚಕತೆ. ಒಂಥರದಲ್ಲಿ ಅವರು ರೇಸ್ನ ಕಪ್ಪುಕುದುರೆಗಳಿದ್ದಂತೆ. ಯಾರ ಊಹೆಗೂ ನಿಲುಕದೆ ವಿಜಯಪತಾಕೆ ಹಾರಿಸುವವರು. ಪದಕ ಪ್ರಶಸ್ತಿಗಳ ಕೊಳ್ಳೆ ಹೊಡೆದು ಹಿಂದಿರುಗುವವರು. ಎರಡು ದಶಕಗಳ ಹಿಂದೆ ನಮ್ಮ ಬ್ಯಾಚ್ನ ಹುಡುಗರು ‘ದವನ’, ‘ಜೇಸಿಯಾನ’ ಮುಂತಾದ ಅಂತರಕಾಲೇಜು ಸ್ಪರ್ಧಾಕೂಟಗಳಲ್ಲಿ ಮಿಂಚುತ್ತಿದ್ದುದು ನನಗಿನ್ನೂ ಹಸಿರು ನೆನಪು. ನಮಗಿಂತ ಸೀನಿಯರ್ ಬ್ಯಾಚ್ನವರೂ ಮಿಂಚಿದವರೇ. ನಮ್ಮ ನಂತರದವರೂ ಆ ಪರಂಪರೆಯನ್ನು ಮುಂದುವರಿಸಿದವರೇ. ಅದೇ ಬಿಡಿಟಿ ಸ್ಪೆಷಾಲಿಟಿ. ಇಂತಿರುವ ಬಿಡಿಟಿ ಹುಡುಗರು ಇದೀಗ ‘ಪರಿ’ ಹೆಸರಿನ ಕನ್ನಡ ಸಿನೆಮಾ ನಿರ್ಮಿಸಿದ್ದಾರೆ. ಮೊನ್ನೆ ಶುಕ್ರವಾರ ಅದು ರಾಜ್ಯಾದ್ಯಂತ ಮತ್ತು ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಏಕಕಾಲಕ್ಕೆ ಬಿಡುಗಡೆಯೂ ಆಗಿದೆ. ಹೌದು, ಮೂಗಿನ ಮೇಲೆ ಬೆರಳಿಡಬೇಕಾದ ಸಂಗತಿಯೇ. ಎಂಜಿನಿಯರುಗಳೆಂದರೆ ರಸ್ತೆ-ಸೇತುವೆಗಳನ್ನು ಕಟ್ಟುವವರು; ರಾಕೆಟ್-ಉಪಗ್ರಹಗಳನ್ನು ವಿನ್ಯಾಸಗೊಳಿಸಿ ಉಡಾಯಿಸುವವರು. ತಂತ್ರಜ್ಞಾನ ಕ್ಷೇತ್ರದಲ್ಲಿ ತಪಗೈದು ಮಾನವ ಕುಲಕೋಟಿಗೆ ಅದರ ಫಲವನ್ನು ಉಣಿಸುವವರು. ಅಂಥವರು ಸಿನೆಮಾ ಕ್ಷೇತ್ರಕ್ಕೂ ಕಾಲಿಟ್ಟರೇ ಎಂದು ಅಚ್ಚರಿಯಾಗುವುದು ಸಹಜವೇ. ಆದರೆ ಆಗಲೇ ಹೇಳಿದೆನಲ್ಲ, ಬಿಡಿಟಿ ಹುಡುಗರು ಡಿಫರೆಂಟ್! ಅವರು ಸೃಜನಶೀಲರು, ಸಾಹಸ ಪ್ರವೃತ್ತಿಯವರು, ಡಬ್ಬದಿಂದ ಹೊರಗೂ (outside the box) ಯೋಚಿಸಬಲ್ಲವರು. ಈ ಪರಿಯ ಎಂಜಿನಿಯರುಗಳೂ ಇರುತ್ತಾರೆಯೇ ಎಂದೆನಿಸಿಕೊಳ್ಳುವವರು. ಚಿತ್ರನಿರ್ಮಾಣ ಬ್ಯಾನರ್ಗೆ ಹೆಸರಿಡುವಾಗಲೂ ‘ಬಿಡಿಟಿ ಅಭಿಯಂತರರ ಚಿತ್ರ’ ಎಂದೇ ಹೆಸರಿಟ್ಟು ಅಭಿಮಾನದ ಕಿಚ್ಚನ್ನು ಹೆಚ್ಚಿಸಿದವರು. ಪರಿ ಸಿನೆಮಾ ರೂಪುಗೊಂಡ ಪರಿಯನ್ನು, ವಿಶೇಷವಾಗಿ ಅದು ‘ಸರ್ವಂ ಬಿಡಿಟಿಮಯಂ’ ಹೇಗಾಯ್ತು ಎಂಬುದನ್ನು, ನಿಮ್ಮೊಂದಿಗೆ ಹಂಚಿಕೊಳ್ಳಲು ಇವತ್ತು ಸುಸಂದರ್ಭ. ಒಂದು ಫ್ಲಾಷ್ಬ್ಯಾಕ್. ಇಸವಿ ೨೦೦೬. ಅಮೆರಿಕದ ಬಾಲ್ಟಿಮೋರ್ನಲ್ಲಿ ೪ನೇ ‘ಅಕ್ಕ’ ವಿಶ್ವಕನ್ನಡ ಸಮ್ಮೇಳನ. ಆ ಸಂದರ್ಭದಲ್ಲಿ ಸ್ಮರಣಸಂಚಿಕೆ ಮತ್ತು ಸಾಹಿತ್ಯ ಚಟುವಟಿಕೆಗಳ ಉಸ್ತುವಾರಿ ವಹಿಸಿದ್ದ ಸಮಿತಿಯು ಹೊಸದೇನನ್ನಾದರೂ ಮಾಡಬೇಕೆಂದು ಯೋಚಿಸಿತು. ಅವರಿವರನ್ನು ಕಾಡಿಬೇಡಿ ಬರೆಸುವ ಕಥೆ, ಕವನ, ಪ್ರಬಂಧ, ಹನಿಗವನ ಮುಂತಾದ ಮಾಮೂಲಿ ಸರಕಿನ ಸ್ಮರಣಸಂಚಿಕೆ ಇದ್ದದ್ದೇ. ಅದರ ಹೊರತಾಗಿ ಚೊಚ್ಚಲ ಸಾಹಿತ್ಯಕೃತಿಯೊಂದು ಚಿಗುರುವುದಕ್ಕೆ ಸಮ್ಮೇಳನವು ವೇದಿಕೆಯಾಗಬೇಕೆಂಬುದು ಸಮಿತಿಯ ಆಶಯ. ಕನ್ನಡನಾಡಿನ ಉದಯೋನ್ಮುಖ ಲೇಖಕರನ್ನು ಪ್ರೋತ್ಸಾಹಿಸಲಿಕ್ಕಾಗಿ ಕಾದಂಬರಿ ಸ್ಪರ್ಧೆ ಏರ್ಪಡಿಸುವುದೆಂದು ನಿರ್ಧಾರ. ಅದನ್ನು ನಿರ್ವಹಿಸುವ ಸಂಪೂರ್ಣ ಜವಾಬ್ದಾರಿಯನ್ನು ಆಗಷ್ಟೇ ಅಮೆರಿಕದಿಂದ ತಾಯ್ನಾಡಿಗೆ ಮರಳಿದ್ದ ಎಸ್.ಕೆ.ಹರಿಹರೇಶ್ವರರಿಗೆ ವಹಿಸಲಾಯ್ತು. ರಾಜ್ಯಮಟ್ಟದ ಪತ್ರಿಕೆಗಳಲ್ಲಿ ಪ್ರಕಟಣೆ, ಹಸ್ತಪ್ರತಿಗಳ ಸ್ವೀಕಾರ, ಮೂವರು ತೀರ್ಪುಗಾರರಿಂದ ಪ್ರತ್ಯೇಕ ಮೌಲ್ಯಮಾಪನ- ಹರಿಯವರು ಕಾದಂಬರಿ ಸ್ಪರ್ಧೆಯನ್ನು ಅಚ್ಚುಕಟ್ಟಾಗಿ, ಅತ್ಯಂತ ಪಾರದರ್ಶಕವಾಗಿ, ದಕ್ಷತೆಯಿಂದ ನಿರ್ವಹಿಸಿದ ರೀತಿಯಂತೂ ಅದ್ಭುತ. ವಿಜಾಪುರ ಮೂಲದ ಸಂಪನ್ನ ಮುತಾಲಿಕ್ ಬರೆದ ಚೊಚ್ಚಲ ಕೃತಿ ‘ಭರದ್ವಾಜ’ಕ್ಕೆ ಪ್ರಥಮ ಬಹುಮಾನ. ಲೇಖಕನಿಗೆ ಬಾಲ್ಟಿಮೋರ್ ಸಮ್ಮೇಳನದ ವೇದಿಕೆಯಲ್ಲಿ ಪುರಸ್ಕಾರ, ಗೌರವ. ಕಾದಂಬರಿಯನ್ನು ಪುಸ್ತಕರೂಪದಲ್ಲಿ ಪ್ರಕಟಿಸಿ ಸಮ್ಮೇಳನಾರ್ಥಿಗಳಿಗೆಲ್ಲ ಉಚಿತವಾಗಿ ವಿತರಿಸಲು ಅಮೆರಿಕನ್ನಡಿಗರೊಬ್ಬರ ನೆರವು. ಸಮ್ಮೇಳನದ ಸ್ಮರಣಸಂಚಿಕೆಯ ರಕ್ಷಾಕವಚ ವಿನ್ಯಾಸಗೊಳಿಸಿದ್ದ ಜನಾರ್ಧನ ಸ್ವಾಮಿಯಿಂದಲೇ ಭರದ್ವಾಜ ಕೃತಿಗೂ ಮುಖಪುಟ ರಚನೆ. ಇಲ್ಲೊಂದು ಸ್ವಾರಸ್ಯಕರ ಸಂಗತಿ ನಡೆಯಿತು. ಕಾದಂಬರಿ ಸ್ಪರ್ಧೆಯನ್ನು ನಿರ್ವಹಿಸಿದ್ದ ಶಿಕಾರಿಪುರ ಹರಿಹರೇಶ್ವರ ಬಿಡಿಟಿ ಕಾಲೇಜಿನ ಹಳೆವಿದ್ಯಾರ್ಥಿ. ಐವತ್ತರ ದಶಕದಲ್ಲಿ ಕಾಲೇಜಿನ ಆರಂಭಿಕ ವರ್ಷಗಳಲ್ಲಿ ವಿದ್ಯಾರ್ಥಿಯಾಗಿದ್ದವರು, ನನಗಿಂತ ತುಂಬ ಹಿರಿಯರು. ಸಮ್ಮೇಳನದ ಸಾಹಿತ್ಯಸಮಿತಿ ಸದಸ್ಯನಾಗಿದ್ದ ನಾನೂ ಬಿಡಿಟಿ ಕಾಲೇಜಿನ ಹಳೆವಿದ್ಯಾರ್ಥಿ. ಕಾದಂಬರಿ ಸ್ಪರ್ಧೆಯಲ್ಲಿ ವಿಜೇತನಾದ ಸಂಪನ್ನ ಮುತಾಲಿಕ್ ಸಹ ಬಿಡಿಟಿ ಕಾಲೇಜಿನ ಹಳೆವಿದ್ಯಾರ್ಥಿ. ಸಂಪನ್ನ ಮತ್ತು ನಾನು ಸಹಪಾಠಿಗಳು, ದಾವಣಗೆರೆಯ ಕೃಷ್ಣಹಾಸ್ಟೆಲ್ನಲ್ಲಿ ಅಕ್ಕಪಕ್ಕದ ಕೊಠಡಿಯವರು. ಕಾದಂಬರಿ ಪುಸ್ತಕಕ್ಕೆ ಮುಖಪುಟ ರಚಿಸಿದ ಜನಾರ್ಧನ ಸ್ವಾಮಿ (ಈಗ ಚಿತ್ರದುರ್ಗ ಸಂಸದ, ಆಗಿನ್ನೂ ಕ್ಯಾಲಿಫೋರ್ನಿಯಾದಲ್ಲಿ ಸಾಫ್ಟ್ವೇರ್ ಎಂಜಿನಿಯರ್) ಕೂಡ ಬಿಡಿಟಿ ಹಳೆವಿದ್ಯಾರ್ಥಿ. ನನಗಿಂತ ಒಂದು ವರ್ಷ ಜ್ಯೂನಿಯರ್. ನೋಡಿ, ಅತ್ಯಂತ ಪಾರದರ್ಶಕವಾಗಿ ನಡೆದಿದ್ದ ಕಾದಂಬರಿ ಸ್ಪರ್ಧೆಯಲ್ಲಿ ಹೀಗೊಂದು ಅಚ್ಚರಿಯ ಕಾಕತಾಳೀಯ! ಭರದ್ವಾಜ ಕಾದಂಬರಿಯನ್ನು ಓದಿದವರೆಲ್ಲ ಅದು ಸಿನೆಮಾ ನಿರ್ಮಾಣಕ್ಕೆ ಹೇಳಿಮಾಡಿಸಿದ ಕಥೆಯಂತಿದೆಯೆಂದು ಆಗಲೇ ಅಭಿಪ್ರಾಯ ವ್ಯಕ್ತಪಡಿಸಿದ್ದರು. ದಾವಣಗೆರೆಯ ಡಿಸ್ಟಿಲರಿಯೊಂದರಲ್ಲಿ ಮ್ಯಾನೇಜರ್ ಹುದ್ದೆಯಲ್ಲಿದ್ದ ಸಂಪನ್ನ ಮುತಾಲಿಕ್ ಮದ್ಯತಯಾರಿ ಉದ್ಯಮದ ಸುತ್ತಲೇ ಹೆಣೆದ ಸುಂದರ ಕಥೆ. ಲಂಬಾಣಿ ತಾಂಡಾಗಳ ಸಂಪ್ರದಾಯಗಳು, ಗ್ರಾಮೀಣ ಪರಿಸರದ ಮುಗ್ಧ ಮನಸ್ಸುಗಳು ನಗರ ಜೀವನಶೈಲಿಯೊಂದಿಗೆ ಮುಖಾಮುಖಿಯಾದಾಗಿನ ಸಂಘರ್ಷಗಳು, ಅದರ ನಡುವೆಯೇ ಚಿಗುರಿಕೊಳ್ಳುವ ಪ್ರೇಮಕಥೆ- ಇದು ಕಾದಂಬರಿಯ ಹೂರಣ. ಇಸವಿ ೨೦೧೦, ಏಪ್ರಿಲ್ ತಿಂಗಳು. ಆಗಷ್ಟೇ ‘ಮಿರ್ಚಿ ಮ್ಯೂಸಿಕ್’ ಪ್ರಶಸ್ತಿ ಗಳಿಸಿದ್ದ ಸುಧೀರ್ ಅತ್ತಾವರ್ ಅವರನ್ನು ಅಭಿನಂದಿಸಲು ಬೆಂಗಳೂರಿನಲ್ಲಿ ಒಂದು ಸ್ನೇಹಕೂಟ ಏರ್ಪಾಡಾಗಿತ್ತು. ಅದರಲ್ಲಿ ಹೆಚ್ಚಿನವರು ಹದಿನೆಂಟು ವರ್ಷಗಳ ಹಿಂದೆ ದಾವಣಗೆರೆಯಲ್ಲಿ ಬಿಡಿಟಿ ಕಾಲೇಜಿನಲ್ಲಿ ಸುಧೀರ್ನ ಸಹಪಾಠಿಗಳಾಗಿದ್ದವರು. ಕನ್ನಡ ಚಲನಚಿತ್ರೋದ್ಯಮ ಮತ್ತು ಕಿರುತೆರೆಯಲ್ಲಿ ಯಶಸ್ಸಿನ ಒಂದೊಂದೇ ಮೆಟ್ಟಲೇರುತ್ತಿರುವ ಸುಧೀರ್ ಸಾಧನೆಯನ್ನು ಕಂಡು ಹೆಮ್ಮೆಪಟ್ಟವರು. ವಿದ್ಯಾರ್ಥಿದೆಸೆಯಿಂದಲೂ ನಟನೆ, ಏಕಪಾತ್ರಾಭಿನಯ, ರಂಗಭೂಮಿ, ನಾಟಕ ನಿರ್ದೇಶನ ಮತ್ತು ಚಿತ್ರೋದ್ಯಮದಲ್ಲೂ ಆಸಕ್ತಿ ಮೈಗೂಡಿಸಿಕೊಂಡಿದ್ದ ಸುಧೀರ್ ಪೂರ್ಣಪ್ರಮಾಣದಲ್ಲಿ ಚಿತ್ರನಿರ್ದೇಶಕನಾಗಿ ಹೊರಹೊಮ್ಮಬೇಕೆಂದು ಆ ಸ್ನೇಹಿತರೆಲ್ಲರ ಹೃದಯಪೂರ್ವಕ ಹಾರೈಕೆ, ಉತ್ತೇಜನ. ಬಿಡಿಟಿ ದಿನಗಳಿಂದಲೂ ಹಿರಿಯ ಸ್ನೇಹಿತನಾಗಿದ್ದ ಸಂಪನ್ನ ಮುತಾಲಿಕ್ನ ಪ್ರಶಸ್ತಿವಿಜೇತ ಕಾದಂಬರಿಯನ್ನೇ ಏಕೆ ಚಲನಚಿತ್ರವಾಗಿಸಬಾರದು ಎಂಬ ಆಲೋಚನೆ ಸುಧೀರ್ ಅತ್ತಾವರ್ ಮನಸ್ಸಿನಲ್ಲಿ ಮೊಳಕೆಯೊಡೆಯಿತು. ಇನ್ನೊಬ್ಬ ಸಹಪಾಠಿ ಪ್ರಾಣಸ್ನೇಹಿತ ಚಂದ್ರ ಸಿಂದೋಗಿ ಆ ಮೊಳಕೆಗೆ ನೀರೆರೆದು ಮತ್ತಷ್ಟು ಸಹಪಾಠಿಗಳನ್ನು ಚಿತ್ರನಿರ್ಮಾಣದಲ್ಲಿ ಕೈಜೋಡಿಸುವಂತೆ ಹುರಿದುಂಬಿಸಿದರು. ದೂರದ ಅಮೆರಿಕದಲ್ಲಿ ನೆಲೆಸಿದ್ದ ರಾಮಕೃಷ್ಣ ಭಟ್ ಮತ್ತು ಎಂ.ಸಿ.ಗೌಡ ಸಹ ತಮ್ಮ ಕೈಲಾದ ಸಹಾಯಕ್ಕೆ ಮುಂದಾದರು. ಭರದ್ವಾಜ ಕಾದಂಬರಿಯಾಧಾರಿತ ಚಲನಚಿತ್ರಕ್ಕೆ ‘ಪರಿ’ ಎಂದು ಚಿಕ್ಕ-ಚೊಕ್ಕ ಮುದ್ದಾದ ಹೆಸರಿಡುವ ತೀರ್ಮಾನವಾಯ್ತು. ‘ಬಿಡಿಟಿ ಅಭಿಯಂತರರ ಚಿತ್ರ’ ಬ್ಯಾನರ್ನಡಿಯಲ್ಲಿ ಮೊಟ್ಟಮೊದಲ ಸಿನೆಮಾ ಜನ್ಮತಾಳಿತು! ಸುಧೀರ್ ಅತ್ತಾವರ್ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಎಂ.ಎಸ್.ಸತ್ಯು ಗರಡಿಯಲ್ಲಿ ಪಳಗಿದವರು. ‘ಪರಿ’ ನಿರ್ದೇಶನಕ್ಕೆ ಸತ್ಯು ಅವರಿಂದ ಸರ್ವವಿಧದ ಸಹಕಾರ, ಮಾರ್ಗದರ್ಶನ. ಈಗಾಗಲೇ ‘ಇಜ್ಜೋಡು’ ಚಿತ್ರದ ಸಹಾಯಕ ನಿರ್ದೇಶಕನಾಗಿ, ‘ಸವಾರಿ’ ಹಾಡಿನ ಗೀತರಚನಕಾರನಾಗಿ ಯಶಸ್ಸು ಮತ್ತು ಜನಪ್ರಿಯತೆ ಗಳಿಸಿರುವ ಸುಧೀರ್ ಪ್ರತಿಭೆಗೆ ಸಾಣೆ ಹಿಡಿದಂತೆ ‘ಪರಿ’ ರೂಪುಗೊಂಡಿದೆ. ಬಿಡಿಟಿ ಅಭಿಯಂತರರ ಈ ಹೊಸ ಸಾಹಸ ನಿಮಗೆ ಇಷ್ಟವಾಗುವುದರಲ್ಲಿ ಸಂಶಯವೇ ಇಲ್ಲ. ಚಿತ್ರ ನೋಡಿ ನಿಮಗೆ ಖುಷಿಯಾದರೆ ಬಿಡಿಟಿ ಅಭಿಯಂತರರ ಖುಷಿ ಇಮ್ಮಡಿ. ಬಿಡಿಟಿ ಕಾಲೇಜಿನ ಸಾಂಸ್ಕೃತಿಕ ಪರಿಸರದಲ್ಲಿ ಒಂದು ಪರಂಪರಾಗತ ಘೋಷವಾಕ್ಯ ಇದೆ, ಸಣ್ಣಪುಟ್ಟ ಸ್ಪರ್ಧೆಗಳಲ್ಲಿನ ವಿಜಯದಿಂದ ಹಿಡಿದು ಅಭೂತಪೂರ್ವ ಸಾಧನೆಗಳನ್ನೂ ಬಿಡಿಟಿಗರೆಲ್ಲ ಒಟ್ಟಾಗಿ ಸಂಭ್ರಮಿಸುವ ಪರಿ. ಈಗ ‘ಪರಿ’ ಚಲನಚಿತ್ರ ಜಯಭೇರಿ ಬಾರಿಸಹೊರಟಿರುವ ಸಂದರ್ಭದಲ್ಲಿ ಬಿಡಿಟಿ ಕಾಲೇಜಿನಲ್ಲಷ್ಟೇ ಅಲ್ಲ, ಜಗತ್ತಿನೆಲ್ಲೆಡೆ ಈ ಘೋಷವಾಕ್ಯದ ಮೊಳಗು- ‘ಹೊಡೀ ಛಣ್ಛಣಾ ತಾಳಥೈಯತಕ ಧೂಂ!’ * * * [ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] "Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!Monday Apr 23, 2012
Amin Sayani Email Kahani
Monday Apr 23, 2012
Monday Apr 23, 2012
ದಿನಾಂಕ 22 ಎಪ್ರಿಲ್ 2012ರ ಸಂಚಿಕೆ...
ಅಮಿನ್ ಸಯಾನಿ ಇಮೇಲ್ ಕಹಾನಿ
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] * * * ಇಲ್ಲ, ಇದು ಕಹಾನಿ ಎನ್ನುವಷ್ಟು ದೊಡ್ಡ ಕಥೆಯೇನಲ್ಲ. ಸಯಾನಿ-ಕಹಾನಿ ಪ್ರಾಸ ಚೆನ್ನಾಗಿರುತ್ತೆ ಅಂತ ಹಾಗೆ ಟೈಟಲ್ ಕೊಟ್ಟಿದ್ದೇನೆ ಅಷ್ಟೇ. ಆದರೂ, ಅಮಿನ್ ಸಯಾನಿ ಅವರಿಂದ ಇಮೇಲ್ ಬಂದಿರುವುದಂತೂ ಹೌದು. ನನಗಲ್ಲ, ನನ್ನ ಸೋದರಮಾವನಿಗೆ. ದಶಕಗಳ ಹಿಂದೆ ಅಮಿನ್ ಸಯಾನಿಯ ಬಿನಾಕಾ ಗೀತ್ಮಾಲಾ ಮೋಡಿಗೆ ಪರವಶರಾಗಿದ್ದ ಕೋಟ್ಯಂತರ ಅಭಿಮಾನಿಗಳಲ್ಲಿ ಅವರು ‘ಊಪರ್ವಾಲೀ ಪೈದಾನ್’ನವರು. ಇವತ್ತಿಗೂ ಒಬ್ಬ ರೇಡಿಯೊ-ಬಫ್. ಇವತ್ತಿಗೂ ಅದೇ ಅಭಿಮಾನ. ಹಾಗಾಗಿ ಅಮಿನ್ ಸಯಾನಿಯ ಇಮೇಲ್ನಿಂದ ಏಕ್ದಂ ಖುಷಿ ಪಟ್ಟಿದ್ದಾರೆ. ನನಗೂ ಫಾರ್ವರ್ಡ್ ಮಾಡಿ ಖುಷಿಯನ್ನು ಹೆಚ್ಚಿಸಿದ್ದಾರೆ. ನಾನೀಗ ಅದೇ ಖುಷಿಯನ್ನು ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ. Share your joys ಅಂದರೆ ಹೀಗೆಯೇ ಅಲ್ವಾ? ಅಮಿನ್ ಸಯಾನಿ ಯಾಕೆ ನನ್ನ ಸೋದರಮಾವನಿಗೆ ಇಮೇಲ್ ಬರೆದರು? ಹಾಗಲ್ಲ, ‘ಸೋದರಮಾವ ಬರೆದಿದ್ದ ಇಮೇಲ್ಗೆ ಅಮಿನ್ ಸಯಾನಿ ಉತ್ತರಿಸಿದರು’ ಎಂದು ಹೇಳಿದರೆ ಸರಿಯಾಗುತ್ತದೆ. ಅಷ್ಟಕ್ಕೂ ನನ್ನ ಸೋದರಮಾವ ಆಗಲೀ, ಅವರು ಅಮಿನ್ ಸಯಾನಿಗೆ ಇಮೇಲ್ ಬರೆದದ್ದೇ ಆಗಲೀ ಇಲ್ಲಿ ಮುಖ್ಯವಲ್ಲ. ಕೋಟ್ಯಂತರ ಜನ ಕೇಳುಗರ ಪೈಕಿ ಯಃಕಶ್ಚಿತ್ ಒಬ್ಬರು ಆತ್ಮೀಯವಾಗಿ ಇಮೇಲ್ ಬರೆದದ್ದಕ್ಕೆ ಅಷ್ಟೇ ಆತ್ಮೀಯತೆಯಿಂದ ಅಮಿನ್ ಭಾಯಿ ಉತ್ತರಿಸಿದರಲ್ಲ ಅದೇ ಗ್ರೇಟ್ನೆಸ್ಸು. ಅದೂಏನು, ಹೊಗಳಿ ಅಟ್ಟಕ್ಕೇರಿಸಿದ್ದ ಪತ್ರವಲ್ಲ, ಯಾವುದೋ ಒಂದು ಹಳೇ ಚಿತ್ರಗೀತೆಯನ್ನು ಅವರ ನೆನಪಿಗೆ ತರುವ ಉದ್ದೇಶದಿಂದ ಬರೆದಿದ್ದ ಒಂದು ಸಾಮಾನ್ಯ ಪತ್ರ. ಅದನ್ನು ಸ್ವೀಕರಿಸಿ ಪ್ರಾಮಾಣಿಕವಾಗಿ ಪ್ರೀತಿಯಿಂದ ಉತ್ತರ ಬರೆದ ಅಮಿನ್ ಸಯಾನಿ ಎಂಬ ಗ್ರೇಟ್ ವ್ಯಕ್ತಿಗೆ, ಆ ಉತ್ತರದಲ್ಲಿ ಪ್ರಕಟಗೊಂಡ ಅವರ ಡೌನ್-ಟು-ಅರ್ತ್ ವ್ಯಕ್ತಿತ್ವಕ್ಕೆ ತಲೆಬಾಗಲೇಬೇಕು. ಪತ್ರ ಅಥವಾ ಉತ್ತರ ಯಾರು ಬೇಕಾದರೂ ಬರೆಯಬಹುದು. ಆದರೆ ದೊಡ್ಡಸ್ತಿಕೆಯ ಸೋಗು ತೋರದೆ ಅಪರಿಚಿತರನ್ನೂ ಆತ್ಮೀಯತೆಯಿಂದ ನೋಡುವುದು ಕೆಲವರಷ್ಟೇ. ಅಮಿನ್ ಭಾಯಿ ಅಂಥವಲ್ಲೊಬ್ಬರು ಎಂದು ಸಾಬೀತಾದದ್ದು ಈ ಇಮೇಲ್ ವಿನಿಮಯದ ಸಾರಾಂಶ. ನನ್ನ ಸೋದರಮಾವ ಬರೆದ ಇಮೇಲ್ ಹೀಗಿತ್ತು (ಹಿಂದಿಯಲ್ಲಿ ಬರೆದಿದ್ದರು, ಇಲ್ಲಿ ಕನ್ನಡ ಅನುವಾದ ಕೊಡುತ್ತಿದ್ದೇನೆ): ‘ಅಮಿನ್ ಸಯಾನಿಜೀ, ಮೊನ್ನೆ ಸಂಗೀತ್ಕೆ ಸಿತಾರೋಂಕಿ ಮೆಹಫಿಲ್ ಕಾರ್ಯಕ್ರಮ ಖ್ಯಾತ ಚಿತ್ರಸಾಹಿತಿ ಎಸ್.ಎಚ್.ಬಿಹಾರಿ ಮೇಲೆ ಪ್ರಸ್ತುತಪಡಿಸಿದ್ದಿರಷ್ಟೆ? ಚೆನ್ನಾಗಿತ್ತು. ಎಸ್.ಎಚ್.ಬಿಹಾರಿಯವರು ಕೊನೇ ದಿನಗಳಲ್ಲಿ ಸಂಗೀತ ನಿರ್ದೇಶಕ ಜೋಡಿ ಶಂಕರ್-ಜೈಕಿಶನ್ಗೂ ಹಾಡುಗಳನ್ನು ಬರೆಯುತ್ತಿದ್ದರು. ಜಾನೆ ಅನ್ಜಾನೆ ಚಿತ್ರದ ಛಮ್ ಛಮ್ ಬಾಜೆರೇ ಪಾಯಲಿಯಾ ತುಂಬ ಜನಪ್ರಿಯವಾಗಿತ್ತು. ಇಂತು ನಿಮ್ಮ ಅಭಿಮಾನಿ- ಚಿದಂಬರ ಕಾಕತ್ಕರ್; ಮಂಗಳೂರು, ಕರ್ನಾಟಕ.’ ಹಳೇ ಚಿತ್ರಗೀತೆಗಳ ವಿಚಾರಕ್ಕೆ ಬಂದರೆ ನನ್ನ ಸೋದರಮಾವ ಮಾಹಿತಿಯ ಕಣಜ. ನಿಖರ ಮಾಹಿತಿಯನ್ನು ಒದಗಿಸುವ ದೃಷ್ಟಿಯಿಂದಲೇ ಅವರು ಅಮಿನ್ ಸಯಾನಿಗೆ ಪತ್ರ ಬರೆದಿದ್ದರು. ಅದೇನೂ ಅಂಥ ಉತ್ತರಾಕಾಂಕ್ಷಿ ಪತ್ರ ಅಲ್ಲವೇಅಲ್ಲ. ಆದರೆ ಅಮಿನ್ ಸಯಾನಿ ಆಪ್ತತೆಯಿಂದ ಉತ್ತರಿಸಿದರು (ಅವರ ಹಿಂದಿ ಆವೃತ್ತಿಯನ್ನೂ, ನನ್ನ ಕನ್ನಡ ಅನುವಾದವನ್ನೂ ಕೊಡುತ್ತಿದ್ದೇನೆ): ‘ಚಿದಂಬರ್ ಭಾಯೀ, ಅರೆರೆ! ಛಮ್ ಛಮ್ ಬಾಜೆ ಪಾಯಲಿಯಾ ತೊ ಮೈಂ ಭೂಲ್ಹೀ ಗಯಾ! ಮಾಫ್ ಕರ್ನಾ. ಖೈರ್, ಇತ್ನೇ ಬಡೇ ಕಾಮ್ಮೇ ಕುಛ್ ಭೂಲೆ ತೊ ಹೋಹೀ ಜಾತೇ ಹೈಂ. ಅಬ್ ಮೈಂ 79 ಸಾಲ್ಕಾ ಹೋಗಯಾ ಹೂಂನ? - ಖುಷ್ ರಹೋ, ಅಮಿನ್ ಸಯಾನಿ.’ (ಅರೆರೆ! ಛಮ್ ಛಮ್ ಬಾಜೆ ಪಾಯಲಿಯಾ ಗೀತೆಯನ್ನು ನಾನು ಮರೆತೇಬಿಟ್ಟಿದ್ದೆ. ನನ್ನನ್ನು ಕ್ಷಮಿಸಿ. ಎಷ್ಟೆಂದರೂ ಇಂಥ ದೊಡ್ಡದೊಡ್ಡ ಕೆಲಸಗಳಲ್ಲಿ ಕೆಲವು ಮರೆವುಗಳು ಆಗೇಆಗುತ್ತವಲ್ಲ? ಅಲ್ಲದೇ ನನಗೂ ಈಗ 79 ವರ್ಷ ವಯಸ್ಸಾಗಿದೆ. ಇರಲಿ, ಖುಷಿಯಿಂದಿರಿ. ಅಮಿನ್ ಸಯಾನಿ). ಬಿನಾಕಾ ಗೀತ್ಮಾಲಾದಲ್ಲಿ ಜೇನಿನಂಥ ಮಧುರ ಕಂಠದಿಂದ ‘ಬೆಹ್ನೋ ಔರ್ ಭಾಯಿಯೋಂ...’ ಎನ್ನುತ್ತಿದ್ದ ಅಮಿನ್ ಸಯಾನಿ ಆ ಮಾತನ್ನು ಆರ್ಟಿಫಿಶಿಯಲ್ ಆಗಿ ತೋರ್ಪಡಿಕೆಗಾಗಿ ಹೇಳುತ್ತಿದ್ದದ್ದಲ್ಲ ಎಂದಾಯ್ತಲ್ಲ! ಜನಪ್ರಿಯತೆಯ ಉತ್ತುಂಗಕ್ಕೇರಿದ್ದ ವ್ಯಕ್ತಿ ಯಾವೊಂದು ಅಹಂ ಇಲ್ಲದೆ ಇಷ್ಟು ನಿಸ್ಪೃಹ ಮನಸ್ಸಿನಿಂದ, 79 ವರ್ಷ ವಯಸ್ಸಾಗಿದ್ದರೂ ಪುಟ್ಟ ಮಗುವಿನ ನಿರ್ಮಲ ಹೃದಯದಿಂದ, ಚಿರಪರಿಚಿತ ಚಡ್ಡಿದೋಸ್ತಿಯೊಬ್ಬ ಚಹ ಕುಡಿಯುತ್ತ ಎದುರು ಕುಳಿತು ಮಾತನಾಡುತ್ತಿದ್ದಾನೇನೋ ಎನಿಸುವಂತೆ, ಈರೀತಿ ಉತ್ತರ ಬರೆದರೆ ಯಾರಿಗೇ ಆದರೂ ಖುಷಿಯಾಗದೇ ಇದ್ದೀತೇ? ನನ್ನ ಸೋದರಮಾವನ ಬಳಿ ಇಂಥದೇ ಇನ್ನೂ ಒಂದು ಹೃದಯಸ್ಪರ್ಶಿ ಅನುಭವವೂ ಇದೆ. ಅದು, ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರೊಂದಿಗಿನ ಇಮೇಲ್ ವಿನಿಮಯ. ಅದೂ ಹೀಗೆಯೇ, ಹಳೇ ಚಿತ್ರಗೀತೆಗಳಿಗೆ ಸಂಬಂಧಿಸಿದಂತೆ ಕೆಲವು ನಿಖರ ಮಾಹಿತಿ ಬರೆದು ಕಳಿಸಿದ್ದಾಗ ಎಸ್ಪಿಬಿ ಅತ್ಯಂತ ವಿಧೇಯತೆಯಿಂದ ಉತ್ತರಿಸಿದ್ದ ರೀತಿ. ಆ ಪತ್ರವ್ಯವಹಾರದ ಸಾರಾಂಶವನ್ನೂ ಇಲ್ಲಿ ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ (ಇಂಗ್ಲಿಷ್ನಲ್ಲಿದ್ದದ್ದನ್ನು ಕನ್ನಡೀಕರಿಸಿದ್ದೇನೆ): ‘ಮಾನ್ಯರೇ, ಎದೆ ತುಂಬಿ ಹಾಡಿದೆನು ಕಾರ್ಯಕ್ರಮದ ಲಕ್ಷೋಪಲಕ್ಷ ಅಭಿಮಾನಿಗಳಲ್ಲಿ ನಾನೂ ಒಬ್ಬ. ಇತ್ತೀಚಿನ ಸಂಚಿಕೆಗಳ ನಿರೂಪಣೆಯಲ್ಲಿ ನುಸುಳಿದ್ದ ಕೆಲವು ತಪ್ಪುಗಳನ್ನು ನಿಮ್ಮ ಗಮನಕ್ಕೆ ತರಬಯಸುತ್ತೇನೆ. 1. ಮಲ್ಲಮ್ಮನ ಪವಾಡ ಚಿತ್ರಕ್ಕಾಗಿ ಶರಣೆಂಬೆ ನಾ ಶಶಿಭೂಷಣ ಹಾಡನ್ನು ಹಾಡಿದವರು ಪಿ.ಸುಶೀಲಾ. ನೀವೆಂದಂತೆ ಎಸ್.ಜಾನಕಿ ಅಲ್ಲ. 2. ಎಮ್ಮೆ ತಮ್ಮಣ್ಣ ಚಿತ್ರದಲ್ಲಿ ಕೊಳಲನೂದಿ ಕುಣಿವ ಪ್ರಿಯನೇ ಗೀತೆಯನ್ನು ಹಾಡಿದ್ದು ಪಿ.ಬಿ.ಶ್ರೀನಿವಾಸ್ ಮತ್ತು ಬೆಂಗಳೂರು ಲತಾ. ನೀವು ಪಿ.ಸುಶೀಲಾ ಎಂದಿದ್ರಿ. 3. ಈ ಚಂದದ ಮನೆಯಲ್ಲಿ ಶ್ರೀಗಂಧದ ಗುಡಿಯಲ್ಲಿ (ಚಿತ್ರ: ಕಪ್ಪು ಬಿಳುಪು) ಹಾಡಿದವರು ಬಿ.ವಸಂತಾ. ನೀವೆಂದಂತೆ ಪಿ.ಸುಶೀಲಾ ಅಲ್ಲ. ಇದನ್ನು ನಾನು ತಪ್ಪು ತೋರಿಸುವ ದೃಷ್ಟಿಯಿಂದಲ್ಲ ಹೇಳ್ತಿರೋದು. ಕಲಾವಿದರಿಗೆ ಕರೆಕ್ಟಾಗಿ ಕ್ರೆಡಿಟ್ ಸಲ್ಲಬೇಕು ಎಂದು ನನ್ನ ಅಭಿಪ್ರಾಯ. ಅದಕ್ಕೋಸ್ಕರ ತಿಳಿಸುತ್ತಿದ್ದೇನೆ’ ಎಂದು ನನ್ನ ಸೋದರಮಾವ ಬರೆದಿದ್ದರು. ಅವರ ಇಮೇಲ್ಅನ್ನು ಬ್ಲ್ಯಾಕ್ಬೆರ್ರಿಯಲ್ಲೇ ಓದಿ ತತ್ಕ್ಷಣ ಉತ್ತರಿಸಿದ್ದರು ಎಸ್ಪಿಬಿ. ಅವರ ಉತ್ತರ ಹೀಗಿತ್ತು: ‘ಸರ್, ತಪ್ಪೊಪ್ಪುಗಳಿಗಾಗಿ ಧನ್ಯವಾದಗಳು. ಎದೆ ತುಂಬಿ ಹಾಡಿದೆನು ಕಾರ್ಯಕ್ರಮ ನಿರ್ಮಾಣದಲ್ಲಿ ಮಾಹಿತಿ ಕ್ರೋಡೀಕರಿಸಲಿಕ್ಕೆಂದೇ ಒಂದು ವಿಭಾಗವಿದೆ. ನನಗೆ ಅಲ್ಲಿಂದ ಈಎಲ್ಲ ಮಾಹಿತಿ ಸರಬರಾಜಾಗುತ್ತದೆ. ನಿಮ್ಮ ಪತ್ರವನ್ನು ಅವರ ಗಮನಕ್ಕೆ ತರುತ್ತೇನೆ, ಮುಂದೆ ಈರೀತಿ ತಪ್ಪುಗಳಾಗದಂತೆ ನೋಡಿಕೊಳ್ಳುತ್ತೇವೆ. ನಿಮ್ಮ ಕಾಳಜಿಗಾಗಿ ಮತ್ತೊಮ್ಮೆ ಧನ್ಯವಾದಗಳು. -ಎಸ್ಪಿಬಿ.’ ಲಕ್ಷಾಂತರ ವೀಕ್ಷಕರಲ್ಲಿ ಯ:ಕಶ್ಚಿತ್ ಒಬ್ಬನ ಇಮೇಲ್ಗೆ ಐದೇ ನಿಮಿಷಗಳೊಳಗೆ ಎಸ್ಪಿಬಿ ಸ್ಪಂದಿಸಿದ್ದರು. ಸರ್ ಎಂದು ಗೌರವದ ಸಂಬೋಧನೆ ಬೇರೆ! ಅದನ್ನು ತುಂಬಾ ಮೆಚ್ಚಿಕೊಂಡಿದ್ದ ನನ್ನ ಸೋದರಮಾವ ‘ಸರಳತೆ, ಪ್ರಾಮಾಣಿಕತೆ, ಬದ್ಧತೆಗಳ ಎಸ್ಪಿಬಿ’ ಎಂದು ಉದಯವಾಣಿಯಲ್ಲಿ ಒಂದು ಪ್ರಶಂಸಾಪತ್ರ ಪ್ರಕಟಿಸಿದ್ದರು. ಮೂರನೆಯ ಉದಾಹರಣೆಯನ್ನು ಸೇರಿಸಿ ಮುಗಿಸುತ್ತೇನೆ. ೧೯೮೪ರ ಅಕ್ಟೋಬರ್ ೩೧ರಂದು ಆಗಿನ ಪ್ರಧಾನಿ ಇಂದಿರಾ ಗಾಂಧಿಯವರು ಹಾಡುಹಗಲಲ್ಲೇ ಹಂತಕರ ಗುಂಡೇಟಿಗೆ ಬಲಿಯಾದರಷ್ಟೆ? ಆಮೇಲಿನ ದಿನಗಳಲ್ಲಿ (ಅವು ಇಮೇಲಿನ ದಿನಗಳಲ್ಲ) ರಾಜೀವ್ ಗಾಂಧಿ ಪ್ರಧಾನಿಯಾದರು. ಇಂದಿರಾ ಗಾಂಧಿಯವರ ನಿಧನಕ್ಕೆ ಶೋಕ ವ್ಯಕ್ತಪಡಿಸುತ್ತ ರಾಜೀವ ಗಾಂಧಿಯವರಿಗೆ ಸಾಂತ್ವನದ ಪತ್ರವೊಂದನ್ನು ನನ್ನ ಅಣ್ಣ ಬರೆದಿದ್ದರು. ನನ್ನಣ್ಣನೇನೂ ಕಾಂಗ್ರೆಸ್ ಕಾರ್ಯಕರ್ತನಲ್ಲ, ಪುಢಾರಿಯಲ್ಲ. ರಾಜಕೀಯದ ಸೋಂಕು ಇದ್ದವರೂ ಅಲ್ಲ. ಹೀಗೇ ಒಬ್ಬ ಸಾಮಾನ್ಯ ಭಾರತೀಯ ಪ್ರಜೆಯಾಗಿ ಪ್ರಧಾನಮಂತ್ರಿಗೆ ಸಾಂತ್ವನ ತಿಳಿಸುತ್ತ ಪತ್ರಿಸಿದ್ದರು. ಸುಮಾರು ಒಂದು ತಿಂಗಳು ಕಳೆದಿರಬಹುದೇನೊ, ಹೊಸದಿಲ್ಲಿಯ ಪ್ರಧಾನಿ ಕಚೇರಿಯಿಂದ ನಮ್ಮನೆಯ ವಿಳಾಸಕ್ಕೆ ಒಂದು ಅಂಚೆ ಲಕೋಟೆ ಬಂತು! ನನ್ನಣ್ಣ ಬರೆದಿದ್ದ ಸಾಂತ್ವನ ಪತ್ರಕ್ಕೆ ಕೃತಜ್ಞತಾಪೂರ್ವಕ ಉತ್ತರ, ರಾಜೀವ್ ಗಾಂಧಿಯವರ ಹಸ್ತಾಕ್ಷರದ ಸಹಿಯೊಂದಿಗೆ! ನನ್ನಣ್ಣ ಬರೆದಿದ್ದ ಪತ್ರವನ್ನು ರಾಜೀವ ಗಾಂಧಿಯವರೇ ಓದಿದರೋ, ಸಾಂತ್ವನ ತಿಳಿಸಿದವರಿಗೆಲ್ಲ ಕೃತಜ್ಞತೆಯ ಮುದ್ರಿತ ಪತ್ರಗಳನ್ನು ತಯಾರಿಸಿದ್ದರಲ್ಲಿ ನನ್ನಣ್ಣನಿಗೂ ಒಂದು ಪ್ರತಿಯನ್ನು ಪ್ರಧಾನಿ ಕಚೇರಿಯ ಸಿಬ್ಬಂದಿ ಕಳಿಸಿದರೋ ಗೊತ್ತಿಲ್ಲ. ಅಂತೂ ಅಲ್ಲೊಂದು ಪತ್ರೋತ್ತರ ಪ್ರಕ್ರಿಯೆ ಖಂಡಿತವಾಗಿಯೂ ಜರುಗಿತ್ತು. ಈ ಮೂರು ಉದಾಹರಣೆಗಳನ್ನು ಆಯ್ದುಕೊಂಡದ್ದು, ಪತ್ರ ಬರೆದವರ ಗ್ರೇಟ್ನೆಸ್ಸನ್ನು ಗುರುತಿಸಲಿಕ್ಕಲ್ಲ. ಆ ಪತ್ರಗಳಲ್ಲಿ ಗಹನವಾದ ವಿಚಾರಗಳಿದ್ದವು ಎಂದು ಪ್ರತಿಪಾದಿಸಲಿಕ್ಕೂ ಅಲ್ಲ. ಪ್ರಾಮಾಣಿಕವಾಗಿ, ಆತ್ಮೀಯವಾಗಿ ಬರೆದ ಪತ್ರಕ್ಕೆ ಅಷ್ಟೇ ಆತ್ಮೀಯತೆಯಿಂದ ಸ್ಪಂದಿಸುವ ಪ್ರಕ್ರಿಯೆಯನ್ನು ಹೈಲೈಟ್ ಮಾಡುವುದಕ್ಕೆ. ಆದರೂ ಮನಸ್ಸಿನಲ್ಲಿ ಪಂಜೆ ಮಂಗೇಶರಾಯರ ‘ಏರುವನು ರವಿ ಏರುವನು ಬಾನೊಳು ಸಣ್ಣಗೆ ತೋರುವನು... ಏರಿದವನು ಚಿಕ್ಕವನಿರಬೇಕೆಲೆ ಎಂಬಾ ಮಾತನು ಸಾರುವನು...’ ಸಾಲುಗಳು ಗುಂಯ್ಗುಡುತ್ತಿರುವುದು ನಿಜ. * * * [ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] "Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!Saturday Mar 31, 2012
Midukuvudu Endarenu
Saturday Mar 31, 2012
Saturday Mar 31, 2012
ದಿನಾಂಕ 1 ಎಪ್ರಿಲ್ 2012ರ ಸಂಚಿಕೆ...
ಮಿಡುಕುವುದು ಎಂದರೇನು?
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] * * * ಅರ್ಘ್ಯವ ಕೊಡುತಿಹ ಸಮಯವ ನೋಡಿ ಗಣಪತಿ ಕರೆದನು ರಾವಣನ... ಬರಲಾಗದೆ ರಾವಣ ಮಿಡುಕಿದನು... ಲಿಂಗವು ಧರೆಯನು ಸೇರಿತು... ನೀವು ಗೋಕರ್ಣದ ಪುರಾಣ ಕಥನವನ್ನು ಆಲಿಸಿ ಜೀವನ ಪಾವನಗೊಳಿಸಿದ್ದೀರಾದರೆ ನಿಮಗೆ ಈ ಸಾಲುಗಳು ನೆನಪಿರುತ್ತವೆ. ಎಪ್ಪತ್ತು-ಎಂಬತ್ತರ ದಶಕದಲ್ಲಿ ಬಂದ ಇವೆಲ್ಲ ಕೆಲವು ಎವರ್ಗ್ರೀನ್ ಭಕ್ತಿಗೀತೆಗಳು, ಲಾವಣಿಯ ರೂಪದಲ್ಲಿ ಕಥೆ ಹೇಳುವಂಥವು, ಆವಾಗಿನ ಚಿತ್ರಗೀತೆಗಳಂತೆಯೇ ಪ್ರಸಿದ್ಧವಾಗಿ ಜನಮಾನಸದಲ್ಲಿ ನೆಲೆನಿಂತವುಗಳು. ಮೇಲೆ ಉಲ್ಲೇಖಿಸಿದ ಗೋಕರ್ಣ ಪುರಾಣ ಕಥನ, ವಿನಾಯಕ ಚೌತಿಯಂದು ಕೇಳಿಬರುವ ಸ್ಯಮಂತಕೋಪಾಖ್ಯಾನ ಗೀತೆ, ಅದೇಥರದ ಮತ್ತೂ ಕೆಲವಾರು ಒಳ್ಳೊಳ್ಳೆಯ ಹಾಡುಗಳು. ಅವೆಲ್ಲವನ್ನು ಅಜರಾಮರವಾಗಿಸಿದ್ದು ರೇಡಿಯೊ. ಅದಕ್ಕಿಂತಲೂ ಹೆಚ್ಚಾಗಿ ದೇವಸ್ಥಾನಗಳಲ್ಲಿ, ಸಿನೆಮಾ ಟೆಂಟ್ಗಳಲ್ಲಿ ಮತ್ತು ಸಮಾರಂಭಗಳ ಚಪ್ಪರಗಳಲ್ಲಿ ಮೊಳಗುವ ಲೌಡ್ಸ್ಪೀಕರ್ಗಳು. ಈಗಲೂ ಇಂಥ ಹಾಡುಗಳನ್ನು ಕೇಳುವುದೆಂದರೆ, ಜೊತೆಯಲ್ಲೇ ಗುನುಗುವುದೆಂದರೆ, ಹಾಯೆನಿಸುವ ವಿಶಿಷ್ಟ ಅನುಭವ. ಒಂಥರದ ನೊಸ್ಟಾಲ್ಜಿಕ್ ರೋಮಾಂಚನ. ಅದಕ್ಕೋಸ್ಕರವೇ ನನ್ನ ಐಫೋನ್ನ ಸಂಗೀತ ಉಗ್ರಾಣದಲ್ಲೂ ಇವಕ್ಕೆ ಒಂದಿಷ್ಟು ಗಿಗಾಬೈಟ್ಗಳ ಮೀಸಲು ಸ್ಥಾನ. ಐಫೋನ್/ಐಪಾಡ್ ಅಥವಾ ಈಗ ಸ್ವಲ್ಪ ಹಳೇ ಫ್ಯಾಷನ್ ಎನಿಸಿರುವ ವಾಕ್ಮನ್ನೇ ಆಗಲಿ, ‘ತಲೆಯಾಲಿಕೆ’ (ಹೆಡ್ಫೋನ್ಸ್) ಸಿಕ್ಕಿಸಿಕೊಂಡು ಹಾಡು ಕೇಳಿದರೆ ಒಂದು ವಿಶೇಷ ಫಾಯಿದೆ ಇದೆ. ಅದೇನೆಂದರೆ ಹಾಡಿನ ಸಾಹಿತ್ಯದ ಒಂದೊಂದು ಪದ, ಒಂದೊಂದು ಅಕ್ಷರವೂ ಸ್ಪಷ್ಟವಾಗಿ ತಲೆಯೊಳಗೆ ಹೊಕ್ಕುತ್ತದೆ. ಕೆಲವೊಮ್ಮೆ ಯಾವುದೋ ಒಂದು ಪದ ತಲೆಯೊಳಗೆ ಹೊಕ್ಕಿದ್ದು ಅಲ್ಲಿಯೇ ಗುಂಗಿಹುಳ ಆಗಿಬಿಡುತ್ತದೆ. ಮೊನ್ನೆ ಒಂದುದಿನ ಅದೇ ಆಯ್ತು. ಹೆಡ್ಫೋನ್ಸ್ ಹಾಕ್ಕೊಂಡು ‘ಇದು ಗೋಕರ್ಣದ ಪುರಾಣ ಕಥನ... ಆಲಿಸೆ ಜೀವನ ಪಾವನ...’ ಆಲಿಸ್ತಾ ಇದ್ದೆನಾ, ಜೀವನವೇನೋ ಪಾವನವಾಯ್ತು ಆದರೆ ಹಾಡಿನಲ್ಲಿದ್ದ ‘ಮಿಡುಕಿದನು’ ಎಂಬ ಪದ ಮಾತ್ರ ಜೀವಸಮೇತ ತಲೆಯಲ್ಲುಳಿಯಿತು! ಅರ್ಥಾತ್ ಯಾಕೋ ವಿಶೇಷವಾಗಿ ಕಂಡಿತು. ಹಾಡಿನಲ್ಲಿ ಅದೇನೂ ಅರ್ಥವಾಗದಂಥ ಪದವಲ್ಲ. ಸಂದರ್ಭ ಸನ್ನಿವೇಶದಿಂದಲೇ ಅರ್ಥ ಮಾಡಿಕೊಳ್ಳಬಹುದು. ವಟುರೂಪಿ ಗಣಪನ ಕೈಯಲ್ಲಿ ಆತ್ಮಲಿಂಗವನ್ನು ಕೊಟ್ಟಿಟ್ಟು ರಾವಣೇಶ್ವರ ಸಂಧ್ಯಾವಂದನೆಗೆ ಕೂತಿದ್ದಾನೆ. ಗಾಯತ್ರೀಮಂತ್ರ ಉಚ್ಚರಿಸುತ್ತ ಅರ್ಘ್ಯವನ್ನು ಸಮರ್ಪಿಸುವ ವೇಳೆಗೆ ಸರಿಯಾಗಿ ಗಣಪ ಅವನನ್ನು ಕರೆದಿದ್ದಾನೆ. ಆಫ್ಕೋರ್ಸ್, ಗಣಪನದು ಪೂರ್ವನಿಯೋಜಿತ ಕೃತ್ಯ, ಆದರೆ ರಾವಣ ತಬ್ಬಿಬ್ಬು. ಸಂಧ್ಯಾವಂದನೆ ಅರ್ಧದಲ್ಲಿ ಬಿಟ್ಟುಬರುವಂತಿಲ್ಲ, ಬರದೇ ಇದ್ದರೆ ಕಿಲಾಡಿ ಗಣಪ ಆತ್ಮಲಿಂಗವನ್ನು ನೆಲದ ಮೇಲಿಡದೆ ಬಿಡುವುದಿಲ್ಲ. ಅಂಥದೊಂದು ಸಂದಿಗ್ಧ ಪರಿಸ್ಥಿತಿಯಲ್ಲಿ ರಾವಣ ‘ಮಿಡುಕಿದನು’! ಅಂದರೆ, ಚಡಪಡಿಸಿದನು, ಪೇಚಾಡಿದನು, ಕೈಕೈ ಹಿಸುಕಿಕೊಂಡನು ಎಂದು ಅರ್ಥೈಸಬಹುದು. ನಾವಾಗಿದ್ರೆ ‘ಅಯ್ಯೋ ರಾಮಾ’ ಎಂದೂ ಹೇಳುತ್ತಿದ್ದೆವೋ ಏನೋ ಆದರೆ ರಾವಣ ಹಾಗೆ ಹೇಳಿರಲಿಕ್ಕಿಲ್ಲ ಎಂದುಕೊಳ್ಳೋಣ. ಆಗಿನ್ನೂ ಅವನಿಗೆ ರಾಮನ ಪರಿಚಯವೂ ಆಗಿರಲಿಲ್ಲವಲ್ಲ! ಸರಿ, ಮಿಡುಕಿದನು ಪದ ಗುಂಗಿಹುಳವಾಗಿ ತಲೆಯೊಳಗೆ ತಳವೂರಿತು ಎಂದೆನಲ್ಲಾ, ಅದನ್ನು ಅಲ್ಲಿಂದ ಹೊರದಬ್ಬುವುದು ಹೇಗೆ? ಸೂಕ್ತವಾಗಿ ಸನ್ಮಾನಿಸಿ ಬೀಳ್ಕೊಡುವುದು ಹೇಗೆ? ಈ ವಿಧೇಯ ನಿಮ್ಮವ (ಯುವರ್ಸ್ ಟ್ರೂಲಿ) ಅದಕ್ಕೇನು ಮಾಡಿದನೆಂದರೆ ನಿಘಂಟಿನಲ್ಲಿ ಅರ್ಥ ಹುಡುಕಿದನು! ಹಾಗೆ ಮಾಡುವಾಗ ಸ್ವಲ್ಪ ದುಡುಕಿದನು? ಇಲ್ಲ, ಸುಮ್ನೆ ಹೇಳ್ದೆ. ಮಿಡುಕಿದನು ಪದಕ್ಕೆ ಪ್ರಾಸಜೋಡಿಯಾಗಿ ಪರಿಚಿತ ಪದಗಳು ಇವೆಯಂತ ತಿಳಿಸಲಿಕ್ಕೆ ಅಷ್ಟೇ. ಜಿ.ವೆಂಕಟಸುಬ್ಬಯ್ಯನವರ ಪ್ರಿಸಂ ಕನ್ನಡ ನಿಘಂಟು ಈಗ ಅಂತರ್ಜಾಲ ಆವೃತ್ತಿಯಲ್ಲೂ ಇದೆ, ಥ್ಯಾಂಕ್ಸ್ ಟು ‘ಬರಹ’ ಶೇಷಾದ್ರಿವಾಸು. ಅದರಲ್ಲಿ ಮಿಡುಕು ಎಂಬ ಪದಕ್ಕೆ ಅರ್ಥ ಹುಡುಕಿದಾಗ ಒಂದೆರಡಲ್ಲ ಬರೋಬ್ಬರಿ ಇಪ್ಪತ್ತೆಂಟು ಅರ್ಥ(ಸಮಾನಾರ್ಥಕ ಪದ)ಗಳನ್ನು ಕೊಟ್ಟಿದ್ದಾರೆ! ಅಲುಗು, ಕದಲು, ಮಿಸುಕು, ಕಂಪಿಸು, ನಡುಗು, ಬೆಚ್ಚಿಬೀಳು, ಚಂಚಲವಾಗು, ಅಸ್ಥಿರಗೊಳ್ಳು, ಆತುರಪಡು, ತವಕಿಸು, ಕೊರಗು, ಪರಿತಪಿಸು, ಚಡಪಡಿಸು, ಒದ್ದಾಡು, ಪೇಚಾಡು, ಪಶ್ಚಾತ್ತಾಪಪಡು... ವಗೈರಾವಗೈರಾ. ಇವೆಲ್ಲ ನಮಗೆ ಪರಿಚಿತ ಪದಗಳೇ. ನಮ್ಮ ಮಾತಿನಲ್ಲಿ ಬರಹದಲ್ಲಿ ವಿಪುಲವಾಗಿ ಬಳಕೆಯಾಗುವಂಥವೇ. ಹಾಗೆ ನೋಡಿದರೆ ಇವೆಲ್ಲಕ್ಕಿಂತ ಮಿಡುಕು ಪದವೇ ಬಹಳ ಅಪರೂಪದ್ದು. ಎಲ್ಲೋ ಸಾಹಿತ್ಯಿಕವಾಗಿ ಕಂಡುಬಂದೀತೇ ಹೊರತು ಆಡುಮಾತಿನಲ್ಲಿ ಯಾರೂ ಬಳಸುವುದಿಲ್ಲ. ಹೀಗೇ ಕುತೂಹಲಕ್ಕಂತ ಗೂಗಲ್ನಲ್ಲಿ ‘ಮಿಡುಕಿದನು’ ಎಂದು ಟೈಪಿಸಿ ನೋಡಿದೆ. ಕೇವಲ ನಾಲ್ಕು ಲಿಂಕ್ಗಳು ಸಿಕ್ಕಿದವು. ಅದರಲ್ಲಿ ಎರಡಂತೂ ಇದೇ ಗೋಕರ್ಣ ಪುರಾಣ ಕಥನದ ಪೂರ್ಣಪಾಠವನ್ನು ಯಾರೋ ಪುಣ್ಯಾತ್ಮರು ನೀಟಾಗಿ ಕನ್ನಡದಲ್ಲಿ ಇಂಟರ್ನೆಟ್ಗೆ ಏರಿಸಿಟ್ಟಿದ್ದು. ಇನ್ನೊಂದು, ಪಂಡರೀನಾಥಾಚಾರ್ಯ ಗಲಗಲಿಯವರು ‘ಪೇಜಾವರ ಶ್ರೀಗಳವರಿಗೆ ಪರ್ಯಾಯಪುಷ್ಪ ಎಂಬ ಕವಿತೆಯ ರೂಪದ ಗೌರವಾರ್ಪಣೆಯಲ್ಲಿ “ಗೀತೆಯ ಪೇಳಿದ ಪೀತಾಂಬರಹರಿ ಅದರೀಗತಿಗೆ ಮಿಡುಕಿದನು; ಗೀತೆಯ ಸೊಲ್ಲನು ಎಲ್ಲೆಡೆ ಕೇಳಿಸಬಲ್ಲವನಾತನ ಹುಡುಕಿದನು ಎಂದಿರುವುದು. ಕೊನೆಯದು, ಕುಮಾರವ್ಯಾಸನ ಗದುಗಿನಭಾರತದಲ್ಲಿ ಸಭಾಪರ್ವದ ಒಂದು ಷಟ್ಪದಿ. “ವಾಯುಸಖನಲಿ ಸುಡುವೆನೀಗಳೆ/ ಬೀಯವಾಗಲಿ ದೇಹವಾಚಂ/ ದ್ರಾಯತವೆ ಎಂದೊಡನೊಡನೆ ಮಿಡುಕಿದನು ಕಲಿಭೀಮ ಎಂದು ಬರುತ್ತದೆ. ತುಂಬಿದ ಸಭೆಯಲ್ಲಿ ದ್ರೌಪದಿಯ ಮಾನ ಹರಾಜಾಗುತ್ತಿರುವಾಗ ಬೇರೆಯವರೆಲ್ಲ ತಲೆತಗ್ಗಿಸಿ ಕೂತಿದ್ದಾರೆ. ಭೀಮ ಮಾತ್ರ ರೋಷದಿಂದ ಮಿಡುಕುತ್ತಿದ್ದಾನೆ ಎಂದು ಬಣ್ಣಿಸುತ್ತಾನೆ ಕುಮಾರವ್ಯಾಸ. ತಣಿಯದ ಕುತೂಹಲದಿಂದ ‘ಮಿಡುಕಿದಳು’ ಪದವನ್ನೂ ಗೂಗಲೇಶ್ವರನಿಗೆ ಉಣಿಸಿದೆ. ಈಗ ಫಲಿತಾಂಶ ಪಟ್ಟಿಯಲ್ಲಿ ಲಿಂಕ್ಗಳ ಸಂಖ್ಯೆ ದ್ವಿಗುಣ! ಅಂದರೆ ಹೆಂಗಸರು ಗಂಡಸರಿಗಿಂತ ಹೆಚ್ಚು ಮಿಡುಕುತ್ತಾರೆಯೇ? ಗೊತ್ತಿಲ್ಲ. ‘ಮಿಟುಕಲಾಡಿ ಮೀನಾಕ್ಷಿ’ ಇದ್ದಂತೆ ‘ಮಿಡುಕುಮೋರೆ ಮಾರಮ್ಮ’ ಎನ್ನಬಹುದೇ? ಸಮಕಾಲೀನ ಸಾಹಿತ್ಯದಲ್ಲಿ, ಕಥೆ-ಕಾದಂಬರಿಗಳಲ್ಲಿ, ಯಕ್ಷಗಾನ ಪದ್ಯಗಳಲ್ಲಿ ‘ಮಿಡುಕಿದಳು’ ಪದ ಬಳಕೆಯಾಗಿರುವುದು ಕಂಡುಬರುತ್ತದೆ. ‘ಥಟ್ಟಂತ ಹೇಳಿ’ ಕ್ವಿಜ್ ಖ್ಯಾತಿಯ ಡಾ.ನಾ.ಸೋಮೇಶ್ವರ ಒಂದು ಚಂದದ ಕವಿತೆಯಲ್ಲಿ ಈ ಪದವನ್ನು ಬಳಸಿದ್ದಾರೆ. ಅದು, ಪಂಜಾಬಿನ ಕವಯತ್ರಿ ಅಮೃತಾ ಪ್ರೀತಮ್ ಬಗ್ಗೆ ಕವಿತೆ- “ಮೆಚ್ಚಿದವನು ಎದುರಿಗಿರಲು ತಲೆಯನೆತ್ತಿ/ ಮುಖವನ್ನು ನೋಡಲಾಗದೆ ಮೌನವಾದಳು/ ಮನದೊಳಗೆ ಮೂಡಿದ ಮಧುರ ಭಾವಗಳ/ ತುಟಿಯ ಮೇಲೆ ತರಲಾರದೆ ಮಿಡುಕಿದಳು. ಮತ್ತೆ, ಕುಮಾರವ್ಯಾಸನೂ ‘ಮಿಡುಕಿದಳು’ ಪದಪ್ರಯೋಗ ಮಾಡಿದ್ದಾನೆ. ಅರಣ್ಯಪರ್ವದಲ್ಲಿ ಅರ್ಜುನ ಮತ್ತು ಊರ್ವಶಿ ಮುಖಾಮುಖಿಯಾಗುವ ಸನ್ನಿವೇಶ. ಊರ್ವಶಿಯ ಚಲನವಲನಗಳು ಹೀಗಿದ್ದುವಂತೆ- “ನುಡಿಗೆ ಬೆರಗಾದಳು ಮನೋಜನ/ ಸಡಗರಕೆ ತೆಕ್ಕಿದಳು ಪಾರ್ಥನ/ ನಡವಳಿಗೆ ಮೆಚ್ಚಿದಳು ಬೆಚ್ಚಿದಳಂಗಜಾಸ್ತ್ರದಲಿ/ ಕಡುಗಿದಳು ಖಾತಿಯುಲಿ ಲಜ್ಜೆಯ/ ಬಿಡೆಯದಲಿ ಭಯಗೊಂಡಳಂಗನೆ/ ಮಿಡುಕಿದಳು ವಿವಿಧಾನುಭಾವದ ರಸದ ಭಂಗಿಯಲಿ ಆದರೆ ಸಾಹಿತ್ಯಿಕವಾಗಿಯಷ್ಟೇ ಮಿಡುಕಬೇಕು ಅಂತೇನಿಲ್ಲ. ಮಿಡುಕುವ ಸಂದರ್ಭಗಳು ನಮ್ಮೆಲ್ಲರ ಜೀವನದಲ್ಲೂ ಎಷ್ಟೋಸರ್ತಿ ಬಂದುಹೋಗುತ್ತವೆ. ಕೆಲವು ನಿಜಕ್ಕೂ ಗಂಡಾಂತರದವಾಗಿರಬಹುದು- ‘ಶೋಲೆ’ ಚಿತ್ರದಲ್ಲಿ ಅದೊಂದು ದೃಶ್ಯವಿತ್ತಲ್ವಾ, ಗಬ್ಬರ್ಸಿಂಗ್ನಿಂದಾಗಿ ಎರಡೂ ಕೈಗಳನ್ನು ಕಳಕೊಂಡಿದ್ದ ಬಲದೇವ್ಸಿಂಗ್ ಠಾಕೂರ್ (ಸಂಜೀವ್ಕುಮಾರ್) ಶಾಲುಹೊದ್ದು ನಿಂತಿದ್ದಾನೆ. ಕಾಲಿನಡಿಗೇ ಬಂದೂಕು ಬಂದುಬಿದ್ದಿದೆ. ಎತ್ತಿಕೊಳ್ಳುವಂತೆಯೂ ಇಲ್ಲ, ತಪ್ಪಿಸಿಕೊಳ್ಳುವಂತೆಯೂ ಇಲ್ಲ. ಮಿಡುಕುವುದೊಂದೇ ದಾರಿ. ಮತ್ತೆ ಕೆಲವು ಮಿಡುಕಾಟಗಳು ಮೆಲುಕು ಹಾಕಿದಾಗ ಮೋಜೆನಿಸುವುದೂ ಇದೆ. ಟಿವಿಯಲ್ಲಿ ವಾರ್ತಾವಾಚಕಿ ಕ್ಯಾಮೆರಾ ಮುಂದೆ ಲೈವ್ ನ್ಯೂಸ್ ಓದುತ್ತಿರುವಾಗಲೇ ಕೆಮ್ಮು ಅಥವಾ ಸೀನು ಬಂದರೆ? ಅದನ್ನಾದರೂ ‘ಎಕ್ಸ್ಕ್ಯೂಸ್ ಮೀ’ ಎಂದೋ, ‘ಕ್ಷಮಿಸಿ’ ಎಂದೋ ಹೇಳಿ ನಿಭಾಯಿಸಬಹುದು, ನೊಣ ಬಂದು ಮೂಗಿನ ಮೇಲೆ ಕುಳಿತರೆ? ಮಿಡುಕದೆ ಬೇರೆ ದಾರಿಯಿಲ್ಲ. ಒಮ್ಮೆ ದೂರದರ್ಶನದ ವಾರ್ತಾವಾಚಕಿ ಸಲ್ಮಾಸುಲ್ತಾನ್ಗೆ ಹಾಗೇ ಆಗಿತ್ತಂತೆ. ಗಂಭೀರವಾದ ಸುದ್ದಿಯನ್ನು ಓದುತ್ತಿದ್ದಾಗ ನೊಣ ಬಂದು ಮೂಗಿಗೆ ಕಚಗುಳಿ ಇಟ್ಟಿತಂತೆ. ಮಿಡುಕದೆ ಇನ್ನೇನುತಾನೆ ಮಾಡಿಯೇನೆಂದು ದೂರದರ್ಶನದ 50ರ ಸಂಭ್ರಮದ ವೇಳೆ ಸಂದರ್ಶನವೊಂದರಲ್ಲಿ ಆಕೆ ಇದನ್ನು ನೆನಪಿಸಿಕೊಂಡಿದ್ದರು. ಮೊನ್ನೆಮೊನ್ನೆ ಇಲ್ಲಿ ಅಮೆರಿಕದಲ್ಲಿ ಒಂದು ವಾರ್ತಾವಾಹಿನಿಯ ವಾಷಿಂಗ್ಟನ್ ವರದಿಗಾರ್ತಿ ಶ್ವೇತಭವನದ ಎದುರಿನ ಹುಲ್ಲುಹಾಸಿನ ಮೇಲೆನಿಂತು ಲೈವ್ ರಿಪೋರ್ಟ್ ಮಾಡುತ್ತಿದ್ದಾಗ ಅವಳ ಹಿಂದಿನಿಂದ ಒಂದು ನಾಯಿ ಓಡಿಹೋಯ್ತು! ಅವಳಿಗಾದರೋ ಅದರ ಪರಿವೆಯೇ ಇಲ್ಲ. ಆದರೆ ಕ್ಯಾಮರಾಮ್ಯಾನ್ ಆದರೂ ಏನು ಮಾಡಬಲ್ಲ? ನಾಯಿ ಓಡಿದ್ದೂ ಲೈವ್ ನ್ಯೂಸ್ನಲ್ಲಿ ಬಂತು. ಅದೂ ಅಂತಿಂಥ ನಾಯಿ ಅಂದ್ಕೊಂಡ್ರಾ? ಸದ್ಯಕ್ಕೆ ಅಮೆರಿಕದ ಪ್ರಥಮಶ್ವಾನ ಪಟ್ಟದ ನಾಯಿ, ಪ್ರೆಸಿಡೆಂಟ್ ಒಬಾಮಾ ಸಾಕಿರುವ ‘ಬೌ’! ನೋಡಿದಿರಾ, ಒಂದು ಪದದ ಬೆನ್ನತ್ತಿಹೋದರೆ ಸಿಗುವ ರಸಾನುಭವ? ಯಾವ ಮಿಡುಕುವಿಕೆಗಿಂತಲೂ ಮೂರುಪಟ್ಟು ಮೇಲ್ಮಟ್ಟದ್ದು! * * * [ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] "Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!Version: 20241125