Episodes
Saturday Mar 24, 2012
Cherry Blossoms
Saturday Mar 24, 2012
Saturday Mar 24, 2012
ದಿನಾಂಕ 25 ಮಾರ್ಚ್ 2012ರ ಸಂಚಿಕೆ...
ಹೂವುಹಬ್ಬಕ್ಕೆ ನೂರು ವರ್ಷ
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] * * * ಎಮ್ಮ ಮನೆಯಂಗಳದಿ ಬೆಳೆದೊಂದು ಹೂವನ್ನು ನಿಮ್ಮ ಮಡಿಲೊಳಗಿಡಲು ತಂದಿರುವೆವು... ವಿ.ಸೀಯವರ ಆ ಸುಪ್ರಸಿದ್ಧ ಕವಿತೆಯಲ್ಲಿನ ಹೂವು, ನಿಜವಾದ ಹೂವಲ್ಲ; ಮದುವೆಯಾಗಿ ಗಂಡನಮನೆ ಸೇರುತ್ತಿರುವ ಹೆಣ್ಣನ್ನು ಹೂವಿಗೆ ಹೋಲಿಸಿ ಬರೆದದ್ದು. ಎಷ್ಟು ಚಂದದ ಹೋಲಿಕೆ, ಎಂತಹ ಆರ್ದ್ರ ಭಾವನೆ! ಎಷ್ಟೆಂದರೂ ಅದು ಕವಿಮನಸಿನ ಕಲ್ಪನೆ. ಆದರೆ ನೂರು ವರ್ಷಗಳ ಹಿಂದೆ, 1912ರಲ್ಲಿ ಹೀಗೆಯೇ ಮಾರ್ಚ್ ತಿಂಗಳ ಒಂದು ದಿನ, ಜಪಾನ್ ದೇಶವು ಅಮೆರಿಕದ ಮಡಿಲೊಳಗಿಡಲು ತಂದದ್ದು ಹೆಣ್ಣೆಂಬ ಹೂವನ್ನಲ್ಲ, ಬದಲಿಗೆ ನಿಜವಾಗಿ ತನ್ನ ಮನೆಯಂಗಳದಿ ಬೆಳೆದ ಹೂವಿನ ಗಿಡವನ್ನು! ವಸಂತ ಋತುವಿನಲ್ಲಿ ಟೋಕಿಯೊ ನಗರದ ಬೀದಿಬೀದಿಗಳನ್ನೂ ಬಣ್ಣಗೊಳಿಸುವ, ಜಪಾನೀಯರ ಅಚ್ಚುಮೆಚ್ಚಿನ ‘ಸಕುರಾ’ ಹೂವಿನ ಗಿಡವದು. ಒಂದೆರಡಲ್ಲ, ಸಾವಿರಾರು ಸಕುರಾ ಗಿಡಗಳು ಹಡಗಿನಲ್ಲಿ ಟೋಕಿಯೊದಿಂದ ವಾಷಿಂಗ್ಟನ್ಗೆ ಬಂದಿಳಿದದ್ದು. ಎರಡು ದೇಶಗಳ ಸೌಹಾರ್ದತೆಯ ಸಂಕೇತವೆಂದು ಜಪಾನ್ ಅಮೆರಿಕಕ್ಕೆ ಪ್ರೀತಿಯ ಉಡುಗೊರೆಯಾಗಿ ಅದನ್ನು ಕಳಿಸಿದ್ದು. ಇವತ್ತು ವಾಷಿಂಗ್ಟನ್ ನಗರದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿರುವ ‘ಚೆರ್ರಿ ಬ್ಲಾಸಮ್’ ಹೂವುಹಬ್ಬದ ಚರಿತ್ರೆ ಶುರುವಾಗುವುದು ಹಾಗೆ. 1912ಕ್ಕಿಂತಲೂ ಹತ್ತಿಪ್ಪತ್ತು ವರ್ಷಗಳ ಮುಂಚೆಯೇ ಎಲಿಜಾ ಸ್ಕಿಡ್ಮೋರ್ ಎಂಬ ಅಮೆರಿಕನ್ ಪತ್ರಕರ್ತೆಯೊಬ್ಬಳು ಟೋಕಿಯೊ ನಗರಕ್ಕೆ ಪ್ರವಾಸ ಹೋಗಿಬಂದವಳು ಅಲ್ಲಿನ ಸಕುರಾ ಹೂಗಳ ಸೊಬಗಿಗೆ ಮಾರುಹೋಗಿದ್ದಳಂತೆ. ಅಮೆರಿಕದ ರಾಜಧಾನಿ ವಾಷಿಂಗ್ಟನ್ನ ಬೀದಿಗಳ ಇಕ್ಕೆಲಗಳಲ್ಲಿ, ಇಲ್ಲಿ ಹರಿಯುವ ಪೊಟೊಮೆಕ್ ನದಿಯ ದಂಡೆಗುಂಟ ಸಕುರಾ ಗಿಡಗಳನ್ನು ನೆಟ್ಟು ಬೆಳೆಸಿದರೆ ಎಷ್ಟು ಚೆನ್ನಾಗಿರುತ್ತದೆ ಎಂದು ಕನಸು ಕಂಡಿದ್ದಳಂತೆ. ಈಬಗ್ಗೆ ಅಧಿಕಾರಿಗಳ, ರಾಜಕಾರಣಿಗಳ ಮನ ಓಲೈಸುವ ಪ್ರಯತ್ನವನ್ನೂ ಮಾಡಿದ್ದಳಂತೆ. ಆದರೆ ಅವರಾರೂ ಕಿವಿಗೊಡಲಿಲ್ಲ. ಈಮಧ್ಯೆ ಡೇವಿಡ್ ಫೇರ್ಚೈಲ್ಡ್ ಎಂಬುವವ, ತೋಟಗಾರಿಕೆ ಇಲಾಖೆಯಲ್ಲಿದ್ದವನು, ಜಪಾನ್ನಿಂದ ಒಂದಷ್ಟು ಸಕುರಾ ಗಿಡಗಳನ್ನು ತಂದು ವಾಷಿಂಗ್ಟನ್ನಲ್ಲಿ ತನ್ನ ನಿವಾಸದ ಸುತ್ತಮುತ್ತ ಬೆಳೆಸುವುದರಲ್ಲಿ ಯಶಸ್ವಿಯಾದ. ಎಲಿಜಾ ಮತ್ತೊಮ್ಮೆ ತನ್ನ ಹೋರಾಟ ಮುಂದುವರೆಸಿದಳು. 1909ರಲ್ಲಿ ವಿಲಿಯಂ ಹೋವರ್ಡ್ ಟಾಫ್ಟ್ ಅಮೆರಿಕಾಧ್ಯಕ್ಷನಾದಾಗ ಅವನ ಪತ್ನಿಯಾಗಿದ್ದವಳು ಹೆಲೆನ್ ಟಾಫ್ಟ್. ಎಲಿಜಾಳ ಅಹವಾಲು ಪ್ರಥಮ ಮಹಿಳೆ ಹೆಲೆನ್ ಟಾಫ್ಟ್ವರೆಗೂ ತಲುಪಿತು. ಆಕೆ ಸಕುರಾ ಗಿಡಗಳನ್ನು ಜಪಾನ್ನಿಂದ ತರಿಸುವುದಕ್ಕೆ ತಾನು ಸಹಕರಿಸುತ್ತೇನೆಂದಳು. ಜಪಾನ್ನಲ್ಲಿ ಖ್ಯಾತ ಉದ್ಯಮಿಯೂ ವಿಜ್ಞಾನಿಯೂ ಆಗಿದ್ದ ಡಾ. ಜೊಕಿಚಿ ಟಕಮೈನ್ ಎಂಬಾತ ಸಕುರಾ ಗಿಡಗಳನ್ನು ಅಮೆರಿಕಕ್ಕೆ ಕಳುಹಿಸುವುದಕ್ಕೆ ಮುಂದಾದ. ಸಕುರಾ ಜಪಾನ್ನ ರಾಷ್ಟ್ರೀಯ ಪುಷ್ಪ. ಜಪಾನೀಯರ ಧಾರ್ಮಿಕ ನಂಬಿಕೆಗಳಲ್ಲಿ ಅದಕ್ಕೆ ಅತ್ಯುಚ್ಚ ಸ್ಥಾನಮಾನವಿದೆ. ಹಾಗಾಗಿ ಸಕುರಾ ಹೂಗಿಡಗಳಿಗೆ ಬೆಲೆ ಕಟ್ಟಲಾಗದು, ಅವು ಜಪಾನ್ ಜನತೆಯಿಂದ ಅಮೆರಿಕದ ಜನತೆಗೆ ಪ್ರೀತಿಯ ಉಡುಗೊರೆ ಎಂದು ಜೊಕಿಚಿ ಘೋಷಿಸಿದ. 1910 ಜನವರಿ 6ರಂದು ಎರಡು ಸಾವಿರದಷ್ಟು ಸಕುರಾ ಗಿಡಗಳು ವಾಷಿಂಗ್ಟನ್ ತಲುಪಿದವು. ಆದರೆ ಇಲ್ಲಿಗೆ ಬಂದಾಗ ದುರದೃಷ್ಟವಶಾತ್ ಅವುಗಳಿಗೇನೋ ರೋಗ ತಗುಲಿತ್ತು, ಅವೆಲ್ಲವನ್ನೂ ಸುಟ್ಟುಹಾಕಬೇಕಾಯ್ತು. ಎರಡು ವರ್ಷಗಳ ನಂತರ 1912ರ ಮಾರ್ಚ್ 26ರಂದು ಮತ್ತೊಮ್ಮೆ ಜಪಾನ್ನಿಂದ ಸಕುರಾ ಗಿಡಗಳ ಉಡುಗೊರೆ ಬಂತು. ಈಬಾರಿ ಮೂರುಸಾವಿರಕ್ಕೂ ಹೆಚ್ಚು ಗಿಡಗಳಿದ್ದವು. ಮಾರ್ಚ್ 27ರಂದು ವಾಷಿಂಗ್ಟನ್ನಲ್ಲಿ ಪೊಟೊಮೆಕ್ ನದೀತೀರದಲ್ಲಿ ಎಲಿಜಾ ಸ್ಕಿಡ್ಮೋರ್, ಹೆಲೆನ್ ಟಾಫ್ಟ್, ಜಪಾನ್ ರಾಯಭಾರಿ ಸುಟೆಮಿ ಚಿಂಡಾ ಮತ್ತವನ ಪತ್ನಿ - ಈ ನಾಲ್ವರು ಸೇರಿ ಸಸಿಗಳನ್ನು ನೆಟ್ಟರು. ಜಪಾನ್ನಲ್ಲಿ ಸಕುರಾ ಎಂದು ಹೆಸರಾಗಿದ್ದ ಅವು ಇಲ್ಲಿ ‘ಚೆರ್ರಿ’ ಎಂಬ ಹೆಸರು ಪಡೆದವು. ಜಪಾನ್ ಮತ್ತು ಅಮೆರಿಕಾ ರಾಷ್ಟ್ರಗಳ ಸ್ನೇಹಸೇತುವಿನ ಸಂಕೇತವಾಗಿ ಬೆಳೆದವು. ತಿಳಿಗುಲಾಬಿ ಅಥವಾ ನಸುಗೆಂಪು ಬಣ್ಣದ ಈ ಚೆರ್ರಿ ಹೂಗಳ ವಿಶಿಷ್ಟತೆಯೆಂದರೆ ವರ್ಷಕ್ಕೊಮ್ಮೆ ಮಾರ್ಚ್-ಏಪ್ರಿಲ್ ಸಮಯದಲ್ಲಿ ಅವು ಅರಳುತ್ತವೆ. ಒಂದೇಒಂದು ಎಲೆಯೂ ಕಾಣಿಸದಷ್ಟು ದಟ್ಟವಾಗಿ ಮರವಿಡೀ ಹೂವುಗಳಿಂದಲೇ ತುಂಬುತ್ತದೆ. ಹೇಳಿಕೊಳ್ಳುವಂಥ ಪರಿಮಳವೇನೂ ಇಲ್ಲ. ಅಷ್ಟೇಅಲ್ಲ, ಈ ಹೂವಿನಿಂದ ಹಣ್ಣಾಗುವುದೂ ಇಲ್ಲ (‘ಚೆರ್ರಿ’ಹಣ್ಣುಗಳ ಮರಗಳೇ ಬೇರೆ, ಅವುಗಳ ಹೂವು ಇಷ್ಟು ಚಂದವಿರುವುದಿಲ್ಲ). ಆದರೂ ಸಾಲುಸಾಲಾಗಿ ಮರಗಳು ಹೂಬಿಟ್ಟಾಗಿನ ದೃಶ್ಯ ನಯನಮನೋಹರ. ಅದರಲ್ಲೂ ನದಿದಂಡೆಯ ಮೇಲಿರುವ ಮರಗಳು ತೇರಿನಂತೆ ಅರಳಿದಾಗಂತೂ ನೀರಿನಲ್ಲಿ ಅವುಗಳ ಪ್ರತಿಫಲನ ನೋಡುವುದಕ್ಕೆ ಮತ್ತೂ ಚಂದ. ಪ್ರತಿವರ್ಷ ವಸಂತ ಋತುವಿನ ಆಗಮನವಾಗುತ್ತಿದ್ದಂತೆ ಚೆರ್ರಿ ಹೂಗಳು ಅರಳುವ ಪ್ರಕ್ರಿಯೆ ವಾಷಿಂಗ್ಟನ್ ನಗರದ ಹೊಸ ಆಕರ್ಷಣೆಯಾಗಿ ಬೆಳೆಯಿತು. ಮಾರ್ಚ್ ಕೊನೆ ಅಥವಾ ಏಪ್ರಿಲ್ ಮೊದಲ ವಾರದಲ್ಲಿ ಎಲ್ಲ ಮರಗಳೂ ಅರಳಿದಾಗಿನ ಸೊಬಗನ್ನು ಕಣ್ತುಂಬಿಸಿಕೊಳ್ಳಲಿಕ್ಕೆಂದೇ ಪ್ರವಾಸಿಗರು ಬರಲಾರಂಭಿಸಿದರು. ಹೂಗಳ ಅರಳುವಿಕೆಯನ್ನು ‘ಚೆರ್ರಿ ಬ್ಲಾಸಮ್ ಫೆಸ್ಟಿವಲ್’ ಎಂದು ಆಚರಿಸುವ ಕ್ರಮ ಶುರುವಾಯಿತು. ವಾಷಿಂಗ್ಟನ್ ನಿವಾಸಿಗಳಿಗೆ ಚೆರ್ರಿ ಮರಗಳ ಬಗ್ಗೆ ಎಷ್ಟು ಪ್ರೀತ್ಯಾಭಿಮಾನಗಳು ಬೆಳೆದುವೆಂದರೆ 1938ರಲ್ಲಿ ಜೆಫರ್ಸನ್ನ (ಅಮೆರಿಕದ ಸಂವಿಧಾನಶಿಲ್ಪಿ ಮತ್ತು ಮಹಾನ್ ಅಧ್ಯಕ್ಷರುಗಳಲ್ಲೊಬ್ಬ) ಸ್ಮಾರಕ ನಿರ್ಮಾಣಕ್ಕೆಂದು ಕೆಲವು ಚೆರ್ರಿ ಮರಗಳನ್ನು ಕಡಿಯಬೇಕಾಗುತ್ತದೆಂಬ ಸುದ್ದಿಯಾದಾಗ ಮಾನವಸರಪಳಿ ರಚಿಸಿ ಮರಗಳ ರಕ್ಷಣೆಗೆ ಮುಂದಾಗಿದ್ದರಂತೆ. ಆದರೆ 1941ರಲ್ಲಿ ಪ್ರಪಂಚಯುದ್ಧದ ವೇಳೆ ಅಮೆರಿಕದ ನೌಕಾನೆಲೆ ‘ಪರ್ಲ್ ಹಾರ್ಬರ್’ ಮೇಲೆ ಜಪಾನ್ ನೌಕಾಪಡೆ ದಾಳಿ ನಡೆಸಿದಾಗ ಜಪಾನ್ ವಿರುದ್ಧ ರೊಚ್ಚಿಗೆದ್ದ ಅಮೆರಿಕನ್ನರು ಸಾಂಕೇತಿಕವಾಗಿ ವಾಷಿಂಗ್ಟನ್ನಲ್ಲಿ ಕೆಲವು ಚೆರ್ರಿ ಮರಗಳನ್ನು ಕಡಿದುಹಾಕಿದ್ದರಂತೆ. ಮುಂದೆ ಯುದ್ಧ ಮತ್ತಷ್ಟು ಕರಾಳವಾಗಿ ಹಿರೊಷಿಮಾ-ನಾಗಾಸಾಕಿ ಮೇಲೆ ಅಣುಬಾಂಬ್ ದಾಳಿಯೂ ಆಯ್ತು. ಆದರೂ ಯುದ್ಧಾನಂತರ ಅಮೆರಿಕ-ಜಪಾನ್ ಸಂಬಂಧಗಳು ತಿಳಿಯಾದ್ದರಿಂದ ಚೆರ್ರಿ ಮರಗಳು ಬಚಾವಾದವು. ವಾಷಿಂಗ್ಟನ್ನಲ್ಲಿ ವಾರ್ಷಿಕ ಹೂವುಹಬ್ಬ ಅನೂಚಾನವಾಗಿ ಮುಂದುವರಿಯಿತು. ಹಬ್ಬದಲ್ಲಿ ‘ಚೆರ್ರಿ ಬ್ಲಾಸಮ್ ಕ್ವೀನ್’ ಸೌಂದರ್ಯಸ್ಪರ್ಧೆ ಮುಂತಾದವು ಆರಂಭವಾದವು. 1965ರಲ್ಲಿ ಜಪಾನ್ನಿಂದ ಮತ್ತೂ ಸುಮಾರು ನಾಲ್ಕುಸಾವಿರ ಸಕುರಾ ಗಿಡಗಳು ಬಂದವು. ವಾಷಿಂಗ್ಟನ್ ಮಾನ್ಯುಮೆಂಟ್ನ ಸುತ್ತಮುತ್ತ, ಲಿಂಕನ್ ಸ್ಮಾರಕದೆದುರಿನ ಕೆರೆದಂಡೆಯ ಮೇಲೆ ಚೆರ್ರಿ ಮರಗಳು ಬೆಳೆದವು. ಮೂರು ದಿನ ನಡೆಯುತ್ತಿದ್ದ ‘ಚೆರ್ರಿ ಬ್ಲಾಸಮ್ ಫೆಸ್ಟಿವಲ್’ ಒಂದು ವಾರದವರೆಗೆ ವಿಸ್ತರಿಸಿತು. 1994ರಿಂದೀಚೆಗೆ ಎರಡು ವಾರ ಜರುಗುವ ಹಬ್ಬವಾಯಿತು. ಈವರ್ಷ ಶತಮಾನೋತ್ಸವವೆಂದು ವಿಶೇಷವಾಗಿ ಐದು ವಾರಗಳ ‘ಚೆರ್ರಿ ಬ್ಲಾಸಮ್ ಫೆಸ್ಟಿವಲ್’ ಮೊನ್ನೆ ಮಾರ್ಚ್ 17ರಂದು ಶುರುವಾದದ್ದು ಮುಂದಿನ ತಿಂಗಳ 27ರವರೆಗೆ ನಡೆಯಲಿದೆ. ಈಗ ಈ ಹೂವುಹಬ್ಬ ಅಕ್ಷರಶಃ ಜಾತ್ರೆಯ ರೂಪ ತಾಳಿದೆ. ಇದೀಗ ಹವಾಮಾನವೂ ಹಿತಕರವಾಗಿದೆ. ಶಾಲಾಕಾಲೇಜುಗಳಿಗೆ ‘ಸ್ಪ್ರಿಂಗ್ಬ್ರೇಕ್’ ರಜೆ ಬೇರೆ ಇದೆ. ದೇಶವಿದೇಶಗಳಿಂದ ಪ್ರವಾಸಿಗರು ಬರುತ್ತಿದ್ದ್ತಾರೆ. ಜಾತ್ರೆ ಎಂದಮೇಲೆ ಸಂತೆಯೂ ಇರಬೇಕಲ್ಲ! ಬಗೆಬಗೆಯ ಆಟೋಟಗಳು, ಮನರಂಜನೆಯ ಕಾರ್ಯಕ್ರಮಗಳು, ವಸ್ತುಪ್ರದರ್ಶನ-ಮಾರಾಟಮಳಿಗೆಗಳು, ತಿಂಡಿಪದಾರ್ಥಗಳ ಸ್ಟಾಲ್ಗಳು. ಒಂದು ಕಡೆ ಚಿತ್ರಕಲಾಪ್ರದರ್ಶನ, ಇನ್ನೊಂದೆಡೆ ಜಪಾನ್ನ ಪೇಪರ್ಕಟ್ಟಿಂಗ್ ಆರ್ಟ್ ‘ಒರಿಗಾಮಿ’ ಕಾರ್ಯಾಗಾರ. ಒಂದೆಡೆ ಮಕ್ಕಳ ಚಲನಚಿತ್ರೋತ್ಸವ, ಇನ್ನೊಂದೆಡೆ ಗಾಳಿಪಟ ಹಾರಿಸುವ ಸ್ಪರ್ಧೆ. ಜೆನ್ ಮೆಡಿಟೇಶನ್ ವರ್ಕ್ಶಾಪ್. ಸಮುರಾಯಿ ಸಮರಾಭ್ಯಾಸ ಪ್ರದರ್ಶನ. ಜಪಾನ್ ವಿಶೇಷ ಚಹ ಕೂಟಗಳು. ಸಿಂಫನಿ ಆರ್ಕೆಸ್ಟ್ರಾಗಳು. ಸಂಗೀತ-ನೃತ್ಯ-ನಾಟಕ ಮೇಳಗಳು. ಕತ್ತಲು ಕವಿದಮೇಲೆ ಸುಡುಮದ್ದು ಪ್ರದರ್ಶನ. ಪೊಟೊಮೆಕ್ ನದಿಯಲ್ಲಿ ಡಿನ್ನರ್ಕ್ರೂಸ್. ಚೆರ್ರಿ ಬ್ಲಾಸಮ್ ಶತಮಾನೋತ್ಸವದ ಅಂಚೆಚೀಟಿ ಬಿಡುಗಡೆ. ಇವೆಲ್ಲದಕ್ಕೆ ಕಳಶಪ್ರಾಯವಾಗಿ ಚೆರ್ರಿ ಬ್ಲಾಸಮ್ ಗ್ರ್ಯಾಂಡ್ ಪೆರೇಡ್. ಯಾವಾಗ ಎಲ್ಲಿ ಏನು ನಡೆಯುತ್ತಿದೆಯೆಂದು ಕ್ಷಣಮಾತ್ರದಲ್ಲಿ ತಿಳಿದುಕೊಳ್ಳುವುದಕ್ಕೆ ಸ್ಮಾರ್ಟ್ಫೋನ್ನಲ್ಲಿ ಚೆರ್ರಿ ಬ್ಲಾಸಮ್ಗೆಂದೇ ತಯಾರಾದ ಅಪ್ಲಿಕೇಶನ್ಸೂ ಇವೆ. ಇಲ್ಲಿನ ಪತ್ರಿಕೆಗಳು ಚೆರ್ರಿ ಬ್ಲಾಸಮ್ ಶತಮಾನೋತ್ಸವಕ್ಕೆ ವಿಶೇಷ ಪುರವಣಿಗಳನ್ನೂ ಪ್ರಕಟಿಸಿವೆ. ಮನೆಯ ಕೈತೋಟದಲ್ಲಿ ಬರಿ ಒಂದು ಗುಲಾಬಿ ಹೂವು ಅರಳಿದರೇನೇ ಅಷ್ಟೊಂದು ಸಂಭ್ರಮ ಪಡುತ್ತೇವಂತೆ, ಇನ್ನು ಅಮೆರಿಕದಂಥ ಅಮೆರಿಕ ದೇಶದ ರಾಜಧಾನಿಯಲ್ಲಿ ವಸಂತಕಾಲದಲ್ಲಿ ಸಾಲುಸಾಲು ಚೆರ್ರಿಮರಗಳು ಅರಳಿದಾಗಿನ ಸಂಭ್ರಮ ಎಷ್ಟಿರಬೇಡ? ಹಾಗೆಯೇ ಇನ್ನೊಂದು ಚಂದದ ಹೋಲಿಕೆಯನ್ನೂ ನಾವಿಲ್ಲಿ ಮನಗಾಣಬಹುದು- ವಿ.ಸೀ ಕವಿತೆಯಲ್ಲಿನ ಹೂವು, ಕೊಟ್ಟ ಎರಡು ದಿನಗಳಲ್ಲಿ ಬಾಡಿಹೋಗುವ ಹೂವಲ್ಲ. ವಂಶವಾಹಿನಿಯಾಗುವ ಬಾಳಿಕೆಯ ಹೂವು. ಹಾಗೆಯೇ, ಪ್ರೀತಿಯ ಸಂಕೇತವಾಗಿ ಬರಿ ಹೂವನ್ನು ಕೊಟ್ಟರೆ ಅದು ಕೆಲದಿನಗಳಷ್ಟೇ ತಾಜಾ ಆಗಿ ಉಳಿದೀತು. ಹೂಗಿಡವನ್ನೇ ಕೊಟ್ಟರೆ? ಆ ಪ್ರೀತಿ ಶತಮಾನೋತ್ಸವ ಸಂಭ್ರಮವನ್ನು ಕಂಡೀತು! * * * ಈ ಯೂಟ್ಯೂಬ್ ವಿಡಿಯೊಗಳನ್ನೂ ಆನಂದಿಸಿ: ಒಂದು [ 2 ನಿಮಿಷ ] ಎರಡು [ 4 ನಿಮಿಷ ] ಮೂರು [ 8 ನಿಮಿಷ ] * * * [ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] "Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!Sunday Mar 18, 2012
Nicknames Nicknominees
Sunday Mar 18, 2012
Sunday Mar 18, 2012
ದಿನಾಂಕ 18 ಮಾರ್ಚ್ 2012ರ ಸಂಚಿಕೆ...
ಗೂಬೆಯ ತಂದೆ ಬಂದಿದ್ದಾರೆ!
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] * * * ಅನಿಲ್ ಕುಂಬ್ಳೆ ‘ಜಂಬೊ’, ರಾಹುಲ್ ದ್ರಾವಿಡ್ ‘ಜಾಮ್ಮಿ’, ಮೊಹಿಂದರ್ ಅಮರನಾಥ್ ‘ಜಿಮ್ಮಿ’ - ಕಳೆದವಾರ ಕೇಳಿದ್ದ ರಸಪ್ರಶ್ನೆಯ ಉತ್ತರಗಳಿವು. ಕ್ರಿಕೆಟ್ಗೆ ಸಂಬಂಧಿಸಿದ ಪ್ರಶ್ನೆಯಾಗಿದ್ದರಿಂದ ಸಿಕ್ಕಾಪಟ್ಟೆ ಪತ್ರಗಳು ಬಂದಿವೆ. ಸುಮಾರಾಗಿ ಎಲ್ಲರೂ ಸರಿಯುತ್ತರಗಳನ್ನೇ ಕಳಿಸಿದ್ದಾರೆ. ಬಹುಮಾನ ಎಲ್ಲಿದೆ ಎಂದು ಮರುಪ್ರಶ್ನೆಯ ಗೂಗ್ಲಿ ಎಸೆದಿದ್ದಾರೆ ಕೆಲವರು. ಗೂಗಲ್ ಬಳಸಿ ಉತ್ತರ ಕಂಡುಕೊಂಡೆವೆಂದು ಪ್ರಾಮಾಣಿಕತೆ ಮೆರೆದಿದ್ದಾರೆ ಇನ್ನು ಕೆಲವರು. ಎಲ್ಲರಿಗೂ ಧನ್ಯವಾದ ಮತ್ತು ಅಭಿನಂದನೆಗಳು. ಇಷ್ಟುಹೇಳಿ ನಿಕ್ನೇಮ್ ನಾಮಾವಳಿಯಿಂದ ಮುಂದಿನ ವಿಷಯಕ್ಕೆ ಹೋಗಬೇಕೆಂದಿದ್ದೆ. ಆದರೆ ನಿಕ್ನೇಮ್ನಂಥ ಗಮ್ಮತ್ತಿನ, ಆಪ್ತತೆಯ, ಓದುಗರು ಸುಲಭವಾಗಿ ರಿಲೇಟ್ ಮಾಡಿಕೊಳ್ಳುವ ವಿಷಯವನ್ನು ಎತ್ತಿಕೊಂಡಾಗಲೆಲ್ಲ ಏನಾಗುತ್ತದೆಂದರೆ ಪ್ರತಿಕ್ರಿಯೆಗಳು ನಿರೀಕ್ಷೆಗೂ ಮೀರಿ ಬರುತ್ತವೆ. ಓದುಗರು ಸ್ವಂತ ಅನುಭವಗಳನ್ನು ಸ್ವಾರಸ್ಯಕರವಾಗಿ ಬರೆದು ಹಂಚಿಕೊಳ್ಳುತ್ತಾರೆ. ನೆನಪಿನ ದೋಣಿಯಲ್ಲಿ ತೇಲಿದ ಸಡಗರವನ್ನು ಅಕ್ಷರರೂಪದಲ್ಲಿ ಒಪ್ಪಿಸುತ್ತಾರೆ. ಮೂಲ ಲೇಖನದ ಹೂರಣಕ್ಕಿಂತ ಹೆಚ್ಚು ರುಚಿಕರ ಸಾಮಗ್ರಿ ಆ ಪತ್ರಗಳಲ್ಲಿರುತ್ತದೆ! ನನಗಾದರೂ ಅಷ್ಟೇ, ಅಂಕಣ ಚೆನ್ನಾಗಿತ್ತು ಎನ್ನುವ ಪ್ರತಿಕ್ರಿಯೆಗಳಿಗಿಂತಲೂ ಅಂಥ ಲವಲವಿಕೆ ಹೊತ್ತ ಪತ್ರಗಳೇ ಹೆಚ್ಚು ಇಷ್ಟ. ಅವುಗಳಲ್ಲಿನ ಜೀವಂತಿಕೆಯನ್ನು ಸವಿಯುವುದೇ ಹೆಚ್ಚಿನ ಖುಷಿ. ಅದು ನನ್ನೊಬ್ಬನದೇ ಖುಷಿ ಆಗಬಾರದೆಂದು ಇವತ್ತು ಹೀಗೊಂದು ಪತ್ರಗುಚ್ಛ ನಿಮ್ಮೆಲ್ಲರ ಓದಿನ ಸಂತೋಷಕ್ಕೆ. ಅಮೆರಿಕನ್ ಹೆಸರುಗಳು ಹ್ರಸ್ವಗೊಂಡು ನಿಕ್ನೇಮ್ ಆಗುತ್ತವೆಂದು ಬರೆದಿದ್ದೆನಷ್ಟೆ? ಭಾರತದಿಂದ ಇಲ್ಲಿಗೆ ವಲಸೆಬಂದವರೂ ಕೆಲವರು ಇಲ್ಲಿ ಬಂದಮೇಲೆ ತಮ್ಮ ಹೆಸರಿನ ಹ್ರಸ್ವರೂಪ ಮಾಡ್ಕೊಳ್ತಾರೆ. ಅಂಥವರ ಉಲ್ಲೇಖವೂ ಬೇಕಿತ್ತೆಂದು ಬರೆದಿದ್ದಾರೆ ಬೆಂಗಳೂರಿನಿಂದ ವಾಸುದೇವ ಅಡಿಗ. ಅವರೆನ್ನುವುದು ನಿಜ. ಇಲ್ಲಿ ಕೃಷ್ಣಮೂರ್ತಿ ‘ಕ್ರಿಷ್’, ವೆಂಕಟೇಶ ‘ವೆನ್’, ಮೀನಾಕ್ಷಿ ‘ಮಿನ್’ ಆಗುವುದು ವೆರಿ ಕಾಮನ್. ಅಂತೆಯೇ ಬಸಪ್ಪ ‘ಬಸ್’, ಬೆಂಗಳೂರು ಪುಟ್ಟಸ್ವಾಮಿ ಶಿವಶಂಕರ ಎಂಬ ದೀರ್ಘನಾಮಧಾರಿ ಚಿಕ್ಕದಾಗಿ ಚೊಕ್ಕವಾಗಿ ‘ಬೆನ್’. ಕೆಲವೊಮ್ಮೆ ಅದು ತೀರಾ ವಿಚಿತ್ರವಾಗಿ ಕಾಣುವುದೂ ಇದೆ. ರಾಧಾಕೃಷ್ಣ ಅಯ್ಯರ್ ಎಂಬುವರೊಬ್ಬರು ನಮ್ಮ ವಾಷಿಂಗ್ಟನ್ನಲ್ಲಿದ್ದಾರೆ, ರೇಡಿಯೊ/ಟಿ.ವಿಗಳಲ್ಲಿ ಭಾರತೀಯ ಕಾರ್ಯಕ್ರಮಗಳನ್ನು ಪ್ರಾಯೋಜಿಸುವ ಉದಾರಿ ದೊಡ್ಡಕುಳ. ಅವರ ಹೆಸರು ರೇಡಿಯೊದಲ್ಲಿ ಕೇಳಿಬರೋದು ‘ರಾಡ್ ಅಯ್ಯರ್’ ಎಂದು. ಮೊದಮೊದಲಿಗೆ ನನಗೆ ಇದೆಂಥಾ ಹೆಸರಪ್ಪಾ, ಅವ್ರೇನಾದ್ರೂ ಕಾಲಲ್ಲಿ ಸ್ಟೀಲ್ರಾಡ್ ಹಾಕ್ಕೊಂಡಿದ್ದಾರಾ ಅಂತನಿಸುತ್ತಿತ್ತು. ಮೊನ್ನೆ ನನ್ನ ಇಲ್ಲಿನ ಹಿರಿಯಮಿತ್ರ ಕೆ.ಜಿ.ವಿ ಕೃಷ್ಣ ಅವರು ನಿಕ್ನೇಮ್ ಲೇಖನ ಓದಿ ಮೆಚ್ಚುಗೆ ಸೂಚಿಸಲೆಂದೇ ದೂರವಾಣಿ ಕರೆಮಾಡಿದ್ದಾಗ ಒಂದು ನಿಕ್ನೇಮ್ ನಗೆಹನಿ ಹಂಚಿಕೊಂಡರು. ಅದು ಮಾದೇಗೌಡ-ತಾಯಮ್ಮ ಅಮೆರಿಕನ್ನಡಿಗ ದಂಪತಿಯ ಕಥೆ. 60ರ ದಶಕದಿಂದ ಇಲ್ಲಿ ನೆಲೆಸಿ ಮಾದೇಗೌಡ ‘ಮ್ಯಾಡ್’ ಆಗಿದ್ದಾರೆ. ಒಮ್ಮೆ ಅವರ ಮನೆಗೆ ಬಾಲ್ಯಸ್ನೇಹಿತ ದೇವೇಗೌಡ ಬಂದಿದ್ದರು. ಅವರನ್ನು ಸ್ವಾಗತಿಸಿ ಮನೆಯೊಳಗೆ ಕರೆತಂದು, ತಾಯಮ್ಮನಿಗೆ ಪರಿಚಯಿಸುತ್ತ ಮ್ಯಾಡ್ ಉವಾಚ- “ಹೇ ಟಾಯ್, ಮೀಟ್ ಮೈ ಫ್ರೆಂಡ್ ಡೇವ್ ಫ್ರಂ ಇಂಡಿಯಾ!” ಹುಡುಗರ ಹೆಸರು ಸರಿಯಾಗಿ ಗೊತ್ತಿಲ್ಲದಿದ್ದಾಗ ಅವರಿಗೊಂದು ಸರ್ವೋಪಯೋಗಿ ನಿಕ್ನೇಮ್ ಬಳಕೆಯಾಗುತ್ತದೆ. ಇಂಗ್ಲಿಷ್ನಲ್ಲಾದರೆ ‘ಟಾಮ್, ಡಿಕ್ ಏಂಡ್ ಹ್ಯಾರಿ’. ಕನ್ನಡದಲ್ಲಿ ಎಂಕ-ನಾಣಿ-ಸೀನ. ಈ ತ್ರಿವಳಿಗಳನ್ನು ಸ್ಮರಿಸಿದ್ದಾರೆ ಮೈಸೂರಿನ ರಾಘವೇಂದ್ರ ಭಟ್ಟ. ಸೀನನ ಕಥೆ ಬರೆದುಕಳಿಸಿದ್ದಾರೆ ಸೌದಿಅರೇಬಿಯಾದಿಂದ ಕರುಣಾಕರ ಕಂಚುಕಾರ್. ಸೀನ ಎಂದರೆ ಶ್ರೀನಿವಾಸ. ಊರೆಲ್ಲ ಹಲವು ಸೀನರಿದ್ದಾಗ ಒಬ್ಬೊಬ್ಬನಿಗೂ ಉಪನಿಕ್ನೇಮ್ ಬೇಡವೇ? ಹಾಗೆ ಅಲ್ಲೊಬ್ಬ ‘ನುಗ್ಗೆಸೀನ’, ಮನೆಮುಂದೆ ನುಗ್ಗೆಮರ ಬೆಳೆಸಿದ್ದರಿಂದ ಆ ಹೆಸರು. ಊರವರು ಹಾಗೆನ್ನುವುದು ಅವನಿಗಿಷ್ಟವಿಲ್ಲ. ನುಗ್ಗೆಮರಗಳನ್ನೆಲ್ಲ ಕಡಿಸಿಬಿಟ್ಟ. ಬೊಡ್ಡೆಗಳಷ್ಟೇ ಉಳಿದವು. ಜನ ಬಿಡಬೇಕಲ್ಲ? ಈಗ ಸೀನ ‘ಬೊಡ್ಡೆಸೀನ’ ಆದ. ಕೋಪಗೊಂಡ ಸೀನ ಬೊಡ್ಡೆಗಳನ್ನೂ ಬುಡಸಮೇತ ಕಿತ್ತುಹಾಕಿಸಿದ. ಉಳಿದಿದ್ದು ಗುಂಡಿಗಳು. ಜನ ಅವನನ್ನು ‘ಗುಂಡಿಸೀನ’ ಎಂದರು. ಜನರ ಕಾಟ ತಡೆಯಲಾರದೆ ಸೀನ ನೇಣು ಹಾಕ್ಕೊಂಡು ಸತ್ತ. ಈಗ ಸೀನನ ಮಗ ನಾರಾಯಣನ ಪರಿಚಯ ‘ನೇಣುಸೀನನ ಮಗ ನಾಣಿ’ ಎಂದು! ಉತ್ತರಕರ್ನಾಟಕದಲ್ಲಿನ ನಿಕ್ನೇಮ್ಗಳ ಮತ್ತೊಂದಿಷ್ಟು ಸ್ಯಾಂಪಲ್ ಕೊಟ್ಟವರು ಕುಷ್ಟಗಿಯಿಂದ ‘ಅನ್ಯಾ’(ಅನಿರುದ್ಧ) ಕುಲಕರ್ಣಿ. ಅವರ ತಮ್ಮ ‘ಪವ್ವ್ಯಾ’(ಪವನ್); ಸ್ನೇಹಿತ ‘ರಾಗ್ಯಾ’(ರಾಘವೇಂದ್ರ). ಅದಕ್ಕಿಂತ ತಮಾಷೆಯೆಂದರೆ ಟೊರಾಂಟೊದಿಂದ ವಿಜಯ್ ಕುಲಕರ್ಣಿ ಬರೆದದ್ದು: “ಒಬ್ಬಾಕಿಗೆ ಎರಡ್ಮಕ್ಳು ಇದ್ರು. ಒಬ್ಬನ ಹೆಸರು ಪುಂಡಲಿಕ. ಇನ್ನೊಬ್ಬಾಂವ ಕುಂಡಲಿಕ. ಒಮ್ಮೆ ಹುಡುಗರಿಬ್ರೂ ಅವ್ವನ ಜೊತೆ ಮಠದಾಗ ಊಟಕ್ಕ ಕುಂತಿದ್ರು. ಪಾಯಸ ಬಂತು. ಆಕಿ ಅಂದ್ಲು, ನಮ್ಮ ಪುಂಡ್ಯಾಗ ಇನ್ನಷ್ಟು ಪಾಯ್ಸ ಹಾಕ್ರಿ. ಆಮ್ಯಾಲ ಸಾರು ಬಂತು. ಕುಂಡಲಿಕಗ ಸಾರು ಬೇಕಾತು. ಅವ್ವಗ ಕಿವಿಯಲ್ಲಿ ಹೇಳಿದ. ಆಕಿ ಜೋರಂಗ ಹೇಳಿದ್ಲು- ನಮ್ಮ ಕುಂಡ್ಯಾಗ ಇನ್ನಷ್ಟು ಸಾರು ಹಾಕ್ರಿ!” ಬೆಂಗಳೂರಿನ ವೇದಾ ಸುದರ್ಶನ್ ಅವರಂತೂ ನಿಕ್ನೇಮ್ ನೆನಪುಗಳಿಂದಲೇ ಒಂದು ಮಿನಿಆಟೊಬಯೊಗ್ರಫಿ ಬರೆದುಕಳಿಸಿದ್ದಾರೆ: “ಸ್ಕೂಲಲ್ಲಿ ಧನಲಕ್ಷ್ಮಿ ಮತ್ತು ಬನಶಂಕರಿ ಅಂತ ಅವಳಿಗಳಿದ್ರು ಅವ್ರನ್ನ ಧನ-ಬನ ಅಂತ ಕಿಚಾಯಿಸ್ತಿದ್ವಿ. ನಮ್ಮ ಮನೆಯಲ್ಲಿನ ಎಲ್ಲ ಸಮಾರಂಭಗಳಿಗೂ ಬರ್ತಿದ್ದ ಆಚಾರ್ರನ್ನು ದಪ್ಪತುಟಿ ದಾಸಯ್ಯ ಅಂತಿದ್ವಿ. ನಮ್ಮಣ್ಣನ ಫ್ರೆಂಡ್ ಒಬ್ಬ ಸೆಂಟ್ರಲ್ಲೈಬ್ರರಿಯಲ್ಲಿ ಬುಕ್ಸ್ ಕದೀತಿದ್ದ, ಅದಕ್ಕೆ ಅವ್ನನ್ನ CLBK (ಸೆಂಟ್ರಲ್ ಲೈಬ್ರರಿ ಬುಕ್ ಕಳ್ಳ) ಅಂತಿದ್ವಿ. ನಮ್ಮಕ್ಕ ತನ್ನೊಬ್ಳು ವೈಯಾರಿ ಫ್ರೆಂಡ್ಗೆ ‘ಟಿಂಗುಟಿಕರು’ ಅಂತನೂ, ಮತ್ತೊಬ್ಬ ಕುಳ್ಳಿ ಫ್ರೆಂಡ್ಗೆ ಪಿಡ್ಡ ಅಥವಾ ಪಿಡ್ಸ್ ಅಂತನೂ ಹೆಸ್ರಿಟ್ಟಿದ್ಲು. ಒಮ್ಮೆ ಅಕ್ಕನ ಲೀವ್ಲೆಟರ್ ಪಿಡ್ಸ್ಗೆ ಕೊಡೋಕ್ಕಂತ ನಾನು ಹೋಗಿದ್ದಾಗ ಅವ್ಳ ನಿಕ್ನೇಮನ್ನೇ ಹೇಳಿ ಅಕ್ಕಂಗೂ ಅವ್ಳಿಗೂ ಜೋರು ಜಗಳ ತಂದಿಟ್ಟಿದ್ದೆ. ಈಗಲೂ ನಮ್ಮಕ್ಕ ಅದನ್ನ ಜ್ಞಾಪಿಸ್ಕೊಂಡ್ರೆ ನನಗೊಂದು ಪುಟ್ಟ ಏಟು ಕೊಡ್ತಾಳೆ. ಕಾಲೇಜಲ್ಲೂ ಸಹ ಪದ್ಮಿನೀನ ಮಿನಿಪ್ಯಾಡ್ ಅಂತ, ನಾಗಮ್ಮಂಗೆ ಹಾವುರಾಣಿ ಅಂತ ಕರೆದು ಅವ್ರಮೇಲೆ ಕವನ ಬರೆದು ನೋಟೀಸ್ಬೋರ್ಡ್ ಮೇಲೆಲ್ಲ ಅಂಟಿಸ್ಬಿಡ್ತಿದ್ವಿ. ಅಪ್ಪನತ್ರ ತೊಂದ್ರೆ ಹೇಳ್ಕೊಳ್ಳೊಕೆ ಬರ್ತಿದ್ದ ವ್ಯಕ್ತಿಯೊಬ್ರು (ಹೆಸ್ರು ಗೊತ್ತಿಲ್ಲ) ಮಾತುಮಾತಿಗೂ ನಾನು ನಿಮ್ಗೆ ಚಿರಋಣಿ ಅಂತಿದ್ರು, ಅವರ ನಿಕ್ನೇಮ್ ಚಿರಋಣಿಯಾಗ್ಬಿಡ್ತು. ಇನ್ನು ಲಂಡನ್ ಅನ್ನೋ ನಿಕ್ನಾಮವಂತೂ ಎಂಥ ಪ್ರಸಿದ್ಧಿಯಂದ್ರೆ ಯಾವ ಮುಜುಗರವೂ ಇಲ್ದೆ, ಸ್ವಲ್ಪ ತಡೀರೇ ಲಂಡನ್ಗೆ ಹೋಗ್ಬರ್ತಿನಿ ಅನ್ನೋದು ನಮ್ಮಲ್ಲಿ ಅಜ್ಜಿಯಿಂದ ಮಕ್ಕಳತನಕ ಕಾಮನ್ ಆಗಿರುವಂಥದ್ದು. ಎಲ್ಲದ್ರಲ್ಲಿ ನನಗೆ ಅತ್ಯಂತ ಇಷ್ಟದ ನಿಕ್ನೇಮ್ಅಂದ್ರೆ ಕನ್ನಡ ಲೇಖಕ/ಕಥೆಗಾರ ‘ಜೋಗಿ’ (ಹೆಂಡತಿ ಜ್ಯೋತಿ, ಗಂಡ ಗಿರೀಶ್).” ನಿಕ್ನೇಮ್ಗಳು ಕೆಲವೊಮ್ಮೆ ಪ್ರೊಪ್ರೈಟರಿ ಆಗಿರುತ್ತವೆ. ಬೇರೆಯವರು ಅಥವಾ ಬೇರೆಯವರಿಗೆ ಬಳಸುವಂತಿಲ್ಲ. ಇಂಗ್ಲೆಂಡ್ನಿಂದ ಡಾ. ಶ್ರೀವತ್ಸ ದೇಸಾಯಿ ನೆನೆಸಿಕೊಂಡ ಹಾಸ್ಯಪ್ರಸಂಗ ಹೀಗಿದೆ- “ಮಗನಿಗೆ ಗೂಬೆ ಎಂದು ಸಹಪಾಠಿಗಳಿಟ್ಟ ನಿಕ್ನೇಮು. ಮಳೆಗಾಲದಲ್ಲಿ ಅವನು ಗೆಳೆಯನ ಮನೆಯಲ್ಲಿ ಕೊಡೆ ಮರೆತುಬಂದ. ಅಮ್ಮನ ಆರ್ಡರ್ ಕೇಳಿ ವಾಪಸ್ಸು ತರುವುದು ಬಡಪಾಯಿ ತಂದೆಯ ಧರ್ಮ. ಕತ್ತಲೆಯಲ್ಲಿ ಗೆಳೆಯನ ಮನೆಬಾಗಿಲು ತಟ್ಟಿದಾಗ ಬಾಗಿಲು ತೆರೆದದ್ದು ಗೆಳೆಯನ ಅಣ್ಣ. ‘ಯಾರು ಬಂದಿದ್ದಾರೆ?’ ಎಂದು ಒಳಗಿಂದ ಅವನಪ್ಪನ ಕೂಗು. ಮಳೆಯಲ್ಲಿ ತೊಯ್ಯಿಸಿಕೊಂಡು ನಿಂತ ಈ ತಂದೆಯ ಅವಮಾನಕ್ಕೆ ಮತ್ತೆ ತಿವಿತ. ಅಣ್ಣನ ಉತ್ತರ: ಗೂಬೆಯ ತಂದೆ ಬಂದಿದ್ದಾರೆ!” ಒಬ್ಬರ ಮನನೋಯಿಸುವಂಥ ನಿಕ್ನೇಮ್ ಪ್ರಯೋಗವೂ ಸಾಧುವಲ್ಲ. ವಿಂಧ್ಯಾಚಲ(ಮಧ್ಯಪ್ರದೇಶ)ದಿಂದ ಡಾ.ನಾಗಮಣಿ ಬರೆಯುತ್ತಾರೆ- ‘ಶಾಲೆಯಲ್ಲಿದ್ದಾಗ ನನ್ನನ್ನು ಕೆಲವರು ಹಲ್ಲುಬ್ಬಿ ಅಂತಿದ್ರು. ಆಗ ಅದರಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ, ಆ ವಯಸ್ಸಿನಲ್ಲಿ ಬಹುಶಃ ಸ್ನೇಹ ಮತ್ತು ಓದೋದಷ್ಟೇ ಮುಖ್ಯವಾಗಿತ್ತೇನೋ. ನನ್ನ ಹಲ್ಲು ರಿಪೇರಿ ಆದದ್ದು ಕಾಲೇಜ್ ಓದು ಮುಗಿದಮೇಲೆ. ಆದ್ರೆ ಆ ಮಾತು ಎಲ್ಲೋ ಒಂದುಕಡೆ ಚುಚ್ಚಿತ್ತು ಅನ್ಸುತ್ತೆ, ನಾನು ನಗೋದೇ ಕಮ್ಮಿ ಆಗ್ಬಿಟ್ಟಿತ್ತು. ಈಗ ಮಕ್ಕಳು ಯಾರದಾದರೂ ದೈಹಿಕ ಅವಗುಣಗಳನ್ನೇ ಗುರುತಿನಚಿಹ್ನೆ ಥರ ಬಳಸಿದರೆ ನನ್ನ ಭಾಷಣ ಕೇಳಬೇಕಾಗುತ್ತೆ!’ ಹೌದು, ದೈಹಿಕ ಲಕ್ಷಣಗಳಿಗಾಗಿ ನಿಕ್ನೇಮ್ ಸಲ್ಲದು. ಗುಣಸ್ವಭಾವಗಳಿಗಾದರೆ ಅಡ್ಡಿಯಿಲ್ಲ. ವಿಜಾಪುರದ ಭೀಮಾಶಂಕರ ಬುಗಡೆ ಚಿಕ್ಕಂದಿನಲ್ಲಿ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ವಲಸೆಬಂದವರು. ಮರಾಠಿ ಅಭ್ಯಾಸದಂತೆ ಕನ್ನಡಶಾಲೆಯಲ್ಲೂ ಮಾಸ್ತರರನ್ನು ‘ಗುರ್ಜೀ’ (ಗುರೂಜಿ) ಎಂದದ್ದಕ್ಕೆ ಸಹಪಾಠಿಗಳು ನಕ್ಕು ಅದನ್ನೇ ಅವರ ಹೆಸರಾಗಿಸಿದರು. ಊರವರೂ ಗುರ್ಜೀ ಎಂದೇ ಗುರುತಿಸಿದರು. ಈಗ ಸರಕಾರಿ ಶಾಲೆಯ ಮುಖ್ಯೋಪಾಧ್ಯಾಯನಾಗಿ ಗುರ್ಜೀ ಎಂದು ಕರೆಸಿಕೊಳ್ಳೋದು ಹೆಮ್ಮೆಯ ಸಂಗತಿ ಎನ್ನುತ್ತಾರವರು. ನೇಕನಾಮಗಳ ನವಿರು ನೆನಪುಗಳನೇಕ! * * * [ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] "Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!Saturday Mar 10, 2012
Nicety of Nicknames
Saturday Mar 10, 2012
Saturday Mar 10, 2012
ದಿನಾಂಕ 11 ಮಾರ್ಚ್ 2012ರ ಸಂಚಿಕೆ...
ನಿಕ್ನೇಮ್ ನಾಮಾವಳಿ
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] * * * ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇ | ರಘುನಾಥಾಯ ನಾಥಾಯ ಸೀತಾಯಾಃ ಪತಯೇ ನಮಃ || ಇದು ರಾಮರಕ್ಷಾ ಸ್ತೋತ್ರದ ಒಂದು ಶ್ಲೋಕ. ಭದ್ರಗಿರಿ ಅಚ್ಯುತದಾಸರು ಹರಿಕಥೆಯಲ್ಲಿ ಇದನ್ನು ಬಹಳ ಸ್ವಾರಸ್ಯಕರವಾಗಿ ವರ್ಣಿಸುತ್ತಾರೆ. ಶ್ರೀರಾಮನನ್ನು ಯಾರ್ಯಾರು ಯಾವ್ಯಾವ ಹೆಸರಿನಿಂದ ಕರೆಯುತ್ತಾರೆ ಎಂದು ತಿಳಿಸುತ್ತದೆ ಈ ಶ್ಲೋಕ. ಕೌಸಲ್ಯೆ ಮಾತೃವಾತ್ಸಲ್ಯದಿಂದ ಮಗನನ್ನು ರಾಮ ಎಂದು ಕರೆಯುವಳು. ತನ್ನ ವಂಶವನ್ನು ಭದ್ರಗೊಳಿಸಲು ಜನಿಸಿದವನೆಂಬ ಹೆಮ್ಮೆಯಿಂದ ದಶರಥ ಅವನಿಗೆ ರಾಮಭದ್ರ ಎನ್ನುತ್ತಾನೆ. ಮೂವರು ಸೋದರರ ಪಾಲಿಗೆ ಆತ ರಾಮಚಂದ್ರ. ವಸಿಷ್ಠಾದಿ ಋಷಿಮುನಿಗಳು ಅವನನ್ನು ವೇಧಸ್ ಎನ್ನುವರು, ವಿದ್ಯೆಯಲ್ಲಿ ಪಳಗಿದವ ಎಂಬರ್ಥದಲ್ಲಿ. ಅಯೋಧ್ಯೆಯ ಪ್ರಜೆಗಳಿಗೆ ಅವನು ರಘುನಾಥ- ರಘುವಂಶದ ಒಡೆಯ. ಸೀತೆಯಾದರೋ ಗಂಡನ ಹೆಸರುಹೇಳಿ ಕೂಗುವಂತಿಲ್ಲವಲ್ಲ? ಅವಳು ನಾಥ ಎಂದು ಕರೆಯುವಳು. ಇನ್ನು ಮಿಥಿಲೆಯ ಜನರಿಗೆ ಅವನೇನಿದ್ದರೂ ‘ನಮ್ಮಸೀತಮ್ಮನ್ಗಂಡ’ ಆದ್ದರಿಂದ ಅವರೆಲ್ಲ ಸೀತಾಪತಿ ಎಂದೇ ಕರೆಯುವರು! ಶ್ರೀರಾಮನ ನಿಕ್ನೇಮ್ಗಳ ಪಟ್ಟಿ ಏಕಶ್ಲೋಕದಲ್ಲಿ ಎಷ್ಟು ಚೆನ್ನಾಗಿ ಬಂದಿದೆಯಲ್ಲವೇ? ಅದು ರಾಮನಾಮಾವಳಿಯ ವಿಚಾರವಾಯ್ತು. ಬೇರೆ ದೇವರುಗಳ ನೂರೆಂಟು ನಾಮಾವಳಿ, ಸಹಸ್ರನಾಮ ಸ್ತೋತ್ರಗಳೂ ಇವೆ. ಹಾಗೆಯೇ ಮನುಷ್ಯಲೋಕದಲ್ಲೂ ನಾಮಧೇಯಗಳ ನುಲಿದಾಟ, ಅಂದರೆ ನಿಕ್ನೇಮ್ಗಳ ನಲಿದಾಟ ತುಂಬಾ ಸ್ವಾರಸ್ಯಕರವಾಗಿರುತ್ತದೆ. ನಾನಿಲ್ಲಿ ಹೇಳುತ್ತಿರುವುದು, ಪುಟ್ಟು ಪಿಂಕಿ ಚಿನ್ನು ಬಂಗಾರಿಗಳಂಥ ಮುದ್ದಿನ ಹೆಸರುಗಳ ಕುರಿತಷ್ಟೇ ಅಲ್ಲ. ಮನೆಯ ನಾಲ್ಕು ಗೋಡೆಗಳಾಚೆ, ಸ್ನೇಹಿತರ ಬಳಗದಲ್ಲಿ ಅಥವಾ ಮತ್ತೂ ವಿಸ್ತಾರವಾಗಿ ಸಾರ್ವಜನಿಕ ವಲಯದಲ್ಲೂ ಬಳಕೆಯಾಗುವ ಅಡ್ಡಹೆಸರುಗಳು, ಉಪನಾಮಧೇಯಗಳು. ಅವುಗಳನ್ನೆಲ್ಲ ನಿಕ್ನೇಮ್ ಎಂಬ ಒಂದೇ ಹೆಸರಿನಿಂದ ಗುರುತಿಸೋಣ. ನಿಕ್ನೇಮ್ ನಾಮಾವಳಿಯತ್ತ ಒಂದು ನವಿರುನೋಟ ಬೀರೋಣ. ಮೊದಲಿಗೆ ನಿಕ್ನೇಮ್ ಪದ ಎಲ್ಲಿಂದ ಬಂತೆಂದು ತಿಳಿದುಕೊಳ್ಳಬೇಕು. ೧೩ನೇ ಶತಮಾನದ ಇಂಗ್ಲಿಷ್ನಲ್ಲಿ ಅದು ekename ಅಂತ ಇತ್ತಂತೆ. eke ಎಂದರೆ ಎಡಿಷನಲ್, ಒಂದಕ್ಕಿಂತ ಹೆಚ್ಚಿನ ಎಂದರ್ಥ. ಉಚ್ಚಾರಕ್ಕೋಸ್ಕರ ಅದು nekename ಆಯ್ತಂತೆ, ಆಮೇಲೆ ಸ್ಪೆಲ್ಲಿಂಗ್ ಮತ್ತಷ್ಟು ಬದಲಾಗಿ nickname ಆಯ್ತು. ಈ ಪದಮೂಲ/ಪದಾರ್ಥ ನಮಗಿಲ್ಲಿ ಮುಖ್ಯವಾಗುತ್ತದೆ. ಏಕೆಂದರೆ ನಿಕ್ನೇಮ್ ಎಂದರೆ ಮುದ್ದಿನ ಹೆಸರು ಎಂದಷ್ಟೇ ಅರ್ಥೈಸಬೇಕಾಗಿಲ್ಲ. ಹೆಚ್ಚುವರಿಯಾಗಿ ಬಂದಿರುವ ಯಾವುದೇ ಹೆಸರು ಕೂಡ ನಿಕ್ನೇಮ್ ಆಗುತ್ತದೆ. ಸಂಸ್ಕೃತದಲ್ಲಿ ಹೆಚ್ಚೂಕಡಿಮೆ ಅದೇ ಅರ್ಥ ಅದೇ ಉಚ್ಚಾರ ಇಟ್ಟುಕೊಂಡು ‘ನೇಕನಾಮ’ (ಒಂದನೆಯದಕ್ಕಿಂತ ಹೆಚ್ಚುವರಿ ಹೆಸರು) ಎನ್ನಬಹುದೇನೊ. ಒಬ್ಬ ವ್ಯಕ್ತಿಗೆ ನಿಕ್ನೇಮ್ ಇರುವುದಕ್ಕೆ ಬೇರೆಬೇರೆ ಕಾರಣಗಳಿರಬಹುದು. ಮನೆಯಲ್ಲಿ ಮುದ್ದಿಗೆಂದು ಇಟ್ಟ ಹೆಸರೇ ಸಾರ್ವಜನಿಕವಾಗಿಯೂ ಬಳಕೆಯಾಗಬಹುದು; ಗೇಲಿ ಅಥವಾ ಕುಹಕದ ರೂಪದಲ್ಲೂ ನಿಕ್ನೇಮ್ ಬರಬಹುದು (ಅಂಥವನ್ನು ಸಹಜವಾಗಿ ಮನೆಮಂದಿ ಬಳಸುವುದಿಲ್ಲ). ಕೆಲವೊಮ್ಮೆ ವ್ಯಕ್ತಿ ತಾನೇ ಒಂದು ನಿಕ್ನೇಮ್ (ಕಾವ್ಯನಾಮ ಇದ್ದಂತೆ) ಇಟ್ಟುಕೊಳ್ಳಬಹುದು. ಅಂತೂ ಮುಖ್ಯವಾಗಿ ಗಮನಿಸಬೇಕಾದ್ದೆಂದರೆ ವ್ಯಕ್ತಿಯ ನಿಜನಾಮಧೇಯಕ್ಕಿಂತ ನಿಕ್ನೇಮ್ಗೆ ಭಾವನೆಗಳ ಲೇಪ ಹೆಚ್ಚು. ಅದು ಪ್ರೀತಿಯಾದರೂ ಇರಲಿ, ತಾತ್ಸಾರವಾದರೂ ಆಗಿರಲಿ. ವ್ಯಕ್ತಿಯ ಬಗ್ಗೆ ತಟಸ್ಥ ನಿಷ್ಪಕ್ಷಪಾತ ಉಲ್ಲೇಖ ಮಾಡುವುದಿದ್ದರೆ ನಿಜನಾಮಧೇಯ; ಸಲುಗೆಯಿಂದ ಪ್ರೀತಿ ತೋರಿಸುವುದಿದ್ದರೆ, ಕಾಲೆಳೆದು ಕಿಚಾಯಿಸುವುದಿದ್ದರೆ, ಅಥವಾ ಕೋಪ-ಹತಾಶೆಗಳಿಂದ ಮಾತಿನಲ್ಲೇ ಚಚ್ಚುವುದಿದ್ದರೆ ನಿಕ್ನೇಮ್. ಗೋಪ್ಯತೆಗಾಗಿಯೂ ನಿಕ್ನೇಮ್ ಬಳಕೆಯಾಗುವುದಿದೆ. ಇಂಟರ್ನೆಟ್, ಕಂಪ್ಯೂಟರ್ ಜಗತ್ತಿನಲ್ಲಿ ಎಷ್ಟೋಸರ್ತಿ ಯೂಸರ್ಐಡಿ ಮತ್ತು ಪ್ರೊಫೈಲ್ ಹೆಸರುಗಳು ನಿಕ್ನೇಮ್ ರೂಪದಲ್ಲಿರುತ್ತವೆ. ಕೆಲವು ಒಳ್ಳೆಯ ಉದ್ದೇಶಕ್ಕಾಗಿ, ಮತ್ತೆ ಕೆಲವು ವಿಧ್ವಂಸಕ ಕೃತ್ಯಗಳಿಗಾಗಿ. ಮಿಲಿಟರಿಯಲ್ಲೂ ಗೋಪ್ಯ ನಿಕ್ನೇಮ್ಸ್ ಬೇಕಾಗುತ್ತವೆ. ಕಳೆದವರ್ಷ ಒಸಾಮನನ್ನು ಮಟಾಶ್ ಮಾಡಲು ಅಮೆರಿಕ ನೌಕಾಸೇನೆಯ ಸೀಲ್ಸ್ ತುಕಡಿ ಕೈಗೊಂಡ ಕಾರ್ಯಾಚರಣೆಗೆ ಇಟ್ಟಿದ್ದ ನಿಕ್ನೇಮ್ ‘ಜೆರೊನಿಮೊ’ ಎಂದು. ಅದೇ ಹೆಸರಿನ ವ್ಯಕ್ತಿ ಅಮೆರಿಕದ ಮೂಲನಿವಾಸಿಗಳ ನಾಯಕನೊಬ್ಬನಿದ್ದ, ಹಾಗಾಗಿ ಒಸಾಮಹತ್ಯೆಯ ಕಾರ್ಯಾಚರಣೆಗೆ ಆ ಹೆಸರು ಇಡಬಾರದಿತ್ತೆಂದು ಸ್ವಲ್ಪ ಗಲಾಟೆಯೂ ಆಗಿತ್ತು. ಪ್ರಪಂಚಯುದ್ಧಗಳ ಸಮಯದಲ್ಲಿ ಬಹುಶಃ ನಿಕ್ನೇಮ್ ಬಳಕೆ ವ್ಯಾಪಕವಾಗಿತ್ತು. ಕೆಲವು ಗೋಪ್ಯತೆಗಾಗಿ ಶುರುವಾದದ್ದಾದರೂ ಆಮೇಲೆ ಆ ವ್ಯಕ್ತಿ ನಿಕ್ನೇಮ್ನಿಂದಲೇ ಪ್ರಖ್ಯಾತನಾದದ್ದೂ ಇದೆ. ಉದಾಹರಣೆಗೆ ಸೋವಿಯತ್ ಸಾರ್ವಭೌಮ ‘ಸ್ಟಾಲಿನ್’ ನಮಗೆಲ್ಲ ಆ ಹೆಸರಿನಿಂದಲೇ ಗೊತ್ತು. ಅವನ ನಿಜನಾಮಧೇಯವಿದ್ದದ್ದು ಜೋಸೆಫ್ ಡ್ಜುಗಾಶ್ವಿಲ್ ಎಂದು. ಅಮೆರಿಕದಲ್ಲಿ ಹೆಸರುಗಳು ಹೃಸ್ವಗೊಂಡು ನಿಕ್ನೇಮ್ ಆಗುವ ಒಂದು ಪರಿಪಾಟವೇ ಇದೆ. ಇಲ್ಲಿ ವಿಲಿಯಮ್ ಇದ್ದವನು ‘ಬಿಲ್’ ಆಗುತ್ತಾನೆ. ರಿಚಾರ್ಡ್ ‘ರಿಕ್’ ಆಗುತ್ತಾನೆ, ಚಾರ್ಲ್ಸ್ ‘ಚಕ್’ ಆಗುತ್ತಾನೆ, ಎಡ್ವರ್ಡ್ ‘ಟೆಡ್’ ಆಗುತ್ತಾನೆ. ಮಾರ್ಗರೇಟ್ ‘ಮೆಗ್ಗಿ’ ಅಥವಾ ‘ಪೆಗ್ಗಿ’ ಆಗುತ್ತಾಳೆ; ಎಲಿಜಬೆತ್ ‘ಬೆಟ್ಸಿ’ಯೂ, ಸಾರಾ ‘ಸಾಲ್ಲಿ’ಯೂ ಆಗುತ್ತಾರೆ. ಈ ಪದ್ಧತಿ ರಾಷ್ಟ್ರಾಧ್ಯಕ್ಷರನ್ನೂ ಬಿಡುವುದಿಲ್ಲ. ಅಮೆರಿಕದ ಕೆಲ ಪ್ರೆಸಿಡೆಂಟ್ಗಳಂತೂ ನಿಕ್ನೇಮ್ನಿಂದಲೇ ಪ್ರಸಿದ್ಧರು. ಜಿಮ್ಮಿ ಕಾರ್ಟರ್ (ನಿಜನಾಮಧೇಯ ಜೇಮ್ಸ್ ಅರ್ಲ್ ಕಾರ್ಟರ್) ಪ್ರಮಾಣವಚನ ಸ್ವೀಕರಿಸಿದ್ದೂ ನಿಕ್ನೇಮ್ನಲ್ಲೇ! ಜಾನ್ ಎಫ್ ಕೆನಡಿಯಂಥವರಿಗೆ ಇನಿಶಿಯಲ್ಗಳೇ (ಜೆಎಫ್ಕೆ- ನ್ಯೂಯಾರ್ಕ್ನ ವಿಮಾನನಿಲ್ದಾಣಕ್ಕೆ ಇದು ಮೂರಕ್ಷರದ ಸಂಕೇತವೂ ಆಗಿದೆ) ನಿಕ್ನೇಮ್. ನಿಕಟಪೂರ್ವ ಅಧ್ಯಕ್ಷ ಬುಷ್ ಮಹಾಶಯನಿಗೆ ಹೆಸರಿನಲ್ಲಿ ನಡುವಿನ ಡಬ್ಲ್ಯೂ ಅಕ್ಷರದ ಅಪಭ್ರಂಶರೂಪವೇ ನಿಕ್ನೇಮ್! ಟೆಕ್ಸಾಸ್ ಕೌಬಾಯ್ಗಳು ಡಬ್ಲ್ಯೂ ಅಕ್ಷರವನ್ನು ‘ಡುಬ್ಯಾ’ ಎಂದು ಉಚ್ಚರಿಸುತ್ತಾರಂತೆ. ಟೆಕ್ಸಾಸ್ ಮೂಲದ ಬುಷ್ ಮಹಾಶಯ ಕಾರ್ಟೂನಿಸ್ಟ್ಗಳಿಗೆ ನೆಚ್ಚಿನ ‘ಡುಬ್ಯಾ’ ಆದ. ಅದೊಂಥರ ನಮ್ಮ ಉತ್ತರಕರ್ನಾಟಕದ ಕೆಂಚ್ಯಾ ಬಸ್ಯಾ ಸಂಗ್ಯಾ ಬಾಳ್ಯಾಗಳಂತೆ ಭಾಸವಾಗುವುದಿಲ್ಲವೇ? ಅಂದಹಾಗೆ ಹೆಸರಿನ ಇನಿಶಿಯಲ್ಗಳು ನಿಕ್ನೇಮ್ ಆಗುವುದು ಬಹುಶಃ ಶಾಲಾಕಾಲೇಜುಗಳಲ್ಲಿನ ಶಿಕ್ಷಕವರ್ಗಕ್ಕೆ ಚೆನ್ನಾಗಿ ಅನ್ವಯವಾಗುತ್ತದೆ. ಕೆಲವೊಮ್ಮೆ ವಿದ್ಯಾರ್ಥಿಗಳಲ್ಲಿ ಪುಂಡಪೋಕರಿ ಮುಂದಾಳುತನ ವಹಿಸುವವರೂ ಇನಿಶಿಯಲ್ಸ್ ನಿಕ್ನೇಮ್ಧಾರಿಗಳಾಗುತ್ತಾರೆ. ಗಂಡನ ಹೆಸರು ಹೇಳಬಾರದೆಂದು ಇನಿಶಿಯಲ್ಸನ್ನೇ ನಿಕ್ನೇಮಾಗಿಸುವ ಹೆಂಗಳೆಯರೂ ನನಗೆ ಗೊತ್ತು. ವ್ಯಕ್ತಿಗಳಿಗಿದ್ದಂತೆ ಊರು-ರಾಜ್ಯ-ದೇಶಗಳಿಗೂ ನಿಕ್ನೇಮ್ ಇರುವುದುಂಟು. ಅಮೆರಿಕದ ಐವತ್ತೂ ಸಂಸ್ಥಾನಗಳಿಗೆ ನಿಕ್ನೇಮ್ಸ್ ಇವೆ. ನ್ಯೂಯಾರ್ಕ್ ‘ಎಂಪೈರ್ ಸ್ಟೇಟ್’ ಆದರೆ ನ್ಯೂಜೆರ್ಸಿ ‘ಗಾರ್ಡನ್ ಸ್ಟೇಟ್’. ಕ್ಯಾಲಿಫೋರ್ನಿಯಾ ‘ಗೋಲ್ಡನ್ ಸ್ಟೇಟ್’. ಮುಖ್ಯ ನಗರಗಳ ಪೈಕಿ ನ್ಯೂಯಾರ್ಕ್ಗೆ ‘ಬಿಗ್ ಆಪಲ್’ ಎಂದು ನಿಕ್ನೇಮ್. ಶಿಕಾಗೊದಲ್ಲಿ ರಾಜಕೀಯದ ಗಾಳಿಯೂ ವಾತಾವರಣದ ಗಾಳಿಯೂ ಬೀಸುತ್ತಲೇ ಇರುವುದರಿಂದ ಅದು ‘ವಿಂಡಿ ಸಿಟಿ’. ಡೆಟ್ರಾಯಿಟ್ ಕಾರುಗಳ ಉತ್ಪಾದನೆಗೆ ಹೆಸರುವಾಸಿಯಾದ್ದರಿಂದ ‘ಮೋಟರ್ ಸಿಟಿ’. ಕ್ಯಾಸಿನೊಗಳಿಂದ ತುಂಬಿ ಜೂಜುಕೋರರ ಸ್ವರ್ಗವೆನಿಸಿದ ಲಾಸ್ವೇಗಾಸ್ ಪಾಪಿಷ್ಠನಗರಿ ‘ಸಿನ್ ಸಿಟಿ’. ಇಡಿ ಅಮೆರಿಕ ದೇಶವನ್ನು ಅಥವಾ ಇಲ್ಲಿನ ಕೇಂದ್ರಸರಕಾರವನ್ನು ‘ಅಂಕಲ್ ಸ್ಯಾಮ್’ ನಿಕ್ನೇಮ್ನಿಂದ ಕರೆಯುವುದು ರೂಢಿ. ಪ್ರಪಂಚದಲ್ಲಿ ಬೇರೆಬೇರೆ ಭೌಗೋಳಿಕ ಪ್ರದೇಶಗಳಿಗೆ ನಿಕ್ನೇಮ್ಸ್ ಇರುವುದನ್ನು ನಾವೆಲ್ಲ ಏಳನೇ ತರಗತಿಯಲ್ಲೇ ಓದಿದ್ದೆವಲ್ಲ? ಭೂಗೋಳ ಪರೀಕ್ಷೆಯಲ್ಲಿ ಹೊಂದಿಸಿ ಬರೆಯಿರಿ ಪ್ರಶ್ನೆಗೆ: ಜಗತ್ತಿನ ಸಕ್ಕರೆಪಾತ್ರೆ (ಕ್ಯೂಬಾ), ಉದಯರವಿಯ ನಾಡು (ಜಪಾನ್), ನೈಲ್ ನದಿಯ ವರಪ್ರಸಾದ (ಈಜಿಪ್ಟ್), ಕಗ್ಗತ್ತಲೆಯ ಖಂಡ (ಆಫ್ರಿಕಾ), ಕಣ್ಣೀರಿನ ನದಿ (ಚೀನಾದ ಹ್ವಾಂಗ್ಹೆ) - ಎಂದು ನಿಕ್ನೇಮ್ಗಳನ್ನು ನೆನಪಿಟ್ಟುಕೊಂಡು ಐದಂಕ ಬುಟ್ಟಿಗೆ ಹಾಕಿಕೊಂಡಿದ್ದೆವಲ್ಲ? ವಸ್ತು ಅಥವಾ ವ್ಯವಸ್ಥೆಗೂ ನಿಕ್ನೇಮ್? ಹೌದು! ಲಂಡನ್ನ ಭೂಗತ ರೈಲುಸಂಚಾರವ್ಯವಸ್ಥೆಗೆ ‘ದ ಟ್ಯೂಬ್’ ಅಂತ ನಿಕ್ನೇಮ್. ಬ್ರಿಟಿಷ್ ಬ್ರಾಡ್ಕಾಸ್ಟಿಂಗ್ ಕಾರ್ಪೊರೇಷನ್ ಜಗತ್ತಿಗೆಲ್ಲ ಬಿಬಿಸಿ ಆದರೂ ಲಂಡನ್ನಿಗರಿಗದು ‘ದ ಬೀಬ್’. ಅಮೆರಿಕದಲ್ಲಿ ರಾತ್ರಿಹೊತ್ತು ಸಂಚರಿಸುವ (ನಮ್ಮೂರಲ್ಲಿ ನೈಟ್ಬಸ್ಗಳಿದ್ದಂತೆ) ವಿಮಾನಗಳಿಗೆ ‘ರೆಡ್ ಐ’ ಎಂದು ನಿಕ್ನೇಮ್. ಅಂತೆಯೇ ರೆಸ್ಟೋರೆಂಟ್ನಿಂದ ತಿಂಡಿ ಪಾರ್ಸೆಲ್ ತರುವ ಕ್ರಮಕ್ಕೆ ಇಲ್ಲಿ ಏನು ನಿಕ್ನೇಮ್ ಗೊತ್ತೇ? ‘ಟು ಗೋ’ ಎಂದು! ಕ್ಯಾನ್ ಯು ಪ್ಯಾಕ್ ಇಟ್ ಆಸ್ ಪಾರ್ಸೆಲ್? ಅಂತೆಲ್ಲ ಕೇಳಿದರೆ ಅಲ್ಲಿರುವವನಿಗೆ ಅರ್ಥವೂ ಆಗೋದಿಲ್ಲ. ‘ಟು ಗೋ’ ಎಂದರೆ ತಿಂಡಿಪೊಟ್ಟಣ ನಿಮ್ಮ ಕೈಗಿಡುತ್ತಾನೆ! ಕೊನೆಯಲ್ಲೊಂದು ರಸಪ್ರಶ್ನೆ: ಜಂಬೊ, ಜಾಮ್ಮಿ ಮತ್ತು ಜಿಮ್ಮಿ- ಮೂವರು ಪ್ರಖ್ಯಾತ ಭಾರತೀಯ ಕ್ರಿಕೆಟಿಗರ (ಈಗ ಮಾಜಿಗಳು) ನಿಕ್ನೇಮ್ಗಳು. ಯಾರಿವರು? ಬರೆದು ತಿಳಿಸಿ. * * * [ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] "Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!Saturday Mar 03, 2012
Showman Showsoff
Saturday Mar 03, 2012
Saturday Mar 03, 2012
ದಿನಾಂಕ 4 ಮಾರ್ಚ್ 2012ರ ಸಂಚಿಕೆ...
‘ಶೋ’ಬಾಜಿಗೂ ಹದ್ದು ಬೇಕು
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] * * * ಅರುಣಮೂರ್ತಿ ಎಂಬವರು ನನ್ನೊಬ್ಬ ಅಮೆರಿಕನ್ನಡಿಗ ಸ್ನೇಹಿತ. ಶಿಕಾಗೊದಲ್ಲಿ ವಾಸಿಸುತ್ತಾರೆ. ಅವರ ಪರಿಚಯವನ್ನು ನಿಮಗೆ ಸುಲಭದಲ್ಲಿ ಹೇಳಬೇಕೆಂದರೆ ಅವರು ಕನ್ನಡ ಪತ್ರಿಕೋದ್ಯಮದ ‘ವಂಡರ್ ವೈಎನ್ಕೆ’ಯವರ ತಮ್ಮನ ಮಗ. ವೃತ್ತಿಯಲ್ಲಿ ತಂತ್ರಜ್ಞಾನ ಕ್ಷೇತ್ರದವರು; ಹವ್ಯಾಸದಲ್ಲಿ ಒಬ್ಬ ಚಿತ್ರಕಾರ. ಒಳ್ಳೊಳ್ಳೆಯ ಕಾರ್ಟೂನ್ಸ್ ಸಹ ಬಿಡಿಸುತ್ತಾರೆ. ದೊಡ್ಡಪ್ಪನಿಂದ ಅಲ್ಪಸ್ವಲ್ಪ ಪತ್ರಿಕೋದ್ಯಮವೂ ಮೈಗೂಡಿಬಂದಿದೆ. ಶಿಕಾಗೊದಲ್ಲಿನ ಕನ್ನಡಕೂಟದ ಸುದ್ದಿಪತ್ರಗಳ ಸಂಪಾದಕೀಯ ಸಮಿತಿಯಲ್ಲಿ ಅವರು ಇರುತ್ತಾರೆ. ಚಂದದ ಚಿತ್ರಗಳಿಂದ ಸಂಚಿಕೆಗಳನ್ನು ಸಿಂಗರಿಸುತ್ತಾರೆ. ಅದಷ್ಟನ್ನು ಅರುಣಮೂರ್ತಿಯವರ ಬಗ್ಗೆ ತಿಳಿದುಕೊಂಡ ನಂತರ ಈಗಿನ್ನು ಅವರು ಇತ್ತೀಚೆಗೆ ಬಿಡಿಸಿದ ಒಂದು ವ್ಯಂಗ್ಯಚಿತ್ರದ ಬಗ್ಗೆ ಹೇಳುತ್ತೇನೆ. ಈ ಚಿತ್ರವನ್ನು ಅವರು ಫೇಸ್ಬುಕ್ ಮೂಲಕ ಸ್ನೇಹಿತರೊಂದಿಗೆ ಹಂಚಿಕೊಂಡಿದ್ದರು. ಇಲ್ಲಿ ಸ್ಥಳಾವಕಾಶಕ್ಕೆ ಹೊಂದುವಂತೆ ಅದನ್ನೇ ತುಸು ಕಿರಿದಾಗಿಸಿ ಬಳಸಿದ್ದೇನೆ. ಚಿತ್ರದಲ್ಲಿನ ಸಂಭಾಷಣೆ ಇಂಗ್ಲಿಷ್ನಲ್ಲಿರುವುದು, ಅಕ್ಷರಗಳು ಸ್ಪಷ್ಟವಾಗಿ ಕಾಣಲಿಕ್ಕಿಲ್ಲ, ಹಾಗಾಗಿ ನಾನೇ ವಿವರಿಸುತ್ತೇನೆ. ಶಿಕಾಗೊ ಪ್ರದೇಶದ ಒಂದು ವಿಶಾಲ ಸರೋವರದ ನಡುಗುಡ್ಡೆಯಲ್ಲಿ ಒಂದು ಹದ್ದು ಕುಳಿತಿದೆ. ಸರೋವರದಲ್ಲಿನ ಮೀನುಗಳನ್ನು ಬೇಟೆಯಾಡುವುದಕ್ಕೆ ಅದು ಬಂದಿದೆ. ಅದನ್ನು ನೋಡಿ ಮೀನುಗಳು ತಮ್ಮಲ್ಲೇ ಮಾತಾಡಿಕೊಳ್ಳುತ್ತಿವೆ- “ಈ ಗಿಡುಗಪ್ಪ ತನ್ನ ಬೇಟೆಯ ಕೈಚಳಕ ತೋರಿಸಲಿಕ್ಕೆ ಶುರುಮಾಡೋದು ಏನಿದ್ದರೂ ಆ ಮನುಷ್ಯ ಇತ್ತಕಡೆ ಬಂದಮೇಲಷ್ಟೇ. ಅವನು ಬರುವವರೆಗೆ ನಾವಿಲ್ಲಿ ಆರಾಮಾಗಿ ಆಡ್ಕೊಂಡಿರಬಹುದು. ಯಾರಬಗ್ಗೆ ಹೇಳ್ತಿರೋದು ಅಂತ ಗೊತ್ತಾಯ್ತಲ್ವ?” ಮೀನುಗಳ ಸಂಭಾಷಣೆ ಹಾಗೆ ನಡೆಯುತ್ತಿರಲು, ಹದ್ದು ಕೂಡ ತನ್ನ ಮನಸ್ಸಿನಲ್ಲೇ ಅಂದುಕೊಳ್ಳುತ್ತಿದೆ- “ಈ ಫೋಟೊಗ್ರಾಫರ್ ಆಸಾಮಿ ಇವತ್ತಾದ್ರೂ ಸ್ವಲ್ಪ ಬೇಗ ಬರ್ತಾನೆ ಅಂದ್ಕೋತೀನಿ. ತುಂಬಾ ಹಸಿವಾಗ್ತಿದೆ ನನಗೆ. ಆದರೆ ಆತ ಬರುವವರೆಗೆ ಬೇಟೆ ಶುರುಮಾಡೋದಕ್ಕೆ ಮನಸ್ಸಿಲ್ಲ...” ಹದ್ದು ನಿರೀಕ್ಷಿಸುತ್ತಿರುವ ಆ ಫೋಟೊಗ್ರಾಫರ್ ಯಾರು? ಅದರ ಸ್ವಾರಸ್ಯವನ್ನೂ ನಿಮಗೆ ತಿಳಿಸಬೇಕು. ಶಿಕಾಗೊದಲ್ಲಿಯೇ ವಾಸವಾಗಿರುವ ಇನ್ನೊಬ್ಬ ಕನ್ನಡಿಗ ಶ್ರೀನಿವಾಸ ರಾವ್. ಅವರು ಅರುಣಮೂರ್ತಿಯವರ ಸ್ನೇಹಿತ, ನನಗೂ ಪರಿಚಿತರೇ. ಫೋಟೊಗ್ರಫಿ ಅವರ ನೆಚ್ಚಿನ ಹವ್ಯಾಸ. ಇತ್ತೀಚೆಗೆ ವೈಲ್ಡ್ಲೈಫ್ ಫೋಟೊಗ್ರಫಿಯನ್ನೂ ಆರಂಭಿಸಿದ್ದಾರೆ. ವಾರಾಂತ್ಯದ ಬಿಡುವಿನಲ್ಲಿ ಹೊರಸಂಚಾರಕ್ಕೆ ಹೋಗಿ ಪ್ರಾಣಿ-ಪಕ್ಷಿಗಳ ಆಕರ್ಷಕ ಚಿತ್ರಗಳನ್ನು ಕ್ಲಿಕ್ಕಿಸುತ್ತಾರೆ. ಕೆಲವೊಮ್ಮೆ ಫೇಸ್ಬುಕ್ ಗೋಡೆಮೇಲೂ ಅಂಟಿಸುತ್ತಾರೆ. ಯಾವುದೋ ಪಕ್ಷಿಯ ನಿರ್ದಿಷ್ಟ ಭಂಗಿಯ ಚಿತ್ರ ತೆಗೆಯುವುದಕ್ಕಾಗಿ ಎಷ್ಟು ಹರಸಾಹಸ ಮಾಡಬೇಕಾಯ್ತು ಅಂತೆಲ್ಲ ವಿವರಿಸುತ್ತಾರೆ. ಅವರ ಚಿತ್ರಗಳನ್ನು, ಜೊತೆಗಿನ ಕಿರುಟಿಪ್ಪಣಿಗಳನ್ನು ನಾವೆಲ್ಲ ಸ್ನೇಹಿತರು ತುಂಬಾ ಆನಂದಿಸುತ್ತೇವೆ. ಉತ್ತಮ ಚಿತ್ರಗಳಿಗಾಗಿ ಅವರನ್ನು ಅಭಿನಂದಿಸುತ್ತೇವೆ. ಅಂಥದೊಂದು ಸ್ನೇಹಸಲುಗೆಯಿಂದಲೇ ಅರುಣಮೂರ್ತಿಯವರು ‘ಫೋಟೊಗ್ರಾಫರ್ಗಾಗಿ ಕಾಯುತ್ತಿರುವ ಹದ್ದು’ ವ್ಯಂಗ್ಯಚಿತ್ರ ಬಿಡಿಸಿದ್ದು. ನಾವೆಲ್ಲ ಅದನ್ನು ಮೆಚ್ಚಿದ್ದು. ಇಲ್ಲಿಗೆ ಈ ಲೇಖನದಲ್ಲಿ ಅರುಣಮೂರ್ತಿ, ಅವರ ಚಿತ್ರರಚನೆಯ ಹವ್ಯಾಸ, ಶ್ರೀನಿವಾಸ ರಾವ್ ಮತ್ತು ಅವರ ಫೋಟೊಗ್ರಫಿ- ಇದಿಷ್ಟರ ಪಾತ್ರ ಮುಗಿಯುತ್ತದೆ. ಮುಖ್ಯ ವಿಚಾರಕ್ಕೆ ಹಿನ್ನೆಲೆಯಾಗಿ (ಮತ್ತು ‘ನಿಮಗೆ ವಾರವಾರವೂ ಅಂಕಣ ಬರೆಯುವುದಕ್ಕೆ ವಿಷಯ ಹೇಗೆ ಹೊಳೆಯುತ್ತದೆ?’ ಎಂಬ ಸಾಮಾನ್ಯ ಪ್ರಶ್ನೆಗೆ ಜಸ್ಟ್ ಒಂದು ಉದಾಹರಣೆ ರೂಪದ ಉತ್ತರವಾಗಿ) ಇದನ್ನೆಲ್ಲ ಉಲ್ಲೇಖಿಸಬೇಕಾಯ್ತು ಅಷ್ಟೇ. ಈಗ ವ್ಯಂಗ್ಯಚಿತ್ರದಲ್ಲಿನ ಹದ್ದಿನ ಸ್ವಗತದ ಮಾತುಗಳನ್ನಷ್ಟೇ ಇನ್ನೊಮ್ಮೆ ಗಮನಿಸಿ. ಅಫ್ಕೋರ್ಸ್ ಅದೊಂದು ಬರಿ ವ್ಯಂಗ್ಯಚಿತ್ರ. ನಿಜವಾದ ಹದ್ದು ಆರೀತಿ ಫೋಟೊಗ್ರಾಫರ್ಗೆಲ್ಲ ಕಾಯುವುದಿಲ್ಲ. ತನಗೆ ಹಸಿವೆಯಾದಾಗ, ಬೇಟೆ ಆಡಬೇಕೆನಿಸಿದಾಗ ಅದಕ್ಕೆ ಯಾವ ದೊಣ್ಣೆನಾಯಕನ ಅಪ್ಪಣೆಯೂ ಬೇಡ. ತಾನು ಬೇಟೆಯಾಡುವುದನ್ನು ಯಾರಾದರೂ ನೋಡಿ ಆನಂದಿಸಲಿ, ಚಪ್ಪಾಳೆ ತಟ್ಟಲಿ, ತನ್ನ ಚಾಣಾಕ್ಷತೆಗೆ ಶಭಾಶ್ಗಿರಿ ಸಿಗಲಿ ಅಂತೆಲ್ಲ ಅದು ಆಲೋಚಿಸುವುದೂ ಇಲ್ಲ. ತನ್ನ ಫೋಟೊ ‘ನೇಚರ್’ ಪತ್ರಿಕೆಯಲ್ಲೋ ‘ನ್ಯಾಷನಲ್ ಜಿಯೊಗ್ರಫಿಕ್’ ಮ್ಯಾಗಜಿನ್ನಲ್ಲೋ ಬರಬೇಕೆಂದು ಅದಕ್ಕೆ ಆಸೆಯೂ ಇಲ್ಲ. ಅಸಲಿಗೆ ಹದ್ದು ಅಂತಲ್ಲ ಪ್ರಕೃತಿಯಲ್ಲಿ ಮನುಷ್ಯನೊಬ್ಬನನ್ನು ಬಿಟ್ಟು ಎಲ್ಲವೂ ಅದೇಥರ. ಅದನ್ನೇ ಅಲ್ಲವೇ ಡಿವಿಜಿಯವರು ಮಂಕುತಿಮ್ಮನ ಕಗ್ಗದಲ್ಲಿ ಹೇಳಿದ್ದು: “ಇಳೆಯಿಂದ ಮೊಳಕೆಯೊಗೆವಂದು ತಮಟೆಗಳಿಲ್ಲ... ಫಲ ಮಾಗುವಂದು ತುತ್ತೂರಿ ದನಿಯಿಲ್ಲ... ಬೆಳಕೀವ ಸೂರ್ಯಚಂದ್ರರದೊಂದು ಸದ್ದಿಲ್ಲ...” ತನ್ನಪಾಡಿಗೆ ತಾನು ಆಗುತ್ತಲೇ ಇರುತ್ತದೆ. ಎಲ್ಲವೂ ನ್ಯಾಚುರಲ್. ಅದಕ್ಕೇ ಅದು ನೇಚರ್. ಆದರೆ ಮನುಷ್ಯ? ಎಲ್ಲರೂ ತನ್ನನ್ನು ಗಮನಿಸಬೇಕು, ಗುರುತಿಸಬೇಕು, ಗೌರವಿಸಬೇಕು ಎನ್ನುವ ತೀವ್ರ ಚಪಲ. ನಿಜವಾಗಿ ವ್ಯಂಗ್ಯಚಿತ್ರದಲ್ಲಿನ ಹದ್ದಿನಂತೆ ಯೋಚಿಸುವುದು ಹದ್ದಲ್ಲ, ಹದ್ದು ಮೀರಿದ ಮನುಷ್ಯ! ನಮಗೆ ಪ್ರದರ್ಶನದ ಹುಚ್ಚು ಬಹಳ. ಒಳಗೆ ಗೋಳಿಸೊಪ್ಪೇ ಇದ್ದರೂ ತೋಟ ಶೃಂಗಾರಗೊಂಡು ಕಂಗೊಳಿಸಬೇಕು. ಈಗೀಗ ಅದು ಎಷ್ಟು ವಿಪರೀತಕ್ಕೆ ತಲುಪಿದೆಯೆಂದರೆ ಪೂಜೆ-ಪುನಸ್ಕಾರ ಭಕ್ತಿಭಾವಗಳಂಥ ತೀರಾ ವೈಯಕ್ತಿಕ ವಿಚಾರಗಳಲ್ಲೂ ಅಂತಃಸತ್ವಕ್ಕಿಂತ ಆಡಂಬರದ್ದೇ ಅಬ್ಬರ. ಸಾಲದೆಂಬಂತೆ ಮಿತಿಮೀರಿದ ಪ್ರಚಾರಪ್ರಿಯತೆಯ ಬೆಂಕಿಗೆ ತುಪ್ಪ ಸುರಿಯುವ ಮಾಧ್ಯಮಗಳು. ಒಮ್ಮೆ ಯೋಚಿಸಿ: ಹತ್ತಿಪ್ಪತ್ತು ವರ್ಷಗಳ ಹಿಂದೆ ವರಮಹಾಲಕ್ಷ್ಮೀ ವ್ರತ, ಅಕ್ಷಯತದಿಗೆ ಮುಂತಾದ ಧಾರ್ಮಿಕ ಆಚರಣೆಗಳು ಹೇಗೆ ಇರುತ್ತಿದ್ದವು? ಈಗ, ಅದರಲ್ಲೂ ನಗರಪ್ರದೇಶಗಳಲ್ಲಿ, ಇಪ್ಪತ್ತನಾಲ್ಕು ಇನ್ಟು ಏಳುಗಳ ಭರಾಟೆಯಲ್ಲಿ ಅವು ಹೇಗಾಗಿವೆ? ‘ಶೋ’ಬಾಜಿ ನಮ್ಮ ಬದುಕಿನ ಎಲ್ಲ ಮಗ್ಗುಲುಗಳಲ್ಲೂ ಹಾಸುಹೊಕ್ಕಿದೆ. ಜಸ್ಟ್ ಒಂದು ಸ್ಯಾಂಪಲ್- ಸಭಾಕಾರ್ಯಕ್ರಮಗಳಲ್ಲಿ ವೇದಿಕೆಯ ಮೇಲೆ ಆಸೀನರಾಗುವವರ ಸಂಖ್ಯೆ. ನನಗೆ ಎಷ್ಟೋ ಸರ್ತಿ ಅನಿಸುವುದಿದೆ ವೇದಿಕೆಯ ಮೇಲೆ ಇಷ್ಟು ಜನರ ಅಗತ್ಯವಿದೆಯೇ? ಕೆಲವೊಮ್ಮೆ ವೇದಿಕೆಯ ಮೇಲೆ ಎರಡೆರಡು ಸಾಲು ಕುರ್ಚಿಗಳಲ್ಲಿ ಗಣ್ಯರ ಗಡಣ ಜಮೆಯಾಗುತ್ತದೆ. ಆಮೇಲೆ ಅವರೆಲ್ಲರಿಂದ ಭಾಷಣಗಳೂ ಶುರುವಾದರೆ ಗೋವಿಂದಾ! ಒಬ್ಬೊಬ್ಬರೂ “ವೇದಿಕೆಯ ಮೇಲೆ ಆಸೀನರಾಗಿರುವ ... ಅವರೆ, ... ಅವರೆ, ... ಅವರೆ...” ಎಂದು ಅವರೆಕಾಳು ಬಿತ್ತುವುದಕ್ಕೇ ಐದೈದು ನಿಮಿಷ ಬೇಕು. ಮಾರನೆದಿನ ಪತ್ರಿಕೆಗಳಲ್ಲಿ ಎಲ್ಲ ಅವರೆಗಳ ಫೋಟೊ ಬೇರೆ. ಅಷ್ಟಾಗಿ ಆ ಸಭೆಯಲ್ಲಿ ಪ್ರೇಕ್ಷಕರು ಎಷ್ಟು ಜನರಿರುತ್ತಾರೆ? ಅದು ಗೊತ್ತಾಗುವುದಿಲ್ಲ, ಸಭೆಯ ಚಿತ್ರವೂ ಪ್ರಕಟವಾಗುವುದಿಲ್ಲ. ಬಹುಶಃ ಕರಾವಳಿ ಜಿಲ್ಲೆಗಳಲ್ಲಿ ಈರೀತಿಯ ಬಹುಗಣ್ಯ ಸಭಾಕಾರ್ಯಕ್ರಮಗಳ ಹಾವಳಿ ಅಧಿಕ. ಬೇರೆಕಡೆಯೂ ಇರುತ್ತೆ ಆದರೆ ಕರಾವಳಿಯ ಪತ್ರಿಕೆಗಳಲ್ಲಿ ಚಿತ್ರಸಮೇತ ವರದಿಯಾಗುವಷ್ಟು ಬೇರೆಡೆಯದು ಆಗುವುದಿಲ್ಲವೇನೊ. ಅಥವಾ ನಾನು ಗಮನಿಸುವುದಿಲ್ಲವೇನೋ. ಇನ್ನೂ ಒಂದು ತಮಾಷೆಯಿದೆ. ‘ತಾಲೂಕು ಯುವಜನಮೇಳ’ ಅಂತೊಂದು ಮೇಳ ನಡೆಯುತ್ತದೆ ಅಂತಿಟ್ಕೊಳ್ಳಿ. ಅದಕ್ಕೊಂದು ಸಮಾರಂಭ, ಒಂದೆರಡು ಚಿತ್ರಗಳೊಂದಿಗೆ ವರದಿ. ಬಹಳ ಸಂತೋಷ, ಅಷ್ಟು ಬೇಕು. ಆದರೆ, ಯುವಜನಮೇಳದ ಆಮಂತ್ರಣ ಪತ್ರ ಬಿಡುಗಡೆಗೂ ಒಂದು ಸಮಾರಂಭ ಜರುಗುತ್ತದೆ! ಕ್ಷೇತ್ರದ ಶಾಸಕರು ಮುಖ್ಯ ಅತಿಥಿಯಾಗಿ ಬರುತ್ತಾರೆ. ಅವರೊಂದಿಗೆ ಇನ್ನೂ ಐದಾರು ಗಣ್ಯರು ವೇದಿಕೆಯಲ್ಲಿ. ‘ಆಮಂತ್ರಣ ಪತ್ರಿಕೆ ಬಿಡುಗಡೆ’ ಎಂದು ಮಾರನೆದಿನದ ಪತ್ರಿಕೆಗಳಲ್ಲಿ ಸಚಿತ್ರ ವರದಿ. ಅಂದಹಾಗೆ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭಕ್ಕೂ ಪ್ರತ್ಯೇಕ ಆಮಂತ್ರಣ ಪತ್ರಿಕೆ ಬೇಡವೇ? ಅದರ ಬಿಡುಗಡೆಗೂ ಸಮಾರಂಭ ಬೇಡವೇ? ಅದಕ್ಕೇ ಹೇಳಿದ್ದು, ಬರಿ ‘ಶೋ’ಬಾಜಿ. ನೆಂಟರು ಬರುತ್ತಾರೆಂದು ಮನೆ, ಇನ್ಸ್ಪೆಕೆಟ್ರು ಬರ್ತಾರಂತ ಶಾಲೆ, ಮೇಲಧಿಕಾರಿ ಭೇಟಿ ಕೊಡುತ್ತಾನಂತ ಕಂಪನಿ ಆಫೀಸು, ಪುಢಾರಿ/ರಾಜಕಾರಣಿ ಬರುತ್ತಾನಂತ ಊರುಕೇರಿ ಎಲ್ಲವೂ ಎಂದೂಇಲ್ಲದ ಸ್ವಚ್ಛತೆಯನ್ನು ಕಾಣುತ್ತವಲ್ಲ, ಅದೂ ಒಂಥರದ ‘ಶೋ’ಬಾಜಿಯೇ. ಅದರಲ್ಲೂ ಕೊನೆಯದು ಅತಿವಿಪರ್ಯಾಸದ್ದು. ಏಕೆಂದರೆ ಆ ಪುಢಾರಿ ಹೆಚ್ಚಾಗಿ ಮಹಾಕೊಳಕನೇ ಆಗಿರುತ್ತಾನೆ, ಅವನ ಆಗಮನಕ್ಕಾಗಿ ಊರು ಸ್ವಚ್ಛಗೊಳ್ಳುತ್ತದೆ! ಇದನ್ನೆಲ್ಲ ನಾನು ಅಮೆರಿಕದಲ್ಲಿ ಕುಳಿತು ಭಾರತದ ಬಗ್ಗೆಯಷ್ಟೇ ಹೇಳುತ್ತಿದ್ದೇನೆ ಅಂದ್ಕೊಳ್ಳಬೇಡಿ. ಈ ದೇಶದಲ್ಲೂ ‘ಶೋ’ಬಾಜಿಗೆ ಕೊರತೆಯೇನಿಲ್ಲ. ಬಾಸ್ ಬಂದಾಗಷ್ಟೇ ಫೇಸ್ಬುಕ್ ವಿಂಡೋ ಮಿನಿಮೈಸ್ ಮಾಡಿ ಗಂಭೀರವಾಗಿ ಕೆಲಸ ಮಾಡುತ್ತಿರುವಂತೆ ನಟಿಸುವುದು, ಪೊಲೀಸ್ ಕಾರು ಹಾಯ್ದುಹೋದಾಗ ಮಾತ್ರ ಕಾರಿನ ವೇಗ ತಗ್ಗಿಸಿ ಅತ್ಯಂತ ವಿಧೇಯರಾಗಿ ಸ್ಪೀಡ್ಲಿಮಿಟ್ ಪಾಲಿಸುವುದು, ಟಿವಿ ಸಂದರ್ಶನಗಳಲ್ಲಿ ನಟಿಮಣಿಗಳು/ಮಾಡೆಲ್ಗಳು ಆರ್ಟಿಫಿಶಿಯಲ್ ಹಾವಭಾವಗಳನ್ನು ಪ್ರದರ್ಶಿಸುವುದು... ಗಮನಿಸುತ್ತ ಹೋದರೆ ಒಂದೆರಡಲ್ಲ, ಎಲ್ಲರೀತಿಯ ‘ಶೋ’ಬಾಜಿಗಳು ಇಲ್ಲೂ ಇವೆ, ಜಗತ್ತಿನೆಲ್ಲೆಡೆಯಲ್ಲೂ ಇವೆ. ‘ಮನ್ನಣೆಯ ದಾಹವೀಯೆಲ್ಲಕುಂ ತೀಕ್ಷ್ಣತಮ’ ಎಂದು ಕಗ್ಗದಲ್ಲಿ ಹೇಳಿರುವುದರಿಂದಲೇ ಇರಬಹುದು. * * * [ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] "Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!Version: 20241125