Episodes

Saturday Jan 28, 2012
Six Thinking Hats
Saturday Jan 28, 2012
Saturday Jan 28, 2012
ದಿನಾಂಕ 29 ಜನವರಿ 2012ರ ಸಂಚಿಕೆ...
ಒಂದೇ ಬಣ್ಣದ ಟೋಪಿಯಾ?
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] * * * ಅಲ್ಲ, ಒಂದಲ್ಲ ಎರಡಲ್ಲ ಆರು ಬೇರೆಬೇರೆ ಬಣ್ಣಗಳ ಆರು ಬೇರೆಬೇರೆ ಟೋಪಿಗಳು. ನೀಲಿ ಬಣ್ಣದ್ದೊಂದು, ಕೆಂಪಗಿನದೊಂದು; ಒಂದು ಹಳದಿ ಮತ್ತೊಂದು ಹಸಿರು; ಆಮೇಲೆ ಕಪ್ಪು ಮತ್ತು ಬಿಳಿ. ಹೀಗೆ ಆರು ಟೋಪಿ ಆರು ಬಣ್ಣ. ಇದೇನಿದು ಬಣ್ಣಬಣ್ಣದ ಮಾತನಾಡಿ ಯಾರಿಗೋ ಟೋಪಿ ಹಾಕಲಿಕ್ಕೆ ಹೊರಟಿರುವಂತಿದೆ ಎನ್ನಬೇಡಿ ಮತ್ತೆ! ಆರು ಟೋಪಿಗಳನ್ನು ಇಟ್ಕೊಳ್ಳೋಕೆ ನಾವೇನು ಷಣ್ಮುಖನ ಹಾಗೆ ಆರು ತಲೆಯುಳ್ಳವರೇ ಅಂತ ತರ್ಕಕ್ಕೂ ಇಳಿಯಬೇಡಿ. ಇವತ್ತಿನ ಅಂಕಣದಲ್ಲಿ ‘ಆರು ಟೋಪಿಗಳ ಆಲೋಚನಾ ವಿಧಾನ’ ಎಂಬ ವ್ಯಕ್ತಿತ್ವ ವಿಕಸನ ವಿಚಾರವೊಂದನ್ನು ನಿಮಗಿರುವ ಒಂದೇ ತಲೆಯೊಳಕ್ಕೆ (ಅದಂತೂ ಖಂಡಿತವಾಗಿಯೂ ಭದ್ರವಾಗಿ ಇದೆ, ಬೇಕಿದ್ದರೆ ಒಮ್ಮೆ ಮುಟ್ಟಿನೋಡಿ ಖಾತರಿಪಡಿಸಿಕೊಳ್ಳಿ) ತೂರಿಸಬೇಕೆಂಬ ಯೋಜನೆ ಇಟ್ಟುಕೊಂಡಿದ್ದೇನೆ. ವಿಷಯ ಚೆನ್ನಾಗಿದೆ, ಸ್ವಾರಸ್ಯಕರವಾಗಿದೆ, ಅನುಸರಣೀಯವಾಗಿಯೂ ಇದೆ. ಟೋಪಿ ಹಾಕಿಸಿಕೊಂಡ ಹಾಗಂತೂ ಆಗಲಿಕ್ಕಿಲ್ಲ. ಓದಿ ಮುಗಿಸಿದಾಗ ನೀವೇ ನೋಡುವಿರಂತೆ. ಇತರ ಜೀವಿಗಳಿಗಿಂತ ಮನುಷ್ಯ ಹೇಗೆ ಭಿನ್ನ ಎಂದು ಪಟ್ಟಿ ಮಾಡುತ್ತ ಹೋದರೆ ಬಹುಶಃ ‘ಆಲೋಚನಾ ಸಾಮರ್ಥ್ಯ’ ಪ್ರಮುಖವಾದ ಮೂರ್ನಾಲ್ಕು ಅಂಶಗಳೊಳಗೇ ನಮೂದಾಗುತ್ತದೆ. ನಿಜ, ಪ್ರಾಣಿಗಳಿಗೂ ಸ್ವಲ್ಪಮಟ್ಟಿಗೆ ಆಲೋಚನಾ ಸಾಮರ್ಥ್ಯ ಇದೆ, ಅಷ್ಟು ಪ್ರಮಾಣದಲ್ಲಿ ಅವುಗಳಿಗದು ಅವಶ್ಯವೂ ಹೌದು- ಆಹಾರ ಎಲ್ಲಿ ಸಿಕ್ಕೀತು, ಶತ್ರುವಿನಿಂದ ರಕ್ಷಿಸಿಕೊಳ್ಳುವುದೆಂತು ಮೊದಲಾದ ಮೂಲಭೂತ ವಿಚಾರಗಳಲ್ಲಿ ಮಾತ್ರ. ಆದರೆ ಮನುಷ್ಯ ಹಾಗಲ್ಲ. ಅವನ ಆಲೋಚನೆಗಳು ಅಗಾಧ, ಅನಂತ ಮತ್ತು ಅಸದೃಶ. ಒಮ್ಮೊಮ್ಮೆ ಎಣಿಸಿಕೊಂಡರೆ ನಮಗೇ ರೋಮಾಂಚನವಾಗುತ್ತದೆ. ಎಂತಹ ಸೂಪರ್ಕಂಪ್ಯೂಟರ್ಗಿಂತಲೂ ಅದ್ಭುತವಾದ ಮೆದುಳಿದೆ ನಮ್ಮ ತಲೆಬುರುಡೆಯೊಳಗೆ! ಮನುಷ್ಯನಿಗೆ ವರದಾನವಾಗಿ ಬಂದಿರುವ ಈ ಆಲೋಚನಾ ಸಾಮರ್ಥ್ಯದ ಒಳಗುಟ್ಟೇನು, ಅದು ಹೇಗೆ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ, ಅಥವಾ ಒಬ್ಬನೇ ವ್ಯಕ್ತಿಯಲ್ಲಿಯೂ ಸಂದರ್ಭ, ಸನ್ನಿವೇಶ, ವಯಸ್ಸು, ಪೂರ್ವಾನುಭವಗಳಿಗೆ ಹೊಂದಿಕೊಂಡು ಹೇಗೆ ಬದಲಾಗುತ್ತದೆ? ಈ ಎಲ್ಲ ವಿಚಾರಗಳ ಬಗ್ಗೆ ಮನಃಶಾಸ್ತ್ರಜ್ಞರು, ವೈದ್ಯರು, ವಿಜ್ಞಾನಿಗಳು ಸಂಶೋಧನೆಗಳನ್ನು ನಡೆಸುತ್ತಲೇ ಇದ್ದಾರೆ. ಸಂಶೋಧನೆಗಳು ಒಂದೆಡೆಯಿರಲಿ. ಇದ್ದ ಆಲೋಚನಾ ಸಾಮರ್ಥ್ಯವನ್ನೇ ಹೆಚ್ಚಿಸಿಕೊಳ್ಳುವುದು ಹೇಗೆ? ಎರ್ರಾಬಿರ್ರಿಯಾಗಿರುವುದನ್ನು, ಗೊಂದಲಗಳ ಗೂಡಾಗಿರುವುದನ್ನು, ಒಂದು ನಿರ್ದಿಷ್ಟ ಮಿತಿಯಲ್ಲಿ ಮಾತ್ರ ಕಾರ್ಯವೆಸಗುವಂಥದ್ದನ್ನು ಊರ್ಜಿತಗೊಳಿಸುವುದು ಹೇಗೆ? ಈ ನಿಟ್ಟಿನಲ್ಲೂ ಅನೇಕ ತಜ್ಞರು ಯೋಚಿಸಿದ್ದಾರೆ. ಸಿದ್ಧಾಂತಗಳನ್ನು ಮಂಡಿಸಿದ್ದಾರೆ. ಅವರಲ್ಲೊಬ್ಬ ಖ್ಯಾತಿವಂತ ಡಾ. ಎಡ್ವರ್ಡ್ ಡೆ ಬೊನೊ ಎಂಬ ಮಹಾನುಭಾವ. ಈತ ಯುರೋಪ್ನ ಒಂದು ಪುಟ್ಟ ದೇಶ ‘ಮಾಲ್ಟಾ’ ಎಂಬಲ್ಲಿಯವ. ವೈದ್ಯ, ಲೇಖಕ, ಸಂಶೋಧಕ ಮತ್ತು ಸಲಹೆಗಾರ. Dr. Edward de Bono’s Six Hat Thinking ಎಂಬ ಸಿದ್ಧಾಂತದಿಂದ, ಅದರ ಕುರಿತ ಪುಸ್ತಕಗಳು ಮತ್ತು ಕಾರ್ಯಾಗಾರಗಳಿಂದ ಜಗತ್ಪ್ರಸಿದ್ಧನಾದವ. ‘ಆರು ಟೋಪಿಗಳ ಆಲೋಚನಾ ವಿಧಾನ’ದ ಮೂಲ ತಿರುಳು ಒಂದು ಸಮಸ್ಯೆ ಅಥವಾ ಸವಾಲನ್ನು ಕೇವಲ ಒಂದೇ ದೃಷ್ಟಿಕೋನದಿಂದ ನೋಡಿ ಬಗೆಹರಿಸುವುದಕ್ಕೆ ಪ್ರಯತ್ನಿಸುವ ಬದಲಿಗೆ ವಿಭಿನ್ನ ದೃಷ್ಟಿಕೋನಗಳಿಂದ ಅರಿತುಕೊಳ್ಳುವುದು. ಹಾಗೆ ಮಾಡುವುದರಿಂದ ಸಮಸ್ಯೆಯನ್ನು ಸಮಗ್ರವಾಗಿ ಅರ್ಥ ಮಾಡಿಕೊಳ್ಳುವುದು. ‘360 degrees view’ ಅಂತಾರಲ್ಲ ಹಾಗೆ. ಸಮಸ್ಯೆ ಅಥವಾ ಸವಾಲನ್ನು ಸಂಪೂರ್ಣವಾಗಿ ಅರಿತುಕೊಂಡರೆ ಅದರ ಪರಿಹಾರಕಾರ್ಯ ಅರ್ಧದಷ್ಟು ಆದಂತೆಯೇ. ಅಷ್ಟೇಅಲ್ಲ ಪೂರ್ಣ ಪರಿಹಾರಕ್ಕೆ ಶಕ್ತಿ-ಸಂಪನ್ಮೂಲಗಳೂ ಕಡಿಮೆ ಸಾಕಾಗುತ್ತವೆ. ಒಪ್ಪತಕ್ಕ ಮಾತು, ಆದರೆ ವಿಭಿನ್ನ ದೃಷ್ಟಿಕೋನಗಳು ಎಂದರೇನು? ಅವು ಯಾವುವು? ಅದನ್ನೇ ಎಡ್ವರ್ಡ್ ಡೆಬೊನೊ ಆರು ಬಣ್ಣಗಳ ಆರು ಟೋಪಿಗಳಿಂದ ಸಾಂಕೇತಿಕವಾಗಿ ವಿಂಗಡಿಸಿದ್ದು. ಹೇಗೂ ಚಿಂತನೆ ಮತ್ತು ತಲೆಯ ವಿಚಾರ, ಟೋಪಿಯೇ ಅತ್ಯಂತ ಸಮಂಜಸ ಸಂಕೇತ ಎಂದು ಆತ ಅಂದುಕೊಂಡಿರಬೇಕು. ಟೋಪಿಯಾದರೆ ಒಂದನ್ನು ತೆಗೆದು ಇನ್ನೊಂದು ಹಾಕಿಕೊಳ್ಳುವುದು ಸುಲಭ, ಮತ್ತು ಹಾಗೆ ಟೋಪಿ ಬದಲಾಯಿಸುವುದೆಂದರೆ ದೃಷ್ಟಿಕೋನ ಬದಲಾಯಿಸಿದಂತೆ ಎಂದು ಭಾವಿಸುವುದೂ ಸುಲಭ.

Saturday Jan 21, 2012
Onomatopoeia
Saturday Jan 21, 2012
Saturday Jan 21, 2012
ದಿನಾಂಕ 22 ಜನವರಿ 2012ರ ಸಂಚಿಕೆ...
ಒನಮೆಟೊಪಿಯಾ : ಶಬ್ದಸಾಹಿತ್ಯ
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] * * * ತುಪ್ಪದ ಬಿಂದಿಗೆ ತಿಪ್ಪೆಯ ಮೇಲೆ ಧೊಪ್ಪನೆ ಬಿತ್ತಲ್ಲಾ... ಎಂದರು ಪುರಂದರದಾಸರು. ಧೊಪ್ಪನೆ ಎಂದರೇನು? ಬಿಂದಿಗೆ ಬಿದ್ದದ್ದು. ದಾಸರು ಅದನ್ನು (ಬಿಂದಿಗೆ ಬಿದ್ದ ಶಬ್ದವನ್ನು) ಅಕ್ಷರಗಳಲ್ಲಿ ಹಿಡಿದಿಟ್ಟದ್ದು. ತುಪ್ಪ ತುಂಬಿದ ಬಿಂದಿಗೆಯಾದ್ದರಿಂದ ಮತ್ತು ತಿಪ್ಪೆಯ ಮೇಲೆ ಬಿದ್ದದ್ದಾದ್ದರಿಂದ ‘ಧೊಪ್’ ಎಂದೇ ಕೇಳಿಸಿದ್ದಿರಬೇಕು. ಒಂದುವೇಳೆ ಖಾಲಿ ಬಿಂದಿಗೆ ಸಿಮೆಂಟ್ ನೆಲದ ಮೇಲೆ ಅಥವಾ ಕಲ್ಲುಬಂಡೆಗಳ ಮೇಲೆ ಬಿದ್ದಿದ್ದರೆ? ಆಗ ಧೊಪ್ ಎಂಬ ಶಬ್ದ ಬರುವುದಿಲ್ಲ. ಮತ್ತ್ಯಾವ ಶಬ್ದ? ಅದನ್ನು ಒಂದು ಸಂಸ್ಕೃತ ಶ್ಲೋಕ ಚಂದವಾಗಿ ವಿವರಿಸಿದೆ- ‘ರಾಜಾಭಿಷೇಕೇ ಮದವಿಹ್ವಲಾಯಾ ಹಸ್ತಾಚ್ಯುತೋ ಹೇಮಘಟಸ್ತರುಣ್ಯಾಃ| ಸೋಪಾನಮಾಸಾದ್ಯ ಕರೋತಿ ಶಬ್ದಂ ಠಠಂಠಠಂಠಂ ಠಠಠಂಠಠಂಠಃ||’ ರಾಜನಿಗೆ ಸ್ನಾನ ಮಾಡಿಸುವುದರಲ್ಲಿ ಮಗ್ನಳಾದ ಸೇವಕಿಯ ಕೈಯಿಂದ ಜಾರಿದ ಚಿನ್ನದ ಬಿಂದಿಗೆಯು ಮೆಟ್ಟಲುಗಳ ಮೇಲೆ ಠಠಂಠಠಂಠಂ ಠಠಠಂಠಠಂಠಃ ಎಂದು ಶಬ್ದ ಮಾಡುತ್ತ ಉರುಳಿತಂತೆ! ವೆಲ್ಕಮ್ ಟು ಒನಮೆಟೊಪಿಯಾ(onomatopoeia). ಬನ್ನಿ, ‘ಶಬ್ದಸಾಹಿತ್ಯ’ದ ಅದ್ಭುತಲೋಕದಲ್ಲಿ ಒಂದು ಸುತ್ತು ತಿರುಗಿಬರೋಣ. ಬಹುಶಃ ಒನಮೆಟೊಪಿಯಾ ಎಂಬ ಪದವನ್ನು ನೀವು ಕೇಳಿರಲಿಕ್ಕಿಲ್ಲ ಅಷ್ಟೇ, ಆದರೆ ಹಾಗಂದ್ರೇನು ಅಂತ ನಿಮಗಾಗಲೇ ಗೊತ್ತಿರುತ್ತದೆ. ಈ ವಾಕ್ಯಗಳನ್ನು ಹೀಗೇಸುಮ್ಮನೆ ಒಮ್ಮೆ ಓದಿ. “ಸಂಜೆಹೊತ್ತು ಜಿಟಿಪಿಟಿ ಮಳೆ ಸುರೀತಿತ್ತು. ಕರ್ರುಂಕುರ್ರುಂ ತಿಂಡಿ ಏನಾದ್ರೂ ಇದ್ದಿದ್ರೆ ಚೆನ್ನಾಗಿರೋದು ಅನ್ನಿಸ್ತು. ಊರಲ್ಲಾಗಿದ್ರೆ ನಿಗಿನಿಗಿ ಉರಿವ ಕೆಂಡದಲ್ಲಿ ಹಪ್ಪಳವೋ ಹಲಸಿನಬೀಜಗಳೋ ಸುಟ್ಟು ತಿಂತಿದ್ವಿ. ಈ ಹಾಳು ನಗರದಲ್ಲಿ ಕುರ್ಕುರೆ ಪ್ಯಾಕೆಟೇ ಗತಿ. ಟಿ.ವಿ ಆನ್ ಮಾಡಿದ್ರೆ ಯಾವ್ದೋ ಡಿಶುಂಡಿಶುಂ ದೃಶ್ಯಗಳ ಸಿನೆಮಾ ಬರ್ತಿತ್ತು. ವಿಲನ್ ನಾಯಕಿಯ ಕತ್ತು ಹಿಸುಕುವುದನ್ನು ನೋಡಿ ಕರುಳು ಚುರ್ರುಕ್ಕೆಂದಿತು. ಹೊರಗೆ ಧೋ ಅಂತ ಮಳೆ ಮತ್ತೂ ಹೆಚ್ಚಾಯ್ತು. ಅಷ್ಟೊತ್ತಿಗೆ ಕಟಕಟ ಬಾಗಿಲು ಬಡಿದ ಶಬ್ದ. ಚಿಲಕ ಹಾಕಿದ್ದಿರಲಿಲ್ಲವಾದ್ದರಿಂದ ಧಡಾರನೆ ಬಾಗಿಲು ತೆರೆದು ಆ ವ್ಯಕ್ತಿ ಒಳಬಂದ. ನನ್ನೆದೆಯಲ್ಲಿ ಡವಡವ. ಆ ದಢೂತಿ ಆಕೃತಿ ನೋಡಿ ಕಿಟಾರನೆ ಕಿರುಚಿದೆ. ಎಲ್ಲೋಇದ್ದ ಕರಿಬೆಕ್ಕು ಮಿಯಾಂವ್ ಎನ್ನುತ್ತ ಆಗಲೇ ಬಂದು ನನ್ನನ್ನು ಹೆದರಿಸಬೇಕೇ!” ಇದರಲ್ಲಿ ಪ್ರತಿಯೊಂದು ವಾಕ್ಯದಲ್ಲೂ ಒಂದೊಂದು ಅನ್ನುವಮಟ್ಟಿಗೆ ಒನಮೆಟೊಪಿಕ್ ಪದಗಳಿವೆ. ಜಿಟಿಪಿಟಿ, ಕರ್ರುಂಕುರುಂ, ಡಿಶುಂಡಿಶುಂ, ಚುರ್ರುಕ್ಕೆಂದಿತು, ಧೋ, ಧಡಾರನೆ, ಕಿಟಾರನೆ, ಮಿಯಾಂವ್... ಇವೆಲ್ಲ ಒಂದೊಂದು ಶಬ್ದಾನುಭವದ ಅಕ್ಷರರೂಪ ಅಲ್ಲವೇ? ಅದೇ ಒನಮೆಟೊಪಿಯಾ! ಯಾವ ಸಪ್ಪಳವನ್ನು ಹೆಚ್ಚೂಕಡಿಮೆ ಅದೇ ರೀತಿಯ ಉಚ್ಚರಣೆಯ ಪದದಲ್ಲಿ ಹಿಡಿದಿಡುತ್ತೇವೋ ಅದು ಒನಮೆಟೊಪಿಕ್ ಪದ ಎನಿಸುತ್ತದೆ. ಗಡಿಯಾರದ ‘ಟಿಕ್ಟಿಕ್’, ನೀರಿನ ‘ಜುಳುಜುಳು’, ಗೆಜ್ಜೆಯ ‘ಘಲ್ಘಲ್’ ಮುಂತಾದವೆಲ್ಲ ಒನಮೆಟೊಪಿಕ್ ಪದಗಳು. ಹೆಚ್ಚಾಗಿ ಶಿಶುಗೀತೆಗಳಲ್ಲಿ ಅನುಕರಣ ಶಬ್ದಗಳಾಗಿ ಇಂಥವು ಕಾಣಿಸಿಕೊಳ್ಳುತ್ತವೆ. ‘ಲೊಳ್ಲೊಳ್ ಭೌ ಎಂದು ಕೂಗಿಯಾಡುವೆ...’ ಎನ್ನುತ್ತದೆ ರಾಜರತ್ಮಂ ಪದ್ಯದ ನಾಯಿಮರಿ. ‘ಟಿಕ್ಟಿಕ್ ಗೆಳೆಯಾ ಟಿಕ್ ಟಿಕ್ ಟಿಕ್’ ಆಗುತ್ತಾನೆ ದಿನಕರ ದೇಸಾಯಿಯವರ ಗಂಟೆಯ ನೆಂಟ. ‘ಆಗಲೇ ಕೂಗಿತು ಕೊ-ಕ್ಕೊ-ಕ್ಕೋಳಿ ಕಣ್ಣುಜ್ಜುತ ನಾ ನೋಡಿದೆ ಪಿಳಿಪಿಳಿ...’ ಎನ್ನುತ್ತಾನೆ ಮುಂಡಾಜೆ ರಾಮಚಂದ್ರಭಟ್ಟರ ಕವಿತೆಯಲ್ಲಿ ರೈಲುಪ್ರವಾಸದ ಕನಸು ಕಂಡ ಹುಡುಗ. ‘ಕೂವೂ ಜಗ್ಜಗ್ ಪೂವ್ವೀ ಟುವ್ವಿಟ್ಟವೂ...’ ಎಂದು ಹಾಡುತ್ತವೆ ಬಿಎಂಶ್ರೀ ಬಣ್ಣಿಸುವ ವಸಂತ ಋತುವಿನ ಹಕ್ಕಿಗಳು. ಆಶ್ಚರ್ಯವೆಂದರೆ ಆ ಕವಿತೆಯ ಇಂಗ್ಲಿಷ್ ಮೂಲ ಥಾಮಸ್ ನ್ಯಾಷ್ ಬರೆದದ್ದರಲ್ಲೂ Cuckoo jug-jug pu-we to-witta-woo ಎಂದೇ ಇದೆ ಹಕ್ಕಿಗಳ ಕಲರವ! ಬಿಎಂಶ್ರೀಯವರಾಗಲೀ ನ್ಯಾಷ್ ಆಗಲೀ ಮುಂದೊಂದು ದಿನ ‘ಟ್ವಿಟ್ಟರ್’ ಅಂತೊಂದು ಕ್ರೇಜ್ ಬರುತ್ತೆ, ಹಕ್ಕಿಗಳಷ್ಟೇ ಅಲ್ಲ ಜನರೂ ‘ಟ್ವೀಟ್’ ಮಾಡುತ್ತಾರೆ ಎಂದು ಕನಸಲ್ಲೂ ಯೋಚಿಸಿರಲಿಕ್ಕಿಲ್ಲ.

Saturday Jan 14, 2012
Akshathe and Aasheervaada
Saturday Jan 14, 2012
Saturday Jan 14, 2012
ದಿನಾಂಕ 15 ಜನವರಿ 2012ರ ಸಂಚಿಕೆ...
ಆರತಕ್ಷತೆಯ ಅರ್ಥಪೂರ್ಣತೆ
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] * * * ಇತ್ತೀಚೆಗೆ ಮದುವೆ ಕರೆಯೋಲೆಗಳಲ್ಲಿ ‘ಆರತಕ್ಷತೆ’ ಎಂಬ ಪದ ಕಾಣಿಸಿಕೊಳ್ಳುವುದು ಕಡಿಮೆ. ಆರತಕ್ಷತೆಯ ಸ್ಥಾನವನ್ನು ರಿಸೆಪ್ಷನ್ ಆಕ್ರಮಿಸಿಕೊಂಡಿರುವುದು ಬಹುಶಃ ಇದಕ್ಕೆ ಕಾರಣ. ಲಗ್ನಪತ್ರಿಕೆ ಇಂಗ್ಲಿಷ್ನಲ್ಲಿದ್ದರೆ ಬಿಡಿ, ಕನ್ನಡದಲ್ಲಿದ್ದರೂ ‘ಮುಹೂರ್ತಮ್’, ‘ರಿಸೆಪ್ಷನ್’ಗಳೇ ರಾರಾಜಿಸುತ್ತವೆ. ಆರತಕ್ಷತೆಯಂಥ ಆತ್ಮೀಯ ಪದ ಅಲ್ಲಿ ನಮಗೆ ಕಾಣಸಿಗುವುದಿಲ್ಲ. ಆರತಕ್ಷತೆಯ ಕ್ರಮವೇ ಇರುವುದಿಲ್ಲವೆಂದ ಮೇಲೆ ಕರೆಯೋಲೆಯಲ್ಲಾದರೂ ಏಕಿರಬೇಕು? ವಧು-ವರರನ್ನು ಹಸೆಮಣೆಯ ಮೇಲೆ ಕೂರಿಸಿ ಸುಮಂಗಲಿಯರು ಆರತಿ ಬೆಳಗಿ ಸೋಬಾನೆ ಪದ ಹಾಡಿ ಅಕ್ಷತೆ ಕಾಳು ಹಾಕಿ ಶುಭಾಶೀರ್ವಚನ ಮಾಡುವ ಪದ್ಧತಿ ಈಗ ಹಳೇಕಾಲದ್ದೆನಿಸುತ್ತದೆ. ಅದಕ್ಕಿಂತ, ಸೂಟು-ಬೂಟು ತೊಟ್ಟ ವರ ಮತ್ತು ಸಿನೆಮಾ ತಾರೆಯನ್ನು ನಾಚಿಸುವಷ್ಟು ಮೇಕಪ್ಗೊಂಡ ವಧು ಸಿಂಹಾಸನದಂತಿರುವ ಎರಡು ಕುರ್ಚಿಗಳ ಮುಂದೆ ನಿಂತು, ಇಷ್ಟಮಿತ್ರ ಬಂಧುಬಾಂಧವರೆಲ್ಲ ಸರತಿಯ ಸಾಲಿನಲ್ಲಿ ವೇದಿಕೆಯ ಮೇಲೆ ಬಂದು ಅವರ ಕೈಕುಲುಕಿ ಒಂದಿಷ್ಟು ಕೃತಕವೇ ಎನಿಸುವಂಥ ನಗು ಬೀರಿ ಫೋಟೊ ಕ್ಲಿಕ್ಕಿಸಿಕೊಳ್ಳುವ ಯಾಂತ್ರಿಕ ಕ್ರಮವೇ ನಮಗೆಲ್ಲ ಅಭ್ಯಾಸವಾಗಿಹೋಗಿದೆ. ಏತನ್ಮಧ್ಯೆ ಆರತಕ್ಷತೆಯಲ್ಲಿ ಗಾಢವಾಗಿರುತ್ತಿದ್ದ ಆತ್ಮೀಯತೆಯು ರಿಸೆಪ್ಷನ್ ಎಂಬ ಆಡಂಬರದ ಕಣ್ಣುಕುಕ್ಕುವ ‘ಶೋ’ಬಾಜಿಯಲ್ಲಿ ಕಳೆದುಹೋಗಿದೆ. ಕಾಕ್ಕೆ ತಕ್ಕ ಕೋಲ ಎಂದು ನಾವಿದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಆದರೂ ಆರತಕ್ಷತೆಯಂಥ ಸಂಪ್ರದಾಯಗಳು ಯಾಕೆ ಇರುತ್ತಿದ್ದವು, ಅವುಗಳ ಅರ್ಥ-ಆಶಯಗಳು ಏನಿದ್ದವು ಎಂದು ತಿಳಿದುಕೊಂಡರೆ ಹೆಮ್ಮೆಯೆನಿಸುತ್ತದೆ. ಅಕ್ಷತ ಎಂದರೆ ಸಂಸ್ಕೃತ ಭಾಷೆಯಲ್ಲಿ ‘ತುಂಡಾಗದ’ (unbroken) ಎಂದರ್ಥ. ಕನ್ನಡದಲ್ಲಿ ಸ್ವಲ್ಪ ಅಪಭ್ರಂಶಗೊಂಡು ಅದು ‘ಅಕ್ಷತೆ’ ಆಗಿದೆ. ಅಕ್ಷತೆಯ ಒಂದೊಂದು ಅಕ್ಕಿ ಕಾಳು ಸಹ ಇಡಿಯದಾಗಿರಬೇಕು. ನುಚ್ಚಾಗಿರುವ ಅಕ್ಕಿಗೆ ಎಷ್ಟೇ ಅರಿಶಿನ ಕುಂಕುಮ ಹಚ್ಚಿದರೂ ಅದು ಅಕ್ಷತೆಯಾಗುವುದಿಲ್ಲ. ಅಕ್ಷತೆಯ ಇನ್ನೊಂದು ವೈಶಿಷ್ಟ್ಯವೆಂದರೆ ಅದು ಪೂಜೆ ಪುನಸ್ಕಾರಗಳಲ್ಲಿ ದೇವರಿಗೆ ಅರ್ಪಿಸುವ ಪೂಜಾದ್ರವ್ಯವಾಗಿಯೂ ಬಳಕೆಯಾಗುತ್ತದೆ, ಹಾಗೆಯೇ ದೇವತಾನುಗ್ರಹಕ್ಕೆ ಅಥವಾ ಗುರುಹಿರಿಯರ ಆಶೀರ್ವಚನಕ್ಕೆ ವಸ್ತುರೂಪವಾಗಿಯೂ ಕಾರ್ಯವೆಸಗುತ್ತದೆ. ಅಂದರೆ ಅರ್ಪಣೆ ಮತ್ತು ಅನುಗ್ರಹಗಳ ದ್ವಿಮುಖ ಸಂವಹನವನ್ನು ಅಕ್ಷತೆ ನಿಭಾಯಿಸುತ್ತದೆ. ಅರ್ಪಣೆಯಾಗಿಯೂ ಅನುಗ್ರಹವಾಗಿಯೂ ಏಕಪಾತ್ರಾಭಿನಯ ಮಾಡುತ್ತದೆ. ಇನ್ನೂ ಆಧ್ಯಾತ್ಮಿಕವಾಗಿ ಹೇಳಬೇಕಿದ್ದರೆ ಅಕ್ಷತೆ ಫಲಾಪೇಕ್ಷೆಯ ಬೀಜವೂ ಹೌದು; ಬೀಜ ಮೊಳೆತು ಪಕ್ವವಾಗಿ ಸಿಗುವ ಫಲವೂ ಹೌದು! ವಿವಾಹ ಮಹೋತ್ಸವದಲ್ಲಿ ವಧು-ವರರನ್ನು ಆಶೀರ್ವದಿಸಿ ಅನುಗ್ರಹಿಸಲಿಕ್ಕೆ ಅಕ್ಷತೆಯನ್ನು ಉಪಯೋಗಿಸುತ್ತಾರಷ್ಟೆ? ಆರತಿ ಬೆಳಗಿ ಅಕ್ಷತೆ ಹಾಕುವುದರಿಂದ ಆರತಕ್ಷತೆ ಎಂಬ ಹೆಸರು ಬಂದದ್ದಿರಬಹುದು. ಕೆಲವು ಮದುವೆ ಸಮಾರಂಭಗಳಲ್ಲಿ ಆರತಕ್ಷತೆಯೆಂಬ ಪ್ರತ್ಯೇಕ ಕಾರ್ಯಕ್ರಮ ಇರದಿದ್ದರೂ ಮುಹೂರ್ತದ ವೇಳೆ ವಧು-ವರರು ಪರಸ್ಪರ ಮಾಲೆ ಹಾಕಿಕೊಂಡ ಮೇಲೆ ಗಟ್ಟಿಮೇಳ ಮೊಳಗುತ್ತಲೇ ಅತಿಥಿಗಳೆಲ್ಲ ಅಕ್ಷತೆಯ ಮೂಲಕ ಆಶೀರ್ವಾದದ ಮಳೆಗರೆಯುತ್ತಾರೆ. ಅಕ್ಷತೆಯ ರೂಪದಲ್ಲಷ್ಟೇ ಅಲ್ಲದೆ ಮದುವೆಯ ಇನ್ನಿತರ ವಿಧಿವಿಧಾನಗಳಲ್ಲೂ ಅಕ್ಕಿಯ ಪಾತ್ರ ದೊಡ್ಡದಿದೆ. ಅಂತಃಪಟ ಸರಿಯುವ ಮುನ್ನ ವಧು-ವರರು ಎದುರುಬದುರಾಗಿ ನಿಲ್ಲುವುದು ಅಕ್ಕಿರಾಶಿಯ ಮೇಲೆ. ಸಪ್ತಪದಿ ತುಳಿಯುವುದೂ ಅಕ್ಕಿಯಿಂದ ಮಾಡಿದ ಏಳು ರಾಶಿಗಳ ಮೇಲೆ ಹೆಜ್ಜೆಯಿಟ್ಟು (ಕೆಲವು ಕಡೆ ಬೇರೆ ರೀತಿಯೂ ಇರಬಹುದು). ಗಂಡನ ಮನೆಯನ್ನು ಪ್ರವೇಶಿಸುವ ವಧು ಮನೆಯ ಹೊಸ್ತಿಲಲ್ಲಿಟ್ಟ ಅಕ್ಕಿಪಾತ್ರೆಯನ್ನು ಕಾಲಿಂದ ಚೆಲ್ಲಿ ಒಳಬರುವುದು- ಅಕ್ಷರಶಃ ಧಾನ್ಯಲಕ್ಷ್ಮಿ ಮನೆಯೊಳಗೆ ಅಡಿಯಿಟ್ಟಳು ಎಂಬ ಸಂಕೇತವಾಗಿಯೇ.

Saturday Jan 07, 2012
Talkativeness and Gender Difference
Saturday Jan 07, 2012
Saturday Jan 07, 2012
ದಿನಾಂಕ 8 ಜನವರಿ 2012ರ ಸಂಚಿಕೆ...
ವಾಚಾಳಿತನ ಮತ್ತು ಲಿಂಗಭೇದ
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] * * * ವಾಗರ್ಥಾವಿವ ಸಂಪ್ರಕ್ತೌ ವಾಗರ್ಥ ಪ್ರತಿಪತ್ತಯೇ | ಜಗತಃ ಪಿತರೌ ವಂದೇ ಪಾರ್ವತೀ ಪರಮೇಶ್ವರೌ || ಕವಿರತ್ನ ಕಾಳಿದಾಸ ಬರೆದ ರಘುವಂಶ ಮಹಾಕಾವ್ಯದ ಮೊಟ್ಟಮೊದಲ ಶ್ಲೋಕ. ಇದರಲ್ಲಿ ಕಾಳಿದಾಸ ಇನ್ಡೈರೆಕ್ಟ್ ಆಗಿ ಏನನ್ನೋ ಸೂಚಿಸಿದ್ದಾನೆಯೇ? ‘ವಾಕ್’ ಎಂದರೆ ಮಾತನ್ನು ಪಾರ್ವತಿಗೂ, ಅರ್ಥವನ್ನು ಪರಮೇಶ್ವರನಿಗೂ ಹೋಲಿಸಿರುವುದನ್ನು ನೋಡಿದರೆ- ಮಾತು ಏನಿದ್ದರೂ ಪಾರ್ವತಿಯದೇ, ಅದನ್ನು ಅರ್ಥ ಮಾಡಿಕೊಂಡು ಬದುಕಬೇಕಾದವನು ಬಡಪಾಯಿ ಈಶ್ವರ ಎನ್ನುವುದು ಕವಿಯ ಇಂಗಿತವೇ? ಹೆಂಗಸರು ಗಂಡಸರಿಗಿಂತ ಹೆಚ್ಚು ವಾಚಾಳಿಗಳು ಎಂಬ ಲೋಕರೂಢಿಯ ಮಾತಿಗೆ ಕಾಳಿದಾಸ ಕೂಡ ಅನುಮೋದನೆಯ ಮೊಹರು ಒತ್ತಿದ್ದಾನೆಯೇ? ಶತಮಾನಗಳಷ್ಟು ಹಿಂದಿನ ಕಾಲದಿಂದಲೂ ಇದೇ ಪರಿಸ್ಥಿತಿ ಮುಂದುವರಿದಿದೆ ಎಂದು ನಾವು ತಿಳಿದುಕೊಳ್ಳಬೇಕೇ? ಹಾಗೇನಿಲ್ಲ. ಒಂದನೆಯದಾಗಿ, ಕಾಳಿದಾಸನ ಶ್ಲೋಕಕ್ಕೆ ಈರೀತಿಯ ವ್ಯಾಖ್ಯಾನವನ್ನು ಯಾವ ವಿದ್ವಾಂಸರಾಗಲೀ ವಿಮರ್ಶಕರಾಗಲೀ ಕೊಟ್ಟಂತಿಲ್ಲ. ನಾನೇ ಈ ಲೇಖನದ ಪೀಠಿಕೆಗಾಗಿಯಷ್ಟೇ ಹೀಗೊಂದು ತರ್ಕವನ್ನು ರೂಪಿಸಿದ್ದು. ಎರಡನೆಯದಾಗಿ, ಹೆಂಗಸರು ಗಂಡಸರಿಗಿಂತ ಹೆಚ್ಚು ವಾಚಾಳಿಗಳು ಎನ್ನುವುದೂ ಬರಿ ಲೋಕರೂಢಿಯ ಮಾತೇ ಹೊರತು ಅದಕ್ಕೆ ವೈಜ್ಞಾನಿಕ ತಳಹದಿಯೇನಿಲ್ಲ. ಆದರೂ ಈಬಗ್ಗೆ ಚರ್ಚೆಯಾದಾಗಲೆಲ್ಲ ಒಬ್ಬೊಬ್ಬರೂ ಒಂದೊಂದು ರೀತಿಯ ವಾದ ಮಂಡಿಸಿ ವಾಚಾಳಿತನದಲ್ಲಿ ಲಿಂಗಭೇದ ಇರುವುದನ್ನು ಪ್ರತಿಪಾದಿಸುತ್ತಾರೆ. ಮಾತಿನ ಚಟ ಹೆಂಗಸರಿಗೆ ಹೆಚ್ಚು ಎಂದು ಬಿಂಬಿಸುವ ಜೋಕ್ಗಳು ವ್ಯಂಗ್ಯಚಿತ್ರಗಳು ವಕ್ರತುಂಡೋಕ್ತಿಗಳು ಹೆಚ್ಚು ಪ್ರಸಿದ್ಧವಾಗಿರುವುದೂ ಇದಕ್ಕೊಂದು ಕಾರಣ.
Version: 20241125