Episodes

Saturday Dec 31, 2011
New and Improved
Saturday Dec 31, 2011
Saturday Dec 31, 2011
ದಿನಾಂಕ 1 ಜನವರಿ 2012ರ ಸಂಚಿಕೆ...
ಹೊಚ್ಚಹೊಸ ಮತ್ತು ಬೆಚ್ಚನೆಯ
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] * * * ತಲೆಕೂದಲನ್ನು ರೇಷ್ಮೆಯಂತೆ ನುಣುಪಾಗಿಸುತ್ತದೆನ್ನುವ ಶಾಂಪೂದಿಂದ ಹಿಡಿದು, ಕಾಲ್ಬೆರಳ ಉಗುರಿಗೆ ಬಂಗಾರದ ಮೆರುಗು ತರುತ್ತದೆನ್ನುವ ನೈಲ್ಪಾಲಿಷ್ವರೆಗೆ (ಅಂದರೆ ತಲೆಯಿಂದ ಅಂಗುಷ್ಠದವರೆಗೂ, ಟಾಪ್ ಟು ಬಾಟಮ್) ಗ್ರಾಹಕೋತ್ಪನ್ನಗಳ ಜಾಹಿರಾತುಗಳದೊಂದು ಅದ್ಭುತ ಲೋಕ. ರಸ್ತೆ ಬದಿಯ ಬಿಲ್ಬೋರ್ಡ್ಗಳಲ್ಲಿ, ರೇಡಿಯೊದಲ್ಲಿ, ಟಿವಿಯಲ್ಲಿ, ಸಿನೆಮಾ ಥಿಯೇಟರ್ನಲ್ಲಿ, ಪತ್ರಿಕೆ ಕೈಗೆತ್ತಿಕೊಂಡು ಪುಟ ತಿರುವಿದರೆ ಅಲ್ಲಿಯೂ- ಎಷ್ಟೇ ನಿರ್ಲಕ್ಷಿಸಿದರೂ ಅವು ನಮ್ಮ ಗಮನ ಸೆಳೆಯುತ್ತವೆ. ಒಪ್ಪಿಗೆ ಪಡೆಯದೆಯೇ ಬಂದು ಅಪ್ಪಳಿಸುತ್ತವೆ. ಕೈ ಹಿಡಿದು ಜಗ್ಗುತ್ತವೆ. ನಾವಾದರೂ ಅಷ್ಟೇ, ಜಾಹಿರಾತುಗಳನ್ನು ನಮ್ಮ ಬದುಕಿನ ಪಾರ್ಟು-ಮತ್ತು-ಪಾರ್ಸೆಲು ಎಂದುಕೊಳ್ಳುತ್ತೇವೆ. ಮಾಹಿತಿಯೊಂದಿಗೆ ಭರಪೂರ ಮನರಂಜನೆಯೂ ಸಿಗುತ್ತದೆಂದು ಅವುಗಳನ್ನು ಕುತೂಹಲದಿಂದ ಸ್ವಾಗತಿಸುತ್ತೇವೆ, ಇಷ್ಟಪಡುತ್ತೇವೆ. ಜಾಹಿರಾತುಗಳಿಲ್ಲದ ಜಗತ್ತನ್ನು ಊಹಿಸುವುದೂ ಕಷ್ಟ! ಆದರೆ, ಬಲೆ ಬೀಸಿ ಬಕರಾಗಳಾಗಿಸುವುದೂ ಇವೇ ಜಾಹಿರಾತುಗಳು ಎನ್ನುವುದು ಎಷ್ಟೋಸಲ ನಮ್ಮ ಅರಿವಿಗೆ ಬರುವುದಿಲ್ಲ. ಬಂದರೂ ಮನಸ್ಸು ಅವುಗಳತ್ತ ಹಾತೊರೆಯುವುದನ್ನು ನಿಲ್ಲಿಸುವುದಿಲ್ಲ. ಬಹುಶಃ ಬಲೆ ಬೀಸುವಿಕೆಯ ಪ್ರಭಾವವೇ ಅಂಥದು. ಬಲೆ ಬೀಸುವಿಕೆಗೆ ಬಗೆಬಗೆಯ ರೂಪಗಳಿರುವುದೂ ಕಾರಣವಿರಬಹುದು. ಇರಲಿ, ಎಲ್ಲದರ ಸೋದಾಹರಣ ವಿವರಣೆ ಇಲ್ಲಿ ಅಪ್ರಸ್ತುತ. ಇವತ್ತಿನ ಸಂದರ್ಭಕ್ಕೆ ಸರಿಯಾಗಿ ಜಸ್ಟ್ ಒಂದು ನಮೂನೆಯ ಮೇಲಷ್ಟೇ ಹೊಸಬೆಳಕು ಹಾಯಿಸೋಣ. ಬಹಳ ವರ್ಷಗಳಿಂದ ಮಾರುಕಟ್ಟೆಯಲ್ಲಿ ಪರಿಚಿತವಿರುವ ಬ್ರಾಂಡ್ನದೇ ಆದರೂ ಕೆಲ ಉತ್ಪನ್ನಗಳ ಜಾಹಿರಾತಿನಲ್ಲಿ ‘ಹೊಸತು!’ ಅಂತಲೋ, ‘ಸುಧಾರಿತ!’ ಅಂತಲೋ, ಗಮನ ಸೆಳೆಯುವಂತೆ ಕೆಂಪುಬಣ್ಣದ ನಕ್ಷತ್ರಾಕಾರದಲ್ಲಿ (starburst shape) ದೊಡ್ಡ ಅಕ್ಷರಗಳಲ್ಲಿ ಬರೆದಿರುವುದನ್ನು ನೀವು ಗಮನಿಸಿರುತ್ತೀರಿ. ಟಿವಿ/ರೇಡಿಯೊದಲ್ಲಿ ಬರುವ ಜಾಹಿರಾತುಗಳಿಗೂ ಇದು ಅನ್ವಯವಾಗುತ್ತದೆ. ‘ಸಾದರಪಡಿಸುತ್ತಿದ್ದೇವೆ ಹೊಚ್ಚಹೊಸ...’, ‘ಈಗ ಹಿಂದೆಂದಿಗಿಂತಲೂ ಅಧಿಕ ಶಕ್ತಿಶಾಲಿ...’, ‘ಇದೀಗ ಆಕರ್ಷಕ ಹೊಸ ಪ್ಯಾಕ್ನಲ್ಲಿ...’ ಮುಂತಾದುವೆಲ್ಲ ಜಾಹಿರಾತುಗಳ ನೆಚ್ಚಿನ ಪದಪುಂಜಗಳು. ಇದನ್ನು ನಾನು ಭಾರತೀಯ ಉತ್ಪನ್ನಗಳ ಭಾರತೀಯ ಭಾಷೆಗಳಲ್ಲಿನ ಜಾಹಿರಾತುಗಳ ಬಗ್ಗೆಯಷ್ಟೇ ಹೇಳುತ್ತಿಲ್ಲ. ಇಲ್ಲಿ ಅಮೆರಿಕದಲ್ಲೂ ಅದೇಥರ: New ಅಂತಲೋ, Improved ಅಂತಲೋ, ಮತ್ತೆ ಕೆಲವೊಮ್ಮೆ New and Improved ಎಂದೋ ಒತ್ತಿಹೇಳದೆ ಯಾವ ಜಾಹಿರಾತೂ ಪರಿಣಾಮಕಾರಿ ಎನಿಸುವುದಿಲ್ಲ. ಬೇಕಿದ್ದರೆ ಅದು ಬ್ರೇಕ್ಫಾಸ್ಟ್ ಸೀರಿಯಲ್ಲೇ ಇರಲಿ, ಬೆಂಜ್ ಕಾರೇ ಇರಲಿ, ಟಾಯ್ಲೆಟ್ ಕ್ಲೀನಿಂಗ್ ಲಿಕ್ವಿಡ್ಡೇ ಇರಲಿ, ನಾಯಿಗೆ ತಿನ್ನಿಸುವ ಬಿಸ್ಕತ್ತೇ ಇರಲಿ ಎಲ್ಲವೂ ನಿರಂತರವಾಗಿ ‘ನ್ಯೂ’ ಮತ್ತು ‘ಇಂಪ್ರೂವ್ಡ್’ ಆಗುತ್ತಲೇ ಇರುತ್ತವೆ. ಇದು ಗ್ರಾಹಕನನ್ನು ಸೆಳೆಯಲಿಕ್ಕೆಂದೇ ಮಾಡುವ ತಂತ್ರ. ಹೊಸತು ಯಾವಾಗಲೂ ಹಳೆಯದಕ್ಕಿಂತ ಉತ್ತಮವಾಗಿ, ಹೆಚ್ಚು ಸಾಮರ್ಥ್ಯವುಳ್ಳದ್ದಾಗಿ ಇರುತ್ತದೆ ಎಂಬ ಭಾವನೆ ಸಾಮಾನ್ಯವಾಗಿ ಎಲ್ಲರಲ್ಲೂ ಇರುತ್ತದೆ. ಅದರ ಲಾಭಗಿಟ್ಟಿಸಿ ಹೆಣೆಯಲಾದ ತಂತ್ರವಿದು. ಇದನ್ನು appeal to novelty (ಲ್ಯಾಟಿನ್ ಮೂಲ argumentum ad novitatem) ಎನ್ನುತ್ತಾರೆ. ಇದೊಂದು ತರ್ಕಾಭಾಸ ಅಥವಾ ತಪ್ಪರಿವು. ಹೊಸತು ಎಂದಮಾತ್ರಕ್ಕೆ ಹಳೆಯದಕ್ಕಿಂತ ಹೆಚ್ಚು ಶಕ್ತಿಶಾಲಿ, ಸತ್ವಯುತ ಆಗಿರಲೇಬೇಕು ಅಂತೇನಿಲ್ಲ. ಆದರೆ ಜನಸಾಮಾನ್ಯರಿಗೆ ಹಾಗೊಂದು ನಂಬಿಕೆ ಇರುತ್ತದೆ. ಉದ್ಯಮಗಳು ಅದರ ಲಾಭಪಡೆಯುತ್ತವೆ. ‘ಹೊಸತು’, ‘ಸುಧಾರಿತ’ ಅಂತೆಲ್ಲ ಜಾಹಿರಾತಿನಲ್ಲಿ ಸೇರಿಸುತ್ತವೆ. ಒಳಗಿನ ಗುಟ್ಟು ಶಿವನೇಬಲ್ಲ ಎಂಬಂತೆ ಬರೀ ಹೊರಕವಚವನ್ನು ಆಕರ್ಷಕವಾಗಿಸಿ ಬೆಲೆಯನ್ನೂ ಒಂದಿಷ್ಟು ಹೆಚ್ಚಿಸಿ ಒಳಗೆ ಅದೇ ಹಿಂದಿನ ಗುಣಮಟ್ಟದ ಉತ್ಪನ್ನವನ್ನೇ ಮಾರಿದರೂ ಬಡಪಾಯಿ ಗ್ರಾಹಕನಿಗೆಲ್ಲಿ ಗೊತ್ತಾಗುತ್ತದೆ? ‘ಹೊಸತು ಮತ್ತು ಸುಧಾರಿತ’ ಎಂದು ಎರಡೂ ವಿಶೇಷಣಗಳನ್ನು ಒಟ್ಟಿಗೇ ಬಳಸಿದರಂತೂ ತಾಜಾ ಆಭಾಸ. ಯಾವುದೇ ಉತ್ಪನ್ನವು ಒಂದೋ ಹೊಚ್ಚಹೊಸದಾಗಿ ಇರಬಹುದು, ಇಲ್ಲ ಇದ್ದದ್ದರಲ್ಲೇ ಸುಧಾರಣೆಯಾದದ್ದಿರಬಹುದು. ಎರಡೂ ಒಟ್ಟಿಗೇ ಸಾಧ್ಯವಿಲ್ಲ. ಆದರೂ New and Improved ಎಂದು ಜಾಹಿರಾತುದಾರರು ಅಬ್ಬರಿಸುತ್ತಾರೆ. ಉತ್ಕೃಷ್ಟವಾದ ಉತ್ಪನ್ನ ಎಂದುಕೊಂಡು ಗ್ರಾಹಕರು ಉಬ್ಬಿಹೋಗುತ್ತಾರೆ. ತಮಾಷೆಯೆಂದರೆ ಈಗ ಯಃಕಶ್ಚಿತ್ ಪೊರಕೆಗೂ ಜಾಹಿರಾತು. ಪೊರಕೆ ತಯಾರಿಸುವ ಕಂಪನಿಯೂ ಪತ್ರಿಕೆಗಳಲ್ಲಿ ಫುಲ್ಪೇಜ್ ಕಲರ್ ಎಡ್ವರ್ಟೈಸ್ಮೆಂಟ್ ಕೊಡುತ್ತದೆ. ಟಿವಿಯಲ್ಲಿ ದೊಡ್ಡದೊಡ್ಡ ಕಾರ್ಯಕ್ರಮಗಳನ್ನು ಪ್ರಾಯೋಜಿಸುತ್ತದೆ. ‘ಈಗ ಹಿಂದೆಂದಿಗಿಂತಲೂ ಹೆಚ್ಚು ಕಸವನ್ನು ಗುಡಿಸುತ್ತೇವೆ!’ ಎಂದು ತನ್ನ ಜಾಹಿರಾತಿನಲ್ಲಿ ಹೇಳಿಕೊಳ್ಳುತ್ತದೆ. ಅದರ ಸೂಕ್ಷ್ಮಾರ್ಥ ನಾವು ಗಮನಿಸಬೇಕು. ಪೊರಕೆಯ ಸಾಮರ್ಥ್ಯ ಹೆಚ್ಚಿದೆ ಅಂತಲ್ಲ, ಕಾಲ ಬದಲಾದಂತೆಲ್ಲ ನಾವುಗಳು ಮನೆಯಲ್ಲೂ ಮನದಲ್ಲೂ ಹೆಚ್ಚುಹೆಚ್ಚು ಕಸ ಉತ್ಪಾದಿಸುತ್ತೇವೆ ಎಂದು! ಹಾಗೆಯೇ ‘ಇದೀಗ ಹೆಚ್ಚು ಪೋಷಕಾಂಶಗಳೊಂದಿಗೆ, ವೈದ್ಯರಿಂದ ಶಿಫಾರಿಸಲ್ಪಟ್ಟದ್ದು’ ಎಂದು ಯಾವುದಾದರೂ ಆಹಾರೋತ್ಪನ್ನದ ಜಾಹಿರಾತಿದ್ದರೆ, ಇದುವರೆಗೂ ನಾವು ತಿನ್ನುತ್ತಿದ್ದದ್ದೆಲ್ಲ ನಾಲಾಯಕ್ ಪದಾರ್ಥಗಳು, ಈಗ ಪೋಷಕಾಂಶಗಳಿಗೆ ಅರ್ಹತೆ ಗಳಿಸಿದ್ದೇವೆ ಎಂದು ಅರ್ಥೈಸಬೇಕು. ಅಂತೂ ಜಾಹಿರಾತುಗಳ ಧಾಟಿಯನ್ನು, ಒಳಧ್ವನಿಯನ್ನು ಅಕ್ಷರಶಃ ತೆಗೆದುಕೊಂಡರೆ ನಾವೆಲ್ಲ ಏನೂ ಅರಿಯದ ದಡ್ಡರೆಂದು ಒಪ್ಪಿಕೊಂಡಂತೆ. ಈ ‘ಹೊಚ್ಚಹೊಸ’ ಪದದ ಬಳಕೆಯೂ ತಮಾಷೆಯೇ. ಐದಾರು ವರ್ಷಗಳ ಹಿಂದೆ, ಕನ್ನಡ ವಾಹಿನಿಗಳು ಸಿಗುವ ಸ್ಯಾಟಲೈಟ್ ಟಿವಿ ಸೇವೆಯನ್ನು ಇಲ್ಲಿ ಪಡೆದುಕೊಂಡು ಕನ್ನಡವಾಹಿನಿಗಳನ್ನು ನೋಡತೊಡಗಿದ್ದಾಗ ಗಮನಿಸಿದ್ದೆ. ‘ಕಿರುತೆರೆಯಲ್ಲಿ ಪ್ರಪ್ರಥಮ ಬಾರಿಗೆ ಹೊಚ್ಚಹೊಸ ಚಲನಚಿತ್ರ...’ ಅಂತ ಜಾಹಿರಾತು. ಆಹಾ ಪರ್ವಾಗಿಲ್ವೇ ಹೊಸ ಸಿನೆಮಾ ಇಷ್ಟು ಬೇಗ ಟಿವಿಯಲ್ಲಿ ಬರುತ್ತಿದೆ ಎಂದು ಸಣ್ಣಮಟ್ಟಿನಲ್ಲಿ ರೋಮಾಂಚನವಾಗಿತ್ತು. ಕೊನೆಗೂ ಆ ಚಲನಚಿತ್ರ ಪ್ರಸಾರವಾಯಿತು. ಆಮೇಲೆ ಒಂದೆರಡು ವಾರಗಳ ನಂತರ ಇನ್ನೊಂದು ಚಲನಚಿತ್ರಕ್ಕೂ ‘ಕಿರುತೆರೆಯಲ್ಲಿ ಪ್ರಪ್ರಥಮ ಬಾರಿಗೆ ಹೊಚ್ಚಹೊಸ...’! ಅರೆರೆ ಇದು ಹೇಗೆ ಸಾಧ್ಯ? ಕಳೆದವಾರವಷ್ಟೇ ಇನ್ನೊಂದು ಸಿನೆಮಾ ಅದೇ ಹೆಗ್ಗಳಿಕೆಯಿಂದ ಬೀಗಿತ್ತಲ್ವೇ? ಹೋಗಲಿ ಒಂದೊಂದು ಹೊಸ ಚಿತ್ರಕ್ಕೂ ಆ ಸ್ಲೋಗನ್ನ ಸ್ವಾಗತ ಅಂತಂದುಕೊಂಡ್ರೆ, ಒಂದೆರಡು ತಿಂಗಳ ನಂತರ ಮತ್ತೆ ಅದೇ ಚಲನಚಿತ್ರ ಎರಡನೇ ಬಾರಿ ಪ್ರಸಾರವಾಯಿತು. ಮತ್ತೆ ಅದೇ ಸೊಲ್ಲು- ‘ಕಿರುತೆರೆಯಲ್ಲಿ ಪ್ರಪ್ರಥಮ ಬಾರಿಗೆ ಹೊಚ್ಚಹೊಸ!’ ಅಲ್ಲೇ ಗೊತ್ತಾಯ್ತಲ್ಲ ಹೊಚ್ಚಹೊಸ ಎನ್ನುವುದು ಸತ್ಯವಲ್ಲ, ಮೂರ್ಖರ ಪೆಟ್ಟಿಗೆಯತ್ತ ಮೂರ್ಖರನ್ನು ಸೆಳೆಯುವ ಹಸಿಹಸಿ ಸುಳ್ಳು! ಇವೆಲ್ಲ ಈಗಿನ ೨೧ನೇ ಶತಮಾನದ ತಂತ್ರಗಳು ಅಂದ್ಕೊಳ್ಳಬೇಡಿ. ಐದಾರು ದಶಕಗಳ ಹಿಂದೆ ಜಾಹಿರಾತುಗಳು ಹೇಗಿದ್ದವು ಎಂದು ಕುತೂಹಲವಿದ್ದರೆ chandamama.com ವೆಬ್ಸೈಟ್ಗೆ ಹೋಗಿನೋಡಿ. ಚಂದಮಾಮ ಹಳೇ ಸಂಚಿಕೆಗಳಲ್ಲಿನ ಜಾಹಿರಾತು ಪುಟಗಳನ್ನೇ ಪ್ರತ್ಯೇಕವಾಗಿ ಜೋಡಿಸಿಟ್ಟಿದ್ದಾರೆ. ಉಷಾ ಫ್ಯಾನುಗಳ ಜಾಹಿರಾತು ‘ಈ ಮೊದಲೆಂದೂ ಕಂಡು ಕೇಳಿ ಅರಿಯದ ಹೊಚ್ಚಹೊಸ ಡಿಸೈನುಗಳು!’ ಅಂತ ಇತ್ತು ಆಗಲೂ. ‘ಪರಿಪೂರ್ಣವಾದ ಮುಖವರ್ಚಸ್ಸಿಗೆ ಉಪಯೋಗಿಸಿರಿ ಹೊಚ್ಚಹೊಸ ಕಾಶ್ಮೀರ್ ಸ್ನೋ!’ ಅಂತ ಇನ್ನೊಂದು. ರಾಲೆ, ಹರ್ಕ್ಯೂಲಿಸ್ ಸೈಕಲ್ಗಳು, ನ್ಯೂಟ್ರೀನ್, ಪ್ಯಾರಿ ಮಿಠಾಯಿಗಳು, ವುಡ್ವರ್ಡ್ಸ್ ಗ್ರೈಪ್ವಾಟರ್... ಎಲ್ಲವುಗಳದ್ದೂ ಅದೇ ಮಂತ್ರ ಅದೇ ತಂತ್ರ ‘ಹೊಚ್ಚಹೊಸ’, ‘ಸುಧಾರಿತ’ ಅಥವಾ ಎರಡೂ! ಗಂಡಸರ ಅಂಡರ್ವೇರ್ ಕಂಪನಿಯು ಮೊಟ್ಟಮೊದಲಿಗೆ ಪಟ್ಟೆಪಟ್ಟೆಗಳ ಒಳಉಡುಪುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾಗ ಸುಧಾ/ತರಂಗದಲ್ಲಿ ಜಾಹಿರಾತು ಬಂದಿತ್ತು- ‘ಈಗ ಹೊಚ್ಚಹೊಸ ವಿನ್ಯಾಸ: ಗಂಡಿಗೆ ಒಪ್ಪುವ ಪಟ್ಟೆಗಳು!’ ಪಕ್ಕದಲ್ಲಿ ಒಂದು ಹುಲಿಯ ಚಿತ್ರ. ನಾನಾಗ ದಾವಣಗೆರೆಯಲ್ಲಿ ಎಂಜಿನಿಯರಿಂಗ್ ಓದುತ್ತಿದ್ದೆ. ಹಾಸ್ಟೆಲ್ನಲ್ಲಿ ಕೆಲವೊಮ್ಮೆ ಇಡ್ಲಿಗಳಿಗೆ ತಾಮ್ರದ ತಟ್ಟೆಗಳ ಕಿಲುಬು ತಗುಲಿದ್ದಿರುತ್ತಿತ್ತು. ಪಟ್ಟೆಪಟ್ಟೆಗಳಾಗಿ ಚಂದದ ವಿನ್ಯಾಸ ಬೇರೆ. ಕಿರಣ್ ಎಂಬೊಬ್ಬ ಸಹಪಾಠಿ ‘ಹೊಚ್ಚಹೊಸ ವಿನ್ಯಾಸ! ಗಂಡಿಗೆ ಒಪ್ಪುವ ಪಟ್ಟೆಗಳು; ಇಡ್ಲಿಗೆ ಒಪ್ಪುವ ಕಿಲುಬುಗಳು!’ ಎಂದು ತಮಾಷೆ ಮಾಡುತ್ತಿದ್ದದ್ದು ನನಗೀಗಲೂ ಚೆನ್ನಾಗಿ ನೆನಪಿದೆ. ಇನ್ನೊಂದು ಹೊಚ್ಚಹೊಸ ಜೋಕು ಮೊನ್ನೆ ಫೇಸ್ಬುಕ್ ಗೋಡೆಮೇಲೆ ನೋಡಿದ್ದು. ತುಳುಭಾಷೆಯ ಪದಗಳೂ ಇರುವ ಇದರ ಮೂಲ ದಕ್ಷಿಣಕನ್ನಡ ಅಥವಾ ಉಡುಪಿ ಜಿಲ್ಲೆ ಇರಬೇಕು. ಜೋಕ್ ಹೀಗಿದೆ- ‘ಮಕ್ಕಳು ಶಾಲೆಗೆ ಹೋಗುತ್ತಿಲ್ಲವೇ? ಹಾಗಾದರೆ ಚಿಂತಿಸಬೇಡಿ. ಈಗ ಬಂದಿದೆ ಟಾರ್ಟಾರಿಕ್ ಕಂಪನಿಯವರ ಹೊಚ್ಚಹೊಸ ಪುಳಿತ್ತ ಅಡರ್! ರಪರಪ ನಾಲ್ಕು ಬಾರಿಸಿ. ಆಗ ಒಂದು ಮಧುರ ರಿಂಗ್ಟೋನ್ ಹೊರಗೆ ಬರುತ್ತೆ. ಯಾನ್ ಶಾಲೆಗ್ ಪೋಪೆ.’ (ಪುಳಿತ್ತ ಅಡರ್ = ಹುಣಿಸೆಮರದ ಛಡಿ; ಯಾನ್ ಶಾಲೆಗ್ ಪೋಪೆ = ನಾನು ಶಾಲೆಗೆ ಹೋಗ್ತೇನೆ). ಪರಾಗಸ್ಪರ್ಶ ಅಂಕಣದ ಓದುಗಮಿತ್ರರೆಲ್ಲರಿಗೂ ಹೊಚ್ಚಹೊಸ ವರ್ಷದ ಬೆಚ್ಚನೆಯ ಮತ್ತು ಸುಧಾರಿತ ಶುಭಾಶಯಗಳು.

Saturday Dec 24, 2011
Year end Misc 2011
Saturday Dec 24, 2011
Saturday Dec 24, 2011
ದಿನಾಂಕ 25 ಡಿಸೆಂಬರ್ 2011ರ ಸಂಚಿಕೆ...
ಇತ್ತಲೆ ಹಕ್ಕಿಯೇ ಇತ್ತಲ್ವೇ!
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] * * * ನಿಜವಾಗಿಯೂ ಅಂಥದೊಂದು ಪಕ್ಷಿ ಇತ್ತೋಇಲ್ವೋ ಗೊತ್ತಿಲ್ಲ. ಆದರೆ ಕಳೆದವಾರ ಅಂಕಣದ ಕೊನೆಯಲ್ಲಿ ಕೇಳಿದ್ದ ರಸಪ್ರಶ್ನೆಗೆ ಉತ್ತರವಂತೂ ಅದೇ ಆಗಿತ್ತು. ಕರ್ನಾಟಕ ಸರಕಾರದ ಲಾಂಛನದಲ್ಲಿ ಕೇಂದ್ರಬಿಂದುವಾಗಿ ರಾಜಮರ್ಯಾದೆ ಗಳಿಸಿರುವ, ಸರ್ಕಾರಿ ಬಸ್ಸುಗಳ ಮೇಲೆ ರಾರಾಜಿಸುತ್ತ ಕರ್ನಾಟಕದ ಉದ್ದಗಲಕ್ಕೂ ಚಿರಪರಿಚಿತವಿರುವ, ಗಂಡಭೇರುಂಡ ಚಿಹ್ನೆ ಕನ್ನಡಿಗರೆಲ್ಲರ ಹೆಮ್ಮೆ. ಹಾಗಾಗಿ ‘ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ಬಿಂದುಪೂರ್ವಕ ಡಕಾರ: ಐದಕ್ಷರಗಳ ಪದ’ ಎಂಬುದಕ್ಕೆ ಗಂಡಭೇರುಂಡ ಅತ್ಯಂತ ಸೂಕ್ತ ಉತ್ತರ. ಬರೆದು ತಿಳಿಸಿದ ನೂರಾರು ಪತ್ರಮಿತ್ರರಿಗೆಲ್ಲ ಮೆಚ್ಚುಗೆ, ಅಭಿನಂದನೆ.

Saturday Dec 17, 2011
Bindupoorvaka Dakaara
Saturday Dec 17, 2011
Saturday Dec 17, 2011
ದಿನಾಂಕ 18 ಡಿಸೆಂಬರ್ 2011ರ ಸಂಚಿಕೆ...
ಬಿಂದುಪೂರ್ವಕ ಡಕಾರ
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] * * * ಬಬ್ರುವಾಹನ ಚಿತ್ರದ ‘ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ...’ ಹಾಡನ್ನು ಕೇಳದ ಕನ್ನಡಿಗರಿರಲಿಕ್ಕಿಲ್ಲ. ಕೇಳಿ ಮೆಚ್ಚಿಕೊಳ್ಳದವರಂತೂ ಖಂಡಿತ ಇಲ್ಲ. ಡಾ.ರಾಜ್ ದ್ವಿಪಾತ್ರದಲ್ಲಿ ಅದ್ಭುತವಾದ ಅಭಿನಯ. ಡಾ. ಪಿ.ಬಿ.ಶ್ರೀನಿವಾಸ್ ಜತೆಗೂಡಿ ಅತ್ಯಮೋಘ ಗಾಯನ. ನೆನೆದುಕೊಂಡರೆ ಈಗಲೂ ರೋಮಾಂಚನವಾಗುತ್ತದೆ. ಮೈ ನವಿರೇಳುತ್ತದೆ. ಈಗ ಈ ಹಾಡಿನ ಒಂದು ನಿರ್ದಿಷ್ಟ ಭಾಗದತ್ತ ನಿಮ್ಮ ಗಮನ ಸೆಳೆಯಬಯಸುತ್ತೇನೆ. ಅರ್ಜುನ: “ಭಂಡರೆದೆ ಗುಂಡಿಗೆಯ ಖಂಡಿಸುತ ರಣಚಂಡಿಗೌತಣವೀವ ಈ ಗಾಂಡೀವಿ... ಗಂಡುಗಲಿಗಳ ಗಂಡ ಉದ್ದಂಡ ಭೂಮಂಡಲದೊಳಖಂಡ ಕೀರ್ತಿಪ್ರಚಂಡ...” ಬಬ್ರುವಾಹನ: “ಚಂಡನೋ ಪ್ರಚಂಡನೋ ಪುಂಡನೋ ನಿರ್ಧರಿಸುವುದು ರಣರಂಗ...” ಗೀತರಚನಕಾರ ಹುಣಸೂರು ಕೃಷ್ಣಮೂರ್ತಿ ಇಲ್ಲಿ ಎಷ್ಟು ಚೆನ್ನಾಗಿ ಪದಗಳನ್ನು ಹೆಣೆದಿದ್ದಾರೆ! ಶಬ್ದಾಲಂಕಾರದಿಂದಲೇ ರಣರಂಗದ ದೃಶ್ಯವನ್ನು ಅದೆಷ್ಟು ಅದ್ಭುತವಾಗಿ ನಮ್ಮ ಕಣ್ಮುಂದೆ ತಂದುನಿಲ್ಲಿಸಿದ್ದಾರೆ! ಭಂಡ, ಗುಂಡಿಗೆ, ಖಂಡಿಸುತ, ರಣಚಂಡಿ, ಗಾಂಡೀವಿ... ಎಲ್ಲ ಪದಗಳಲ್ಲೂ ಒಂದು ಸಾಮಾನ್ಯ ಅಂಶವನ್ನು ಗಮನಿಸಿದಿರಾ? ಅಂಥದೇ ಇನ್ನೊಂದು ಪದ್ಯಭಾಗವನ್ನು ಈಗ ನೋಡೋಣ. ಇದು ಪುರಂದರದಾಸರ ಜನಪ್ರಿಯ ರಚನೆ ‘ಜೋಜೋ ಶ್ರೀಕೃಷ್ಣ ಪರಮಾನಂದ’ದಲ್ಲಿ ಕೊನೆಯ ಚರಣ: ಅಂಡಜವಾಹನ ಅನಂತಶಯನ ಪುಂಡರೀಕಾಕ್ಷ ಶ್ರೀಪರಮಪಾವನ ಹಿಂಡುದೈವದ ಗಂಡ ಉದ್ದಂಡನೇ ನಮ್ಮ ಪಾಂಡುರಂಗ ಶ್ರೀಪುರಂದರವಿಠಲ ಇನ್ನೂ ಒಂದು ಉದಾಹರಣೆ ಬೇಕೇ? ಸತ್ಯವೇ ಭಗವಂತನೆಂದ ಪುಣ್ಯಕೋಟಿಯ ಕಥೆಯಲ್ಲಿನ ಖಂಡವಿದೆಕೋ ಮಾಂಸವಿದೆಕೋ ಗುಂಡಿಗೆಯ ಬಿಸಿ ರಕ್ತವಿದೆಕೋ ಚಂಡವ್ಯಾಘ್ರನೇ ನೀನಿದೆಲ್ಲವ ನುಂಡುಸಂತಸದಿಂದಿರು ಸಾಕಾಗಲಿಲ್ಲವೇ? ತಗೊಳ್ಳಿ ಕುಮಾರವ್ಯಾಸನದೂ ಒಂದಿರಲಿ. ಸಭಾಪರ್ವದಿಂದ ಭಾಮಿನಿ ಷಟ್ಪದಿ- ಕಂಡು ಕೃಷ್ಣನನಿವರ ಕಾಣಿಸಿ ಕೊಂಡನರಸು ಕ್ಷೇಮಕುಶಲವ ಕಂಡು ಬೆಸಗೊಳಲೇಕೆ ಬಹು ಮಾತಿನಲಿ ಫಲವೇನು ಕಂಡೆವೈ ನಿನ್ನಮಳ ಕರುಣಾ ಖಂಡ ಜಲಧಿಯ ಭಕ್ತಜನಕಾ ಖಂಡಲ ಧ್ರುಮವೆಂದು ತಕ್ಕೈಸಿದನು ಹರಿ ಪದವ ನಾನೇನು ಹೇಳಲಿಕ್ಕೆ ಹೊರಟಿದ್ದೇನೆಂಬುದನ್ನು ಬಹುಶಃ ಇಷ್ಟೊತ್ತಿಗೆ ನೀವೇ ಕಂಡುಕೊಂಡಿದ್ದೀರಿ! ಹೌದು, ಬಿಂದುಪೂರ್ವಕ ಡಕಾರ ಪ್ರಾಸ. ಅನುಸ್ವಾರದ ನಂತರ ಡ ಅಕ್ಷರ ಇರುವ ಪದಗಳಿಂದಾದ ಪ್ರಾಸ. ದೇವನಾಗರಿ ಲಿಪಿಯಲ್ಲಿ (ಬಹುಶಃ ಹಳಗನ್ನಡದಲ್ಲೂ; ವಿಶೇಷವಾಗಿ ಕೈಬರಹದಲ್ಲಿ) ಅನುಸ್ವಾರವನ್ನು ಚುಕ್ಕಿಯಾಗಿ ಬರೆಯುವುದರಿಂದ, ಅನುಸ್ವಾರದ ನಂತರ ಡ ಅಕ್ಷರವಿದ್ದರೆ ಅದು ಬಿಂದುಪೂರ್ವಕ ಡಕಾರ. ಈ ಪದಪುಂಜವನ್ನು ನಾನು ಎರವಲು ಪಡೆದದ್ದು ಶತಾವಧಾನಿ ಡಾ.ಆರ್.ಗಣೇಶ್ ಅವರ ಇತ್ತೀಚಿನ ಪುಸ್ತಕ ‘ಬ್ರಹ್ಮಪುರಿಯ ಭಿಕ್ಷುಕ’ದಿಂದ. ಡಿವಿಜಿಯವರ ಜೀವನದ ರಸಪ್ರಸಂಗಗಳನ್ನು ಬಣ್ಣಿಸಿರುವ ಈ ಪುಸ್ತಕದಲ್ಲಿ ಬಿಂದುಪೂರ್ವಕ ಡಕಾರದ ಸ್ವಾರಸ್ಯಕರ ಉಲ್ಲೇಖಗಳಿವೆ. ಅವುಗಳನ್ನು ಆಮೇಲೆ ವಿವರಿಸುತ್ತೇನೆ. ಅದಕ್ಕೆ ಮೊದಲು ಬಿಂದುಪೂರ್ವಕ ಡಕಾರದ ಇನ್ನೂ ಕೆಲವು ಮೋಜೆನಿಸುವ ಉದಾಹರಣೆಗಳನ್ನು ನಿಮಗೆ ತೋರಿಸುತ್ತೇನೆ. ಅಮೆರಿಕನ್ನಡಿಗ ಕವಿ, ಲೇಖಕ ಡಾ.ಮೈ.ಶ್ರೀ.ನಟರಾಜ ಅವರದೊಂದು ಭಂಡಕವಿತೆ ಇದೆ, ‘ಹ್ಯೂಸ್ಟನ್ ಹುಳಿ ಹೆಂಡ’ ಅಂತ ಅದರ ಶೀರ್ಷಿಕೆ. ಮೂರ್ನಾಲ್ಕು ದಶಕಗಳ ಹಿಂದೆ ಅವರು ಅಮೆರಿಕ ದೇಶಕ್ಕೆ ಬಂದ ಹೊಸತರಲ್ಲಿ ಬರೆದದ್ದಿರಬೇಕು. ಅವರ ಸಮಕಾಲೀನ ಅಮೆರಿಕನ್ನಡಿಗರು ಅಪರೂಪಕ್ಕೆ ಒಂದೆಡೆ ಸೇರಿದಾಗ, ಅದರಲ್ಲೂ ಗುಂಡುಪಾರ್ಟಿ ಏನಾದರೂ ಏರ್ಪಡಿಸಿದರೆ ಈ ಕವಿತೆ ಪಾರ್ಟಿಯ ನಶೆಯನ್ನು ಮತ್ತಷ್ಟು ಏರಿಸುತ್ತದಂತೆ. ಡೊಳ್ಳುಕುಣಿತದ ದೋಂಡೂಬಾಯಿ ಅಮೆರಿಕಾ ನೋಡಿ ಬಿಟ್ಟಳು ಬಾಯಿ ಟೆಕ್ಸಾಸ್ನಲ್ಲೂ ತೆಂಗಿನಕಾಯಿ ಮೆಕ್ಸಿಕೊ ಮಣ್ಣಿನ ಮೆಣಸಿನಕಾಯಿ ಎಂದು ಶುರುವಾಗುತ್ತದೆ ಕವಿತೆ. ಮಾಮೂಲಿ ಅಂತ್ಯಪ್ರಾಸವು ಮುಂದಿನ ಒಂದು ಚರಣದಲ್ಲಿ ಬಿಂದುಪೂರ್ವಕ ಡಕಾರ ಪ್ರಾಸವಾಗುತ್ತದೆ- ಹಿಂದೂಮುಂದೂ ನೋಡದೆ ದೋಂಡೂ ತರಿಸಿದಳಣ್ಣ ಘಂಘಂ ಗುಂಡು ಕುಡಿಯುವ ಇವಳ ವೈಖರಿ ಕಂಡು ಮುತ್ತಿದರಣ್ಣ ಗಂಡ್ಗಳ ಹಿಂಡು ಆಮೇಲೆ ಮತ್ತಷ್ಟು ಬಿಂದುಪೂರ್ವಕ ಡಕಾರ. ದೋಂಡೂಬಾಯಿ ಜತೆಸೇರಿದ ಗಂಡಸರ (ಗಂಡಂದಿರ?) ವಿವರ. ತಂಡದ ಭಂಡರ ದೊಡ್ಡ ಮುಖಂಡ ಕೌಬಾಯಿ ಹ್ಯಾಟಿನ ಮಹಾ ಪ್ರಚಂಡ... ಹೀಗೆ ಸಾಗುತ್ತದೆ ಭಂಡಕವಿತೆ. ಶಾಂತಮ್ಮ ಪಾಪಮ್ಮ! ಇದೇನಿದು ಟೀಟೋಟ್ಲರ್ ಅಂಕಣದಲ್ಲಿ ಗುಂಡುತುಂಡಿನ ಸಮಾಚಾರ! ಇದನ್ನು ಖಂಡತುಂಡವಾಗಿ ನಿರಾಕರಿಸಬೇಕು ಅಂತೀರಾ? ಆಯ್ತು ಈಗ ಪಾಪಪರಿಹಾರಕ್ಕೆ ಒಂದಿಷ್ಟು ಭಜನೆ ಮಾಡೋಣ. ಅಖಿಲಾಂಡಕೋಟಿ ಬ್ರಹ್ಮಾಂಡನಾಯಕ ಪಾಂಡುರಂಗನನ್ನು ನೆನೆಯೋಣ. ‘ಕಂಡೆ ನಾ ಗೋವಿಂದನ ಪುಂಡರೀಕಾಕ್ಷ ಪಾಂಡವಪಕ್ಷ ಕೃಷ್ಣನ...’ ಎಂದು ಸ್ತುತಿಸೋಣ. ‘ದಂಡಿಗೆ ಬೆತ್ತ ಹಿಡಿಯೋದಕ್ಕೆ ಮಂಡೆ ಮಾಚಿ ನಾಚುತಲಿದ್ದೆ... ಹೆಂಡತಿ ಸಂತತಿ ಸಾವಿರವಾಗಲಿ ದಂಡಿಗೆ ಬೆತ್ತ ಹಿಡಿಸಿದಳಯ್ಯ... ಆದದ್ದೆಲ್ಲ ಒಳಿತೇ ಆಯಿತು’ ಎನ್ನೋಣ. ಖಂಡೀಭವದ್ಬಹುಲ ಡಿಂಡೀರಜೃಂಭಣ ಸುಚಂಡೀಕೃತೋದಧಿಮಹಾ ಕಾಂಡಾತಿಚಿತ್ರಗತಿ ಶೌಂಡಾದ್ಯಹೈಮರದ ಭಾಂಡಾಪ್ರಮೇಯಚರಿತ ಚಂಡಾಶ್ವಕಂಠಮದ ಶುಂಡಾಲದುರ್ಹೃದಯ ಗಂಡಾಭಿಖಂಡಕರದೋ ಚಂಡಾಮರೇಶಹಯ ತುಂಡಾಕೃತೇದೃಶಮ ಖಂಡಾಮಲಂಪ್ರದಿಶಮೇ ಎಂದು ವಾದಿರಾಜರ ದಶಾವತಾರ ಸ್ತುತಿಯನ್ನು ಪಠಿಸೋಣ. ಶಾಸ್ತ್ರೀಯ ಸಂಗೀತದಲ್ಲಿ ‘ದಂಡಮುಪಟ್ಟಿ ಕಮಂಡಲಮುಪೂನಿ ಕೊಂಡಾಡುಚುನು ಕೋದಂಡಪಾಣಿನಿ...’ ಎಂದು ತ್ಯಾಗರಾಜರ ಕೀರ್ತನೆ ಹಾಡೋಣ. ಅಲ್ಲಿಗೆ ಸಂಸ್ಕೃತದಲ್ಲೂ ತೆಲುಗಿನಲ್ಲೂ ಬಿಂದುಪೂರ್ವಕ ಡಕಾರ ಇದೆಯೆಂದಾಯ್ತು. ತೆಲುಗೇನು ತಮಿಳಿನಲ್ಲೂ ಇದೆ- ‘ಕಂಡುಕೊಂಡೇನ್ ಕಂಡುಕೊಂಡೇನ್’ ಅಂತ ಒಂದು ಸಿನೆಮಾದ ಹೆಸರೇ ಇದೆ; ಹಾಗೆಯೇ ಹಿಂದಿ-ಇಂಗ್ಲಿಷ್ಗಳಲ್ಲೂ ಇದೆ: ‘ಸಂಡೇ ಹೋ ಯಾ ಮಂಡೇ... ರೋಜ್ ಖಾವೋ ಅಂಡೇ!’ ಮೊಟ್ಟೆ ಜಾಹಿರಾತಿನಲ್ಲಂತೂ ಖಂಡಿತ ಇದೆ!

Saturday Dec 10, 2011
Bus Drivers Special Dispatch Part2
Saturday Dec 10, 2011
Saturday Dec 10, 2011
ದಿನಾಂಕ 11 ಡಿಸೆಂಬರ್ 2011ರ ಸಂಚಿಕೆ...
ಮತ್ತಷ್ಟು ಡ್ರೈವರೋಪಾಖ್ಯಾನ
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] * * * ಪ್ರಯಾಣಿಕರ ರಷ್ ಹೆಚ್ಚಾದಾಗ- ವಿಶೇಷವಾಗಿ ಜಾತ್ರೆ, ಹಬ್ಬಹರಿದಿನ, ಸಮ್ಮೇಳನ ಮುಂತಾದ ಸಂದರ್ಭಗಳಲ್ಲಿ- ಹೆಚ್ಚುವರಿ ಬಸ್ಸುಗಳನ್ನು ಹೊರಡಿಸುತ್ತಾರೆ. ರೆಗ್ಯುಲರ್ ಬಸ್ಗಳಲ್ಲೂ ಜಾತ್ರೆಯ ಜನರೇ ತುಂಬಿಕೊಳ್ಳುತ್ತಾರೆ. ಕಿಕ್ಕಿರಿದ ಜನಸಂದಣಿಯಲ್ಲೂ ವಿಶೇಷ ಸಂಭ್ರಮ ತರುವ ಆ ವಾತಾವರಣ ಎಲ್ಲರ ಅನುಭವಕ್ಕೂ ಬಂದಿರುತ್ತದೆ. ಆದರೆ, ಡ್ರೈವರ್ಗಳ ರಷ್ ಹೆಚ್ಚಾದದ್ದಕ್ಕೆ ವಿಶೇಷ ಬಸ್ ಹೊರಡಿಸಿದ್ದನ್ನು ನೀವು ಎಲ್ಲಾದರೂ ಕೇಳಿದ್ದೀರಾ? ಇಲ್ಲವಾದರೆ ಇವತ್ತು ಕೇಳಿ. ಇದೇ ಆ ಡ್ರೈವರ್ ಸ್ಪೆಷಲ್ ಬಸ್ಸು! ಕಳೆದ ವಾರದ ‘ಬಸ್ ಡ್ರೈವರರ ಗುಣಗಾನ’ಕ್ಕೆ ಸಿಕ್ಕಾಪಟ್ಟೆ ಪತ್ರಗಳು ಬಂದಿವೆ. ಇನ್ನೂ ಬರುತ್ತಲೇ ಇವೆ. ನನಗೆ ತುಂಬಾ ಖುಷಿ ತಂದ ವಿಚಾರ ಏನು ಗೊತ್ತೇ? ಜಾಸ್ತಿ ಪ್ರತಿಕ್ರಿಯೆಗಳು ಬಂದವು ಅಂತಲ್ಲ. ಲೇಖನ ಚೆನ್ನಾಗಿತ್ತೆಂದು ಎಲ್ಲರೂ ಹೇಳಿದರಂತನೂ ಅಲ್ಲ. ಆರ್.ಕೆ.ನಾರಾಯಣ್ ಕಾದಂಬರಿಗಳ ಪಾತ್ರಗಳಂತೆ ಬಸ್ಡ್ರೈವರರನ್ನು ಚಿತ್ರಿಸಬೇಕು ಎಂದು ನಾನೇನು ಅಂದುಕೊಂಡಿದ್ದೆನೋ ಅದನ್ನು ನನಗಿಂತ ಚೆನ್ನಾಗಿ ಓದುಗರು ತಮ್ಮ ಪತ್ರಗಳಲ್ಲಿ ಮಾಡಿದ್ದಾರೆ. ದೈನಂದಿನ ಜೀವನದಲ್ಲಿ ಹಾಸುಹೊಕ್ಕಾಗಿರುವ, ಸಾಮಾನ್ಯರಲ್ಲಿ ಅತಿಸಾಮಾನ್ಯರೆನಿಸಿದ ಬಸ್ಡ್ರೈವರರನ್ನು ನೆನೆಸಿಕೊಳ್ಳುವುದೂ ಪುಳಕ ಕೊಡುವ ಸಂಗತಿ ಎಂದು ಸಂಭ್ರಮಿಸಿದ್ದಾರೆ. ನನ್ನ ಬರಹದ ಮೂಲಕಲ್ಪನೆ ಸಾಕಾರಗೊಂಡದ್ದು ಮತ್ತು ಸಾರ್ಥಕವಾದದ್ದು ಅಲ್ಲೇ. ಅಂಥ ಸುಂದರ ಪತ್ರಗಳಲ್ಲಿ ಕೆಲವನ್ನಾದರೂ ನಿಮ್ಮೆಲ್ಲರೊಡನೆ ಹಂಚಿಕೊಳ್ಳಬೇಕೆಂಬ ಆಸೆ ನನ್ನದು. ಅದಕ್ಕಾಗಿ ಈವಾರಕ್ಕೆ ಯೋಜಿಸಿಕೊಂಡಿದ್ದ ವಿಷಯವನ್ನು ಮುಂದೂಡಿ ಡ್ರೈವರೋಪಾಖ್ಯಾನವನ್ನೇ ಮುಂದುವರಿಸಿದ್ದೇನೆ. ರೈಟ್... ಇದೀಗ ಬಸ್ಸು ಹೊರಡುತ್ತಿದೆ. ಮಂಗಳೂರಿನಿಂದ ವಿದ್ಯಾಲಕ್ಷ್ಮಿ ಬರೆಯುತ್ತಾರೆ- “ನಾನು ಶಾಲೆಗೆ ಹೋಗುತ್ತಿದ್ದದ್ದು ಹನುಮಾನ್ ಬಸ್ಸಿನಲ್ಲಿ. ಅದರ ಡ್ರೈವರ್ ಹೆಸರು ‘ನಂದು’. ಎಲ್ಲರೂ ಪ್ರೀತಿಯಿಂದ ನಂದಣ್ಣ ಅಂತಲೇ ಕರೆಯೋರು. ಅವರಿಗೆ ಮಕ್ಕಳ ಜೊತೆಯಂತೂ ತುಂಬಾ ಸ್ನೇಹ. ಒಮ್ಮೆ ನಾನೂ ನನ್ನ ಗೆಳತಿ ಏನೋ ಕಾರಣಕ್ಕೆ ಜಗಳವಾಡಿ ಕೋಪದಲ್ಲಿ ಮಾತು ಬಿಟ್ಟು ಒಂದಷ್ಟುದಿನ ಬೇರೆಬೇರೆ ಸೀಟಲ್ಲಿ ಕುಳಿತು ಪ್ರಯಾಣಿಸುತ್ತಿದ್ದೆವು. ಅದನ್ನು ಗಮನಿಸಿದ ನಂದಣ್ಣ ಒಮ್ಮೆ ದಾರಿಮಧ್ಯ ಬಸ್ ನಿಲ್ಲಿಸಿ ನಮ್ಮ ಹತ್ತಿರ ಬಂದು ಒಂದೇ ಸೀಟಲ್ಲಿ ಕುಳಿತುಕೊಳ್ಳಲು ಹೇಳಿ, ಶೇಕ್ಹ್ಯಾಂಡ್ ಕೊಡಿಸಿ ರಾಜಿ ಮಾಡಿಸಿದ್ದರು. ಆ ಘಟನೆ ನನಗಿನ್ನೂ ಚೆನ್ನಾಗಿ ನೆನಪಿದೆ. ಹಾಗೆಯೇ ದೂರದ ಊರುಗಳಲ್ಲಿದ್ದ ನನ್ನ ಅಮ್ಮ, ಚಿಕ್ಕಮ್ಮರ ಮಧ್ಯೆ ಅಂಚೆಯಣ್ಣನಾಗಿ, ಕೊರಿಯರ್ ವಾಹಕನಾಗಿಯೂ ನಂದಣ್ಣ ತುಂಬಾ ವರ್ಷ ಸೇವೆ ಸಲ್ಲಿಸಿದ್ದಾರೆ. ಈಗ ಅವರು ಎಲ್ಲಿದ್ದಾರೋ ಗೊತ್ತಿಲ್ಲ. ಆದರೆ ಈ ಮೂಲಕ ಅವರಿಗೆ ನನ್ನ ನಮನಗಳು.” ಹನುಮಾನ್ ಬಸ್ಸಿನ ನಂದಣ್ಣನಷ್ಟೇ ಫೇಮಸ್ಸು ಸಾಗರ-ಉಡುಪಿ ಗಜಾನನ ಬಸ್ಸಿನ ಡ್ರೈವರ್ ದುರ್ಗಪ್ಪ. ಸಾಗರದಿಂದ ಮಹೇಶ ಹೆಗಡೆ ಬರೆದಿದ್ದಾರೆ- “ನಮಗೆಲ್ಲ ಅದು ಗಜಾನನ ಬಸ್ಸು ಅಥವಾ ಸಾಗರ-ಉಡುಪಿ ಬಸ್ಸು ಅನ್ನೋದಕ್ಕಿಂತಲೂ ‘ದುರ್ಗಪ್ಪನ ಗಾಡಿ’ ಎಂದೇ ಚಿರಪರಿಚಿತ. ಉಡುಪಿ ಅಥವಾ ದಾರಿಯಲ್ಲಿ ಸಿಗುವ ಊರುಗಳಲ್ಲಿನ ಬಂಧುಮಿತ್ರರಿಗೆ ಸಣ್ಣಪುಟ್ಟ ಪಾರ್ಸೆಲ್ ತಲುಪಿಸುವುದಿದ್ದರೆ ಸಾಗರ ಬಸ್ಸ್ಟಾಂಡ್ಗೆ ಬೆಳಿಗ್ಗೆ ಎಂಟಕ್ಕೆ ಹೋಗಿ ದುರ್ಗಪ್ಪನ ವಶ ಒಪ್ಪಿಸಿದರಾಯ್ತು. ಅದು ಸುಸೂತ್ರವಾಗಿ ತಲುಪಿತೆಂದೇ ಲೆಕ್ಕ. ದುರ್ಗಪ್ಪ ಅತ್ಯಂತ ದಕ್ಷ ಡ್ರೈವರ್. ಸ್ನೇಹಜೀವಿ ಕೂಡ. ಆದರೆ ‘ಧೂಮಪಾನ ನಿಷೇಧಿಸಿದೆ’ ವಿಷಯದಲ್ಲಿ ವೆರಿ ಸ್ಟ್ರಿಕ್ಟ್. ಬಸ್ಸಿನೊಳಗೆ ಯಾರಾದರೂ ಬೀಡಿಸಿಗರೇಟು ಹೊತ್ತಿಸಿದರೆ ತತ್ಕ್ಷಣ ಅಲ್ಲೇ ಬಸ್ ನಿಲ್ಲಿಸಿ, ಚಂದದ ಮಾತುಗಳಲ್ಲೇ ಅವರ ಜನ್ಮ ಜಾಲಾಡಿಸಿಬಿಡೋರು.” ಬೆಂಗಳೂರಿನಿಂದ ಜ್ಯೋತಿ ಕಡ್ಲಾಡಿ ಹಳೆಕಾಲದ ಬಿಟಿಎಸ್ ಬಸ್ಸಿನ ಒಬ್ಬ ಮುಸ್ಲಿಂ ಡ್ರೈವರ್ನನ್ನು ನೆನೆದಿದ್ದಾರೆ. “ನಾನಾಗ ಚೊಚ್ಚಲ ಗರ್ಭಿಣಿ. ನಮ್ಮ ಆಫೀಸು ಆರ್ಬಿಐ ಬಿಲ್ಡ್ಂಗ್ನ ಮೂರನೇ ಮಹಡಿಯಲ್ಲಿತ್ತು. ಸಂಜೆ ೫.೩೦ಕ್ಕೆ ಸರಿಯಾಗಿ ಆಫೀಸು ಮುಗೀತಾ ಇದ್ದಹಾಗೆ ಬಿಲ್ಡಿಂಗ್ನ ಬ್ಯಾಕ್ಗೇಟ್ ಪಕ್ಕ ಒಂದು ಬಸ್ ಬರ್ತಾ ಇತ್ತು. ನಾನು ಬಸ್ ಹಿಡಿಯಲು ಓಡೋಡಿ ಬರುತ್ತಿದ್ದರೆ ಡ್ರೈವರ್ ಹೇಳ್ತಾ ಇದ್ದರು ‘ಸಿಸ್ಟರ್, ಆಪ್ ಹಲ್ಲೂಹಲ್ಲೂ ಆನೇಕಾ. ಹಮ್ ಆಪ್ಕೇ ಲಿಯೆ ವೈಟ್ ಕರೇಂಗೆ.’ ಅಷ್ಟೇಅಲ್ಲ ನಿಜವಾಗ್ಲೂ ವೈಟ್ ಮಾಡ್ತಿದ್ರು. ನಾನು ಆರಾಮಾಗಿ ಬಸ್ ಹತ್ತಿ ಸೀಟಲ್ಲಿ ಕುಳಿತಮೇಲೇನೇ ಸ್ಟಾರ್ಟ್ ಮಾಡ್ತಿದ್ರು. ಈಗೆಲ್ಲಿದ್ದಾರೋ ಗೊತ್ತಿಲ್ಲ, ಆ ಮನುಷ್ಯನ ಹೊಟ್ಟೆ ತಣ್ಣಗಿರಲಿ ಅಂತ ಮನಸಾರೆ ಹಾರೈಸುತ್ತೇನೆ.” ವಿಟ್ಲದ ಮೂರ್ತಿ ದೇರಾಜೆಯವರು ಸ್ಮರಿಸಿರುವುದು ಒಬ್ಬಿಬ್ಬರು ಡ್ರೈವರರನ್ನಲ್ಲ. ದೊಡ್ಡದೊಂದು ಪಟ್ಟಿಯನ್ನೇ ಮಾಡಿದ್ದಾರೆ. ಅವರ ಪತ್ರದ ಕೆಲವು ಸಾಲುಗಳು: “ಪುತ್ತೂರು-ಬೆಳ್ಳಾರೆ-ಸುಬ್ರಹ್ಮಣ್ಯಗಳ ನಡುವೆ ಓಡಾಡುತ್ತಿದ್ದ ಪಿ.ವಿ.ಮೋಟಾರ್ಸ್ನ ಡ್ರೈವರ್ ರಾಮಭಟ್ಟರು ಮುದುಕರಾಗಿದ್ದರೂ ಅವರ ತಲೆಯಲ್ಲಿ ಸದಾ ಇರುತ್ತಿದ್ದ ಖಾಕಿ ಬಣ್ಣದ ದೊಡ್ಡ ಮುಂಡಾಸು ಅವರನ್ನು ನಮ್ಮ ಹೀರೊ ಮಾಡಿತ್ತು. ನಮ್ಮ ಮಟ್ಟಿಗೆ ಅವರು ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ರಾಷ್ಟ್ರನಾಯಕರಿಗಿಂತ ಕಡಿಮೆ ಏನೂ ಆಗಿರಲಿಲ್ಲ. ಪಕ್ಕದ ಸೀಟಿನಲ್ಲಿ ಕುಳಿತವರೊಡನೆ ಅವರು ಊರಿನ ಎಲ್ಲಾ ಸುದ್ದಿಯನ್ನೂ ಮಾತಾಡುತ್ತಿದ್ದ ರೀತಿ ನೋಡಿ, ನಮಗೆ ಏನೂ ಅರ್ಥವಾಗದಿದ್ದರೂ ಅವರೊಬ್ಬ ಎಲ್ಲಾ ವಿಷಯಗಳ ತಜ್ಞ ಎಂದೇ ನಾವು ನಂಬಿದ್ದೆವು. ಶೆಟ್ಟಿ ಮೋಟಾರ್ಸ್ನ ಮಿಸ್ಕಿತ್ ಎಂಬುವರೂ ಒಬ್ಬ ದೊಡ್ಡ ಹೀರೊ. ಅವರದು ಮೆಳ್ಳೆಗಣ್ಣು ಆಗಿದ್ದರೂ ನಮಗೆಲ್ಲಾ ಅದು ಕೊರತೆ ಎಂದು ಅನಿಸಿದ್ದೇ ಇಲ್ಲ. ಮತ್ತೆ ಅವರು ಇಷ್ಟ ಯಾಕೆಂದರೆ ಬಸ್ಸು ಬರುತ್ತಿದ್ದಾಗ ದಾರಿಯಲ್ಲಿ ನಡೆಯುತ್ತಿದ್ದ ನಾವು ಕೈ ಎತ್ತಿ ವಿಷ್ ಮಾಡಿದರೆ ತಪ್ಪದೇ ವಿಷ್ ಮಾಡುತ್ತಿದ್ದರು. ತನ್ನನ್ನು ನೋಡಿಯೇ ವಿಷ್ ಮಾಡಿದ್ದು ಎಂದು ನಮ್ನಲ್ಲಿ ಪ್ರತಿಯೊಬ್ಬರಿಗೂ ಅನಿಸುತ್ತಿತ್ತು. ನಂದಗೋಕುಲದಲ್ಲಿ ಕೃಷ್ಣನನ್ನು ನೋಡಿ ಪ್ರತಿಯೊಬ್ಬ ಗೋಪಿಕೆಯೂ ಹೀಗೇ ಭಾವಿಸುತ್ತಿದ್ದಳಂತೆ ಅಲ್ಲವೇ? ಶಂಕರವಿಠಲ್ ಬಸ್ಸಿನ ಶಾಂತಾರಾಮ್ ಇನ್ನೊಬ್ಬ ಹೀರೊ. ಪುತ್ತೂರಿನ ಶಂಕರವಿಠಲ್ ಸಿಟಿಸರ್ವಿಸ್ನ ಬೇಬಿ ಮತ್ತು ಶಿವರಾಂ ಇವರು ಪುತ್ತೂರು ಟೀಮಿನ ಕ್ರಿಕೆಟ್ ಪ್ಲೇಯರ್ಸ್. ಪುತ್ತೂರು ಟೀಮಿನಲ್ಲಿ ಆಟಗಾರರ ಕೊರತೆ ಇದ್ದಾಗ ಮತ್ತು ಎದುರು ಟೀಮು ಸ್ವಲ್ಪ ಫಡ್ಪೋಶಿ ಆಗಿದ್ದಾಗ ಇವರಿಗೆ ಚಾನ್ಸ್ ಸಿಗುವುದಾಗಿದ್ದರೂ, ಬ್ಯಾಟು ಬೀಸಿ ಸಿಕ್ಸರ್ ಬಾರಿಸುತ್ತಿದ್ದುದರಿಂದ ಅವರು ನಮ್ಮ ಡಬಲ್ ಹೀರೋ. ಆದರೆ ಆ ಕಾಲದಲ್ಲಿ ನಮ್ಮ ದೊಡ್ಡ ಹೀರೊ ಅಂದರೆ ಪುತ್ತೂರಿನ ‘ಸ್ವಾಮಿ ಸಿಟಿ ಸರ್ವಿಸ್’ನ ಆಣ್ಣು ಎಂಬ ಡ್ರೈವರ್. ಅವರ ಹೆಸರು ಕೇಳಿದರೆ ಸಾಕು ನಮ್ಮ ಎದೆ ಖುಷಿಯಿಂದ ಕುಣಿಯುತ್ತಿತ್ತು. ಅವರ ಅದ್ಭುತ ಡ್ರೈವಿಂಗಿಗೆ ಎಷ್ಟೋಸಾರಿ ಚಪ್ಪಾಳೆ ಬಿದ್ದದ್ದು ನೆನಪಿದೆ. ನಾವು ‘ಬಸ್ ಆಟ’ ಆಡುತ್ತಿದ್ದಾಗ ತನ್ನದು ‘ಸ್ವಾಮಿ ಸಿಟಿಬಸ್’ ಎಂದು ಹೆಸರಿಟ್ಟುಕೊಳ್ಳಲು ನಮ್ಮಲ್ಲಿ ಜಗಳ. ಕೊನೆಗೆ ಚೀಟಿಯೆತ್ತಿ ಹೆಸರು ಕೊಡಲಾಗುತ್ತಿತ್ತು. ಆಣ್ಣು ಡ್ರೈವಿಂಗಿನ ಸ್ಟೈಲ್ ಅನುಕರಿಸಲೂ ನಮ್ಮಲ್ಲಿ ಸ್ಪರ್ಧೆ. ಆಣ್ಣು ಮತ್ತವನ ಸ್ವಾಮಿ ಬಸ್ನ ಮೇಲೆ ನಮಗೆ ಎಷ್ಟು ಅಭಿಮಾನ ಅಂದರೆ ಬಸ್ ಆಟದಲ್ಲಿ ಸ್ವಾಮಿ ಬಸ್ ಹೆಸರಿನವನು ಹಿಂದೆ ಬಿದ್ದರೆ, ಅಳು ಬರುತ್ತಿದ್ದರೂ ಸ್ವಇಚ್ಛೆಯಿಂದ ಸ್ವಾಮಿ ಬಸ್ನ ಹೆಸರನ್ನು ಗೆದ್ದವನಿಗೆ ಬಿಟ್ಟು ಕೊಡುತ್ತಿದ್ದೆವು. ಒಟ್ಟಿನಲ್ಲಿ ಆಣ್ಣುವಿನ ಸ್ವಾಮಿ ಬಸ್ ಸೋಲಬಾರದು."
Version: 20241125