
10.1K
Downloads
77
Episodes
ಈಗ ಆಡಿಯೋ ಟಚ್!
Episodes

Mar 12, 2011
Mar 12, 2011
8 min
ದಿನಾಂಕ 13 ಮಾರ್ಚ್ 2011ರ ಸಂಚಿಕೆ...
ಬೆಳಗಿಹುದು ಭುವನಸಿರಿ ಬೆಳಗಾವಿಯಲಿ
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] ಏನು ಬರೆಯಲಿ ಎಂಬ ಚಿಂತೆ ಕೆಲವೊಮ್ಮೆ ಕಾಡುವುದಿದೆ ನಿಯಮಿತವಾಗಿ ಬರೆಯಬೇಕಾಗಿ ಬರುವ ಅಂಕಣಕಾರರಿಗೆ. ಯಾವಾಗಾದರೂ ಒಮ್ಮೆ ಏನೂ ಸರಕು ಒದಗಿ ಬರದಿದ್ದಾಗ ಹಾಗಾಗುತ್ತದೆ. ಇದಕ್ಕೆ ನಾನೂ ಹೊರತೇನಲ್ಲ. ಆದರೆ ಈವಾರ ನನ್ನ ಪರಿಸ್ಥಿತಿ ಪೂರ್ಣ ತದ್ವಿರುದ್ಧ! ಏನನ್ನು ಬರೆಯದಿರಲಿ, ಅಂದರೆ ಯಾವುದನ್ನು ಬರೆಯದೆ ಬಿಟ್ಟುಬಿಡಲಿ ಎಂಬ ಸಮಸ್ಯೆ ಈಗ ನನ್ನದಾಗಿದೆ. ಕಳೆದವಾರದಿಂದ ಮುಂದುವರಿಸಬೇಕಿದ್ದ ‘ಅಂಗುಷ್ಠಪುರಾಣ’ವನ್ನೇ ಎತ್ತಿಕೊಳ್ಳಲೇ? ಬೆಳಗಾವಿಯಲ್ಲಿ ನಡೆಯುತ್ತಿರುವ ಕನ್ನಡ ನುಡಿಹಬ್ಬದ ಕುರಿತು ಸಂಭ್ರಮಿಸಲೇ? ಅಥವಾ, ಉದಯರವಿಯ ನಾಡನ್ನು ಗಾಡಾಂಧಕಾರಕ್ಕೆ ತಳ್ಳಿದ ರಾಕ್ಷಸಿ ಸುನಾಮಿಯನ್ನು ಶಪಿಸುತ್ತ ಮರುಗಲೇ? ಇಲ್ಲಾ. ಸಂದಿಗ್ಧತೆ ಬೇಡಾ. ಹೇಗೂ ದಿಢೀರ್ ಪ್ಲಾನ್ ಮಾಡಿ ಸಮ್ಮೇಳನದಲ್ಲಿ ಭಾಗವಹಿಸಲಿಕ್ಕೆಂದೇ ಬೆಳಗಾವಿಗೆ ಬಂದಿದ್ದೇನೆ; ಅಷ್ಟೇಅಲ್ಲ, ಇಂಥ ಸಮ್ಮೇಳನಗಳು ಅಮೆರಿಕದಲ್ಲಿ ನಡೆದಾಗೆಲ್ಲ ಸಮ್ಮೇಳನದ ಸ್ಥಳದಿಂದಲೇ ಅಂಕಣ ಬರೆದುಕಳಿಸಿದ ರೋಚಕ ಅನುಭವವಿದೆ; ಇಲ್ಲಿಯೂ ಆ ಸಾಹಸ ಮಾಡಬೇಕು ಎಂದು ಲ್ಯಾಪ್ಟಾಪ್ ತೆಗೆದುಕೊಂಡೇ ಬಂದಿದ್ದೇನೆ - ಆದ್ದರಿಂದ ಸಮ್ಮೇಳನದ ಕುರಿತೇ ಬರೆಯಬೇಕು ಎಂದು ನನ್ನೊಳಗೇ ಸಹಮತದ ನಿರ್ಧಾರ ಮಾಡಿದ್ದೇನೆ. ಸರಿ, ಅಲ್ಲಿಗೆ ನಿರುಮ್ಮಳನಾದೆನಾ? ಇದೀಗ ಈ ಸಮ್ಮೇಳನದ ಅಗಾಧತೆಯನ್ನು ನೋಡಿದಾಗ, ಇಲ್ಲಿ ಮುಗಿಲುಮುಟ್ಟಿರುವ ಕನ್ನಡ ಸಡಗರವನ್ನು ಕಣ್ಣಾರೆ ಕಂಡಾಗ, ಹೇಗಪ್ಪಾ ಈ ಪುಟ್ಟ ಅಂಕಣದಲ್ಲಿ ತುಂಬಿಸಲಿ ಎಂಬ ಪ್ರಶ್ನೆ! ಏಕೆಂದರೆ, ಇದನ್ನು ಬರೆಯುವಾಗಿನ್ನೂ ಸಮ್ಮೇಳನದ ಉದ್ಘಾಟನೆ ಮತ್ತು ಮೊದಲ ದಿನದ ವೈಭವವಷ್ಟೇ ಆಗಿರುವುದು. ಶನಿ-ಭಾನುವಾರಗಳಂದು ತೆರೆದುಕೊಳ್ಳಲಿರುವ ಸಾಂಸ್ಕೃತಿಕ ರಸದೌತಣ ಇನ್ನೂ ಬಾಕಿಯೇ ಇದೆ. ಅದನ್ನು ನೆನೆಸಿಕೊಂಡರೇನೇ ಪುಳಕವಾಗುತ್ತದೆ. ಪ್ರತ್ಯಕ್ಷ ಆಸ್ವಾದಿಸಿದಾಗಿನ ರೋಮಾಂಚನಕ್ಕಂತೂ ಪದಗಳೇ ಸಿಗಲಾರವೇನೋ. ವಿಶ್ವ ಕನ್ನಡ ಸಮ್ಮೇಳನ. ಇದು ಬರೀ ಸಮ್ಮೇಳನವಲ್ಲ, ಸವಿಗನ್ನಡದ ಸಮ್ಮೋಹನ. ಇದರಲ್ಲಿ ಪಾಲ್ಗೊಳ್ಳಬೇಕು ಎಂಬ ಬಯಕೆ ಚಿಕ್ಕ ದೊಡ್ಡ ಪ್ರಮಾಣದಲ್ಲಿ ವಿಶ್ವದ ಪ್ರತಿಯೊಬ್ಬ ಕನ್ನಡಿಗನಿಗೂ ಇದ್ದೇಇರುತ್ತದೆ. ಆದರೆ ತಾಪತ್ರಯಗಳು ಅಂತ ಇರುತ್ತವಲ್ಲಾ ಅವು ಆ ಬಯಕೆಯನ್ನು ಅಷ್ಟೇ ಪ್ರಮಾಣದಲ್ಲಿ ಹತ್ತಿಕ್ಕುವುದೂ ನಡೆಯುತ್ತಲೇ ಇರುತ್ತದೆ. ಮಾನ್ಯ ಮುಖ್ಯಮಂತ್ರಿಗಳೇನೋ ಅನಿವಾಸಿ ಕನ್ನಡಿಗರಿಗೆಲ್ಲ ಸಮ್ಮೇಳನದಲ್ಲಿ ಭಾಗವಹಿಸಲು ಪ್ರೀತಿಯ ಆಮಂತ್ರಣ ಕಳಿಸಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಂತೂ ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ಅನಿವಾಸಿ ಕನ್ನಡಿಗರ ಪೈಕಿ ಒಂದಿಷ್ಟು ಹೆಸರುಗಳನ್ನು ಹೆಕ್ಕಿ ಆಹ್ವಾನಪತ್ರಿಕೆಯಲ್ಲಿ ಅಚ್ಚೂ ಮಾಡಿಬಿಟ್ಟಿದ್ದಾರೆ. ಸಮ್ಮೇಳನದ ವೇಳೆ ‘ಹೊರನಾಡು ಮತ್ತು ಹೊರದೇಶದ ಕನ್ನಡಿಗರು’ ಕಾರ್ಯಾಗಾರದಲ್ಲಿ ಉಪಸ್ಥಿತರಿರಬೇಕು ಎಂದು ಪ್ರೀತಿಯ ಆದೇಶ ಬೇರೆ. ನೋಡುತ್ತೇನಾದರೆ ಆ ಪಟ್ಟಿಯಲ್ಲಿ ನನ್ನಂಥ ನನ್ನ ಹೆಸರೂ ಸೇರಿಕೊಂಡಿದೆ! ಅಷ್ಟು ದೊಡ್ಡ ಅಮೇರಿಕಾ ದೇಶವನ್ನು ನಾನು ಪ್ರತಿನಿಧಿಸಬೇಕಂತೆ! ಭುವನೇಶ್ವರಿ ತಾಯಿಯಾಣೆಯಾಗಿ ಇನ್ನು ನೆಪ ಹೇಳುವುದು ಆಗದ ಮಾತು ಎಂದುಕೊಂಡು, ಆಫೀಸಿನಲ್ಲಿ ಒಂದು ವಾರದ ರಜೆಯನ್ನು ಹೇಗೋ ಹೊಂದಿಸಿಕೊಂಡು, ಸೂಟ್ಕೇಸಿನಲ್ಲಿ ಬಟ್ಟೆಗಳನ್ನು ತುರುಕಿಸಿಕೊಂಡು ಹೊರಟೇಬಿಟ್ಟೆ. ಇದು ಪೀಕ್ಸೀಸನ್ ಅಲ್ಲವಾದ್ದರಿಂದ ವಾಷಿಂಗ್ಟನ್ನಿಂದ ಬೆಂಗಳೂರಿಗೆ ವಿಮಾನದ ಟಿಕೆಟ್ಸ್ ಸುಲಭದಲ್ಲೇ ಸಿಕ್ಕಿದವು. ಆದರೆ ಅಲ್ಲಿನ ಬುಧವಾರ ಸಂಜೆಹೊತ್ತು ವಾಷಿಂಗ್ಟನ್ ಬಿಟ್ಟರೂ ಬೆಂಗಳೂರು ತಲುಪಿದಾಗ ಇಲ್ಲಿ ಶುಕ್ರವಾರ ಮುಂಜಾನೆ. ಸಮ್ಮೇಳನ ಸ್ಪೆಷಲ್ ರೈಲು ಬೆಂಗಳೂರಿನಿಂದ ಬೆಳಗಾವಿಗೆ ಗುರುವಾರ ಸಂಜೆಯೇ ಹೊರಟಾಗಿರುತ್ತದೆ. ಬೇರೆ ರೆಗ್ಯುಲರ್ ಟ್ರೈನು-ಬಸ್ಸುಗಳಲ್ಲಿ ಸೀಟ್ ಸಿಗುವ ಪರಿ ಎಂತು? ಶುಕ್ರವಾರ ಸಂಜೆಯೊಳಗೆ ಬೆಳಗಾವಿ ತಲುಪುವುದೆಂತು? “ಚಿಂತೆಬೇಡ, ಶುಕ್ರವಾರ ಬೆಳಿಗ್ಗೆ ಬೆಂಗಳೂರಿನಿಂದ ಬೆಳಗಾವಿಗೆ ವಿಶೇಷ ವಿಮಾನವೊಂದರ ವ್ಯವಸ್ಥೆಯಾಗಿದೆ, ಒಂದು ಸೀಟ್ ನಿಮಗೂ ಕಾಯ್ದಿರಿಸುತ್ತೇವೆ” ಎಂದು ಸಂಬಂಧಪಟ್ಟ ಅಧಿಕಾರಿಯಿಂದ ಭರವಸೆ. ಪುಣ್ಯಕ್ಕೆ ವಾಷಿಂಗ್ಟನ್-ಲಂಡನ್-ಬೆಂಗಳೂರು ವಿಮಾನ ಪ್ರಯಾಣದಲ್ಲಿ ಯಾವೊಂದೂ ಅಡಚಣೆಯಿಲ್ಲದೆ ಸರಿಯಾದ ಸಮಯಕ್ಕೆ ಬೆಂಗಳೂರು ವಿಮಾನನಿಲ್ದಾಣ ತಲುಪುವುದು ಸಾಧ್ಯವಾಯ್ತು. ಮನೆ ತಲುಪಿ ಸ್ನಾನ-ತಿಂಡಿ ಎಲ್ಲ ಮಾಡಿ ಮತ್ತೆ ಧಾವಾಧಾವಿಯಾಗಿ ವಿಮಾನನಿಲ್ದಾಣಕ್ಕೆ ನಿಗದಿತ ವೇಳೆಗೆ ಬರುವುದಕ್ಕಾಯ್ತು. ಮಜಾ ಏನು ಗೊತ್ತಾ? ಆ ಬೆಂಗಳೂರು-ಬೆಳಗಾವಿ ವಿಶೇಷ ವಿಮಾನ ಯಶಸ್ವಿಯಾಗಿ ಹಾರುವುದಕ್ಕೆ ನನ್ನ ಕೊಡುಗೆಯೂ ಇತ್ತು! ಅದೇನು ಅಂತೀರಾ? ವಿಮಾನದಲ್ಲಿ ಅತ್ಯಂತ ‘ಹಗುರ’ದ ಪ್ರಯಾಣಿಕನೆಂದರೆ ನಾನೊಬ್ಬನೇ. ಮಿಕ್ಕವರೆಲ್ಲ ಮಹಾನ್ ‘ತೂಕ’ದ ವ್ಯಕ್ತಿಗಳು. ಬರೀ ಅವರೇ ಆಗಿದ್ದರೆ ಖಂಡಿತವಾಗಿಯೂ ವಿಮಾನ ಟೇಕ್ಆಫ್ ಆಗುವುದೂ ಕಠಿಣವಿತ್ತೇನೋ. ಕಂಬಾರ, ಜಿ.ಎಸ್. ಶಿವರುದ್ರಪ್ಪ, ನಿಸಾರ್ ಅಹಮದ್, ಅನಂತಮೂರ್ತಿಯವರಂಥ ಸಾಹಿತಿವರೇಣ್ಯರು, ಅಂಬರೀಶ್, ಜಯಂತಿ, ಭಾರತಿ, ಸರೋಜಾದೇವಿ, ಅನುಪ್ರಭಾಕರ್, ಜಯಮಾಲಾರಂಥ ಸಿನಿತಾರೆಯರು, ವಿಶ್ವೇಶ್ವರಭಟ್, ಜಯಶೀಲರಾವ್ರಂಥ ಹಿರಿಯ ಪತ್ರಕರ್ತರು, ಕ್ರಿಕೆಟಿಗ ಅನಿಲ್ ಕುಂಬ್ಳೆ, ಉದ್ಯಮಿ ಕ್ಯಾಪ್ಟನ್ ಗೋಪಿನಾಥ್, ಸುಧಾಮೂರ್ತಿ-ನಾರಾಯಣ ಮೂರ್ತಿ ದಂಪತಿಗಳು, ಸಿದ್ದರಾಮಯ್ಯ, ರೇಣುಕಾಚಾರ್ಯ, ಶೋಭಾ ಕರಂದ್ಲಾಜೆ, ವಿ.ಎಸ್.ಆಚಾರ್ಯರಂಥ ರಾಜಕಾರಣಿಗಳು ಶಾಸಕರು ಮಂತ್ರಿಗಳು, ಮತ್ತು ಖುದ್ದಾಗಿ ಮಾನ್ಯ ಮುಖ್ಯಮಂತ್ರಿ ಯಡ್ಯೂರಪ್ಪನವರು! ಅವರೆಲ್ಲರ ಕೈಕುಲುಕಿ ಕುಶಲ ವಿಚಾರಿಸಿದ ಮೇಲೂ ಇದು ಕನಸಲ್ಲ ತಾನೇ ಎಂದು ನಾನೊಮ್ಮೆ ಮೈಚಿವುಟಿಕೊಂಡೆ. ಚಿಕ್ಕವನಿದ್ದಾಗ ಎರಡನೇ ತರಗತಿಯಲ್ಲಿ ‘ಹಣ್ಣು ಮಾರುವವನ ಹಾಡು’ ಕಲಿಯುತ್ತ ‘ಬೆಳಗಾವಿಯ ಸವಿ ಸಪ್ಪೋಟ... ದೇವನಹಳ್ಳಿಯ ಚಕ್ಕೋತ...’ ಎಂದು ಕಂಠಪಾಠ ಮಾಡಿದ್ದೇನೆಯೇ ಹೊರತು ದೇವನಹಳ್ಳಿಯಿಂದ ಬೆಳಗಾವಿಗೆ ಹೀಗೊಂದು ವಿಮಾನಯಾನ ಮಾಡುತ್ತೇನೆಂದು ಕನಸಲ್ಲೂ ಎಣಿಸಿರಲಿಲ್ಲ. ಇದಿನ್ನು ನೆನಪಿನ ಫ್ರೇಮ್ನಲ್ಲಿರಬೇಕು. ಅದಕ್ಕೋಸ್ಕರ ಏನುಮಾಡಿದ್ದೇನೆಂದರೆ ವಿಮಾನ ಪ್ರಯಾಣದ ವೇಳೆಯೇ ಅನುಪ್ರಭಾಕರ್ ಕೈಯಲ್ಲಿ ನನ್ನ ಕ್ಯಾಮೆರಾ ಕೊಟ್ಟು ನನ್ನ ಅಕ್ಕಪಕ್ಕದಲ್ಲಿ ವಿಶ್ವೇಶ್ವರಭಟ್ ಮತ್ತು ಕ್ಯಾಪ್ಟನ್ ಗೋಪಿನಾಥ್ ಅವರಿರುವ ಭಂಗಿಯಲ್ಲಿ ಒಂದು ಅಪೂರ್ವ ಫೊಟೋ ಕ್ಲಿಕ್ಕಿಸಿಕೊಂಡಿಟ್ಟಿದ್ದೇನೆ. ‘ಇಂಥದೊಂದು ಬಾನಯಾನ’ ಎಂದು ಅದನ್ನಿನ್ನು ನನ್ನ ಸ್ಮೃತಿಪಟಲದ ಮೇಲೆ (ಮತ್ತು ಫೇಸ್ಬುಕ್ ಗೋಡೆಯ ಮೇಲೆ) ಅಂಟಿಸುವವನಿದ್ದೇನೆ. ನೋಡಿದ್ರಾ? ಕೊನೆಗೂ ನನಗೆ ಇವತ್ತಿನ ಅಂಕಣದಲ್ಲಿ ಸಮ್ಮೇಳನ ವಿವರಗಳನ್ನು ಬಣ್ಣಿಸುವುದು ಆಗಲೇ ಇಲ್ಲ. ಯಾವುದನ್ನಂತ ಬರೀಲಿ? ಸಮ್ಮೇಳನದ ಆರಂಭದಲ್ಲಿ ನನ್ನ ನೆಚ್ಚಿನ ಕದ್ರಿ ಗೋಪಾಲನಾಥ್ ಸ್ಯಾಕ್ಸೊಫೋನ್ ಮಂಗಳಧ್ವನಿ ಮೊಳಗಿಸುತ್ತ ‘ಇಳಿದು ಬಾ ತಾಯೇ ಇಳಿದು ಬಾ...’ ಎಂದು ನಾದದ ಅಲೆ ಹೊಮ್ಮಿಸಿದ್ದನ್ನೇ? ‘ಆರು ತೆರೆಯ ನೋಡಂಬಿಗಾ ಅದು ಮೀರಿಬರುತಲಿದೆ ಅಂಬಿಗಾ...’ ಎಂದು ನುಡಿಸುತ್ತಿದ್ದಂತೆಯೇ ಕಿತ್ತೂರುಚೆನ್ನಮ್ಮ ಕ್ರೀಡಾಂಗಣದಲ್ಲಿ ಕನ್ನಡಿಗ ಜನಸ್ತೋಮ ಲಕ್ಷಲಕ್ಷ ಸಂಖ್ಯೆಯಲ್ಲಿ ಅಲೆಅಲೆಗಳಾಗಿ ಬಂದದ್ದನ್ನೇ? ‘ಹಚ್ಚೇವು ಕನ್ನಡದ ದೀಪ...’ ನೃತ್ಯದ ವೇಳೆ ಬೇಲೂರು-ಹಳೇಬೀಡುಗಳ ಶಿಲಾಬಾಲಿಕೆಯರೇ ನರ್ತಿಸಿದರೆನ್ನಿಸುವಂಥ ಪರಿಣಾಮವನ್ನು ಅದ್ಭುತವಾಗಿ ಮೂಡಿಸಿ ಗಂಧರ್ವಲೋಕ ಸೃಷ್ಟಿಸಿದ ನೃತ್ಯಸಂಯೋಜನೆಯನ್ನೇ? ಕೊಳಲ ಮಾಂತ್ರಿಕ ಗೋಡಖಿಂಡಿ ಇದಕ್ಕಿಂತಲೂ ಗೋಡ (ಮರಾಠಿಯಲ್ಲಿ ಸಿಹಿ) ಆಗಲು ಸಾಧ್ಯವೇ ಇಲ್ಲವೆಂಬಂತೆ ಮಧುರವಾಗಿ ಮುರಲೀನಾದದ ಮೋಡಿ ಮಾಡಿದ್ದನ್ನೇ? ಐಶ್ವರ್ಯಾ ರೈ ಬಂದಾಗ ‘ಕನ್ನಡದ ದೀಪ’ಕ್ಕಿಂತಲೂ ಹೆಚ್ಚಿನ ಜಗಮಗ ವೇದಿಕೆಯಲ್ಲಿ ಕೋರೈಸಿದ್ದನ್ನೇ? ಸಾಂಪ್ರದಾಯಿಕ ಹಣತೆಗಳು ಮತ್ತು ಭುವನಸುಂದರಿಯ ಜಗಮಗ ಸಾಲದೆಂಬಂತೆ ಅತ್ಯಾಧುನಿಕ ತಂತ್ರಜ್ಞಾನದ ‘ಲೇಸರ್ ಶೋ’ದಲ್ಲಿಯೂ ಕನ್ನಡದ ಕೋಲ್ಮಿಂಚು ಕಂಗೊಳಿಸಿದ್ದನ್ನೇ? ದೀಪ ಬೆಳಗಿಸಿ ಉದ್ಘಾಟನಾ ಭಾಷಣ ಮಾಡಿದ ನಾರಾಯಣ ಮೂರ್ತಿಯವರು ಅಚ್ಚಕನ್ನಡದಲ್ಲಿ ಸ್ವಚ್ಛಸುಂದರ ಸ್ಫೂರ್ತಿಯುತ ಮಾತುಗಳನ್ನಾಡಿ, ಬರೀ ವಿವಾದಗಳನ್ನೆಬ್ಬಿಸುವುದರಲ್ಲೇ ಖುಶಿ ಕಾಣುವವರ ಬಾಯ್ಮುಚ್ಚಿಸಿದ್ದನ್ನೇ? ನನಗ್ಗೊತ್ತು, ಇದು ಮಹಾಸಾಗರದಿಂದ ಬಿಂದಿಗೆಯಲ್ಲಿ ನೀರು ತುಂಬಿಸಿಕೊಂಡು ತಂದಂತೆ. ಇಷ್ಟು ಮಾತ್ರ ಹೇಳಬಲ್ಲೆ- ‘ಕುಂದ’ದ ಸಿಹಿ ಬೆಳಗಾವಿಯದು; ಎಂದೆಂದಿಗೂ ಕುಂದದ ಕೀರ್ತಿ ನಮ್ಮ ಕನ್ನಡದ್ದು, ನಮ್ಮೆಲ್ಲರ ಕರ್ನಾಟಕದ್ದು! ಈ ರೀತಿಯ ವಿಶ್ವ ಕನ್ನಡ ಸಮ್ಮೇಳನಗಳು ಆಗುತ್ತಲೇ ಇರಲಿ. ವಿಶ್ವದಲ್ಲೆಲ್ಲ ಕನ್ನಡಿಗರು, ಕರ್ನಾಟಕ, ಮತ್ತು ಕನ್ನಡ ಮೇಳೈಸುತ್ತಲೇ ಇರಲಿ. * * * [ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.]
Mar 5, 2011
Mar 5, 2011
10 min
ದಿನಾಂಕ 6 ಮಾರ್ಚ್ 2011ರ ಸಂಚಿಕೆ...
ಅಂಗುಷ್ಠ, ಉಂಗುಟ, ಥಂಬ್ ಮತ್ತು ಟೋ
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] ಕರಾರವಿಂದೇನ ಪದಾರವಿಂದಂ ಮುಖಾರವಿಂದೇ ವಿನಿವೇಶಯಂತಂ| ವಟಸ್ಯ ಪತ್ರಸ್ಯ ಪುಟೇ ಶಯಾನಂ ಬಾಲಂ ಮುಕುಂದಂ ಮನಸಾ ಸ್ಮರಾಮಿ|| ಆಲದೆಲೆಯ ಮೇಲೆ ಮಲಗಿರುವ ಬಾಲಕೃಷ್ಣ ತನ್ನ ಕಾಲಿನ ಹೆಬ್ಬೆರಳನ್ನು ಚೀಪುತ್ತಿದ್ದಾನೆ. ಕ್ಯಾಲೆಂಡರ್ಗಳಲ್ಲಿ, ಪೇಂಟಿಂಗ್ಗಳಲ್ಲಿ ಈ ಸುಂದರ ದೃಶ್ಯವನ್ನು ನಾವೆಲ್ಲ ನೋಡಿಯೇ ಇರುತ್ತೇವೆ. ಪ್ರಳಯದಿಂದ ರಕ್ಷಿಸಲಿಕ್ಕಾಗಿ ಜಗತ್ತನ್ನು ತನ್ನ ಹೊಟ್ಟೆಯಲ್ಲಡಗಿಸಿಕೊಂಡ ಭಗವಂತ, ಮುಗ್ಧ ಮಗುವಾಗಿ ಈ ಲೀಲೆಯನ್ನಾಡುತ್ತಾನಂತೆ. ತನ್ನ ಪಾದಗಳನ್ನು ಸ್ಪರ್ಶಿಸಿದ ನೀರು ಅಮೃತಕ್ಕಿಂತಲೂ ಸಿಹಿಯೆಂದು ಭಕ್ತರು ತಿಳಿದುಕೊಳ್ಳುತ್ತಾರಲ್ಲ ನಿಜವಾಗಿಯೂ ಸಿಹಿಯಾಗಿರುವುದು ಹೌದೇ ಎಂದು ಸ್ವಯಂಪರೀಕ್ಷೆ ಮಾಡಿ ಕಂಡುಕೊಳ್ಳುವುದಕ್ಕಾಗಿ ಅಂಗುಷ್ಠ ಚೀಪುತ್ತಾನಂತೆ. ಹಾಗೆನ್ನುತ್ತವೆ ಪುರಾಣಗಳು. ಅಂಗುಷ್ಠದ ಮಹಿಮೆ ಕೃಷ್ಣಕಥೆಯಲ್ಲಿ ಆಮೇಲೂ ಬರುತ್ತದೆ. ಮಹಾಭಾರತ ಯುದ್ಧದಲ್ಲಿ ಕರ್ಣಾರ್ಜುನರ ನಡುವೆ ಭೀಕರ ಕಾಳಗದ ಸಂದರ್ಭ. ಕರ್ಣ ಅರ್ಜುನನ ಕೊರಳಿಗೇ ಗುರಿಯಿಟ್ಟು ಸರ್ಪಾಸ್ತ್ರ ಪ್ರಯೋಗಿಸುತ್ತಾನೆ. ಆ ಕ್ಷಣದಲ್ಲಿ ಕೃಷ್ಣ ತನ್ನ ಕಾಲಿನ ಹೆಬ್ಬೆರಳಿನಿಂದ ರಥವನ್ನು ಅದುಮುತ್ತಾನೆ. ಕರ್ಣನ ಬಾಣ ಅರ್ಜುನನ ಕೊರಳಿಗೆ ತಾಗದೆ ಕಿರೀಟವನ್ನಷ್ಟೇ ಹಾರಿಸಿಕೊಂಡು ಹೋಗುವಂತೆ ಮಾಡುತ್ತಾನೆ. ಅರ್ಜುನನ ಪ್ರಾಣ ಉಳಿಸುತ್ತಾನೆ. ಯುದ್ಧಕ್ಕೆ ಮೊದಲು ವಿರಾಟಪರ್ವದಲ್ಲೂ ಒಂದು ಸನ್ನಿವೇಶ ಬರುತ್ತದೆ. ಕುಮಾರವ್ಯಾಸ ಅದನ್ನು ಬಹಳ ಚೆನ್ನಾಗಿ ವರ್ಣಿಸಿದ್ದಾನೆ. ಸೆಣಸು ಸೇರದ ದೇವನಿದಿರಲಿ ಮಣಿಯದಾತನ ಕಾಣುತಲೆ ಧಾ ರುಣಿಯನೊತ್ತಿದನುಂಗುಟದ ತುದಿಯಿಂದ ನಸುನಗುತ ಮಣಿಖಚಿತ ಕಾಂಚನದ ಪೀಠದ ಗೊಣಸು ಮುರಿದುದು ಮೇಲೆ ಸುರ ಸಂ ದಣಿಗಳಾ ಎನೆ ಕವಿದುಬಿದ್ದನು ಹರಿಯ ಚರಣದಲಿ ಕೃಷ್ಣನು ವಿದುರನ ಮನೆಯಿಂದ ಕೌರವರ ಅರಮನೆಗೆ ಬಂದಿದ್ದಾನೆ. ಭೀಷ್ಮ, ದ್ರೋಣ ಮುಂತಾದವರೆಲ್ಲ ಎದ್ದುನಿಂತು ಅವನಿಗೆ ವಂದಿಸಿದ್ದಾರೆ. ದುರ್ಯೋಧನ ಮಾತ್ರ ದರ್ಪದಿಂದ ಸಿಂಹಾಸನಾರೂಢನಾಗಿಯೇ ಇದ್ದಾನೆ. ಅವನ ಗರ್ವಭಂಗ ಮಾಡಲೆಂದು ಕೃಷ್ಣ ತನ್ನ ಉಂಗುಟ ಅಂದರೆ ಕಾಲಿನ ಹೆಬ್ಬೆರಳನ್ನು ನೆಲಕ್ಕೆ ಒತ್ತುತ್ತಾನೆ. ಆ ರಭಸಕ್ಕೆ ಭೂಮಿ ನಡುಗಿ ಸಿಂಹಾಸನ ಅದುರುತ್ತದೆ. ದುರ್ಯೋಧನ ಕೆಳಗೆ ಬೀಳುತ್ತಾನೆ, ನೇರವಾಗಿ ಕೃಷ್ಣನ ಪದತಲಕ್ಕೆ! ವಿಧಿಲೀಲೆಯೆಂದರೆ ಅಂತಹ ಮಹಾಮಹಿಮ ಶ್ರೀಕೃಷ್ಣನ ಅವತಾರಾಂತ್ಯದಲ್ಲಿ ಮೊದಲು ಘಾಸಿಗೊಳ್ಳುವುದು ಅವನ ಅಂಗುಷ್ಠವೇ. ಕೊನೆಯ ದಿನಗಳಲ್ಲಿ ವನವಾಸಿಯಾಗಿದ್ದ ಕೃಷ್ಣ ಕಾಡಿನಲ್ಲಿ ಒಂದು ಮರದ ಕೆಳಗೆ ಒರಗಿ ಕಾಲುಚಾಚಿ ಕುಳಿತುಕೊಂಡಿರುತ್ತಾನೆ. ಕೃಷ್ಣನ ಕಾಲ್ಬೆರಳನ್ನು ಜಿಂಕೆಯ ಕಣ್ಣೆಂದು ಭಾವಿಸಿದ ಬೇಡ ಬಾಣ ಬಿಡುತ್ತಾನೆ. ಇಹಲೋಕದ ವಾಸ ಮುಗಿಸಿ ಕೃಷ್ಣ ವೈಕುಂಠಕ್ಕೆ ಮರಳುತ್ತಾನೆ. ಕಾಲಿನ ಹೆಬ್ಬೆರಳು ಎಷ್ಟು ಪವರ್ಫುಲ್ ಎನ್ನುವುದಕ್ಕೆ ರಾಮಾಯಣ ಮತ್ತಿತರ ಕಥೆಗಳಲ್ಲೂ ವಿಸ್ಮಯದ ಚಿತ್ರಣಗಳು ನಮಗೆ ವಿಪುಲವಾಗಿ ಸಿಗುತ್ತವೆ. ವಾಲಿಯು ಬಿಸಾಡಿದ ದುಂದುಭಿ ಎಂಬ ರಾಕ್ಷಸನ ಪರ್ವತಾಕಾರದ ದೇಹವನ್ನು ಶ್ರೀರಾಮ ತನ್ನ ಕಾಲಿನ ಹೆಬ್ಬೆರಳಿನಿಂದಲೇ ದಶ ಯೋಜನ ದೂರಕ್ಕೆ ಝಾಡಿಸಿದ್ದನಂತೆ. ಹಾಗೆಯೇ ಪರಮೇಶ್ವರನು ತನ್ನ ಅಂಗುಷ್ಠದಿಂದ ಕೈಲಾಸ ಪರ್ವತವನ್ನು ಅದುಮಿಹಿಡಿದು ರಾವಣನ ಅಹಂಕಾರಕ್ಕೆ ಪೆಟ್ಟುಕೊಟ್ಟ ಒಂದು ಪ್ರಸಂಗವೂ ಇದೆ. ಇನ್ನು, ಋಷಿ-ಮುನಿಗಳು ಮತ್ತು ಹಿರಣ್ಯಕಷಿಪುವಿನಂಥ ಮಹಾರಾಕ್ಷಸರು ಕಾಲಿನ ಹೆಬ್ಬೆರಳುಗಳ ಆಧಾರದಲ್ಲಿ ನಿಂತು ಘೋರ ತಪಸ್ಸನ್ನಾಚರಿಸಿದರು ಎಂಬ ರೀತಿಯ ವಿವರಣೆಗಳಂತೂ ಪುರಾಣಕಥೆಗಳಲ್ಲಿ ವೆರಿ ಕಾಮನ್. ಗುರುಹಿರಿಯರಿಗೆ ನಮಸ್ಕರಿಸುವಾಗ ನಾವು ಅವರ ಪಾದಗಳನ್ನು ಮುಟ್ಟುತ್ತೇವಲ್ಲ, ವಿಶೇಷವಾಗಿ ಆಗ ಅಂಗುಷ್ಠಗಳನ್ನು ಸ್ಪರ್ಶಿಸಬೇಕಂತೆ. ಏಕೆಂದರೆ ಹಿರಿಯರ ತಪಃಶಕ್ತಿ, ಪುಣ್ಯ ಮತ್ತು ಅನುಭವಾಮೃತಗಳೆಲ್ಲ ಆಶೀರ್ವಾದ ರೂಪದಲ್ಲಿ ಅಂಗುಷ್ಠಗಳ ಮೂಲಕ ನಮಗೆ ಹರಿದುಬರುತ್ತವಂತೆ. ಅಂಗುಷ್ಠ ಎಂದರೆ ಆಶೀರ್ವಾದಗಳು ಟ್ರಾನ್ಸ್ಮಿಷನ್ ಆಗುವ ಆಂಟೆನಾ ಎಂದು ನೆನಪಿಟ್ಟುಕೊಳ್ಳಬೇಕು. ಆಯ್ತು, ಆದರೆ ಅಂಗುಷ್ಠದ ವಿಚಾರ ಇವತ್ತೇಕೆ ಬಂತು ಎಂದು ನಿಮಗೀಗ ಅಚ್ಚರಿಯಾಗಿರಬಹುದು ಅಲ್ಲವೇ? ಹೇಳುತ್ತೇನೆ ಕೇಳಿ. ಅವತ್ತು ಕನ್ನಡ ಚಿತ್ರಗೀತೆಗಳಲ್ಲಿ ತಪ್ಪೊಪ್ಪುಗಳ ಬಗ್ಗೆ ಬರೆಯುತ್ತ ಪ್ರೇಮಲೋಕದ ಹಾಡಿನಲ್ಲಿ ‘ಅಂಗುಷ್ಠ’ವನ್ನು ತಪ್ಪಾಗಿ ‘ಉಂಗುಷ್ಠ’ ಎನ್ನಲಾಗಿದೆ ಎಂದು ಬರೆದಿದ್ದೆನಷ್ಟೆ. ಅದನ್ನು ಕೆಲವು ಭಾಷಾಸೂಕ್ಷ್ಮ ಓದುಗಮಿತ್ರರು ವಿಶೇಷವಾಗಿ ಗಮನಿಸಿದ್ದಾರೆ. ಉಂಗುಷ್ಠ ಎಂಬ ಪದವೂ ಕನ್ನಡದಲ್ಲಿ ಚಾಲ್ತಿಯಲ್ಲಿದೆಯಲ್ಲ, ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದ ರತ್ನಕೋಶ ನಿಘಂಟಿನ ೩೨ನೇ ಪುಟದಲ್ಲಿ ‘ಉಂಗುಷ್ಠ = ಕಾಲಿನ ಹೆಬ್ಬೆರಳು; ಎಕ್ಕಡದಲ್ಲಿ ಹೆಬ್ಬೆರಳನ್ನು ತೂರಿಸಲು ಮಾಡಿರುವ ಉಂಗುರದಂಥ ರಚನೆ’ ಎಂಬ ವಿವರಣೆಯಿದೆಯಲ್ಲ ಎಂದು ಪತ್ರ ಬರೆದು ತಿಳಿಸಿದ್ದಾರೆ. ಬೆಂಗಳೂರಿನ ಡಿ.ಪಿ.ಸುಹಾಸ್ ಎಂಬುವವರಂತೂ ಅಂಗುಷ್ಠ, ಉಂಗುಷ್ಠ, ಉಂಗುಟ ಈ ಎಲ್ಲ ಪದಗಳೂ ಕನ್ನಡದಲ್ಲಿ ವ್ಯಾಪಕವಾಗಿ ಬಳಕೆಯಾಗಿವೆ ಎಂದು ಸೋದಾಹರಣ ಮಾಹಿತಿಯನ್ನು ಆಸಕ್ತಿಕರವಾಗಿ ಪೋಣಿಸಿ ಎರಡು ಪುಟಗಳ ಪ್ರಬಂಧದಂತೆ ಬರೆದು ಕಳಿಸಿದ್ದಾರೆ. ಯಾರ ವಾದ ಸರಿ ಯಾರದು ತಪ್ಪು ಎಂದು ಹಠಕ್ಕೆ ಬೀಳದೆ ನಾನು ಮತ್ತು ಸುಹಾಸ್ ಒಂದಿಷ್ಟು ಇಂಟರೆಸ್ಟಿಂಗ್ ಇಮೇಲ್ಗಳ ವಿನಿಮಯ ಮಾಡಿಕೊಂಡಿದ್ದೇವೆ. ‘ಅಂಗುಷ್ಠಪುರಾಣ’ಕ್ಕೆ ಸೇರಬಹುದಾದ ಅಂಶಗಳ ಸ್ವಾರಸ್ಯಕರ ಪಟ್ಟಿ ತಯಾರಿಸಿದ್ದೇವೆ. ಮೂಲ ಸಂಸ್ಕೃತ ಪದ ‘ಅಂಗುಷ್ಠ’ ಅಂತಲೇ ಇರುವುದು; ಕೈ ಮತ್ತು ಕಾಲಿನ ಹೆಬ್ಬೆರಳುಗಳೆರಡಕ್ಕೂ ಅಂಗುಷ್ಠ ಎಂದೇ ಹೆಸರು. ಕನ್ನಡದಲ್ಲಿ ಅದು ‘ಅಂಗುಷ್ಠ’ ಎಂಬ ರೂಪದಲ್ಲಿ, ‘ಉಂಗುಟ’ ಎಂಬ ತದ್ಭವದ ರೂಪದಲ್ಲಿ (ಕುಮಾರವ್ಯಾಸನ ಕಾವ್ಯದಲ್ಲಿರುವಂತೆ), ಅಥವಾ ‘ಉಂಗುಷ್ಠ’ ಎಂಬ ಅಪಭ್ರಂಶದ ರೂಪದಲ್ಲಿಯೂ ಬಳಕೆಯಲ್ಲಿದೆ ಎಂಬ ತೀರ್ಮಾನಕ್ಕೆ ಬಂದಿದ್ದೇವೆ. ಆ ದೃಷ್ಟಿಯಿಂದ ನೋಡಿದರೆ ಪ್ರೇಮಲೋಕದ ಹಾಡಿನಲ್ಲಿ ಉಂಗುಷ್ಠ ಅಂತಿರುವುದು ಓಕೆ. ಹೇಗೂ ಅದು ಕನ್ನಡ ಚಿತ್ರಗೀತೆ. ಉಂಗುಷ್ಠ ಪದ ಕನ್ನಡ ನಿಘಂಟುಗಳಲ್ಲೂ ಸೇರಿಕೊಂಡಿರುವುದರಿಂದ ಮಾಫಿ ಮಾಡಬಹುದು. ಆದರೆ, ‘ಪ್ರೇಮಲೋಕ’ ಸಿನೆಮಾ ಒಂದು ವೇಳೆ ಸಂಸ್ಕೃತದಲ್ಲಿ ಬಂದಿದ್ದಿದ್ದರೆ!? ಆಗ ನಿಂಬೆಹಣ್ಣಿನಂಥ ಹುಡುಗಿಯ ಹಾಡೂ ಸಂಸ್ಕೃತದಲ್ಲಿರಬೇಕಾಗುತ್ತಿತ್ತು. ಅಂಗುಷ್ಠ ಪದ ಕೂಡ ಶುದ್ಧರೂಪದಲ್ಲಿಯೇ ಕಂಗೊಳಿಸುತ್ತಿತ್ತು. ಹೀಗೇ ಒಮ್ಮೆ ಯೋಚಿಸಿ. ಅನುಷ್ಟುಪ್ ಛಂದದಲ್ಲಿ ಪ್ರೇಮಲೋಕಃ ಸಿನೆಮಾದ ಚಂದದ ಹಾಡು! ಹೀಗೆ- ನಿಂಬೂಕಾಭಾ ಇಯಂ ಬಾಲಾ ಪಶ್ಯಂತ್ವೇನಾಮಿಹಾಗತಾಂ| ಉತ್ತಮಾಂಗಂ ಸಮಾರಭ್ಯ ಅಂಗುಷ್ಠಾಂತಂ ಮನೋರಮಾ|| ಅರ್ಥವಾಗಲಿಲ್ಲವೇ? ತಾಳಿ, ಇದರ ಪ್ರತಿಪದಾರ್ಥ ಅಂದರೆ ಪದಪದಗಳಾಗಿ ಬಿಡಿಸಿದಾಗಿನ ಅರ್ಥ ಹೇಳುತ್ತೇನೆ- ನಿಂಬೂಕ ಆಭಾ (ನಿಂಬೆಹಣ್ಣಿನ ಕಾಂತಿಯುಳ್ಳ) ಇಯಂ ಬಾಲಾ (ಈ ಹುಡುಗಿ) ಇಹ ಆಗತಾಮ್ (ಇಲ್ಲಿಗೆ ಬಂದಿರುವವಳನ್ನು) ಪಶ್ಯಂತು (ನೋಡುವಂಥವರಾಗಿ). ಉತ್ತಮಾಂಗಂ (ತಲೆಯಿಂದ) ಸಮಾರಭ್ಯ (ಮೊದಲ್ಗೊಂಡು) ಅಂಗುಷ್ಠಾಂತಂ (ಕಾಲಿನ ಹೆಬ್ಬೆರಳಿನವರೆಗೂ) ಮನೋರಮಾ (ಮುದ ನೀಡುವ ಸೌಂದರ್ಯವುಳ್ಳವಳು, ಯಾವುದೇ ಕೊರತೆಯಿಲ್ಲದವಳು). ಆಹಾ! ಸಂಸ್ಕೃತ ಕಾವ್ಯ, ಅದರಲ್ಲೂ ಹೆಣ್ಣಿನ ಬಣ್ಣನೆಯೆಂದ ಮೇಲೆ ರಸಿಕತೆಯ ಮಹಾಪೂರ! ಅದಿರಲಿ, ಅಂಗುಷ್ಠಪುರಾಣದಲ್ಲಿ ಸಂಗ್ರಹಿಸಲಾದ ಇನ್ನೂ ಕೆಲವು ವಿನೋದ ವಿಚಾರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವುದಿದೆ. ಕಾಲಿನ ಹೆಬ್ಬೆರಳನ್ನಷ್ಟೇ ಇವತ್ತು ವ್ಯಾಖ್ಯಾನಿಸಿದ್ದು. ಕೈಯ ಹೆಬ್ಬೆರಳು ಕೂಡ ‘ಅಂಗುಷ್ಠ’ವೇ. ಅದಕ್ಕೆ ಸಂಬಂಧಿಸಿದ ಕಥೆಗಳೂ ಸ್ವಾರಸ್ಯಕರವಾಗಿವೆ. ಏಕಲವ್ಯನ ಕಥೆ ಇದೆ, ಥಮ್ಸ್ಅಪ್ ಪಾನೀಯದ ಪುರಾಣವಿದೆ, ರೂಲ್ ಆಫ್ ಥಂಬ್ ಎಂಬ ನುಡಿಗಟ್ಟಿನ ಚರಿತ್ರೆಯನ್ನು ಅರಿಯುವುದಿದೆ. ಹೆಬ್ಬೆಟ್ಟಿನ ಸಹಿ (ಅಂಗುಠಾಛಾಪ್) ಹಾಕುವ ಕ್ರಮ ಯಾವಾಗ ಎಲ್ಲಿ ಶುರುವಾಯ್ತು ಎಂದು ತಿಳಿಯುವುದಿದೆ. ಅವೆಲ್ಲಕ್ಕಿಂತ ಮುಖ್ಯವಾಗಿ ‘ಅಂಗುಷ್ಠಸಾಹಿತ್ಯ’ ಎಂಬ ಅಲ್ಟ್ರಾಮಾಡರ್ನ್ ಸಾಹಿತ್ಯಪ್ರಕಾರವೊಂದನ್ನು ಪರಿಚಯ ಮಾಡಿಕೊಳ್ಳುವುದಿದೆ. ಸದ್ಯಕ್ಕೆ ಅವೆಲ್ಲ ನನ್ನ ಕಂಪ್ಯೂಟರ್ನ ‘ಥಂಬ್ ಡ್ರೈವ್’ನಲ್ಲಿವೆ. ನೆಕ್ಸ್ಟ್ ಸಂಡೇ ಅಂಕಣದಲ್ಲಿ ನೋಡೋಣ. ಅಲ್ಲಿಯವರೆಗೆ, ಅಂಗುಷ್ಠಸಾಹಿತ್ಯ ಅಂದರೆ ಏನಿರಬಹುದು ಎಂದು ಯೋಚಿಸಿ. ನೀವೂ ಓರ್ವ ಅಂಗುಷ್ಠಸಾಹಿತಿ ಆಗಿದ್ದರೆ ನಿಮಗೆ ಆಗಲೇ ಗೊತ್ತಾಗಿಹೋಯ್ತು ಎಂದುಕೊಳ್ಳುವೆ. ಸಿಗೋಣ, ಮುಂದಿನವಾರ. * * * [ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] "Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!
Feb 26, 2011
Feb 26, 2011
12 min
ದಿನಾಂಕ 27 ಫೆಬ್ರವರಿ 2011ರ ಸಂಚಿಕೆ...
ಅಣೋರಣೀಯ ಮಹತೋಮಹೀಯ ಅಪ್ರಮೇಯ
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] ಅಣುವಿನ ಪ್ರತಿಕೃತಿ ಹೇಗಿರಬಹುದೆಂದು ಯೋಚಿಸಿದ್ದೀರಾ? ಇದೊಳ್ಳೇ ‘ಹೋಮ್ವರ್ಕ್ ಮಾಡಿದ್ದೀರಾ’ ಎಂದು ಮೇಷ್ಟ್ರು ಮಕ್ಕಳನ್ನು ಕೇಳಿದಹಾಗಾಯ್ತು ಎನ್ನಬೇಡಿ. ಉದ್ದೇಶ ಅದಲ್ಲ, ಆದರೂ ಕೇಳುತ್ತಿದ್ದೇನೆ. ನಿಮಗೆ ಆಶ್ಚರ್ಯವಾಗಬಹುದು- ಪ್ರಮಾಣಗಳನ್ನು ಯಥಾವತ್ ಹಿಗ್ಗಿಸಿ ಅಣುಪ್ರತಿಕೃತಿ ರಚಿಸುವುದು ನಾವು ಅಂದುಕೊಂಡಷ್ಟು ಸುಲಭವಿಲ್ಲ! ಯಾಕಿಲ್ಲ? ಜಲಜನಕದ ಅಣುವಿನಲ್ಲಿರೋದು ಮಧ್ಯದಲ್ಲೊಂದು ಧನಾತ್ಮಕ ಪ್ರೋಟಾನು, ಅದನ್ನು ಸುತ್ತುವ ಒಂದು ಋಣಾತ್ಮಕ ಎಲೆಕ್ಟ್ರಾನು. ಸೂರ್ಯ ಮತ್ತು ಭೂಮಿ ಇದ್ದಂತೆ. ಅಥವಾ, ಭೂಮಿ ಮತ್ತು ಚಂದ್ರನಿದ್ದಂತೆ. ಒಂದು ಚೆಂಡಿನ ಸುತ್ತ ಇನ್ನೊಂದು ಚೆಂಡನ್ನೋ ಪುಟ್ಟ ಗೋಲಿಯನ್ನೋ ಸುತ್ತುತ್ತಿರುವಂತೆ ಮಾಡಿದರಾಯ್ತು ಮಾಡೆಲ್ ರೆಡಿ ಎಂದು ನೀವೆನ್ನಬಹುದು. ಊಹುಂ. ಅದು ‘ಸ್ಕೇಲ್ ಅಪ್ ಮಾಡೆಲ್’ ಆಗುವುದಿಲ್ಲ. ಅಣುವಿನ ನಿಜವಾದ ಅಗಾಧತೆಯನ್ನು, ಅದ್ಭುತವಾದ ರಚನೆಯನ್ನು ಅಂಥ ಮಾಡೆಲ್ ಸಮರ್ಥವಾಗಿ ಚಿತ್ರಿಸುವುದಿಲ್ಲ. ಜಲಜನಕದ ಅಣುವಿನ ಮೂಲರೂಪದ ಅಳತೆ ಎಷ್ಟು ಗೊತ್ತೇ? ಒಂದು ಮಿಲಿಮೀಟರ್ಅನ್ನು ಕೋಟಿ ಭಾಗಗಳಾಗಿಸಿ ಅದರಲ್ಲೊಂದರಷ್ಟು! ಅಂಥ ಮಹಾನ್ ಅಣುವಿನ ಒಟ್ಟು ಗಾತ್ರದ ಲಕ್ಷದಲ್ಲೊಂದು ಭಾಗದಷ್ಟು ಚಿಕ್ಕದು ನಡುವಿನಲ್ಲಿರುವ ಪ್ರೋಟಾನ್. ಇನ್ನು ಆ ಪ್ರೋಟಾನ್ನ ಸಾವಿರದೊಂದು ಭಾಗದಷ್ಟು ಚಿಕ್ಕದಿರುವುದು ಎಲೆಕ್ಟ್ರಾನ್. ಅಂದರೆ, ಇಡೀ ಅಣುವಿನಲ್ಲಿ ಬಹುತೇಕ ಭಾಗ ಬರೀ ಟೊಳ್ಳು! ಸ್ಕೇಲ್ ಆಪ್ ಮಾಡೆಲ್ ಕಠಿಣವಾಗುವುದು ಅದೇ ಕಾರಣಕ್ಕೆ. ಪ್ರೋಟಾನ್ ಮತ್ತು ಎಲೆಕ್ಟ್ರಾನ್ಗಳ ಗಾತ್ರವನ್ನೇನೋ ಕೋಟಿಗಟ್ಟಲೆ ಹಿಗ್ಗಿಸಿ ಅನುಕ್ರಮವಾಗಿ ಒಂದು ಕುಂಬಳಕಾಯಿ ಮತ್ತೊಂದು ನೆಲ್ಲಿಕಾಯಿಯಷ್ಟು ದೊಡ್ಡವನ್ನಾಗಿ ತೋರಿಸಬಹುದು. ಆದರೆ ಅನುಪಾತವನ್ನು ಕಾಯ್ದುಕೊಳ್ಳಲು ಅವುಗಳ ನಡುವಿನ ದೂರವನ್ನೂ ಅಷ್ಟೇ ಪ್ರಮಾಣದಲ್ಲಿ ಹಿಗ್ಗಿಸಬೇಕಲ್ಲ? ಹಾಗೆ ಹಿಗ್ಗಿಸಿದ್ದೇ ಆದರೆ ಜನಾರ್ಧನಸ್ವಾಮಿ ಚಿತ್ರದುರ್ಗದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಅಣುಪ್ರತಿಕೃತಿಯಲ್ಲಿ ಪ್ರೋಟಾನ್ ಮಾತ್ರ ಚಿತ್ರದುರ್ಗದ ಪೇಟೆಯಲ್ಲಿ ಇರುತ್ತದೆ, ಎಲೆಕ್ಟ್ರಾನ್ ಕನಿಷ್ಠ ಹತ್ತಿಪ್ಪತ್ತು ಕಿ.ಮೀ ದೂರದ ಒಂದು ಹಳ್ಳಿಯಲ್ಲಿರಬೇಕಾಗುತ್ತದೆ! ಪ್ರೋಟಾನ್ ನೋಡಿ ಆಯ್ತಲ್ಲ ಇನ್ನು ಎಲೆಕ್ಟ್ರಾನ್ ತೋರಿಸುತ್ತೇವೆ ಎಂದು ಪ್ರವಾಸಿಗರನ್ನು ಅಲ್ಲಿಗೆ ಬಸ್ಸಿನಲ್ಲಿ ಕರೆದುಕೊಂಡು ಹೋಗಬೇಕಾಗುತ್ತದೆ. ಬಸ್ಸು ತಲುಪುವ ಹೊತ್ತಿಗೆ ಎಲೆಕ್ಟ್ರಾನ್ ಅಲ್ಲಿಂದ ಮುನ್ನಡೆದಿದ್ದರೆ ಪ್ರವಾಸ ಮತ್ತೂ ರೋಚಕವಾಗುತ್ತದೆ! ಕಳೆದವಾರ ಅಣುಪ್ರತಿಕೃತಿ ವಿಷಯವನ್ನು ಪ್ರಸ್ತಾಪಿಸಿದ್ದು ಓದುಗರ ‘ಅಗೆವ ಬುದ್ಧಿಗೆ ಅನಂತ ಅವಕಾಶ’ ಮಾಡಿಕೊಟ್ಟಿದೆ. ಕನ್ನಡಪ್ರಭದಲ್ಲಿ ವಿಜ್ಞಾನವಿಶೇಷ ಅಂಕಣ ಬರೆಯುವ ಕೊಳ್ಳೇಗಾಲ ಶರ್ಮಾ ಅವರು ಅಣುಸಂರಚನೆ ಬಗ್ಗೆ ಸಾಕಷ್ಟು ಮಾಹಿತಿಯನ್ನು ಇಮೇಲ್ನಲ್ಲಿ ಹಂಚಿಕೊಂಡಿದ್ದಾರೆ. ಪ್ರಜಾವಾಣಿಯ ವಿಜ್ಞಾನವಿಶೇಷ ಅಂಕಣಕಾರ ನಾಗೇಶ ಹೆಗಡೆಯವರು ಮತ್ತಷ್ಟು ವಿಸ್ಮಯದ ವಿಚಾರಗಳನ್ನು ತಿಳಿಸಿದ್ದಾರೆ. ಅವರೆನ್ನುತ್ತಾರೆ, “ಎಲೆಕ್ಟ್ರಾನನ್ನು ಚೆಂಡಿನಂತೆ/ಗೋಲಿಯಂತೆ ತೋರಿಸುವುದೇ ತಪ್ಪು. ಅದು ಅಲೆಯಂತೆ, ಮೋಡದಂತೆಯೂ ವರ್ತಿಸುವುದರಿಂದ ಪ್ರೋಟಾನ್ನಿಂದ ಹೊರಡುವ ಪ್ರಭೆ ಆಗಾಗ ಚಿಮ್ಮುವಂತೆ ಮಾಡುವುದೇ ಸತ್ಯಕ್ಕೆ ತುಸು ಸಮೀಪವಾಗಬಹುದು. ಫುಟ್ಬಾಲ್ ಗಾತ್ರದ ಪ್ರೋಟಾನ್ ಮಾದರಿಯಿಂದ ಹತ್ತಿಪ್ಪತ್ತು ಕಿ.ಮೀ ದೂರದಲ್ಲಿ ಗೋಲಿ ಗಾತ್ರದ ಎಲೆಕ್ಟ್ರಾನನ್ನು ಇಡುವುದು ಸ್ವಾರಸ್ಯವೇನೊ ಹೌದು. ಆದರೆ ಪರಮಾಣು ರಂಗದಲ್ಲಿ ಇನ್ನೂ ಅನೇಕ ವೈಚಿತ್ರ್ಯಗಳಿವೆ. ಒಂದೇ ಎಲೆಕ್ಟ್ರಾನ್ ಏಕಕಾಲದಲ್ಲಿ ಎರಡು ಕಡೆ ಇರಲು ಸಾಧ್ಯವಿದೆ. ಮತ್ತೆ ಕ್ವಾಂಟಮ್ ಫಿಸಿಕ್ಸ್ ಜಗತ್ತಿಗೆ ಬಂದರೆ, ಎಲೆಕ್ಟ್ರಾನನ್ನು ನೋಡುವ ಕ್ರಿಯೆಯೇ ಅದನ್ನು ಅಲ್ಲಿಂದ ಮಾಯ ಮಾಡುವ ಸಾಧ್ಯತೆಯೂ ಇದೆ! ಆದ್ದರಿಂದ, ದೂರದ ಬೆಟ್ಟದ ಮೇಲೆ ಗಾಜಿನ ಪೆಟ್ಟಿಗೆಯೊಳಗೆ ಸ್ಥಿರವಾಗಿ ಎಲೆಕ್ಟ್ರಾನ್ ಮಾದರಿಯನ್ನಿಡುವುದು ತರವಲ್ಲ. ಹಾಗಂತ ಸುಮ್ಮನೇ ತೆರೆದಿಟ್ಟರೆ ಅದು ಅಲ್ಲಿಂದ ಮಾಯವಾಗುತ್ತದೆ. ಅದನ್ನಲ್ಲಿ ಮತ್ತೆಮತ್ತೆ ಸ್ಥಾಪನೆ ಮಾಡುವವರು ಯಾರು?” ಹೌದು, ಪರಮಾಣು ಪ್ರತಿಕೃತಿ ರಚನೆ ನಿಜಕ್ಕೂ ಚಾಲೆಂಜಿಂಗ್. ಪರಮಾಣುವಿಗೂ ಪರಮಾತ್ಮನಿಗೂ ಹೋಲಿಕೆ ಹುಟ್ಟಿಕೊಳ್ಳುವುದೇ ಅಲ್ಲಿ! ವಿಜ್ಞಾನ ಮತ್ತು ತತ್ತ್ವಜ್ಞಾನ ಒಂದರೊಳಗೊಂದು ಮಿಳಿತವಾಗುವುದೂ ಅಲ್ಲಿಯೇ! ನಾಗೇಶ ಹೆಗಡೆಯವರ ವಿವರಣೆಯನ್ನು ಇನ್ನೊಮ್ಮೆ ಗಮನಿಸಿ. ಅವರು ಹೇಳುತ್ತಿರುವುದು ಎಲೆಕ್ಟ್ರಾನ್ನ ಬಗ್ಗೆ. ಎಲೆಕ್ಟ್ರಾನ್ ಅಂತಿರುವಲ್ಲೆಲ್ಲ ಪರಮಾತ್ಮ ಎಂದು ಬದಲಾಯಿಸಿ ಓದಿದರೆ ‘ದೇವರು ಹೇಗಿರುತ್ತಾನೆ?’ ಎಂಬ ಪ್ರಶ್ನೆಗೆ ತತ್ತ್ವಜ್ಞಾನಿಯ ಉತ್ತರದಂತೆ ಭಾಸವಾಗುವುದಿಲ್ಲವೇ? ನಾವು ಪರಮಾತ್ಮನನ್ನು ಅಣೋರಣೀಯ ಮಹತೋಮಹೀಯ ಅಪ್ರಮೇಯ ಎಂದು ಬಣ್ಣಿಸುತ್ತೇವೆ. ನಮ್ಮ ತೃಪ್ತಿಗೋಸ್ಕರ, ನಮ್ಮ ನಂಬಿಕೆಗಳಿಗೋಸ್ಕರ ಪರಮಾತ್ಮನಿಗೆ ವಿಧವಿಧ ರೂಪಗಳನ್ನೂ ಕೊಡುತ್ತೇವೆ. ಕೊನೆಗೂ ಪರಮಾಣು ಬೇರೆ ಅಲ್ಲ, ಪರಮಾತ್ಮ ಬೇರೆ ಅಲ್ಲ. ಕಲ್ಪಿಸಿಕೊಂಡರೆ ಅದರಂಥ ವಿಸ್ಮಯ ಇನ್ನೊಂದಿಲ್ಲ! ಸರಿ, ಈಗ ವಿಜ್ಞಾನ-ತತ್ತ್ವಜ್ಞಾನಗಳ ಸೀರಿಯಸ್ನೆಸ್ನಿಂದ ಸ್ವಲ್ಪ ಲೈಟಾದ ಪ್ರಪಂಚಕ್ಕೆ ಬರೋಣ. ನಾವೇಕೆ ಪ್ರತಿಕೃತಿಗಳನ್ನು, ಪ್ರತಿಮೆಗಳನ್ನು ಬಳಸುತ್ತೇವೆ, ಅವುಗಳಿಂದೇನು ಉಪಯೋಗ ಎಂದು ನೋಡೋಣ. ನಾನು ಹೇಳುತ್ತಿರುವುದು ಪರಮಾಣುವಿನ ಪ್ರತಿಕೃತಿಯಂಥದ್ದಲ್ಲ. ಭುವನೇಶ್ವರಿ ದೇವಿಯ ಪ್ರತಿಮೆಯಂಥದ್ದೂ ಅಲ್ಲ. ಭೌತಿಕ ರೂಪವಿಲ್ಲದೆ ಮಾತಿನಲ್ಲಿ, ಬರಹದಲ್ಲಿ ನಾವು ಪ್ರತಿಮೆಗಳನ್ನು ಕಟ್ಟುತ್ತೇವಲ್ಲ ಅಂಥವು. ಎಷ್ಟೋಸರ್ತಿ ಒಣ ಅಂಕಿಅಂಶಗಳನ್ನು ಬಳಸಿದ ವಿವರಣೆಗಿಂತ ಈರೀತಿಯ ಪ್ರತಿಮೆಗಳೇ ಹೆಚ್ಚು ಪರಿಣಾಮಕಾರಿಯಾಗುತ್ತವೆ. ಸತ್ಯಹರಿಶ್ಚಂದ್ರನ ಕಥೆಯಲ್ಲಿ ‘ವಿಶ್ವಾಮಿತ್ರ ಮಹರ್ಷಿ ರಾಜಾಹರಿಶ್ಚಂದ್ರನ ಬಳಿ ಐವತ್ತು ಲಕ್ಷ ಸುವರ್ಣನಾಣ್ಯಗಳನ್ನು ಕೇಳಿದ’ ಅಂತಿದ್ದರೆ ಆ ಕಥನ ತೀರಾ ಸಪ್ಪೆಯಾಗುತ್ತಿತ್ತು. ‘ಒಬ್ಬ ಹುಡುಗ ಆನೆಯ ಮೇಲೆ ನಿಂತು ಕವಡೆಯನ್ನು ಮೇಲಕ್ಕೆಸೆದಾಗ ಅದು ಎಷ್ಟು ಎತ್ತರಕ್ಕೆ ಚಿಮ್ಮುತ್ತದೋ ಅಷ್ಟೆತ್ತರ ರಾಶಿಯಷ್ಟು ಬಂಗಾರದ ನಾಣ್ಯಗಳನ್ನು ಕೊಡಬೇಕೆಂದು ವಿಶ್ವಾಮಿತ್ರ ಬೇಡಿಕೆಯಿಟ್ಟ’ ಎನ್ನುವಾಗ ಅದರ ಎಫೆಕ್ಟೇ ಬೇರೆ! ಹನುಮಂತ ಸಾಗರೋಲ್ಲಂಘನಕ್ಕೆ ಎದ್ದುನಿಂತಾಗ ಅಲ್ಲಿ ಸೇರಿದ್ದ ಕಪಿಗಳ ಕೂಗು ನೂರು ಯೋಜನಗಳಷ್ಟು ದೂರ ಕೇಳಿತು ಅಂತ ಹೇಳಿದರೆ ಅದು ಒಣ ಮಾಹಿತಿ. ‘ತಂದೆ ವಾಯುವನು ವಂದಿಸಿ ನಿಂದನು ಸಾಗರ ದಾಟಲು ಹನುಮಂತ... ವಾನರಸೇನೆಯ ಕೂಗಿನ ಆರ್ಭಟ ಕೇಳಿತು ಲಂಕೆಯ ಪರ್ಯಂತ’ ಅಂತಂದರೆ ಅಲ್ಲಿ ಅದ್ಭುತ ರೋಮಾಂಚನ! ಮೇಘದೂತ ಕಾವ್ಯದಲ್ಲಿ ಕಾಳಿದಾಸ ಉಜ್ಜಯಿನಿ ನಗರದ ಬಣ್ಣನೆ ಮಾಡುತ್ತಾನೆ. ಅಲ್ಲಿನ ಕಟ್ಟಡಗಳು ಇಂತಿಷ್ಟು ಎತ್ತರ ಇದ್ದವು ಅಂತ ಅಂಕಿಅಂಶಗಳನ್ನೇನೂ ಹೇಳುವುದಿಲ್ಲ ಆತ. ಅವು ಗಗನಚುಂಬಿ ಕಟ್ಟಡಗಳು, ಅವುಗಳ ಮೇಲುಪ್ಪರಿಗೆಗಳು ಮೋಡಗಳಿಗೆ ತಾಕುವಷ್ಟು ಎತ್ತರದಲ್ಲಿದ್ದವು ಎಂಬ ಚಿತ್ರಣ ನಮ್ಮ ಮನಸ್ಸಿನಲ್ಲಿ ಮೂಡುವಂತೆ ಬಹಳ ಸುಂದರವಾಗಿ ಬಣ್ಣಿಸುತ್ತಾನೆ. ಹಾಗಂತ ಕೆಲವೊಮ್ಮೆ ಸಂಖ್ಯೆ ಬಳಸಿದ ವಿವರಣೆಯೇ ರೋಚಕವಾಗುವುದೂ ಇದೆ. “ಇವತ್ತಿನ ಕಾರ್ಯಕ್ರಮ ಅದ್ಭುತವಾಗಿತ್ತು. ಪ್ರೇಕ್ಷಕರು ಅದೆಷ್ಟು ಚಪ್ಪಾಳೆ ತಟ್ಟಿದರೆಂದರೆ ನಮ್ಮೂರಿನಲ್ಲಾಗಿದ್ದರೆ ಇದೇ ಚಪ್ಪಾಳೆಗಳಿಂದ ಸಾವಿರ ರೊಟ್ಟಿ ತಟ್ಟಬಹುದಿತ್ತು!” ಎಂದಿದ್ದರು ನನ್ನ ಅಮೆರಿಕನ್ನಡಿಗ ಮಿತ್ರ ಅನಿಲ್ ದೇಶಪಾಂಡೆ, ಇಲ್ಲಿನ ಒಂದು ಸಭಾಕಾರ್ಯಕ್ರಮದ ವಂದನಾರ್ಪಣೆಯಲ್ಲಿ. ಉತ್ತರ ಕರ್ನಾಟಕ ಮೂಲದ ದೇಶಪಾಂಡೆ ಸಾಹೇಬರಿಗೆ ಖಡಕ್ ರೊಟ್ಟಿಯ ನೆನಪು ಬಾಯಲ್ಲಿ ನೀರೂರಿಸುವುದಷ್ಟೇ ಅಲ್ಲ ರೊಟ್ಟಿ ತಟ್ಟುವಾಗಿನ ಶಬ್ದ ಕಿವಿಯಲ್ಲಿ ಗುಂಯ್ಗುಡುವಂತೆ ಮಾಡುತ್ತದೆ. ನನಗೆ ಸಖತ್ ತಮಾಷೆಯಾಗಿ ಕಂಡುಬಂತು ಈ ರೊಟ್ಟಿ ಪ್ರತಿಮೆ. ಚಪ್ಪಾಳೆ ಪ್ರಮಾಣ ಮತ್ತು ರೊಟ್ಟಿಗಳ ಸಂಖ್ಯೆಯಿಂದ ಯಾವುದೇ ಸಮಾರಂಭದ ಯಶಸ್ಸನ್ನಾದರೂ ಅಳೆಯಬಹುದು! ನಿಖರತೆ ಬೇಕಂತಿಲ್ಲ, ವಾಸ್ತವದಲ್ಲಿ ಸಾಧ್ಯವೇ ಎಂಬುದೂ ಮುಖ್ಯವಲ್ಲ. ಆದರೂ ಅರ್ಥಮಾಡುವುದಕ್ಕೆ, ಅರ್ಥಮಾಡಿಸುವುದಕ್ಕೆ ಪ್ರತಿಮೆಗಳ ಬಳಕೆ ಬಹಳ ಚೆನ್ನಾಗಿರುತ್ತದೆ. ಅದರಲ್ಲೇ ಕವಿಕಲ್ಪನೆಯೂ ಸೇರಿಕೊಂಡರಂತೂ ಕೇಳುವುದೇ ಬೇಡ. ‘ಚಂದಿರನ ತಟ್ಟೆಯಲ್ಲಿ ಸೇರಿ ತಿನಬೇಕು...’ ಎಂಬ ಚಿತ್ರಗೀತೆಯ ಸಾಲು. (ಹೌದು, ಅದೇ ‘ಮೊಗ್ಗಿನ ಮನಸ್ಸು’ ಸಿನೆಮಾದ ಹಾಡು. ನನಗೆ ‘ಚಟ್ನಿಯಲ್ಲಿ’, ‘ಕಡ್ಡಿಯಲ್ಲಿ’, ‘ಚಡ್ಡಿಯಲ್ಲಿ’ ಅಂತೆಲ್ಲ ಕೇಳಿಸುತ್ತದೆ ಎಂದಿದ್ದೆನಲ್ಲ, ನಿಜವಾಗಿ ಅದು ‘ತಟ್ಟೆ’ಯಲ್ಲಿ ಅಂತಿರೋದೆಂದು ಆಮೇಲೆ ಗೊತ್ತಾಯಿತು.) ಎಂಥ ಸುಂದರ ಕಲ್ಪನೆ! ಆದರೆ ಪ್ರಾಕ್ಟಿಕಲೀ ಅದು ಸಾಧ್ಯವೇ? ಭೂಮಿಯಿಂದ ಸುಮಾರು ನಾಲ್ಕು ಲಕ್ಷ ಕಿಲೋ ಮೀಟರ್ಗಳಷ್ಟು ದೂರದಲ್ಲಿದ್ದಾನೆ ಚಂದ್ರ. ಇಲ್ಲಿಂದ ನಮಗೆ ತಟ್ಟೆಯಂತೆ ಕಾಣುತ್ತಾನಾದರೂ ಅಪೋಲೊ ನೌಕೆಯಲ್ಲಿ ಹೋಗಿಬಂದವರಿಗೆ ತಿಳಿದಿದೆ ಚಂದ್ರನೆಂದರೆ ತಟ್ಟೆಯಲ್ಲ, ಭೂಮಿಯಂತೆಯೇ ಗೋಲಾಕೃತಿ. ಸರಿಸುಮಾರು ಭೂಮಿಯ ಮೂರನೇ ಒಂದರಷ್ಟು ಗಾತ್ರ. ಒಂದುವೇಳೆ ತಟ್ಟೆಯೇ ಅಂತಂದುಕೊಂಡರೂ ಅಷ್ಟು ದೊಡ್ಡ ತಟ್ಟೆಯಲ್ಲಿ ಒಂದೆರಡು ಇಡ್ಲಿ ಅಥವಾ ಪೂರಿ ಬಡಿಸಿಟ್ಟರೆ ಹೇಗೆ ಕಾಣಬಹುದು? ಅಥವಾ, ನಾವು ಭೂಮಿಯಲ್ಲಿದ್ದುಕೊಂಡೇ ಚಂದ್ರ ನಮ್ಮ ಊಟದ ತಟ್ಟೆ ಎಂದುಕೊಂಡರೆ ಅದರಿಂದ ತಿನ್ನಲು ನಮ್ಮ ಕೈಯನ್ನು ನಾಲ್ಕು ಲಕ್ಷ ಕಿಲೋಮೀಟರ್ನಷ್ಟು ಚಾಚಬೇಕು, ಅಥವಾ ಅಷ್ಟುದ್ದದ ಚಮಚ ಬೇಕು! ನಾಲ್ಕು ಲಕ್ಷದ ಸಂಗತಿ ಬಿಡಿ. ಎಪ್ಪತ್ತೈದು ಲಕ್ಷ ಕೋಟಿ ಎಂಬ ಒಂದು ಸಂಖ್ಯೆಯ ವಿಚಾರ ತಿಳಿಸುತ್ತೇನೆ ಈಗ. ಈ ಸಂಖ್ಯೆಯನ್ನು ಬರೆಯಲು 75ರ ಬಲಗಡೆಯಲ್ಲಿ ಹನ್ನೆರಡು ಸೊನ್ನೆಗಳು ಬೇಕು. 75 ಲಕ್ಷ ಕೋಟಿ ಏನು ಗೊತ್ತೇ? ಸ್ವಿಸ್ ಬ್ಯಾಂಕ್ನಲ್ಲಿ ಭಾರತೀಯರ ಹೆಸರಿನಲ್ಲಿರುವ ಕಪ್ಪುಹಣ ರೂಪಾಯಿಗಳಲ್ಲಿ! ಬಹುಶಃ ಸಂಖ್ಯೆಯ ರೂಪದಲ್ಲಿ ಅಂಥ ದೊಡ್ಡ ಮೊತ್ತವೆಂದೇನೂ ಅನಿಸುವುದಿಲ್ಲ. 2ಜಿ ಸ್ಪೆಕ್ಟ್ರಂ ಹಗರಣದ ಮೊತ್ತ ಸುಮಾರು 2 ಲಕ್ಷ ಕೋಟಿ ರೂಪಾಯಿಗಳು ಎಂದು ಓದಿದ ನೆನಪು. ಅದರ ಮೂವತ್ತೇಳುವರೆ ಪಟ್ಟು ಇದೆ ಈ ಮೊತ್ತ. ಸರಿ, ಈಗ ಇದಕ್ಕೆ ಒಂದು ಪ್ರತಿಮೆ ಕಟ್ಟೋಣ. ನಿಜಕ್ಕೂ ಎಷ್ಟೊಂದು ದೊಡ್ಡ ಮೊತ್ತವಿದು ಎಂದು ಮನದಟ್ಟಾಗುವಂತಿರಬೇಕು ಪ್ರತಿಮೆ. 75 ಲಕ್ಷ ಕೋಟಿ ರೂಪಾಯಿಗಳು ಸ್ವಿಸ್ ಬ್ಯಾಂಕ್ನಿಂದ ಹೊರಬಂದು ಹಾರ್ಡ್ ಕ್ಯಾಷ್ ಆಗಿ ಭಾರತಕ್ಕೆ ಬಂತು ಅಂತಿಟ್ಕೊಳ್ಳೋಣ. ಸಾವಿರ ರೂಪಾಯಿಗಳ ಗರಿಗರಿ ನೋಟುಗಳು. ಒಂದು ನೋಟಿನ ಉದ್ದ 18 ಸೆ.ಮೀ, ಅಗಲ 8 ಸೆ.ಮೀ. ನೂರು ನೋಟುಗಳ ಕಟ್ಟು ಮಾಡಿದರೆ ಅದರ ದಪ್ಪ ಸುಮಾರು 1.7 ಸೆ.ಮೀ ಎಂದು ‘ನೋಟ್’ ಮಾಡಿಟ್ಟುಕೊಳ್ಳೋಣ. ಈಗ ಒಂದು ಲಾರ್ಜ್ ಸೈಜ್ ಸೂಟ್ಕೇಸಿನ ಅಳತೆಗಳನ್ನು ನೋಡೋಣ. 71 ಸೆ.ಮೀ ಉದ್ದ, 53 ಸೆ.ಮೀ ಅಗಲ, 24 ಸೆ.ಮೀ ಎತ್ತರ. ಒಂದು ಸೂಟ್ಕೇಸ್ನೊಳಗೆ ಒಟ್ಟು 360 ಕಟ್ಟುಗಳು ತುಂಬಿಕೊಳ್ಳುತ್ತವೆ. ಒಂದು ಕಟ್ಟಿನಲ್ಲಿ ಒಂದು ಲಕ್ಷ ರೂಪಾಯಿ, ಆದ್ದರಿಂದ ಒಂದು ಸೂಟ್ಕೇಸ್ನಲ್ಲಿ ಒಟ್ಟು 3.6 ಕೋಟಿ ರೂಪಾಯಿ. ಒಂದು ಅಂಬಾಸಿಡರ್ ಕಾರಿನ ಡಿಕ್ಕಿಯಲ್ಲಿ ನಾಲ್ಕು ಸೂಟ್ಕೇಸ್ಗಳು ಹಿಡಿಸುತ್ತವೆ ಅಂತಿರಲಿ. ಹಾಗಾಗಿ ಒಂದು ಕಾರಿನಲ್ಲಿ ಒಟ್ಟು 14.4 ಕೋಟಿ ರೂಪಾಯಿಗಳು. ಸ್ವಿಸ್ ಬ್ಯಾಂಕ್ನಿಂದ ಹೊರಬಂದ ಅಷ್ಟೂ ಮೊತ್ತವನ್ನು ತುಂಬಲು 520833 ಕಾರುಗಳು ಬೇಕು. ಒಂದು ಕಾರಿನ ಉದ್ದ ಸುಮಾರು ನಾಲ್ಕೂಕಾಲು ಮೀಟರ್ ಅಂತಿಟ್ಟುಕೊಳ್ಳೋಣ. ಒಂದರಹಿಂದೆ ಒಂದರಂತೆ ಈ ಎಲ್ಲ ಕಾರುಗಳು ಹೊರಟರೆ, ನಡುವೆ ತಲಾ ಅರ್ಧ ಮೀಟರ್ ಗ್ಯಾಪ್ ಅಂತಿಟ್ಟುಕೊಂಡರೂ ಮೆರವಣಿಗೆ ಸುಮಾರು 2500 ಕಿ.ಮೀ ಉದ್ದವಾಗುತ್ತದೆ. ಅಂದರೆ ದಿಲ್ಲಿಯಿಂದ ಕನ್ಯಾಕುಮಾರಿವರೆಗೆ ಸರಳರೇಖೆ ಎಳೆದರೆ ಅಷ್ಟು ಉದ್ದ! ಏನು? “ಭಗವಂತಾ...” ಎಂದು ನಿಟ್ಟುಸಿರಿಟ್ಟಿರಾ? ಭಗವಂತ ಅಣೋರಣೀಯ, ಮಹತೋಮಹೀಯ ಮತ್ತು ಅಪ್ರಮೇಯ! * * * [ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] "Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!
Feb 19, 2011
Feb 19, 2011
12 min
ದಿನಾಂಕ 20 ಫೆಬ್ರವರಿ 2011ರ ಸಂಚಿಕೆ...
