Episodes

Saturday Dec 18, 2010
Kannada Chitrakaavya
Saturday Dec 18, 2010
Saturday Dec 18, 2010
ದಿನಾಂಕ 19 ಡಿಸೆಂಬರ್ 2010ರ ಸಂಚಿಕೆ...
ಚೆಲುವಗನ್ನಡದಲ್ಲಿ ಚಿತ್ರಕಾವ್ಯದ ಚಮತ್ಕಾರ
* ಶ್ರೀವತ್ಸ ಜೋಶಿ
ಕೆಲವು ವಾರಗಳ ಹಿಂದೆ ಈ ಅಂಕಣದಲ್ಲಿ ಮಾಘಕವಿಯ ಶಿಶುಪಾಲವಧ ಮಹಾಕಾವ್ಯ ಮತ್ತದರಲ್ಲಿನ ಅಕ್ಷರಚಮತ್ಕಾರವನ್ನು ಪರಿಚಯಿಸಿದ್ದೆನಷ್ಟೆ? ಹೈಸ್ಕೂಲು-ಕಾಲೇಜುಗಳಲ್ಲಿ ಸಂಸ್ಕೃತ ಕಲಿತವರಿಗೆ, ಸಂಸ್ಕೃತದ ಅಭಿಮಾನ ತುಸು ಹೆಚ್ಚೇ ಇರುವವರಿಗೆ ಅದು ಹಿಡಿಸಿತು. ಉಳಿದವರಿಗೆಲ್ಲ ‘ಕಬ್ಬಿಣದ ಕಡಲೆ ಉಸುಳಿ’ ಅನಿಸಿತು. ಎರಡೆರಡು ಸರ್ತಿ ಓದಿದರೂ ಅರ್ಥವಾಗಲಿಲ್ಲ ಎಂದು ಕೆಲವರೆಂದರೆ, ನಮ್ಮ ಕನ್ನಡ ಭಾಷೆಯಲ್ಲಿ ಇಂಥದ್ದಿದ್ದರೆ ಅದನ್ನೂ ಪರಿಚಯಿಸಿ ಎಂದು ಬರೆದರು ಇನ್ನು ಕೆಲವರು. ಸಂಸ್ಕೃತದಷ್ಟಲ್ಲದಿದ್ದರೂ ಕನ್ನಡದಲ್ಲೂ ಆ ರೀತಿಯ ಚಿತ್ರಕಾವ್ಯ ನಿದರ್ಶನಗಳು ಇವೆಯೆಂದೂ, ‘ಕನ್ನಡ ಚಿತ್ರಕಾವ್ಯ: ಸ್ವರೂಪ, ಇತಿಹಾಸ, ವಿಮರ್ಶೆ’ ಎಂಬ ಗ್ರಂಥವು (ಲೇಖಕರು: ಡಾ. ಟಿ.ವಿ. ವೆಂಕಟಾಚಲ ಶಾಸ್ತ್ರೀ; ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾಲಯ, ೧೯೮೭) ಅದರ ಕುರಿತಾಗಿಯೇ ಇದೆಯೆಂದೂ ಶತಾವಧಾನಿ ಆರ್.ಗಣೇಶ್ ಈಹಿಂದೆ ನನ್ನಲ್ಲೊಮ್ಮೆ ಹೇಳಿದ್ದು ನೆನಪಾಯ್ತು. ಅದೃಷ್ಟವೋ ಎಂಬಂತೆ, ವಾಷಿಂಗ್ಟನ್ನಲ್ಲಿರುವ ‘ಲೈಬ್ರರಿ ಆಫ್ ಕಾಂಗ್ರೆಸ್’ನ ಕ್ಯಾಟಲಾಗ್ನಲ್ಲಿ ಹುಡುಕಿದಾಗ ಆ ಗ್ರಂಥ ಲೈಬ್ರರಿಯಲ್ಲಿ ಇದೆಯೆಂದು ಗೊತ್ತಾಯ್ತು! ಲೈಬ್ರರಿ ಆಫ್ ಕಾಂಗ್ರೆಸ್, ಜಗತ್ತಿನ ಅತಿದೊಡ್ಡ ಗ್ರಂಥಾಲಯ. ಕೋಟಿಗಟ್ಟಲೆ ಪುಸ್ತಕಗಳು ಅಲ್ಲಿವೆ. ಕನ್ನಡ ಪುಸ್ತಕಗಳೂ ಇವೆ. ಈ ಲೈಬ್ರರಿಯಿಂದ ಪುಸ್ತಕಗಳನ್ನು ಎರವಲು ಪಡೆಯುವಂತಿಲ್ಲ, ಅಲ್ಲಿಯೇ ಕುಳಿತು ಓದಬೇಕು. ಅಷ್ಟೇಅಲ್ಲ, ಕೆಲವು ಪುಸ್ತಕಗಳನ್ನು ದೂರದ ಗೋದಾಮಿನಲ್ಲಿಟ್ಟಿರುವುದರಿಂದ ನಮಗೆ ಬೇಕಾದ ಪುಸ್ತಕಕ್ಕೆ ‘ರಿಕ್ವೆಸ್ಟ್’ ಸಲ್ಲಿಸಿ ಪುಸ್ತಕವು ಲೈಬ್ರರಿಗೆ ಬಂತೆನ್ನುವ ಸಂದೇಶ ಬಂದಮೇಲೆ ಹೋಗಿ ಓದಬೇಕು. ಸರಿ,ನಾನು ‘ಕನ್ನಡ ಚಿತ್ರಕಾವ್ಯ’ ಪುಸ್ತಕಕ್ಕೆ ರಿಕ್ವೆಸ್ಟ್ ಸಲ್ಲಿಸಿದೆ, ಗೋದಾಮಿನಿಂದ ಪುಸ್ತಕ ಬಂದಬಗ್ಗೆ ಇಮೇಲ್ ಬಂತು. ಶನಿವಾರದ ಒಂದು ದಿನವನ್ನು ಅದಕ್ಕೇ ಮೀಸಲಿಟ್ಟೆ. ಲೈಬ್ರರಿಗೆ ಹೋಗಿ ಐನೂರಕ್ಕೂ ಹೆಚ್ಚು ಪುಟಗಳ ಆ ಗ್ರಂಥದ ಸಾರವನ್ನು ಆರೇಳು ಗಂಟೆಗಳಲ್ಲಿ ಸಾಧ್ಯವಾದಷ್ಟು ಹೀರಿಕೊಂಡು, ಟಿಪ್ಪಣಿಗಳನ್ನು ಬರೆದುಕೊಂಡು ಬಂದೆ. ವೆಂಕಟಾಚಲ ಶಾಸ್ತ್ರಿಗಳ ಸಂಶೋಧನಾವಿದ್ವತ್ತಿಗೆ ತಲೆಬಾಗಿ, ಗ್ರಂಥದಿಂದ ಹೆಕ್ಕಿತಂದ ಅಂಶಗಳನ್ನು ಸೇರಿಸಿ ಇವತ್ತಿನ ಈ ಅಂಕಣವನ್ನು ಬರೆದೆ. ಒಪ್ಪಿಸಿಕೊಳ್ಳಿ. ಚಿತ್ರಕಾವ್ಯ ಎಂದರೇನು? ಅಕ್ಷರವಿನ್ಯಾಸದಿಂದ ವಿಸ್ಮಯ ಹುಟ್ಟಿಸುವ ಪದ್ಯ ರಚನೆ. ಭಾವಕ್ಕಿಂತ ಬೆರಗಿಗೇ ಹೆಚ್ಚು ಒತ್ತು. ಸ್ವತಃ ಚಿತ್ರಕಾವ್ಯ ರಚನೆಯ ಪ್ರಗಲ್ಭಪಾಂಡಿತ್ಯವುಳ್ಳ ಶತಾವಧಾನಿ ಗಣೇಶ್ ಒಂದು ಒಳ್ಳೆಯ ಹೋಲಿಕೆ ಕೊಡುತ್ತಾರೆ- ಕಾವ್ಯವೆಂಬುದು ಭರತನಾಟ್ಯ ಅಂತಂದುಕೊಂಡರೆ ಚಿತ್ರಕಾವ್ಯವೆಂದರೆ ಸರ್ಕಸ್ ಇದ್ದಂತೆ! ಅಂದಮಾತ್ರಕ್ಕೆ ಲಘುವಾಗಿ ಪರಿಗಣಿಸಲಾಗದು. ಚಿತ್ರಕಾವ್ಯ ರಚನೆಗೂ ವಿದ್ವತ್ತು ಬೇಕು, ಪರಿಶ್ರಮ ಬೇಕು. ವ್ಯಾಕರಣ, ಛಂದಸ್ಸು, ಅರ್ಥ, ಅಲಂಕಾರ ಎಲ್ಲದರಲ್ಲಿ ಪರಿಣತಿಯೂ ಬೇಕು. ಆಯ್ತು, ಒಣವಿವರಣೆಗಿಂತ ಚಿತ್ರಕಾವ್ಯದ ಕೆಲವು ಪ್ರಾತಿನಿಧಿಕ ಉದಾಹರಣೆಗಳಿಂದಲೇ ತಿಳಿದುಕೊಳ್ಳೋಣವಂತೆ. ಮೊದಲಿಗೆ ವರ್ಣಚಿತ್ರ ಎಂಬ ಪ್ರಕಾರ. ನಿರ್ದಿಷ್ಟ ಸಂಖ್ಯೆಯ ವ್ಯಂಜನಾಕ್ಷರಗಳನ್ನಷ್ಟೇ ಬಳಸಿ ಪದ್ಯರಚನೆ. ‘ಆಚಣ್ಣಕವಿ’ ಎಂಬುವನು ಬರೆದ ವರ್ಧಮಾನಪುರಾಣ ಕಾವ್ಯದ ಈ ಪದ್ಯದ ಹಾಗೆ- ಕಲಿ ಕೊಂಕಲ್ಕೇಕಕ್ಕುಂ ಕೆಲಕ್ಕೆ ಕೋಲಿಕ್ಕೆ ಲಕ್ಕೆ ಲೆಕ್ಕಕ್ಕೆಲ್ಲಂ ಕಲಿ ಕೋಲಲೆ ಕಲಲ್ಕಕ್ಕುಂ ಕುಲಕಕ್ಕುಂ ಕಲಿ ಕಲಂಕಿ ಕೊಂಕೆ ಕಲಂಕಂ. ಇದರಲ್ಲಿ ಕ ಮತ್ತು ಲ ಎರಡೇ ವ್ಯಂಜನಗಳಿರುವುದು. ಪದ್ಯದ ಅರ್ಥ, “ಶೂರನಾದವನು ಏತಕ್ಕೆ ಹಿಂಜರಿಯಬೇಕು? ಶತ್ರುಗಳು ಪಕ್ಕಕ್ಕೆ ಬಾಣವನ್ನು ಬಿಸಾಡುವ ಹಾಗೆ ಲಕ್ಷಗಳ ಲೆಕ್ಕದಲ್ಲಿ ಸಮಸ್ತರನ್ನು ಕೊಲ್ಲುವುದಕ್ಕೆ ಕಲಿಯಬೇಕು. ಚಪಲಚಿತ್ತನಾಗಿ ಹಿಂಜರಿದರೆ ಕುಲಕ್ಕೆ ಕಳಂಕ ಉಂಟಾಗುವುದು” ಎಂದು. ಅಯ್ಯೋ ಇದು ಹಳಗನ್ನಡ, ಸಂಸ್ಕೃತಕ್ಕಿಂತಲೂ ಕಠಿಣ ಅಂತೀರಾ? ಗಾಬರಿಯಾಗಬೇಡಿ. ಮುಂದೆ ಕೆಲವು ಗಮ್ಮತ್ತಿನ ಪದ್ಯಗಳಿವೆ. ಹದಿನೇಳನೇ ಶತಮಾನದಲ್ಲಿ ಬಾಳಿದ್ದ ಎಳಂದೂರು ಹರೀಶ್ವರ ಕವಿಯ ‘ಪ್ರಭುದೇವರ ಪುರಾಣ’ದಲ್ಲಿನ ಈ ಪದ್ಯ ನೋಡಿ. ಪರಿವರ್ಧಿನೀ ಷಟ್ಪದಿ ಛಂದಸ್ಸಿನಲ್ಲಿದೆ. ಬಲ್ಲಿದ ಬಾಣನ ಬಾಗಿಲ ಕಾಯ್ವಡೆ ಬಿಲ್ಲಿಂ ಪೊಯ್ಯಲು ಬೀಗುವರೇ ಮಹ ಬುಲ್ಲಣೆಯಿಂದ ಬೂದಿಯ ಪೂಸುತ ಬೇಡುವರೇ ಮಗನಂ ನಿಲ್ಲದೆ ಬೈವರೆ ನಂಬಿಯ ವನದೊಳು ಸಲ್ವುದೆ ಬೋಗಣ್ಣನ ಪಿಂಪೋಪುದು ಮಲ್ಲಂಬೌದ್ಧನ ಬಂನಂಬಡಿಪುದು ಕಲ್ವರೆ ಬಃಸದನಾ (ಅರ್ಥ- ಬಲಶಾಲಿ ಬಾಣಾಸುರನ ಬಾಗಿಲನ್ನು ಕಾದುಕೊಂಡಿದ್ದು, ಅರ್ಜುನನು ಬಿಲ್ಲಿನಿಂದ ಹೊಡೆಯಲು ಸಂತೋಷಪಟ್ಟು, ಅತಿಶಯ ಸಡಗರದಿಂದ ವಿಭೂತಿ ಧರಿಸುತ್ತ ಸಿರಿಯಾಳನ ಮಗನನ್ನು ಬೇಡಿ, ವನದಲ್ಲಿ ನಂಬಿಯಣ್ಣನನ್ನು ಸಹಿಸದೆ ಬೈದು, ಕೆಂಭಾವಿ ಭೋಗಣ್ಣನ ಹಿಂದೆ ನಡೆಯುವುದು ಸಲ್ಲುತ್ತದೆಯೇ? ಕೊಬ್ಬಿದ ಬೌದ್ಧನ ಭಂಗಪಡಿಸುವುದನ್ನು ಕಲಿಯುವರೆ ಮೇರುಪರ್ವತವಾಸಿಯೇ ದೇವನೇ ನಿನಗೆ ಜಯವಾಗಲಿ). ಈ ಪದ್ಯದಲ್ಲಿ ಕವಿ ಬ, ಬಾ, ಬಿ, ಬೀ ಕಾಗುಣಿತದಿಂದ ಚಮತ್ಕಾರ ಮಾಡಿದ್ದಾನೆ. ಇನ್ನೊಂದು, ಪದ್ಮಣಾಂಕ ಎಂಬ ಕವಿಯ ಪದ್ಮರಾಜಪುರಾಣದಲ್ಲಿನ ಈ ಪದ್ಯ. ಇದರಲ್ಲಿ ಕಾಗುಣಿತಾಕ್ಷರಗಳೇ ಇಲ್ಲ! ಘನರಸಶಯನತನಯ ಮದಮಥನ ಧವಳಘನ ಘನವರದ ಶತದಳನಯನ ನಯನಪದಕಮಳ ವನದಗಮನಧವ ಶತದಳವರತಪನದ ದಹನ ನಯನಪರತರ ಗದಧರ ಸನಕನತ ಸಮದಶಯನ ಶಮನಶಮನ ಭವರ ಮನಭಯ ಶಮನ ಗರಳಧರ ಗರಳಧರ ಪರಗ ಮನತನಯ ಶಶಧರಧರ ಧರವರಭವನ ಕನದನಘ ಭವಹರಪರಮವ (ಅರ್ಥ- ಸಮುದ್ರಶಯನನಾದ ವಿಷ್ಣುವಿನ ಮಗ ಮನ್ಮಥನ ಗರ್ವಭಂಗ ಮಾಡಿದವ, ಬೆಳ್ಳಗಿನ ಮೈಯವ, ಶ್ರೇಷ್ಠ ವರಗಳನ್ನು ನೀಡುವವ, ವಿಷ್ಣುವಿನ ಕಣ್ಣಿನಿಂದ ಅರ್ಚಿಸಲ್ಪಟ್ಟ ಪಾದಪದ್ಮವುಳ್ಳವ, ಚಂದ್ರ ಸೂರ್ಯ ಮತ್ತು ಅಗ್ನಿಗಳನ್ನೇ ಕಣ್ಣಾಗಿ ಉಳ್ಳವ, ಶ್ರೇಷ್ಠ, ರೋಗನಿವಾರಕ, ಸನಕನಿಂದ ನಮಸ್ಕೃತನಾದವ, ಯಮನನ್ನು ನಿಗ್ರಹಿಸಿದವ, ಜನ್ಮ ಹಿಂಗಿಸಿದವ, ಭಯ ಹೋಗಲಾಡಿಸಿದವ, ವಿಷಕಂಠ, ಚಂದ್ರಶೇಖರ, ಕೈಲಾಸವಾಸಿ, ಪಾಪರಹಿತ, ಭವನೆಂದೂ ಹರನೆಂದೂ ಕೀರ್ತಿತ ಈಶ್ವರ). ಇದೇರೀತಿ ನಾನೂ ಒಂದು ರಚಿಸಿದ್ದೇನೆ- ದಶರಥನ ಮಗ ಭರತನ ನವರಸದ ಸರಳ ಕವನ ಬರಹದ ಸಡಗರ ಅನವರತ; ಅವನ ಸತತ ತಪಸದ ಪರಮಫಲ. ಭರತನ poetic skills ಬಗ್ಗೆ ಯಾವ ರಾಮಾಯಣದಲ್ಲೂ ಉಲ್ಲೇಖಿಸಿಲ್ಲವಲ್ಲ ಎನ್ನಬೇಡಿ ಮತ್ತೆ! :-) ಪ್ಯಾಲಿಂಡ್ರೊಮ್ (ಸಂಸ್ಕೃತದಲ್ಲಿ ಗತಪ್ರತ್ಯಾಗತ) ಅಂತ ಕೇಳಿರಬಹುದು ನೀವು. ಎಡದಿಂದ ಬಲಕ್ಕೆ ಬಲದಿಂದ ಎಡಕ್ಕೆ ಓದಬಹುದಾದ್ದು. ಅಂಥ ಪದಗಳು ಕನ್ನಡದಲ್ಲಿ ಬೇಕಷ್ಟಿವೆ. ಆದರೆ ಒಂದು ಇಡೀ ಪದ್ಯವೇ ಪ್ಯಾಲಿಂಡ್ರೊಮ್ ಆಗಿರುವಂಥದೂ ಇದೆ! ಇದನ್ನು ನನಗೆ ಪ್ರೊ.ಕೃಷ್ಣೇಗೌಡರು (ನಗುಮೊಗದವರು, ನಗುವನ್ನು ಮೊಗೆಮೊಗೆದು ಕೊಡುವವರು) ಹಿಂದೊಮ್ಮೆ ಹೇಳಿದ್ದರು, ಕನ್ನಡದಲ್ಲಿ ಪ್ಯಾಲಿಂಡ್ರೊಮ್ಗಳ ಬಗ್ಗೆ ಹೀಗೇ ನಾವಿಬ್ಬರು ವಿಚಾರವಿನಿಮಯಿಸುತ್ತಿದ್ದಾಗ. ಆಚಣ್ಣಕವಿ ವರ್ಧಮಾನಪುರಾಣದಲ್ಲಿ ಬರೆದ ಈ ಪದ್ಯ ಒಂದು ಗತಪ್ರತ್ಯಾಗತ. ಕುಂದಿನಿಂದೆಚ್ಚನದು ಬಂ ಟಂದ ಮಲ್ಲದೆ ನಿಂದುದೆಂ ದೆಂದುನಿಂದೆಲ್ಲ ಮದಟಂ ಬಂದು ನಚ್ಚದೆ ನಿಂದಿಕುಂ (ಅರ್ಥ- ಕೊರತೆಯಿರುವಂತೆ ಬಾಣಪ್ರಯೋಗ ಮಾಡಿದನು, ಅದು ಶೌರ್ಯದ ರೀತಿಯಲ್ಲದೆ ಹೋಯಿತು ಎಂದೆಲ್ಲ ಹೇಳುತ್ತ ಎಲ್ಲರೂ ಬಂದು ಶೌರ್ಯದ ಬಗ್ಗೆ ಭರವಸೆಯಿಲ್ಲದೆ ನಿಂದಿಸುತ್ತಾರೆ). ಇಂಥವನ್ನು ‘ಗತಿಚಿತ್ರ’ ಎನ್ನುತ್ತಾರೆ. ಈ ಪ್ರಕಾರದಲ್ಲೇ ಗೋಮೂತ್ರಿಕ ಶೈಲಿ ಕೂಡ. ಆಕಳು ಮೂತ್ರವಿಸರ್ಜಿಸುತ್ತ ನಡೆದಾಗ ಮರಳಿನ ಮೇಲೆ ಅದು ಜಿಗ್ಜಾಗ್ ಪ್ಯಾಟರ್ನ್ ಉಂಟುಮಾಡುತ್ತದಲ್ಲ, ಹಾಗೆ ಪದ್ಯದ ಸಾಲುಗಳನ್ನು ಒಂದರ ಕೆಳಗೊಂದು ಬರೆದು ಎರಡೂ ಸಾಲುಗಳಿಂದ ಪರ್ಯಾಯಕ್ರಮದಲ್ಲಿ ಅಕ್ಷರಗಳನ್ನೋದುತ್ತ ಹೋಗಬೇಕು. “ಜಲದಾಗಮದಿಂ ಚಿತ್ತಸ್ಖಲಿತಂ ಕೇಕಿನರ್ತನಂ” ಎಂಬ ಮೊದಲ ಸಾಲು, “ಜಲದಾಗಮದಿಂ ಚಿತ್ತಸ್ಖಲಿತಂ ಕೇಳನಲ್ಲನಂ” ಎಂಬ ಎರಡನೇ ಸಾಲನ್ನು ಹಾಗೆ ಬರೆದು ಓದಿನೋಡಿ.
ಕವಿರಾಜಮಾರ್ಗ ಗ್ರಂಥದಲ್ಲಿ ಪ್ರಸ್ತಾಪಿತ ಈ ಪದ್ಯದ ಅರ್ಥ “ಮಳೆಗಾಲದಿಂದಾಗಿ ಮನ ಹುಚ್ಚೆದ್ದಿದೆ. ನವಿಲಿನಂತೆ ಕುಣಿಯುತ್ತಿದೆ. ಮಳೆಗಾಲದಿಂದ ನನಗೆ ಚಿತ್ತಚಾಂಚಲ್ಯ ಉಂಟಾಗುತ್ತಿದೆ. ಆದ್ದರಿಂದ ನಲ್ಲನನ್ನು ವಿಚಾರಿಸಬೇಕು” ಎಂದು. ಆಷಾಢಮಾಸದಲ್ಲಿ ತವರಿಗೆ ಹೋಗಿರುವ ಹೆಣ್ಣಿಗೆ ಹೀಗೆ ಅನಿಸಿರಬಹುದೇ?
ಭಾಷಾಚಿತ್ರ ಅಂತ ಇನ್ನೊಂದು ಪ್ರಕಾರ. ಎರಡು ಅಥವಾ ಹೆಚ್ಚು ಭಾಷೆಗಳಿಂದ ರಚಿತ ಪದ್ಯ. ಅಜಿತಸೇನನ ‘ಅಲಂಕಾರ ಚಿಂತಾಮಣಿ’ಯಲ್ಲಿ ಬರುವ ಈ ಸಂಸ್ಕೃತ-ಕನ್ನಡ ಹೈಬ್ರಿಡ್ ಪದ್ಯ ಒಳ್ಳೆಯ ಉದಾಹರಣೆ.
ಜಹಾತಿ ಕೀದೃಶೀ ಕಾಂತಂ ವಧೂಃ ಸಂಬುಧ್ಯತಾಂ ರಿಪುಃ|
ಏನೆಂದು ಕರೆವಂ ನಾಥಂ ಕಾಂತೆಯಂ ಸಂಬುಭುಕ್ಷೆಯಂ||
ಸಂಸ್ಕೃತದಲ್ಲಿರುವ ಮೊದಲ ಸಾಲಿನ ಅರ್ಥ “ಶತ್ರುವಿಗೆ ತಿಳಿಸುವುದಾಗಲಿ. ಎಂತಹ ವಧು ಕಾಂತನನ್ನು ತೊರೆಯುವಳು?” ಎಂದು. ಎರಡನೇ ಸಾಲು ಕನ್ನಡದಲ್ಲಿದೆ. ಅರ್ಥ, “ಪತಿ ಪತ್ನಿಯನ್ನು ಬಾಯಾರಿಕೆಯಿಂದಾಗಿ ಏನೆಂದು ಕೂಗುತ್ತಾನೆ?” ಎರಡೂ ಪ್ರಶ್ನೆಗಳಿಗೆ ಒಂದೇ ಉತ್ತರ ‘ನೀರತಾರೇ’! ಹೇಗೆ? ನೀರತಾರೇ ಎಂಬ ಪದವನ್ನು ಸಂಸ್ಕೃತದಲ್ಲಿ ನೀರತಾ+ಅರೇ ಎಂದು ಒಡೆಯಬಹುದು. ನೀರತಾ (ರತಾನ್ನಿಷ್ಕ್ರಾಂತಾ ಇತಿ ನೀರತಾ) ಎಂದರೆ ರತಿಕ್ರೀಡೆ ಮುಗಿಸಿದವಳು ಅಥವಾ ಪ್ರೀತಿಇಲ್ಲದವಳು ಎಂದರ್ಥ. ಅರೇ ಎನ್ನುವುದು ಸಂಬೋಧನೆ (‘ಎಲೈ’, ಅಥವಾ ‘ಹೇ’ ಇದ್ದಂತೆ). ಕನ್ನಡದಲ್ಲಿ ‘ನೀರತಾರೇ’ ಎಂದರೆ ನೀರು ತೆಗೆದುಕೊಂಡು ಬಾರೇ ಎಂದರ್ಥ. ಇಂಥವನ್ನು ನಾವೂ ರಚಿಸಬಹುದು.
Why didn't you go to school today?
ಅನ್ನವಾಯಿತು ಒಲೆಯ ಮೇಲೆ ಇನ್ನೇನಿಡಲಿ?
ಉತ್ತರ: ‘ಹಾಲಿಡೇ’!
ಈರೀತಿ ಒಗಟು, ಪ್ರಶ್ನೋತ್ತರ ಅಥವಾ ಸಮಸ್ಯಾಪೂರಣ ಚಾತುರ್ಯದ ಪದ್ಯಗಳು ಬೇಕಾದಷ್ಟಿವೆ. “ದನಮಂ ಕೊಯ್ಕೊಯ್ದು ಬಸದಿಗೊಯ್ಯುತ್ತಿರ್ಪರ್” - ಎಂಥ ಆಭಾಸ! ಗೋಹತ್ಯೆಗೈದು ಜಿನಬಸದಿಗೆ ಒಯ್ಯುತ್ತಿದ್ದಾರಂತೆ! ಶಾಂತಂಪಾಪಂ. ಹಾಗಲ್ಲ, ಪದ್ಯದ ಪೂರ್ಣರೂಪ ಇದು:
ವನದೊಳಗೆ ಪುಟ್ಟ ಕಂಪಿನ
ತನಿರಸಮಂ ಪತ್ತು ದೆಸೆಗೆ ಬೀರುತ್ತಿರುವಾ
ಘನತರ ಸುರುಚಿರ ಸಚ್ಚಂ
ದನಮಂ ಕೊಯ್ಕೊಯ್ದು ಬಸದಿಗೊಯ್ಯುತ್ತಿರ್ಪರ್
ಶ್ರೀಗಂಧ(ಚಂದನ)ದ ಕೊರಡುಗಳನ್ನು ಬಸದಿಗೆ ಒಯ್ಯುತ್ತಿರುವುದು! ಇದು, ಕಂತಿ ಎಂಬ ಕವಯಿತ್ರಿ ಮತ್ತು ಹಂಪನೆಂಬ ಕವಿಯ ಮಧ್ಯೆ ನಡೆದ ವಾಗ್ವಾದಸರಣಿಯಲ್ಲಿ ಬರುತ್ತದೆ.
ಗೂಢಚಿತ್ರ ಎಂಬ ಪ್ರಕಾರವನ್ನು ವಿವರಿಸುತ್ತ ಶಾಸ್ತ್ರಿಗಳು ಕೊಟ್ಟಿರುವ ಉದಾಹರಣೆ ಚೆನ್ನಾಗಿದೆ. ನಾಲ್ವಡಿ ಕೃಷ್ಣರಾಜ ಒಡೆಯರ ಪಟ್ಟಾಭಿಷೇಕದ ರಜತೋತ್ಸವ ಸಂದರ್ಭದಲ್ಲಿ ಗೌರಿಬಿದನೂರಿನ ಒಬ್ಬ ಕವಿಯ ರಚನೆ. ಕುಸುಮ ಷಟ್ಪದಿ ಛಂದಸ್ಸಿನಲ್ಲಿರುವ ಪದ್ಯಗಳ ಮೊದಲಕ್ಷರಗಳನ್ನು ಜೋಡಿಸುತ್ತ ಹೋದರೆ ‘ಶ್ರೀ ಗೋರೀಬೀದನೂರ ಪರಸ್ಪರ ಸಹಾಯ ಸಂಘದಾ ರಾಜಭಕುತಿ ಇದು’ ಎಂಬ ವಾಕ್ಯವಾಗುತ್ತದೆ! ರಾಜಭಕ್ತಿಯದೇ ಇನ್ನೊಂದು ಪದ್ಯ, ಶ್ರೀಲಿಂಗರಾಜಕವಿಯ ‘ನರಪತಿಚರಿತ’ ಕಾವ್ಯದ್ದು-
ಧನ್ಯಶ್ರೀಕರಚಿತ್ತನೇ ಕವಿಸಭಾಶಕ್ರದ್ರುವೇ ರಾತ್ರಿರಾ
ಜನ್ಯಾಲಿಂಗನತರ್ಷಿಕೀರ್ತಿವಿಶದ ಶ್ರೀಬಂಧುತೇಜಸ್ವಿಯೇ
ಜನ್ಯಾಗರ್ಹಿತಚರ್ಯಕೃಷ್ಣ ವಿಭುವೇಕ್ಷ್ಮಾಧರ್ಮಮಂ ರಕ್ಷಿಸೈ
ಸೈನ್ಯಾಗಾಧವಿರಾಜಮಾನ ಜನರಂ ರಾಗಾಬ್ಧಿಯೇ ಮನ್ನಿಸೈ.
ಇದನ್ನು ಚಿತ್ರದಲ್ಲಿರುವಂತೆ ‘ಚಕ್ರಬಂಧ’ದ ರೀತಿಯಲ್ಲಿ ಓದಬಹುದು. ಮೊದಲ ಮೂರು ಸಾಲುಗಳು ಚಕ್ರದ ಆರು ಅರ(spoke)ಗಳಾಗುತ್ತವೆ. ಕೊನೆಯ ಸಾಲು ಚಕ್ರದ ಪರಿಧಿಯಲ್ಲಿ ಪ್ರದಕ್ಷಿಣಾಕಾರ ಸಾಗುತ್ತದೆ. ಚಕ್ರದೊಳಗಿನಚಕ್ರದ ಸಂರಚನೆಯಲ್ಲಿ ‘ಶ್ರೀಲಿಂಗರಾಜರಚಿತ ಚಕ್ರಬಂಧ’ ಎಂದು ಕವಿಯ ನಾಮಾಂಕಿತ ಕಾಣಿಸಿಕೊಳ್ಳುತ್ತದೆ. ವ್ಹಾರೆವಾಹ್! ಸಂಸ್ಕೃತಕವಿಗಳಿಗೆ ಯಾವ ರೀತಿಯಲ್ಲೂ ಕಮ್ಮಿಯಿಲ್ಲದಂತೆ ಮೆರೆದಿದ್ದಾರೆ ಕನ್ನಡದ ಕವಿಗಳು! ಅದನ್ನು ಅಷ್ಟೇ ಚಂದವಾಗಿ ಸಂಗ್ರಹಿಸಿಟ್ಟಿದ್ದಾರೆ ವೆಂಕಟಾಚಲ ಶಾಸ್ತ್ರಿಗಳು. ಸಂದರ್ಭ ಸಿಕ್ಕರೆ ನೀವೂ ಆ ಪುಸ್ತಕದ ಮೇಲೊಮ್ಮೆ ಕಣ್ಣಾಡಿಸಬೇಕು. ಇಲ್ಲವಾದರೂ, ‘ಉದಯವಾಣಿ’ ಪತ್ರಿಕೆಯಲ್ಲಿ ಭಾನುವಾರದ ಸಾಪ್ತಾಹಿಕ ಸಂಪದದಲ್ಲಿ ಆರ್.ಗಣೇಶ್ ಬರೆಯುವ ‘ಚಮತ್ಕಾರ ಕವಿತ್ವ’ ಅಂಕಣವನ್ನು ಓದಬೇಕು.
========
ಈ ಲೇಖನವನ್ನು ವಿಜಯ ಕರ್ನಾಟಕ ಇ-ಪೇಪರ್ನಲ್ಲಿ ನೀವು ಇಲ್ಲಿ ಓದಬಹುದು.
"Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!
Saturday Dec 11, 2010
Clothes Washing Ton
Saturday Dec 11, 2010
Saturday Dec 11, 2010
ದಿನಾಂಕ 12 ಡಿಸೆಂಬರ್ 2010ರ ಸಂಚಿಕೆಯಲ್ಲಿ...
ಬಟ್ಟೆ ಒಗೆಯುವುದರಲ್ಲೂ ಕಂಡಾಬಟ್ಟೆ ಸೊಬಗಿದೆ!
ಅಗಸ. ನಿಸ್ಸಂದೇಹವಾಗಿ ಒಬ್ಬ ಫಸ್ಟ್ ಕ್ಲಾಸ್ ಸಿಟಿಜನ್. ಪ್ರಥಮ ದರ್ಜೆಯ ಪ್ರಜೆ. ಯಾಕ್ಹೇಳಿ? ಒಂದನೇ ತರಗತಿಯಲ್ಲಿ ಕನ್ನಡಭಾರತಿ ಪಠ್ಯಪುಸ್ತಕದಲ್ಲಿ ಮೊಟ್ಟಮೊದಲ ಪದವಾಗಿ, ಮೊದಲ ಪಾಠವಾಗಿ, ನಮಗೆ ಪರಿಚಯವಾದವನೇ ಅಗಸ! ಆಮೇಲೆ ನೀತಿಕಥೆಗಳಲ್ಲೂ, ಗಾದೆಮಾತುಗಳಲ್ಲೂ ಆಗಾಗ್ಗೆ ಭೇಟಿಯಾಗುತ್ತಿದ್ದವನು. ಸಮಾಜದ ಕೊಳೆ ತೊಳೆಯುವ ಅನುಭಾವಿ ಸಂತನಲ್ಲದಿದ್ದರೂ ಸಮಾಜದ ಜನರು ಉಡುವ ಬಟ್ಟೆಬರೆಗಳ ಕೊಳೆ ತೊಳೆದು ಒಳ್ಳೆಯ ಕೆಲಸ ಮಾಡಿದವನು, ಮಾಡುತ್ತಿರುವವನು. ಪ್ರಾಚೀನ ಭಾರತದಲ್ಲಿ ಅಗಸನನ್ನು (ಮತ್ತು ಬಡಗಿ, ನೇಕಾರ, ಕ್ಷೌರಿಕ, ಚಮ್ಮಾರ- ಈ ನಾಲ್ಕು ಕಸಬುದಾರರನ್ನೂ) ಕೆಲಸಗಾರ ವರ್ಗದಲ್ಲೇ ಶ್ರೇಷ್ಠ, ಗೌರವಾನ್ವಿತ ಎಂದು ಪರಿಗಣಿಸಲಾಗುತ್ತಿತ್ತು. ಅಗಸ ಮಾಡುವ ಕೆಲಸ ಪವಿತ್ರವಾದುದು, ಪರಿಶುದ್ಧವಾದುದು ಎಂಬ ಸದ್ಭಾವನೆಯಿತ್ತು. ಹಾಗೆಂದು ಹೇಳುತ್ತವೆ ಮನುಸ್ಮೃತಿ, ಯಾಜ್ಞವಲ್ಕ್ಯಸ್ಮೃತಿ ಮುಂತಾದ ಉದ್ಗ್ರಂಥಗಳು. ಆದ್ದರಿಂದಲೇ ಇರಬೇಕು, ಮರ್ಯಾದಾ ಪುರುಶೋತ್ತಮನಾದ ಶ್ರೀರಾಮಚಂದ್ರನೂ ಒಬ್ಬ ಸಾಮಾನ್ಯ ಪ್ರಜೆಯಾಗಿದ್ದ ಅಗಸನನ್ನು ಯಃಕಶ್ಚಿತ್ ಎಂದು ಅಲಕ್ಷಿಸದೆ ಅವನ ಮಾತಿಗೆ ಬೆಲೆ ಕೊಟ್ಟನು; ರಾಮಾಯಣವು ಉತ್ತರಕಾಂಡವಾಗಿ ಬೆಳೆಯುವುದಕ್ಕೆ ಆ ಅಗಸನೇ ಪರೋಕ್ಷ ಕಾರಣನಾದನು.
ಅಗಸನ ಕುರಿತಾಗಿಯೇ ಈ ಹರಟೆಯನ್ನು ಮುಂದುವರಿಸುವುದಾಗಿದ್ದರೆ- ತಮಾಷೆಗೋಸ್ಕರ ಅಮೆರಿಕದ ಊರುಗಳ ಹೆಸರುಗಳನ್ನು ಕನ್ನಡೀಕರಿಸಿದಾಗ ಕನೆಕ್ಟಿಕಟ್ ಕನಕನಕಟ್ಟೆ ಆಗುತ್ತದೆಂದೂ, ನಮ್ಮ ‘ವಾಷಿಂಗ್’ಟನ್ ಅಗಸನಕಟ್ಟೆ ಆಗುತ್ತದೆಂದೂ ಬರೆಯಬಹುದಿತ್ತು; ಅಗಸನ ಕಟ್ಟೆಯೋ ಅಗಸನ ಕತ್ತೆಯೋ ಎನ್ನುತ್ತ ಅಗಸ ಮತ್ತು ಅವನ ಕತ್ತೆಯ ಕುರಿತ ಬಗೆಬಗೆಯ ಕಥೆಗಳನ್ನು ಇಲ್ಲಿ ಸೇರಿಸಬಹುದಿತ್ತು; ಕಾರ್ನಾಡರ ತುಘಲಕ್ ನಾಟಕದ ಅಗಸನ ಚಾಣಾಕ್ಷತನವನ್ನು ಕೊಂಡಾಡಬಹುದಿತ್ತು. ‘ಹೊಸದರಲ್ಲಿ ಅಗಸ ಗೋಣಿಯನ್ನೂ ಎತ್ತಿಎತ್ತಿ ಒಗೆದಿದ್ದ...’ ಎನ್ನುವ ಗಾದೆಯನ್ನು ಸೋದಾಹರಣವಾಗಿ ವಿಶ್ಲೇಷಿಸಬಹುದಿತ್ತು; ‘ಊರ ಸೀರೆಗೆ ಅಗಸ ತಡಬಡಗೊಂಬಂತೆ...’ ಎಂಬ ಅಕ್ಕಮಹಾದೇವಿಯ ವಚನದ ವ್ಯಾಖ್ಯಾನವನ್ನು ಮಾಡಬಹುದಿತ್ತು. ಮತ್ತೂ ಸ್ವಲ್ಪ ಅಧ್ಯಾತ್ಮದ ಟಚ್ ಬೇಕಿದ್ದರೆ ‘ಗುರ ಧೋಬೀ ಸಿಖ ಕಪ್ಡಾ ಸಾಬೂ ಸಿರಜನ ಹಾರ್/ ಸುರತಿ ಸಿಲಾ ಪರ್ ಧೋಇಯೇ ನಿಕಸೆ ಜ್ಯೋತಿ ಅಪಾರ್’ ಎಂದು ಕಬೀರನ ಒಂದು ದೋಹಾವನ್ನೂ ಉಲ್ಲೇಖಿಸಿ “ಗುರು ಎಂದರೆ ಒಬ್ಬ ಅಗಸನಿದ್ದಂತೆ, ಶಿಷ್ಯ ಬಟ್ಟೆ ಇದ್ದಂತೆ. ದೈವಸ್ತುತಿಯೇ ಸಾಬೂನು. ಅಚಲವಾದ ಮನಸ್ಸೆಂಬ ಕಲ್ಲಿನ ಮೇಲೆ ಒಗೆದಾಗ ಅಂತರಂಗವೆಲ್ಲ ಶುದ್ಧಿಗೊಂಡು ಸತ್ಯಾರ್ಥ ಜ್ಯೋತಿಯಾಗಿ ಫಳಫಳನೆ ಪ್ರಕಾಶಿಸುತ್ತದೆ” ಎಂದು ತತ್ತ್ವಜ್ಞಾನ ಉಪದೇಶದ ಧಾಟಿಯಲ್ಲಿ ವಿವರಿಸಬಹುದಾಗಿತ್ತು. ಕೆಲ ವರ್ಷಗಳ ಹಿಂದೆ ಇಲ್ಲಿ ಅಮೆರಿಕದಲ್ಲಿ ಸುದ್ದಿಯಾದ, ಸಾಮಾನ್ಯ ಪ್ರಜೆಯಾಗಿದ್ದೂ ಮಾನವೀಯತೆ ಮೆರೆದು ಪ್ರಖ್ಯಾತಳಾದ ಅಗಸಿ (ಟೆನ್ನಿಸ್ ಆಟಗಾರ ಆಂಡ್ರೆ ಅಗಾಸಿ ಅಲ್ಲ; ವೃತ್ತಿಸೂಚಕ ಶಬ್ದಕ್ಕೆ ಪುಲ್ಲಿಂಗ ಸ್ತ್ರೀಲಿಂಗ ಭೇದವಿಲ್ಲವಾದರೂ ಅಗಸ ಎಂಬ ಪದದ ಸ್ತ್ರೀಲಿಂಗ ‘ಅಗಸಿ’ ಎಂದು ನಾನೇ ಕಲ್ಪಿಸಿದ್ದು) ಓಸಿಯೋಲಾ ಮೆಕ್ಕಾರ್ಟಿ ಎಂಬವಳ ಜೀವನಗಾಥೆಯನ್ನು ಬಣ್ಣಿಸಬಹುದಿತ್ತು. ಈಕೆ ಬದುಕಿನುದ್ದಕ್ಕೂ ಬಟ್ಟೆ ತೊಳೆದು ಇಸ್ತ್ರಿ ಹಾಕಿ ಸಂಪಾದನೆ ಮಾಡಿದ ದುಡ್ಡನ್ನೆಲ್ಲ ಮಿಸ್ಸಿಸ್ಸಿಪ್ಪಿ ವಿಶ್ವವಿದ್ಯಾಲಯದ ಅರ್ಹ ಬಡ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ನಿಧಿಯಾಗಿಟ್ಟು ಮರಣಪತ್ರ ಬರೆದುಕೊಟ್ಟವಳು. ಅಂಥದೊಂದು ಅನನ್ಯ ಔದಾರ್ಯಕ್ಕಾಗಿ ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದದ್ದಷ್ಟೇ ಅಲ್ಲದೆ ವಿಶ್ವಸಂಸ್ಥೆಯಿಂದಲೂ ಸನ್ಮಾನಗೊಂಡವಳು.
ಆದರೆ, ಇವತ್ತು ನಾನು ಬರೆಯಬೇಕೆಂದಿರುವುದು ಅಗಸನ ಬಗ್ಗೆಯಲ್ಲ. ಅಗಸನ ಕೆಲಸವಾದ ಬಟ್ಟೆ ಒಗೆಯುವುದರ ಬಗ್ಗೆ. ಅಗಸನಂತೆಯೇ ನಾವೂ ನೀವೂ ಬಟ್ಟೆ ಒಗೆಯುತ್ತೇವಲ್ಲ, ಅದರ ಬಗ್ಗೆ. ನನಗೆ ಗೊತ್ತು, ಬಟ್ಟೆ ಒಗೆಯುವುದೆಂದರೇನೇ ಮಹಾ ಬೋರು; ಅಂಥಾದ್ರಲ್ಲಿ ಅದರ ಮೇಲೆ ಲೇಖನ ಬೇರೆ ಓದಬೇಕಾ ಎಂದುಕೊಳ್ಳುವವರೂ ಇರುತ್ತಾರೆ. ಅಂಥವರಿಗೋಸ್ಕರ ಮೊದಲಿಗೆ ‘ಪುಷ್ಪಕ ವಿಮಾನ’ ಮೂಕಚಿತ್ರದಲ್ಲಿ ಕಮಲಹಾಸನ್ ತನ್ನ ಶರ್ಟ್ ಒಗೆದುಕೊಳ್ಳುತ್ತಿದ್ದ ಪರಿಯನ್ನು ನೆನಪಿಸಿಕೊಳ್ಳೋಣ. ಆ ದೃಶ್ಯ ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ಹ್ಯಾಂಗರ್ಗೆ ನೇತಾಡಿಸಿಟ್ಟ ಶರ್ಟ್. ಅದು ನೀರು ಕಂಡು ಎಷ್ಟು ದಿನಗಳಾಗಿತ್ತೋ. ಕಮಲಹಾಸನ್ ಕೈಯಲ್ಲಿ ಒಂದು ಮಗ್. ಅದರಲ್ಲಿ ಸಾಬೂನಿನ ನೊರೆ ನೀರು. ಒಂದು ಹನಿಯೂ ವೇಸ್ಟ್ ಆಗದಂತೆ ಸ್ವಲ್ಪಸ್ವಲ್ಪವೇ ನೀರನ್ನು ತೆಗೆದುಕೊಂಡು ಶರ್ಟಿನ ಕಂಕುಳದ ಭಾಗಗಳಿಗಷ್ಟೇ ಲೇಪನ. ಬೆವರಿನಿಂದಾದ ಕೊಳೆ ಹಂತಹಂತವಾಗಿ ಹೋಗತೊಡಗಿದಾಗ ಮುಖದಲ್ಲಿ ಸಂತೋಷ ಪ್ರಕಟ. ವಾಹ್ ಕ್ಯಾ ಸೀನ್ ಹೈ! ಕಮಲಹಾಸನ್ ಬಿಟ್ಟರೆ ಬೇರಾರಿಗೂ ಅದನ್ನು ಅಷ್ಟು ನ್ಯಾಚುರಲ್ ಆಗಿ, ಪರಿಣಾಮಕಾರಿಯಾಗಿ ಅಭಿನಯಿಸಲಿಕ್ಕೆ ಸಾಧ್ಯವಿಲ್ಲವೇನೊ.
ಇರಲಿ, ಪುಷ್ಪಕವಿಮಾನದ ಕಮಲಹಾಸನ್ ಅಷ್ಟರ ಮಟ್ಟಿಗಾದರೂ ಶರ್ಟ್ ತೊಳೆದುಕೊಳ್ಳುತ್ತಿದ್ದರೆ ನಮ್ಮ ಎಂಜಿನಿಯರಿಂಗ್ ಕಾಲೇಜಿನ ಹಾಸ್ಟೆಲ್ನಲ್ಲಿ ಅದಕ್ಕಿಂತಲೂ ಹೆಚ್ಚಿನ ಸೋಂಬೇರಿಗಳಿರುತ್ತಿದ್ದರು. ವಾರವಿಡೀ ಅದೇ ಪ್ಯಾಂಟ್ ಶರ್ಟ್ ಧರಿಸಿ ಓಡಾಡುವವರು. ಯಾರಾದರೂ ಗಮನಿಸಿ ಕೇಳಿದರೆ, “ಹೌದು, ಸತತ ನಾಲ್ಕನೇ ದೇಖಾವೆ! ಆನ್ ಪಬ್ಲಿಕ್ ಡಿಮ್ಯಾಂಡ್!” ಎಂದು ಸಮಜಾಯಿಶಿ ಕೊಡುತ್ತಿದ್ದ ಏಕವಸ್ತ್ರಭೂಪರು. ಬೇರೆ ಪ್ಯಾಂಟ್-ಶರ್ಟ್ ಇರುತ್ತಿರಲಿಲ್ಲವೆಂದಲ್ಲ, ಒಗೆದದ್ದಿರುತ್ತಿರಲಿಲ್ಲ ಅಷ್ಟೇ. ಬಹುಶಃ ಅಂಥವರಿಗೆಂದೇ ಪುರಂದರದಾಸರು ಹೇಳಿದ್ದು ‘ಲಂಗೋಟಿ ಬಲು ಒಳ್ಳೇದಣ್ಣಾ, ಒಬ್ರ ಹಂಗಿಲ್ಲದೇ ಮಡಿಗೆ ಒದಗುವುದಣ್ಣಾ...’ ಎಂದು. ಲಂಗೋಟಿ ‘ಮಡಿವಾಳರಿಗೆ ಶತ್ರು, ಮಠದಯ್ಯಗಳ ಮಿತ್ರ’ ಎನ್ನುತ್ತಾರೆ ದಾಸರು. ‘ಆಲಸಿಗರ ಮಿತ್ರ’ ಎಂದೂ ಹೇಳಬೇಕಿತ್ತು. ಜಸ್ಟ್ ಇಮ್ಯಾಜಿನ್. ಬಟ್ಟೆ ಒಗೆಯುವುದೆಂದರೆ ಬೋರ್ ಎನ್ನುವವರೆಲ್ಲ ಬೇರ್ ಮಿನಿಮಮ್ ಲಂಗೋಟಿಯನ್ನಷ್ಟೇ ಧರಿಸಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸರ್ವಜ್ಞರಾಗುವುದು... ವಾಹ್ ಕ್ಯಾ ಸೀನ್ ಹೈ!
ಆಯ್ತು, ಈಗ ಮುಖ್ಯ ವಿಷಯಕ್ಕೆ ಬರೋಣ. ಬಟ್ಟೆ ತೊಳೆಯುವುದೆಂದರೆ ವಾಷಿಂಗ್ಮೆಶಿನ್ನಲ್ಲಿ ಬಟ್ಟೆಗಳ ರಾಶಿಯನ್ನೂ ಡಿಟರ್ಜೆಂಟ್ ಪೌಡರನ್ನೂ ಹಾಕಿ ಸ್ವಿಚ್ ಅದುಮಿದರೆ ಸಾಕು "it washes... it rinses... it even dries the clothes... you are ready for the show!" ಎಂದಷ್ಟೇ ಗೊತ್ತಿರುವ ಒಂದು ತಲೆಮಾರು ಈಗ ನಗರಪ್ರದೇಶಗಳಲ್ಲಿ, ಮುಖ್ಯವಾಗಿ ‘ಹೈ-ಸೊಸೈಟಿ’ಗಳಲ್ಲಿ ಬೆಳೆಯುತ್ತಿದೆ. ಅಂಥವರು ಬಟ್ಟೆ ಒಗೆತದ ನೈಜ ಸೊಗಸಿನಿಂದ ವಂಚಿತರಾಗಿದ್ದಾರೆಂದೇ ಹೇಳಬೇಕು. ಆಧುನಿಕ ತಂತ್ರಜ್ಞಾನವು ಬಟ್ಟೆ ಒಗೆಯುವ ಕೆಲಸವನ್ನು ಶ್ರಮರಹಿತವನ್ನಾಗಿ ಮಾಡಿದೆಯೇನೊ ನಿಜ; ಹೊಸಹೊಸ ಫ್ಯಾಷನ್ನ ಬಟ್ಟೆಗಳನ್ನು ಡ್ರೈಕ್ಲೀನಿಂಗ್ ಮಾತ್ರ ಮಾಡಬೇಕು, ನೀರಿನಲ್ಲಿ ಒಗೆಯಬಾರದೆಂಬ ಸೂಚನೆಗಳಿರುತ್ತವೆ ಎನ್ನುವುದೂ ನಿಜ. ಆದರೆ ಕಲ್ಲಿನ ಮೇಲೆ ಬಟ್ಟೆ ಒಗೆಯುವ, ಒಗೆದಮೇಲೆ ನೀರನ್ನೆಲ್ಲ ಹಿಂಡಿ ಬಟ್ಟೆಗಳನ್ನು ತಂತಿಯ ಮೇಲೆ ಹರವಿ ಒಣಗಿಸುವ, ಅಂಗಳದಲ್ಲಿ ಅಥವಾ ಟೆರೇಸ್ ಮೇಲೆ ಬಟ್ಟೆ ಒಣಗುತ್ತಿರುವಾಗಲೇ ಮಳೆಹನಿ ಬೀಳಲಾರಂಭಿಸಿದರೆ ಓಡಿಹೋಗಿ ಅವನ್ನೆಲ್ಲ ಒಳಗೆ ತರುವ, ಬಿಸಿಲಲ್ಲಿ ಒಣಗಿದ ಬಟ್ಟೆಯ ಆ ಗರಿಗರಿತನ ಮತ್ತು ವಿಶೇಷ ಪರಿಮಳವನ್ನು ಆಸ್ವಾದಿಸುವ ಚಟುವಟಿಕೆಯಿದೆಯಲ್ಲ ಅದರಲ್ಲೊಂದು ವಿಶೇಷ ಸುಖವಿದೆ, ಸೊಗಸಿದೆ. ಅದನ್ನು ಯಾವ ಆಟೊಮೆಟಿಕ್ ವಾಷಿಂಗ್ಮೆಶಿನ್ ಅಥವಾ ಡ್ರೈಕ್ಲೀನಿಂಗ್ ಸಹ ಕೊಡಲಾರದು. ಅದರಲ್ಲೂ ಪಟ್ಟಣಪ್ರದೇಶಗಳಲ್ಲಿ ಗಡುಸಾದ ನಲ್ಲಿನೀರನ್ನು ಮಿತವಾಗಿ ಬಳಸಿ ಮಾಡಬೇಕಾದ ‘ಬಟ್ಟೆ ಒಗೆಯುವ ಶಾಸ್ತ್ರ’ಕ್ಕಿಂತ, ಗ್ರಾಮೀಣ ಪರಿಸರದಲ್ಲಿ ಯಥೇಚ್ಛ ಹರಿಯುವ ನೀರಿನಲ್ಲಿ ಬಟ್ಟೆ ಒಗೆದು ಅನುಭವಿಸಬೇಕು. ‘ಬಾತ್ರೂಮ್ ಸಿಂಗಿಂಗ್’ ಮಾದರಿಯಲ್ಲೇ ‘ಬಟ್ಟೆ ಒಗೆಯುತ್ತಿರುವಾಗಲೇ ಸಂಗೀತಕಚೇರಿ’ಯೂ ಇದ್ದರೆ ಮತ್ತೂ ಚೆನ್ನ. ಬಟ್ಟೆ ಒಗೆಯುವ ಶಿಲೆಗಳೂ ಸಂಗೀತವ ಹಾಡಿವೆ... ಆಗಬೇಕು. ಅದರ ಮಜಾನೇ ಬೇರೆ! ಇನ್ನೊಂದೆಂದರೆ, ಹರಿಯುವ ನೀರಿನಲ್ಲಿ ಅಂದರೆ ಕಾಲುವೆ-ತೋಡು-ನದಿಗಳ ನೀರಿನಲ್ಲಿ ಗಡಸುತನ ಇಲ್ಲದಿರುವುದರಿಂದ ಸ್ವಲ್ಪೇಸ್ವಲ್ಪ ಸೋಪ್ ಅಥವಾ ಡಿಟರ್ಜೆಂಟ್ ಬಳಸಿದರೂ (ಹಳ್ಳಿಗಳಲ್ಲಿ ಸೀಗೆಪುಡಿ ಅಥವಾ ‘ಅಂಟ್ವಾಳ’ ಎಂಬ ಕಾಯಿಯ ಪುಡಿ ಬಳಸುವುದೂ ಇದೆ) ಧಾರಾಳ ನೊರೆ ಬರುತ್ತದೆ. ಬಟ್ಟೆಗಳೂ ಥಳಥಳ ಶುಭ್ರವಾಗುತ್ತವೆ. ಬಟ್ಟೆ ಒಗೆತ ಮನಸ್ಸಿಗೆ ಕೊಡುವ ಖುಶಿ ಹೆಚ್ಚುತ್ತದೆ.
ನಾವು ಬಟ್ಟೆ ಒಗೆಯುವುದು ಅಥವಾ ಬಟ್ಟೆ ತೊಳೆಯುವುದು ಅಂತ ಸಾಮಾನ್ಯವಾಗಿ ಹೇಳುತ್ತೇವೆ, ಆದರೆ ಅದರೊಳಗೇ ಎಷ್ಟು ವೈವಿಧ್ಯಮಯ ರೀತಿಯಲ್ಲಿ ನಮ್ಮ ಕೈಕರಣ ನಡೆದಿರುತ್ತದೆ ಎಂಬ ಸೂಕ್ಷ್ಮವನ್ನು ಗಮನಿಸಿದರೆ ಅಚ್ಚರಿಯಾಗುತ್ತದೆ! ದೊಡ್ಡದೊಡ್ಡ ಬಟ್ಟೆಗಳನ್ನು ಅಥವಾ ಬೆಡ್ಶೀಟ್ಗಳನ್ನೆಲ್ಲ ಒಗೆಯುವಾಗ ಅವನ್ನು ಜೋರಾಗಿಯೇ ಕಲ್ಲಿಗೆ ಬಡಿಯಬೇಕು. ಪುಟ್ಟ ಮಗುವಿನ ಅಂಗಿ, ಟೋಪಿ, ಕಾಲ್ಚೀಲ ಮುಂತಾದವನ್ನು ಹಾಗೆ ಒಗೆಯಲಾಗದು. ಅವುಗಳನ್ನು ನಿಧಾನವಾಗಿ ಕಲ್ಲಿನ ಮೇಲೆ ಕುಕ್ಕಬೇಕು. ತೆಳುವಾದ ಬಟ್ಟೆಗಳಿದ್ದರೆ ಎರಡೂ ಕೈಗಳಿಂದ ಉಜ್ಜಬೇಕು ಹಿಚುಕಬೇಕು, ಸುರುಳಿ ಸುತ್ತಿ ಲಟ್ಟಿಸಿದಂತೆ ಮಾಡಬೇಕು. ನೀರು ತುಂಬಿದ ಬಾಲ್ದಿಯಲ್ಲೇ ಬಟ್ಟೆಯನ್ನು ಆಚೀಚೆ ಜಾಲಾಡಿಸಬೇಕು. ಆಗಲೇ ಕೊಳೆಯೆಲ್ಲ ಹೋಗುವುದು. ಸಕಲ‘ಕಲಾ’ವಲ್ಲಭ ಮಕ್ಕಳ ಬಟ್ಟೆಗಳಲ್ಲಿ ಕಲೆಗಳಿದ್ದದ್ದನ್ನು ತೆಗೆಯಲು ಒಗೆಯುವಾಗ ವಿಶೇಷ ಕ್ರಮ ಕೈಗೊಳ್ಳಬೇಕಾಗುತ್ತದೆ ಬಟ್ಟೆ ಹತ್ತಿಯದೇ ಸಿಂಥೆಟಿಕ್ ವಸ್ತುವಿನದೇ ಎಂಬುದನ್ನವಲಂಬಿಸಿ ಅದಕ್ಕೆ ಅನುಗುಣವಾಗಿ ತೊಳೆಯಬೇಕಾಗುತ್ತದೆ. ಇನ್ನು, ಗೋಣಿಚೀಲ ಗುಡಾರಗಳನ್ನೆಲ್ಲ ಒಗೆಯುವುದಾದರೆ ಕೈಗಳ ಬಲ ಎಲ್ಲಿಗೂ ಸಾಲದು. ಭಕ್ತಕುಂಬಾರ ‘ವಿಠಲಾ ಪಾಂಡುರಂಗ ವಿಠಲಾ’ ಎನ್ನುತ್ತ ಆವೆಮಣ್ಣನ್ನು ಹದಮಾಡಿದಂತೆ ಕಾಲುಗಳಿಂದಲೇ ತುಳಿಯಬೇಕಾಗುತ್ತದೆ. ಅದಕ್ಕೇ ಹೇಳಿದ್ದು ಬಟ್ಟೆ ಒಗೆಯುವುದರಲ್ಲೂ ಕಂಡಾಬಟ್ಟೆ ಸೊಬಗಿದೆ, ಸೊಗಸಿದೆ. ನಿಜಕ್ಕಾದರೆ ಯಾವ ಕೆಲಸವಾದರೂ ಹಾಗೆಯೇ ಅಲ್ಲವೇ? ಮನಸ್ಸಿಟ್ಟು ಮಾಡಿದರೆ ಶ್ರಮ ಗೊತ್ತಾಗುವುದಿಲ್ಲ, ಅಷ್ಟೇಅಲ್ಲ, ಸಂತೋಷ ಇಮ್ಮಡಿಯಾಗುತ್ತದೆ.
ಬಟ್ಟೆ ಒಗೆಯುವುದಕ್ಕೆ ಸಂಬಂಧಿಸಿದಂತೆ, ಮುಖ್ಯವಾಗಿ ಅಗಸ ಒದಗಿಸುವ ಸೇವೆಗೆ ಸಂಬಂಧಿಸಿದಂತೆ ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ನಿಯಮಗಳನ್ನು ಹೇಳಲಾಗಿದೆಯೆಂದರೆ ನಂಬುತ್ತೀರಾ? ಬಟ್ಟೆಗಳನ್ನು ಒಗೆಯುವಾಗ ಮರದ ದಿಮ್ಮಿ ಅಥವಾ ನುಣುಪಾದ ಕಲ್ಲಿಗಷ್ಟೇ ಬಡಿಯಬಹುದು. ಬಟ್ಟೆಗಳಿಗೆ ಹಾನಿಯಾಗುವಂತೆ ಒಗೆಯಬಾರದು. ಬೇರೆಬೇರೆ ಗಿರಾಕಿಗಳ ಬಟ್ಟೆಗಳನ್ನು ಮಿಕ್ಸ್ಅಪ್ ಮಾಡುವುದಾಗಲೀ, ಒಗೆಯಲಿಕ್ಕೆಂದು ಪಡೆದ ಬಟ್ಟೆಗಳನ್ನು ಉಪಯೋಗಿಸುವುದು, ಮಾರುವುದು ಇತ್ಯಾದಿ ಸಲ್ಲ. ಅದಕ್ಕೆ ನಿರ್ದಿಷ್ಟ ಪ್ರಮಾಣದ ಜುಲ್ಮಾನೆಯಿದೆ, ಶಿಕ್ಷೆಯಿದೆ. ಬಟ್ಟೆಗಳು ಯಾವ ಮಟ್ಟದಲ್ಲಿ ಶುಭ್ರವಾಗಬೇಕು ಎಂಬುದನ್ನವಲಂಬಿಸಿ ಎಷ್ಟು ದಿನಗಳೊಳಗೆ ಹಿಂದಿರುಗಿಸಬೇಕು ಎಂಬ ಪಟ್ಟಿ ಇದೆ. ಹೊಸ ಬಟ್ಟೆಯನ್ನು ಒಮ್ಮೆ ಒಗೆದರೆ ಅದರ ಬೆಲೆ ನಾಲ್ಕನೇಒಂದರಷ್ಟು, ಎರಡು ಸಲ ಒಗೆದರೆ ಐದನೇ ಒಂದರಷ್ಟು ಸವಕಳಿಯಾಗುತ್ತದೆ... ಹೀಗೆ ಸಾಗುತ್ತವೆ ಕೌಟಿಲ್ಯನ ನಿಯಮಗಳು. ನೋಡಿದಿರಾ? ಬಟ್ಟೆ ಒಗೆಯುವುದು ಎಂಬ ಸಿಲ್ಲಿ ವಿಷಯದ ಹಿಂದೆಯೂ ಎಷ್ಟು ಕೌತುಕಮಯ ವಿಚಾರಗಳಿರುತ್ತವೆ!
ಕೊನೆಯಲ್ಲಿ, ನಿಮಗೊಂದು ರಸಪ್ರಶ್ನೆ. ಇದೊಂಥರದಲ್ಲಿ ಅಪ್ರಸ್ತುತ ಪ್ರಶ್ನೆ ಎನಿಸಿದರೂ ಇದರ ಉತ್ತರ ಇವತ್ತಿನ ಹರಟೆಗೆ ಲಿಂಕ್ ಇರುವಂಥದ್ದೇ ಆಗಿದೆ. ಪ್ರಶ್ನೆ ಹೀಗಿದೆ- ಬೆಂಗಳೂರಿನ ಒಂದು ಪಾಶ್ ಬಡಾವಣೆಯಾದ ‘ಬಿಟಿಎಂ ಲೇಔಟ್’ನ ಹೆಸರಿನಲ್ಲಿ ಬಿ ಎಂದರೆ ಬೈರಸಂದ್ರ; ಟಿ ಎಂದರೆ ತಾವರೆಕೆರೆ; ಮೂರನೇ ಅಕ್ಷರ ಎಂ ಎಂದರೇನು? ಬೆಂಗಳೂರಿಗರಿಗೆ ಇದರ ಉತ್ತರ ತತ್ಕ್ಷಣ ಗೊತ್ತಾಗಬಹುದಾದರೂ ಇತರರಿಗೆ ಸುಳಿವು ಬೇಕಾಗಬಹುದು. ಉತ್ತರ ಇದೇ ಲೇಖನದಲ್ಲೆಲ್ಲೋ ಯಾವುದೋ ವಾಕ್ಯದ ಭಾಗವಾಗಿ ಅಡಗಿಕುಳಿತಿದೆ. ಹುಡುಕಿ ತೆಗೆಯಿರಿ!
* * *
ನೀವು ಈ ಲೇಖನವನ್ನು ವಿಜಯಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.
"Listen Now" ಮೇಲೆ ಕ್ಲಿಕ್ಕಿಸಿದರೆ ಈ ಲೇಖನವನ್ನು ನೀವು ಕೇಳಿ ಆನಂದಿಸಬಹುದು!
Saturday Dec 04, 2010
Effects of Sound Effects
Saturday Dec 04, 2010
Saturday Dec 04, 2010
ದಿನಾಂಕ 5 ಡಿಸೆಂಬರ್ 2010ರ ಸಂಚಿಕೆಯಲ್ಲಿ...
ನಾನು ನುರಿತವನಲ್ಲ, ಏನಿದ್ರೂ ‘ಇಫೆಕ್ಟ್’ ಮಾತ್ರ!
ಲೇಖನವನ್ನು ನೀವು ಇಲ್ಲಿ ಓದಬಹುದು. "Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!
Saturday Nov 27, 2010
Thanksgiving Special
Saturday Nov 27, 2010
Saturday Nov 27, 2010
Version: 20241125

