Episodes

Saturday Apr 28, 2012
Parie - Pride of BDT
Saturday Apr 28, 2012
Saturday Apr 28, 2012
ದಿನಾಂಕ 29 ಎಪ್ರಿಲ್ 2012ರ ಸಂಚಿಕೆ...
ಇದು ನಮ್ಮ ಬಿಡಿಟಿಯ ಪರಿ!
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] * * * ಬ್ರಹ್ಮಪ್ಪ ದೇವೇಂದ್ರಪ್ಪ ತವನಪ್ಪನವರ ಎಂಜಿನಿಯರಿಂಗ್ ಕಾಲೇಜು ಅಂತಂದ್ರೆ ಕೆಲವರಿಗಷ್ಟೇ ಗೊತ್ತಾದೀತು. ಆದರೆ ‘ಬಿಡಿಟಿ’ ಎಂಜಿನಿಯರಿಂಗ್ ಕಾಲೇಜು ಎಂದು ನೀವು ಪಿಸುಗುಟ್ಟಿದರೂ ಸಾಕು, ಕಿವಿ ನೆಟ್ಟಗಾಗಿಸಿ ಓಗೊಡುವ ಎಂಜಿನಿಯರುಗಳು ನಿಮಗೆ ಭೂಮಂಡಲದ ದಶದಿಕ್ಕುಗಳಲ್ಲೂ ಸಿಗುತ್ತಾರೆ! ದಾವಣಗೆರೆಯ ಆ ಮೂವರು ಮಹಾನ್ ದಾನಿಗಳ ಹೆಸರಿನ ಮೊದಲಕ್ಷರಗಳದು ಅದೇನು ಮಹಿಮೆಯೋ, ಇವತ್ತು ‘ಬಿಡಿಟಿ’ ಒಂದು ಗ್ಲೋಬಲ್ ಬ್ರಾಂಡ್ ಆಗಿಹೋಗಿದೆ. ಅಷ್ಟೇಅಲ್ಲ, ಮಿಕ್ಕೆಲ್ಲ ಎಂಜಿನಿಯರಿಂಗ್ ಕಾಲೇಜುಗಳಿಗಿಂತ ಭಿನ್ನವಾಗಿ ತನ್ನದೇ ಆದ ಒಂದು ವೈಶಿಷ್ಟ್ಯವನ್ನೂ ಉಳಿಸಿಕೊಂಡುಬಂದಿದೆ. ಪೂರ್ಣವಾಗಿ ಸರಕಾರಿ ಕೋಟಾದಲ್ಲಷ್ಟೇ ಪ್ರವೇಶವಾದ್ದರಿಂದ ನಮ್ಮ ಕಾಲೇಜಿನಲ್ಲಿ ಎಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಿದವರೆಲ್ಲ ಬಡ, ಮಧ್ಯಮವರ್ಗದ ಹಿನ್ನೆಲೆಯಿಂದ ಬಂದವರು. ಪರಿಶ್ರಮದ ಬೆವರು ಸುರಿಸಿ ಎಂಜಿನಿಯರಿಂಗ್ ಕಾಲೇಜಿನ ಮೆಟ್ಟಿಲೇರಿದವರು. ಕೋಟಿಗಟ್ಟಲೆ ಹಣ ಸುರಿದು ಪ್ರವೇಶ ಗಿಟ್ಟಿಸಿದವರಲ್ಲ. ಈಗ ಈ ಪದವೀಧರರೆಲ್ಲ ತಂತ್ರಜ್ಞಾನದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಂತೂ ಹೌದೇಹೌದು, ಅದಕ್ಕಿಂತ ಮುಖ್ಯವಾಗಿ ‘ಮಾಗಿದ ಬದುಕಿನ’ ಕಲೆಯನ್ನು ವಿದ್ಯಾಭ್ಯಾಸದ ಸಮಯದಿಂದಲೇ ಅರಗಿಸಿಕೊಂಡವರು. ಶಿಕ್ಷಣೇತರ ವಿಷಯಗಳಲ್ಲೂ ಬಿಡಿಟಿ ವಿದ್ಯಾರ್ಥಿಗಳದು ಅನನ್ಯ ಛಾಪು. ಅದು ಪ್ರತಿಭಾ ಪ್ರದರ್ಶನದ ಅಂತರಕಾಲೇಜು ಸ್ಪರ್ಧೆಯಿರಬಹುದು, ಆಟೋಟ ಪಂದ್ಯಗಳ ಕ್ರೀಡಾಕೂಟವೇ ಇರಬಹುದು, ಬಿಡಿಟಿ ಹುಡುಗರು ಭಾಗವಹಿಸಿದರೆಂದರೆ ಅಲ್ಲೊಂದು ರೋಚಕತೆ. ಒಂಥರದಲ್ಲಿ ಅವರು ರೇಸ್ನ ಕಪ್ಪುಕುದುರೆಗಳಿದ್ದಂತೆ. ಯಾರ ಊಹೆಗೂ ನಿಲುಕದೆ ವಿಜಯಪತಾಕೆ ಹಾರಿಸುವವರು. ಪದಕ ಪ್ರಶಸ್ತಿಗಳ ಕೊಳ್ಳೆ ಹೊಡೆದು ಹಿಂದಿರುಗುವವರು. ಎರಡು ದಶಕಗಳ ಹಿಂದೆ ನಮ್ಮ ಬ್ಯಾಚ್ನ ಹುಡುಗರು ‘ದವನ’, ‘ಜೇಸಿಯಾನ’ ಮುಂತಾದ ಅಂತರಕಾಲೇಜು ಸ್ಪರ್ಧಾಕೂಟಗಳಲ್ಲಿ ಮಿಂಚುತ್ತಿದ್ದುದು ನನಗಿನ್ನೂ ಹಸಿರು ನೆನಪು. ನಮಗಿಂತ ಸೀನಿಯರ್ ಬ್ಯಾಚ್ನವರೂ ಮಿಂಚಿದವರೇ. ನಮ್ಮ ನಂತರದವರೂ ಆ ಪರಂಪರೆಯನ್ನು ಮುಂದುವರಿಸಿದವರೇ. ಅದೇ ಬಿಡಿಟಿ ಸ್ಪೆಷಾಲಿಟಿ. ಇಂತಿರುವ ಬಿಡಿಟಿ ಹುಡುಗರು ಇದೀಗ ‘ಪರಿ’ ಹೆಸರಿನ ಕನ್ನಡ ಸಿನೆಮಾ ನಿರ್ಮಿಸಿದ್ದಾರೆ. ಮೊನ್ನೆ ಶುಕ್ರವಾರ ಅದು ರಾಜ್ಯಾದ್ಯಂತ ಮತ್ತು ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಏಕಕಾಲಕ್ಕೆ ಬಿಡುಗಡೆಯೂ ಆಗಿದೆ. ಹೌದು, ಮೂಗಿನ ಮೇಲೆ ಬೆರಳಿಡಬೇಕಾದ ಸಂಗತಿಯೇ. ಎಂಜಿನಿಯರುಗಳೆಂದರೆ ರಸ್ತೆ-ಸೇತುವೆಗಳನ್ನು ಕಟ್ಟುವವರು; ರಾಕೆಟ್-ಉಪಗ್ರಹಗಳನ್ನು ವಿನ್ಯಾಸಗೊಳಿಸಿ ಉಡಾಯಿಸುವವರು. ತಂತ್ರಜ್ಞಾನ ಕ್ಷೇತ್ರದಲ್ಲಿ ತಪಗೈದು ಮಾನವ ಕುಲಕೋಟಿಗೆ ಅದರ ಫಲವನ್ನು ಉಣಿಸುವವರು. ಅಂಥವರು ಸಿನೆಮಾ ಕ್ಷೇತ್ರಕ್ಕೂ ಕಾಲಿಟ್ಟರೇ ಎಂದು ಅಚ್ಚರಿಯಾಗುವುದು ಸಹಜವೇ. ಆದರೆ ಆಗಲೇ ಹೇಳಿದೆನಲ್ಲ, ಬಿಡಿಟಿ ಹುಡುಗರು ಡಿಫರೆಂಟ್! ಅವರು ಸೃಜನಶೀಲರು, ಸಾಹಸ ಪ್ರವೃತ್ತಿಯವರು, ಡಬ್ಬದಿಂದ ಹೊರಗೂ (outside the box) ಯೋಚಿಸಬಲ್ಲವರು. ಈ ಪರಿಯ ಎಂಜಿನಿಯರುಗಳೂ ಇರುತ್ತಾರೆಯೇ ಎಂದೆನಿಸಿಕೊಳ್ಳುವವರು. ಚಿತ್ರನಿರ್ಮಾಣ ಬ್ಯಾನರ್ಗೆ ಹೆಸರಿಡುವಾಗಲೂ ‘ಬಿಡಿಟಿ ಅಭಿಯಂತರರ ಚಿತ್ರ’ ಎಂದೇ ಹೆಸರಿಟ್ಟು ಅಭಿಮಾನದ ಕಿಚ್ಚನ್ನು ಹೆಚ್ಚಿಸಿದವರು.

Monday Apr 23, 2012
Amin Sayani Email Kahani
Monday Apr 23, 2012
Monday Apr 23, 2012
ದಿನಾಂಕ 22 ಎಪ್ರಿಲ್ 2012ರ ಸಂಚಿಕೆ...
ಅಮಿನ್ ಸಯಾನಿ ಇಮೇಲ್ ಕಹಾನಿ
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] * * * ಇಲ್ಲ, ಇದು ಕಹಾನಿ ಎನ್ನುವಷ್ಟು ದೊಡ್ಡ ಕಥೆಯೇನಲ್ಲ. ಸಯಾನಿ-ಕಹಾನಿ ಪ್ರಾಸ ಚೆನ್ನಾಗಿರುತ್ತೆ ಅಂತ ಹಾಗೆ ಟೈಟಲ್ ಕೊಟ್ಟಿದ್ದೇನೆ ಅಷ್ಟೇ. ಆದರೂ, ಅಮಿನ್ ಸಯಾನಿ ಅವರಿಂದ ಇಮೇಲ್ ಬಂದಿರುವುದಂತೂ ಹೌದು. ನನಗಲ್ಲ, ನನ್ನ ಸೋದರಮಾವನಿಗೆ. ದಶಕಗಳ ಹಿಂದೆ ಅಮಿನ್ ಸಯಾನಿಯ ಬಿನಾಕಾ ಗೀತ್ಮಾಲಾ ಮೋಡಿಗೆ ಪರವಶರಾಗಿದ್ದ ಕೋಟ್ಯಂತರ ಅಭಿಮಾನಿಗಳಲ್ಲಿ ಅವರು ‘ಊಪರ್ವಾಲೀ ಪೈದಾನ್’ನವರು. ಇವತ್ತಿಗೂ ಒಬ್ಬ ರೇಡಿಯೊ-ಬಫ್. ಇವತ್ತಿಗೂ ಅದೇ ಅಭಿಮಾನ. ಹಾಗಾಗಿ ಅಮಿನ್ ಸಯಾನಿಯ ಇಮೇಲ್ನಿಂದ ಏಕ್ದಂ ಖುಷಿ ಪಟ್ಟಿದ್ದಾರೆ. ನನಗೂ ಫಾರ್ವರ್ಡ್ ಮಾಡಿ ಖುಷಿಯನ್ನು ಹೆಚ್ಚಿಸಿದ್ದಾರೆ. ನಾನೀಗ ಅದೇ ಖುಷಿಯನ್ನು ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ. Share your joys ಅಂದರೆ ಹೀಗೆಯೇ ಅಲ್ವಾ? ಅಮಿನ್ ಸಯಾನಿ ಯಾಕೆ ನನ್ನ ಸೋದರಮಾವನಿಗೆ ಇಮೇಲ್ ಬರೆದರು? ಹಾಗಲ್ಲ, ‘ಸೋದರಮಾವ ಬರೆದಿದ್ದ ಇಮೇಲ್ಗೆ ಅಮಿನ್ ಸಯಾನಿ ಉತ್ತರಿಸಿದರು’ ಎಂದು ಹೇಳಿದರೆ ಸರಿಯಾಗುತ್ತದೆ. ಅಷ್ಟಕ್ಕೂ ನನ್ನ ಸೋದರಮಾವ ಆಗಲೀ, ಅವರು ಅಮಿನ್ ಸಯಾನಿಗೆ ಇಮೇಲ್ ಬರೆದದ್ದೇ ಆಗಲೀ ಇಲ್ಲಿ ಮುಖ್ಯವಲ್ಲ. ಕೋಟ್ಯಂತರ ಜನ ಕೇಳುಗರ ಪೈಕಿ ಯಃಕಶ್ಚಿತ್ ಒಬ್ಬರು ಆತ್ಮೀಯವಾಗಿ ಇಮೇಲ್ ಬರೆದದ್ದಕ್ಕೆ ಅಷ್ಟೇ ಆತ್ಮೀಯತೆಯಿಂದ ಅಮಿನ್ ಭಾಯಿ ಉತ್ತರಿಸಿದರಲ್ಲ ಅದೇ ಗ್ರೇಟ್ನೆಸ್ಸು. ಅದೂಏನು, ಹೊಗಳಿ ಅಟ್ಟಕ್ಕೇರಿಸಿದ್ದ ಪತ್ರವಲ್ಲ, ಯಾವುದೋ ಒಂದು ಹಳೇ ಚಿತ್ರಗೀತೆಯನ್ನು ಅವರ ನೆನಪಿಗೆ ತರುವ ಉದ್ದೇಶದಿಂದ ಬರೆದಿದ್ದ ಒಂದು ಸಾಮಾನ್ಯ ಪತ್ರ. ಅದನ್ನು ಸ್ವೀಕರಿಸಿ ಪ್ರಾಮಾಣಿಕವಾಗಿ ಪ್ರೀತಿಯಿಂದ ಉತ್ತರ ಬರೆದ ಅಮಿನ್ ಸಯಾನಿ ಎಂಬ ಗ್ರೇಟ್ ವ್ಯಕ್ತಿಗೆ, ಆ ಉತ್ತರದಲ್ಲಿ ಪ್ರಕಟಗೊಂಡ ಅವರ ಡೌನ್-ಟು-ಅರ್ತ್ ವ್ಯಕ್ತಿತ್ವಕ್ಕೆ ತಲೆಬಾಗಲೇಬೇಕು. ಪತ್ರ ಅಥವಾ ಉತ್ತರ ಯಾರು ಬೇಕಾದರೂ ಬರೆಯಬಹುದು. ಆದರೆ ದೊಡ್ಡಸ್ತಿಕೆಯ ಸೋಗು ತೋರದೆ ಅಪರಿಚಿತರನ್ನೂ ಆತ್ಮೀಯತೆಯಿಂದ ನೋಡುವುದು ಕೆಲವರಷ್ಟೇ. ಅಮಿನ್ ಭಾಯಿ ಅಂಥವಲ್ಲೊಬ್ಬರು ಎಂದು ಸಾಬೀತಾದದ್ದು ಈ ಇಮೇಲ್ ವಿನಿಮಯದ ಸಾರಾಂಶ. ನನ್ನ ಸೋದರಮಾವ ಬರೆದ ಇಮೇಲ್ ಹೀಗಿತ್ತು (ಹಿಂದಿಯಲ್ಲಿ ಬರೆದಿದ್ದರು, ಇಲ್ಲಿ ಕನ್ನಡ ಅನುವಾದ ಕೊಡುತ್ತಿದ್ದೇನೆ): ‘ಅಮಿನ್ ಸಯಾನಿಜೀ, ಮೊನ್ನೆ ಸಂಗೀತ್ಕೆ ಸಿತಾರೋಂಕಿ ಮೆಹಫಿಲ್ ಕಾರ್ಯಕ್ರಮ ಖ್ಯಾತ ಚಿತ್ರಸಾಹಿತಿ ಎಸ್.ಎಚ್.ಬಿಹಾರಿ ಮೇಲೆ ಪ್ರಸ್ತುತಪಡಿಸಿದ್ದಿರಷ್ಟೆ? ಚೆನ್ನಾಗಿತ್ತು. ಎಸ್.ಎಚ್.ಬಿಹಾರಿಯವರು ಕೊನೇ ದಿನಗಳಲ್ಲಿ ಸಂಗೀತ ನಿರ್ದೇಶಕ ಜೋಡಿ ಶಂಕರ್-ಜೈಕಿಶನ್ಗೂ ಹಾಡುಗಳನ್ನು ಬರೆಯುತ್ತಿದ್ದರು. ಜಾನೆ ಅನ್ಜಾನೆ ಚಿತ್ರದ ಛಮ್ ಛಮ್ ಬಾಜೆರೇ ಪಾಯಲಿಯಾ ತುಂಬ ಜನಪ್ರಿಯವಾಗಿತ್ತು. ಇಂತು ನಿಮ್ಮ ಅಭಿಮಾನಿ- ಚಿದಂಬರ ಕಾಕತ್ಕರ್; ಮಂಗಳೂರು, ಕರ್ನಾಟಕ.’ ಹಳೇ ಚಿತ್ರಗೀತೆಗಳ ವಿಚಾರಕ್ಕೆ ಬಂದರೆ ನನ್ನ ಸೋದರಮಾವ ಮಾಹಿತಿಯ ಕಣಜ. ನಿಖರ ಮಾಹಿತಿಯನ್ನು ಒದಗಿಸುವ ದೃಷ್ಟಿಯಿಂದಲೇ ಅವರು ಅಮಿನ್ ಸಯಾನಿಗೆ ಪತ್ರ ಬರೆದಿದ್ದರು. ಅದೇನೂ ಅಂಥ ಉತ್ತರಾಕಾಂಕ್ಷಿ ಪತ್ರ ಅಲ್ಲವೇಅಲ್ಲ. ಆದರೆ ಅಮಿನ್ ಸಯಾನಿ ಆಪ್ತತೆಯಿಂದ ಉತ್ತರಿಸಿದರು (ಅವರ ಹಿಂದಿ ಆವೃತ್ತಿಯನ್ನೂ, ನನ್ನ ಕನ್ನಡ ಅನುವಾದವನ್ನೂ ಕೊಡುತ್ತಿದ್ದೇನೆ): ‘ಚಿದಂಬರ್ ಭಾಯೀ, ಅರೆರೆ! ಛಮ್ ಛಮ್ ಬಾಜೆ ಪಾಯಲಿಯಾ ತೊ ಮೈಂ ಭೂಲ್ಹೀ ಗಯಾ! ಮಾಫ್ ಕರ್ನಾ. ಖೈರ್, ಇತ್ನೇ ಬಡೇ ಕಾಮ್ಮೇ ಕುಛ್ ಭೂಲೆ ತೊ ಹೋಹೀ ಜಾತೇ ಹೈಂ. ಅಬ್ ಮೈಂ 79 ಸಾಲ್ಕಾ ಹೋಗಯಾ ಹೂಂನ? - ಖುಷ್ ರಹೋ, ಅಮಿನ್ ಸಯಾನಿ.’ (ಅರೆರೆ! ಛಮ್ ಛಮ್ ಬಾಜೆ ಪಾಯಲಿಯಾ ಗೀತೆಯನ್ನು ನಾನು ಮರೆತೇಬಿಟ್ಟಿದ್ದೆ. ನನ್ನನ್ನು ಕ್ಷಮಿಸಿ. ಎಷ್ಟೆಂದರೂ ಇಂಥ ದೊಡ್ಡದೊಡ್ಡ ಕೆಲಸಗಳಲ್ಲಿ ಕೆಲವು ಮರೆವುಗಳು ಆಗೇಆಗುತ್ತವಲ್ಲ? ಅಲ್ಲದೇ ನನಗೂ ಈಗ 79 ವರ್ಷ ವಯಸ್ಸಾಗಿದೆ. ಇರಲಿ, ಖುಷಿಯಿಂದಿರಿ. ಅಮಿನ್ ಸಯಾನಿ). ಬಿನಾಕಾ ಗೀತ್ಮಾಲಾದಲ್ಲಿ ಜೇನಿನಂಥ ಮಧುರ ಕಂಠದಿಂದ ‘ಬೆಹ್ನೋ ಔರ್ ಭಾಯಿಯೋಂ...’ ಎನ್ನುತ್ತಿದ್ದ ಅಮಿನ್ ಸಯಾನಿ ಆ ಮಾತನ್ನು ಆರ್ಟಿಫಿಶಿಯಲ್ ಆಗಿ ತೋರ್ಪಡಿಕೆಗಾಗಿ ಹೇಳುತ್ತಿದ್ದದ್ದಲ್ಲ ಎಂದಾಯ್ತಲ್ಲ! ಜನಪ್ರಿಯತೆಯ ಉತ್ತುಂಗಕ್ಕೇರಿದ್ದ ವ್ಯಕ್ತಿ ಯಾವೊಂದು ಅಹಂ ಇಲ್ಲದೆ ಇಷ್ಟು ನಿಸ್ಪೃಹ ಮನಸ್ಸಿನಿಂದ, 79 ವರ್ಷ ವಯಸ್ಸಾಗಿದ್ದರೂ ಪುಟ್ಟ ಮಗುವಿನ ನಿರ್ಮಲ ಹೃದಯದಿಂದ, ಚಿರಪರಿಚಿತ ಚಡ್ಡಿದೋಸ್ತಿಯೊಬ್ಬ ಚಹ ಕುಡಿಯುತ್ತ ಎದುರು ಕುಳಿತು ಮಾತನಾಡುತ್ತಿದ್ದಾನೇನೋ ಎನಿಸುವಂತೆ, ಈರೀತಿ ಉತ್ತರ ಬರೆದರೆ ಯಾರಿಗೇ ಆದರೂ ಖುಷಿಯಾಗದೇ ಇದ್ದೀತೇ?

Saturday Apr 07, 2012
Nadatarangini 25 Years
Saturday Apr 07, 2012
Saturday Apr 07, 2012
ದಿನಾಂಕ 8 ಎಪ್ರಿಲ್ 2012ರ ಸಂಚಿಕೆ...
ರಾಗರಸಧಾರೆಯ ರಜತಪರ್ವ
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] * * * ಎತ್ತಣ ಮಾಮರ ಎತ್ತಣ ಕೋಗಿಲೆ ಎತ್ತಣಿಂದೆತ್ತ ಸಂಬಂಧವಯ್ಯಾ. ಎಲ್ಲವೂ ಋತುರಾಜ ವಸಂತನ ಇಂದ್ರಜಾಲ. ಅವನು ತರುಲತೆಗಳನ್ನಷ್ಟೇ ಅಲ್ಲ ಸಂಬಂಧಗಳನ್ನೂ ಚಿಗುರಿಸಬಲ್ಲವ. ಹೂವಿಗೂ ದುಂಬಿಗೂ ಚುಂಬನದ ಪ್ರೇರಣೆ ನೀಡಬಲ್ಲವ. ಮಾಮರಕ್ಕೂ ಕೋಗಿಲೆಗೂ ನಂಟುಹಾಕಿ ಪ್ರಕೃತಿಯನ್ನು ಗಂಧರ್ವಲೋಕವಾಗಿಸಬಲ್ಲವ. ಈಗ, ಇದನ್ನು ಕಲ್ಪಿಸಿ: ಎತ್ತಣ ಅಮೆರಿಕಾ ಎತ್ತಣ ಕರ್ನಾಟಕ ಶಾಸ್ತ್ರೀಯ ಸಂಗೀತೋತ್ಸವ ಎತ್ತಣಿಂದೆತ್ತ ಸಂಬಂಧವಯ್ಯಾ... ಋತುರಾಜನಿಂದ ಅದೂ ಸಾಧ್ಯ! ಅಮೆರಿಕದ ರಾಜಧಾನಿ ವಾಷಿಂಗ್ಟನ್ನಲ್ಲಿ ‘ನಾದತರಂಗಿಣಿ’ ಸಂಸ್ಥೆಯು ಪ್ರತಿವರ್ಷ ವಸಂತಋತುವಿನಲ್ಲಿ ಹಮ್ಮಿಕೊಳ್ಳುವ ಪುರಂದರ-ತ್ಯಾಗರಾಜ ಸಂಗೀತೋತ್ಸವದ ವೈಭವವನ್ನೇನಾದರೂ ನೀವು ಆಸ್ವಾದಿಸಿದರೆ ಒಂದೊಮ್ಮೆ ಮೈಮರೆಯುತ್ತೀರಿ. ಅದು ನಿಮಗೆ ತಿರುವಯ್ಯಾರಿನ ತ್ಯಾಗರಾಜ ಆರಾಧನೆಯನ್ನು ನೆನಪಿಸಬಹುದು. ಮಾರ್ಗಶಿರದ ಚುಮುಚುಮು ಚಳಿಯಲ್ಲಿ ಚೆನ್ನೈಯಲ್ಲಿ ನಡೆಯುವ ಸಂಗೀತ ಕಚೇರಿಗಳು ನಿಮ್ಮ ಕಣ್ಮುಂದೆ ಸುಳಿದಾಡಬಹುದು. ಬೆಂಗಳೂರಿನ ರಾಮನವರಾತ್ರಿ ಸಂಗೀತ ಕಾರ್ಯಕ್ರಮಗಳು, ದಸರೆಯ ವೇಳೆ ಮೈಸೂರಿನಲ್ಲಿ ಮೇಳೈಸುವ ಸಂಗೀತಗೋಷ್ಠಿಗಳು ನಿಮ್ಮ ಮನದಲ್ಲಿ ಹಾದುಹೋಗಬಹುದು. ರಾಗರಸಧಾರೆಯ ನಿರಂತರ ಪ್ರವಾಹದಲ್ಲಿ ಇದೇನಿದು ಗಂಧರ್ವಲೋಕದಲ್ಲೇ ವಿಹರಿಸುತ್ತಿದ್ದೀವಾ ಎಂದೂ ನಿಮಗನಿಸಬಹುದು! ಇದು ಉತ್ಪ್ರೇಕ್ಷೆಯಲ್ಲ; ಒಬ್ಬ ಸಂಗೀತಾಭಿಮಾನಿ ಸಾಮಾನ್ಯ ಪ್ರೇಕ್ಷಕನಾಗಿ ನಾದತರಂಗಿಣಿಯ ಕಾರ್ಯಕ್ರಮಗಳನ್ನು ಕಳೆದ ಕೆಲ ವರ್ಷಗಳಿಂದಲೂ ಸವಿಯುತ್ತ ಬಂದಿರುವ ನನಗೆ, ಈವರ್ಷ ಬೆಳ್ಳಿಹಬ್ಬದ ಸಡಗರ ಹೇಗಿರಬಹುದೆಂದು ಊಹಿಸಿದಾಗ ನಿಲುಕಿದ ಅಭಿಮಾನಪೂರ್ವಕ ಅಂದಾಜು. ಮುಂದಿನ ವಾರಾಂತ್ಯದಲ್ಲಿ, ಅಂದರೆ ಏಪ್ರಿಲ್ ೧೩ರಿಂದ ೧೫ರವರೆಗೆ ಇಲ್ಲಿನ ಶಿವವಿಷ್ಣು ದೇವಸ್ಥಾನದ ಭವ್ಯ ಸಭಾಂಗಣದಲ್ಲಿ ನಾದತರಂಗಿಣಿ ವಾರ್ಷಿಕ ಸಂಗೀತೋತ್ಸವ. ಮೂರುದಿನ ಸೇರಿ ಸುಮಾರು ಮುನ್ನೂರಕ್ಕೂ ಹೆಚ್ಚು ಸಂಗೀತಗಾರರಿಂದ ನಾದಾಮೃತ ರಸದೌತಣ. ಇದು ಉತ್ಸವದ 25ನೇ ವರ್ಷ. ಆದ್ದರಿಂದ ಮತ್ತಷ್ಟು ಹುರುಪು, ಮತ್ತಷ್ಟು ಹರ್ಷ. ಈ ಕುರಿತೊಂದು ಕರ್ಟೇನ್ರೈಸರ್ ಮಾದರಿಯಲ್ಲಿ ಇವತ್ತಿನ ಪ‘ರಾಗ’ಸ್ಪರ್ಶ. ನಾದತರಂಗಿಣಿಯ ಕಿರುಪರಿಚಯ ಮಾಡುವಾಗ ‘ಇದು ವಾಷಿಂಗ್ಟನ್ ಪ್ರದೇಶದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತಶಿಕ್ಷಣ ಒದಗಿಸುತ್ತಿರುವ ಒಂದು ಲಾಭರಹಿತ ಸಂಸ್ಥೆ. ಹಾಡುಗಾರಿಕೆ, ಪಕ್ಕವಾದ್ಯ ಮುಂತಾಗಿ ಸಂಗೀತದ ವಿವಿಧ ಪಲುಕು ಪ್ರಕಾರಗಳನ್ನು ಇಲ್ಲಿ ಕಲಿಸಲಾಗುತ್ತದೆ...’ ಅಂತೆಲ್ಲ ಔಪಚಾರಿಕವಾಗಿ ಹೇಳಿದರೆ ಸರಿಯಾಗಿ ಪರಿಚಯಿಸಿದಂತೆಯೇ ಆಗಲಿಕ್ಕಿಲ್ಲ. ಅಫೀಶಿಯಲ್ ರೆಕಾರ್ಡ್ಗಳಿಗಾಗಿ ಅದು ನೋಂದಾಯಿತ ಸಂಸ್ಥೆಯೇ ಇರಬಹುದು; ಆದರೆ ನಮ್ಮೆಲ್ಲರ ದೃಷ್ಟಿಯಲ್ಲಿ ಅದೊಂದು ಆತ್ಮೀಯ ಕುಟುಂಬವಿದ್ದಂತೆ. ನಾದತರಂಗಿಣಿಯೊಂದಿಗೆ ಒಡನಾಟವಿರುವ ವಿದ್ಯಾರ್ಥಿಗಳಿರಲಿ, ಸಂಗೀತಶಿಕ್ಷಕ/ಶಿಕ್ಷಕಿಯರಿರಲಿ, ಸ್ವಯಂಸೇವಕರಿರಲಿ, ಪೋಷಕರಿರಲಿ, ಅಥವಾ ನನ್ನಂಥ ಸಾಮಾನ್ಯ ಪ್ರೇಕ್ಷಕರಿರಲಿ ಎಲ್ಲರಿಗೂ ‘ಇದು ನಮ್ಮ ನಾದತರಂಗಿಣಿ’ ಎನ್ನುವ ಹೆಮ್ಮೆ. ಪ್ರತಿವರ್ಷ ಏಪ್ರಿಲ್ ಹೊತ್ತಿಗೆ ಜರುಗುವ ಪುರಂದರ-ತ್ಯಾಗರಾಜ ಸಂಗೀತೋತ್ಸವವಾಗಲಿ, ನವರಾತ್ರಿಯಲ್ಲಿ ನಡೆಯುವ ಸರಸ್ವತಿಪೂಜೆಯಾಗಲಿ, ಪ್ರತಿತಿಂಗಳೂ ಎನ್ನುವಮಟ್ಟಿಗೆ ಆಯೋಜಿತವಾಗುವ ಬೇರೆಬೇರೆ ಸಂಗೀತ ಕಾರ್ಯಕ್ರಮಗಳೇ ಆಗಲಿ- ಎಲ್ಲದರಲ್ಲೂ ಎದ್ದುಕಾಣುವ ಅಂಶವೆಂದರೆ ನಮ್ಮ ಮನೆಯದೇ ಸಮಾರಂಭವೇನೋ ಎನ್ನುವಂಥ ಆತ್ಮೀಯ ಸಂಭ್ರಮದ ವಾತಾವರಣ. ಬಹುಶಃ ಸಂಗೀತದ ಬಗ್ಗೆ ಅಲ್ಪಸ್ವಲ್ಪವಷ್ಟೇ ಅರಿವು-ಅಭಿಮಾನವಿರುವವರಿಗೂ ನಾದತರಂಗಿಣಿ ಅಪಾರವಾಗಿ ಹಿಡಿಸುವುದು ಅದೇಕಾರಣಕ್ಕೆ. ಇಲ್ಲಿ ವಾಷಿಂಗ್ಟನ್ ಸುತ್ತಮುತ್ತಲೂ ಎಂಥೆಂಥ ಅದ್ಭುತವಾದ ಅದ್ಧೂರಿಯ ಕಾರ್ಯಕ್ರಮಗಳು ನಾದತರಂಗಿಣಿ ಬ್ಯಾನರ್ನಡಿ ಪ್ರಸ್ತುತಗೊಂಡಿವೆಯೋ, ಇದುವರೆಗೂ ಯಾವ ಕಾರ್ಯಕ್ರಮಕ್ಕೂ ಪ್ರವೇಶಶುಲ್ಕ ಅಂತ ಇರಿಸಿದ್ದಿಲ್ಲ! ಸಂಗೀತಾಭಿಮಾನಿ ದಾನಿಗಳ ಔದಾರ್ಯ, ಉತ್ಸಾಹಿ ಸ್ವಯಂಸೇವಕರ ಸೇವಾಕಾರ್ಯ- ನಾದತರಂಗಿಣಿ ರಥದ ಮುಂದಿನೆರಡು ಗಾಲಿಗಳಿವು. ಮತ್ತೆ ಹಿಂದಿನೆರಡು ಗಾಲಿಗಳು? ವಿದುಷಿ ಉಷಾ ಚಾರ್ ಮತ್ತು ಅವರ ಪತಿ ಎ.ಆರ್.ಚಾರ್! ನಾದತರಂಗಿಣಿ ಬೇರೆಯಲ್ಲ, ಚಾರ್ ದಂಪತಿ ಬೇರೆಯಲ್ಲ. 1975ರಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಭಾರತೀಯ ಶಾಸ್ತ್ರೀಯ ಸಂಗೀತದಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ಸ್ಥಾನ ಪಡೆದ ಉಷಾ ಚಾರ್, ಆಕಾಶವಾಣಿಯ ‘ಎ’ ದರ್ಜೆ ಕಲಾವಿದೆ. ಬೆಂಗಳೂರು ನಿಲಯದಲ್ಲಿ ಪ್ರೊಗ್ರಾಮ್ ಎಕ್ಸಿಕ್ಯೂಟಿವ್ ಆಗಿಯೂ ಸೇವೆಸಲ್ಲಿಸಿದವರು. ಅಮೆರಿಕಾ ದೇಶಕ್ಕೆ ಬಂದಮೇಲೆ ಸಂಗೀತೋಪಾಸನೆ ನಿಲ್ಲಿಸಬಾರದೆಂದು ನಾದತರಂಗಿಣಿಯನ್ನು ಆರಂಭಿಸಿದರು. ತನ್ನ ಸಂಗೀತಗುರು ಆನೂರು ಎಸ್.ರಾಮಕೃಷ್ಣ ಅವರೇ ಇದಕ್ಕೆ ಪ್ರೇರಣೆ ಎನ್ನುತ್ತಾರೆ ಉಷಾ. ವೈಯಕ್ತಿಕ ನೆಲೆಯಲ್ಲಿ ಒಬ್ಬ ಸಾಮಾನ್ಯ ಸಂಗೀತಶಿಕ್ಷಕಿಯಾಗಷ್ಟೇ ಉಳಿದು ಅವರು ನಿಂತನೀರಾಗಲಿಲ್ಲ. ಬದಲಿಗೆ, ನಾದತರಂಗಿಣಿಯನ್ನು ಒಂದು ಬೃಹತ್ ಕುಟುಂಬವಾಗಿ ಬೆಳೆಸಿದರು. ಅವರ ಬಳಿ ಸಂಗೀತ ಕಲಿತ ವಿದ್ಯಾರ್ಥಿಗಳು ಈಗ ಸ್ವತಂತ್ರವಾಗಿ ಕಚೇರಿಗಳನ್ನು ಕೊಡುವಷ್ಟು, ಭಾರತದಿಂದ ಪ್ರವಾಸದಲ್ಲಿ ಬರುವ ದೊಡ್ಡದೊಡ್ಡ ಕಲಾವಿದರಿಗೆ ಸಮರ್ಥವಾಗಿ ಸಾಥ್ ಕೊಡುವಷ್ಟು ಪ್ರೌಢರಾಗಿದ್ದಾರೆ. ಉಷಾ ಚಾರ್ ಬಳಿ ಇನ್ನೂ ಸಂಗೀತ ಕಲಿಯುತ್ತಲೇ ತಾವೂ ಪುಟ್ಟಪುಟ್ಟ ಸಂಗೀತಶಾಲೆಗಳನ್ನು ಆರಂಭಿಸಿದ್ದಾರೆ. ಬೇರೆಲ್ಲ ಬಿಡಿ, ಅಮೆರಿಕನ್ ಮೂಲದ ಒಂದಷ್ಟು ವಿದ್ಯಾರ್ಥಿಗಳಿಗೂ ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಿಸಿ ಅವರಿಂದ ‘ಎಂದರೋ ಮಹಾನುಭಾವುಲು...’ ಪಂಚರತ್ನ ಕೃತಿ ಹಾಡಿಸಿದ ಹೆಮ್ಮೆ ಉಷಾ ಚಾರ್ ಅವರದು! ಇಷ್ಟಾದರೂ ತುಂಬಿದ ಕೊಡ ತುಳುಕುವುದಿಲ್ಲ ಎನ್ನುವಂತೆ ಸರಳ, ಸಹೃದಯ ವ್ಯಕ್ತಿತ್ವ. ಪ್ರತಿಯೊಬ್ಬ ಶಿಷ್ಯ/ಶಿಷ್ಯೆಯನ್ನೂ ತನ್ನ ಮಗುವಿನಂತೆ ಪ್ರೀತಿಸುವ ಅಪ್ರತಿಮ ಗುರು. ವಿದ್ಯಾರ್ಥಿಗಳಿಗಾದರೂ ಅಷ್ಟೇ, ಅವರು ಪ್ರೀತಿಯ ಉಷಾಆಂಟಿ, ಉಷಾಅತ್ತೆ. ಅಂದಹಾಗೆ ಚಾರ್ ದಂಪತಿಯ ಒಬ್ಬಳೇ ಮಗಳು ರಾಧಿಕಾ ಕೂಡ ಉಷಾ ಅವರಿಂದಲೇ ಸಂಗೀತ ಕಲಿತು, ಅಮೆರಿಕದಲ್ಲೂ ಭಾರತದಲ್ಲೂ ಕಚೇರಿಗಳನ್ನು ನಡೆಸುವಷ್ಟು ಪಳಗಿರುವ ವಯಲಿನ್ ಕಲಾವಿದೆ. ‘ಎಂದಿಗೂ ಅಸೂಯೆಪಡದಂಥ ಒಡಹುಟ್ಟಿದಾಕೆ ಈ ನಾದತರಂಗಿಣಿ’ ಎಂದು ನಸುನಗುತ್ತಾಳೆ ರಾಧಿಕಾ. ಸಂಗೀತ ಶಿಕ್ಷಣವೊಂದೇ ನಾದತರಂಗಿಣಿಯ ಚಟುವಟಿಕೆಯಲ್ಲ. ಭಾರತದಿಂದ ಬರುವ ಪ್ರವಾಸಿ ಕಲಾವಿದರ ಸಂಗೀತಕಚೇರಿಗಳನ್ನು ಏರ್ಪಡಿಸುವುದು, ಅಂಥವರಿಂದ ಇಲ್ಲಿನ ಆಸಕ್ತರಿಗಾಗಿ ತರಬೇತಿ ಕಾರ್ಯಾಗಾರಗಳನ್ನು ಆಯೋಜಿಸುವುದು, ಬೇಸಿಗೆ ರಜೆಯಲ್ಲಿ ಇಲ್ಲಿಂದ ಮಕ್ಕಳು ಭಾರತಕ್ಕೆ ಹೋಗುವಾಗ ಅಲ್ಲಿ ಸಂಗೀತವಿದ್ವಾಂಸರೊಡನೆ ಸಂಪರ್ಕ ಕಲ್ಪಿಸಿ ಹೆಚ್ಚಿನ ಕಲಿಕೆಗೆ ಕೈಮರವಾಗುವುದು- ಇಂಥವನ್ನೂ ಅದು ಅಕ್ಕರಾಸ್ಥೆಯಿಂದ ಮಾಡುತ್ತದೆ. ಪ್ರವೀಣ್ ಗೋಡ್ಖಿಂಡಿ, ಎಂ.ಡಿ.ಪಲ್ಲವಿ, ಅರುಣಕುಮಾರ್, ಡಿ.ಬಾಲಕೃಷ್ಣ, ಟಿ.ಎಸ್.ಸತ್ಯವತಿ, ನರಸಿಂಹುಲು ವಡವಟ್ಟಿ, ಸುಮಾ ಸುಧೀಂದ್ರ ಮುಂತಾಗಿ ಹಲವಾರು ಖ್ಯಾತ ಕಲಾವಿದರು ಬೇರೆಬೇರೆ ಸಂದರ್ಭಗಳಲ್ಲಿ ಅಮೆರಿಕಕ್ಕೆ ಭೇಟಿಯಿತ್ತಾಗ ಇಲ್ಲಿ ನಾದತರಂಗಿಣಿ ವೇದಿಕೆಯಲ್ಲಿ ಕಚೇರಿಗಳನ್ನು ಕೊಟ್ಟಿದ್ದಾರೆ. ಆರ್.ಕೆ.ಶ್ರೀಕಂಠನ್, ಆನೂರು ದತ್ತಾತ್ರೇಯ ಶರ್ಮಾ, ಅನಂತಕೃಷ್ಣ ಶರ್ಮಾ(ಶಿವು) ಮುಂತಾದ ಸಂಗೀತಶ್ರೇಷ್ಠರು ತರಬೇತಿ ಕಾರ್ಯಾಗಾರಗಳನ್ನೂ ನಡೆಸಿದ್ದಾರೆ. ಇದಲ್ಲದೇ ಬೆಂಗಳೂರಿನ ಗಾನಕಲಾ ಪರಿಷತ್, ಗಾಯನಸಮಾಜ, ಎಂ.ಎಸ್.ಶೀಲಾ ಅವರ ಹಂಸಧ್ವನಿ ಕ್ರಿಯೇಶನ್ಸ್, ಮೈಸೂರಿನ ಜೆಎಸ್ಎಸ್ ಮಿಷನ್ ಮತ್ತು ನಾದಬ್ರಹ್ಮ ಮುಂತಾದ ಸಂಸ್ಥೆಗಳೊಂದಿಗೆ ಕೈಜೋಡಿಸಿ ಸಂಗೀತಪ್ರಸರಣ ಚಟುವಟಿಕೆಗಳಲ್ಲೂ ನಾದತರಂಗಿಣಿ ಭಾಗಿಯಾಗಿದೆ. ಜತೆಯಲ್ಲೇ ಇಲ್ಲಿನ ಕಾವೇರಿ ಕನ್ನಡ ಸಂಘವೂ ಸೇರಿದಂತೆ ಇತರ ಸಾಂಸ್ಕೃತಿಕ/ಕಲಾವೇದಿಕೆಗಳಲ್ಲಿ ಪ್ರಸ್ತುತಗೊಳ್ಳುವ ನೃತ್ಯನಾಟಕಗಳಿಗೆ, ಅಮೆರಿಕನ್ನರೂ ವೀಕ್ಷಿಸಿ ಆನಂದಿಸಿದ ‘ಶಾಂತಲಾ’, ‘ಏಕಲವ್ಯ’ ಮುಂತಾದ ಇಂಗ್ಲಿಷ್ ಡ್ಯಾನ್ಸ್ಡ್ರಾಮಾಗಳಿಗೂ- ಸಂಗೀತ ಸಂಯೋಜನೆ ಮಾಡಿದೆ. ಓಹಯೊ ಸ್ಟೇಟ್ ಆರ್ಟ್ ಕೌನ್ಸಿಲ್, ಮೇರಿಲ್ಯಾಂಡ್ ಸ್ಟೇಟ್ ಆರ್ಟ್ ಕೌನ್ಸಿಲ್ ಮುಂತಾದ ಕಲಾಪೋಷಕ ಅಮೆರಿಕನ್ ಸಂಘಸಂಸ್ಥೆಗಳು ಉಷಾ ಚಾರ್ ಪ್ರತಿಭೆಯನ್ನು ಗುರುತಿಸಿ ಅವರನ್ನು ಗೌರವಿಸಿವೆ. ಆ ದೃಷ್ಟಿಯಿಂದ ನಾದತರಂಗಿಣಿ ಮತ್ತು ಉಷಾ ಚಾರ್ ಇಂಡೋ-ಅಮೆರಿಕನ್ ಸಾಂಸ್ಕೃತಿಕ ವಿನಿಮಯದ ಸೇತುವೆಯಿದ್ದಂತೆ.

Saturday Mar 31, 2012
Midukuvudu Endarenu
Saturday Mar 31, 2012
Saturday Mar 31, 2012
ದಿನಾಂಕ 1 ಎಪ್ರಿಲ್ 2012ರ ಸಂಚಿಕೆ...
ಮಿಡುಕುವುದು ಎಂದರೇನು?
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] * * * ಅರ್ಘ್ಯವ ಕೊಡುತಿಹ ಸಮಯವ ನೋಡಿ ಗಣಪತಿ ಕರೆದನು ರಾವಣನ... ಬರಲಾಗದೆ ರಾವಣ ಮಿಡುಕಿದನು... ಲಿಂಗವು ಧರೆಯನು ಸೇರಿತು... ನೀವು ಗೋಕರ್ಣದ ಪುರಾಣ ಕಥನವನ್ನು ಆಲಿಸಿ ಜೀವನ ಪಾವನಗೊಳಿಸಿದ್ದೀರಾದರೆ ನಿಮಗೆ ಈ ಸಾಲುಗಳು ನೆನಪಿರುತ್ತವೆ. ಎಪ್ಪತ್ತು-ಎಂಬತ್ತರ ದಶಕದಲ್ಲಿ ಬಂದ ಇವೆಲ್ಲ ಕೆಲವು ಎವರ್ಗ್ರೀನ್ ಭಕ್ತಿಗೀತೆಗಳು, ಲಾವಣಿಯ ರೂಪದಲ್ಲಿ ಕಥೆ ಹೇಳುವಂಥವು, ಆವಾಗಿನ ಚಿತ್ರಗೀತೆಗಳಂತೆಯೇ ಪ್ರಸಿದ್ಧವಾಗಿ ಜನಮಾನಸದಲ್ಲಿ ನೆಲೆನಿಂತವುಗಳು. ಮೇಲೆ ಉಲ್ಲೇಖಿಸಿದ ಗೋಕರ್ಣ ಪುರಾಣ ಕಥನ, ವಿನಾಯಕ ಚೌತಿಯಂದು ಕೇಳಿಬರುವ ಸ್ಯಮಂತಕೋಪಾಖ್ಯಾನ ಗೀತೆ, ಅದೇಥರದ ಮತ್ತೂ ಕೆಲವಾರು ಒಳ್ಳೊಳ್ಳೆಯ ಹಾಡುಗಳು. ಅವೆಲ್ಲವನ್ನು ಅಜರಾಮರವಾಗಿಸಿದ್ದು ರೇಡಿಯೊ. ಅದಕ್ಕಿಂತಲೂ ಹೆಚ್ಚಾಗಿ ದೇವಸ್ಥಾನಗಳಲ್ಲಿ, ಸಿನೆಮಾ ಟೆಂಟ್ಗಳಲ್ಲಿ ಮತ್ತು ಸಮಾರಂಭಗಳ ಚಪ್ಪರಗಳಲ್ಲಿ ಮೊಳಗುವ ಲೌಡ್ಸ್ಪೀಕರ್ಗಳು. ಈಗಲೂ ಇಂಥ ಹಾಡುಗಳನ್ನು ಕೇಳುವುದೆಂದರೆ, ಜೊತೆಯಲ್ಲೇ ಗುನುಗುವುದೆಂದರೆ, ಹಾಯೆನಿಸುವ ವಿಶಿಷ್ಟ ಅನುಭವ. ಒಂಥರದ ನೊಸ್ಟಾಲ್ಜಿಕ್ ರೋಮಾಂಚನ. ಅದಕ್ಕೋಸ್ಕರವೇ ನನ್ನ ಐಫೋನ್ನ ಸಂಗೀತ ಉಗ್ರಾಣದಲ್ಲೂ ಇವಕ್ಕೆ ಒಂದಿಷ್ಟು ಗಿಗಾಬೈಟ್ಗಳ ಮೀಸಲು ಸ್ಥಾನ. ಐಫೋನ್/ಐಪಾಡ್ ಅಥವಾ ಈಗ ಸ್ವಲ್ಪ ಹಳೇ ಫ್ಯಾಷನ್ ಎನಿಸಿರುವ ವಾಕ್ಮನ್ನೇ ಆಗಲಿ, ‘ತಲೆಯಾಲಿಕೆ’ (ಹೆಡ್ಫೋನ್ಸ್) ಸಿಕ್ಕಿಸಿಕೊಂಡು ಹಾಡು ಕೇಳಿದರೆ ಒಂದು ವಿಶೇಷ ಫಾಯಿದೆ ಇದೆ. ಅದೇನೆಂದರೆ ಹಾಡಿನ ಸಾಹಿತ್ಯದ ಒಂದೊಂದು ಪದ, ಒಂದೊಂದು ಅಕ್ಷರವೂ ಸ್ಪಷ್ಟವಾಗಿ ತಲೆಯೊಳಗೆ ಹೊಕ್ಕುತ್ತದೆ. ಕೆಲವೊಮ್ಮೆ ಯಾವುದೋ ಒಂದು ಪದ ತಲೆಯೊಳಗೆ ಹೊಕ್ಕಿದ್ದು ಅಲ್ಲಿಯೇ ಗುಂಗಿಹುಳ ಆಗಿಬಿಡುತ್ತದೆ. ಮೊನ್ನೆ ಒಂದುದಿನ ಅದೇ ಆಯ್ತು. ಹೆಡ್ಫೋನ್ಸ್ ಹಾಕ್ಕೊಂಡು ‘ಇದು ಗೋಕರ್ಣದ ಪುರಾಣ ಕಥನ... ಆಲಿಸೆ ಜೀವನ ಪಾವನ...’ ಆಲಿಸ್ತಾ ಇದ್ದೆನಾ, ಜೀವನವೇನೋ ಪಾವನವಾಯ್ತು ಆದರೆ ಹಾಡಿನಲ್ಲಿದ್ದ ‘ಮಿಡುಕಿದನು’ ಎಂಬ ಪದ ಮಾತ್ರ ಜೀವಸಮೇತ ತಲೆಯಲ್ಲುಳಿಯಿತು! ಅರ್ಥಾತ್ ಯಾಕೋ ವಿಶೇಷವಾಗಿ ಕಂಡಿತು. ಹಾಡಿನಲ್ಲಿ ಅದೇನೂ ಅರ್ಥವಾಗದಂಥ ಪದವಲ್ಲ. ಸಂದರ್ಭ ಸನ್ನಿವೇಶದಿಂದಲೇ ಅರ್ಥ ಮಾಡಿಕೊಳ್ಳಬಹುದು. ವಟುರೂಪಿ ಗಣಪನ ಕೈಯಲ್ಲಿ ಆತ್ಮಲಿಂಗವನ್ನು ಕೊಟ್ಟಿಟ್ಟು ರಾವಣೇಶ್ವರ ಸಂಧ್ಯಾವಂದನೆಗೆ ಕೂತಿದ್ದಾನೆ. ಗಾಯತ್ರೀಮಂತ್ರ ಉಚ್ಚರಿಸುತ್ತ ಅರ್ಘ್ಯವನ್ನು ಸಮರ್ಪಿಸುವ ವೇಳೆಗೆ ಸರಿಯಾಗಿ ಗಣಪ ಅವನನ್ನು ಕರೆದಿದ್ದಾನೆ. ಆಫ್ಕೋರ್ಸ್, ಗಣಪನದು ಪೂರ್ವನಿಯೋಜಿತ ಕೃತ್ಯ, ಆದರೆ ರಾವಣ ತಬ್ಬಿಬ್ಬು. ಸಂಧ್ಯಾವಂದನೆ ಅರ್ಧದಲ್ಲಿ ಬಿಟ್ಟುಬರುವಂತಿಲ್ಲ, ಬರದೇ ಇದ್ದರೆ ಕಿಲಾಡಿ ಗಣಪ ಆತ್ಮಲಿಂಗವನ್ನು ನೆಲದ ಮೇಲಿಡದೆ ಬಿಡುವುದಿಲ್ಲ. ಅಂಥದೊಂದು ಸಂದಿಗ್ಧ ಪರಿಸ್ಥಿತಿಯಲ್ಲಿ ರಾವಣ ‘ಮಿಡುಕಿದನು’! ಅಂದರೆ, ಚಡಪಡಿಸಿದನು, ಪೇಚಾಡಿದನು, ಕೈಕೈ ಹಿಸುಕಿಕೊಂಡನು ಎಂದು ಅರ್ಥೈಸಬಹುದು. ನಾವಾಗಿದ್ರೆ ‘ಅಯ್ಯೋ ರಾಮಾ’ ಎಂದೂ ಹೇಳುತ್ತಿದ್ದೆವೋ ಏನೋ ಆದರೆ ರಾವಣ ಹಾಗೆ ಹೇಳಿರಲಿಕ್ಕಿಲ್ಲ ಎಂದುಕೊಳ್ಳೋಣ. ಆಗಿನ್ನೂ ಅವನಿಗೆ ರಾಮನ ಪರಿಚಯವೂ ಆಗಿರಲಿಲ್ಲವಲ್ಲ!
Version: 20241125