ಪದ-ಶ್ರಾವ್ಯ

ಈಗ ಆಡಿಯೋ ಟಚ್!

28
Feb 2013
Scilntillating Shuddha Dhanyasi
Posted in DefaultTag by sjoshi at 9:48 pm

ದಿನಾಂಕ  7 ಮಾರ್ಚ್ 2013

ಇದೋ ಆಲಿಸಿ- ‘ಶುದ್ಧ ಧನ್ಯಾಸಿ’!

* ಶ್ರೀವತ್ಸ ಜೋಶಿ

ರಾಗರಸಾಯನ ಸರಣಿಯಲ್ಲಿ ಇಲ್ಲಿಯತನಕ ಪ್ರಸ್ತಾಪಿಸಿದ್ದ ಶಿವರಂಜನಿ, ಕಲ್ಯಾಣಿ, ಮೋಹನ, ಮಧ್ಯಮಾವತಿ, ಅಭೇರಿ, ಮತ್ತು ಹಿಂದೋಳ- ಇವುಗಳ ಸಾಲಿನಲ್ಲೇ ನಿಲ್ಲುವ ಇನ್ನೊಂದು ರಾಗ ‘ಶುದ್ಧ ಧನ್ಯಾಸಿ’.  ಇವೆಲ್ಲ ರಾಗಗಳು ಸಂಗೀತಜ್ಞಾನ ಇದ್ದವರಿಗಷ್ಟೇ ಅಲ್ಲ, ನಮ್ಮಂಥ ಪಾಮರರನ್ನೂ ಆಕರ್ಷಿಸುವ ಮತ್ತು ರಂಜಿಸುವ ಶಕ್ತಿಯುಳ್ಳವು . ಶಾಸ್ತ್ರೀಯವಾಗಿಯೂ ಇವುಗಳಲ್ಲಿ ಪರಸ್ಪರ ಹೋಲಿಕೆಗಳು ಕಂಡುಬರುತ್ತವೆ. ಈ ಸರಣಿಯದು ಶಾಸ್ತ್ರೀಯ ವಿಚಾರಮಂಥನಕ್ಕಿಂತ ಹೊಸಬರಿಗೆ, ಸಂಗೀತ ಹಾಡಲಿಕ್ಕಲ್ಲದಿದ್ದರೂ ಕೇಳಲಿಕ್ಕೆ ಆಸಕ್ತಿಯುಳ್ಳವರಿಗೆ, ಆ ಆಸಕ್ತಿಯನ್ನು ಉದ್ದೀಪನಗೊಳಿಸುವ ಉದ್ದೇಶ. ಅದೇ ಜಾಡಿನಲ್ಲಿ ಇವತ್ತಿನ ಪ್ರಸ್ತುತಿ: "ಇದೋ ಆಲಿಸಿ- ಶುದ್ಧ ಧನ್ಯಾಸಿ"

"ಸ ಗ2 ಮ1 ಪ ನಿ2 ಸ" ಆರೋಹಣ ಮತ್ತು "ಸ ನಿ2 ಪ ಮ1 ಗ2 ಸ" ಅವರೋಹಣ - ಇದು ಶುದ್ಧ ಧನ್ಯಾಸಿ  ರಾಗದ ಲಕ್ಷಣ. ಐದೇ ಸ್ವರಗಳು. ಐದು ಸ್ವರಗಳ ರಾಗಗಳನ್ನು ‘ಔಡವ ರಾಗ’ ಎನ್ನುತ್ತಾರೆ. ಶಿವರಂಜನಿ, ಮೋಹನ, ಮಧ್ಯಮಾವತಿ, ಹಿಂದೋಳ ಸಹ ಔಡವರಾಗಗಳೇ.  ಇವೆಲ್ಲದರ ಇನ್ನೊಂದು ಲಕ್ಷಣವೆಂದರೆ ಆರೋಹಣದ ಸ್ವರಗಳೇ ಹಿಮ್ಮುಖ ಸಂಚರಿಸಿದಾಗ ಅವರೋಹಣ ಆಗುತ್ತದೆ. ಅಂಥ ಸಮಮಿತಿ(symmetry)ಯು ರಾಗದ ಆಕರ್ಷಣೆಯನ್ನು ಹೆಚ್ಚಿಸುತ್ತದೆ. ಕಲಿಯುವವರಿಗೂ ಸುಲಭವೆನಿಸುತ್ತದೆ.

ಶುದ್ಧ ಧನ್ಯಾಸಿ ರಾಗಕ್ಕೆ ಉದಯರವಿಚಂದ್ರಿಕಾ ಎಂದು ಇನ್ನೊಂದು ಹೆಸರೂ ಇದೆ. ಹಿಂದುಸ್ಥಾನಿಯಲ್ಲಿ ಶುದ್ಧಧನ್ಯಾಸಿಗೆ ಸಮಾನಾಂತರವಾದ ರಾಗದ ಹೆಸರು ‘ಧನಿ’ ಎಂದು (‘ಧಾನಿ’ ಎಂದೂ ಹೇಳುತ್ತಾರೆ). ‘ಧನ್ಯಾಸಿ’ ಎಂಬ ಹೆಸರಿನ ಇನ್ನೊಂದು ರಾಗವೂ ಕರ್ನಾಟಕ ಶಾಸ್ತ್ರೀಯ ಪದ್ಧತಿಯಲ್ಲಿದೆ. ಧನಿ-ಧನ್ಯಾಸಿ-ಶುದ್ಧಧನ್ಯಾಸಿ ಈ ಹೆಸರುಗಳಲ್ಲಿನ ಸಾಮಾನ್ಯ ಅಂಶವಾದ ‘ಧನಿ’ ಬಹುಶಃ ಧ್ವನಿ (sound ಎಂಬ ಅರ್ಥದಲ್ಲಿ) ಶಬ್ದದ ಅಪಭ್ರಂಶವಿರಲೂಬಹುದು!

ಹಿಂದೋಳ (ಮಾಲಕೌಂಸ್) ಹೇಗೆ ಭಕ್ರಿರಸಪ್ರಧಾನ ರಾಗವೋ, ಶುದ್ಧಧನ್ಯಾಸಿ ಪ್ರೇಮರಸ ಪ್ರಧಾನ ಎನ್ನುತ್ತಾರೆ ವಿದ್ವಾಂಸರು.  ಸಮಯಕ್ಕನುಗುಣವಾಗಿ ರಾಗಗಳನ್ನು ವರ್ಗೀಕರಿಸುವವರು ಶುದ್ಧ ಧನ್ಯಾಸಿಯನ್ನು ಮಧ್ಯಾಹ್ನ ಅಥವಾ ಅಪರಾಹ್ನದ ರಾಗ ಎಂದು ಗುರುತಿಸುತ್ತಾರೆ. ಸಂಗೀತಕಚೇರಿಯಲ್ಲಿ ಹೆಚ್ಚಾಗಿ ಕಚೇರಿಯ ಮಧ್ಯಭಾಗ ಅಥವಾ ಉತ್ತರಾರ್ಧದಲ್ಲಿ ವಿಸ್ತಾರವಾದ ಪ್ರಸ್ತುತಿಗೆ  ಈ ರಾಗವನ್ನು ಆಯ್ದುಕೊಳ್ಳುತ್ತಾರೆ. ಮಹಾರಾಜಪುರಂ ಸಂತಾನಂರಂತಹ ಮಹಾನ್ ಕಲಾವಿದರು ಸಂಗೀತಕಚೇರಿಯಲ್ಲಿ ಸುಮಾರು ಒಂದು ಗಂಟೆಯುದ್ಧಕ್ಕೂ ಶುದ್ಧಧನ್ಯಾಸಿಯನ್ನು ವಿಸ್ತರಿಸಬಲ್ಲರು! ಶ್ರೋತೃಗಳ ಮೈಮನಗಳನ್ನು ‘ಸೆರೆಹಿಡಿದಿಟ್ಟು’ಕೊಳ್ಳಬಲ್ಲರು! ಅಷ್ಟೂ ಆಕರ್ಷಣಾ ಶಕ್ತಿಯಿದೆ ಈ ರಾಗಕ್ಕೆ.

Udayaravichandrika.png

* * *

ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಶುದ್ಧಧನ್ಯಾಸಿ ರಾಗ ಎಂದೊಡನೆ ತತ್‌ಕ್ಷಣ ನೆನಪಾಗುವ ಅತ್ಯಂತ ಜನಪ್ರಿಯ ಕೃತಿಯೆಂದರೆ ಪುರಂದರದಾಸರ ರಚನೆ “ನಾರಾಯಣಾ ನಿನ್ನ ನಾಮದ ಸ್ಮರಣೆಯ ಸಾರಾಮೃತವು ಎನ್ನ ನಾಲಿಗೆಗೆ ಬರಲಿ..." ಇದು ಎಷ್ಟು ಜನಪ್ರಿಯವೆಂದರೆ ಕನ್ನಡೇತರ ಭಾಷೆಗಳ ಕಲಾವಿದರೂ, ಸಂಗೀತಗುರುಗಳೂ ಶುದ್ಧಧನ್ಯಾಸಿ ರಾಗವನ್ನು ಕಲಿಸುವಾಗ/ವಿವರಿಸುವಾಗ ಇದೇ ಕೀರ್ತನೆಯನ್ನು ಎತ್ತಿಕೊಳ್ಳುತ್ತಾರೆ. ಸಂಗೀತಕಚೇರಿಗಳಲ್ಲಿ ಈ ಕೀರ್ತನೆಯನ್ನು ಹಾಡಿ ನಾರಾಯಣ ನಾಮಾಮೃತದಿಂದ ಶ್ರೋತೃಗಳ ಮನತಣಿಸುತ್ತಾರೆ. ಅಂದಮೇಲೆ ಶುದ್ಧಧನ್ಯಾಸಿ ರಾಗರಸಾಯನ ಕಾರ್ಯಕ್ರಮದ ಶುಭಾರಂಭವನ್ನು ಈ ಕೀರ್ತನೆಯಿಂದಲೇ ಮಾಡುವುದು ಒಳ್ಳೆಯ ಕೆಲಸ. ಅದರಲ್ಲೂ ಸ್ವಲ್ಪ ವಿಶಿಷ್ಟತೆ ಇರಲಿ ಎನ್ನುವುದಕ್ಕೋಸ್ಕರ ಅಮೆರಿಕನ್ನಡಿಗ ಕಲಾವಿದೆಯರ ಪ್ರಸ್ತುತಿಯನ್ನು ಹುಡುಕಿತಂದಿದ್ದೇನೆ! ಶಿಕಾಗೊದಲ್ಲಿನ ವಿದ್ಯಾರಣ್ಯ ಕನ್ನಡ ಕೂಟದ ‘ದಾಸ ದಿನಾಚರಣೆ’ ಸಂಗೀತೋತ್ಸವ ಕಾರ್ಯಕ್ರಮದಲ್ಲಿ ಶ್ರುತಿರಾಜ್ ಮತ್ತು ಶ್ರಿಯಾರಾಜ್ ಸಹೋದರಿಯರು ಹಾಡಿದ “ನಾರಾಯಣಾ ನಿನ್ನ ನಾಮದ ಸ್ಮರಣೆಯ..." ಪಕ್ಕವಾದ್ಯದಲ್ಲಿ ವಯಲಿನ್- ಮಂಜುಳಾ ರಾವ್; ಮೃದಂಗ- ಆತ್ರೇಯ ನಾಥನ್.

*** *** *** *** *** *** ***

ಇದೇ “ನಾರಾಯಣಾ ನಿನ್ನ ನಾಮದ ಸ್ಮರಣೆಯ..." ಕೀರ್ತನೆಯನ್ನು ಈಗ ವೇಣುವಾದನದಲ್ಲಿ ಕೇಳೋಣ. ಕಲಾವಿದರು ಆರ್.ತ್ಯಾಗರಾಜನ್. ಇವರು ಪ್ರಖ್ಯಾತ ವೇಣುವಾದಕ ಎನ್.ರಮಣಿಯವರ ಮಗ.

*** *** *** *** *** *** ***

ಶುದ್ಧಧನ್ಯಾಸಿ ರಾಗದ ಜನಪ್ರಿಯ ಕೃತಿಗಳಲ್ಲಿ ಎರಡನೆಯ ಸ್ಥಾನ ಬಹುಶಃ “ಹಿಮಗಿರಿ ತನಯೇ ಹೇಮಲತೇ..." ಕೃತಿಗೇ ಸಲ್ಲುತ್ತದೆ. ಇದು ಹರಿಕೇಸನಲ್ಲೂರ್ ಮುತ್ತಯ್ಯ ಭಾಗವತರ್ ಅವರ ರಚನೆ. ಸಂಸ್ಕೃತ ಭಾಷೆಯಲ್ಲಿದೆ. ಮುತ್ತಯ್ಯ ಭಾಗವತರು ತೆಲುಗು ಮತ್ತು ಕನ್ನಡದಲ್ಲೂ ( ಭುವನೇಸ್ವರಿಯ ನೆನೆ ಮಾನಸವೇ...) ಸೇರಿದಂತೆ ಸುಮಾರು 400 ಕೃತಿಗಳನ್ನು ರಚಿಸಿದ ಮಹಾನ್ ಕಲಾವಿದ. ಮೋಹನಕಲ್ಯಾಣಿ ಸೇರಿದಂತೆ ಸುಮಾರು 20 ಹೊಸ ರಾಗಗಳನ್ನು ಕರ್ನಾಟಕ/ಹಿಂದುಸ್ಥಾನಿ ಶಾಸ್ತ್ರೀಯ ಪದ್ದತಿಗೆ ಪರಿಚಯಿಸಿಕೊಟ್ಟ ಖ್ಯಾತಿ ಅವರದು. ಪ್ರಸ್ತುತ "ಹಿಮಗಿರಿತನಯೇ ಹೇಮಲತೇ..." ಕೀರ್ತನೆ ನಾದಸ್ವರ ಮತ್ತು ಸ್ಯಾಕ್ಸೊಫೋನ್ ಕಲಾವಿದರ ಅಚ್ಚುಮೆಚ್ಚಿನದು. ಆದ್ದರಿಂದ ಸ್ಯಾಕ್ಸೊಫೋನ್ ವಾದನದಲ್ಲೇ ಇದನ್ನು ಮೊದಲಿಗೆ ಆನಂದಿಸೋಣ. ಕಲಾವಿದರು ಶ್ರೀಧರ ಸಾಗರ್. ಇವರು ಪ್ರಖ್ಯಾತ ಸ್ಯಾಕ್ಸೊಫೋನ್ ಕಲಾವಿದ ಪದ್ಮಶ್ರೀ ಡಾ.ಕದ್ರಿ ಗೋಪಾಲನಾಥರ ಶಿಷ್ಯ.

*** *** *** *** *** *** ***

ಈಗ, ಎಸ್.ಸೌಮ್ಯಾ ಅವರ ಗಾಯನದಲ್ಲಿ “ಹಿಮಗಿರಿ ತನಯೇ ಹೇಮಲತೇ..."

*** *** *** *** *** *** ***

ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಜನಪ್ರಿಯ ಕೃತಿಗಳಲ್ಲೊಂದಾದ  “ಎಂತ ನೇರ್ಚಿನಾ ಎಂತ ಚೂಚಿನಾ..." ತ್ಯಾಗರಾಜರ ರಚನೆಯನ್ನೂ ಇಲ್ಲಿ ನೆನೆಸಿಕೊಳ್ಳಬೇಕು. ಕಟ್ಟಾ ಸಂಪ್ರದಾಯವಾದಿ ಸಂಗೀತವಿದ್ವಾಂಸರು “ಇದು ಶುದ್ಧಧನ್ಯಾಸಿ ರಾಗದಲ್ಲಿಲ್ಲ, ಉದಯರವಿಚಂದ್ರಿಕಾ  ರಾಗದಲ್ಲಿರುವ ಕೃತಿ" ಎಂದು ವಾದಿಸಬಹುದು. ಆದರೆ ನಮ್ಮಂಥ ಪಾಮರರಿಗೆ ಅವೆರಡೂ ಒಂದೇ ರಾಗದ ಬೇರೆಬೇರೆ ಹೆಸರುಗಳು. ಶುದ್ಧಧನ್ಯಾಸಿ ಮತ್ತು ಉದಯರವಿಚಂದ್ರಿಕಾ ಎರಡರಲ್ಲೂ ಅವೇ ಐದು ಸ್ವರಗಳು. ಅದೇರೀತಿಯ ಆರೋಹಣ ಅವರೋಹಣ. ಚೂರೇಚೂರು ವ್ಯತ್ಯಾಸವೆಂದರೆ ಶುದ್ಧಧನ್ಯಾಸಿಯಲ್ಲಿ ಗಮಕ ಹೆಚ್ಚು (analog wave ಇದ್ದಂತೆ), ಉದಯರವಿಚಂದ್ರಿಕಾದಲ್ಲಿ ಸ್ವರಗಳ ಮಧ್ಯೆ ಗಮಕ ಅಷ್ಟೇನೂ ಇರುವುದಿಲ್ಲ (ಹಾಗಾಗಿ digital waveನಂತೆ ಅಂದುಕೊಳ್ಳೋಣ) ಎನ್ನುತ್ತಾರೆ ಸಂಗೀತಜ್ಞಾನವಿರುವ ನನ್ನ ಒಬ್ಬ ಎಲೆಕ್ಟ್ರಾನಿಕ್ಸ್ ಎಂಜಿನಿಯರ್ ಮಿತ್ರರು.

ಈಗ ಆನಂದಿಸೋಣ, ಉದಯರವಿಚಂದ್ರಿಕಾ (ಅಂದರೆ ಗಮಕಗಳಿಲ್ಲದ ಶುದ್ಧಧನ್ಯಾಸಿ) ರಾಗದಲ್ಲಿ  ಪ್ರಿಯಾ ಸಹೋದರಿಯರು ಹಾಡಿರುವ “ಎಂತ ನೇರ್ಚಿನಾ ಎಂತ ಚೂಚಿನಾ..."

*** *** *** *** *** *** ***

ಅದೇ “ಎಂತ ನೇರ್ಚಿನ ಎಂತ ಚೂಚಿನ..." ಕೃತಿ ನಾದಸ್ವರ ವಾದನದಲ್ಲಿ. ಕಲಾವಿದರು ಟಿ.ಎನ್.ಪಳನಿಸ್ವಾಮಿ.

*** *** *** *** *** *** ***

ಮುಂದಿನ ಕೃತಿ, ಅನ್ನಮಾಚಾರ್ಯರ ರಚನೆ "ಭಾವಮುಲೋನ ಬಾಹ್ಯಮುಲಂದುನು". ಅಂತರ್ಜಾಲದಲ್ಲಿ ಹುಡುಕಿದಾಗ ಈ ಕೃತಿಯನ್ನು ಬೇರೆಬೇರೆ ಕಲಾವಿದರು ಬಹಳ ಮಧುರವಾಗಿಯೇ ಹಾಡಿರುವಂಥ ವಿಡಿಯೋಗಳು ಸಿಕ್ಕಿದವು, ಆದರೆ ರಾಗರಸಾಯನದ ರುಚಿ ಹೆಚ್ಚುವುದು ಎಂ.ಎಸ್.ಸುಬ್ಬಲಕ್ಷ್ಮಿಯವರ ಗಾಯನವಿದ್ದರೆ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯವಾದ್ದರಿಂದ ಎಂ.ಎಸ್.ಸುಬ್ಬಲಕ್ಷ್ಮಿಯವರು ಹಾಡಿರುವ ಆವೃತ್ತಿಯೇ ನನ್ನ ಆಯ್ಕೆ. ಬಹುಶಃ ಈ ಕೃತಿಯನ್ನು ಕೇಳಿದರೆ ಅದು ಒಳ್ಳೆಯದೇ ಆಯ್ಕೆ ಎಂದು ನಿಮಗೂ ಅನಿಸುತ್ತದೆ.

*** *** *** *** *** *** ***

ಈಗ ಕುನ್ನಕ್ಕುಡಿ ವೈದ್ಯನಾಥನ್ ಅವರ ವಯಲಿನ್ ವಾದನದಲ್ಲಿ "ಭಾವಮುಲೋನ ಬಾಹ್ಯಮುಲಂದುನು" ಕೇಳಿ ಆನಂದಿಸೋಣ. ದೇವರ ಪಾಲಕಿ ಉತ್ಸವದ ದೃಶ್ಯವೈಭವಕ್ಕೆ ಇದನ್ನು ಹಿನ್ನೆಲೆಸಂಗೀತವಾಗಿ ಅಳವಡಿಸಿಕೊಂಡಿರುವ ಈ ವಿಡಿಯೋ ಸಹ ನೋಡಲು ಚೆನ್ನಾಗಿದೆ!

*** *** *** *** *** *** ***

ಮೈಸೂರು ವಾಸುದೇವಾಚಾರ್ಯರ ರಚನೆ “ಶ್ರೀ ಹರಿ ವಲ್ಲಭೇ..." ಕೂಡ ಶುದ್ಧಧನ್ಯಾಸಿ ರಾಗದ ಪ್ರಸಿದ್ಧ ಕೃತಿಗಳಲ್ಲೊಂದು. ಇಲ್ಲಿ ಈ ವಿಡಿಯೋದಲ್ಲಿ ಕೆನಡಾ ದೇಶದ ಹಿಂದೂದೇವಸ್ಥಾನವೊಂದರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಓರ್ವ ಕಲಾವಿದೆ ಬಹಳ ಚೆನ್ನಾಗಿ ಆ ಕೃತಿಯನ್ನು ಹಾಡಿದ್ದಾರೆ. ಕಲಾವಿದೆಯ ಮತ್ತು ಪಕ್ಕವಾದ್ಯದವರ ಹೆಸರು-ವಿವರಗಳು ವಿಡಿಯೋದಲ್ಲಿಲ್ಲವಾದ್ದರಿಂದ ಇಲ್ಲಿ ನಮೂದಿಸುತ್ತಿಲ್ಲ.

*** *** *** *** *** *** ***

ಶಾಸ್ತ್ರೀಯ ಸಂಗೀತದ ಅದಷ್ಟು ಪ್ರಸ್ತುತಿಗಳ ನಂತರ ಈಗ ಲಘು ಶಾಸ್ತ್ರೀಯ/ಜನಪದ/ಚಲನಚಿತ್ರ ಸಂಗೀತದತ್ತ ಹೊರಳೋಣ. ಶುದ್ಧ ಧನ್ಯಾಸಿ ರಾಗ ಆಧರಿಸಿದ ಒಂದು ಪ್ರಸಿದ್ಧ ಜನಪದಗೀತೆಯನ್ನು ಸವಿಯೋಣ.  “ಎಲ್ಲೋ ಜೋಗಪ್ಪ ನಿನ್ನರಮನೆ..." - ಇದು ಬಿ.ಆರ್.ಛಾಯಾ ಮತ್ತು ಸಂಗಡಿಗರು ಹಾಡಿರುವ ಆವೃತ್ತಿ. (ಇದು ಶುದ್ಧಧನ್ಯಾಸಿ ರಾಗದಲ್ಲಿದೆ ಎಂದಮಾತ್ರಕ್ಕೇ ‘ಜೋಗಿ’ ಚಿತ್ರದಲ್ಲಿ ಈ ಹಾಡನ್ನು ಅಳವಡಿಸಿಕೊಂಡು ಬೇರೆರೀತಿಯಲ್ಲಿ ಹಾಡಿರುವುದನ್ನೂ ಶುದ್ಧಧನ್ಯಾಸಿ ರಾಗದ್ದು ಎಂದು ಹೇಳಲಾಗದು!)

*** *** *** *** *** *** ***

ಚಿತ್ರಗೀತೆಗಳಲ್ಲೂ ಸಾಕಷ್ಟು ಬಳಕೆಯಾಗುವ ರಾಗ ಶುದ್ಧಧನ್ಯಾಸಿ. ಆದರೆ ಚಿತ್ರಗೀತೆಗಳ ವಿಚಾರದಲ್ಲಿ ಏನಾಗುತ್ತದೆಂದರೆ ಇಡೀ ಹಾಡು ಒಂದೇ ರಾಗದಲ್ಲಿ ಇರುವುದಿಲ್ಲ. ಪಲ್ಲವಿ ಒಂದು ರಾಗದಲ್ಲಿದ್ದರೆ ಚರಣ ಬೇರೆಯೇ ರಾಗದಲ್ಲಿರುವುದೂ ಇದೆ. ಅಥವಾ ಅಲ್ಲಿಇಲ್ಲಿ ಸ್ವರವ್ಯತ್ಯಾಸ ಆಗಿ ಇಂಥದೇ ರಾಗ ಎಂದು ಹೇಳಲಾಗದ ಸ್ಥಿತಿ ಆಗುವುದೂ ಇದೆ. ಅಷ್ಟರಮಟ್ಟಿಗೆ ಔದಾರ್ಯ ತೋರಿಸಿದರೆ ಈ ಕೆಳಗಿನ ಚಿತ್ರಗೀತೆಗಳು ಶುದ್ಧಧನ್ಯಾಸಿ ರಾಗದವು ಎಂದೇ ಹೇಳಬಹುದು:

ನನ್ನ ತಮ್ಮ’ ಚಿತ್ರದ ಡಾ.ರಾಜಕುಮಾರ್ ಅಭಿನಯಕ್ಕಾಗಿ ಡಾ. ಪಿ.ಬಿ.ಶ್ರೀನಿವಾಸ್ ಹಾಡಿರುವ "ಇದೇ ಹೊಸ ಹಾಡು ಹೃದಯಸಾಕ್ಷಿ ಹಾಡು..." ಸಾಹಿತ್ಯ: ಕಣಗಾಲ್ ಪ್ರಭಾಕರ್ ಶಾಸ್ತ್ರಿ; ಸಂಗೀತ: ಘಂಟಸಾಲ. ಹಾಡಿನ ಪ್ರತಿಯೊಂದು ಸಾಲಿನ ಕೊನೆಯಲ್ಲಿ ‘ಹಾಡು’ ಎನ್ನುವ ಪದ ಈ ಹಾಡಿಗೇ ವಿಶೇಷ ಅರ್ಥ ಕೊಟ್ಟಿದೆ.

*** *** *** *** *** *** ***

‘ಆಪ್ತಮಿತ್ರ’ ಚಿತ್ರದಲ್ಲಿ ನಾಗವಲ್ಲಿ ಭೂತ ಮೈಮೇಲೆ ಬರುವ ಸನ್ನಿವೇಶದ ಸೂಪರ್‌ಹಿಟ್ ಗೀತೆ  “ರಾ ರಾ ಸರಸಕು ರಾರಾ..." ಗುರುಕಿರಣ್ ಸಂಗೀತ ನಿರ್ದೇಶನದಲ್ಲಿ ನಂದಿತಾ ಮತ್ತು ರಾಜೇಶ್ ಹಾಡಿರುವ ಗೋಟೂರಿ (ತೆಲುಗು) ಅವರ ರಚನೆ. ಈ ಹಾಡಿನಲ್ಲಿ ಶುದ್ಧಧನ್ಯಾಸಿ ರಾಗದ ಛಾಯೆ ಗಾಢವಾಗಿ ಇದೆ ಎಂದು ತಿಳಿಸಿದ ನನ್ನ ಸ್ನೇಹಿತ ಕ್ಯಾಲಿಫೋರ್ನಿಯಾನಿವಾಸಿ ‘ಹಂಸನಾದ’ ರಾಮಪ್ರಸಾದ್‌ಗೆ ನನ್ನ ಸ್ಪೆಷಲ್ ಥ್ಯಾಂಕ್ಸ್ ಸಲ್ಲುತ್ತವೆ. :-)

*** *** *** *** *** *** ***

ನಮ್ಮೂರ ಮಂದಾರ ಹೂವೆ’ ಚಿತ್ರಕ್ಕಾಗಿ ಕೆ.ಕಲ್ಯಾಣ್ ರಚನೆಯನ್ನು ಇಳಯರಾಜಾ ಸಂಗೀತನಿರ್ದೇಶನದಲ್ಲಿ ಕೆ.ಎಸ್.ಚಿತ್ರಾ ಹಾಡಿರುವ ‘ಹೇಳೇ ಕೋಗಿಲೆ ಇಂಪಾಗಲಾ...".

*** *** *** *** *** *** ***

ಇನ್ನೂ ತುಂಬಾ ಇವೆ. ಕನ್ಯಾರತ್ನ ಚಿತ್ರದ “ಸುವ್ವಿ ಸುವ್ವಿ ಸುವ್ವಾಲೇ...", ವಾಲ್ಮೀಕಿ ಚಿತ್ರದ “ಜಲಲ ಜಲಲ ಜಲಧಾರೆ...", 'ಮಲ್ಲಿ ಮದುವೆ’ ಚಿತ್ರದ “ಆಡೋಣ ಬಾ ಬಾ ಗೋಪಾಲ...", ಭಕ್ತ ಕನಕದಾಸ ಚಿತ್ರದ “ಬಾಗಿಲನು ತೆರೆದು ಸೇವೆಯನು ಕೊಡು ಹರಿಯೇ...", ಮರೆಯದ ಹಾಡು ಚಿತ್ರದ ‘ಸುಖದ ಸ್ವಪ್ನಗಾನ...’, ಒಲವುಗೆಲುವು ಚಿತ್ರದ ‘ನನ್ನೆದೆ ಕೋಗಿಲೆಯ...’  ಮುಂತಾದುವೆಲ್ಲ ಶುದ್ಧಧನ್ಯಾಸಿ ರಾಗದ ನೆರಳಿನಲ್ಲೇ ಇರುವಂಥವು. ಅಂದಹಾಗೆ ಸಂಗೀತಜ್ಞಾನವಿಲ್ಲದ ನಾನು ಈ ಮಾಹಿತಿಯನ್ನೆಲ್ಲ ಸಂಗೀತ ಬಲ್ಲ ಬೇರೆಯವರಿಂದ ಸಂಗ್ರಹಿಸಿ ಪರಾಮರ್ಶಿಸಿ ಇಲ್ಲಿ ಸಂಕಲನಮಾಡಿರುವುದು. ಆರೀತಿ ನನಗೆ ನೆರವಾಗುವ ಸಂಪನ್ಮೂಲ ವ್ಯಕ್ತಿಯೊಬ್ಬರು ನನ್ನ ಸೋದರಮಾವ ಚಿದಂಬರ ಕಾಕತ್ಕರ್. ಬಿಎಸ್ಸೆನ್ನೆಲ್ ಉದ್ಯೋಗಿಯಾಗಿದ್ದವರು ಈಗ ಮಂಗಳೂರಿನಲ್ಲಿ ನಿವೃತ್ತಜೀವನ ನಡೆಸುವವರು. ಅವರ ಅನೇಕ ಸೃಜನಾತ್ಮಕ ಹವ್ಯಾಸಗಳಲ್ಲಿ ಕೊಳಲುವಾದನವೂ ಒಂದು. ರಾಗರಸಾಯನ ಸರಣಿಯಲ್ಲಿ ವಿವಿಧ ರಾಗಗಳ ಹಾಡುಗಳನ್ನು ಪಟ್ಟಿಮಾಡುವಾಗ ಕೆಲವೊಮ್ಮೆ ಆಯಾಯ ಹಾಡನ್ನು ಕೊಳಲಿನಲ್ಲಿ ನುಡಿಸಿ ಅದು ಆ ರಾಗದಲ್ಲಿ ಇರುವುದು (ಅಥವಾ ಅಲ್ಪಸ್ವಲ್ಪವಾದರೂ ಆ ರಾಗವು ಆ ಹಾಡಿನಲ್ಲಿ ಕಾಣಿಸಿಕೊಂಡಿರುವುದು) ಹೌದೆಂದು ಕನ್‌ಫರ್ಮ್ ಮಾಡಿ ಅವರು ನನಗೆ ತಿಳಿಸುತ್ತಾರೆ!

ಇದೊಂದು ಪ್ರಸ್ತುತಿ, ಚಿದಂಬರ ಕಾಕತ್ಕರ್ ಅವರದೇ ಕೊಳಲುವಾದನದಲ್ಲಿ  "ಆಡೋಣ ಬಾ ಬಾ ಗೋಪಾಲ..."

[ಕಣಗಾಲ್ ಪ್ರಭಾಕರ ಶಾಸ್ತ್ರಿಯವರ ರಚನೆಯನ್ನು ಜಿ.ಕೆ.ವೆಂಕಟೇಶ್ ಸಂಗೀತನಿರ್ದೇಶನದಲ್ಲಿ ಎಸ್.ಜಾನಕಿ ಹಾಡಿರುವ ಮೂಲ ಹಾಡಿನ ವಿಡಿಯೋ ಇಲ್ಲಿದೆ.]

*** *** *** *** *** *** ***

ತೆಲುಗಿನಲ್ಲಿ ಅತ್ಯಂತ ಜನಪ್ರಿಯವಾದ (ಆಮೇಲೆ ಕನ್ನಡದಲ್ಲೂ ಮರುನಿರ್ಮಾಣಗೊಂಡ) ಸ್ವಾತಿಮುತ್ಯಂ ಚಿತ್ರದ ಟೈಟಲ್ ಸಾಂಗ್  “ಮನಸು ಪಲಿಕೇ ಮೌನಗೀತಮ್ ಮಮತಲೊಲಿಕೇ ಸ್ವಾತಿಮುತ್ಯಂ..." ಶುದ್ಧ ಧನ್ಯಾಸಿ ರಾಗಾಧಾರಿತ ಚಿತ್ರಗೀತೆಗೆ ಒಳ್ಳೆಯ ಉದಾಹರಣೆ.  ಸಿ.ನಾರಾಯಣ ರೆಡ್ಡಿ ರಚನೆ, ಇಳಯರಾಜ ಸಂಗೀತನಿರ್ದೇಶನ, ಎಸ್ಪಿಬಾಲು ಮತ್ತು ಎಸ್.ಜಾನಕಿ ಹಿನ್ನೆಲೆಗಾಯನ.

*** *** *** *** *** *** ***

ತೆಲುಗಿನದೇ ಇನ್ನೊಂದು ಚಿತ್ರಗೀತೆ,  ‘ಅನ್ನಮಯ್ಯ’ ಚಿತ್ರದ್ದು. ಅನ್ನಮಾಚಾರ್ಯರ ರಚನೆ “ವಿನರೋ ಭಾಗ್ಯಮು ವಿಷ್ಣುಕಥಾ..." ಎಸ್ಪಿಬಾಲು ಮತ್ತು ಸಂಗಡಿಗರ ಗಾಯನವನ್ನು ಸಂಗೀತಕ್ಕೆ ಅಳವಡಿಸಿದವರು ಎಂ.ಎಂ.ಕೀರವಾಣಿ.

*** *** *** *** *** *** ***

ರಾಗರಸಾಯನದಲ್ಲಿ ಬೇರೆ ಯಾವ ಭಾಷೆಯ, ಯಾವ ಪ್ರಕಾರದ, ಹಾಡುಗಳನ್ನಾದರೂ ಬಿಟ್ಟುಬಿಟ್ಟೇನು, ಆದರೆ ಮಲಯಾಳಂನ ಮಧುರವಾದ ಹಾಡು ಒಂದಾದರೂ ಸೇರಿಕೊಳ್ಳದಿದ್ದರೆ ನನಗೆ ಸಮಾಧಾನವಿಲ್ಲ :-) ಮಲಯಾಳಂ ನನಗೆ ಅರ್ಥ ಆಗುವುದಿಲ್ಲ, ಆದರೆ ಆ ಭಾಷೆಯಲ್ಲಿನ ಚಿತ್ರಗೀತೆಗಳು, ಭಕ್ತಿಗೀತೆಗಳೆಲ್ಲ ಜೇನಿನಲ್ಲಿ ಅದ್ದಿ ತೆಗೆದಂತೆ. ಈ ಹಾಡೂ ಅಂತೆಯೇ.  "ಮೆಲ್ಲೆ ಮೆಲ್ಲೆ ಮುಖಪಡಮ್..." -  ಕೆ.ಜೆ.ಯೇಸುದಾಸ್ ಕಂಠಸಿರಿಯಲ್ಲಿ. ಚಿತ್ರದ ಹೆಸರು  ‘ಒರು ಮಿನ್ನಮಿನುಂಗಿಂತೆ ನುರುಂಗುವೆಟ್ಟಮ್’ ’ (‘ಒಂದು ಮಿಂಚುಹುಳದ ಬೆಳಕು ಮೂಡಿದ ಕ್ಷಣ’ ಎಂದು ಅರ್ಥವಂತೆ) ಗೀತರಚನೆ ಒ.ಎನ್.ವಿ ಕುರುಪ್; ಸಂಗೀತನಿರ್ದೇಶನ ಜಾನ್ಸನ್.

*** *** *** *** *** *** ***

ಮಲಯಾಳಂ ಗೀತೆಗಳು ಇಷ್ಟವಾದಷ್ಟು ತಮಿಳಿನವು ನನಗೆ ಇಷ್ಟವಾಗುವುದಿಲ್ಲ. ಆದರೂ ಪ್ರಾತಿನಿಧ್ಯ ಇರಲಿ ಎಂದು ತಮಿಳು ಚಿತ್ರಗೀತೆಗಳನ್ನೂ ಆಯ್ದುಕೊಳ್ಳುತ್ತೇನೆ. ಬಹುಶಃ ಎ.ಆರ್.ರೆಹಮಾನ್ ಸಂಗೀತದ ಪ್ರಭಾವವೂ ಇರಬಹುದು. ಆದರೆ ಇವತ್ತಿಲ್ಲಿ ಸೇರಿಸಿಕೊಂಡಿರುವುದು ಎ.ಆರ್.ರೆಹಮಾನ್ ಹಾಡನ್ನಲ್ಲ. ವಿದ್ಯಾಸಾಗರ್ ಸಂಗೀತ ನಿರ್ದೇಶನದಲ್ಲಿ ‘ಪಾರ್ತಿಬನ್ ಕನವು’ ಚಿತ್ರಕ್ಕಾಗಿ ಮಧು ಬಾಲಕೃಷ್ಣನ್ ಹಾಡಿರುವ ಯುಗಭಾರತಿ ರಚನೆ " ಕಣ್ಣಾ ಕಂಡೆನಡಿ..." ಈ ಹಾಡಿನ ಇಂಟರ್‌ಲ್ಯೂಡ್‌ನಲ್ಲಿ ಬರುವ ಸ್ಯಾಕ್ಸೊಫೋನ್ ವಾದನ (ಶುದ್ಧಧನ್ಯಾಸಿ ರಾಗದಲ್ಲಿ ಅಲ್ಲ, ಅದು ಅಭೇರಿ ರಾಗದಲ್ಲಿದೆ) ಬಹಳ ಚೆನ್ನಾಗಿದೆ!

*** *** *** *** *** *** ***

ಶುದ್ಧಧನ್ಯಾಸಿಯ ಹಿಂದುಸ್ಥಾನಿ ರೂಪ ‘ಧಾನಿ’ ಎಂಬ ರಾಗ ಎಂದು ಪೀಠಿಕೆಯಲ್ಲೇ ವಿವರಿಸಿದ್ದೆನಷ್ಟೆ? ಈಗಿನ್ನು ‘ಧಾನಿ’ ರಾಗದ ಕೆಲವು ಪಲುಕುಗಳನ್ನು ನೋಡೋಣ. ಮೊದಲು ಒಂದೆರಡು ಹಿಂದೀ ಚಿತ್ರಗೀತೆಗಳು. ಚಿತ್‌ಚೋರ್ ಚಿತ್ರದ ಸಾರ್ವಕಾಲಿಕ ಸೂಪರ್‌ಹಿಟ್ ಹಾಡು "ಗೋರಿ ತೇರಾ ಗಾಂವ್ ಬಡಾ ಪ್ಯಾರಾ..." - ಕೆ.ಜೆ.ಯೇಸುದಾಸ್ ಹಾಡಿರುವ ಈ ಗೀತೆಯ ಸಾಹಿತ್ಯ ಮತ್ತು ಸಂಗೀತ: ರವೀಂದ್ರ ಜೈನ್.

*** *** *** *** *** *** ***

ಕ್ರಿಮಿನಲ್’ ಚಿತ್ರಕ್ಕಾಗಿ ಎಂ.ಎಂ.ಕೀರವಾಣಿ ಸಂಗೀತನಿರ್ದೇಶನದಲ್ಲಿ ಕುಮಾರ್ ಸಾನು ಮತ್ತು ಅಲ್ಕಾ ಯಾಜ್ಞಿಕ್ ಹಾಡಿರುವ “ತು ಮಿಲೇ ದಿಲ್ ಖಿಲೇ..."

*** *** *** *** *** *** ***

'ಶರ್ಮಿಲೀ’ ಚಿತ್ರಕ್ಕಾಗಿ ಎಸ್.ಡಿ.ಬರ್ಮನ್ ಸಂಗೀತನಿರ್ದೇಶನದಲ್ಲಿ ಕಿಶೋರ್ ಕುಮಾರ್ ಹಾಡಿರುವ  “ಖಿಲ್‌ತೆ ಹೇಂ ಗುಲ್ ಯಹಾಂ ..."

*** *** *** *** *** *** ***

ಚಿತ್ರಗೀತೆಗಳ ನಂತರ ಈಗ ಒಂದಿಷ್ಟು ಅಪ್ಪಟ ಶಾಸ್ತ್ರೀಯ ಸಂಗೀತ ಹಿಂದುಸ್ಥಾನಿ ಶೈಲಿಯದನ್ನು ‘ಧಾನಿ’ರಾಗದ ದೃಷ್ಟಿಯಿಂದ ಅವಲೋಕಿಸೋಣ. ಮೊದಲಿಗೆ, ಕರ್ನಾಟಕದವರೇ ಆದ ಪಂಡಿತ್ ವೆಂಕಟೇಶ ಕುಮಾರ್ ಅವರ ಗಾಯನದಲ್ಲಿ ಒಂದು ಬಂದಿಶ್. [‘ಬಂದಿಶ್’ ಎಂದರೆ ಸಂಪ್ರದಾಯಗೀತೆ/ಜನಪದಗೀತೆ ಇದ್ದಂತೆ. ರಚನೆಕಾರ ಯಾರೆಂದು ಗೊತ್ತಿಲ್ಲದೆ ತಲೆತಲಾಂತರಗಳಿಂದ ಪ್ರಸಿದ್ಧಿಯಲ್ಲಿರುವ ಹಾಡು.]

*** *** *** *** *** *** ***

ಶಾಹಿದ್ ಪರ್ವೇಜ್ ಅವರ ಸಿತಾರ್ ವಾದನದಲ್ಲಿ ‘ಧಾನಿ’ ರಾಗದ ಒಂದು ಪ್ರಸ್ತುತಿ-

*** *** *** *** *** *** ***

ಸಿತಾರ್‌ನ ನಂತರ ಸಂತೂರ್. ಕೆನಡಾ ದೇಶದ ಮಾಂಟ್ರಿಯಲ್‌ನಲ್ಲಿ ನಡೆದ ಸಂಗೀತಕಚೇರಿಯೊಂದರಿಂದ ಆಯ್ದ ತುಣುಕು. ಈ ವಿಡಿಯೋದಲ್ಲಿ ಸಂಗೀತವನ್ನು ಆಲಿಸುತ್ತಲೇ ನೀವು ಗಮನಿಸಬೇಕಾದ ವಿಶೇಷ ಅಂಶವೆಂದರೆ ಸಂತೂರ್ ವಾದಕ ಜೊನಾದನ್ ವೊಯರ್ ಮತ್ತು ತಬಲಾ ವಾದಕ ಶಾನ್ ಮಟಿವೆಟ್ಸ್ಕಿ - ಇವರಿಬ್ಬರೂ ಭಾರತೀಯರಲ್ಲ, ಕೆನಡಾ ದೇಶದ ಪ್ರಜೆಗಳು! ಆದರೆ ಪಕ್ಕಾ ಭಾರತೀಯ ಉಡುಪು ಧರಿಸಿ, ಭಾರತೀಯರನ್ನೇ ನಾಚಿಸುವಷ್ಟು ಶ್ರದ್ಧೆಯಿಂದ ಸಂಗೀತ ಪ್ರಸ್ತುತಪಡಿಸಿದ್ದಾರೆ. ಸಂಗೀತಕ್ಕೆ ಸೀಮೆಗಳಿಲ್ಲ ಎನ್ನುವುದು ಇದಕ್ಕೇ ಇರಬೇಕು.

*** *** *** *** *** *** ***

ಗ್ವಾಲಿಯರ್ ಘರಾಣಾಕ್ಕೆ ಸೇರಿದ ಖ್ಯಾತ ಹಿಂದುಸ್ಥಾನಿ ಸಂಗೀತ ವಿದುಷಿ ಮಾಲಿನಿ ರಾಜುರ್ಕರ್ ಅವರ ಗಾಯನದಲ್ಲಿ  ‘ಧಾನಿ’ ರಾಗದ ಒಂದು ಬಂದಿಶ್.

ಇದರ ಎರಡನೇ ಭಾಗವನ್ನೂ ಕೇಳುವ ಆಸಕ್ತಿಯಿದ್ದವರಿಗೆ ಅದು ಇಲ್ಲಿದೆ.

*** *** *** *** *** *** ***

ತಬಲಾ ಮಾಂತ್ರಿಕ ಅಪ್ಪ-ಮಗ ಜೋಡಿ ಗೊತ್ತಲ್ಲ ನಿಮಗೆ? ಅವರೇ, ಅಲ್ಲಾ ರಖಾ ಮತ್ತು ಜಾಕಿರ್ ಹುಸೇನ್. ಈ ವಿಡಿಯೋದಲ್ಲಿ ಅಪ್ಪ-ಮಗ ಜೋಡಿಯ ತಬಲಾ ಸಾಥಿ ಸಿಕ್ಕಿರುವುದು ಫಜಲ್ ಖಾನ್ ಅವರ ಸಾರಂಗಿ ವಾದನಕ್ಕೆ. ರಾಗ ‘ಧಾನಿ’-

*** *** *** *** *** *** ***

ಕೊನೆಯಲ್ಲೊಂದು “ಧಾನಿ ರಿಪ್ಲೆಕ್ಷನ್"... ಸತೀಶ್ ರಾಹಿ ಎಂಬ ಸಂಗೀತಾಭ್ಯಾಸಿ ತರುಣನ ಕ್ರಿಯೇಟಿವ್ ರಚನೆ-

*** *** *** *** *** *** ***

kalyaninotes.png

ಹೇಗನಿಸಿತು ‘ಶುದ್ಧ ಧನ್ಯಾಸಿ’/’‘ಧಾನಿ’ ರಾಗರಸಾಯನ?  ನಿಮಗೆ ಇಷ್ಟವಾದರೆ, ನಿಮ್ಮ ಪ್ರತಿಕ್ರಿಯೆ ಅಥವಾ ಸಲಹೆ ಸೂಚನೆ ತಿದ್ದುಪಡಿ ಇತ್ಯಾದಿ ಇದ್ದರೆ ಖಂಡಿತ ತಿಳಿಸುವಿರಲ್ಲ?

* * * *


You can follow any responses to this entry through the RSS 2.0 feed. You can skip to the end and leave a response. Pinging is currently not allowed.
Podbean App

Play this podcast on Podbean App