Episodes
Saturday Feb 19, 2011
Gratitude is being grateful
Saturday Feb 19, 2011
Saturday Feb 19, 2011
ದಿನಾಂಕ 20 ಫೆಬ್ರವರಿ 2011ರ ಸಂಚಿಕೆ...
ಅಟ್ಟ ಹತ್ತಿದ ಮೇಲೆಯೂ ಏಣಿ ಮರೆಯದವರು
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] ಇದನ್ನು ಮೊನ್ನೆ ಒಂದು ‘ಮುಂದರಿದ ಮಿಂಚಂಚೆ’ (ಇಮೇಲ್ ಫಾರ್ವರ್ಡ್)ನಲ್ಲಿ ಓದಿದೆ- ಝವೇರಿ ಪೂನಾವಾಲಾ ಎಂಬ ಪುಣೆಯ ಉದ್ಯಮಿಯೋರ್ವರು ಮಾನವೀಯತೆ ಮೆರೆದ ಕಥೆ. ಪೂನಾವಾಲಾ ಅವರ ಬಳಿ ಒಂದು ಲಿಮೊಸಿನ್ ಕಾರು. ಅದನ್ನವರು ಓಶೊ ರಜನೀಶರಿಂದ ಕೊಂಡುಕೊಂಡದ್ದಂತೆ. ಗಂಗಾದತ್ತ ಎಂಬುವವ ಅದರ ಚಾಲಕ. ಕಳೆದ ಮೂವತ್ತು ವರ್ಷಗಳಿಂದಲೂ ಆತ ಪೂನಾವಾಲಾರ ನಂಬಿಗಸ್ಥ ನೌಕರ. ಅನಾರೋಗ್ಯದಿಂದಲೋ ಏನೋ ಗಂಗಾದತ್ತ ಇತ್ತೀಚೆಗೆ ಅಸುನೀಗಿದ. ಪೂನಾವಾಲಾ ಆದಿನ ಯಾವುದೋ ತುರ್ತು ಕೆಲಸದ ಮೇಲೆ ಮುಂಬಯಿಗೆ ಹೋಗಿದ್ದರು. ಗಂಗಾದತ್ತ ತೀರಿಹೋದನೆಂಬ ಸುದ್ದಿ ಕೇಳಿದ ತತ್ಕ್ಷಣವೇ ಅವರು ಅವತ್ತಿನ ಮೀಟಿಂಗ್ಗಳನ್ನೆಲ್ಲ ರದ್ದುಪಡಿಸಿದರು. ತಾನು ಪುಣೆಗೆ ವಾಪಸಾಗುವವರೆಗೂ ಗಂಗಾದತ್ತನ ಅಂತ್ಯಕ್ರಿಯೆ ನಡೆಸದಿರುವಂತೆ ಅವನ ಕುಟುಂಬದವರನ್ನು ಕೇಳಿಕೊಂಡರು. ಹೆಲಿಕಾಪ್ಟರ್ನಲ್ಲಿ ಪುಣೆಗೆ ಧಾವಿಸಿದರು. ಅಲ್ಲಿ ಅದೇ ಲಿಮೊಸಿನ್ ಕಾರನ್ನು ಹೂವುಗಳಿಂದ ಸಿಂಗರಿಸಲಾಯಿತು. ಅದರೊಳಗೆ ಗಂಗಾದತ್ತನ ಶವವನ್ನಿರಿಸಿ ರುದ್ರಭೂಮಿಗೆ ಒಯ್ಯುವ ಏರ್ಪಾಡು ಮಾಡಲಾಯಿತು. ಚಾಲಕನ ಸ್ಥಾನದಲ್ಲಿ ಸ್ವತಃ ಪೂನಾವಾಲಾ. ಮೂವತ್ತು ವರ್ಷಗಳ ಕಾಲ ವಾಹನಚಾಲಕನಾಗಿ ಸೇವೆ ಸಲ್ಲಿಸಿದವನ ಅಂತಿಮಯಾತ್ರೆಗೆ ಒಡೆಯನೇ ಚಾಲಕ. ಅವು ಹೃದಯಸ್ಪರ್ಶಿ ಕ್ಷಣಗಳು. ಗದ್ಗದಿತರಾಗಿದ್ದ ಪೂನಾವಾಲಾ ಗಂಗಾದತ್ತನ ಗುಣಗಾನ ಮಾಡಿದರು. ಬಡತನದಿಂದ ಬಂದ ಆತ ನಿಷ್ಠೆಯಿಂದ ದುಡಿದು ಮಗಳನ್ನು ಚಾರ್ಟರ್ಡ್ ಎಕೌಂಟೆಂಟ್ಳನ್ನಾಗಿ ಬೆಳೆಸಿದ ಸಾಹಸವನ್ನು ಕೊಂಡಾಡಿದರು. ಗಂಗಾದತ್ತನ ಬಂಧುಬಳಗವನ್ನು ಸಮಾಧಾನಪಡಿಸಿ ಅಲ್ಲಿ ನೆರೆದಿದ್ದವರನ್ನು ಉದ್ದೇಶಿಸಿ ಒಂದೆರಡು ಮಾತುಗಳನ್ನೂ ಆಡಿದರು. “ದುಡ್ಡು-ದೌಲತ್ತು ಕೀರ್ತಿ ಅಧಿಕಾರಗಳನ್ನು ಯಾರಾದರೂ ಸಂಪಾದಿಸಬಹುದು. ಅದೇನೂ ದೊಡ್ಡ ಸಂಗತಿಯಲ್ಲ. ಆದರೆ ಮುನ್ನಡೆಗೆ ಊರುಗೋಲಾದವರನ್ನು, ಯಶಸ್ಸಿಗೆ ಕೊಡುಗೆಯಿತ್ತವರನ್ನು ಸದಾ ನೆನಪಿಟ್ಟುಕೊಳ್ಳುವುದು, ಅವರಿಗೆ ಕೃತಜ್ಞರಾಗಿರುವುದು, ಅವರನ್ನು ಗೌರವಿಸುವುದು ನಾವು ಮಾಡಬಹುದಾದ, ಮಾಡಬೇಕಾದ ಕನಿಷ್ಠ ಕೆಲಸ. ಅಂತಹದೊಂದು ಸಂಸ್ಕಾರದಲ್ಲಿ ಬೆಳೆದುಬಂದವನಾದ್ದರಿಂದಲೇ ನಾನಿದನ್ನು ಮಾಡಿದೆ. ಅಷ್ಟೇ.” ಪೂನಾವಾಲಾ ಹೇಳಿದ ಮಾತುಗಳು ಎಷ್ಟು ಅರ್ಥಪೂರ್ಣ ಮತ್ತು ಅನುಸರಣೀಯವಾಗಿವೆ ಅಲ್ಲವೇ? ಈ ಜೀವನವೆಂದರೆ ಒಂದು ಸಮುದ್ರಯಾನವಿದ್ದಂತೆ. ಏರಿಳಿಯುವ ಅಲೆಗಳ ಮೇಲೆ ನಿರಂತರ ಪಯಣ. ಗಳಿಸಿದ ಸುಖವೈಭೋಗಗಳು ಬಹುಕಾಲ ಉಳಿಯುವುದಿಲ್ಲ. ಅವು ಶಾಶ್ವತವಲ್ಲ. ಉಳಿಯುವುದೇನಿದ್ದರೂ ಅಲೆಗಳಂತೆ ನಮ್ಮ ಜೀವ ಸ್ಪರ್ಶ ಮಾಡುವ ಕೆಲವರ ನೆನಪುಗಳು ಮಾತ್ರ. ಎಷ್ಟೋಸಲ ಆ ಕೆಲವರು ಬರೀ ‘ಕೇವಲ’ರೇ ಆಗಿರುತ್ತಾರೆ. ಆದರೆ ನಮ್ಮ ಬಾಳನ್ನು ರೂಪಿಸುವುದರಲ್ಲಿ, ಬಾಳಿಗೊಂದು ಬೆಳಕನ್ನು ತೋರಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿರುತ್ತಾರೆ. ಝವೇರಿ ಪೂನಾವಾಲಾ ಯಾರೆಂದು ನನಗೆ ಗೊತ್ತಿಲ್ಲ. ಅವರ ಭಾಷಣ ಕೇಳಿ ನಾನಿದನ್ನು ವರದಿ ಮಾಡಿರುವುದೂ ಅಲ್ಲ. ಇಮೇಲ್ಫಾರ್ವರ್ಡ್ನಲ್ಲಿ ಓದಿ ತಿಳಿದುಕೊಂಡೆನೇ ಹೊರತು ಆ ಘಟನೆ ನಿಜವೋ ಕಲ್ಪನೆಯೋ ಎನ್ನುವುದಕ್ಕೆ ಪುರಾವೆ ಕೂಡ ನನ್ನಲ್ಲಿಲ್ಲ. ಆದರೆ, ಪೂನಾವಾಲಾ ಹೇಳಿದ್ದೆನ್ನಲಾದ ಮಾತುಗಳಿಂದ ಹೇಗೆ ನಮಗೆ ಒಂದು ರೀತಿಯ ಹಿತಾನುಭವ ಆಗಿದೆಯೋ, ಅಂತಃಕರಣವನ್ನು ಮೃದುವಾಗಿ ತಟ್ಟಿದಂತಾಗಿದೆಯೋ, ಅದೇ ರೀತಿಯ ವಿಶಿಷ್ಟ ಅನುಭವ ಕಳೆದ ವರ್ಷ ಒಂದು ಸಂದರ್ಭದಲ್ಲಿ ನನಗೆ ಆಗಿತ್ತು. ಅದನ್ನು ನಿಮ್ಮೊಡನೆ ಹಂಚಿಕೊಳ್ಳಬೇಕು ಎಂದು ಯೋಜಿಸಿದ್ದೂ ಇತ್ತು; ಇವತ್ತು ಅದಕ್ಕೆ ಸಮಯ ಒದಗಿ ಬಂತು. ಚಿತ್ರದುರ್ಗದ ಹಾಲಿ ಸಂಸದ ಜನಾರ್ಧನ ಸ್ವಾಮಿಯ ಹೆಸರನ್ನು ನೀವು ಕೇಳಿಯೇ ಇರುತ್ತೀರಿ ಎಂದುಕೊಳ್ಳುತ್ತೇನೆ. ಸ್ವಾಮಿ ಮತ್ತು ನಾನು ದಾವಣಗೆರೆಯಲ್ಲಿ ಎಂಜಿನಿಯರಿಂಗ್ ವ್ಯಾಸಂಗದಲ್ಲಿ ಸಹಪಾಠಿಗಳು. ಆಗಲೂ ಆಮೇಲೂ ಸ್ನೇಹಿತರು. ಅಮೆರಿಕದಲ್ಲಿ ಸಾಫ್ಟ್ವೇರ್ ಉದ್ಯೋಗವನ್ನು ಬಿಟ್ಟು ತಾಯ್ನಾಡಿಗೆ ಮರಳಿ ಸಕ್ರಿಯ ರಾಜಕಾರಣದಲ್ಲಿ ತೊಡಗಿ ಲೋಕಸಭಾ ಚುನಾವಣೆ ಅಖಾಡದಲ್ಲಿ ಸ್ವಾಮಿ ಸ್ಪರ್ಧೆಗಿಳಿದಾಗ ನಮಗೆಲ್ಲ ಸಿಕ್ಕಾಪಟ್ಟೆ ಅಚ್ಚರಿ-ಅಭಿಮಾನ ಒಟ್ಟೊಟ್ಟಿಗೇ ಆಗಿತ್ತು. ‘ಜನಸೇವೆಗೆ ಹೊರಟಿಹ ಜನಾರ್ಧನ ಸ್ವಾಮಿಗೆ ಜೈ ಹೋ!’ ಎಂಬ ತಲೆಬರಹ ಕೊಟ್ಟು ಇದೇ ಅಂಕಣದಲ್ಲಿ ನಾನೊಂದು ಲೇಖನವನ್ನೂ ಬರೆದಿದ್ದೆ. ಚುನಾವಣಾ ಫಲಿತಾಂಶ ಪ್ರಕಟವಾಗಿ ಸ್ವಾಮಿ ಜಯಭೇರಿ ಬಾರಿಸಿದಾಗಂತೂ ನಮ್ಮೆಲ್ಲರ ಹರ್ಷೋಲ್ಲಾಸಕ್ಕೆ ಪಾರವೇ ಇರಲಿಲ್ಲ. ಸ್ವಾಮಿ ಸಂಸತ್ತು ಪ್ರವೇಶಿಸಿದರು. ಕಿರಿವಯಸ್ಸಿನ, ಸ್ನಾತಕೋತ್ತರ ವಿದ್ಯಾರ್ಹತೆಯುಳ್ಳ ಕೆಲವೇಕೆಲವು ಸಂಸತ್ಸದಸ್ಯರ ಪೈಕಿ ಒಬ್ಬರಾದರು. ವಿರೋಧಪಕ್ಷದಲ್ಲಿದ್ದರೂ ಉನ್ನತ ಮಟ್ಟದ ಸಮಿತಿಗಳ, ಸಂಸದೀಯ ನಿಯೋಗಗಳ ಸದಸ್ಯರಾದರು. ಅಂತಹ ಒಂದು ಪಾರ್ಲಿಮೆಂಟರಿ ಡೆಲಿಗೇಶನ್ನ ಭಾಗವಾಗಿ ಜನಾರ್ಧನ ಸ್ವಾಮಿ ಕಳೆದವರ್ಷ ಜೂನ್-ಜುಲೈಯಲ್ಲಿ ಅಮೆರಿಕ ದೇಶಕ್ಕೆ ಭೇಟಿಯಿತ್ತಿದ್ದರು. ಇಲ್ಲಿನ ಪ್ರತಿಷ್ಠಿತ ಯೇಲ್ ವಿಶ್ವವಿದ್ಯಾನಿಲಯದಲ್ಲಿ ಆರ್ಥಿಕತಜ್ಞರು, ನೊಬೆಲ್ ಪ್ರಶಸ್ತಿ ವಿಜೇತರು, ಅಮೆರಿಕ ಸರಕಾರದ ಪ್ರತಿನಿಧಿಗಳೂ ಸೇರಿದಂತೆ ಹಲವಾರು ಹಿರಿತಲೆಗಳೆಲ್ಲ ಒಂದೆಡೆ ಸೇರಿದ ಸಮಾವೇಶದಲ್ಲಿ ಭಾಗವಹಿಸಿದ್ದರು. ಉನ್ನತ ಮಟ್ಟದ ಸಭೆಗಳಲ್ಲಿ ತನ್ನ ಪ್ರಖರ ಹಾಗೂ ಪುರೋಗಾಮಿ ಚಿಂತನೆಗಳಿಂದ ಯಾವೊಂದು ಅಳುಕೂ ಇಲ್ಲದೆ ಪ್ರಸ್ತುತಗೊಂಡಿದ್ದರು. ಅಮೆರಿಕದ ವಿದೇಶಾಂಗ ಸಚಿವೆ ಹಿಲರಿ ಕ್ಲಿಂಟನ್, ಪೆಂಟಗಾನ್ನಲ್ಲಿ ಅಮೆರಿಕದ ರಕ್ಷಣಾ ಸಚಿವಾಲಯ, ಎಫ್ಬಿಐ ಕಾರ್ಯಾಲಯ, ನಿವೃತ್ತ ಸಿಐಎ ಚೀಫ್ - ಹೀಗೆ ಎಲ್ಲವೂ ಹೈ-ಪ್ರೊಫೈಲ್ ಭೇಟಿಗಳು, ಸಂದರ್ಶನಗಳು. ಉಭಯದೇಶಗಳ ವಿದೇಶಾಂಗ ವ್ಯವಹಾರಗಳ ಕುರಿತು, ತಂತ್ರಜ್ಞಾನ ವಿನಿಮಯ ಕುರಿತು ಸಮಾಲೋಚನೆಗಳು. ಜನಾರ್ಧನ ಸ್ವಾಮಿಗೆ ಒದಗಿಬಂದ ಆ ಲೆವೆಲೇ ಬೇರೆ. ನನ್ನ-ನಿಮ್ಮ ಊಹೆಗೂ ಅದು ನಿಲುಕದು. ಆ ಪ್ರವಾಸದ ಅಫೀಶಿಯಲ್ ಭಾಗ ಮುಗಿದಮೇಲೆ ಪರ್ಸನಲ್ ಟ್ರಿಪ್ ಎಂದು ಮತ್ತೂ ಒಂದಿಷ್ಟು ದಿನ ಅಮೆರಿಕದಲ್ಲಿದ್ದ ಜನಾರ್ಧನ ಸ್ವಾಮಿ ವಾಷಿಂಗ್ಟನ್ನಲ್ಲಿ ನಮ್ಮನೆಗೂ ಸೌಹಾರ್ದ ಭೇಟಿ ಕೊಟ್ಟಿದ್ದರು. ಒಂದೆರಡು ದಿನ ನಮ್ಮಲ್ಲಿಯೇ ಉಳಕೊಂಡಿದ್ದರು. ಇಲ್ಲಿನ ಕನ್ನಡಿಗ ಸ್ನೇಹಿತರೂ ಸೇರಿ ಆತ್ಮೀಯ ಮಾತು-ಹರಟೆಗಳಿಗೆ ಸಿಕ್ಕಿದ್ದರು. ರಾಜಕೀಯಕ್ಕೆ ಧುಮುಕಬೇಕು ಎಂಬ ಆಲೋಚನೆ ಬಂದಾಗಿನಿಂದ ಹಿಡಿದು ಅದುವರೆಗಿನ ಅವಧಿಯಲ್ಲಿ ನಡೆದ ವಿದ್ಯಮಾನಗಳು, ಎದುರಾದ ಸವಾಲುಗಳು, ಸತ್ವಪರೀಕ್ಷೆಗಳು ಎಲ್ಲದರ ಸಣ್ಣಪುಟ್ಟ ವಿವರಗಳನ್ನೂ ಬಿಡದೆ ಸ್ವಾಮಿ ನಮ್ಮೊಂದಿಗೆ ಹಂಚಿಕೊಂಡರು. ಹಾಗೆಯೇ ಚಿತ್ರದುರ್ಗ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಕನಸು, ಕುಡಿಯುವ ನೀರು ಪೂರೈಕೆಯಂತಹ ಮೂಲಭೂತ ಸೌಕರ್ಯಗಳಿಂದ ಹಿಡಿದು ವಿಜ್ಞಾನ-ತಂತ್ರಜ್ಞಾನ ಸಂಶೋಧನಾ ಕೇಂದ್ರಗಳು, ಪ್ರಯೋಗಾಲಯಗಳು, ಶಿಕ್ಷಣಸಂಸ್ಥೆಗಳ ಸ್ಥಾಪನೆ, ಪ್ರವಾಸೋದ್ಯಮ ಅಭಿವೃದ್ಧಿ ಹೀಗೆ ಹಮ್ಮಿಕೊಂಡಿರುವ ಹತ್ತುಹಲವು ಯೋಜನೆಗಳ ನೀಲಿನಕ್ಷೆಯನ್ನು ವಿವರಿಸಿದರು. ಕೆಲವು ಯೋಜನೆಗಳಿಗೆ ಆಗಲೇ ಚಾಲನೆ ದೊರೆತಿದ್ದು ಬದಲಾವಣೆಯ ಹೊಸ ಗಾಳಿ ಚಿತ್ರದುರ್ಗದ ಜನತೆಗೆ ತಾಕತೊಡಗಿದೆಯೆಂದು ಧನ್ಯತಾಭಾವದಿಂದ ಹೇಳಿಕೊಂಡರು. ಅಬ್ಬಾ! ಎಂಜಿನಿಯರಿಂಗ್ ಕಾಲೇಜಿನಲ್ಲಿರುತ್ತ ಸಾಮಾನ್ಯರಲ್ಲಿ ಸಾಮಾನ್ಯನಾಗಿದ್ದುಕೊಂಡು, ಅಸಾಮಾನ್ಯ ಪ್ರತಿಭೆಯಿಂದ, ಛಲ ಬಿಡದ ಪ್ರಯತ್ನದಿಂದ, ಅದಕ್ಕೆ ಎರಕ ಹೊಯ್ದಂತೆ ಅದ್ಭುತ ಆತ್ಮವಿಶ್ವಾಸದಿಂದ ಯಶಸ್ಸಿನ ಒಂದೊಂದೇ ಮೆಟ್ಟಿಲನ್ನೇರುತ್ತ ಇವತ್ತು ಈ ಸ್ಥಾನದಲ್ಲಿರುವ ಜನಾರ್ಧನ ಸ್ವಾಮಿ! ಯಾರಿಗೇ ಆದರೂ ಹೆಮ್ಮೆಯೆನಿಸಲೇಬೇಕು. ವಾಷಿಂಗ್ಟನ್ನ ನಂತರ ಕ್ಯಾಲಿಫೋರ್ನಿಯಾಕ್ಕೆ ಹೋಗುವ ಕಾರ್ಯಕ್ರಮವಿತ್ತಾದ್ದರಿಂದ ಜನಾರ್ಧನ ಸ್ವಾಮಿಯನ್ನು ನನ್ನ ಕಾರ್ನಲ್ಲಿ ಏರ್ಪೋರ್ಟ್ಗೆ ಕರಕೊಂಡುಹೋಗಿ ಬಿಟ್ಟುಬಂದಿದ್ದೆ. ನಮ್ಮನೆಯಿಂದ ಸುಮಾರು ಅರ್ಧ-ಮುಕ್ಕಾಲು ಗಂಟೆ ಡ್ರೈವಿಂಗ್ನಷ್ಟು ದೂರದಲ್ಲಿದೆ ಆ ವಿಮಾನನಿಲ್ದಾಣ. ಅವತ್ತು ಕಾರಿನಲ್ಲಿ ಹೋಗುತ್ತ ಜನಾರ್ಧನ ಸ್ವಾಮಿ ನನ್ನ ಬಳಿ ಮಾತನಾಡಿದ್ದಿದೆಯಲ್ಲ ಬಹುಶಃ ಅಂತರಂಗದ ಮಾತುಗಳು ಅಥವಾ ಅಂತಃಕರಣವನ್ನು ತಟ್ಟುವ ಮಾತುಗಳು ಎನ್ನುವುದು ಅದನ್ನೇ. ಅದೊಂಥರ ಮೊನೊಲಾಗ್ ಎಂದರೂ ತಪ್ಪಲ್ಲ, ಏಕೆಂದರೆ ಸ್ವಾಮಿ ಹೇಳುತ್ತಲೇ ಇದ್ದರು ನಾನು ಕೇಳಿಸಿಕೊಳ್ಳುತ್ತಲೇ ಇದ್ದೆ. ನಿರಕ್ಷರಕುಕ್ಷಿಯಾಗಿ ಕುರಿಕಾಯುವ ಕಸುಬಿನಲ್ಲಿದ್ದ ತನ್ನ ತಂದೆಯವರನ್ನು ಅದ್ಯಾರೋ ಮಹಾನುಭಾವರು ಅಕ್ಷರ ಕಲಿಕೆಗೆ ಒಡ್ಡಿದ್ದು, ನಾಲ್ಕಕ್ಷರ ಕಲಿತ ತಂದೆ ಚಿತ್ರದುರ್ಗದ ಆ ಕುಗ್ರಾಮದಲ್ಲಿ ಶಾಲಾಶಿಕ್ಷಕನಾಗಿ ರೂಪುಗೊಂಡಿದ್ದು, ತಂದೆ-ತಾಯಿ ಮದುವೆಯಾಗಿ ೧೮ ವರ್ಷಗಳ ನಂತರ ತಾನು ಹುಟ್ಟಿದ್ದು, ತಂದೆಯೇ ಗುರುವಾಗಿ ತನಗೆ ಅಕ್ಷರಗಳನ್ನಷ್ಟೇ ಅಲ್ಲದೆ ಬದುಕಿನ ಸಕಲ ವಿದ್ಯೆಗಳನ್ನೂ ಕಲಿಸಿದ್ದು, ತಂದೆಯ ಸ್ನೇಹಿತರಾಗಿದ್ದ ರಮೇಶ ಎಂಬುವರೊಬ್ಬರು ತನ್ನ ಹಿತೈಷಿಯಾಗಿ ಹಿತಚಿಂತಕನಾಗಿ ಒದಗಿಬಂದದ್ದು, ಮಂಜುನಾಥಪ್ಪ ಎಂಬ ಶಾಲಾಶಿಕ್ಷಕರು ಸ್ವತಃ ವಿಜ್ಞಾನ ಕಲಿತವರಲ್ಲವಾದರೂ ವಿಜ್ಞಾನದ ಬಗ್ಗೆ ತನ್ನಲ್ಲಿ ಆಸಕ್ತಿ ಮೊಳಕೆಯೊಡೆಯುವಂತೆ ಮಾಡಿದ್ದು, ಹೈಸ್ಕೂಲ್ ಶಿಕ್ಷಕರಾಗಿದ್ದ ಉಜ್ಜಿನಪ್ಪ ಅವರಿಂದಾಗಿ ಗಣಿತವನ್ನು ತಲೆಗೆ ಹತ್ತಿಸಿಕೊಂಡದ್ದು... ಸ್ವಾಮಿ ತನ್ನ ಬಾಲ್ಯದ ಪುಟಗಳನ್ನು ಒಂದೊಂದಾಗಿ ತೆರೆದು ಆ ಅಧ್ಯಾಯಗಳ ಹೀರೋಗಳನ್ನು ನನಗೆ ಪರಿಚಯಿಸುತ್ತಿದ್ದಾರೇನೊ ಅಂತನಿಸುತ್ತಿತ್ತು. ದಾವಣಗೆರೆಯಲ್ಲಿ ಕಾಲೇಜುವಿದ್ಯಾರ್ಥಿಯಾಗಿ ಮತ್ತು ಆನಂತರ ಒಬ್ಬ ಪ್ರತಿಭಾನ್ವಿತ ಎಂಜಿನಿಯರ್ ಆಗಿ ಸ್ವಾಮಿ ಗೊತ್ತಿದ್ದನಷ್ಟೇ ಹೊರತು ಅವನ ಬಾಲ್ಯದ ಈ ಎಲ್ಲ ವಿವರಗಳು ನನಗೆಲ್ಲಿ ತಿಳಿದಿದ್ದವು? ಏರ್ಪೋರ್ಟ್ ತಲುಪುವ ಹೊತ್ತಿಗೆ ನನ್ನ ಕಣ್ಣುಗಳು ಮಂಜಾಗಿದ್ದವು. ಏನೋ ಅವ್ಯಕ್ತ ಭಾವ. ಒಬ್ಬ ವ್ಯಕ್ತಿಯ/ವ್ಯಕ್ತಿತ್ವದ ನಿರ್ಮಾಣದಲ್ಲಿ ಎಂತೆಂಥ ಮಹಾನ್ ಆತ್ಮಗಳ ಕೊಡುಗೆಗಳಿರುತ್ತವೆ! ಅವರನ್ನೆಲ್ಲ ಪ್ರಾತಃಸ್ಮರಣೀಯರಾಗಿ ನಿತ್ಯವೂ ನೆನೆಯುವ ವ್ಯಕ್ತಿ ಹೇಗೆ ತನ್ನಿಂತಾನೇ ಮಹಾನ್ ಅನಿಸಿಕೊಳ್ಳುತ್ತಾನೆ! ಪೂನಾವಾಲಾ ಹೇಳಿದ್ದೂ ಅದನ್ನೇ- ಮುನ್ನಡೆಗೆ ಊರುಗೋಲಾದವರನ್ನು, ಯಶಸ್ಸಿಗೆ ಕೊಡುಗೆಯಿತ್ತವರನ್ನು ಸದಾ ನೆನಪಿಟ್ಟುಕೊಳ್ಳಬೇಕು, ಅವರಿಗೆ ಕೃತಜ್ಞರಾಗಿರಬೇಕು, ಅವರನ್ನು ಗೌರವಿಸಬೇಕು. ಅಟ್ಟ ಹತ್ತಿದ ಮೇಲೆಯೂ ಏಣಿಯನ್ನು ಮರೆಯದ ಜನಾರ್ಧನ ಸ್ವಾಮಿಯಂಥವರು ಅದನ್ನು ಚಾಚೂ ತಪ್ಪದೇ ಮಾಡುತ್ತಾರೆ. ನಾವುಗಳು ಅಟ್ಟ ಹತ್ತುವುದಿರಲಿ ಹತ್ತಿದೆವೆಂಬ ಭ್ರಮೆಯಲ್ಲೇ ಏಣಿಯನ್ನು ಒದ್ದು ಝಾಡಿಸುತ್ತೇವೆ! ಮೊನ್ನೆ ನಾಲ್ಕೈದು ದಿನಗಳ ಹಿಂದೆಯಷ್ಟೇ ಜನಾರ್ಧನ ಸ್ವಾಮಿಯಿಂದ ಒಂದು ಇಮೇಲ್ ಬಂದಿದೆ. ಹಾಲ್ದೊಡ್ಡೇರಿ ಸುಧೀಂದ್ರರಿಗೆ ಬರೆದಿರುವ ಅದರ ಪ್ರತಿಯನ್ನು ಸ್ವಾಮಿ ನನಗೂ ಕಳಿಸಿದ್ದಾರೆ. ಇಮೇಲ್ನ ಒಕ್ಕಣೆ ಇಷ್ಟು- “ಪರಮಾಣುವಿನ ಸಂರಚನೆ ಹೇಗಿರುತ್ತದೆ ಎಂದು ತಿಳಿಸುವ ಸ್ಕೇಲ್-ಮಾಡೆಲ್ ಎಂದರೆ ವಿಸ್ತೃತಗಾತ್ರದ ಪ್ರತಿರೂಪವನ್ನು ಚಿತ್ರದುರ್ಗದಲ್ಲಿ ಸ್ಥಾಪಿಸಿ ಪ್ರದರ್ಶನಕ್ಕಿಡಬೇಕೆಂದಿದೆ. ಸುಮಾರು ಎರಡು ಸೆಂ.ಮೀ ವ್ಯಾಸದ ಗೋಲಿಯಷ್ಟು ದೊಡ್ಡ ಎಲೆಕ್ಟ್ರಾನ್ ಮತ್ತು ಅದಕ್ಕೆ ಸರಿಯಾದ ಅನುಪಾತದಲ್ಲಿ ಪ್ರೋಟಾನ್ ಮತ್ತು ನ್ಯೂಟ್ರಾನ್ಗಳಿರುವ ಕೇಂದ್ರಭಾಗ. ಇದು ಮಕ್ಕಳಿಗೂ ದೊಡ್ಡವರಿಗೂ ಖಂಡಿತ ಆಸಕ್ತಿ ಹುಟ್ಟಿಸುವಂಥದ್ದಾಗುತ್ತದೆ. ಅಣುವಿನ ಪ್ರತ್ಯೇಕ ಭಾಗ (ನ್ಯೂಟ್ರಾನ್, ಪ್ರೋಟಾನ್ ಮತ್ತು ಎಲೆಕ್ಟ್ರಾನ್)ಗಳನ್ನು ಸ್ಕೇಲ್ ಅಪ್ ಮಾಡಿದಾಗ ಅವು ಒಂದಕ್ಕೊಂದು ಎಷ್ಟು ದೂರದಲ್ಲಿರುತ್ತವೆ, ನಡುವೆ ಎಷ್ಟು ಜಾಗ ಖಾಲಿಯಿರುತ್ತದೆ ಎಂದು ಅರಿತಾಗ ಅಚ್ಚರಿಯಾಗುವಂತಿರುತ್ತದೆ! ಜಲಜನಕದ ಅಣುವನ್ನೇ ತೆಗೆದುಕೊಂಡರೆ, ಅದರಲ್ಲಿ ಪ್ರೋಟಾನ್ , ನ್ಯೂಟ್ರಾನ್, ಎಲೆಕ್ಟ್ರಾನ್ಗಳ ಮೂಲ ಪ್ರಮಾಣಗಳು ಎಷ್ಟಿರುತ್ತವೆ, ಸ್ಕೇಲ್ ಅಪ್ ಮಾಡಿದಾಗ ಎಷ್ಟಾಗುತ್ತವೆ ಎಂದು ವಿವರಗಳನ್ನು ಕಲೆಹಾಕುವುದರಲ್ಲಿ ನೆರವಾಗುತ್ತೀರಾ?” ನಮ್ಮ ಭಾರತದೇಶದಲ್ಲಿ, ನಮ್ಮದೇ ಕರ್ನಾಟಕ ರಾಜ್ಯದಲ್ಲಿ ಒಬ್ಬ ರಾಜಕಾರಣಿ, ಲೋಕಸಭಾ ಸದಸ್ಯ, ಈ ರೀತಿಯ ಚಿಂತನೆಗಳನ್ನೂ (ಇದನ್ನಷ್ಟೇ ಎಂದುಕೊಳ್ಳಬೇಡಿ) ಹೊಂದಿದ್ದಾನೆ, ಮಿಕ್ಕವರೆಲ್ಲ ಅಣುವಿನಷ್ಟೂ ಮಾನವಿಲ್ಲದವರಿರುವಾಗ ಈತ ಅಣುವಿಗೇ ಮಾನ ಕೊಡುವ ಪ್ರಯತ್ನ ಮಾಡುತ್ತಿದ್ದಾನೆ ಎಂದರೆ ನಿಜಕ್ಕೂ ಹೆಮ್ಮೆಯೆನಿಸುವುದಿಲ್ಲವೇ? ಅಂದಹಾಗೆ ಅಣುವಿನ ಸ್ಕೇಲ್-ಅಪ್ ಮಾಡೆಲ್ ಹೇಗಿರಬಹುದು? ಗೋಲಿಯಷ್ಟು ದೊಡ್ಡ ಎಲೆಕ್ಟ್ರಾನ್ ಕೇಂದ್ರಭಾಗದಿಂದ ಎಷ್ಟು ದೂರ ಇರಬಹುದು? ಒಂದಡಿ? ಒಂದು ಮೀಟರ್? ಹತ್ತು ಮೀಟರ್ ಅಥವಾ ಮತ್ತೂ ಹೆಚ್ಚು? ನೀವೂ ಯೋಚಿಸಿ! [ಜನಾರ್ಧನ ಸ್ವಾಮಿಯವರ ವೆಬ್ಸೈಟ್ ಮತ್ತು ಅದರಲ್ಲಿ media ವಿಭಾಗ ಇಲ್ಲಿದೆ. ಜನಾರ್ಧನ ಸ್ವಾಮಿ ಸಂಸದನಾಗಿ 1 ವರ್ಷ ಪೂರೈಸಿದ ಸಂದರ್ಭದಲ್ಲಿ ವಿಜಯಕರ್ನಾಟಕ ಚಿತ್ರದುರ್ಗ ಆವೃತ್ತಿಯಲ್ಲಿ ಪ್ರಕಟವಾಗಿದ್ದ ನಾಲ್ಕು ಪುಟಗಳ ವಿಶೇಷ ಪುರವಣಿ ಇಲ್ಲಿದೆ.] * * * [ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] "Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!Saturday Feb 12, 2011
And the songs saga continues
Saturday Feb 12, 2011
Saturday Feb 12, 2011
ದಿನಾಂಕ 13 ಫೆಬ್ರವರಿ 2011ರ ಸಂಚಿಕೆ...
ಫ್ಯಾಶನ್, ಫಿಲಂ ಮತ್ತು ಫುಡ್ - ಮೂರು ‘ಎಫ್’ಗಳು
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] ಚಿತ್ರಗೀತೆಗಳು ಮಾಡುವ ಮೋಡಿಯೇ ಅಂಥದು! ಹಾಡುಗಳ ಗುಂಗಿನಿಂದ ಹೊರಬರುವುದೇ ಕಷ್ಟವಾಗಿದೆಯಂತೆ ಮಂಗಳೂರಿನ ಬ್ಯಾಂಕ್ ಉದ್ಯೋಗಿ ಸು.ನಾಗರಾಜ ಅವರಿಗೆ. ‘ಸವಿ ಸವಿ ನೆನಪು ಸಾವಿರ ನೆನಪು...’ ಅಂತೊಂದು ಚಿತ್ರಗೀತೆಯೇ ಹೇಳುವಂತೆ ಹಲವಾರು ಮಧುರ ಹಾಡುಗಳು ಇನ್ನೂ ನೆನಪಿನಂಗಳದಲ್ಲಿ ಸುಳಿದಾಡುತ್ತಿವೆಯಂತೆ ಬೆಂಗಳೂರಿನ ಗೃಹಿಣಿ ಶೈಲಜಾ ಚಿಪಳೂಣಕರ್ ಅವರಿಗೆ. “ಕೌಂಟ್ಡೌನ್ನ ಅಮಲೇರಿದೆ, ನೆನಪಾದ ಹಾಡುಗಳಲ್ಲೆಲ್ಲ ಸಂಖ್ಯೆ ಇದೆಯೇ ಎಂದು ಹುಡುಕುವುದೇ ಆಗಿದೆ” ಎನ್ನುತ್ತಾರೆ ಪುಣೆಯಲ್ಲಿರುವ ಸಾಫ್ಟ್ವೇರ್ ಎಂಜಿನಿಯರ್ ವಿಜಾಪುರ ಮೂಲದ ಗುರುರಾಜ ಆಶ್ರೀತ. ಕಳೆದವಾರದ ಅಂಕಣದಲ್ಲಿದ್ದ ‘ಕನ್ನಡ ಚಿತ್ರಗೀತೆಗಳ ಕೌಂಟ್ಡೌನ್’ ಲೇಖನಕ್ಕೆ ಸಿಕ್ಕಾಪಟ್ಟೆ ಪತ್ರಗಳು, ಪ್ರತಿಕ್ರಿಯೆಗಳು. ದಟ್ಸ್ಕನ್ನಡ ಡಾಟ್ ಕಾಮ್ ಸಂಪಾದಕ ಶಾಮಸುಂದರ್ ಒಮ್ಮೆ ಹೀಗೇ ಏನೋ ಲೇಖನಕಲೆಯ ವಸ್ತು ವೈವಿಧ್ಯ ವಿಚಾರದಲ್ಲಿ ಹೇಳಿದ್ದು ನೆನಪಾಗುತ್ತಿದೆ: ಫ್ಯಾಶನ್, ಫಿಲಂ ಮತ್ತು ಫುಡ್- ಈ ಮೂರು ‘ಎಫ್’ಗಳಿಗೆ ಅದೊಂದು ಅದ್ಭುತ ಸಮ್ಮೋಹನಶಕ್ತಿ ಇರುತ್ತದೆ. ಬರಹಕ್ಕೆ ಅಂಥದೇನೂ ಸಾಹಿತ್ಯಿಕ ತೂಕ ಇಲ್ಲದಿದ್ದರೂ ವಿಷಯ ಈ ಮೂರರಲ್ಲೊಂದಾಗಿದ್ದರೆ ಅದು ನೇರವಾಗಿ ಓದುಗರ ಹೃದಯಕ್ಕೇ ಲಗ್ಗೆಯಿಡುತ್ತದೆ. ಹದಿನಾರಾಣೆ ಸತ್ಯದ ಮಾತು. ಏಕೆಂದರೆ ನನಗೂ ಈಗ ಅದೇ ಆಗಿದೆ! ಸಂಖ್ಯಾಗೀತೆಗಳ ಉದ್ದುದ್ದ ಪಟ್ಟಿಗಳನ್ನೇ ಹೊತ್ತ ಪತ್ರಗಳನ್ನು ಓದಿಮುಗಿಸಿದಾಗ ‘ಎಲ್ಲೆಲ್ಲೂ ನೋಡಲೀ ನಿನ್ನನ್ನೇ ಕಾಣುವೆ...’ ಎಂಬಂತೆ ಚಿತ್ರಗೀತೆಗಳ ಸಾಲುಗಳನ್ನೇ ಕಾಣುವುದಾಗಿದೆ. ನಾನು ಬರೆದ ಲೇಖನದಲ್ಲಿ ಸುಮಾರು ಮೂವತ್ತು-ಮೂವತ್ತೈದು ಹಾಡುಗಳಿದ್ದವೋ ಏನೋ. ನನಗೆ ಬಂದ ಪತ್ರಗಳಲ್ಲಿರುವ ಹಾಡುಗಳ ಒಟ್ಟು ಲೆಕ್ಕ ಮಾಡಿದರೆ ಅದರ ಮೂರ್ನಾಲ್ಕು ಪಟ್ಟು ಆದೀತು. ಲೆಕ್ಕಾಚಾರ ಸಮತೋಲವಾಗಬೇಕಾದರೆ ಬಹುಶಃ ಈವಾರದ ಅಂಕಣದಲ್ಲಿ ನಾನು ಇನ್ನೂ ಕೆಲವು ಹಾಡುಗಳನ್ನು ಗುನುಗುನಿಸಿ ನಿಮಗೆ ದಾಟಿಸಬೇಕಾಗುತ್ತದೆ. ಅದನ್ನೇ ಮಾಡುತ್ತೇನೆ. ಆದರೆ ಇವತ್ತು ಕೌಂಟ್ಡೌನ್ ಇಲ್ಲ. ಬದಲಿಗೆ ಓದುಗರ ಓಲೆಗಳನ್ನೂ ಅಳವಡಿಸಿಕೊಂಡು, ಜತೆಯಲ್ಲಿ ಸ್ವಲ್ಪ ಕಾಡುಹರಟೆಯನ್ನೂ ನೇಯ್ದುಕೊಂಡು, ಹೀಗೇಸುಮ್ಮನೆ ಒಂದಿಷ್ಟು ಹಾಡುಗಳ ಮೆಲುಕು. ಹೃದಯಕ್ಕೆ ಲಗ್ಗೆಯಿಡುವ ಮಧುರಗೀತೆಗಳ ಪಲುಕು. ಮೊದಲಿಗೆ ಕ್ವಿಜ್ನ ವಿಲೇವಾರಿ. ಸರಿಯುತ್ತರ ‘ಚಂದ್ರಮುಖಿ ಪ್ರಾಣಸಖಿ’ ಚಿತ್ರದ ಹಾಡು ‘ಅರಳೊ ಹುಣ್ಣಿಮೆ ನೀ ಅರಳು ಮರುಳು ಮಾಡೊ ಹುಣ್ಣಿಮೆ...’ ಅದರ ಪಲ್ಲವಿಯಲ್ಲೇ ‘ಯೌವನ ನಿನ್ನ ನೆರಳಿನಲ್ಲಿದೆ ಆಕರ್ಷಣೆ ತುದಿ ಬೆರಳಿನಲ್ಲಿದೆ ನಿನ್ನ ಮುಂದೆ ಸೊನ್ನೆ ಹುಣ್ಣಿಮೆ’ ಎಂದು ಬರುತ್ತದೆ. ಸರಿಯುತ್ತರ ಬರೆದುಕಳಿಸಿದ ಮೈಸೂರಿನ ಸುಮಾ ಕೃಷ್ಣ, ಬೆಂಗಳೂರಿನ ಮನೋಹರ ಕೆ.ಎನ್, ಪರೇಶ ಕಲ್ಯಾಣ್, ಜ್ಯೋತಿ ಕಾರಂತ್ ಹಾಗೂ ಅಮೆರಿಕನ್ನಡಿಗರಾದ ಗಣಪತಿ ಪಂಡಿತ್, ವಿನಾಯಕ ಕುರುವೇರಿ, ಮತ್ತು ಜ್ಯೋತಿ ಭಟ್ ಇವರೆಲ್ಲರಿಗೂ ಅಭಿನಂದನೆಗಳು. ನಿಜಹೇಳಬೇಕೆಂದರೆ ಕಳೆದವಾರ ಆ ಕೌಂಟ್ಡೌನ್ ಸಿದ್ಧಪಡಿಸುವಾಗ ನಾನು ‘ಸೊನ್ನೆ’ ಇರುವ ಹಾಡುಗಳನ್ನು ಹುಡುಕಿರಲೇ ಇಲ್ಲ. ಸುಲಭದಲ್ಲಿ ಅವು ನನಗೆ ನೆನಪಾಗಿರಲೂ ಇಲ್ಲ. ಸಿಕ್ಕಿದ್ದ ಒಂದು ಹಾಡನ್ನೇ ಕ್ವಿಜ್ ಪ್ರಶ್ನೆಯಾಗಿಸಿ ನಿಮ್ಮಕಡೆಗೆ ಎಸೆದಿದ್ದೆ. ಬಹುಶಃ ಅದೊಂದೇ ಹಾಡು ಇರುವುದಿರಬಹುದು ಎಂದುಕೊಂಡಿದ್ದರೆ ನಾನೂ ‘ಲೆಕ್ಕದಿ ಬರಿ ಸೊನ್ನೆ’ ಆಗುತ್ತಿದ್ದೆ! ಹೌದಲ್ವಾ, ಶುಭಮಂಗಳ ಚಿತ್ರದ ‘ಸ್ನೇಹದ ಕಡಲಲ್ಲಿ...’ ಹಾಡಿನ ಆ ಸಾಲನ್ನು ನೆನಪಿಸಿಕೊಂಡು ತುಂಬಾ ಮಂದಿ ಪತ್ರಿಸಿದ್ದಾರೆ. ಹಾಗೆಯೇ ‘ಶೂನ್ಯ’ ಇರುವ ಹಾಡುಗಳನ್ನು ಸೂಚಿಸಿ ಸುಮಾರಷ್ಟು ಪತ್ರಗಳು ಬಂದಿವೆ. ಪ್ರೇಮಲೋಕದಲ್ಲಿ ‘ಮೋಸಗಾರನಾ ಹೃದಯಶೂನ್ಯನಾ...’, ಮಾನಸ ಸರೋವರದಲ್ಲಿ ‘ವೇದಾಂತಿ ಹೇಳಿದನು ಈ ಬದುಕು ಶೂನ್ಯ ಶೂನ್ಯ...’, ದೇವರದುಡ್ಡು ಚಿತ್ರದಲ್ಲಿನ ಹಾಡು- ಶಿವರಂಜಿನಿ ರಾಗ ಆಧಾರಿತ ‘ನಾನೇ ಎಂಬ ಭಾವ ನಾಶವಾಯಿತು...’ ಪಿ.ಬಿ.ಶ್ರೀನಿವಾಸ್ ಹಾಡಿದ ಮಾಸ್ಟರ್ಪೀಸ್. ಅದರ ಚರಣದಲ್ಲಿ ‘ಎಲ್ಲ ಶೂನ್ಯ ಎಲ್ಲವೂ ಶೂನ್ಯ ಉಳಿಯುವುದೊಂದೇ ದಾನಧರ್ಮ ತಂದ ಪುಣ್ಯ...’ ಸಾಲುಗಳು. ಬಹಳ ಒಳ್ಳೆಯ ಅರ್ಥಗರ್ಭಿತ ಹಾಡು. ಸೊನ್ನೆ ಅಂತ ಬರುವುದಷ್ಟೇ ಅಲ್ಲ, ಸೊನ್ನೆಯ ಬಗ್ಗೆಯೇ ಇರುವ ಹಾಡನ್ನು ಹುಡುಕಿಕೊಟ್ಟವರಿದ್ದಾರೆ. ೨೦೦೯ರಲ್ಲಿ ಬಿಡುಗಡೆಯಾದ ‘ಮೇಷ್ಟ್ರು’ ಚಿತ್ರದ ‘ಸೊನ್ನೆ ಅಂದ್ರೆ ಸುಮ್ನೆ ಅಲ್ಲ ಕಣ್ಲಾ...’ ಹಾಡು. ನನಗೆ ಇದುವರೆಗೂ ಗೊತ್ತೇ ಇರಲಿಲ್ಲ. ಕೇಳಿದರೆ ಒಳ್ಳೇ ಮಜಾ ಇದೆ ಆ ಹಾಡು. ‘ಮೇಷ್ಟ್ರು’ ಸಿನೆಮಾ ಅಷ್ಟೇನೂ ಯಶಸ್ವಿಯಾಗದ ಕಾರಣ ಹಾಡು ಜನಪ್ರಿಯವಾಗಲಿಲ್ಲವಂತೆ. ಅಂದಹಾಗೆ ನನಗೆ ಆ ಹಾಡಿನ ಇಂಟರ್ನೆಟ್ ಕೊಂಡಿಯನ್ನೂ ಸೇರಿಸಿ ಬರೆದು ತಿಳಿಸಿದವರು ಕ್ಯಾಲಿಫೋರ್ನಿಯಾದಲ್ಲಿರುವ ಸ್ನೇಹಿತ ಸುದತ್ತ ಗೌತಮ್. ಕನ್ನಡ ಚಿತ್ರರಂಗದ ಮೂಲಕವೇ ಪರಿಚಯ ಹೇಳುವುದಾದರೆ ಆತ ಚಿತ್ರಸಾಹಿತಿ ದಿ.ವಿಜಯನಾರಸಿಂಹ ಅವರ ಮೊಮ್ಮಗ (ಮಗಳ ಮಗ). ಬೇರೆಬೇರೆ ಸಂಖ್ಯೆಗಳ ಹಾಡುಗಳನ್ನು ಮತ್ತು ಎಲ್ಲ ಪತ್ರಗಳನ್ನು ಇಲ್ಲಿ ಸೇರಿಸಲು ಸಾಧ್ಯವಾಗುತ್ತಿಲ್ಲ. ಆದರೆ ಚಿತ್ರಗೀತೆಗಳನ್ನು ಜನ ಅದೆಷ್ಟು ಹಚ್ಚಿಕೊಳ್ಳುತ್ತಾರೆ, ಮನೆಮಂದಿಯೆಲ್ಲ ಸೇರಿ ಹೇಗೆ ಆನಂದಿಸುತ್ತಾರೆ ಎನ್ನುವುದಕ್ಕೆ ನಿದರ್ಶನವಾಗಿ ಒಂದೆರಡು ಪತ್ರಗಳನ್ನು ಉಲ್ಲೇಖಿಸುತ್ತೇನೆ. ಸಿಯಾಟಲ್ನಿಂದ ನಯನಾ ರಾವ್ ಬರೆದಿದ್ದಾರೆ- “ನಾನೂ ನನ್ನೆಜಮಾನ್ರೂ ಒಟ್ಟಿಗೇ ಕುಳಿತು ಬ್ಲಾಗ್ನಲ್ಲಿ ಧ್ವನಿಮಾಧ್ಯಮದಲ್ಲಿ ಕೌಂಟ್ಡೌನ್ ಕೇಳಿ ಆನಂದಿಸಿದೆವು. ತುಂಬ ಇಷ್ಟವಾಯಿತು. ಲೇಖನದಲ್ಲಿ ಬಂದ ಎಲ್ಲ ಹಾಡುಗಳ ಲಿಂಕ್ಸ್ ಸೇರಿಸಿ ಯೂಟ್ಯೂಬ್ನಲ್ಲಿ ಪ್ಲೇ-ಲಿಸ್ಟ್ ಮಾಡಿಟ್ಟೆವು”. ಶಿವಮೊಗ್ಗದಿಂದ ವಸುಮತಿ ಬಾಪಟ್ ಬರೆದಿದ್ದಾರೆ- “ಇದೊಂದು ರೋಚಕ ಅನುಭವ. ಮನೆ ಮಂದಿಯೆಲ್ಲಾ ಎಂಜಾಯ್ ಮಾಡಿದೆವು. ಪಂಚಮವೇದ ನನ್ನವರು ಯಾವಾಗಲೂ ಹಾಡುವ ಹಾಡು. ಹಾಗಾಗಿ ಆ ಸಾಲು ಅವರ ಮುಖದಲ್ಲಿ ಮಂದಹಾಸ ಮಿನುಗಿಸಿತು.” ಮೈಸೂರಿನಲ್ಲಿ ಎಂಜಿನಿಯರಿಂಗ್ ಓದುತ್ತಿರುವ ವಿನೊಲ್ ಡಿಸೋಜಾ: “ಮಂಗಳೂರಿನಲ್ಲಿರುವ ಅಮ್ಮ ನನಗೆ ಫೋನ್ನಲ್ಲಿ ಈ ಹಾಡುಗಳನ್ನು ತಿಳಿಸಿ ನಿಮಗೆ ಇಮೇಲ್ ಮಾಡಲು ಹೇಳಿದ್ದಾರೆ...” ಇವೆಲ್ಲಕ್ಕಿಂತ ಸ್ವಾರಸ್ಯದ ಪತ್ರವೆಂದರೆ ಬೆಂಗಳೂರಿನಿಂದ ಸರಸ್ವತಿ ಲಕ್ಷ್ಮಿನಾರಾಯಣ ಮತ್ತು ರಮ್ಯಾ ಸುಹಾಸ್ ಜಂಟಿಯಾಗಿ ಬರೆದಿರುವುದು. ಇವರು ಅತ್ತೆ-ಸೊಸೆ. ಹಾಗೆ ಪರಿಚಯ ತಿಳಿಸುತ್ತ ಇಬ್ಬರೂ ಸೇರಿ ಸಂಖ್ಯಾಗೀತೆಗಳನ್ನು ಕಲೆಹಾಕಿ ಅಂದವಾಗಿ ಬರೆದುಕಳಿಸಿದ್ದಾರೆ. ಹಾಡುಗಳ ಪಟ್ಟಿಗಿಂತಲೂ ಇವರ ಅನ್ಯೋನ್ಯತೆಗೆ ತಲೆದೂಗಬೇಕು. ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಅಂತಾರಲ್ಲಾ, ಇಲ್ಲಿ ಅತ್ತೆಗೂ ಸೊಸೆಗೂ ಒಂದೇ ಕಾಲ(ಮ್)! ಅದೆಲ್ಲಾ ಸರಿ, ಹಾಡುಗಳ ಕೌಂಟ್ಡೌನ್ ಎನ್ನುತ್ತ ನಾವು ಕೋಟಿ-ಲಕ್ಷಗಳಿಂದ ಹಿಡಿದು ಇಳಿಗಣನೆ ಮಾಡುತ್ತ ಸೊನ್ನೆಯವರೆಗೆ ತಲುಪಿದರೂ ಪೂರ್ಣಸಂಖ್ಯೆಗಳನ್ನು ಮಾತ್ರ ಪರಿಗಣಿಸಿದ್ದೆವಷ್ಟೆ? ಆದರೆ ದಶಮಾಂಶ ಅಥವಾ ಭಿನ್ನರಾಶಿ ಸಂಖ್ಯೆ ಇರುವ ಹಾಡೂ ಇದೆಯಂತ ಥಟ್ಟನೆ ಹೊಳೆದಿದೆ ದಕ್ಷಿಣಕನ್ನಡದ ಸುಳ್ಯ ಜಾಲ್ಸೂರಿನಲ್ಲಿ ಈಗಿನ್ನೂ ಎಸ್ಸೆಸ್ಸೆಲ್ಸಿ ಓದುತ್ತಿರುವ ಚರಣ್ ಎಸ್ ಭಟ್ ಎಂಬ ಹುಡುಗನಿಗೆ! ಇದಕ್ಕೆ ಹೇಳುವುದು ಲ್ಯಾಟರಲ್ ಥಿಂಕಿಂಗ್ ಅಂತ. ಭಿನ್ನರಾಶಿಯ ಆ ಹಾಡು ಯಾವುದಂತ ಅಂದ್ಕೊಂಡ್ರಿ? ಅದೇ, ಈಗ ಸೂಪರ್ಹಿಟ್ ಆಗಿದೆಯಲ್ಲಾ ‘ಜಾಕಿ’ ಚಿತ್ರದ ‘ಶಿವ ಅಂತ ಹೋಗುತ್ತಿದ್ದೆ ರೋಡಿನಲಿ...’ ಹಾಡು. ಅದರಲ್ಲಿ ‘1/2 ಟ್ಯಾಂಕು ಪೆಟ್ರೋಲ್ ಇತ್ತು ಬೈಕಿನಲಿ...’ ಸಾಲು. ವಾಹ್! ಹಾಡಿನ ಪಲ್ಲವಿಯಲ್ಲಿ ಸಂಖ್ಯೆಯನ್ನು ಗುರುತಿಸಿದ ಚರಣ! ಇನ್ನೊಂದು ಸ್ವಾರಸ್ಯವೂ ಇದೆ. ಇದನ್ನು ನಾನೇ ಗಮನಿಸಿದ್ದು. ಈ ಜಾಕಿ ಚಿತ್ರದ ಪ್ರತಿಯೊಂದು ಹಾಡಿನಲ್ಲೂ ಒಂದಲ್ಲ ಒಂದು ಸಂಖ್ಯೆ ಇದೆ. ‘ಶಿವ ಅಂತ ಹೋಗುತ್ತಿದ್ದೆ...’ ಹಾಡಿನಲ್ಲಿಯೇ ‘ಒಂದು ಕೇಜಿ ಅಕ್ಕಿ ರೇಟು ೩೦ ರೂಪಾಯಿ ಆಗಿಹೋಯ್ತು...’ ಅಂತ ಬರುತ್ತದೆ. ‘ಎಡವಟ್ಟಾಯ್ತು ತಲೆಕೆಟ್ಟೋಯ್ತು...’ ಹಾಡಿನಲ್ಲಿ ‘ಉಪ್ಪು ಖಾರ ತಿಂದ ಬಾಡಿಗ್ ೨೮ ಆಯ್ತು’ ಎಂದಿದೆ. ‘ಎಕ್ಕ ರಾಜ ರಾಣಿ...’ ಹಾಡಿನಲ್ಲಿ ‘ಒಂದೇಆಟ ಒಂದೇಆಟ ಎಂದುಕೊಂಡು...’ ಎಂಬ ಸಾಲಿದೆ, ಅದರಲ್ಲೇ ಮುಂದೆ ‘ದೇವ್ರವ್ನೇ ನೀ ನೈಂಟಿ (90) ಹೊಡಿ’ ಅಂತನೂ ಬರುತ್ತದೆ. ಕಡೆಗೆ ‘ಜಾಕಿ ಜಾಕಿ...’ ಟೈಟಲ್ಸಾಂಗ್ನಲ್ಲಿ ‘೬೪ ವಿದ್ಯೆಗೆಲ್ಲ ಇರೊದೊಬ್ರೇ ನಮ್ಮ ಬಾಸು’ ಎಂಬ ಸಾಲು. ಅಂತೂ ಜಾಕಿ ಏನೂ ಉಳಿಸಿಲ್ಲ ಬಾಕಿ. ಕೌಂಟ್ಡೌನ್ನಲ್ಲಿ ನಂಬರ್ 1 ಸ್ಥಾನವನ್ನಲಂಕರಿಸಿದ್ದ ಮೂರು ಹಾಡುಗಳ ಪೈಕಿ ಪ್ರೇಮಲೋಕದ ಹಾಡಿನ ಸಾಲು ಬರೆದದ್ದರಲ್ಲಿ ಒಂದು ಚಿಕ್ಕ ತಪ್ಪು ನುಸುಳಿತ್ತು. ‘ಚೆಲುವೆ ಒಂದು ಕೇಳ್ತೀನಿ ಇಲ್ಲ ಅಂದ್ರೇ ಕೊಡ್ತೀಯಾ’ ಎಂದು ನಾನು ಬರೆದಿದ್ದೆ. ಅದು, ‘ಇಲ್ಲ ಅನ್ದೇ ಕೊಡ್ತೀಯಾ’ ಅಂತಿರಬೇಕಿತ್ತು. ಈ ಸೂಕ್ಷ್ಮವನ್ನು ಗಮನಿಸಿ ಬರೆದುತಿಳಿಸಿದ್ದಾರೆ ಮಡಿಕೇರಿಯಿಂದ ಸುಧಾ ಪ್ರಸಾದ್ ಮತ್ತು ಷಿಕಾಗೋದಿಂದ ತ್ರಿವೇಣಿ ಎಸ್ ರಾವ್. ಇಬ್ಬರಿಗೂ ಧನ್ಯವಾದಗಳು. ಒಳ್ಳೆಯದೇ ಆಯ್ತು, ಚಿತ್ರಗೀತೆಗಳಲ್ಲಿ ಕಂಡುಬರುವ ಅಥವಾ ಚಿತ್ರಗೀತೆ ಹಾಡುವಾಗ ಉಚ್ಚಾರ/ಅರ್ಥ ಅಥವಾ ಮೂಲ ಪದ ಏನೆಂಬ ಅರಿವಿಲ್ಲದೆ ತಪ್ಪಾಗಿ ಹಾಡುವ ಉದಾಹರಣೆಗಳದೇ ದೊಡ್ಡ ಪಟ್ಟಿ ಇದೆ ನನ್ನ ಬಳಿ. ಅದಕ್ಕೆ ಸೇರಿಸಬಹುದು. ‘ನಾ ಮೆಚ್ಚಿದ ಹುಡುಗ’ ಚಿತ್ರದ ಟೈಟಲ್ಸಾಂಗ್ ಚರಣದಲ್ಲಿ ‘ಪದಗಳು ತುಂಬಿದ ಕವನವಿದಲ್ಲ ಹೃದಯವೆ ಅಡಗಿದೆ ಇದಲಿ’ ಎನ್ನುವಲ್ಲಿ ‘ಇದಲಿ’ ಎಂದರೇನೆಂದು ನನಗೆ ಇವತ್ತಿನವರೆಗೂ ಅರ್ಥವಾಗಿಲ್ಲ. ಅದು ‘ಇರಲಿ’ ಆಗಬೇಕು, ಆಗ ಮುಂದಿನ ಸಾಲಿನಲ್ಲಿ ‘ಇದರ ಒಡೆತನ ನಿನದೇ ಎಲ್ಲ ಕೋಮಲ ಎಚ್ಚರವಿರಲಿ’ಗೆ ಪ್ರಾಸ ಹೊಂದುತ್ತದೆ ಎನ್ನುತ್ತಾರೆ ಕೆಲವರು. ಆದರೆ ಹೆಡ್ಫೋನ್ಸ್ ಹಾಕಿ ಕೇಳಿಸಿಕೊಂಡರೂ ನನಗದು ‘ಇದಲಿ’ ಎಂದೇ ಕೇಳಿಸುತ್ತದೆ. ಪ್ರೇಮಲೋಕದ ‘ಈ ನಿಂಬೆಹಣ್ಣಿನಂಥ ಹುಡುಗಿ ಬಂತು...’ ಹಾಡಿನಲ್ಲಿ ‘ತಲೆಯಿಂದ ಉಂಗುಷ್ಠದವರೆಗೆ ಎಲ್ಲ...’ ಅಂತಿದೆ. ಉಂಗುಷ್ಠ ಎಂಬ ಪದವೇ ಇಲ್ಲ, ಅದು ‘ಅಂಗುಷ್ಠ’ ಆಗಬೇಕು. ಬಬ್ರುವಾಹನದಲ್ಲಿ ‘ನಿನ್ನ ಕಣ್ಣ ನೋಟದಲ್ಲಿ...’ ಹಾಡಿನಲ್ಲಿ ‘ನಿನ್ನ ನಡೆಯ ಕಂಡ ಹಂಸೆ ನಾಚಿ ಓಡಿತು’ ಅಂತ ಬರುತ್ತದೆ. ಪಿ.ಬಿ.ಶ್ರೀನಿವಾಸ್ ಅನುನಾಸಿಕ ಕಂಠದಲ್ಲಿ ನನಗೆ ಹಂಸೆ ‘ಹಂಪೆ’ ಅಂತ ಕೇಳಿಸೋದು. ಹಂಪೆ ಯಾಕೆ ನಾಚಿ ಓಡ್ತದಪ್ಪಾ ಎಂದು ಅಚ್ಚರಿಪಡೋದು. ಅದಕ್ಕೆ ಕಾರಣ, ಹಂಸ ಎಂಬ ಪದದ ಪರಿಚಯ ಇದ್ದಷ್ಟು ಹಂಸೆ ಗೊತ್ತಿಲ್ಲದಿರುವುದು. ಅದೇ ಚಿತ್ರದ ‘ಆರಾಧಿಸುವೆ ಮದನಾರಿ...’ ಹಾಡಿನಲ್ಲಿ ‘ಆ ಮಾರನುರವಣೆ ಪರಿಹರಿಸು...’ ಎಂಬ ಸಾಲು ಬರುತ್ತದೆ. ಉರವಣೆ ಎಂದರೆ ಆತುರ, ಅವಸರ, ಸಂಭ್ರಮ, ಆಡಂಬರ, ರಭಸ, ಹೆಚ್ಚಳ ಎಂದು ಅರ್ಥ. ಇದು ಗೊತ್ತಾಗುವವರೆಗೂ ನಾನದನ್ನು ‘ಆಮಾರ ನೊಗವನೆ...’ ಎಂದೇ ಹೇಳುತ್ತಿದ್ದೆ! ಬಂಧನ ಚಿತ್ರದ ‘ಪ್ರೇಮದ ಕಾದಂಬರಿ...’ ಹಾಡನ್ನು ‘ಬರೆದೆನು ಕಣ್ಣೀರಲಿ...’ ಎಂದು ಉತ್ತಮಪುರುಷ ಧಾಟಿಯಲ್ಲಿ ಹಾಡುವವರು ಅನೇಕರಿದ್ದಾರೆ. ಅದು ‘ಬರೆದನು ಕಣ್ಣೀರಲಿ...’ ಆಗಬೇಕು. ಇಡೀಹಾಡು ಉತ್ತಮಪುರುಷದಲ್ಲಲ್ಲ ಪ್ರಥಮಪುರುಷದಲ್ಲಿ ಇರುವುದು ಎಂದು ‘ನನ್ನ ಕಥೆಗೆ ಅಂತ್ಯಬರೆದು ಕವಿಯು ಹರಸಿದ ನನ್ನನು...’ ಎಂಬ ಸಾಲಿನಲ್ಲಿ ಗೊತ್ತಾಗುತ್ತದೆ. ಸಾಕ್ಷಾತ್ಕಾರ ಚಿತ್ರದ ಟೈಟಲ್ಸಾಂಗ್ ಎರಡು ಆವೃತ್ತಿಗಳಿವೆ. ಪಿ.ಸುಶೀಲಾ ಮಾತ್ರ ಹೇಳಿರುವುದರಲ್ಲಿ ‘ಒಲವೇ ಮರಯದ ಮಮಕಾರ...’ ಎಂದು ಕೇಳಿಸುತ್ತದೆ. ಪಿ.ಬಿ.ಶ್ರೀನಿವಾಸ್ ಜತೆಗೂಡಿ ಹಾಡಿದ್ದರಲ್ಲಿ ‘ಒಲವೇ ಮರೆಯದ ಮಮಕಾರ...’ ಎಂದು ಸರಿಯಾಗಿಯೇ ಇದೆ. ‘ಮೊಗ್ಗಿನ ಮನಸ್ಸು’ ಚಿತ್ರದಲ್ಲಿ ‘ನನಗೂ ಒಬ್ಬ ಗೆಳೆಯ ಬೇಕು...’ ಅಂತ ಚಂದದ ಹಾಡೊಂದಿದೆ. ಜಯಂತ ಕಾಯ್ಕಿಣಿ ರಚನೆ. ಗಾಯಕಿಯರು ಕೆ.ಎಸ್.ಚಿತ್ರಾ ಮತ್ತು ಪ್ರಿಯಾ ಹಿಮೇಶ್. ಆ ಹಾಡಿನಲ್ಲಿ ‘ಚಂದಿರನ ಚಟ್ನಿಯಲ್ಲಿ ಸೇರಿ ತಿನಬೇಕು’ ಅಂತ ಒಂದು ಸಾಲು ಬರುತ್ತದೆ. ಒಂದನೆಯದಾಗಿ ಅದಕ್ಕೆ ಏನರ್ಥ ಅಂತ ನನಗೆ ದೇವರಾಣೆಗೂ ಗೊತ್ತಿಲ್ಲ. ದೋಸೆ ಅಥವಾ ಇಡ್ಲಿಯನ್ನು ಚಂದಿರನಿಗೆ ಹೋಲಿಸಿದ್ದೂ ಇರಬಹುದು. ಅದಕ್ಕಿಂತಲೂ ಆಭಾಸವೆಂದರೆ ಕನ್ನಡೇತರ ಗಾಯಕಿಯ ಧ್ವನಿಯಲ್ಲಿ ಚಟ್ನಿ ಎಂಬ ಪದ ಚಡ್ಡಿ ಎಂದು ಕೇಳಿಸುವುದು! ಆ ಹಾಡನ್ನು ನೀವೊಮ್ಮೆ ಕೇಳಲೇಬೇಕು. ಇಲ್ಲಿಗೆ ನಿಮ್ಮ ಮೆಚ್ಚಿನ ಚಿತ್ರಗೀತೆಗಳು ಮತ್ತು ಕಾಡುಹರಟೆ ಮುಗಿಯಿತು. ಮುಂದಿನ ಕಾರ್ಯಕ್ರಮ ಕನ್ನಡದಲ್ಲಿ ವಾರ್ತೆಗಳು. ಪತ್ರಿಕೆಯ ಒಂದನೇ ಪುಟದಲ್ಲಿ ನೀವೇ ಓದಿಕೊಳ್ಳಿ. * * * [ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] "Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!Saturday Feb 05, 2011
Countable Countdown
Saturday Feb 05, 2011
Saturday Feb 05, 2011
ದಿನಾಂಕ 6 ಫೆಬ್ರವರಿ 2011ರ ಸಂಚಿಕೆ...
ಹೀಗೂ ಒಂದು ಕನ್ನಡ ಚಿತ್ರಗೀತೆಗಳ ಕೌಂಟ್ಡೌನ್!
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲೂ ಓದಬಹುದು] ಬಿನಾಕಾ ಗೀತ್ಮಾಲಾ! ಚಿತ್ರಗೀತೆಗಳ ಕೌಂಟ್ಡೌನ್ ಎಂದೊಡನೆ ಬಹುಶಃ ಎಲ್ಲರಿಗೂ ಮೊದಲು ನೆನಪಾಗುವುದು ಅದೇ. ಅಮೀನ್ ಸಯಾನಿಯ ಅನನ್ಯ ಶೈಲಿಯ ನಿರೂಪಣೆಯೊಂದಿಗೆ ಟಾಪ್ ಟ್ವೆಂಟಿ ಹಿಂದಿ ಚಿತ್ರಗೀತೆಗಳು. ಪ್ರತಿ ಬುಧವಾರ ಸಂಜೆ ರೇಡಿಯೋ ಸಿಲೋನ್ನಿಂದ ಬರುತ್ತಿದ್ದ ಆ ಪ್ರೋಗ್ರಾಮಿಗೆ ಸೂಜಿಗಲ್ಲಿನಂಥ ಆಕರ್ಷಣೆ. ಕ್ಯಾಸೆಟ್ಗಳ ಮಾರಾಟ, ಶ್ರೋತೃಸಂಘಗಳ ಅಭಿಮತ, ಸ್ಲೋಗನ್ ಸ್ಪರ್ಧೆಯಲ್ಲಿ ವಿಜೇತರ ಶಿಫಾರಸು- ಈ ಮೂರು ಮಾನದಂಡಗಳಿಂದ ಪ್ರಚಲಿತ ಹಿಂದಿ ಚಿತ್ರಗೀತೆಗಳ ಶ್ರೇಯಾಂಕಗಳನ್ನು ನಿರ್ಧರಿಸಿ ಬಿನಾಕಾ ಟಾಪ್ ಟ್ವೆಂಟಿ ಪಟ್ಟಿ ಸಿದ್ಧವಾಗುತ್ತಿತ್ತು. ವಾರದಿಂದ ವಾರಕ್ಕೆ ಹಾಡುಗಳ ಉತರ್-ಚಢಾವ್. ಹೊಸ ಹಾಡುಗಳ ರಂಗಪ್ರವೇಶ. ಇಪ್ಪತ್ತು ಬಾರಿ ಮೊಳಗಿದ ಹಾಡಿಗೆ ಆಮೇಲೆ ನಿವೃತ್ತಿ. ಸರ್ತಾಜ್ಗೀತ್-ಕಾ-ಬಿಗುಲ್ನೊಂದಿಗೆ ಗೌರವಪೂರ್ಣ ವಿದಾಯ. ಡಿಸೆಂಬರ್ ಕೊನೇ ವಾರದಲ್ಲಿ ಆ ವರ್ಷದ ಅತಿ ಜನಪ್ರಿಯ ಗೀತೆಗಳ ವಾರ್ಷಿಕ ಪೆರೇಡ್... ನಿಜಕ್ಕೂ ಬಿನಾಕಾ ಗೀತ್ಮಾಲಾ ಕಾರ್ಯಕ್ರಮದ್ದು ರೇಡಿಯೋ ಇತಿಹಾಸದಲ್ಲೇ ವಿಶಿಷ್ಟ ಛಾಪು. ಅದಾದಮೇಲೆ ಟಿವಿ ಬಂತು, ಅಸಂಖ್ಯಾತ ಚಾನೆಲ್ಗಳು ಶುರುವಾದವು. ಹಿಂದಿ ಮಾತ್ರವಲ್ಲದೆ ಪ್ರಾದೇಶಿಕ ಭಾಷೆಗಳ ಚಿತ್ರಗೀತೆಗಳು, ಅವುಗಳ ಟಾಪ್ ಟೆನ್ ಚಾರ್ಟ್ಗಳು ಟಿವಿಯಲ್ಲಿ ಪ್ರಸಾರವಾಗತೊಡಗಿದವು. ಈಗಂತೂ ಕಾಸಿಗೊಂದು ಕೊಸರಿಗೆರಡು ಎಂಬಂತೆ ಕೌಂಟ್ಡೌನ್ ಕಾರ್ಯಕ್ರಮಗಳು ಇವೆಯೋ ಏನೋ. ಇವತ್ತು ಪರಾಗ ಸ್ಪರ್ಶ ಅಂಕಣದಲ್ಲಿ ಕನ್ನಡ ಚಿತ್ರಗೀತೆಗಳ ಕೌಂಟ್ಡೌನ್! ಇದು ಒಂದು ವಿಶಿಷ್ಟವಾದ ಮತ್ತು ವಿಭಿನ್ನ ರೀತಿಯ ಪ್ರೆಸೆಂಟೇಷನ್. ಹೇಗೆಂದರೆ ಸಾಂಪ್ರದಾಯಿಕ ಕೌಂಟ್ಡೌನ್ಗಳಂತೆ ಇಲ್ಲಿ ಜನಪ್ರಿಯತೆಯ ಶ್ರೇಯಾಂಕಗಳಿಲ್ಲ. ಅಥವಾ, ‘ನನ್ನ ಇಷ್ಟದ ಎವರ್ಗ್ರೀನ್ ಹಾಡುಗಳು...’ ಮಾದರಿಯ ಪಟ್ಟಿಯೂ ಇಲ್ಲ. ಆದರೂ ಇದೊಂದು ಪಕ್ಕಾ ಕೌಂಟ್ಡೌನ್. ಇಲ್ಲಿರುವವು ಸಾಕಷ್ಟು ಜನಪ್ರಿಯವಾದ ಮತ್ತು ನಮಗೆಲ್ಲ ಚಿರಪರಿಚಿತವಾದ ಹಾಡುಗಳೇ. ಅವರೋಹಣ ಕ್ರಮದಲ್ಲಿಯೇ ಅವುಗಳ ಜೋಡಣೆ. ಮತ್ತೆ, ಅವರೋಹಣವೆಂದರೆ ಸಂಗೀತಸ್ವರಗಳ ಆರೋಹಣ-ಅವರೋಹಣ ಅಂತೆಲ್ಲ ಯೋಚಿಸಬೇಡಿ. ಇರಲಿ, ಪೀಠಿಕೆ ಸಾಕು. ಈಗ ಕಾರ್ಯಕ್ರಮ ಆರಂಭಿಸೋಣ. ಮೊದಲಿಗೆ ಒಂದೆರಡು ಹಾಡುಗಳನ್ನು ಹೀಗೇಸುಮ್ಮನೆ ಒಮ್ಮೆ ನೆನಪಿಸಿಕೊಳ್ಳಬೇಕು. ಇವು ಕೌಂಟ್ಡೌನ್ನ ಭಾಗವಲ್ಲ. ಆದರೆ ಕೌಂಟ್ಡೌನ್ ಹೇಗೆ ರಚನೆಯಾಗಿದೆ ಎಂದು ಅರ್ಥ ಮಾಡಿಕೊಳ್ಳುವುದಕ್ಕೆ ಇವು ಬೇಕು. ‘ಒಂದು ಮುತ್ತಿನ ಕಥೆ’ ಸಿನೆಮಾದಲ್ಲಿ ಅಣ್ಣಾವ್ರು ಹಾಡಿರುವ ‘ಒಂದು ಎರಡು ಮೂರು ನಾಲ್ಕು ಆಮೇಲೆ ಏನು...’ ಹಾಡು ಗೊತ್ತಲ್ಲ? ಹಾಗೆಯೇ ‘ಚಿನ್ನಾರಿ ಮುತ್ತ’ ಚಿತ್ರದ ‘ಒಂದು ಎರಡು ಮೂರು ನಾಲ್ಕು ಕೈಯನ್ ನೆಲಕ್ ತಾಕಿಸ್ಬೇಕು...’ ಹಾಡು. ಇನ್ನೊಂದು ತುಂಬಾ ಹಳೆಯ ಕಪ್ಪುಬಿಳುಪು ಹಾಡು, ‘ಮೊದಲ ತೇದಿ’ ಚಿತ್ರದ್ದು. ‘ಒಂದರಿಂದ ಇಪ್ಪತ್ತರವರೆಗೆ ಉಂಡಾಟ ಉಂಡಾಟ...’ ಅಂತ ಶುರುವಾಗುತ್ತದೆ. ಈ ಮೂರನ್ನೂ ನೀವು ಒಮ್ಮೆ ಸೂಕ್ಷ್ಮವಾಗಿ ಗಮನಿಸಿ. ಹಾಡಿನ ಸಾಲಿನಲ್ಲಿ ಒಂದು, ಎರಡು, ಹತ್ತು, ಇಪ್ಪತ್ತು ಅಂತೆಲ್ಲ ಅಂಕೆಸಂಖ್ಯೆಗಳು ಬರುತ್ತವೆ ಅಲ್ಲವೇ? ಹೌದು, ಅದೇ ಇವತ್ತಿನ ಈ ಸ್ಪೆಷಲ್ ಕೌಂಟ್ಡೌನ್ನ ಅಳತೆಗೋಲು. ಚಿತ್ರಗೀತೆಯ ಪಲ್ಲವಿಯಲ್ಲಾಗಲಿ ಚರಣದಲ್ಲಾಗಲಿ ಅಂತೂ ಎಲ್ಲಾದರೂ ಯಾವುದೇ ಸಂಖ್ಯೆ ಕಂಡುಬಂದರೆ ಆ ಹಾಡು ಕೌಂಟ್ಡೌನ್ ಪಟ್ಟಿಗೆ ಸೇರುತ್ತದೆ. ಸಂಖ್ಯೆಯ ಬೆಲೆಯನ್ನಾಧರಿಸಿ ಪಟ್ಟಿಯಲ್ಲಿ ಅದರ ಸ್ಥಾನ ನಿರ್ಧಾರಿತವಾಗುತ್ತದೆ. ಅದಕ್ಕೇ ಹೇಳಿದ್ದು ಇದು ನಿಜವಾದ ‘ಕೌಂಟ್’ಡೌನ್! ನಿಮಗೆ ಅಚ್ಚರಿಯಾಗಬಹುದು ಸಂಖ್ಯೆ ಎಂದರೆ ಬರೀ ಒಂದು, ಎರಡು, ನಾಲ್ಕು, ಹತ್ತು ಮುಂತಾದ ಸಣ್ಣಪುಟ್ಟ ಸಂಖ್ಯೆಗಳಲ್ಲ, ಕನ್ನಡ ಚಿತ್ರಗೀತೆಗಳಲ್ಲಿ ನಮಗೆ ಲಕ್ಷ-ಕೋಟಿಗಳೂ ಸಿಗುತ್ತವೆ! ‘ಲಾಲಿಹಾಡು’ ಎಂಬ ಇತ್ತೀಚಿನ ಚಿತ್ರದಲ್ಲಿ ‘ಕೋಟಿ ಕೋಟಿ ಹೂವುಗಳಿಗೆ ಮಕರಂದ ಒಂದೇ ಕೋಟಿ ಕೋಟಿ ಮನಗಳಿಗೆ ಅನುಬಂಧ ಒಂದೇ...’ ಎಂಬ ಹಾಡಿದೆ. ‘ಶರಪಂಜರ’ದಲ್ಲಿ ಅಳವಡಿಸಲಾದ ‘ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ...’ ಬೇಂದ್ರೆಗೀತೆಯಲ್ಲಿ ‘ಭೂ ವನ ಕುಸುಮಿಸಿ ಪುಳಕಿಸಿ ಮರಳಿಸಿ ಕೋಟಿ ಕೋಟಿ ಸಲ ಹೊಸಯಿಸಿತು...’ ಎಂದು ಶುರುವಾಗುತ್ತದೆ ಎರಡನೇ ಚರಣ. ‘ಲಕ್ಷ ಲಕ್ಷ ಕೇಳಿದಾಗ ಎಲ್ಲಿ ಓಡಿ ಹೋಗಲಿ...’ ಎನ್ನುತ್ತಾರೆ ಅಣ್ಣಾವ್ರು ‘ಗುರಿ’ ಚಿತ್ರದ ‘ವಸಂತಕಾಲ ಬಂದಾಗ...’ ಹಾಡಿನಲ್ಲಿ. ‘ಸಾವಿರ ಸಾವಿರ ಯುಗ ಯುಗ ಉರುಳಲು ಸಾಗಿದೆ ಸಂಗ್ರಾಮ...’ ಎಂದು ಗರ್ಜಿಸುತ್ತಾರೆ ‘ಪಡುವಾರಹಳ್ಳಿ ಪಾಂಡವರು’. ‘ತುಟಿ ಮೇಲೆ ಬಂದಂಥ ಮಾತೊಂದೇ ಒಂದು ಎದೆಯಲ್ಲಿ ಉಳಿದಿದ್ದು 301’ ಎನ್ನುತ್ತಾರೆ ‘ಬಂಧನ’ದಲ್ಲಿ ವಿಷ್ಣುವರ್ಧನ್. ಇನ್ನು, ಸೆಂಚುರಿ ಬಾರಿಸಿದ ಹಾಡುಗಳಂತೂ ತುಂಬಾ ಇವೆ. ‘ವಿರಹ ನೂರು ನೂರು ತರಹ...’ (ಎಡಕಲ್ಲು ಗುಡ್ಡದಮೇಲೆ), ‘100 ಕಣ್ಣು ಸಾಲದು ನಿನ್ನ ನೋಡಲು...’ (ರಾಜ ನನ್ನ ರಾಜ), ‘100 ಜನ್ಮಕು 106 ಜನ್ಮಕೂ...’ (ಅಮೆರಿಕ ಅಮೆರಿಕ), ‘ಒಂದಾನೊಂದು ಊರು ಆ ಊರಲ್ಲಿ ಇಲಿಗಳು 100...’ (ಬೇಡಿ ಬಂದವಳು), ‘ನಿನ್ನ ಕಣ್ಣ ನೋಟದಲ್ಲಿ 100 ಆಸೆ ಕಂಡೆನು...’ (ಬಬ್ರುವಾಹನ) - ಹೀಗೆ ಬೆಳೆಯುತ್ತದೆ ಪಟ್ಟಿ. ನೂರಕ್ಕಿಂತ ಕಡಿಮೆಯ ಚಿಲ್ಲರೆ ಮೊತ್ತದವನ್ನೂ ಗಮನಿಸಿದರೆ ‘ಇಸವಿಯು ಏನೋ 76 ವೇಷವ ನೋಡು 26...’ (ಹುಡುಗಾಟದ ಹುಡುಗಿ), ‘ಯಾರಿಗೆ ಬಂತು ಎಲ್ಲಿಗೆ ಬಂತು 47ರ ಸ್ವಾತಂತ್ರ್ಯ...’ (ಅಸಂಭವ), ‘16ರ ಹರೆ ಬಂದಾಗ ಕುಡಿ ನೋಟವು ಕರೆ ತಂದಾಗ...’ (ಮಧುರ ಸಂಗಮ), ‘14 ವರ್ಷ ವನವಾಸದಿಂದ ಮರಳಿ ಬಂದಳು ಸೀತೆ...’ (ಶರಪಂಜರ), ‘ಹಾವಿನ ದ್ವೇಷ 12 ವರುಷ...’ (ನಾಗರಹಾವು)- ಇವೆಲ್ಲ ಸಿಗುತ್ತವೆ. ಸಂಖ್ಯೆ ಬಂದಲ್ಲೆಲ್ಲ ಅದನ್ನು ಅಂಕಿಗಳಲ್ಲೇ ಬರೆದಿದ್ದೇಕೆಂದರೆ ನಾನೇನು ಹೇಳುತ್ತಿದ್ದೇನೆನ್ನುವುದು ಚೆನ್ನಾಗಿ ಮನದಟ್ಟಾಗುವುದಕ್ಕೆ (ಮತ್ತು ಜಾಗ ಉಳಿಸುವುದಕ್ಕೆ). ಈಗೊಂದು ಚಿಕ್ಕ ಬ್ರೇಕ್. ಹಾಡುಗಳ ಸರಣಿಯನ್ನು ಒಮ್ಮೆ ನಿಲ್ಲಿಸಿ ‘ಮೇಕಿಂಗ್ ಆಫ್ ದಿಸ್ ಲೇಖನ’ ಕುರಿತು ಸ್ವಲ್ಪ ಹೇಳುತ್ತೇನೆ. ಸಂಸ್ಕೃತ/ಕನ್ನಡ ವ್ಯಾಕರಣದ ಯಾವುದೋ ಪುಸ್ತಕದಲ್ಲಿ ಸಂಧಿ-ಸಮಾಸಗಳ ವಿವರ ಓದುತ್ತಿದ್ದೆ. ‘ಸಂಖ್ಯಾಪೂರ್ವೋದ್ವಿಗುಃ’ ಎಂಬ ನಿಯಮ ಸಿಕ್ಕಿತು. ಪದಗಳ ಜೋಡಣೆಯಲ್ಲಿ ಸಂಖ್ಯೆ ಇದ್ದರೆ ಅದು ದ್ವಿಗು ಸಮಾಸವಾಗುತ್ತದಂತೆ. ‘ಮುಕ್ಕಣ್ಣ’ (ಮೂರು ಕಣ್ಣುಗಳುಳ್ಳವನು), ‘ಇಬ್ಬಗೆ’ (ಎರಡು ಬಗೆ) ಕೆಲವು ಉದಾಹರಣೆಗಳು. ಚಿತ್ರಗೀತೆಗಳಲ್ಲಿ ಸಂಖ್ಯೆ ಇದ್ದರೆ? ಆಗ ಹೊಳೆದ ಐಡಿಯಾ ಈಗ ನಿಮ್ಮ ಮುಂದಿದೆ! ಇಲ್ಲಿ ಬಳಸಿರುವ ಚಿತ್ರಗೀತೆಗಳನ್ನು ಬರೆದ ಸಾಹಿತಿಗಳು, ರಾಗಸಂಯೋಜಿಸಿದ ಸಂಗೀತ ನಿರ್ದೇಶಕರು, ಹಾಡಿದ ಗಾಯಕ-ಗಾಯಕಿಯರು ಇವರನ್ನೆಲ್ಲ ಸ್ಮರಿಸುವುದು ಕರ್ತವ್ಯ. ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು. ಹಾಗೆಯೇ, ಹಿಂದಿ ಮತ್ತು ಕನ್ನಡ ಹಳೇಚಿತ್ರಗೀತೆಗಳ ಅದ್ಭುತ ಡೇಟಾಬ್ಯಾಂಕ್ ಹೊಂದಿರುವ ನನ್ನ ಸೋದರಮಾವ, ಮಂಗಳೂರಿನಲ್ಲಿರುವ ಚಿದಂಬರ ಕಾಕತ್ಕರ್ ಅವರಿಗೂ ಸ್ಪೆಷಲ್ ಥ್ಯಾಂಕ್ಸ್ ಸಲ್ಲಬೇಕು. ಇದು ಪತ್ರಿಕೆಯ ಅಂಕಣಬರಹ ರೂಪಕ್ಕಿಂತ ಯಾರಾದರೂ ಆರ್ಜೆ/ವಿಜೆ ಗಳ ಕ್ರಿಯೇಟಿವಿಟಿಗೆ ಸರಿಹೊಂದುವಂಥದ್ದು. ಈ ಲೇಖನದ ಇ-ಆವೃತ್ತಿಯನ್ನು sjoshi.podbean.com ಬ್ಲಾಗ್ನಲ್ಲಿ ಪ್ರಕಟಿಸಿದ್ದು ಅಲ್ಲಿ ಪ್ರತಿಯೊಂದು ಹಾಡಿಗೂ ವಿಡಿಯೋ/ಆಡಿಯೊ ಲಿಂಕ್ ಕೊಟ್ಟು ವಿಶೇಷ ಅನುಭವವಾಗುವಂತೆ ಮಾಡಿದ್ದೇನೆ. ಆಸಕ್ತರು ನೋಡಿ ಕೇಳಿ ಆನಂದಿಸಬಹುದು. ವೆಲ್ಕಮ್ ಬ್ಯಾಕ್ ಆಫ್ಟರ್ ದ ಬ್ರೇಕ್. ಈಗ ನಿಜವಾದ ಟಾಪ್ ಟೆನ್, ಅಲ್ಲ, ‘ಬಾಟಮ್ ಟೆನ್’ ಕೌಂಟ್ಡೌನ್. ಹತ್ತರಿಂದ ಒಂದರವರೆಗೆ ಇಳಿಗಣನೆ. ಮೊದಲು ನೆನಪಾಗುವುದು ಕೆ.ಎಸ್.ನ ಅವರ ಭಾವಗೀತೆ ‘ಹತ್ತು ವರುಷದ ಹಿಂದೆ ಮುತ್ತೂರ ತೇರಿನಲಿ...’, ಆದರೆ ಈ ಕೌಂಟ್ಡೌನ್ ಚಿತ್ರಗೀತೆಗಳದ್ದಾದ್ದರಿಂದ ‘ಬಂಗಾರದ ಮನುಷ್ಯ’ ಚಿತ್ರದ ‘ಹನಿಹನಿಗೂಡ್ದ್ರೆ ಹಳ್ಳ...’ ಹಾಡಿನ ಚರಣ- ‘ಹತ್ತು ಕಟ್ಟೊ ಬದ್ಲು ಒಂದು ಮುತ್ತು ಕಟ್ಟಿ ನೋಡು...’! ಒಂಬತ್ತಕ್ಕೂ ಅಣ್ಣಾವ್ರೇ ಗತಿ. ‘ಒಂಬತ್ತು ಒಂಬತ್ತು ಒಂಭತ್ತು ತೋಳ ಹಳ್ಳಕ್ಕೆ ಬಿತ್ತು...’ (ಕಲ್ಯಾಣ ಮಂಟಪ). ಅದು ಬೇಡವಾದರೆ ‘ಭಕ್ತಕುಂಬಾರ’ದಲ್ಲಿ ‘ನವಮಾಸಗಳ ಹೊಲಸಲಿ ಕಳೆದು ನವರಂಧ್ರಗಳ ತಳೆದು ಬೆಳೆದು....’ ಸಾಲುಗಳು. ನಂಬರ್ 8ಕ್ಕೆ- ‘ಮಳವಳ್ಳಿಮಳ್ಳಿ ಮದ್ದೂರಬಳ್ಳಿ ಬಿದ್ದೋದ್ಲು ಹಳ್ಳಕ್ಕೆ ಎಂಟೊಂದ್ಲಎಂಟು ಎಂಟಾಣೆಗಂಟು ಸಿಕ್ಸಿದ್ಲು ಸೊಂಟಕ್ಕೆ...’ (ತಾಯಿಯ ಮಡಿಲು). ಇನ್ನೂ ಒಂದು ಹಾಡಿನ ಸಾಲು ನೆನಪಾಗ್ತಿದೆ, ಇದು ‘ಮಹಾತ್ಯಾಗ’ ಚಿತ್ರದಲ್ಲಿ ಅಳವಡಿಸಿಕೊಂಡ ವಿ.ಸೀತಾರಾಮಯ್ಯ ವಿರಚಿತ ಭಾವಗೀತೆ. ಬ್ಯೂಟಿಫುಲ್ ಹಾಡು ‘ಯಾವ ಜನ್ಮದ ಕೆಳೆಯೋ ಕಾಣೆನು...’ ಅದರ ಚರಣದಲ್ಲಿ ‘ಎಂಟು ದಿಕ್ಕಿನ ಗಾಳಿಯಲ್ಲೂ ನಿನ್ನ ದನಿಯೇ ಕೇಳಿತು...’! ನಂಬರ್ 7- ‘ಏಳು ಸ್ವರವು ಸೇರಿ ಸಂಗೀತವಾಯಿತು ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಯಿತು...’ (ಬೇಡಿ ಬಂದವಳು); ಅದು ಇಷ್ಟವಾಗದಿದ್ದರೆ ‘ಸಪ್ತಪದಿ ಇದು ಸಪ್ತಪದಿ ಈ ಏಳು ಹೆಜ್ಜೆಗಳ ಸಂಬಂಧ...’ (ಸಪ್ತಪದಿ). ಆರು ಎಂದು ಪಲ್ಲವಿಯಲ್ಲಿ ಬರುವ ಹಾಡು ನನಗೆ ಸಿಕ್ಕಿಲ್ಲ, ಆದರೆ ಇವೆರಡು ಓಕೆ ಎಂದುಕೊಳ್ಳುತ್ತೇನೆ- ‘ಆರಡಿ ಮೂರಡಿ ನೆಲದಲ್ಲಿ ಹಿಡಿಮಣ್ಣಾಗುವ ದೇಹದಲಿ...’ (ಭಾಗ್ಯದ ಬಾಗಿಲು ಚಿತ್ರದ ‘ನಾನೇ ರಾಜಕುಮಾರ’ ಹಾಡಿನ ಚರಣ) ಮತ್ತು ‘ಆರೆಲೆ ಮಾವಿನ ಬೇರಾಗೆ ಇರುವೋಳೇ ವಾಲ್ಗದ ಸದ್ದಿಗೆ ಒದಗೋಳೇ...’ (‘ಸೇವಂತಿ ಸೇವಂತಿ’ ಚಿತ್ರದಲ್ಲಿ ಅಳವಡಿಸಿಕೊಂಡ ‘ನಿಂಬಿಯಾ ಬನದ ಮ್ಯಾಗಳ...’ ಜನಪದ ಹಾಡಿನ ಸಾಲು). ನಂಬರ್ ಐದು- ‘ಐದು ವರ್ಷಕ್ಕೊಮ್ಮೆ ಬರುವ ಕಡುಬಡವಗು ಹೆಮ್ಮೆಯ ತರುವ ಎಲ್ಲ ಜನಗಳ ಕಣ್ಣು ತೆರೆಸುವ ವರದಾನ...’ (ಮತದಾನ). ಓಹ್ ಅದು ರಾಜಕಾರಣಿಗಳನ್ನು ನೆನಪಿಸಿ ವಾಕರಿಕೆ ತರಿಸುತ್ತದೆ. ಅದಕ್ಕಿಂತ ‘ಪಂಚಮ ವೇದ ಪ್ರೇಮದ ನಾದ...’ (ಗೆಜ್ಜೆಪೂಜೆ) ಒಳ್ಳೆಯದು. ನಂಬರ್ ನಾಲ್ಕು- ‘ನನ್ನಾ ಎದೆಯಲಿ ಇಟ್ಟ ನಾಲ್ಕು ಹೆಜ್ಜೆಯ ಗುರುತು ಅಳಿಸಿಬಿಡು ಅಳಿಸಿಬಿಡು....’ (ಅರಮನೆ). ಅಯ್ಯೋ! ‘ಶುಭಮಂಗಳ’ದ ಹಾಡು ಹೇಗೆ ಮರೆಯಲಿಕ್ಕುಂಟು? ‘ನಾಕೊಂದ್ಲ ನಾಕು ನಾಕೆರಡ್ಲ ಎಂಟು ಇಷ್ಟೇ ಲೆಕ್ಕದ ನಂಟು...’! ಈಗ ಬಹುಶಃ ಕೌಂಟ್ಡೌನ್ ರಂಗೇರುತ್ತಿದೆ ನಿಮ್ಮ ಮನಸ್ಸಿನಲ್ಲಿ. ಸೋ, ಮುಂದಿನ ಸ್ಥಾನಗಳಲ್ಲಿ ತಲಾ ಮೂರು ಹಾಡುಗಳನ್ನು ಸೇರಿಸುತ್ತೇನೆ. ನಂಬರ್ ಮೂರು- ‘ಮೂರು ಕಾಸಿನ ಕುದುರೆ ಏರಿ ಬಂದ ಓ ಚದುರೆ...’ (ಅಂಜದ ಗಂಡು), ‘ಈ ದೇಹ ಮೂರು ದಿನ ಅಲ್ಲವೇನು ಮೃತ್ಯು ಸನ್ನಾಹ ಬೆನ್ನ ಹಿಂದೆ ಬಲ್ಲೆಯೇನು...’ (ಭೂಕೈಲಾಸ) ಮತ್ತು ‘ತರೀಕೆರೆ ಏರಿ ಮೇಲೆ ಮೂರು ಕರಿ ಕುರಿಮರಿ...’ (ದೇವರದುಡ್ಡು). ನಂಬರ್ ಟೂ ಅಂದರೆ ಎರಡನೇ ಸ್ಥಾನದಲ್ಲಿ- ‘ಬೆಳಗಾಗೆದ್ದು ಹೆಡ್ಲೈನ್ಸ್ ಓದು ಎರಡೂ ಕಣ್ಣಲ್ ಟಿವಿ ನೋಡು....’ (ಪಂಚರಂಗಿಯ ಲೈಫು ಇಷ್ಟೇನೇ); ‘ಎರಡು ಜಡೆಯನ್ನು ಎಳೆದು ಕೇಳುವೆನು ನೀ ಸ್ವಲ್ಪ ನಿಲ್ಲಬಾರದೇ...’ (ಜಾಕಿ) ಮತ್ತು ತತ್ತ್ವಜ್ಞಾನ ಉಪದೇಶವ ಕೇಳು- ‘ಇಲ್ಲೇ ಸ್ವರ್ಗ ಇಲ್ಲೇ ನರಕ ಮೇಲೇನಿಲ್ಲ ಸುಳ್ಳು ಹುಟ್ಟು ಸಾವು ಎರಡರ ಮಧ್ಯೆ ಮೂರು ದಿನದ ಬಾಳು...’ (ನಾಗರಹೊಳೆ). ಇನ್ನು, ನಂಬರ್ 1 ಸ್ಥಾನಕ್ಕೆ ಯಾವ ಹಾಡನ್ನು ಆ(ಏ)ರಿಸೋಣ? ಏಕೆಂದರೆ ಆಮೇಲೆ ‘ಹೇಳುವುದು ಒಂದು ಮಾಡುವುದು ಇನ್ನೊಂದು ನಂಬುವುದು ಹೇಗೊ ಕಾಣೆ...’ (ಜ್ವಾಲಾಮುಖಿ) ಆಗಬಾರದಲ್ಲ? ಹೌ ಎಬೌಟ್ ‘ಚೆಲುವೆ ಒಂದು ಕೇಳ್ತೀನಿ ಇಲ್ಲಾ ಅನ್ದೇ ಕೊಡ್ತೀಯಾ...’ (ಪ್ರೇಮಲೋಕ)? ಬೇಡಾ, ನಾವೆಲ್ಲರೂ ಒಂದೇ ಎಂದು ಸಾರುವ ‘ಒಂದೇ ನಾಡು ಒಂದೇ ಕುಲವು ಒಂದೇ ದೈವವು...’ (ಮೇಯರ್ ಮುತ್ತಣ್ಣ) ಚಿತ್ರದ ಈ ಹಾಡನ್ನೇ ನಂ.1 ಎಂದು ಪರಿಗಣಿಸಿ ಬಾಳಿನಲ್ಲಿ ಅದನ್ನೇ ಅನುಸರಿಸುವ ಪ್ರತಿಜ್ಞೆ ಮಾಡೋಣ. ಆಗಬಹುದಲ್ಲವೇ? ಇದಪ್ಪಾ ಕೌಂಟ್ಡೌನ್ ಅಂದ್ರೆ! ಈಗ ಕ್ವಿಜ್ ಟೈಮ್. ನಿಮಗೆ ಕೆಲಸ. ಪ್ರಶ್ನೆ ಏನೆಂದರೆ ‘ಸೊನ್ನೆ’ ಇರುವ ಕನ್ನಡ ಚಿತ್ರಗೀತೆಯೂ ಒಂದಿದೆ. ಯಾವುದು ಎಂದು ನೀವು ತಿಳಿಸಬೇಕು. ಕ್ಲೂ ಬೇಕಾ? ಇದು ಕಳೆದ ಶತಮಾನದಲ್ಲಿ ಬಿಡುಗಡೆಯಾದ, ರಮೇಶ್-ಪ್ರೇಮಾ ಅಭಿನಯಿಸಿರುವ ಚಿತ್ರದ ಹಾಡು. ಚಿತ್ರದ ಹೆಸರಿನ ಸ್ವಲ್ಪ ಭಾಗವು ಸೊನ್ನೆಯನ್ನೇ ಹೋಲುತ್ತದೆ. ಹಾಡು ನೆನಪಾದರೆ ಬರೆದು ತಿಳಿಸಿ. ಇಲ್ಲವಾದರೂ, 1 ಮತ್ತು 100 ಈ ಎರಡು ಸಂಖ್ಯೆಗಳನ್ನು ಬಿಟ್ಟು (ಇವು ಸಿಕ್ಕಾಪಟ್ಟೆ ಇವೆಯಾದ್ದರಿಂದ ಬೇಡಾ) ಬೇರೆ ಯಾವ ಸಂಖ್ಯೆ ಇರುವ ಹಾಡು ಇವತ್ತಿನ ಕೌಂಟ್ಡೌನ್ನಲ್ಲಿ ಕಾಣಿಸಿಕೊಳ್ಳದಿರುವುದು ನಿಮ್ಮ ನೆನಪಿಗೆ ಬಂದರೂ ಬರೆದು ತಿಳಿಸಬಹುದು. ಮತ್ತೆ ಭೇಟಿಯಾಗೋಣ ಮುಂದಿನವಾರ ಇದೇ ಪತ್ರಿಕೆಯ ಇದೇ ಅಂಕಣದಲ್ಲಿ. ಅಲ್ಲಿಯವರೆಗೆ, ನಮಸ್ಕಾರ. * * * [ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲೂ ಓದಬಹುದು] "Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!Saturday Jan 22, 2011
Eat but dont eat
Saturday Jan 22, 2011
Saturday Jan 22, 2011
ದಿನಾಂಕ 23 ಜನವರಿ 2011ರ ಸಂಚಿಕೆ...
ತಿನ್ನುವುದೆಂದರೆ ಬರೀ ತಿನ್ನುವುದೊಂದೇ ಅಲ್ಲ
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲೂ ಓದಬಹುದು.] ಮತ್ತಿನ್ನೇನು ಎಂದು ನೀವು ಕೇಳಬಹುದು. ತಿನ್ನುವುದೆಂದರೆ ತಿನ್ನುವುದಷ್ಟೇ ಅಲ್ಲದೆ ಬೇರೇನು ಅರ್ಥ ಬರುತ್ತದೆ ಎಂದು ಪ್ರಶ್ನಿಸಬಹುದು. ಆದರೆ ನಮ್ಮೆಲ್ಲರ ಮಾತಿನಲ್ಲಾಗಲೀ ಬರವಣಿಗೆಯಲ್ಲಾಗಲೀ ತಿನ್ನು ಮತ್ತು ಅದರ ಸಮಸಂಬಂಧಿ ಕ್ರಿಯಾಧಾತುಗಳ ಬಗೆಬಗೆಯ ಬಳಕೆಯನ್ನು ಒಮ್ಮೆ ಗಮನಿಸಿದರೆ ಗೊತ್ತಾಗುತ್ತದೆ. ತಿನ್ನುವ ಪ್ರಕ್ರಿಯೆ ಅಥವಾ ತಿನ್ನದೆಯೇ ತಿನ್ನುವ ಪ್ರಕ್ರಿಯೆಯಿಂದ ಭಾಷೆಗೊಂದು ಸೊಗಸು ಬಂದಿರುವುದು ನಮಗೆ ಕಂಡುಬರುತ್ತದೆ. ಒಂದು ಸರಳ ಉದಾಹರಣೆ ಕೊಡುತ್ತೇನೆ. ಮುದ್ದಾದ ಮಗುವನ್ನು ಮುದ್ದುಮಾಡುವಾಗ ನಾವು ಕೆಲವೊಮ್ಮೆ ಪ್ರೀತಿಯಿಂದ ತಿಂದುಬಿಡೋಣ ಅನ್ನಿಸ್ತಿದೆ ಎನ್ನುವುದಿದೆ. ಹಾಗಂತ ಮಕ್ಕಳನ್ನು ತಿಂದುಬಿಡಲಿಕ್ಕೆ ನಾವೇನೂ ಮಾರ್ಜಾಲ ಜಾತಿ ಅಲ್ಲ. ಆಶ್ಚರ್ಯವೆಂದರೆ ಮಕ್ಕಳು ತುಂಬಾ ತಂಟೆಕೋರರಾಗಿದ್ದರೆ ಅವರ ಮೇಲೆ ಸಿಟ್ಟಿನಿಂದ ದುರುಗುಟ್ಟುವಾಗಲೂ ತಿಂದುಬಿಡುತ್ತೇವೇನೋ ಎಂಬಂತೆಯೇ ಇರುತ್ತದೆ ನಮ್ಮ ಮುಖಭಾವ. ಪ್ರೀತಿ ಮತ್ತು ಸಿಟ್ಟು ತದ್ವಿರುದ್ಧ ಭಾವನೆಗಳು. ತಿನ್ನದೆಯೇ ತಿನ್ನುವ ಪ್ರಕ್ರಿಯೆಯ ಮೂಲಕ ಅವುಗಳನ್ನು ಪ್ರಕಟಪಡಿಸುವುದು ನಮಗೆ ಸಾಧ್ಯವಾಗಿರುತ್ತದೆ. ಅವನು ತುಂಬಾ ತಲೆ ತಿಂತಾನೆ ಎನ್ನುತ್ತೇವೆ. ನಿಜವಾಗಿಯೂ ತಲೆಯನ್ನು ತಿನ್ನುವುದು ಸಾಧ್ಯವಿಲ್ಲವೆಂದು ಗೊತ್ತು. ಅದರಲ್ಲೂ ಸಸ್ಯಾಹಾರಿಯಾಗಿದ್ದರಂತೂ ಬಿಲ್ಕುಲ್ ಸಾಧ್ಯವಿಲ್ಲ. ಅಲ್ಲದೆ ತುಂಬಾ ತಲೆ ತಿನ್ನಲು ನಾವೇನು ರಾವಣನಂತೆ ಹತ್ತು ತಲೆಗಳನ್ನಿಟ್ಟುಕೊಂಡಿರುವುದಿಲ್ಲ. ಪ್ರಾಣ ತಿಂತಾನೆ ಅಥವಾ ಜೀವ ತಿಂತಾನೆ ಎಂದೂ ಹೇಳುತ್ತೇವೆ. ಪ್ರಾಣ ಅಥವಾ ಜೀವ ಎನ್ನುವುದು ಭೌತಿಕ ವಸ್ತು ಅಲ್ಲ. ಹಾಗಿರುವಾಗ ಅದನ್ನು ತಿನ್ನುವುದು ಸಾಧ್ಯವೇ ಇಲ್ಲ. ಶಾಲೆಯಲ್ಲಿ ಮೇಷ್ಟ್ರ ಕೈಯಿಂದ ಪೆಟ್ಟು ತಿಂದದ್ದನ್ನು ನೆನಪಿಸಿಕೊಳ್ಳುತ್ತೇವೆ. ಮಗ್ಗಿಯನ್ನೋ ಪದ್ಯವನ್ನೋ ಬಾಯಿಪಾಠ ಒಪ್ಪಿಸುವಾಗ ನಡುವೆ ಅಲ್ಲಲ್ಲಿ ಬಿಟ್ಟುಕೊಂಡು ಹೇಳಿದರೆ ಅದನ್ನ್ಯಾಕೆ ತಿಂದುಬಿಟ್ಟೆ ಎನ್ನುತ್ತಾರೆ ಮೇಷ್ಟ್ರು. ಹೊಟ್ಟೆಗೇನು ತಿನ್ನುತ್ತೀ ಅನ್ನವಾ ಸೆಗಣಿಯಾ ಎಂದು ಮೂದಲಿಸುತ್ತಾರೆ. ಏಟು ಬೀಳುವುದು ಚರ್ಮಕ್ಕೆ. ಆದರೂ ಪೆಟ್ಟು ತಿನ್ನುವುದು ಅಂತಲೇ ಹೇಳುತ್ತೇವೆ. ಏಟಿನ ರುಚಿ ಹೇಗಿತ್ತು ಎಂಬ ವಿವರಣೆ ಬೇರೆ. ಕಿತ್ತು ತಿನ್ನುವ ಬಡತನ ಎಂಬ ಮಾತು. ಬಡತನ ಏನನ್ನು ಕೀಳುತ್ತದೆ ಅಥವಾ ಏನನ್ನು ತಿನ್ನುತ್ತದೋ ಗೊತ್ತಿಲ್ಲ. ಅದೇವೇಳೆ ಶ್ರೀಮಂತನಾಗಿ ಕೂತು ತಿಂದರೆ ಕುಡಿಕೆ ಹೊನ್ನು ಸಾಲದು. ಕುಡಿಕೆಯಲ್ಲಿನ ಹೊನ್ನನ್ನು ಅದೇ ರೂಪದಲ್ಲಿ ಇಷ್ಟರವರೆಗೆ ಯಾರಾದರೂ ತಿಂದವರಿದ್ದಾರೆಯೇ ತಿಳಿಯದು. ಮೊನ್ನೆ ಎಲ್ಲೋ ಓದಿದ ನೆನಪು. ಚಿನ್ನದಸರ ಕದ್ದ ಒಬ್ಬ ಕಳ್ಳ ಸಿಕ್ಕಿಬೀಳುತ್ತೇನೆಂದು ಗೊತ್ತಾದಾಗ ಆ ಸರವನ್ನು ತಿಂದುಬಿಟ್ಟನಂತೆ. ಅನ್ನ ತಿನ್ನುವ ಬದಲು ಚಿನ್ನ ತಿಂದವನಾದನಂತೆ. ತಾನು ಚಿನ್ನ ತಿಂದು ಪೊಲೀಸರಿಗೆ ಚಳ್ಳೇಹಣ್ಣು ತಿನ್ನಿಸುವ ಹುನ್ನಾರ ಅವನದು. ಚಳ್ಳೇಹಣ್ಣು ಎಂದರೇನು ಅದನ್ನು ತಿನ್ನಲಿಕ್ಕಾಗುತ್ತದೆಯೇ ರುಚಿ ಹೇಗಿರುತ್ತದೆ ಎಂದು ಬಲ್ಲವರಿಲ್ಲ. ಪೊಲೀಸರು ಮಾತ್ರ ಅದನ್ನು ತಿನ್ನುತ್ತಾರೆ. ಅದೂ ಕಳ್ಳನ ಕೈಯಿಂದ ಮಾತ್ರ. ಹಾಗೆಂದು ಸೃಷ್ಟಿಕರ್ತನೇ ನಿಯಮ ಮಾಡಿಟ್ಟಿದ್ದಾನೋ ಗೊತ್ತಿಲ್ಲ. ಅಂದಹಾಗೆ ಕೂತು ತಿಂದರೆ ಕುಡಿಕೆ ಹೊನ್ನು ಸಾಲದು ಎಂಬ ಗಾದೆಯಿಂದಲೇ ನಿಂತು ತಿನ್ನುವ ಪದ್ಧತಿ ಅಂದರೆ ಬೆಂಗಳೂರಿನ ದರ್ಶಿನಿಗಳು ಶುರುವಾದದ್ದು. ಬಫೆ ಊಟದ ಸಂಗತಿಯೂ ಸೇಮ್. ಇಂಗು ತಿಂದ ಮಂಗನ ಹೋಲಿಕೆ ಮುಖಭಂಗ ಮಾಡಿಕೊಂಡವರಿಗೆ. ಮಂಗ ನಿಜವಾಗಿಯೂ ಇಂಗು ತಿಂದ ಪುರಾವೆ ಇದೆಯೇ ಎಂದು ಆ ಹನುಮಂತನಿಗೂ ಗೊತ್ತಿರಲಿಕ್ಕಿಲ್ಲ. ಕಡಲೆ ತಿಂದು ಕೈತೊಳೆದುಕೊಂಡಂತೆ ಅಂತ ಇನ್ನೊಂದು ಗಾದೆ. ವಹಿಸಿಕೊಂಡ ಕೆಲಸವನ್ನು ಚೊಕ್ಕವಾಗಿ ಮಾಡಿಮುಗಿಸುವುದು ಎಂದು ಅರ್ಥ. ನಿಜವಾಗಿ ಕಡಲೆ ತಿನ್ನುವುದೇನಿದ್ದರೂ ಕೆಲಸವೆಲ್ಲ ಮುಗಿದಮೇಲೆಯೇ. ತಾತ್ಪರ್ಯವೇನೆಂದರೆ ಮೇಲಿನೆಲ್ಲ ಉದಾಹರಣೆಗಳಲ್ಲೂ ಅಸಲಿಗೆ ಏನನ್ನೂ ತಿನ್ನದೆಯೇ ಬಹಳಷ್ಟನ್ನು ತಿಂದದ್ದಿರುತ್ತದೆ. ತಿನ್ನುವಷ್ಟೇ ಸ್ವಾರಸ್ಯ ನುಂಗುವ ಕ್ರಿಯೆಯದೂ. ಜೀವ ತಿನ್ನುವ ರೋಗ ವಾಸಿಯಾಗಲೆಂದು ಮಾತ್ರೆ ನುಂಗುತ್ತೇವೆ. ಕೆಲವರಿಗೆ ಬೆಳಿಗ್ಗೆ ಮಧ್ಯಾಹ್ನ ಸಂಜೆ ಹೀಗೆ ಮೂರುಹೊತ್ತೂ ಮಾತ್ರೆಗಳದೇ ಫಳ್ಹಾರ. ನೋವು ನುಂಗಿ ನಲಿವಿನಿಂದಿರಲು ಪ್ರಯತ್ನಿಸುತ್ತೇವೆ. ಅಳು ನುಂಗಿ ನಗುಮುಖ ಪ್ರದರ್ಶಿಸುತ್ತೇವೆ. ಗುಟ್ಟನ್ನು ನುಂಗಿ ಹೊಟ್ಟೇಲಿಟ್ಟುಕೊಳ್ಳುತ್ತೇವೆ. ಭ್ರಷ್ಟ ರಾಜಕಾರಣಿಗಳು ಕಣ್ಣೆದುರೇ ಕೋಟಿಗಟ್ಟಲೆ ನುಂಗುತ್ತಿರಬೇಕಾದರೆ ಏನೂ ಮಾಡದವರಾಗುತ್ತೇವೆ. ಜಾಗತೀಕರಣದ ಹೆಸರಿನಲ್ಲಿ ದೊಡ್ಡದೊಡ್ಡ ಕಾರ್ಪೊರೇಟ್ ಕಂಪನಿಗಳು ಸಣ್ಣ ಉದ್ಯಮಗಳನ್ನು ನುಂಗುವುದನ್ನು ನೋಡುತ್ತೇವೆ. ತಿಮಿಂಗಿಲಗಳು ಸಣ್ಣ ಮೀನುಗಳನ್ನು ನುಂಗಿದಂತೆ ಎನ್ನುತ್ತೇವೆ. ಅಭಿವೃದ್ಧಿಯ ಹೆಸರಿನಲ್ಲಿ ಯೋಜನೆಗಳು ಬಡರೈತರ ಜಮೀನನ್ನು ಆಪೋಷಣ ತೆಗೆದುಕೊಳ್ಳುವುದನ್ನು ದಿನಾಲೂ ನೋಡುತ್ತೇವೆ. ಒಳಗೊಳಗೇ ಕುದಿಯಬೇಕಾಗಿ ಬಂದರೂ ಸಿಟ್ಟನ್ನೂ ನುಂಗಿಕೊಳ್ಳುತ್ತೇವೆ. ಪ್ರಕೃತಿವಿಕೋಪಗಳು ಆಸ್ತಿಪಾಸ್ತಿಯನ್ನು ನುಂಗಿ ನೊಣೆದಾಗ ಹತಾಶರಾಗುತ್ತೇವೆ. ಗೋವಿಂದ ಗುರುವಿನ ಪಾದ ನನ್ನನೇ ನುಂಗಿತ್ತಾ ಎಂದುಕೊಂಡು ಶಿಶುನಾಳ ಶರೀಫರಾಗುತ್ತೇವೆ. ಕೋಡಗನ ಕೋಳಿ ನುಂಗಿತ್ತಾ ತತ್ತ್ವಪದದಲ್ಲಿ ಶರೀಫಜ್ಜ ನಿಜವಾಗಿಯೂ ಅದೇನೋ ಪಾರಮಾರ್ಥಿಕವಾದುದನ್ನೇ ಹೇಳಿದ್ದಾನೆ. ನಮಗದು ಸುಲಭದಲ್ಲಿ ಅರ್ಥವಾಗುವುದಿಲ್ಲ ಅಷ್ಟೇ. ಸಾಮಾನ್ಯವಾಗಿ ಯಾವುದು ನುಂಗುತ್ತದೋ ಅದು ಹೊರಗೆ ಮತ್ತು ಯಾವುದು ನುಂಗಲ್ಪಡುತ್ತದೋ ಅದು ಒಳಗೆ. ಕೇರೆಹಾವು ಕಪ್ಪೆಯನ್ನು ನುಂಗಿದರೂ ಹಾಗೆಯೇ. ಕಾಳಿಂಗ ಸರ್ಪವು ಕೇರೆಹಾವನ್ನು ನುಂಗಿದರೂ ಹಾಗೆಯೇ. ಇದು ಸಾಮಾನ್ಯ ಜ್ಞಾನ. ಆದರೆ ಶರೀಫಜ್ಜನ ಪದದಲ್ಲಿ ಗೋಡೆ ಸುಣ್ಣವ ನುಂಗಿ ಎಂಬ ಸಾಲನ್ನೇ ತೆಗೆದುಕೊಳ್ಳಿ. ಗೋಡೆಗೆ ಸುಣ್ಣ ಹಚ್ಚಿದಾಗ ಸುಣ್ಣ ಹೊರಗೆ ಮತ್ತು ಗೋಡೆ ಒಳಗೆ. ಅಂದರೆ ಸುಣ್ಣ ಗೋಡೆಯನ್ನು ನುಂಗಿದಂತೆ. ಆದರೆ ಸುಣ್ಣ ಹಚ್ಚುವಾಗ ಗೋಡೆ ಅದನ್ನು ಹೀರಿಕೊಂಡಿರುತ್ತದೆ. ಆ ಲೆಕ್ಕದಲ್ಲಿ ಗೋಡೆ ಹೊರಗೆ ಸುಣ್ಣ ಒಳಗೆ. ಇದೊಂಥರ ಕನಕದಾಸರು ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ ಎಂದು ಹಾಡಿದಂತೆಯೇ. ಅರ್ಥೈಸಲು ಜಟಿಲವಾದ ವಿಚಾರ. ನುಂಗುವುದು ತಿನ್ನುವುದು ಕುಡಿಯುವುದು ಕಬಳಿಸುವುದು ಎಲ್ಲ ಒಂದೇ. ಸರ್ವದೇವ ನಮಸ್ಕಾರಂ ಕೇಶವಂ ಪ್ರತಿಗಚ್ಛತಿ ಎಂಬಂತೆ ಸೇರುವುದು ಎಲ್ಲ ಹೊಟ್ಟೆಗೇ. ಆದರೆ ಕುಡಿಯುವ ವಿಚಾರದಲ್ಲೂ ತಿನ್ನುವುದರಂತೆಯೇ ಗಮ್ಮತ್ತಿದೆ. ಅರೆದು ಕುಡಿಯುವುದು ಎಂದು ನೀವು ಕೇಳಿರಬಹುದು. ವಿಜಯ ಕರ್ನಾಟಕ ಪತ್ರಿಕೆಯಲ್ಲಿ ನಿನ್ನೆಯಷ್ಟೇ ಒಂದು ಸುದ್ದಿ ಪ್ರಕಟವಾಗಿತ್ತು. ಅದೇನೆನ್ನುತ್ತದೆಯೆಂದರೆ ಬರೆದೂ ಬರೆದು ಅರೆದು ಕುಡಿಯುವುದೇ ವಿದ್ಯಾರ್ಥಿಗಳಿಗೆ ಉತ್ತಮವಂತೆ. ಅದರಿಂದ ಮೆದುಳಿನಲ್ಲಿ ಜ್ಞಾನ ಹೆಚ್ಚು ಪರಿಣಾಮಕಾರಿಯಾಗಿ ಅಚ್ಚೊತ್ತುತ್ತದೆ ಎಂದು ಸಂಶೋಧಕರು ಪತ್ತೆ ಮಾಡಿದ್ದಾರಂತೆ. ಹಾಗಾಗಿಯೇ ಇರಬಹುದು ಗಣಿತ ಪ್ರಮೇಯಗಳನ್ನು ಕೆಮೆಸ್ಟ್ರಿ ಫಾರ್ಮುಲಾಗಳನ್ನು ಅರೆದು ಕುಡಿಯುತ್ತಾರೆ ಎಂಜಿನಿಯರಿಂಗ್ ಅಥವಾ ಮೆಡಿಕಲ್ ಶಿಕ್ಷಣದ ಕನಸು ಕಾಣುವವರು. ಪ್ರೀತಿ ಸೌಂದರ್ಯ ಶೃಂಗಾರ ಇತ್ಯಾದಿಗಳನ್ನು ಬೊಗಸೆಯಲ್ಲಿ ಮೊಗೆಮೊಗೆದು ಕುಡಿಯುತ್ತಾರೆ ಕವಿಹೃದಯ ಇದ್ದವರು. ಹೃದಯ ಕದ್ದವರೂ ಅನ್ನಿ ಬೇಕಿದ್ದರೆ. ಪ್ರೇಮವಂಚಿತರಾದವರು ನಿಜವಾಗಿಯೂ ಕುಡಿಯುವ ಚಟಕ್ಕೆ ಬಲಿಬೀಳಬಹುದು. ಹಾಗೆ ನೋಡಿದರೆ ಆ ಕುಡಿತವೂ ನಿಜ ಅರ್ಥದಲ್ಲಿ ಹೊಟ್ಟೆಗಲ್ಲ ತಲೆಗೇ ಹೋಗುವುದು. ಇನ್ನು ಹೊಟ್ಟೆಬಾಕರ ತಿನ್ನುವಿಕೆಯ ಬಣ್ಣನೆಯಲ್ಲೂ ಭಾಷೆಯ ಬೆಡಗು ಬಹಳ ಚೆನ್ನಾಗಿರುತ್ತದೆ. ಅಗೋಳಿ ಮಂಜಣ್ಣ ಅಂತೊಬ್ಬ ಐತಿಹಾಸಿಕ ಪುರುಷ ಹಿಂದೆ ತುಳುನಾಡಿನಲ್ಲಿದ್ದನಂತೆ. ಮಹಾಬಲಾಢ್ಯ ಕಟ್ಟುಮಸ್ತಾದ ಆಳು. ಅವನ ಕಥೆಯಲ್ಲಿ ಅವನ ಊಟತಿಂಡಿಯ ವಿವರಗಳು ರೋಚಕ. ಬಜಿಲ್ ಒಂಜಿ ಕಳಾಸೆ ಆಂಡಾಲಾ ಒರೊರೊ ಅರಾಅರಾ ಆಪುಂಡ್. ಗೋಂಟು ಥಾರಾಯಿ ಇರ್ವತ್ತೈನ್ಲಾ ಬಾಯಿಡೇ ಗಾಣ ಫಾಡುಂಡ್. ಅಗೋಳಿ ಮಂಜಣ್ಣನ ಕಥೆ ಹೇಳುವ ತುಳು ಪಾಡ್ದನದ ಸಾಲುಗಳು ಅವು. ಕಳಸಿಗೆಯಷ್ಟು ಅವಲಕ್ಕಿ ಇದ್ದರೂ ಅಗೋಳಿ ಮಂಜಣ್ಣನಿಗೆ ಅದು ಮುಷ್ಟಿಯಲ್ಲಿ ತುಂಬಿದರೆ ಹೆಚ್ಚು. ಕೊಬ್ಬರಿ ಗಿಟುಕುಗಳನ್ನು ಒಂದಿಪ್ಪತ್ತೈದರಷ್ಟು ಒಟ್ಟಿಗೇ ಬಾಯಿಗೆ ಹಾಕಿ ಅಗಿಯತೊಡಗಿದನೆಂದರೆ ಮಂಜಣ್ಣನ ಬಾಯಿ ಎಣ್ಣೆಯ ಗಾಣವೋ ಎಂದುಕೊಳ್ಳಬೇಕು. ಹಾಗಿರುತ್ತಿತ್ತಂತೆ ದೃಶ್ಯ. ಮಹಾಭಾರತದಲ್ಲಿ ಬಕಾಸುರನಿಗೆ ಬಂಡಿ ತುಂಬ ಆಹಾರ ತೆಗೆದುಕೊಂಡು ಹೋಗುವ ಭೀಮಸೇನ ತಾನೇ ಅದನ್ನು ತಿಂದು ತೇಗುತ್ತಾನೆ. ಆಮೇಲೆ ಬಕಾಸುರನನ್ನೂ ಕೊಂದು ಮುಗಿಸುತ್ತಾನೆ. ಮಾಯಾಬಝಾರ್ ಸಿನೆಮಾದಲ್ಲಿ ಅದು ವಿವಾಹ ಭೋಜನವಿದು ವಿಚಿತ್ರ ಭಕ್ಷ್ಯಗಳಿವು ಎಂಬ ಹಾಡಾಗುತ್ತದೆ. ತಿಂದು ತೇಗುವ ಅಥವಾ ತಿಂದು ಅರಗಿಸಿಕೊಳ್ಳುವ ವಿಚಾರ ಬಂದಾಗ ವಾತಾಪಿಯ ಕಥೆಯೂ ನೆನಪಾಗುತ್ತದೆ. ಇಲ್ವಲ ಮತ್ತು ವಾತಾಪಿ ಹೆಸರಿನ ಇಬ್ಬರು ರಾಕ್ಷಸರಿದ್ದರು. ಅವರು ಅಣ್ಣತಮ್ಮಂದಿರು. ತಮಗೆ ಸಂತಾನಪ್ರಾಪ್ತಿಯಾಗಬೇಕಂತಷ್ಟೇ ಅಲ್ಲ ಇಂದ್ರನಂಥ ಮಗನೇ ಹುಟ್ಟಬೇಕು ಎಂದು ಅವರಿಬ್ಬರಿಗೂ ಬಯಕೆ. ಹಾಗೆಂದು ಅನುಗ್ರಹಿಸುವಂತೆ ಅವರು ಕಂಡಕಂಡ ಬ್ರಾಹ್ಮಣರನ್ನೆಲ್ಲ ಬೇಡುತ್ತಿದ್ದರು. ಇಷ್ಟಾರ್ಥ ಕೈಗೂಡದಾದಾಗ ಅದೇ ಬ್ರಾಹ್ಮಣರನ್ನು ಪೀಡಿಸುತ್ತಿದ್ದರು. ಹೇಗೆಂದರೆ ಇಲ್ವಲನು ವಾತಾಪಿಯನ್ನು ಮೇಕೆಯನ್ನಾಗಿಸಿ ಕೊಂದು ಆ ಮಾಂಸವನ್ನು ಅಡುಗೆಮಾಡಿ ಬ್ರಾಹ್ಮಣರಿಗೆ ಬಡಿಸುವನು. ಬ್ರಾಹ್ಮಣರ ಊಟ ಮುಗಿಯುತ್ತಿದ್ದಂತೆಯೇ ವಾತಾಪಿಯನ್ನು ಹೊರಗೆ ಬರುವಂತೆ ಕರೆಯುವನು. ಬ್ರಾಹ್ಮಣರ ಹೊಟ್ಟೆ ಸೀಳಿ ವಾತಾಪಿ ಹೊರಬರುವನು. ಹೀಗೆ ಅನೇಕ ಮಂದಿ ಬ್ರಾಹ್ಮಣರು ಸತ್ತುಹೋದರು. ಒಮ್ಮೆ ಅಗಸ್ತ್ಯಮಹರ್ಷಿ ಇಲ್ವಲನಲ್ಲಿಗೆ ಬಂದಿದ್ದಾಗ ಇಲ್ವಲ ಅವನಿಗೂ ಹಾಗೆಯೇ ಮಾಡಿದ. ಅಗಸ್ತ್ಯನಿಗೆ ಈ ದುಷ್ಟಸಹೋದರರ ಗುಟ್ಟು ಗೊತ್ತಾಯಿತು. ಅವನು ಹೊಟ್ಟೆತುಂಬ ಉಂಡಮೇಲೆ ಹೊಟ್ಟೆಯನ್ನು ಒಮ್ಮೆ ಬಲಗೈಯಿಂದ ಸವರುತ್ತ ತನ್ನ ತಪಃಶಕ್ತಿಯಿಂದ ವಾತಾಪಿ ಹೊಟ್ಟೆಯಲ್ಲೇ ಜೀರ್ಣವಾಗುವಂತೆ ಮಾಡಿಬಿಟ್ಟ. ಇಲ್ವಲ ಹೆದರಿ ಅಗಸ್ತ್ಯನಿಗೆ ಶರಣಾದ. ಅಂದಿನಿಂದ ಬ್ರಹ್ಮದ್ವೇಷವನ್ನು ಬಿಟ್ಟುಬಿಟ್ಟ. ಇದು ಪುರಾಣದ ಕಥೆ. ಬ್ರಾಹ್ಮಣರು ಮಾಂಸ ತಿನ್ನುತ್ತಿದ್ದರೇ ಅಂತೆಲ್ಲ ಪ್ರಶ್ನೆ ಕೇಳುವುದಕ್ಕೆ ಹೋಗಬಾರದು. ಆಯ್ತು. ತಿನ್ನುವುದೆಂದರೆ ಬರೀ ತಿನ್ನುವುದೊಂದೇ ಅಲ್ಲ ಎಂದು ತಲೆಬರಹವಿರುವ ಈ ಲೇಖನದಲ್ಲಿ ಸ್ವಲ್ಪವಾದರೂ ತಿರುಳಿರುವ ಅಂಶ ಇರಲೆಂದು ಇದನ್ನು ಬರೆಯುತ್ತಿದ್ದೇನೆ. ತಿನ್ನುವ ಕುಡಿಯುವ ವಿಷಯದಲ್ಲಿ ಅಮೆರಿಕನ್ನರೂ ಅಗೋಳಿ ಮಂಜಣ್ಣನಿಗಿಂತ ಕಮ್ಮಿಯೇನಲ್ಲ. ಅದರಲ್ಲೂ ಫಾಸ್ಟ್ಫುಡ್ ಸಂಸ್ಕೃತಿ ಅಮೆರಿಕನ್ನರನ್ನು ಸಿಕ್ಕಾಪಟ್ಟೆ ಸ್ಥೂಲಕಾಯರನ್ನಾಗಿಸಿದೆ. ಇದೀಗ ಪ್ರಥಮ ಮಹಿಳೆ ಮಿಶೆಲ್ ಒಬಾಮ ಈ ವಿಷಯದಲ್ಲಿ ಜವಾಬ್ದಾರಿಯಿಂದ ಎಚ್ಚೆತ್ತು ಜನಜಾಗೃತಿ ಮೂಡಿಸುವ ಅಭಿಯಾನ ಆರಂಭಿಸಿದ್ದಾರೆ. ಶಾಲಾಮಕ್ಕಳಿಗೆ ನಿಯಮಿತ ಆಹಾರಸೇವನೆಯ ಪಾಠಗಳನ್ನು ಅವರು ತಾವೇ ಶಾಲೆಗಳಿಗೆ ಹೋಗಿ ಮಾಡುತ್ತಿರುವ ನಿದರ್ಶನಗಳೂ ಇವೆ. ಅಮೆರಿಕದ ಪ್ರಖ್ಯಾತ ರಿಟೇಲ್ ಮಳಿಗೆ ವಾಲ್ಮಾರ್ಟ್ ಸಹ ಮಿಶೆಲ್ ಒಬಾಮ ಅಭಿಯಾನದಲ್ಲಿ ಕೈಜೋಡಿಸಿದೆ. ತಾನು ಮಾರುವ ಆಹಾರ ಪದಾರ್ಥಗಳಾವುವೂ ಒಬೆಸಿಟಿ ಹೆಚ್ಚಿಸದಿರುವಂತೆ ನೋಡಿಕೊಳ್ಳುತ್ತೇನೆಂದಿದೆ. ತಿನ್ನುವುದಕ್ಕಾಗಿ ಬದುಕು ಎಂದಾಗದೆ ಬದುಕುವುದಕ್ಕಾಗಿಯಷ್ಟೇ ತಿನ್ನಬೇಕು. ಈಗ ಇದು ಮಿಶೆಲ್ ಮಂತ್ರ. ಕೊನೆಯಲ್ಲೊಂದು ಕ್ವಿಜ್. ಇವತ್ತಿನ ಲೇಖನದಲ್ಲಿ ಸ್ವಲ್ಪ ಅಸಾಮಾನ್ಯ ಎನಿಸುವಂಥ ಅಂಶವೊಂದನ್ನು ಅಳವಡಿಸಲಾಗಿದೆ. ಅಥವಾ ಬೇಕಂತಲೇ ಅಳವಡಿಸಿಕೊಂಡಿಲ್ಲ ಎಂದೂ ಹೇಳಬಹುದು. ಅದೇನೆಂದು ನಿಮ್ಮ ಗಮನಕ್ಕೆ ಬಂದಿದ್ದರೆ ಬರೆದು ತಿಳಿಸಿ. * * * [ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲೂ ಓದಬಹುದು.] "Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!Version: 20241125